Monday 13 November 2017

ಕಷ್ಟ - ಪರಿಹಾರೋಪಾಯ





ಕಷ್ಟ ಮತ್ತು ಸುಖ ಎನ್ನುವುದು ಜಗತ್ತಿನಲ್ಲಿ  ಮನುಷ್ಯರಿಗಷ್ಟೇ ಎಲ್ಲ.  ಪ್ರಾಣಿಪಕ್ಷಿಕ್ರಿಮಿಕೀಟಗಿಡ ಮರಗಳಿಗೂ ಒಂದಲ್ಲ ಒಂದು ರೀತಿಯ ಕಷ್ಟಗಳಿದ್ದೇ ಇರುತ್ತದೆ. ಕೆಲವರಿಗೆ ಹೇಳಿಕೊಳ್ಳಲಾಗುತ್ತದೆ,  ಹಲವರಿಗೆ ಆಗುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕಷ್ಟಗಳು. ಪ್ರತಿಯೊಬ್ಬರ ಕಷ್ಟದ ಕಾರಣ ಮತ್ತು ಅದರಿಂದಾಗುವ ಅನುಭವಗಳು ಭಿನ್ನಭಿನ್ನವಾಗಿರುತ್ತವೆ. ಅದರಿಂದ ಯಾರಿಗೂ ಮುಕ್ತಿಯೇ ಇಲ್ಲ. ಆದರೆ ಮನುಷ್ಯರಿಗೆ ಮತ್ತು ಕೆಲಪ್ರಾಣಿಗಳಿಗೆ ತಮ್ಮ ಕಷ್ಟಗಳನ್ನು ನೀಗಿಕೊಳ್ಳುವ ಕ್ಷಮತೆಯನ್ನು ಪರಮಾತ್ಮ ಕರುಣಿಸಿದ್ದಾನಾದ್ದರಿಂದ ಅವರ ಅನುಭವಗಳು ಅನ್ಯ ಪ್ರಾಣಿಗಳ ಅನುಭವಕ್ಕಿಂತ ಭಿನ್ನವಾಗಿರುತ್ತದೆ. ಕೆಲವರುಆ ಕಷ್ಟಗಳನ್ನು ಪರಿಹರಿಸಿಕೊಳ್ಳಲು ಆಗದೆಬೇರೆ ದಾರಿಯಿಲ್ಲದೆ  ತಾಳ್ಮೆಯಿಂದ ಅನುಭವಿಸುತ್ತಾ ಜೀವನವನ್ನು ಕಳೆದುಬಿಡುತ್ತಾರೆ.  ಕೆಲವರು ಬಹಳ ಕಷ್ಟಪಟ್ಟು ನೊಂದು ಬೆಂದು ಅನುಭವಿಸುತ್ತಾರೆ. ಕೆಲವರು ಸಂತೋಷದಿಂದ ಅನುಭವಿಸಿ ಆ ಕಷ್ಟಗಳನ್ನು ನೀಗಿಕೊಳ್ಳುತ್ತಾರೆ. 

ಈ ಜಗತ್ತಿನಲ್ಲಿ ಕಷ್ಟವಿಲ್ಲದವರಾರು? ಬಯಕೆಗಳಿರುವ ತನಕ ಕಷ್ಟಗಳು ಇದ್ದೇ ಇರುತ್ತವೆ. ಅವರವರ ಕಷ್ಟ ಅವರಿಗೆ. ಕೆಲವರಿಗೆ ದೊಡ್ಡದು, ಕೆಲವರಿಗೆ ಸಣ್ಣದು. ದೊಡ್ಡ ಕಷ್ಟಬಂದ ಕೆಲವರು ಅದನ್ನು ಸಣ್ಣದೆಂದುಕೊಳ್ಳಬಹುದು ಅಥವಾ ತೀರ ಸಣ್ಣ ಕಷ್ಟವೇ ಕೆಲವರಿಗೆ ತಲೆಯಮೇಲೆ ಬೆಟ್ಟ ಬಿದ್ದಂತಾಗಬಹುದು.  ಯಾವ ವಸ್ತುವಿಗೆ ನಾವು ಅಂಟಿಕೊಂಡಿರುತ್ತೇವೆಯೋ ಆ ವಸ್ತುವಿನಿಂದ ನಾವು ದೂರಾಗಬೇಕಾದ ಸಂದರ್ಭ ಬಂದಾಗ ನಮಗೆ ಕಷ್ಟಎನಿಸುತ್ತದೆ. ವಸ್ತು, ವಿಷಯ ಮತ್ತು ವ್ಯಕ್ತಿಗಳಿಗೆ ನಾವೆಷ್ಟು ಗಾಢವಾಗಿ ಅಂಟಿಕೊಂಡಿರುತ್ತೇವೆಯೋ ನಮ್ಮ ನೋವು ಸಂಕಟ ಮತ್ತು ಕಷ್ಟ ಅಷ್ಟೇ ತೀವ್ರವಾಗಿರುತ್ತದೆ. ನಮಗಿಂತ ಹೆಚ್ಚು ಕಷ್ಟಪಡುವವನನ್ನು ಕಂಡು ನಮ್ಮ ಸ್ಥಿತಿ ಅವನಿಗಿಂತ ಉತ್ತಮವಾಗಿದೆಎಂದು ಸಮಾದಾನಪಟ್ಟುಕೊಳ್ಳುವುದೇ ಉತ್ತಮ. ಬೇರೆ ದಾರಿಯಿಲ್ಲ. ಏಕೆಂದರೆ ಈ ಕಷ್ಟ, ಹಿಂಸೆ, ಯಾತನೆ ಎಲ್ಲರಿಗೂ ಇದ್ದೇ ಇದೆ. ಪ್ರಮಾಣ ಮತ್ತು ಪರಿಣಾಮಗಳ ವ್ಯತ್ಯಾಸ ಅಷ್ಟೆ. 

ಪಂಚಭೂತಗಳಿಂದಾದ ಮತ್ತು ಅವುಗಳಿಂದ ಪ್ರಚೋದಿಸಲ್ಪಡುವ ನಮ್ಮ ಇಂದ್ರಿಯಗಳ ಹಿಡಿತದಲ್ಲಿ ನಾವಿರುವ ತನಕಈ ಕಷ್ಟಗಳ ಮೆರವಣಿಗೆ ಸಾಗಿಯೇ ಇರುತ್ತದೆ. ಒಂದನ್ನು ಪರಿಹರಿಸಿದರೆ ಅಥವಾ ಒಂದನ್ನು ಅನುಭವಿಸಿ ತೀರಿಸಿದರೆ ಮತ್ತೊಂದು ಎದ್ದು ನಿಲ್ಲುತ್ತದೆ. ಹಾಗೆ ನೋಡಿದರೆ  ಸಾಮಾನ್ಯವಾಗಿ ಕಷ್ಟಗಳು ನಮಗೆ ಬರುವುದಿಲ್ಲ. ನಾವು ಅದನ್ನು ಹೋಗಿ ಹಿಡಿದುಕೊಳ್ಳುತ್ತೇವೆ, ನಂತರ ಆ ಕಷ್ಟಗಳ ಪರಿಣಾಮವಾಗಿ ನಮಗೆ ಆಗುವ ನೋವಿನಿಂದ ಪರದಾಡುತ್ತೇವೆ. ನಮಗಿರುವ ವಸ್ತು, ವಿಷಯ ಮತ್ತು ವ್ಯಕ್ತಿಗಳೊಂದಿಗಿನ ಸಂಬಂಧದ 'ಅಂಟಿ'ನಿಂದ ನಮಗೆ ಕಷ್ಟದ ಮತ್ತು ತತ್ಪರಿಣಾಮವಾಗಿ ನೋವಿನ ಅನುಭವವಾಗುತ್ತದೆ. ಡಿ. ವಿ. ಗುಂಡಪ್ಪನವರ ' ಮಂಕುತಿಮ್ಮನ ಕಗ್ಗದಲ್ಲಿ ' ಬೆದಕಾಟ ಬದುಕೆಲ್ಲ; ಚಣಚಣವು ಹೊಸ ಹಸಿವು ಅದಕಾಗಿ ಇದಕಾಗಿ ಮತ್ತೊಂದಕಾಗಿ; ಅಧಿಕಾರ ಸಿರಿ ಸೊಗಸು ಕೀರ್ತಿಗಳ ನೆನೆದು ಮನ ಕುದಿಯುತಿಹುದಾವಗಂ - ಮಂಕುತಿಮ್ಮ ' ಎನ್ನುತ್ತಾರೆ. ಕಷ್ಟ ಬಂದಾಗ ಆ ಕಷ್ಟದಿಂದ ಹೊರಬರುವ ಒಂದೇ ಗುರಿಯಿರುತ್ತಾದ್ದರಿಂದ ಹೊಸ ಹೊಸ ಆಸೆಗಳು ನಮ್ಮಲ್ಲಿ ಕಡಿಮೆಯಿರುತ್ತವೆ. ಒಂದು ಬಾರಿ ಆ ಕಷ್ಟದಿಂದ ನಾವು ಹೊರಬಂದರೆ ಮತ್ತೆ ಆಸೆಗಳ ಬಗ್ಗೆ ನಮ್ಮಲ್ಲಿ ಎದ್ದು, ಆ ಆಸೆಗಳೇ ನಮ್ಮ ಹೊಸ ಹೊಸ ಕಷ್ಟಗಳಿಗೆ ಕಾರಣವಾಗುತ್ತದೆ.

ಹಾಗೆ ನಮಗೆ ಬದುಕಿನಲ್ಲಿ ಕಷ್ಟದ ಅನುಭವವಾಗಬಾರದು ಎಂದರೆ, ನಾವು ಅಧಿಕಾರ, ಸಿರಿ, ಸೊಗಸು ಕೀರ್ತಿಗಳಿಗಷ್ಟೇ ಅಲ್ಲ, ಯಾವುದಕ್ಕೂ ಅಂಟಿಕೊಳ್ಳಬಾರದು. ಹಾಗೆ ಅಂಟದೇ ಬದುಕಿದರೆ ಎಂತಹ ವಿಷಮ ಪರಿಸ್ಥಿತಿಯಲ್ಲೂ, ಅದನ್ನು ಅನುಭವಿಸುವ ತಾಳ್ಮೆ ಪಡೆದುಕೊಳ್ಳಬಹುದು. ಇದು ಎಲ್ಲರ ಪರಿಸ್ಥಿತಿ. ಹಾಗಾಗಿ ಈ ಜಗತ್ತಿನಲ್ಲಿ  ಕಷ್ಟವಿಲ್ಲದವರಿಲ್ಲ. ಆದರೆ ಜಗತ್ತಿನಲ್ಲಿ ನಮಗಿಂತ ಅಧಿಕ ಕಷ್ಟವನ್ನನ್ನುಭವಿಸಿವವರನ್ನು ಕಂಡು ನಮ್ಮ ಕಷ್ಟವನ್ನು ತಾಳ್ಮೆಯಿಂದ ಸಹಿಸಿಕೊಳ್ಳುವುದೇ ಜಾಣತನ. 'ಸಹನೆ ವಜ್ರದ ಕವಚ' ಎಂದಿದ್ದಾರೆ ಮಾನ್ಯ ಡಿವಿಜಿಯವರು. ಅಂತಹ ಸಹನೆಯ ಮನೋಭಾವವನ್ನು ಬೆಳೆಸಿಕೊಂಡರೆ ಎಂತಹ  ವಿಷಮ ಸ್ಥಿತಿಯಲ್ಲೂ ಸಮಾಧಾನ ಚಿತ್ತದಿಂದ ಇರಬಹುದು. ಕಷ್ಟಗಳು ಬಂದರೂ ಅವುಗಳನ್ನು ಅನುಭವಿಸುವ ಶಕ್ತಿ ಮತ್ತು ಹೊಸ ಹೊಸ ಕಷ್ಟಗಳಿಗೆ ಸಿಲುಕಿಕೊಳ್ಳದಂತಹ ಮನೋಭಾವ ನಮ್ಮಲ್ಲಿ ಬರುತ್ತದೆ. ಹೀಗೆ ನಾವು ನಮಗೆ ಬರುವ ಮತ್ತು ಇರುವ ಕಷ್ಟಗಳಿಂದ ಮುಕ್ತರಾಗುವ ಪರಿಹಾರವನ್ನು ಕಂಡುಕೊಳ್ಳಬಹುದು

No comments:

Post a Comment