Wednesday, 10 October 2012

ನಂಬಿಕೆ ಮತ್ತು ಅಧ್ಯಾತ್ಮ
Photo

ಹಿಂದಿನವರ ಅನುಭವವೇ ಆಧ್ಯಾತ್ಮ ಸಾಧಕನಿಗೆ ನಂಬಿಕೆಯಾಗುತ್ತದೆ. ನಂಬಿಕೆ ತೀವ್ರವಾಗಿ, ಅನುಭವವನ್ನು ಪಡೆಯಬೇಕೆಂಬ ಆಸೆ ಉತ್ಕಟವಾದಾಗ ನಂಬಿಕೆಯೇ ಶ್ರಧ್ಧೆಯಾಗುತ್ತದೆ. ನಂಬಿಕೆ ಶ್ರಧ್ಧೆಯಾಗಿ  ಪ್ರಯತ್ನಪೂರ್ವಕವಾಗಿ ಅನುಭವ ಪಡೆದಾಗ ಜ್ಞಾನವಾಗುತ್ತದೆ. ತಂದೆ ಮಗನಿಗೆ" ಮಾವು ಸಿಹಿಯಾಗಿದೆ "  ಎಂದು ಹೇಳಿದರೆ ಮಗನಿಗೆ ಅದು ನಂಬಿಕೆಯಾಗುತ್ತದೆ. ಆ ಮಗು ಹಣ್ಣನ್ನು ತಿಂದಾಗ ಹಣ್ಣಿನ ಸವಿ ಸವಿದಾಗ ಮಾವಿನ ಸವಿತನ ಮಗುವಿಗೆ ಜ್ಞಾತವಾಗುತ್ತದೆ. ಇದು ತತ್ಕ್ಷಣ ಅರಿವಿಗೆ ಬರುವಂತ ಜ್ಞಾನ.

ಕಾಪರ್ನಿಕಸ್ಸನು, ಅಂದು ಪ್ರವರ್ತಮಾನದಲ್ಲಿದ್ದ ನಂಬಿಕೆಗೆ ಭಿನ್ನವಾಗಿ, ಭೂಮಿ ಸೂರ್ಯನ ಸುತ್ತ ತಿರುಗುತ್ತದೆ ಎಂದು ಕಂಡು ಕೊಂಡನಂತೆ. ಆದಿಯಲ್ಲಿ ಕೆಲವು ಜನ ಅವನ ವಾದವನ್ನು ನಂಬಿದರು ಆದರೆ ಬಹಳಕಾಲದ ಮೇಲೆ  ಆ ಸಿಧ್ಧಾ೦ತವನ್ನು  ಎಲ್ಲರೂ ಒಪ್ಪಿಕೊಂಡಾಗ ಅದು ಸಾರ್ವಜನಿಕ ಜ್ಞಾನವಾಯಿತು. ಇಲ್ಲಿ ನಂಬಿಕೆ ಜ್ಞಾನವಾಗಿ ಪರಿವರ್ತನೆಯಾಗಲು ಬಹಳ ಸಮಯ ಬೇಕಾಯಿತು. ಏನೂ ಅರಿಯದವನಿಗೆ, ಸತ್ಯವನ್ನರಿತು ಜ್ಞಾನ ಪಡೆಯಲು, ನಂಬಿಕೆಯೇ ಮೊದಲ ಹೆಜ್ಜೆ. ಅದು ಬಧ್ಧಾವಸ್ತೆಯಿಂದ ಜಾಗೃತಾವಸ್ತೆಗೆ ಹೋಗುವ ಪ್ರಕ್ರಿಯೆ. ನಂಬಿಕೆ ಮಾನವನನ್ನು ಚುರುಕಾಗಿಸಿ ಕಾರ್ಯೋನ್ಮುಖನನ್ನಾಗಿಸುತ್ತದೆ.  ಈ ಪ್ರಕ್ರಿಯೆಯಲ್ಲಿ ನಂಬಿಕೆ ಬದಲಾಗಿತ್ತಿರುವಂತೆ ಕಾಣಿಸುತ್ತದೆ. ಈ ಬದಲಾವಣೆಯೇ ಚೈತನ್ಯದ ಪ್ರತೀಕ.  ಉದಾಹರಣೆಗೆ  ಭೌತಿಕ ವಿಜ್ಞಾನದಲ್ಲಿ  ಸಿಧ್ಧಾ೦ತಗಳು ನ್ಯೂಟನ್ನಿನಿಂದ ಆಯಿನ್ಸ್ಟೀನ್ನಿನವರೆಗೆ ಹೇಗೆ ಬದಲಾಗಿವೆ ನೋಡಿ.

ನಾವು ನಂಬಿಕೆ ಎನ್ನುವ ಪದವನ್ನು ಉಪಯೋಗಿಸಿದರೆ, ಬುಧ್ಧಿಜೀವಿಗಳು " ವೈಜ್ಞಾನಿಕತೆ ಕಳೆದುಹೋಗಿದೆ" ಎಂದು ಅರುಚುತ್ತಾರೆ. ಅವರ ವಿಜ್ಞಾನ ಮತ್ತು ವೈಜ್ಞಾನಿಕ ಪ್ರಯೋಗಗಳ ವಿಧಾನ ಎಲ್ಲವೂ ಅವರ ಹಿಂದಿನ ತಲೆಮಾರಿನ ವಿಜ್ಞಾನಿಗಳ ಶೋದನೆ ಮತ್ತು ಸಂಶೋದನೆಗಳ ಮೇಲಿನ ನಂಬಿಕೆಯ ಮೇಲೆಯೇ ಅಧಾರಪಟ್ಟಿರುತ್ತದೆ ಮತ್ತು ಅವಲಂಬಿಸಿರುತ್ತದೆ ಎಂಬುದನ್ನು ಇವರುಗಳು ಒಪ್ಪುವುದೇ ಇಲ್ಲ. ಅವರುಗಳು ನಂಬಿಕೆಯೆನ್ನೇ ಜ್ಞಾನವೆಂದು ಅಪಾರ್ಥಮಾಡಿಕೊಂಡಿರುತ್ತಾರೆ.  ನಮ್ಮ  ಬಲವಾದ ನಂಬಿಕೆಯ ಅರಿವು ಅನುಭವದ ಮೂಲಕ ಸತ್ಯವಾಗಿ ಗೋಚರಿಸಿ ಜ್ಞಾನವಾಗಿ ಮಾರ್ಪಾಡಾಗುವುದೆಂಬ, ವೇದಾಂತದ ಮೂಲಭೂತ ತತ್ವ ಇಲ್ಲಿ ಹೆಚ್ಚು ಪ್ರಸ್ತುತವಾಗುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಶ್ರಧ್ಧ್ದಾಪೂರ್ವಕ ನಂಬಿಕೆಯಲ್ಲಿನ ಸತ್ಯ ಗೋಚರವಾದಾಗ, ಆ ವ್ಯಕ್ತಿಯ ನಂಬಿಕೆಯೇ ಅವನಲ್ಲಿ ಜ್ಞಾನವಾಗಿ ಪ್ರಕಟಗೊಳ್ಳುತ್ತದೆ. 

"
ಒಂದು ತತ್ವದಲ್ಲಿ ಶುಧ್ಧ ನಂಬಿಕೆ ಮತ್ತು ಅದರಲ್ಲಿರುವ ಅಂತಃಸತ್ಯವನ್ನು ಅರಿಯಲು ಇರುವ ತೀವ್ರ ತವಕವೇ ವಿಶ್ವಾಸ "ಎನ್ನುತ್ತಾರೆ  ಸ್ವಾಮಿ ವಿವೇಕಾನಂದ. ಸ್ವಾಮಿ ರಾಮಕೃಷ್ಣ ಪರಮಹಂಸರು ಇದಕ್ಕೊಂದು ಅದ್ಭುತ ಉದಾಹರಣೆಯನ್ನು ಕೊಡುತ್ತಾರೆ." ಒಂದು ಕೊಠಡಿಯಲ್ಲಿ ಒಬ್ಬ ಕಳ್ಳನಿದ್ದಾನೆಂದು ಇಟ್ಟುಕೊಳ್ಳೋಣ. "ಪಕ್ಕದ  ಕೊಠಡಿಯಲ್ಲಿ ಒಂದು ಚೀಲದ ತುಂಬಾ ಚಿನ್ನವಿದೆ" ಎಂದು ಅವನಿಗೆ ಹೇಳಿದರೆ, ಅವನ ಮನಃಸ್ಥಿತಿ ಹೇಗಿರಬಹುದೆಂದು ಊಹಿಸಿ ನೋಡೋಣ. ಅವನ ಬುಧ್ಧಿ. ಮಲಗಿದರೆ ನಿದ್ದೆ ಬರುವುದಿಲ್ಲ. ಅಲ್ಲಿರುವ ಚಿನ್ನವನ್ನು ಹೇಗಾದರೂ ಪಡೆಯಬೇಕು ಎಂದು ಯೋಚಿಸುತ್ತಾನೆ. ಪಡೆಯುವ ಮಾರ್ಗಗಳನ್ನೆಲ್ಲ ಕಲ್ಪನೆಯಲ್ಲೇ  ರೂಪಿಸಿಕೊಳ್ಳುತ್ತಾನೇ ಹೊರತು ಬೇರೇನನ್ನೂ ಯೋಚಿಸುವುದಿಲ್ಲ.  
ಇಲ್ಲಿ ಮೂರು ವಿಷಯಗಳನ್ನು ಗಮನಿಸ ಬೇಕು:

1 .
ಅವನು ಮೂಲತಃ ಕಳ್ಳನಾಗಿದ್ದಾನೆ.  
2 .
ಅವನು ತಾನು ಸ್ವತಃ ನೋಡದಿದ್ದರೂಆ ಕೊಠಡಿಯಲ್ಲಿ ಚಿನ್ನವಿದೆ ಎಂದು ಯಾರೋ ಹೇಳಿದ್ದನ್ನು  ನಂಬಿದ್ದಾನೆ.    
3 .
ಅವನು ಕಾತರನಾಗಿ ತಳಮಳಿಸುತ್ತಿದ್ದಾನೆ. ಆ ಚಿನ್ನ ಅವನ ಕೈಗೆ ಸಿಕ್ಕಾಗ ಅವನಿಗೆ ಸಂತೋಷವಾಗುತ್ತದೆ ಮತ್ತು ಅದನ್ನು ಪಡೆಯಲು ಅವನು ಪ್ರಯತ್ನ ಪಡಬೇಕಾಗಿದೆ. 


ಇಲ್ಲಿ " ಕಳ್ಳ " ಎಂಬ ಪದಕ್ಕೆ " ವೈದ್ಯ, ವಕೀಲ, ಇಂಜಿನಿಯರ್, ಅಧಿಕಾರಿ, ವ್ಯಾಪಾರಿ, ಕ್ರೀಡಾಪಟು, ಸಾಮಾನ್ಯ ಉದ್ಯೋಗಿ" ಹೀಗೆ ಯಾವುದಾದರೂ ಪದವನ್ನು ಬದಲಿಸಿಕೊಳ್ಳಿ ಹಾಗೆಯೇ ಅಪೇಕ್ಷೆಯ ವಸ್ತುವಾದ  " ಚಿನ್ನ " ಎಂಬ ಪದಕ್ಕೆ, ಕೀರ್ತಿ, ಯಶಸ್ಸು, ಜಯ, ಲಾಭ ಮುಂತಾದ ಯಾವುದಾದರೂ ಪದವನ್ನು ಬದಲಿಸಿ ಉಪಯೋಗಿಸಿಕೊಳ್ಳಿ. ಫಲಾಪೇಕ್ಷೆಯಿಂದಕೂಡಿದ ಉತ್ಕಟ ಆಸೆ ಇರುತ್ತದೆ ಮತ್ತು ಆ ಆಸೆ ಈಡೇರಿದಾಗ ಆ ವ್ಯಕ್ತಿಗೆ ಸಂತೋಷ ಅಥವಾ ಆನಂದವಾಗುತ್ತದೆ.  ಇಲ್ಲಿ ಸಾದನೆಯ ಉತ್ಕಟಾಪೇಕ್ಷೆಯೇ ಶ್ರಧ್ಧೆಯಾಗಿ ಮಾರ್ಪಾಡಾಗುತ್ತದೆ, ಆದರೆ ಈ ರೀತಿ ಸಿಗುವ ಆನಂದಾನುಭಾವಗಳೆಲ್ಲಾ ಕ್ಷಣಿಕವಾದದ್ದು. ಅವು ನಮ್ಮ ಮನಸ್ಸು ಬುಧ್ಧಿಗಳಿಗೆ ಕಚಗುಳಿ ಇಡುತ್ತದೆ. ಆದರೆ ಮೇಲೆ ಹೇಳಿದಂತೆ " ಕಳ್ಳ " ನಿಗೆ ಬದಲಾಗಿ " ಸಾಧಕ" ಎಂದಿಟ್ಟುಕೊಂಡು " ಚಿನ್ನ" ದ ಬದಲು "ದೇವರು" ಎಂದು ಬದಲಾಯಿಸಿಕೊಂಡರೆ ನಮಗೆ ಪರಮಾತ್ಮ ಸಂಬಂಧವಾದ ಜ್ಞಾನಾರ್ಜನೆಯಾಗಿ ನಿರಂತರ ಆನಂದ ಸಿಗುತ್ತದೆ. 

ವಿಶೇಷಾಧಿಕಾರ :
ನಾವು ಯಾವರೀತಿಯ ಶ್ರಧ್ಧೆಯನ್ನು ಬೆಳೆಸಿಕೊಳ್ಳುತ್ತೀವೋ, ನಮಗಿರುವ  ವಿಶೇಷಾಧಿಕಾರವೂ ಅದೇ ರೀತಿ ಇರುತ್ತದೆ. ಉದಾಹರಣೆಗೆ ನಮಗೆ ಐಹಿಕ ಸುಖ-ಭೋಗಗಳಲ್ಲಿ ಹೆಚ್ಚು ಆಸಕ್ತಿ ಇದೆಯಾದರೆ, ನಾವು ಹಣ, ಅಧಿಕಾರ, ವಿಧ್ಯಾಭ್ಯಾಸ ಮುಂತಾದ ಐಹಿಕ ಸುಖ-ಭೋಗಗಳಿಗೆ ಒತ್ತಾಸೆ ನೀಡುವ ವಸ್ತುಗಳನ್ನು ಪಡೆಯಲು ಹೆಚ್ಚು ಹೆಚ್ಚು  ಅಧಿಕಾರ ಪಡೆಯಲು ಪ್ರಯತ್ನಿಸುತ್ತೇವೆ. ಇಂದ್ರಿಯ ಅಥವಾ ಐಹಿಕ ಸುಖ ಭೋಗಗಳಿಗೆ  ಹೆಚ್ಚು ಮಹತ್ವನೀಡುವ ಸಮಾಜದಲ್ಲಿ ಜಾತಿ ಅಥವಾ ವರ್ಣ ಪ್ರಾಬಲ್ಯ ಮತ್ತು ಕೇವಲ ಕೆಲವರ ಆರ್ಥಿಕಾಭಿವೃಧ್ಧಿಯನ್ನೇ ಹೆಚ್ಚಿಸಲು ಬೇಕಾದ ವಿಶೇಷಾಧಿಕಾರವನ್ನು ಪಡೆಯಲು ಪ್ರಯತ್ನಪಡುತ್ತದೆ. ಹಾಗೆಯೇ, ತಾಂತ್ರಿಕಾಧಿಕ್ಯವಿರುವ ಮತ್ತು ಹಣವಂತ ದೇಶಗಳು, ಬಡ ರಾಷ್ಟ್ರಗಳ ಮೇಲೆ ಪ್ರಭಾವ ಅಥವಾ ಅಧಿಪತ್ಯ ಸ್ಥಾಪಿಸಲು ಪ್ರಯತ್ನಪಡುತ್ತವೆ. 
ಪ್ರತಿ ಮಾನವನ ಜೀವನದಲ್ಲೂ  ಎಂದಾದರೂ ಒಂದು ದಿನ ನಂಬಿಕೆಗಳು ಬದಲಾಗುತ್ತಾ, ಸಂಸ್ಕಾರಗೊಂಡು, " ಮಾನವ ಸೇವೆಯೇ ಮಾಧವ ಸೇವೆ" ಅಥವಾ " ಪಡೆಯುವವನೆ ಕೊಡುವವನಿಗಿಂತ ಉತ್ತಮ "   ಎನ್ನುವ ತತ್ವಗಳು ಮನದಟ್ಟಾಗುತ್ತವೆ. ಹಾಗಾದಾಗ, ಅವನ ಮನಸ್ಸಿನಿಂದ ವಿಶೇಷ ಅಧಿಕಾರದ ಅಥವಾ ಅಧಿಪತ್ಯದ ಭಾವ ಮನಸ್ಸಿನಿಂದ ಅಳಿಸಿ ಹೋಗುತ್ತದೆ.
ಇಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ " ಮರ ಕಡಿಯುವವನ" " ಮುಂದೆ ಹೋಗು" ಎನ್ನುವ ಸಣ್ಣ ಕಥೆ ಉಲ್ಲೇಖನೀಯ.  
ಒಂದು ಬಾರಿ ಒಬ್ಬ ಮರ ಕಡಿಯುವವ ಕಾಡಿಗೆ ಮರಕಡಿಯಲು ಹೋದಾಗ, ಅಲ್ಲಿ ಕಡಿಯಲು ಯೋಗ್ಯವಾದ ಮರಗಳು ಅವನಿಗೆ ಕಾಣಲೇ ಇಲ್ಲ. ಏನು  ಮಾಡುವುದೆಂದು ಯೋಚಿಸುತ್ತಿರುವಾಗ, ಒಬ್ಬ ಸಾಧು ಪುಂಗವನು ಅವನಿಗೆ, " ಮುಂದೆ ಹೋಗು " ಎಂದು ಹೇಳಿದನಂತೆ. ಅಲ್ಲಿಂದ ಮುಂದೆ ಹೋಗಲು ಅಲ್ಲಿ ಅವನಿಗೆ ಕೆಲವು ಶ್ರೀ ಗ೦ಧದ ಮರಗಳು ಕಂಡವಂತೆ.  " ಮುಂದೆ ಹೋಗು " ಎಂದು ಸಾಧು ಹೇಳಿದ್ದನಲ್ಲವೇ, ನಿಲ್ಲಲು ಹೇಳಿಲ್ಲವಲ್ಲ  ಎಂದು ಯೋಚಿಸಿ ಅವನು ಇನ್ನೂ ಸ್ವಲ್ಪ ಮುಂದೆ ಹೋದನಂತೆ. ಅಲ್ಲಿ ಅವನಿಗೆ ಬೆಳ್ಳಿಯ ಗಣಿಗಳು ಗೋಚರಿಸಿದವಂತೆ. ಇನ್ನೂ ಮುಂದೆ ಹೋಗಲು ಅಲ್ಲಿ ಅವನಿಗೆ ಬಂಗಾರದ ಗಣಿಗಳು ಕಂಡವಂತೆ. ಇನ್ನೂ ಮುಂದೆ ಹೋಗಲು ಅವನಿಗೆ ವಜ್ರಗಳ ಮತ್ತು ಅಮೂಲ್ಯ ಹರಳುಗಳ ಗಣಿಗಳು ಕಂಡವಂತೆ. ಅವನು ಅವುಗಳನ್ನು ಪಡೆದು ಬಹಳ ಧನಿಕನಾದನoತೆ.
ಹೀಗೆ ಆ ಸಾಧು ಪುಂಗವನ " ಮುಂದೆ ಹೋಗು" ಎನ್ನುವ ಉಪದೇಶ ಅವನ ಮನಸ್ಸಿನಲ್ಲಿ ನಾಟಿತ್ತು. ಅವನು, ಮುಂದೆ ಸಂಪತ್ತಿನ ಭಂಡಾರವೇ ಇದೆ, ಎಂದು ಸೂಚ್ಯವಾಗುವ ಆ ಸಾಧುವಿನ ಉಪದೇಶದಲ್ಲಿ ಸಂಪೂರ್ಣವಾಗಿ ನಂಬಿಕೆ ಇಟ್ಟಿದ್ದ. " ಆದರೆ ಆ ಸಾಧುವು ತನಗೆ ತಿಳಿದಿದ್ದ ಆ ಸಂಪತ್ತಿನ ಭಂಡಾರವನ್ನು ತಾನೇ ಏಕೆ ತೆಗೆದುಕೊಳ್ಳಲಿಲ್ಲ ಎಂಬ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಉದ್ಭವವಾಗಬಹುದು. ಅದಕ್ಕೆ ವೇದಾಂತವು ಹೀಗೆ ಉತ್ತರಿಸುತ್ತದೆ. ಆ ಸಾಧುವು ಇನ್ನೂ "ಮುಂದೆ ಹೋಗಿ"  ಮೇಲೆ ಹೇಳಿದ ಎಲ್ಲ ನಿಧಿ ಸಂಪತ್ತುಗಳಿಗೂ  ಮಿಗಿಲಾದ ಆತ್ಮ ಜ್ಞಾನದ ಸಂಪತ್ತನ್ನು ಪಡೆದುಕೊಂಡಿದ್ದನು. ಹಾಗಾಗಿ ಅವನಿಗೆ  ಚಂದನ, ಬೆಳ್ಳಿ, ಚಿನ್ನದಂತಹ ವಸ್ತುಗಳಿಗೆ ಯಾವ ಬೆಲೆಯೂ ಇರಲಿಲ್ಲ. ಈ ಕಥೆಯನ್ನು ಸ್ವಲ್ಪ ಮುಂದುವರೆಸಿದರೆ, ಆ ಮರಕಡಿಯುವವನೂ ಸಹ ಈ ಸಂಪತ್ತುಗಳ ಅನುಭವವನ್ನು ಪಡೆದು ಇನ್ನೂ ಮುಂದೆ ಹೋದಲ್ಲಿ ಅವನಿಗೂ ಅವುಗಳನ್ನೆಲ್ಲ ತ್ಯಜಿಸಿ ಆತ್ಮಜ್ಞಾನವನ್ನು ಪಡೆಯುವ ಯೋಗ ಲಭಿಸಬಹುದು.ನಂಬಿಕೆ ಮತ್ತು ಅಧ್ಯಾತ್ಮ :
ನಂಬಿಕೆಯ ನಮ್ಮ ಪರಿಭಾಷೆ ಮತ್ತು ನಾವು ಎಷ್ಟು ಮುಂದೆ ಹೋಗಿದ್ದೇವೆ ಎನ್ನುವುದರನ್ನು ಅವಲಂಬಿಸಿ ನಮಗೆ ಮೇಲಿನ ಕಥೆ ಅರ್ಥವಾಗುತ್ತದೆ. ಕೆಲವರಿಗೆ ಇದು ಪೊಳ್ಳಾಗಿ, ಕೆಲಸಕ್ಕೆ ಬಾರದ ಮಾತಾಗಿ ಕಾಣಬಹುದು. ಕೆಲವರಿಗೆ ಸುಮ್ಮನೆ ಓದುವ ಮತ್ತು ಯೋಚಿಸುವ ವಿಷಯವಾಗಿ ಕಾಣಬಹುದು. ಮತ್ತೂ ಕೆಲವರಿಗೆ ಈ ಕಥೆಯೇ "ಮುಂದೆ ಹೋಗಲು" ಪ್ರೇರಕವಾಗಿ ಸುಲಭ ಲಭ್ಯವಲ್ಲದಂತಹ ಆಧ್ಯಾತ್ಮ ಜ್ಞಾನ ಪಡೆಯಲು ಉಪಕರಣವಾಗಬಹುದು.  
ಆದರೆ ಪ್ರಸಕ್ತ ಮಾನವ ವಿಕಾಸದ ಹಂತದಲ್ಲಿ ಇದು ಇಂದು ಯಾರು ಯಾರು ಏನೇನ್ನನ್ನು ನಂಬಿ, ಶ್ರಧ್ಧೆಯನ್ನು ಬೆಳೆಸಿಕೊಂಡು ಅವರವರು ಅಪೇಕ್ಷೆ ಪಟ್ಟ, ಹಣ, ಹೆಸರು, ಯಶಸ್ಸು, ಅಧಿಕಾರ ಮುಂತಾದವುಗಳನ್ನು ಪಡೆದುಕೊಳ್ಳಲು ಮಾರ್ಗವಾಗಬಹುದು. ಮಾರ್ಮಿಕವಾಗಿ ಪ್ರತಿಯೊಬ್ಬರನ್ನೂ ಗಮನಿಸಿದಾಗ, ಅವರವರು ಮಾಡುವ ಕೆಲಸಗಳಿಂದ ಅವರುಗಳ ನಂಬಿಕೆಯ ಸ್ವರೂಪ ನಮಗೆ ಅರ್ಥವಾಗಬಹುದು. ದೊಡ್ಡ ದೊಡ್ಡ ತತ್ವಗಳನ್ನು ಬರೆವ ನಾನು ಈ ತತ್ವಗಳನ್ನು ಸ್ವತಃ ಪಾಲಿಸದಿದ್ದರೆ, ನನ್ನ ನಂಬಿಕೆ, ಮಾತ್ರ ಬರೆಯುವುದರಲ್ಲಿದಿಯೇ ಹೊರತು, ಅದಕ್ಕಿಂತ " ಮುಂದೆ ಹೋಗಿಲ್ಲ" ಎಂದರ್ಥವಲ್ಲವೇಅಂದರೆ ನಾನಿನ್ನೂ ಚಂದನವನ್ನೋ, ಬೆಳ್ಳಿಯನ್ನೋ ಅಥವಾ ಚಿನ್ನವನ್ನೋ, ನಂಬಿ, ಕೆದಕಿ, ತೆಗೆದು ಅನುಭವಿಸುವ ಮಟ್ಟದಲ್ಲೇ ಇದ್ದೇನೆ ಎಂದರ್ಥವಲ್ಲವೇ
ಈ ಸ್ಥಿತಿಯಲ್ಲಿ ನಮಗೆ ಬೇಧಗಳೆಲ್ಲವೂ ನಿಚ್ಚಳವಾಗಿ ಕಾಣುತ್ತವೆ ಅಥವಾ ನಾವಿನ್ನೂ ಭೇಧಗಳನ್ನೇ ನೋಡುತ್ತಿದ್ದೇವೆ ಎಂದರ್ಥ. ಇಲ್ಲಿಂದ ನಾವು "ಮುಂದೆ ಹೋಗುವ" ಪ್ರವೃತ್ತಿ ಬೆಳೆಸಿಕೊಳ್ಳಲು ನಮಗೆ ಮಾರ್ಗದರ್ಶಕರು, ಒಬ್ಬ ಗುರುವಿನ ರೂಪದಲ್ಲಿ ಬೇಕು. ಅಂತಹ ಗುರುಗಳು ತಾವು ನಂಬಿದ ಮತ್ತು ಶ್ರಧ್ಧೆಯಿಂದ ಆ ನಂಬಿಕೆಯನ್ನು ಬೆಳೆಸಿಕೊಂಡು, ಕಂಡುಕೊಂಡಂತಹ  ಸತ್ಯವನ್ನು ಪ್ರಸಾರಮಾಡಲು ಉಧ್ಯುಕ್ತರಾಗುತ್ತಾರೆ. ಈ ನಿಟ್ಟಿನಲ್ಲಿ ನಾವು ಮುಂದೆ ಹೋದಾಗ, ನಮಗೆ " ಎಲ್ಲ ಪ್ರಾಣಿಗಳಲ್ಲೂ ಒಂದೇ ರೂಪದಲ್ಲಿರುವುದು  ಆ ಪರಮಾತ್ಮ" ಎಂಬ ಅದ್ವೈತ ಸಿಧ್ಧಾಂತದ ತಿರುಳು ಅರ್ಥವಾಗುತ್ತದೆ. ಆಗ ಈ ತತ್ವ ಶಾಸ್ತ್ರವು ಕೇವಲ ವಿಷಯಾಧಾರಿತ ಎಂದು ಅರ್ಥವಾಗುತ್ತದೆ. ನಾನು ಬದಲಾದರೆ, ನನ್ನ ದೃಷ್ಟಿಕೋನ ಬದಲಾದರೆ ಇಡೀ ಪ್ರಪಂಚವೇ ನನಗೆ  ಭಿನ್ನವಾಗಿ ಕಾಣುತ್ತದೆ. ವಿಷಯದ ವ್ಯಾಪ್ತಿ ವಿಶಾಲವಾಗುತ್ತಾ ಹೋಗಿ ಆಧ್ಯಾತ್ಮ-ಪ್ರೇಮ-ಚಿತ್ತಶುಧ್ಧಿ-ಸಜ್ಜನಿಕೆ ಬೆಳೆದು ನಾವು ಈ  ಪ್ರಪಂಚವನ್ನು ನೋಡುವ ದೃಷ್ಟಿಕೋನ ಖಂಡಿತ ಬದಲಾಗುತ್ತದೆ ಮತ್ತು ಆ ನಮಗೆ ಸಮಭಾವ ಬೆಳೆಯುತ್ತದೆ.
ಸಾಮಾನ್ಯರಿಗೆ, ಎಲ್ಲದರಲ್ಲೂ ಸುಖ-ದುಃಖ, ಸರಿ-ತಪ್ಪು, ಒಳ್ಳೆಯದು - ಕೆಟ್ಟದು ಮುಂತಾದ  ಭೇಧಗಳು ಗೋಚರವಾಗುತ್ತಾ ಇರುತ್ತದೆ.  ಇರಲಿ, ಆದರೆ " ಮುಂದೆ ಹೋಗುವ" ಪ್ರವೃತ್ತಿ ಬೆಳೆದರೆ ಸಾಕು.ಬೇರೆಯವರ ಕುಂದುಗಳನ್ನು ಕಂಡುಕೊಳ್ಳದೆ ಮುಂದೆ ಹೋಗಬೇಕು.  ಎಲ್ಲಿಯತನಕ ನಾವು ಅನ್ಯರನ್ನು, ಬಲಹೀನ, ಕೆಟ್ಟವಪಾಪಿ, ಮೂರ್ಖ ಅಥವಾ ಸ್ವಾರ್ಥಿ ಎಂದು ಗುರುತಿಸುತ್ತೇವೆಯೋ ಅಲ್ಲಿಯತನಕ ನಮ್ಮಲ್ಲಿ ಸಹ ಅಂಥಹ ಗುಣಗಳು ಸಂಪೂರ್ಣವಾಗಿ ಇನ್ನೂ ನಶಿಸಿಲ್ಲವೆಂದು ಅರ್ಥವಲ್ಲವೇ?
ವಸ್ತುಗಳು ಹೇಗೆ ಕ್ರಮೇಣ ಬದಲಾಗುತ್ತವೆಯೋ, ಅದೇ ರೀತಿ ನಮ್ಮ ನಂಬಿಕೆಯೂ ಕ್ರಮೇಣ ಬದಲಾಗುತ್ತದೆ. ಯಾವುದಾದರೂ ವಸ್ತು ಅಥವಾ ವಿಷಯದಲ್ಲಿ ನಾವು ಶ್ರಧ್ಧೆಯಿಂದ ನಂಬಿದಾಗ ಆ ವಿಷಯದ ಅಥವಾ ವಸ್ತುವಿನ ಜ್ಞಾನ ನಮಗೆ ಉಂಟಾಗುತ್ತದೆ. ಅಧ್ಯಾತ್ಮದಲ್ಲಿ ನಮಗೆ ಶ್ರಧ್ಧೆಯಿಂದ ಕೂಡಿದ ನಂಬಿಕೆ ಹೆಚ್ಚಾಗುತ್ತಾ ಹೋದಂತೆವಸ್ತು-ವಿಷಯಗಳಲ್ಲಿ ಭೇಧ ನಶಿಸಿ ಸೃಷ್ಟಿಯ ಏಕತ್ವದ ಅನುಭವವಾಗುತ್ತದೆ.  ಸ್ವಪ್ರೇಮ, ಸ್ವಜನ ಪ್ರೇಮ ಎಂಬ ಸಂಕುಚಿತ ಪ್ರೇಮ ವಿಶಾಲವಾಗಿ ನಮ್ಮಲ್ಲಿ ಇಡೀ ಸಮಾಜಕ್ಕೆ, ಪ್ರಪಂಚಕ್ಕೆ ಹಂಚುವಷ್ಟು ಪ್ರೀತಿ ಕರುಣೆ ಉಂಟಾಗುತ್ತದೆ. ಸೀಮಿತ "ಅಹಂ" ಕಾರ ನಮ್ಮ ಮನಸ್ಸಿನ ಮೇಲೆ ತನ್ನ ಹಿಡಿತವನ್ನು ಸಡಿಲಿಸಿ ನಮಗೆ ಒಂದು ಮುಕ್ತ ಭಾವದ ಅನುಭವವಾಗುತ್ತದೆ.
ದೈವದಲ್ಲಿ ಶ್ರಧ್ಧಾಪೂರಿತ ನಂಬಿಕೆಯಿದ್ದಾಗ ನಮಗೆ ದೈವಜ್ಞಾನ ಉಂಟಾಗುವುದು .  ಇದೇ  ಧರ್ಮಶ್ರಧ್ಧೆಯ ಅಡಿಪಾಯ.
ಮೇಲೆ ಉಲ್ಲೇಖ ಮಾಡಿದ ವಿಷಯವನ್ನು ಸಂಕ್ಷಿಪ್ತಗೊಳಿಸಿದರೆ ನಮಗೆ ಅರ್ಥವಾಗುವುದು ಇಷ್ಟು. ಪ್ರತಿ ಮಾನವನಿಗೂ ಮುಂದೆ ಹೋಗಲು ಸಾಧ್ಯ. ಹಾಗೆ ಮುಂದೆ ಹೋಗಲು, ಮೊದಲು ತಾನು ಯಾವ ಸ್ಥಿತಿಯಲ್ಲಿ ಇದ್ದೇನೆ ಎಂದು ಅರ್ಥಮಾಡಿಕೊಳ್ಳಬೇಕು. ನಂತರ ಮುಂದೆಹೋಗಲು, ಅನುಕೂಲವಾದ ಮಾರ್ಗದರ್ಶನ ಪಡೆದು, ನಂಬಿಕೆ ಬೆಳೆಸಿಕೊಂಡು  ಶ್ರಧ್ಧೆಯಿಂದ ಪ್ರಯತ್ನಪಡಬೇಕು. ಹಾಗಾದಲ್ಲಿ ಎಲ್ಲರೂ ತಾವಿರುವ ಸ್ತರದಿಂದ ಉತ್ತಮ ಸ್ಥಿತಿಗೆ ಹೋಗುವುದರಲ್ಲಿ ಸಂದೇಹವೇ ಇಲ್ಲ.

ಸರ್ವೇ ಜನಾಃ ಸುಜನಾಃ ಭವಂತು 
ಸರ್ವೇ  ಸುಜನಾಃ  ಸುಖಿನಃ ಸಂತು