Sunday, 16 November 2014

ಅನುಸರಣೀಯ ವೇದಾಂತ


     
ವೇದಾಂತವು ವಿಚಾರಮಾಡುವುದನ್ನೋ ಅಥವಾ ವಾಸ್ತವವಾದವನ್ನೋ ಅಲ್ಲಗೆಳೆಯುವುದಿಲ್ಲ   ಅದು ಎಲ್ಲರನ್ನೂ ' ತನ್ನಂತೆ' ಬಗೆ , ಎನ್ನುವ ತಾರ್ಕಿಕ ನೆಲೆಗಟ್ಟಿನಲ್ಲಿ ನಿಲ್ಲುತ್ತದೆ . ವೇದಾಂತವು , ನಮ್ಮ ಅವಗಾಹನೆಗೆ ಬರುವುದೆಲ್ಲವೂ ದೈವೀಕ, ಹಾಗಾಗಿ ಆತ್ಮ ಮತ್ತೊಂದು ಆತ್ಮವನ್ನು ಶೋಷಿಸುವುದನ್ನುವಿರೋಧಿಸುತ್ತದೆ! 
ಇದು ಕೇವಲ ಕಲ್ಪನೆಯಲ್ಲ. ನಾವು ಆಧ್ಯಾತ್ಮಿಕ ಸಾಧನೆಯಿಂದ ಅಂತರಂಗದ ಔನ್ನತ್ಯವನ್ನು ಪಡೆದಾಗ  ನಮಗೆ ಸೃಷ್ಟಿಯ ಎಲ್ಲವೂ ದೈವೀಕವಾಗಿ ಕಾಣುವುದು.  ಸಕಲ ಸೃಷ್ಟಿಯಲ್ಲಿ ಪ್ರೇಮ ಮತ್ತು ಪೂಜನೀಯ ಭಾವಗಳ ಅವಿನಾಭಾವ ಸಂಬಂಧದಿಂದ ಸ್ವಾಭಾವಿಕವಾಗಿ ಇಡೀ ಜಗತ್ತೇ ಒಂದು ಸುಂದರ ತಾಣವಾಗಿ ಮಾರ್ಪಾಡಾಗುತ್ತದೆ  
೧೮೯೬ ರ ಚಳಿಗಾಲದಲ್ಲಿ ಲಂಡನ್ ನಗರದಲ್ಲಿ ' ಸ್ವಾಮೀ ವಿವೇಕಾನಂದರು' ಅನುಸರಣೀಯ ವೇದಾಂತ' ಎನ್ನುವ ವಿಷಯದಲ್ಲಿ ನಾಲ್ಕು ಸರಣಿ ಪ್ರವಚನವನ್ನು ನೀಡಿದರು. ಅಲ್ಲಿ ಅವರು ಶ್ರೀಮತಿ ಮಾರ್ಗರೆಟ್ ನೋಬಲ್ ಎಂಬ ಸ್ತ್ರೀಯನ್ನು ಭೇಟಿಮಾಡಿದರು. ಆಕೆ ವಿವೇಕಾನಂದರ ವಿಚಾರಧಾರೆಗೆ ಮನಸೋತು ಅವರ ಶಿಷ್ಯತ್ವವನ್ನು ಸೀಕರಿಸಿದಳು. ನಂತರದ ದಿನಗಳಲ್ಲಿ ಆಕೆ ಸಿಸ್ಟರ್ ನಿವೇದಿತ ಎಂದು ಕರೆಯಲ್ಪಟ್ಟು ಭಾರತಕ್ಕೆ ಬಂದು ಹೆಣ್ಣು ಮಕ್ಕಳಿಗಾಗಿ ಶಾಲಾ ಕಾಲೇಜುಗಳನ್ನು ತೆರೆದಳು. ಸ್ವಾಮೀ ವಿವೇಕಾನಂದರ ಪ್ರಕಾರ  'ಅನುಸರಣೀಯ ವೇದಾಂತ' ವೆಂದರೆ ಏನು ಎಂಬುದಾಗಿ ಈ ಕೆಳಗೆ ಸೂಕ್ಷ್ಮವಾಗಿ ವಿವರಿಸಲು ಪ್ರಯತ್ನಿಸಲಾಗಿದೆ.

'ಪ್ರತೀ ಆತ್ಮವೂ ದೈವೀಕ' ಎಂಬ ತತ್ವದ ಆವಿಷ್ಕಾರವೇ ಭಾರತೀಯ ಋಷಿ ಮುನಿಗಳ ಕೊಡುಗೆ. ಆ 'ಪರಿಪೂರ್ಣ ಸತ್ಯ' ವೇ, ಭಿನ್ನ ಭಿನ್ನವಾದ ಆಲೋಚನೆಗಳಿಂದ, ಪ್ರತಿಯೊಬ್ಬರಿಗೂ ಬೇರೆ ಬೇರೆ ರೀತಿಯಿಂದ ತೋರುವುದು. ದೇಹ ಮತ್ತು ಮನಸ್ಸುಗಳ ಮಿತಿಯೊಳಗೆ ನಾವು ಯೋಚಿಸುತ್ತೇವಾದ್ದರಿಂದ, ನಮಗೆ ಕೆಲವು ಅನುಕೂಲವಾಗಿರುವಂತೆಯೂ ಮತ್ತೆ ಕೆಲವು ಪ್ರತಿಕೂಲವಾಗಿರುವಂತೆಯೂ ಕಾಣುತ್ತದೆ. ನಮ್ಮಲ್ಲಿರುವ 'ದೈವೀಕ ಪ್ರಜ್ಞೆ' ಯ ಪರಿಚಯ ನಮಗೆ ಆಗುತ್ತಿದ್ದಂತೆಯೇ, ನಾವು ಜಗತ್ತನ್ನು ನೋಡುವ ಬಗೆ ಗುಣಾತ್ಮಕವಾಗಿ ಬದಲಾಗುತ್ತದೆ. ಹಾಗಾದಾಗ, ಭಯ ಮತ್ತು ಒಂಟಿತನದ ಭಾವ ಹೋಗಿ ಪ್ರೀತಿ ಮತ್ತು ಸಮಗ್ರತೆಯ ಭಾವ ಉಂಟಾಗುತ್ತದೆ. ನಮ್ಮ ದೈವೀ ಸ್ವಭಾವವನ್ನು ಅರಿತುಕೊಳ್ಳುವುದು ಮತ್ತು ಪ್ರದರ್ಶಿಸುವುದು 'ಸಮಗ್ರತೆಯಲ್ಲಿ ಏಕತೆ' ಯನ್ನು ಕಾಣಲು ಪ್ರಯತ್ನಪಡುವುದು, ಅನಾಸಕ್ತಿ ಮತ್ತು ದ್ವೇಷವನ್ನು ತೊರೆದು ಸಕಲ ಜೀವರಾಶಿಗಳಲ್ಲಿ ಪ್ರೇಮವನ್ನು ತೋರುವುದೇ 'ಅನುಸರಣೀಯ ವೇದಾಂತ' ದ ತಿರುಳು. ಇದೇ ಧರ್ಮ

ಬಹು ಕ್ಲಿಷ್ಟವಾದ ಆತ್ಮಾನುಸಂಧಾನದ ಹಾದಿಯಲ್ಲಿ ನಮಗೆ ಕೆಲವು ನಿಯಮಗಳು ಮತ್ತು ವಿಧಾನಗಳು ಸಹಾಯಮಾಡುತ್ತವೆ. ಈಗಾಗಲೇ ಆ ಸ್ಥರವನ್ನು ತಲುಪಿರುವ ಒಬ್ಬ ಯೋಗ್ಯ 
''ಗುರು''ವಿನ ಅನುಗ್ರಹದಿಂದ ನಮ್ಮಲ್ಲಿ 'ನಂಬಿಕೆ' ಉಂಟಾಗಿ ನಮ್ಮ ಅಧ್ಯಾತ್ಮಿಕ ಪ್ರಯಾಣ ತ್ವರಿತವಾಗುತ್ತದೆ. ಆ 'ಗುರು' ನಮಗೆ ಒಂದು ಮಂತ್ರವನ್ನೋ ಅಥವಾ ಒಂದು ಆದರ್ಶವನ್ನೋ ನೀಡುತ್ತಾನೆ. ಇಂತಹ ಪ್ರಾರಂಭಿಕ ವಿಧಾನವನ್ನು ನಂಬಿಕೆ ಮತ್ತು ಭಕ್ತಿಯಿಂದ ಪಾಲಿಸಬೇಕು. ಅಂತಹ ಮಾರ್ಗವನ್ನು ನಂಬಿಕೆ ಮತ್ತು ಭಕ್ತಿಯೋಗದ ಮಾರ್ಗವೆನ್ನುತ್ತಾರೆ. 

ಹಾಗಿಲ್ಲದಿದ್ದರೆ ನಿಸ್ವಾರ್ಥಭಾವದಿಂದ ಸಕಲರ ಒಳಿತಿಗಾಗಿನ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಅನ್ಯರ ನೋವಿನ ನಿವಾರಣೆಗಾಗಿಯೋ ಅಥವಾ ನೈಸರ್ಗಿಕ ಅಸಮತೋಲನೆಯನ್ನು ಸರಿಪಡಿಸುವುದು ಇತ್ಯಾದಿ ಕೆಲಸಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬಹುದು. ಅಂತಹ ನಿಸ್ವಾರ್ಥ ಕರ್ಮಗಳು ನಮ್ಮ 'ಅಹಂಕಾರ' ವನ್ನು ತಿದ್ದಿಕೊಳ್ಳಲು ಸಹಾಯಮಾಡುತ್ತದೆ ಮತ್ತು ಸಾಧಕನಿಗೆ ಅದೇ ಕರ್ಮಯೋಗವೆನಿಸಿಕೊಳ್ಳುತ್ತದೆ. 

ಮೇಲೆ ಉಲ್ಲೇಖಿಸಿದ ಸಾಧನೆಯ ಎರಡೂ ವಿಧಾನಗಳಿಂದ,  ಅತ್ಯುತ್ತಮ ಫಲಿತಾಂಶಕ್ಕಾಗಿ ಸಾಧಕನು ಸತ್ಯ ಮತ್ತು ಅಸತ್ಯ, ಅನಂತ ಮತ್ತು ತಾತ್ಕಾಲಿಕಗಳ ನಡುವೆ ಇರುವ ವ್ಯತ್ಯಾಸವನ್ನು ಅರಿಯುವ ಪ್ರಯತ್ನವನ್ನು ಮಾಡಬೇಕು. ಈ ವಿಧಾನದಿಂದ ನಿಧಾನವಾಗಿ ಸತ್ಯದ ಉಪಾಸನೆ ಮಾಡುತ್ತಾ ಅಸತ್ಯವನ್ನು ತೊರೆಯಬೇಕು. ಇದು ಜ್ಞಾನ ಯೋಗ. 

ಪ್ರಾಪಂಚಿಕ ವಿಷಯಗಳ ಸೆಳೆತದಿಂದ 'ಸತ್ಯ'ದಲ್ಲಿ ಮತ್ತು 'ಜ್ಞಾನ'ದಲ್ಲಿ ಸ್ಥಿರವಾಗಿ ನಿಲ್ಲಲು ಇಚ್ಚಿಸದ ಚಂಚಲ ಮನಸ್ಸನ್ನು ಒಂದೆಡೆ ಸ್ಥಿರವಾಗಿಸಲು ಸಾಧಕನು ಜಪ, ಧ್ಯಾನ ಮತ್ತು ಯೋಗವನ್ನು ಅಭ್ಯಸಿಸಬೇಕು. ಇದು ರಾಜ ಯೋಗ. 
  
ಹೀಗೆ ' ಅನುಸರಣೀಯ ವೇದಾಂತ' ವು ಆತ್ಮಜ್ಞಾನವನ್ನು ಪಡೆಯಲು ಮತ್ತು ಆತ್ಮಾನುಸಂಧಾನ ಮಾಡಲು ಉಪಯುಕ್ತವಾದ ಜೀವನಕ್ರಮವನ್ನು ನಡೆಸಲು ಒಂದು ಪ್ರಾಮಾಣಿಕ ಪ್ರಯತ್ನ ಮಾಡಿಸುತ್ತದೆ. ಇಂತಹ ಜೀವನ ಕ್ರಮದಲ್ಲಿ ಗೋಪ್ಯವಾಗಲೀ, ಗೂಢತೆಯಾಗಲೀ ಇರುವುದಿಲ್ಲ. ವೇದಾಂತವು ಅಸಂಬದ್ಧವೆಂದೋ ಅಥವಾ ಅಪ್ರಾಯೋಗಿಕವೆಂದೋ,ಎಂದು ಹೇಳುವುದು, ಕೇವಲ ಇಂದ್ರಿಯ ಸುಖಗಳಲ್ಲಿ ನಿರತರಾಗಿರುವವರ ವ್ಯರ್ಥ ಪ್ರಲಾಪವಷ್ಟೇ!!! ಇಂದ್ರಿಯ ಸುಖಗಳಲ್ಲೇ ಮುಳುಗಿರುವವರು, ತಮ್ಮ ಭೋಗಲಾಲಸೆಯ ಅನ್ವೇಷಣೆಯ ಮಾರ್ಗದಲ್ಲಿ ಬರುವ ಅಡ್ಡಿ ಆತಂಕಗಳ ಕಾರಣ, ಉತ್ತಮ ಮಾರ್ಗಗಳಿಂದ, ಉನ್ನತ ಸತ್ಯಗಳನ್ನು ಅರಿಯಲು ಪ್ರಯತ್ನ ಮಾಡುವವರ ಮೇಲೆ ಹರಿಹಾಯುತ್ತಾರೆ. 

ಹಿಂದಿನ ರೋಮ್ ಸಾಮ್ರಾಜ್ಯದ ಅಥೆನ್ಸ್ ನಗರದ ಘನತೆವೆತ್ತವರು, ಸೋಕ್ರಾಟೀಸ್ ಮಹಾಪುರುಷನಿಗೆ ವಿಷವುಣಿಸಿದರು, ಕಾಪರ್ನಿಕಸ್ ಮತ್ತು ಗೆಲಿಲಿಯೋರನ್ನು ಬಹಳ ಹೀನಾಯವಾಗಿ ನಡೆಸಿಕೊಂಡರು. ಅಂತಹ ಹೀನ ನಡವಳಿಕೆ ಕೇವಲ ಅಜ್ಞಾನ ಜನಿತಾದದ್ದು. ವ್ಯಕ್ತಿಗತ ಅಜ್ಞಾನವನ್ನು ತೊಳೆಯುವುದಲ್ಲದೆ, 'ಅನುಸರಣೀಯ ವೇದಾಂತ'ವು ಸಾಮಾಜಿಕ ಸುಪರಿವರ್ತನೆಗೆ ಹಾದಿ ಸುಗಮವಾಗಿಸಬೇಕು. ಅಷ್ಟೇ ಅಲ್ಲದೆ ಪ್ರತಿಯೊಬ್ಬರ ಮನಗಳಲ್ಲಿ 'ನಿಸ್ವಾರ್ಥ'ಭಾವದ ಬೀಜಗಳನ್ನು ಬಿತ್ತಲು ಬಹಳ ತೀವ್ರವಾಗಿ ಶ್ರಮಪಡಬೇಕು.  ಹಾಗಾಗಿ ವೇದಾಂತದ ವಿಷಯಗಳನ್ನು ಪ್ರಸರಿಸುವ ಕೆಲಸವೂ ಒಂದು ' ಸಾಧನೆ' ಯಾಗುತ್ತದೆ. ಮಾನವ ಸಮಾಜವನ್ನು ಗತ ವೈಭವದಿಂದ ವಂಚಿಸುವ ಅಪವಿತ್ರವಾದ ಅಜ್ಞಾನ ಮತ್ತು ಸ್ವಾರ್ಥದ ಅಡಿಪಾಯಗಳನ್ನು ಅಲುಗಿಸುವ ಕಾಯಕವನ್ನು ಮಾಡುವುದೇ ' ಅನುಸರಣೀಯ ವೇದಾಂತ'.   

ಬದುಕಿನ ಮೌಲ್ಯಾಧಾರಿತ ಅಭಿವ್ಯಕ್ತಿ, ಒಂದು ವಿಕಸಿತ ವ್ಯಕ್ತಿತ್ವವನ್ನು ವೇದಾಂತವನ್ನು ಅಭ್ಯಸಿಸುವವರಲ್ಲಿ ಕಾಣಸಿಗುತ್ತದೆ. ಹಾಗಾಗಿ ಮಾನವ ಜನಾಂಗದ ಒಳಿತಿಗಾಗಿ ವೇದಾಂತದ ಅಭ್ಯಾಸ ಉಪಯುಕ್ತವೆಂದು ಪರಿಗಣಿಸಬೇಕು. ವೇದಾಂತಕ್ಕೆ ಎದುರಾಗುವ ಶಕ್ತಿಯುತ 'ವಿರೋಧ' ದಿಂದ, ನಿಜವಾದ ವೇದಾಂತಿಗಳು ತಮ್ಮ ಪ್ರಯತ್ನಗಳಿಂದ ಹಿಂಜರಿಯುವುದಿಲ್ಲ. ಬದಲಾಗಿ, 'ಬೆಳಕು ಮತ್ತು ಕತ್ತಲೆ' ಯ ನಡುವಿನ ನಿರಂತರ ಹೋರಾಟದಿಂದ ವಿಜಯಿಗಳಾಗಿ ಹೊರಹೊಮ್ಮಿ, ಎಲ್ಲರನ್ನೂ 'ಕತ್ತಲೆಯಿಂದ ಬೆಳಕಿನೆಡೆಗೆ' 'ಅಸತ್ಯದಿಂದ ಸತ್ಯದೆಡೆಗೆ' ಮತ್ತು ' ಮೃತ್ಯುವಿನಿಂದ ಅಮರತ್ವದೆಡೆಗೆ'ನಡೆಸುತ್ತಾರೆ.  
 
"ನಾವೆಲ್ಲಾ ಯಾವ ಸ್ಥಿತಿಗೆ ಹೋಗಬೇಕೆಂದರೆ, ನಮ್ಮೊಡನಿರುವ ಪ್ರತಿಯೊಬ್ಬರೂ, ಕಡೆಗೆ ಅತೀ ಮುಗ್ಧ ಮನುಷ್ಯನೂ ಸಹ ಆತ್ಮ ಜ್ಞಾನಿಯಾಗಬೇಕು ಅಂತಹ ಮುಗ್ಧರನ್ನು ಹೀಯಾಳಿಸುವುದರ ಬದಲು, ಅವನಿಗೆ 'ಎದ್ದೇಳು ಓ ಮುಗ್ಧನೇ, ಎದ್ದೇಳು ಓ ಸದಾ ಶುದ್ಧನೇ, ಜನ್ಮ ಮೃತ್ಯು ರಹಿತನೆ, ಓ ದೇವನೇ ನೀನು ನಿನ್ನ ನಿಜ ರೂಪವನ್ನು ಧರಿಸು. ಅನ್ಯ ರೂಪಗಳು ನಿನಗೆ ಸೂಕ್ತವಲ್ಲ' ಎನ್ನಬೇಕು. ಇದೇ ಅದ್ವೈತ ಸಿದ್ಧಾಂತ ಬೋಧಿಸುವ ಅತ್ಯುನ್ನತ ಪ್ರಾರ್ಥನೆ" ಎನ್ನುತ್ತಾರೆ ಸ್ವಾಮೀ ವಿವೇಕಾನಂದ.   

ವಿಜ್ಞಾನದ ಕೊರತೆಗಳು 

 'ವಿಜ್ಞಾನ'  ನಮ್ಮನ್ನು ಬಂಧನದಿಂದ ಬಿಡುಗಡೆ ಮಾಡುವ ಒಂದು ಜ್ಞಾನ ಎಂದು ಪ್ರತಿಪಾದಿಸುವವರಿದ್ದಾರೆ. ಅದು ಭಾಗಶಃ ಸತ್ಯ!  'ಮೂಢ ನಂಬಿಕೆ ಮತ್ತು ವಂಚನೆ' ಯನ್ನು ವಿರೋಧಿಸುವ ಸಾಧನದಂತೆ, ಸಂಸ್ಕೃತಿಯಂತೆ 'ವಿಚಾರ ಮತ್ತು ವಾಸ್ತವಿಕತೆ' ಯನ್ನು ನಿರೂಪಿಸುವ ಪ್ರಯತ್ನವನ್ನು ವಿಜ್ಞಾನದಿಂದ ಮಾಡಲ್ಪಟ್ಟಿತು. ಆದರೆ ಈ ಪ್ರಯತ್ನದಲ್ಲಿ ವಿಜ್ಞಾನಿಗಳಿಗೆ ಭಾಗಶಃ ಯಶಸ್ಸು ದೊರಯಿತು. ವೈಜ್ಞಾನಿಕ ವಿಚಾರಧಾರೆಯನ್ನು ಪ್ರತಿಪಾದಿಸಿದವರು ತಾವು ನಿರೂಪಿಸಿದ ವೈಜ್ಞಾನಿಕ ಮತ್ತು ತಾಂತ್ರಿಕ ಸಿದ್ಧಾಂತಗಳ ಕಾರಣ ತಾವು ಮಿಕ್ಕವರಿಗಿಂತ 'ಉತ್ತಮ'ರೆಂದು ಹೇಳಿಕೊಂಡು ಅನ್ಯರನ್ನು 'ಶೋಷಣೆ ಮತ್ತು ತುಳಿತ' ಕ್ಕೆ ಒಳಗಾಗಿಸಿದರು. ಕೋಟ್ಯಾಂತರ ಪ್ರಾಮಾಣಿಕ ಜನರ ನೋವು ಕೆಲವೇ ವಶೀಲಿತ ಮತ್ತು ಸಿರಿವಂತ ಜನರ ದಬ್ಬಾಳಿಕೆಯಡಿ ತುಳಿಯಲ್ಪಡುವುದಕ್ಕೆ ವೈಜ್ಞಾನಿಕ ಸಂಸ್ಕೃತಿ ಪೂರಕವಾಗಿ ಕೆಲಸಮಾಡಿದೆ. 

ಈ ರೀತಿಯ ವೈಜ್ಞಾನಿಕ ಆವಿಷ್ಕಾರಗಳ ದುರ್ಬಳಕೆ ಸತ್ಯವಾದ ವೈಜ್ಞಾನಿಕತೆಯನ್ನು ಪ್ರತಿಪಾದಿಸುವವರನ್ನು ಧ್ರುತಿಗೆಡಿಸಿತು. ಕಾರಣ? ಕಾರಣವೇನೆಂದರೆ ಅವರು 
'ಸಕಲ ಆತ್ಮಗಳೂ ದೈವೀಕ'  ಎಂಬ  ತತ್ವವನ್ನು 
ಮರೆತಿದ್ದರು. ವೈಜ್ಞಾನಿಕ ಪ್ರಗತಿ 'ಅಭಿವೃದ್ಧಿ' ಎನ್ನುವ ಅವರ ನಂಬಿಕೆ 'ಹುಸಿ' ಎಂದು ಅರಿವಾಯಿತು. ನಮ್ಮ ಅಸ್ತಿತ್ವ ಕೇವಲ 'ದೇಹ ಮತ್ತು ಮನಸ್ಸು' ಎಂಬ ಸಂಕೀರ್ಣತೆಗೆ ಸೀಮಿತಗೊಳಿಸಿಕೊಂಡಾಗ, ಪ್ರಗತಿ ಕೇವಲ ಇಂದ್ರಿಯ ಲಾಲಸೆಯನ್ನು ತೃಪ್ತಿಪಡಿಸುವ ಸಾಧನವಾಗಿಬಿಡುತ್ತದೆ. ವೈಜ್ಞಾನಿಕ ಪ್ರಗತಿ ಮತ್ತು ಅಭಿವೃದ್ಧಿಯು ಕೇವಲ ಕೆಲವೇ ಜನರ ಅಹಂಕಾರವನ್ನು ತಣಿಸುವ ಸಾಧನವಾಗಿ, ಬಡವರು, ಧನವಿಹೀನರು ಮತ್ತು ಅಸಹಾಯಕರ ಶೋಷಣೆಗೆ ಒಂದು ಸಾಧನವಾಗಿಬಿಡುತ್ತದೆ. 

ವೇದಾಂತವು ವಿಚಾರಮಾಡುವುದನ್ನೋ ಅಥವಾ ವಾಸ್ತವವಾದವನ್ನೋ ಅಲ್ಲಗೆಳೆಯುವುದಿಲ್ಲ   ಅದು ಎಲ್ಲರನ್ನೂ ' ತನ್ನಂತೆ' ಬಗೆ , ಎನ್ನುವ ತಾರ್ಕಿಕ ನೆಲೆಗಟ್ಟಿನಲ್ಲಿ ನಿಲ್ಲುತ್ತದೆ . ವೇದಾಂತವು, ನಮ್ಮ ಅವಗಾಹನೆಗೆ ಬರುವುದೆಲ್ಲವೂ ದೈವೀಕ ಎಂದು ಪರಿಗಣಿಸಿ 'ಆತ್ಮ ಮತ್ತೊಂದು ಆತ್ಮವನ್ನು'  ಶೋಷಿಸುವುದನ್ನು ವಿರೋಧಿಸುತ್ತದೆ !  ಇದು ಕೇವಲ ಕಲ್ಪನೆಯಲ್ಲ. ನಾವು ಆಧ್ಯಾತ್ಮಿಕ ಸಾಧನೆಯಿಂದ ಅಂತರಂಗದ ಔನ್ನತ್ಯವನ್ನು ಪಡೆದಾಗ  ನಮಗೆ ಸೃಷ್ಟಿಯ ಎಲ್ಲವೂ ದೈವೀಕವಾಗಿ ಕಂಡು, ಸಕಲ ಸೃಷ್ಟಿಯಲ್ಲಿ ಪ್ರೇಮ ಮತ್ತು ಪೂಜನೀಯ ಭಾವಗಳ ಅವಿನಾಭಾವ ಸಂಬಂಧದ ಅರಿವಾಗಿ, ಸ್ವಾಭಾವಿಕವಾಗಿ, ಇಡೀ ಜಗತ್ತೇ ಒಂದು ಸುಂದರ ತಾಣವಾಗಿ ಮಾರ್ಪಾಡಾಗುತ್ತದೆ. 

ರವಿ ತಿರುಮಲೈ 
೧೨. ೧೧.೨೦೧೪

(Bhavan's Journal ನಲ್ಲಿ ಮಾನ್ಯ S.C. SHAH ರವರ Practical Vedanta ಎಂಬ ಲೇಖನದ 'ತರ್ಜುಮೆ' )     

Thursday, 13 November 2014

ಕ್ಷಮಯಾ ಧರಿತ್ರಿ


ನಿನ್ನ ಮೌನವೆನಗೆ ಕಂಡಿತಂದು
ಕೇವಲ ನಿನ್ನ ಬಲಹೀನತೆಯೆಂದು
ಕೋಪಗೊಂಡು ಅರಚಿದೆ 
ಕ್ರೋಧದಿಂದ ಕ್ಷುದ್ರನಾಗಿ ಕನಲಿದೆ


ಪದಗಳನಾಡಿದೆ,ವಾದಗಳ ಮಂಡಿಸಿದೆ
ಮಾತುಗಳ ಕತ್ತಿಯಲಗಿನಂತೆ ಬಳಸಿದೆ
ಎನ್ನ ಮತವೆಂದೆಂದಿಗೂ ಸರಿಯೆಂದು
ನೀ ಸರಿಯಾಗಲು ಸಾಧ್ಯವಿಲ್ಲೆಂದು

ಅಂದಿನಿಂದ ಇಂದಿನವರೆಗೆ, ನಾ
ಆಡಿದ ಮಾತಿನಾ ಭಾರದಲಿ, ನಾ
ಕುಗ್ಗಿಹೆ, ಬಗ್ಗಿಹೆ, ಕುಬ್ಜನಾಗಿಹೆ, ಅರಿತು
ಎನ್ನ ನುಡಿಗಳು ಕಿವಿಗೆ ಇಂಪಾದ ಹಾಡಲ್ಲವೆಂದು

ಬಳಲಿ ಬೆಂಡಾಗಿ, ಎನ್ನ ಅಹಮಡಗಿ,
ಒರಗಲೊಂದು ಆಸರೆಯೊಂದ
ಹುಡುಕುತ್ತಿರೆ, ಕಳೆದ ದಿನಗಳ
ನೆನೆದು,ಒರಗಿ ಕಣ್ಣೀರಿಡಲೆಂದು

ನೀ ತೆರೆದ ತೋಳ್ಗಳಿಂದ, ಬಾ
ಎಂದು ಕರೆದಾಗ, ನಾ ಕುಸಿದು
ಧರೆಗಿಳಿದು ಮೌನದಲಿ ಕೂಗಿದೆ,
ಕ್ಷಮಯಾ ಧರಿತ್ರಿ ಕ್ಷಮಯಾ ಧರಿತ್ರಿ

ರವಿ ತಿರುಮಲೈ

Sunday, 2 November 2014

ನಾನೊಂದು ಆದಿ
ನಾನೊಂದು ಅಂತ್ಯ
ನಾನೇ ಜಗತ್ತು
ನಾನೇ ಶೂನ್ಯ
ನಾನೊಂದು ಕಡಲ ಜಲದ ಹನಿ
ಆದ್ಯಂತರಹಿತ ಕಡಲೇ ನಾನು

ಏಕಾಂತ ನನ್ನ ಮಿತಿ
ಒಂದು ಕ್ಷಣಕ್ಕೆ ನಾ ಸ್ಥಬ್ಧ
ನನಗಾಗಿ ನನ್ನದೇ ವ್ಯರ್ಥ ಹುಡುಕಾಟ
ನಾನಿಲ್ಲ ನಾನಿರುವೆಗಳ ನಡುವೆ
ಕಣ್ಣ ಮುಚ್ಚಾಲೆಯಾಟ
ಮೂಲೆಮೂಲೆಯಲ್ಲೂ ನನ್ನನ್ನೇ
ತುಂಬಿಕೊಳ್ಳಲು ಪರದಾಟ

ಅಸ್ಪಷ್ಟ ನೀತಿ ನಿಯಮಗಳ ನಡುವೆ
ನನ್ನ ಯೋಚನೆಗಳು ಜೀರ್ಣವಾಗದೆ
ನಿರಂತರ ಪ್ರಶ್ನೆಗಳ ಸುರಿಮಳೆ
ನಿರುತ್ತರದ ಸ್ಥಿತಿಯಲ್ಲಿ ತಲೆಬಾಗುವೆ
ನಾನಾ ಪರವಸ್ತುವಿಗೆ

ಎನ್ನ ಪದಗಳಿಂದ ನಾನಮರ
ಗೋರಿಗಳಿಂದೆದ್ದು ಕೂಗುವ
ಎನ್ನ ಪೂರ್ವಜರ ಕರೆಗಳಿಂದ,
ಬರೆಯುವುದೆನ್ನ ಹಕ್ಕು, ಧರ್ಮ

ಅಣಕವಾಡುವವರು, ಅಣಕಿಸಲಿ
ಹೊಗಳುವವರ ಗುಣಗಾನವಿರಲಿ
ವಿದ್ವಜ್ಜನರೊಪ್ಪಿಕೊಳ್ಳಲಿ, ಸೂರ್ಯನ
ಕಡೆ ಮುಖಮಾಡಿ ನಾಯಿ ಬೊಗುಳಲಿ


ನಾನೊಂದು ಆದಿ ನಾನೊಂದು ಅಂತ್ಯರವಿ ತಿರುಮಲೈ 
೧. ೧೧. ೨೦೧೪