Monday, 5 October 2015

ಮೋಕ್ಷ

ಮೋಕ್ಷ 
     
ಭಾರತೀಯ ತತ್ವಶಾಸ್ತ್ರದ ಅನುಸಾರ,ಪ್ರಪಂಚವನ್ನು ಸಂಸಾರ ಎಂದರೆ ನೋವು ಮತ್ತು ಸಂಕಷ್ಟಗಳ ಸುಳಿ ಎಂದು ಕರೆದಿದ್ದಾರೆ. "ಸಂಸಾರ" ಎಂಬ ಸಂಸೃತ ಪದದ ಅರ್ಥ, ಬೇರೆ ಬೇರೆ ಲೋಕಗಳಲ್ಲಿ ಆತ್ಮದ ನಿರಂತರ ಪಯಣ ಅಥವಾ ಪರ್ಯಾಯವಾಗಿ ಜನನ ಮರಣಗಳ ನಿರಂತರ ಚಕ್ರ ಎಂದರ್ಥ. ಅಲಂಕಾರಿಕವಾಗಿ "ಸಂಸಾರ ಸಾಗರ"ಅಥವಾ "ಭವ ಸಾಗರ" ಎಂದೂ "ಪ್ರಾಪಂಚಿಕ ವ್ಯವಹಾರಗಳ ಕಡಲುಎಂದೂ ಕರೆದಿದ್ದಾರೆ. ಮಾನವನಿಗೆ ಇದನ್ನು ದಾಟಲು ಆತ್ಮಜ್ಞಾನ ಉಂಟಾಗಬೇಕು ಅಥವಾ ಪರಮಾತ್ಮನ ಕೃಪೆಯಾಗಬೇಕು. 

'ಆತ್ಮ'ವು ಗೊತ್ತು ಗುರಿಯಿಲ್ಲದನಿರಂತರ ಜೀವನ್ಮರಣಗಳ ಸಂಕೋಲೆಯಲ್ಲಿ ಸಿಲುಕಿತೊಳಲಿಬಳಲಿ ಗಮ್ಯವನ್ನು ಸೇರಲಾಗದೆಅನ೦ತಾನಂದವನ್ನು ಪಡೆಯದೆ,ಮತ್ತೆ ಮತ್ತೆ ಹುಟ್ಟಲು,ನಾಶವಾಗುತ್ತದೆ. ಈ ಭವಸಾಗರವನ್ನು ದಾಟಲು ಆತ್ಮ ಮಾಡುವ ಪ್ರಯತ್ನಗಳನ್ನೇ ವಸ್ತುವಾಗಿಟ್ಟುಕೊಂಡು ಸಾವಿರಾರು ಶ್ಲೋಕಗಳು ಮತ್ತು ಕಥೆ ಪುರಾಣಗಳ ಸಾಹಿತ್ಯ ನಮಗೆ ವಿಫುಲವಾಗಿ ಸಿಗುತ್ತದೆ. 

ಕೆಲವರಿಗೆ ಇಂದ್ರಿಯ ಸುಖ ಭೋಗಗಳಲ್ಲೇ ಆನಂದ ಸಿಗುತ್ತದೆ ಎಂಬ ಭ್ರಮೆ. ಮತ್ತೆ ಕೆಲವರಿಗೆ ಹಣಹೆಸರುಅಧಿಕಾರಅಂತಸ್ತು ಮುಂತಾದವುಗಳಲ್ಲಿ ಆನಂದ ಉಂಟೆಂದು ಭ್ರಾಂತಿ. ಮತ್ತೆ ಕೆಲವರ ಅಭಿಪ್ರಾಯದಲ್ಲಿ ಸಾಹಿತ್ಯ,ವಿಜ್ಞಾನ,ಗ್ರಂಥಾಭ್ಯಾಸದಲ್ಲೇ ಆನಂದ. ಆದರೆ ಈ ಎಲ್ಲ ರೀತಿಯ ಜ್ಞಾನವು ಮಾನವನಿಗೆ ಈ ಜನನ ಮರಣದ ಚಕ್ರದಿಂದ  ಮುಕ್ತಿ ಕೊಡುವುದಿಲ್ಲ. 

ಮುಕ್ತಿ ಎಂದರೇನು?

ಹಾಗಾದರೆ ಮುಕ್ತಿ ಎಂದರೇನುಏನು ಮಾಡುವುದರಿಂದ ಮನುಷ್ಯ 'ಮುಕ್ತ' ನಾಗುತ್ತಾನೆ. ಈ ಪ್ರಶ್ನೆಗೆ ಭಾರತೀಯ ತತ್ವ ಶಾಸ್ತ್ರದ ಬೇರೆ ಬೇರೆ ಶಾಖೆಗಳು ಬೇರೆ ಬೇರೆ ಉತ್ತರಗಳನ್ನು ನೀಡಿವೆ. ಎಲ್ಲಾ ಮೀಮಾಂಸೆಗಳೂ ಭಿನ್ನ ಭಿನ್ನವಾಗಿದ್ದರೂ, 'ಜೀವಿ' ಮೌಡ್ಯವನ್ನು ತೊರೆದು ಪರಮಾತ್ಮ ವಸ್ತುವಿನ ಸತ್ಯ ಸ್ವರೂಪವನ್ನು ಅರಿತಾಗ ಜೀವಿಗೆ ಮುಕ್ತಿ ಎಂಬ ವಿಚಾರದಲ್ಲಿ ಎಲ್ಲ ಶಾಖೆಗಳಲ್ಲೂ ಏಕೀಭಾವವುಂಟು.   

ಹಾಗಾದರೆ ಮೌಡ್ಯವೆಂದರೇನುಆತ್ಮದ ಸ್ವರೂಪವೇನುಆತ್ಮ ಸ್ವರೂಪದ ಜ್ಞಾನ ಉಂಟಾಗದಂತೆ ಈ ಮನಸ್ಸು-ಬುಧ್ಧಿಗಳಿಗೆ ಈ ಮೌಡ್ಯವು ಹೇಗೆ ಮತ್ತು ಏಕೆ ಕವಿಯುತ್ತದೆ? ಎನ್ನುವ ಪ್ರಶ್ನೆಗಳಿಗೆ ಉತ್ತರವನ್ನೀಯುತ್ತಾ ಬೇರೆ ಬೇರೆ ಬೋಧಕರುಆಚಾರ್ಯರು ಮತ್ತು ಮತ ಪ್ರತಿಪಾದಕರು ತಮ್ಮದೇ ರೀತಿಯಲ್ಲಿ ಈ ಪ್ರಶ್ನೆಗಳಿಗೆ ವ್ಯಾಖ್ಯಾನ ಮಾಡಿದ್ದಾರೆ. ಹಾಗಾಗಿ ಆತ್ಮಜ್ಞಾನವನ್ನು ಪಡೆದು ಮೋಕ್ಷ ಸಾಧಿಸಲಿಕ್ಕೂ ಸಹ ಮಾರ್ಗಗಳು ವಿಭಿನ್ನವಾಗಿ ಕಾಣುತ್ತವೆ. 

ದ್ವೈತ ಸಿಧ್ಧಾಂತದ ಪ್ರಕಾರ ಮುಕ್ತಿ: 

ಈ ಸ್ಥೂಲ ಶರೀದಲ್ಲಿರುವತನಕ ಆತ್ಮಕ್ಕೆ ಮುಕ್ತಿಯಿಲ್ಲ. ಆತ್ಮ ಶರೀರ ತ್ಯಜಿಸಿದರೆ ಮುಕ್ತಿ. ಆದರೆ ಮನಸ್ಸು ಬುಧ್ಧಿಗಳನ್ನು ಶುಧ್ಧಗೊಳಿಸುವ ಪ್ರಕ್ರಿಯೆಗೆ ಶರೀರವು ಬೇಕೇ ಬೇಕು. ಶರೀರದ ಮಾಧ್ಯಮದಿಂದ ಮನಸ್ಸು ಬುಧ್ಧಿಗಳನ್ನು ಶುಧ್ಧೀಕರಿಸಿದರೆ,'ಜೀವಿ' ಮೋಕ್ಷಕ್ಕೆ ಪಾತ್ರನಾಗುತ್ತಾನೆ. ಸಾಧಕ ಅನುಸರಿಸಬೇಕಾದ ಆಧ್ಯಾತ್ಮಿಕ ನಿಯಮಗಳು ಮತ್ತು ಗ್ರಂಥಾದೇಶಗಳು ಯಾವುವೆಂದರೆಮನಸ್ಸು, ಬುದ್ಧಿ, ಕರ್ಮ ಮತ್ತು ವಾಕ್ಕಿನ ಬಾಹ್ಯ ಮತ್ತು ಆಂತರಿಕ ಶುಧ್ಧಿನೈತಿಕತೆ ಮತ್ತು ಶುದ್ಧತೆಯಿಂದ ಕೂಡಿದಅಹಿಂಸೆಯನ್ನು ಪಾಲಿಸುತ್ತಾ  ವಿಷಯಗಳಿಗೆ ಅಂಟದ  ಸರಳವಾದ  ಜೀವನ ನಡೆಸುವುದುತಾನು ನಂಬಿದ ದೈವದಲ್ಲಿ  ಸಂಪೂರ್ಣ ಶರಣಾಗತಿತಾಳ್ಮೆಭಕ್ತಿ ಪೂರಿತ ಪೂಜೆ ಮತ್ತು ಧ್ಯಾನ ಇತ್ಯಾದಿ. ಆದರೆ ಇಂತಹ ಅತೀ ಕಷ್ಟಕರವಾದ ಜೀವನ ಶೈಲಿಯನ್ನು ಪಾಲಿಸುತ್ತಾ ಹೋದರೆ ದೈವ ಕೃಪಯಿಂದಜೀವನಿಗ ಮುಕ್ತಿ ಸಿಗಬಹುದು.  ಜೀವಿಗೆ ಸಿಗುವ ಮುಕ್ತಿಯು ನಾಲ್ಕು ವಿಧವಾಗಿರುತ್ತದೆನ್ನುತ್ತದೆ ದ್ವೈತ ಸಿಧ್ಧಾಂತ. ಅವುಗಳಾವುದೆಂದರೆ : 

ಸಾಲೋಕ್ಯ ಇಷ್ಟದೇವತಾ ಲೋಕವನ್ನು ಸೇರಿ ಆನಂದಿಸುವುದು. 
ಸಾಮೀಪ್ಯ ಪರಮಾತ್ಮ ವಸ್ತುವಿನ ಹತ್ತಿರವಿದ್ದು ಆನಂದಿಸುವುದು. 
ಸಾರೂಪ್ಯ ದೇವತಾರೂಪವನ್ನೇ ಪಡೆದು ಆನಂದಿಸುವುದು. 
ಸಾಯುಜ್ಯ - ಪರಮಾತ್ಮ ವಸ್ತುವನ್ನೇ ಸೇರಿ ಆನಂದಿಸುವುದು.  

ವಿಶಿಷ್ಟಾದ್ವೈತದ ಪ್ರಕಾರ ಮುಕ್ತಿ : 

ವೇದಾಂತದ ಈ ಶಾಖೆಯೂ ಜೀವಿಗೆ ದೇಹಸಂಬಂಧವಿರುವವರೆಗೂ ಮುಕ್ತಿ ಇಲ್ಲ ಎಂಬುದನ್ನು ನಂಬುತ್ತದೆ. ಮೃತ್ಯುವಿನ ನಂತರವೇ ಜೀವನಿಗೆ ಮುಕ್ತಿ ಎನ್ನುತ್ತದೆ ವಿಶಿಷ್ಟಾದ್ವೈತ. ಹೆಚ್ಚೂ ಕಡಿಮೆಮೋಕ್ಷದ ತತ್ವದ್ವೈತ ಸಿಧ್ಧಾಂತದ ರೀತಿಯೇ ಇದೇ. ಆದರೆ ಈ ಶಾಖೆ ಮುಕ್ತಿಯ ಬೇರೆ ಬೇರೆ ಸ್ತರಗಳನ್ನು ಸೂಚಿಸಿಲ್ಲ. ಜೀವವು ಆಧ್ಯಾತ್ಮಿಕ ನಿಯಮಗಳನ್ನು ಪಾಲಿಸುತ್ತಾಪರಮಾತ್ಮನಿಗೆ ಸಂಪೂರ್ಣ ಶರಣಾಗತನಾದರೆಮುಕ್ತಿ ಪಡೆದುಶ್ರೀಮನ್ಮಹಾವಿಷ್ಣುವಿನ ವೈಕುಂಠವನ್ನು ಸೇರಿ ತನ್ನ ಇಷ್ಟದೇವತಾ ಸೇವೆಯಲ್ಲಿ ನಿರಂತರ ಆನಂದವನ್ನು ಪಡೆಯುತ್ತದೆ ಎಂದು ಹೇಳುತ್ತದೆ ವಿಶಿಷ್ಟಾದ್ವೈತ. ಅಲ್ಲಿ ಜೀವಿಯು ಸೃಷ್ಟಿಸ್ಥಿತಿ ಮತ್ತು ಲಯದಂತಹ ಗುಣಗಳನ್ನು ಹೊರತುಮಿಕ್ಕೆಲ್ಲ ದೈವ ಶಕ್ತಿಯನ್ನು ಪಡೆದು ಕೊಳ್ಳುತ್ತದೆ. ಮುಕ್ತಿಗೆ ಭಕ್ತಿಯೋಗವೊಂದೇ ಮಾರ್ಗವೆನ್ನುತ್ತದೆ ವಿಶಿಷ್ಟಾದ್ವೈತ. ಕರ್ಮ ಮತ್ತು ಜ್ಞಾನಯೋಗಗಳು ಕೇವಲ ಸಾಧಕನನ್ನು ಭಕ್ತಿ ಯೋಗಕ್ಕೆ ಸೇರಿಸುವ ಸಾಧನಗಳೆಂದು ಅಭಿಪ್ರಾಯಪಡುತ್ತದೆವಿಶಿಷ್ಟಾದ್ವೈತ.  
  
ಆದ್ವೈತದ ಪ್ರಕಾರ ಮುಕ್ತಿ :

ಜೀವಿಗೆ ತನ್ನ ಸ್ವ-ರೂಪವನ್ನು ಅರಿತುಕೊಳ್ಳಲು ಬಾಧಕವಾಗಿಕಾರ್ಮೋಡದಂತೆ ಆವರಿಸಿರುವ 'ಅಜ್ಞಾನ ಮತ್ತು ಅವಿದ್ಯೆ'ಯನ್ನು ತೊಡೆದುಕೊಂಡಾಗಲೇ ಜೀವಿಗೆ ಸಂಸಾರ ಸಾಗರದಿಂದ ಮುಕ್ತಿ ಎನ್ನುತ್ತದೆ ಅದ್ವೈತ ಸಿಧ್ಧಾಂತ. ಅವಿದ್ಯೆಯ ಕಾರಣದಿಂದಾಗಿ ಮತ್ತು ಪ್ರಪಂಚದ ಸಂಪರ್ಕದಿಂದಾಗಿಒಂದೇ ಆಗಿರುವ ಜೀವಾತ್ಮ ತನ್ನನ್ನು ತಾನೇ ಬೇರೆ ಎಂದು ಗುರುತಿಸಿಕೊಂಡು,ಜನನ ಮರಣಗಳ ಸುಳಿಯಲ್ಲಿ ಸಿಕ್ಕು ತೊಳಲಾಡುತ್ತದೆ. 

ಚತುರ್ವಿಧ ಯೋಗದಿಂದ ವ್ಯಕ್ತಿ ವಸ್ತು ವಿಶ್ಲೇಷಣಾ ಮತ್ತು ತಾರತಮ್ಯ ಜ್ಞಾನದಿಂದತ್ಯಾಗವನ್ನು ಅಭ್ಯಸಿಸುತ್ತಾನೆ. ತ್ಯಾಗದಿಂದ ಮನದ ಕಶ್ಮಲಗಳೆಲ್ಲ ತೊಲಗಿ ಶುದ್ಧವಾಗುತ್ತದೆ. ಶುದ್ಧಮನಸ್ಸುಪರಬ್ರಹ್ಮವಸ್ತುವಿನಲ್ಲಿ ಆಳವಾದ ಧ್ಯಾನದಲ್ಲಿ ತನ್ನನ್ನು ತೊಡಗಿಸಿಕೊಂಡುಆತ್ಮಜ್ಞಾನವನ್ನು ಅಥವಾ ಬ್ರಹ್ಮ ಜ್ಞಾನವನ್ನು ಪಡೆದುಕೊಂಡುಅವಿದ್ಯೆ ಮತ್ತು ಅಜ್ಞಾನವನ್ನು ತೊಲಗಿಸಿಕೊಂಡುಪರಬ್ರಹ್ಮ ವಸ್ತುವಿನೊಡನೆಏಕತ್ವವನ್ನು ಅನುಭವಿಸುತ್ತಾ, ಆ  ಪರಮಾತ್ಮ ವಸ್ತುವಿನೊಡನೆ ಏಕೀಭಾವವನ್ನು ಅನುಭವಿಸುತ್ತಾ, ಸಂಪೂರ್ಣ ಜ್ಞಾನ ಮತ್ತು ಆನಂದವನ್ನು ಅನುಭವಿಸುತ್ತಾನೆ. 

ಸಾಂಖ್ಯ ತತ್ವಶಾಸ್ತ್ರ  ಸಿದ್ಧಾಂತದ ಪ್ರಕಾರ ಮುಕ್ತಿ ಅಥವಾ ಮೋಕ್ಷ 

ಈ ಶಾಖೆಯು ಎರಡು ಸಂಪೂರ್ಣ ಸತ್ಯಗಳನ್ನು ಅಧಾರವನ್ನಾಗಿ ಇಟ್ಟುಕೊಂಡಿದೆ. ಒಂದು ಆತ್ಮ ಅಥವಾ ಚೇತನದ ರೂಪದಲ್ಲಿರುವ ಚೇತನಾತ್ಮಕ ಪುರುಷ ಮತ್ತು ಎರಡು, ಉನ್ನತ ವಿಕಸಿತ ಸ್ಥರದಲ್ಲಿರುವ  ಜಡ ಪ್ರಕೃತಿ. ಇಲ್ಲಿ ಪುರುಷ ಎಂದರೆ ಶುದ್ಧ ಚೇತನ, ಆದರೆ ಅವಿವೇಕದ ಕಾರಣ ಅದು ತಪ್ಪಾಗಿ ತನ್ನನ್ನು ತಾನು, ಈ ಜಗತ್ತಿನೊಂದಿಗೆ, ಅಂದರೆ ಜಡ ಪ್ರಕೃತಿಯೊಂದಿಗೆ, ಗುರುತಿಸಿಕೊಂಡು, ಪ್ರಕೃತಿ ಸಂಬಂಧದಿಂದ ಸಂತೋಷ, ಆನಂದ, ನೋವು, ಸಂಕಟ ಮುಂತಾದ ಭಾವಗಳನ್ನು ಅನುಭವಿಸುತ್ತದೆ. ತಾನು ಈ ಪ್ರಕೃತಿಯಿಂದ ಭಿನ್ನ ಎನ್ನುವ ಜ್ಞಾನ ಪ್ರಾಪ್ತಿಯಾದಾಗ, ಆತ್ಮ ಮುಕ್ತಿಯನ್ನು ಪಡೆಯುತ್ತದೆ.  ಯಾವ ಜ್ಞಾನದಿಂದ, ಚೇತನ ಯುಕ್ತಾಯುಕ್ತತೆಯನ್ನರಿತು, ಜಗತ್ತಿನೊಂದಿಗಿನ ಮಮಕಾರದ ಭಾವದಿಂದ ಹೊರಬರುತ್ತದೋ ಅದು 'ವಿವೇಕ ಜ್ಞಾನ'.  ಎಂದು, ಜೀವ ತನ್ನನ್ನು ತಾನು ಪ್ರಕೃ ತಿಯೊಂದಿಗಲ್ಲದೆ,   ಪ್ರಕೃತಿಯಲ್ಲಿ ಹಲವಾರು ನಾಮ ರೂಪಗಳೊಂದಿಗೆ ಪ್ರಕಟವಾಗಿರುವ 'ಪುರುಷ' ನೊಂದಿಗೆ ಸಂಪೂರ್ಣವಾಗಿ ಗುರುತಿಸಿಕೊಳ್ಳುತ್ತದೋ, ಅಂದು ಜೀವನಿಗೆ ಮುಕ್ತಿ ಸಿಗುತ್ತದೆ. 'ಪ್ರಕೃತಿ ಮತ್ತು ಪುರುಷ' ನ ನಡುವಿನ ಅಂತರವನ್ನು ನಿಚ್ಚಳವಾಗಿ ಅರಿತಾಗ 'ಜೀವ'ನಿಗೆ ಪರಮಾನಂದವುಂಟಾಗುತ್ತದೆ. ಹೀಗೆ ಸಾಂಖ್ಯ ಶಾಸ್ತ್ರವು  ಜ್ಞಾನಯೋಗ ಮತ್ತು  ಕರ್ಮಯೋಗಗಳ ಮೂಲಕ 'ಮುಕ್ತಿ', ಎಂದು ಪ್ರತಿಪಾದಿಸುತ್ತದೆ.ಅಂತಹ ಮುಕ್ತಿ 'ಜೀವ'ನಿಗೆ ನೋವು ಮತ್ತು ಸಂಕಟದಿಂದ ಸಂಪೂರ್ಣ ಬಿಡುಗಡೆಯನ್ನು ನೀಡುತ್ತದೆ. ಅಂತಹ ಸ್ಥಿತಿಗೆ ' ಕೈವಲ್ಯ'ವೆಂದು ಹೆಸರು.  ಅದ್ವೈತ ಸಿದ್ಧಾಂತದಲ್ಲಿ ಪ್ರತಿಪಾದಿಸಿದಂತೆ, ಸಾಂಖ್ಯ ಸಿದ್ಧಾಂತವೂ ಜೀವಂತವಾಗಿರುವಾಗಲೇ ಮುಕ್ತ  ಸ್ಥಿತಿಯನ್ನು ಒಪ್ಪಿಕೊಳ್ಳುತ್ತದೆ. ಅದು 'ಜೀವನ್ಮುಕ್ತ' ಸ್ಥಿತಿ, ಎಂದರೆ ಜೀವಂತವಾಗಿರುವಾಗಲೇ ' ಮುಕ್ತ'ವಾದ ಸ್ಥಿತಿ.


ಶ್ರೀಮದ್ಭಗವದ್ಗೀತೆಯಲ್ಲಿ (೧೩-
 ೨)  "ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿಧೀಯತೇ। ಏತದ್ಯೋ ವೇತ್ತಿ ತಂ  ಪ್ರಾಹು: ಕ್ಷೇತ್ರಜ್ಞ ಇತಿ ತದ್ವಿದಃ ।।" ಎನ್ನುತ್ತಾನೆ ಶ್ರೀ ಕೃಷ್ಣ. ಎಂದರೆ ನಿಜವಾದ ಜ್ಞಾನವೆಂದರೆ ' ಕ್ಷೇತ್ರದ ಜ್ಞಾನ' ಎಂದರೆ 'ನೆಲೆ' ಯ ಜ್ಞಾನ. ಯಾರು 'ಚೇತನ ಮತ್ತು ಜಡ' ದ ಜ್ಞಾನವನ್ನು ಮತ್ತು ಅವುಗಳ ನಡುವಿನ ವ್ಯತ್ಯಾಸದ ನಿಚ್ಚಳವಾದ ಜ್ಞಾನವನ್ನು ಹೊಂದಿರುತ್ತಾನೋ, ಅವನನ್ನು 'ಕ್ಷೇತ್ರಜ್ಞ'  ಎಂದು ಕರೆಯುತ್ತಾರೆ. ಜಗತ್ತಿನಲ್ಲಿ ಯಾವುದನ್ನು 'ವಸ್ತು' ವೆಂದು ರೂಪ ಮತ್ತು ಹೆಸರುಗಳಿಂದ ಗುರುತಿಸುತ್ತಾರೋ ಅದನ್ನು ' ಕ್ಷೇತ್ರ'ವೆಂದೂ ಮತ್ತು ಯಾವುದು ಈ ಕ್ಷೇತ್ರದ ಒಳಗೂ ಹೊರಗೂ ವ್ಯಾಪಕವಾಗಿದೆಯೋ ಮತ್ತು ಯಾವುದರ ಸಹಾಯದಿಂದಲೇ ನಾವು ಕ್ಷೇತ್ರವನ್ನು ಅರಿಯಲಾಗುವುದೋ, ಅದನ್ನು ' ಕ್ಷೇತ್ರಜ್ಞ' ಎನ್ನಲಾಗಿದೆ.  

ಸಾಧಕನು, ರೂಪ ಮತ್ತು ನಾಮಗಳನ್ನು ಹೊಂದಿದ ದೇಹದಲ್ಲಿದ್ದರೂ, ತನ್ನ ಮತ್ತು ತಾನಿರುವ ದೇಹದ ನಡುವಿನ ಅಂತರ ಮತ್ತು ವ್ಯತ್ಯಾಸವನ್ನು ಸ್ಫುಟವಾಗಿ ಅರಿತಾಗ ಮತ್ತು ತನ್ನನ್ನು ತಾನು ಚೇತನವೆಂದು ಅರಿತಾಗ, 'ಆತ್ಮಜ್ಞಾನಿ'ಯಾಗುತ್ತಾನೆ. ಅಂತಹ ಆತ್ಮಜ್ಞಾನದಿಂದ ಸಾಧಕ ' ಮುಕ್ತ'ನಾಗುತ್ತಾನೆ, ಯೋಗಿ'ಎನಿಸಿಕೊಳ್ಳುತ್ತಾನೆ.    

ರವಿ ತಿರುಮಲೈ