Sunday 11 December 2011

ಮೂಡ ನಂಬಿಕೆಗಳು ಎಷ್ಟು ಸರಿ ಎಷ್ಟು ತಪ್ಪು



ಮೂಡ ನಂಬಿಕೆಗಳು ಎಷ್ಟು ಸರಿ ಎಷ್ಟು ತಪ್ಪು


ಮೂಢ ನಂಬಿಕೆ ಎಂದರೆ ಏನು? ಮೌಡ್ಯದಿಂದ ಕೂಡಿದ ನಂಬಿಕೆ. ಅಂದರೆ ಸತ್ಯದ ಅರಿವಿಲ್ಲದೆ ಒಂದು ವಿಷಯವನ್ನೋ ಅಥವಾ ವಸ್ತುವನ್ನೋ  ಅಥವಾ ವ್ಯಕ್ತಿಯನ್ನೋ ನಂಬುವುದು ಮೂಡ ನಂಬಿಕೆ. ಎಲ್ಲಾ ಕಾಲಕ್ಕೂ ಎಲ್ಲಾ ದೇಶಗಳಲ್ಲೂ ಎಲ್ಲಾ ಜನರೂ ಯಾವುದೋ ಒಂದು ರೀತಿಯ ಮೂಡ ನಂಬಿಕೆಗಳನ್ನು ರೂಡಿ ಮಾಡಿಕೊಂಡಿರುತ್ತಾರೆ. ಏಕೆಂದರೆ ಎಲ್ಲಾ ಜನರಿಗೂ ಸತ್ಯದ ಅರಿವಿರುವುದಿಲ್ಲ. ಈ ಮೂಡ ನಂಬಿಕೆಗಳು ಹೇಗೆ ನಮ್ಮ ಜೀವನದಲ್ಲಿ ಹೊಗುತ್ತವೆ ಎಂಬುದನ್ನು ನೋಡೋಣ.


ಮೂಲತ: ಕೆಲವು ಆಚಾರಗಳು ಸತ್ಯದ ಮತ್ತು ಸತ್ವದ ಆಧಾರದ ಮೇಲೆ ರೂಪಿಸಲ್ಪಟ್ಟಿರುತ್ತವೆ. ಆದರೆ ಕಾಲಾನುಕಾಲಕ್ಕೆ ಅದನ್ನಾಚರಿಸುವ  ಜನರು ಸತ್ವವನ್ನು ಬೆಳೆಸಿಕೊಳ್ಳದೆ ಮತ್ತು ಮೂಲ ತತ್ವವನ್ನರಿಯದೆ ಆ ಆಚಾರಗಳನ್ನು ನಡೆಸಿಕೊಂಡು ಹೋಗುತ್ತಾರೆ. ಹೀಗೆ ಹಲವರ ಮನೆಗಳಲ್ಲಿ ಹಿಂದಿನಿಂದ ನಡೆದು ಬಂದಿರುವ ಆಚಾರಗಳನ್ನೂ ಮುಂದಿನ ಎಷ್ಟೋ ತಲೆಮಾರಿನ ಜನ ಚಾಚೂತಪ್ಪದೆ ನಡೆಸಿಕೊಂಡು ಹೋಗುತ್ತಾರೆ. ಅವರಿಗೆ ಆ ಆಚಾರಗಳನ್ನು ಏಕೆ ಪಾಲಿಸಬೇಕು ಎಂಬುದು ಗೊತ್ತಿರದಿದ್ದರೂ ಆ ಆಚಾರದ ಪ್ರಸ್ತುತತೆಯನ್ನು ಪ್ರಶ್ನಿಸದೆ ನಡೆಸಿಕೊಂಡುಹೋಗುತ್ತಾರೆ. ಯಾರಿಗೂ ಅದನ್ನು ಪ್ರಶ್ನಿಸುವ ಅಥವಾ ಅದರ ಹಿಂದಿರುವ ತತ್ವವನ್ನು ಕೇಳಿ ತಿಳಿದುಕೊಳ್ಳುವ ತಾಳ್ಮೆ ಅಥವಾ ಧೈರ್ಯ ಅಥವಾ ಕುತೂಹಲ  ಇರುವುದಿಲ್ಲ. ಅಕಸ್ಮಾತ್ ಯಾರಾದರೂ ಧೈರ್ಯಮಾಡಿ ಮಾತ್ರ ತಿಳಿದುಕೊಳ್ಳುವ ಜಿಜ್ಞಾಸೆಯಿಂದ, ಕೇಳಿದರೆ, ಸಾಮಾನ್ಯವಾಗಿ ಬರುವ ಉತ್ತರ " ತಲೆ ಹರಟೆ, ಸುಮ್ನೆ ಹೇಳ್ದಷ್ಟು ಮಾಡೋ ಕೆಲಸಕ್ಕೆಬಾರ್ದ ಪ್ರಶ್ನೆ ಕೇಳಬೇಡ." ಹೀಗೆ ಹೇಳಿಸಿಕೊಂಡ ನೂರರಲ್ಲಿ ಒಬ್ಬನೋ- ಇಬ್ಬರೋ ಅಚಾರವನ್ನೇ ಬಿಡುವ ಧೈರ್ಯ ಮಾಡಬಹುದು. ಮಿಕ್ಕವರೆಲ್ಲರೂ ಮನೆಯಲ್ಲಿ ಹಿರಿಯರ ಹೆದರಿಕೆಯಿಂದ ಅಥವಾ ಗೌರವದಿಂದ ತುಟಿಪಿಟಕ್ಕೆನ್ನದೆ ಅವುಗಳನ್ನೇ ನಂಬಿ ಆಚರಿಸುತ್ತಾ ಹೋಗುತ್ತಾರೆ. ಹೀಗೆ ಆಚರಿಸುವವರಿಗೆ ಅದು ಅಭ್ಯಾಸವಾಗಿ ಹೋಗುತ್ತದೆ ಮತ್ತು ಅದು ಅವರ ಸ್ವಭಾವವೇ ಆಗುತ್ತದೆ.  ಇದು ಒಂದು ರೀತಿ


ಎರಡನೆಯದಾಗಿ ನಾವಿರುವ ಸಮಾಜದಲ್ಲಿ ಅನೂಚಾನವಾಗಿ ನಡೆಸಿಕೊಂಡುಬಂದಿರುವ ಆಚಾರ ವಿಚಾರಗಳನ್ನು, ಸಮಾಜದ ಸಧಸ್ಯನಾಗಿ ನಡೆಸಿಕೊಂಡು ಹೋದರೆ ಸಮಾಜದಲ್ಲಿ ಇರಲು ಅವಕಾಶ ಮತ್ತು ಸೌಹಾರ್ಧಯುತವಾದ ಬಾಳ್ವೆ ಎಂಬ ನಂಬಿಕೆಯಿಂದ ನಡೆಸಿಕೊಂಡುಹೋಗುವುದು.  ಆಂತರಿಕವಾಗಿ ಆ ಆಚಾರಗಳನ್ನು ಪ್ರಶ್ನಿಸಬೇಕು ಅಥವಾ ವಿರೋಧಿಸಬೇಕು ಎಂಬ ವಿಚಾರ ಮತ್ತು ಭಾವನೆಗಳು ಮನಸ್ಸಿನಲ್ಲಿ ಉಧ್ಭವವಾದರೂ, ಹೆದರಿಕೆಯಿಂದ ಅಥವಾ ಸಂಕೋಚದಿಂದ ಹಾಗೆ ಮಾಡದೆ ತಾನೂ ಸಮಾಜದಲ್ಲಿ ಒಂದೆಂಬಂತೆ, ಪಾಲಿಸಿಕೊಂಡು ಹೋಗುವವರೇ ಜಾಸ್ತಿ.

ಮೂರನೆಯದಾಗಿ ಹೆದರಿಕೆ. ಹೀಗೆ ಮಾಡದಿದ್ದರೆ ಏನಾಗುವುದೋ ಎಂಬ ಭಯ. ಈ ಭಯ ಮನುಷ್ಯನನ್ನು ಏನನ್ನಾದರೂ
ಮಾಡಿಸುತ್ತದೆ.  ಇರುವುದನ್ನು ಕಳೆದುಕೊಳ್ಳುವ ಭಯ ಅಥವಾ ಆಸೆಪಟ್ಟದ್ದು ಸಿಗದೇನೋ ಎಂಬ ಭಯ. ಈ ಹಾಳು ಭಯವೇ ಸಾಕಷ್ಟು ಮೂಡ ನಂಬಿಕೆಗಳಿಗೆ ಕಾರಣ. ಎಲ್ಲಾ ಕಾಲಕ್ಕೂ ಈ ಭಯ ಎಲ್ಲಾ ಜನಾಂಗವನ್ನೂ ಕಾಡಿದೆ. ಆರೋಗ್ಯ, ವಿಧ್ಯಾಭ್ಯಾಸ, ವೈವಾಹಿಕ ಜೀವನ, ವೃತ್ತಿ, ವ್ಯವಹಾರ, ಹಣ, ಪ್ರಯಾಣ, ಹೀಗೆ ಹತ್ತು ಹಲವಾರು ಕಾರಣಗಳಿಗಾಗಿ ಮಾನವ ಮೂಡ ನಂಬಿಕೆಗಳಿಗೆ ದಾಸನಾಗುತ್ತಾನೆ. "ಬೆಕ್ಕು ಅಡ್ಡಬಂದರೆ ಕೆಡುಕು" ಎಂಬ ನಂಬಿಕೆಗೆ ಯಾವ ಅಧಾರ? ಪಾಪ ಆ ಬೆಕ್ಕೇನು ಮಾಡುತ್ತದೆ. ಆದರೆ ಇದನ್ನು ನಂಬುವವರು ಎಷ್ಟುಮಂದಿ ನೋಡಿ.


ಆದರೆ ನಮ್ಮ ಸಮಾಜದಲ್ಲಿ, ಜನರ ನಂಬಿಕೆಗಳನ್ನು ಹೀಗೆಳೆಯುವರು ಸಾಕಷ್ಟುಜನ ಸಿಗುತ್ತಾರೆ. ಅವರಿಗೂ ಸಹಾ, ಒಂದು ವಿಷಯವನ್ನೋ, ವಸ್ತುವನ್ನೋ ಅಥವಾ ಒಬ್ಬ ವ್ಯಕ್ತಿಯನ್ನೋ ನಂಬದಿರಲು ಅಥವಾ ವಿರೋಧಿಸಲು ಕಾರಣಗಳು ಹಲವಾರು. ವೈಯಕ್ತಿಕ  ಅಹಂಕಾರದಿಂದ, ವ್ಯಕ್ತಿಗತ ದ್ವೇಷದಿಂದ, ತನಗೆ ಎಲ್ಲಾ ಗೊತ್ತು ಎಂಬ ಹುಂಬತನದಿಂದ, ತನಗೆ ಗೊತ್ತಿರುವುದೇ ಸತ್ಯ ಎಂಬ ಮೌಡ್ಯದಿಂದ ಅಥವಾ ಅವರದೇ ಆದ ಬೇರೆ ಬೇರೆ ಕಾರಣಗಳಿಂದ ವಿರೋಧ ಉಂಟಾಗಬಹುದು. ಆದರೆ ಇದು ಸರಿಯಲ್ಲ. ವಿರೋಧಕ್ಕೆ ಸತ್ಯದ ಅರಿವಿನ ಅವಶ್ಯಕತೆಯುಂಟು. ಸತ್ಯದ ಅರಿವಿಲ್ಲದೆ ಮಾತ್ರ ವಿರೋಧಕ್ಕಾಗಿ ವಿರೋಧಿಸುವುದೂ ಸಹ ಮೂಡ ನಂಬಿಕೆಯಷ್ಟೇ ತಪ್ಪು.


ಮೇಲೆ ಹೇಳಿದಂತೆ ಸತ್ಯದ ಅರಿವಿಲ್ಲದೆ ನಂಬಿಕೆಗಳನ್ನು ಬೆಳೆಸಿಕೊಳ್ಳುವುದು ಮೂಡ ನಂಬಿಕೆ.
ಆದರೆ ಸತ್ಯದ ಅರಿವು ಆಗಬೇಕಾದರೆ ವಿಚಾರ ಬೆಳೆಯ ಬೇಕು. ವಿಚಾರ ಬೆಳೆಯಲು ಜಿಜ್ಞಾಸೆ ಬೆಳೆಯ ಬೇಕು.
ವಿಧ್ಯೆಯಿಂದಲೇ ವಿಚಾರ ಬೆಳೆಯಬೇಕು.ವಿಚಾರವೆಂದರೆ, ನಮ್ಮ ಗಮನಕ್ಕೆ ಬಂದ ವಿಷಯವನ್ನು ಸತ್ಯದ ಒರೆಗೆ ಹಚ್ಚಿ ತಿಕ್ಕಿ ವಿಷಯದ ದಿರುವ ತತ್ವವನ್ನು ಮತ್ತು ಸತ್ಯವನ್ನು .  ವಿಚಾರ ಬೆಳೆದರೆ ಮೌಡ್ಯ ತೊಲಗುತ್ತದೆ. ಮೌಡ್ಯ ತೊಲಗಿದರೆ ಮೂಡ ನಂಬಿಕೆಯೂ ತೊಲಗುತ್ತದೆ.


ಆದರೆ ಎಲ್ಲರಿಂದಲೂ ಮೇಲೆ ಹೇಳಿದ ಹಲವಾರು ಕಾರಣಗಳಿಂದಾಗಿ ವಿಚಾರ ಬೆಳೆಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಮೂಡ ನಂಬಿಕೆಗಳೂ ಸಹ ಕೊನೆಯಾಗುವುದೇ ಇಲ್ಲ.


ಮೂಡನಂಬಿಕೆ ಸರಿಯೇ ಅಥವಾ ತಪ್ಪೇ?    


ವಿಚಾರವಂತರಿಗೆ ಮೂಡನಂಬಿಕೆ ಸರಿಯೆಲ್ಲ ಎಂಬ ಧೃಢ ನಂಬಿಕೆ . ಆದರೆ ವಿಚಾರವಂತರಲ್ಲದವರಿಗೆ ಮೂಡನಂಭಿಕೆ ಒಂದು ಅಧಾರ ಸ್ಥಂಭ. ಅವುಗಳ ಅಧಾರದಿಂದಲೇ ಅವರು ತಮ್ಮ  ಜೀವನವನ್ನು ನಡೆಸುತ್ತಾರೆ. ಅದರ ಆಧಾರದಮೇಲೆ ಅವರು ತಮ್ಮ ಮಾನಸಿಕ ಸಂತುಲನೆಯನ್ನು ಕಾಪಾಡಿಕೊಳ್ಳುತ್ತಾರೆ. ಯಾವುದೋ ಒಂದನ್ನು  ನಂಬುವುದರಿಂದ ಅವರಿಗೆ ಸುಖ, ಶಾಂತಿ, ನೆಮ್ಮದಿ ಅಥವಾ ಸಂತೋಷ ಸಿಗುತ್ತದೆ ಎಂದರೆ ಏಕೆ ವಿರೋದಿಸಬೇಕು. ಎಂದೋ ಒಂದು ದಿನ ಅವರಲ್ಲೂ ವಿಚಾರ ಮೂಡಿ, ಸತ್ಯದ ಅರಿವಾಗಿ, ಮೌಡ್ಯ ತೊಲಗಿ ಮೂಡ ನಂಬಿಕೆಗಳನ್ನೂ ಬಿಡಬಹುದು.


ಉದಾಹರಣೆಗೆ, ಯಾರೋ ಒಬ್ಬರು ವೃತ್ತಿರೀತ್ಯ ಬಹಳ ಸಂಕಷ್ಟದಲ್ಲಿ ಇದ್ದಾರೆ ಎಂದು ಇಟ್ಟುಕೊಳ್ಳೋಣ. ಕಷ್ಟದಲ್ಲಿ ಇದ್ದಾಗ ಅದರ ಪರಿಹಾರಕ್ಕಾಗಿ ಯಾರು ಏನು ಹೇಳಿದರೂ ನಂಬುವುದು ಸಹಜ. ಯಾರೋ ಅವರಿಗೆ ಒಂದು ತಾಯತವನ್ನುಕಟ್ಟಿಕೊಳ್ಳಲೋ, ಯಾವುದೋ ಮಂತ್ರವನ್ನು ಪುನರುಚ್ಚಾರಣೆ ಮಾಡಲೋ ಅಥವಾ ಯಾವುದೋ ಒಂದು ದೇವಸ್ಥಾನಕ್ಕೆ ಹೋಗಿ ತಲೆ ಬೋಳಿಸಿಕೊಳ್ಳಲೋ, ನೂರು ತೆಂಗಿನಕಾಯಿ ಒಡೆಯಲೋ ಅಥವಾ ಉರುಳು ಸೇವೆಯನ್ನೂ ಮಾಡಲೋ  ಹೇಳಿದರೆ, ಅವರು ಹಾಗೆ ಮಾಡಿ ಅವರ ಕಷ್ಟ ಪರಿಹಾರವಾದಲ್ಲಿ, ಆ ವ್ಯಕ್ತಿಗೆ ಹಾಗೆ ಹೇಳಿದವರ ಮೇಲೆ ಆಚಲವಾದಂತ ವಿಶ್ವಾಸ ಮೂಡುತ್ತದೆ. ತನಗೆ ಸಿಕ್ಕ ಪರಿಹಾರವನ್ನು ತನ್ನ ಪರಿಚಯದ ಎಲ್ಲಾ ವ್ಯಕ್ತಿಗಳಿಗೂ ಹೇಳುತ್ತಾನೆ. ಮತ್ತ್ಯಾರಾದರೂ ಕಷ್ಟದಲ್ಲಿ ಇದ್ದರೆ, ಅವರಿಗೆ, ತನಗೆ ಪರಿಹಾರ ಸೂಚಿಸಿದವರ ಬಳಿಗೆ ಹೋಗಲು ಸೂಚಿಸುತ್ತಾನೆ ಅಥವಾ ಅವರನ್ನು ತಾನೇ ಕರೆದುಕೊಂಡು ಹೋಗುತ್ತಾನೆ. ಹೀಗೆ ಇವರು  ಅವರ ಬಳಿ ಮತ್ತು ಅವರು ಸೂಚಿಸಿದ ಹಾದಿಯಲ್ಲಿ , ಮತ್ತೆ ಬೇರೆಯವರು ಮತ್ತ್ಯಾರಲ್ಲಿಗೋ, ಇದು ಬೆಳೆಯುತ್ತಾ ಹೋಗುತ್ತದೆ. ಒಟ್ಟಾರೆ, ಅವರವರು ನಂಬಿದ ನಂಬಿಕೆಗಳಿಂದ ಅವರವರಿಗೆ ಸುಖ, ಶಾಂತಿ, ನೆಮ್ಮದಿ ಅಥವಾ ಸಂತೋಷ ಸಿಗುತ್ತದೆ ಎಂದಾದರೆ, ತಪ್ಪೇನು. ಮಾನವರು ಸಂತೋಷದಿಂದ, ಆನಂದದಿಂದ ಇರಲು ಇಷ್ಟಪಡುತ್ತಾರೆ. ಅವರಿಗೆ ತಮ್ಮ ನಂಬಿಕೆಯಿಂದ ಅದು ಸಿಗುವುದಾದರೆ ತಪ್ಪೇನು? ನಂಬಿಕೊಳ್ಳಲಿ ಬಿಡಿ.


ಆದರೆ ಈ ಮೂಡ ನಂಬಿಕೆಗಳನ್ನು ಹುಟ್ಟು ಹಾಕುವವರು ಸಮಾಜಘಾತಕರು. ಏಕೆಂದರೆ ಜನರ ಸಮಸ್ಯೆಗಳನ್ನೇ ಬಂಡವಾಳವಾಗಿಟ್ಟುಕೊಂಡು, ಜನಗಳ ಆತಂಕ- ಭಯಗಳನ್ನೇ ಬಂಡವಾಳವಾಗಿರಿಸಿಕೊಂಡು  ತಮ್ಮ ಬೇಳೆ ಬೇಯಿಸಿಕೊಳ್ಳುವ  ಡೋಂಗಿಗಳು ನಮ್ಮ ಸಮಾಜದಲ್ಲಿ ಬಹಳಷ್ಟು ಜನರಿದ್ದಾರೆ. ಇದು ದರೋಡೆ. ಇದರಿಂದ ಪಾರಾಗಲಾದರೂ ಜನಗಳು ಮೂಡನಂಬಿಕೆಗಳನ್ನು ಬಿಡಬೇಕು. ಇಂತಹವರನ್ನು ನಂಬಿ ಒಂದೇ ಸಮಸ್ಯಗೆ ಹತ್ತಾರು ಜನರಲ್ಲಿ ಹೋಗಿ, ಅವರುಗಳು ಹೇಳಿದನ್ನೆಲ್ಲ ಮಾಡಿ ಕೈ ಸುಟ್ಟುಕೊಂಡವರು ಎಷ್ಟುಜನ ಬೇಕು? ಮತ್ತೆ ಕೆಲವರು ಒಂದೇ ಸಮಸ್ಯೆಗೆ ಹಲವಾರು ಪರಿಹಾರಗಳ ಪ್ರಯೋಗ  ಮಾಡಿ ಸುಸ್ತಾಗಿ ಬೇಸತ್ತು, ಕಡೆಗೆ " ಅಯ್ಯೋ ನಮ್ಮ ಕರ್ಮವೇ ಹಾಗಿದೆ. ಏನು ಮಾಡುವುದು" ಎಂದು ಸಮಾಧಾನಪಟ್ಟುಕೊಳ್ಳುವವೇಳೆಗೆ, ಮಾನಸಿಕವಾಗಿ ಜರ್ಝಾರಿತರಾಗಿ, ಹಣವನ್ನೂ ಪೋಲು ಮಾಡಿ ಸುಸ್ತಾಗಿರುತ್ತಾರೆ.  


ಆದರೆ ಸಾವಿರಾರು  ಡೋಂಗಿಗಳು ಇರುವಲ್ಲಿ ಬೆರಳೆಣಿಕೆಯಷ್ಟು ಸತ್ಪುರುಷರೂ ಇದ್ದಾರೆ. ಕೇವಲ ಪರರ ದು:ಖಕ್ಕೆ  ಮಿಡಿಯುವ, ಇನ್ನೊಬ್ಬರ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಪರಿಹರಿಸಬೇಕೆನ್ನುವ ಸಧ್ಭುಧ್ಧಿ ಇರುವ ಜನರೂ ಇದ್ದಾರೆ. ಆದರೆ ಅವರು ಪ್ರಖ್ಯಾತರಾಗಿರುವುದಿಲ್ಲ, ಏಕೆಂದರೆ ಅವರಲ್ಲಿ ಸತ್ಯದ ಬಲವಿರುತ್ತದೆ.ಸೋಗು ಇರುವುದಿಲ್ಲ. ಜನರನ್ನು ಮೋಸಮಾಡಿ ಹಣ ಮಾಡುವ ಅತ್ಯಾಸೆ ಇರುವುದಿಲ್ಲ.  ಅವರು ಹೇಳುವ ಪರಿಹಾರದ ಬಗ್ಗೆ ಯಾರೂ ಚಕಾರವೆತ್ತದೆ ಪಾಲಿಸಿದರೂ ಆ ರೀತಿಯ ಪರಿಹಾರಗಳು ಸತ್ಯದ ಮೇಲೆ ಅಧಾರವಾಗಿರುತ್ತದಾದ್ದರಿಂದ ಮತ್ತು ಆ ಸತ್ಯದ ಒಳಗುಟ್ಟು ಹೇಳಿದರೂ ಸಾಮ್ಮನ್ಯರಿಗೆ ಅರಿವಾಗುವಿದಿಲ್ಲವಾದ್ದರಿಂದ , ಅವರು ಪ್ರಖ್ಯಾತರಾಗುವುದಿಲ್ಲ. ಆದರೆ ಅವರು ಸೂಚಿಸುವ ಪರಿಹಾರವನ್ನು ಕಾರಣ ಕೇಳದೆ ಮೌಡ್ಯದಿಂದಾದರೂ ನಂಬುವುದೇ ಲೇಸು.


ಮೂಡ ನಂಬಿಕೆಗಳನ್ನು ಸಂಪೂರ್ಣವಾಗಿ ಬಿಡುವುದು ಒಳ್ಳೆಯದೇ? ಹೌದು. ಆದರೆ ಮೇಲೆ ಹೇಳಿದಂತೆ ವಿಚಾರ ಬೆಳೆಸಿಕೊಂಡರೆ, ಸತ್ಯದ ಅರಿವಾಗಿ ಮೌಡ್ಯ ಬಿಟ್ಟು ಮೂಡ ನಂಬಿಕೆಗಳನ್ನು ಬಿಡಬಹುದು. ವಿಚಾರ ಬೆಳೆಸಿಕೊಳ್ಳಲು ಮೇಲೆ ಹೇಳಿದಂತೆ ಜಿಜ್ಞಾಸೆ, ವಿಚಾರ ವಿನಿಮಯ ಮತ್ತು ಸತ್ಯವನ್ನು ಅರಿಯುವ ತವಕ ಬೇಕು. ಪ್ರತಿ ವ್ಯಕ್ತಿಗೂ ಸತ್ಯದ ಅರಿವಾದಾಗ ಯಾವುದೇ ಅಚಾರವನ್ನು ವಿಚಾರದ ಒರೆಗಲ್ಲಿಗೆ ತಿಕ್ಕಿದರೆ  ಮರ್ಮದ ಅರಿವಾಗಿ  ಮೌಡ್ಯವನ್ನು ತೊರೆದು ಮೂಡ ನಂಬಿಕೆಗಳ ಸ್ಥಾನವನ್ನು ಶುಧ್ಧ ನಂಬಿಕೆಗಳು ಆಕ್ರಮಿಸುತ್ತವೆ. ಇದು ಒಳ್ಳೆಯ ಬೆಳವಣಿಗೆ ಮತ್ತು ಇಂದು ಸಮಾಜದಲ್ಲಿ ಹೆಚ್ಚಾಗಿರುವ ಡೋಂಗಿ ಬಾಬಾಗಳ, ಕಳ್ಳಸ್ವಾಮಿಗಳ ಕಧೀಮ ಸನ್ಯಾಸಿಗಳ ಆಟಾಟೋಪ ಮತ್ತು ಸಮಾಜದಲ್ಲಿ ಅವರು ಕೊಡುವ ಕಿರುಕುಳ ಮತ್ತು ಮಾಡುವ ಕಳ್ಳಾಟಕ್ಕೆ ತಕ್ಕ ಉತ್ತರವಾಗುತ್ತದೆ.


ರವಿ ತಿರುಮಲೈ


ಬೆಂಗಳೂರು


9632246255

3 comments:

  1. ಬಹಳ ಉತ್ತಮವಾದ ಲೇಖನ ಸರ್ ..


    ಸತ್ಯದ ಅರಿವಿಲ್ಲದೆ ನಂಬಿಕೆಗಳನ್ನು ಬೆಳೆಸಿಕೊಳ್ಳುವುದು ಮೂಡ ನಂಬಿಕೆ.
    ಆದರೆ ಸತ್ಯದ ಅರಿವು ಆಗಬೇಕಾದರೆ ವಿಚಾರ ಬೆಳೆಯ ಬೇಕು. ವಿಚಾರ ಬೆಳೆಯಲು ಜಿಜ್ಞಾಸೆ ಬೆಳೆಯ ಬೇಕು.
    ವಿಧ್ಯೆಯಿಂದಲೇ ವಿಚಾರ ಬೆಳೆಯಬೇಕು.ವಿಚಾರವೆಂದರೆ, ನಮ್ಮ ಗಮನಕ್ಕೆ ಬಂದ ವಿಷಯವನ್ನು ಸತ್ಯದ ಒರೆಗೆ ಹಚ್ಚಿ ತಿಕ್ಕಿ ವಿಷಯದ ದಿರುವ ತತ್ವವನ್ನು ಮತ್ತು ಸತ್ಯವನ್ನು . ವಿಚಾರ ಬೆಳೆದರೆ ಮೌಡ್ಯ ತೊಲಗುತ್ತದೆ. ಮೌಡ್ಯ ತೊಲಗಿದರೆ ಮೂಡ ನಂಬಿಕೆಯೂ ತೊಲಗುತ್ತದೆ.


    ಈ ಸಾಲುಗಳು ನನಗೆ ತುಂಬಾ ಇಷ್ಟವಾದವು..

    ReplyDelete
  2. ಮೂಢನಂಬಿಕೆಗಳು ಕುರಿತು ಉತ್ತಮ ವಿಶ್ಲೇಷಣೆ ಉತ್ತಮವಾಗಿ ಮೂಡಿಬಂದಿದೆ.

    ReplyDelete
  3. ಮೂಢ ನಂಬಿಕೆ ಎಂದರೆ ಏನು? ಮೌಡ್ಯದಿಂದ ಕೂಡಿದ ನಂಬಿಕೆ. ಅಂದರೆ ಸತ್ಯದ ಅರಿವಿಲ್ಲದೆ ಒಂದು ವಿಷಯವನ್ನೋ ಅಥವಾ ವಸ್ತುವನ್ನೋ ಅಥವಾ ವ್ಯಕ್ತಿಯನ್ನೋ ನಂಬುವುದು ಮೂಡ ನಂಬಿಕೆ. ಮೂಢ ನಂಬಿಕೆಯ ವಿಷಯದಲ್ಲಿ ಈ ವಿವವರಣೆ ಬಹಳ ಒಳ್ಳೆಯ ವಿವವರಣೆಯಾಗಿದೆ.

    ReplyDelete