Tuesday 13 December 2011

ಎತ್ತ ಪೋದನೋ ಶ್ಯಾಮ


ಗೋಪಿಕಾ ಸ್ತ್ರೀಯರು ಮತ್ತು ಕೃಷ್ಣನಿಗೆ ಇದ್ದ ಮಧುರವಾದ ಮತ್ತು ಒಂದು ದೈವೀಕವಾದ ಸಂಬಂಧ ನಮ್ಮ ಮಹಾಭಾರತ -ಭಾಗವತದಲ್ಲಿ ಹೇರಳವಾಗಿ ಸಿಗುತ್ತದೆ. ಆಕಾಶದಿಂದ ಬಿದ್ದ ಒಂದೊಂದು ಮಳೆ ಹನಿಯು ಮತ್ತೆ ತನ್ನ ಗಮ್ಯವಾದ ಸಾಗರವನ್ನು ಸೇರಲು ಹಾತೊರೆಯುವ ಹಾಗೆ ಗೋಪಿಕಾ ಸ್ತ್ರೀಯರು ಸದಾ ಕೃಷ್ಣನ ಸಂಗದಲ್ಲಿ ಇರಲು ಇಚ್ಚಿಸುತ್ತಿದ್ದರು. ಸ್ವಲ್ಪ ಸಮಯ ಕಣ್ಣಿಗೆ ಕಾಣದೆ ಹೋದರು ಪರಿತಪಿಸುತ್ತಿದ್ದರು. ಹಾಗೆ ಪರಿತಪಿಸುವ ಒಬ್ಬ ಗೋಪಿಯ ಭಾವ ಹೀಗಿರಬಹುದೇ. 

ಎತ್ತ ಪೋದನೋ ಶ್ಯಾಮ 
ಇಲ್ಲೇ ಎಲ್ಲೋ ಕಂಡೆನಲ್ಲೇ " ಎತ್ತ" 

ಅನುಜೆ ಕೃಷ್ಣೆ ಇವನ ಕರೆಯೆ
ಒದಗಲೆಂದೇ ಪೋದನೋ 
ಓರಗೆಯ ತುಡುಗರೊಡನೆ 
ಹುಡುಗಾಟಕೆ ಪೋದನೋ "ಎತ್ತ" 

ಗುರು ತನುಜನ ಸೆರೆಯಲಿಂದ 
ಬಿಡಿಸಲೆಂದೇ ಪೋದನೋ 
ಕೌರವಾಗ್ರಜನ ಸೊಕ್ಕ 
ಮುರಿಯಲೆಂದೇ ಪೋದನೋ "ಎತ್ತ" 

ಅಕ್ಕ ಪಕ್ಕದ ಮನೆಗಳಲ್ಲಿ 
ನವನೀತವ ಚೋರಿಸಲೋ 
ಚದುರಿಹೋದ ಯಾದವರಾ 
ಒಂದುಗೂಡಿ ಸೇರಿಸಲೋ "ಎತ್ತ"

ಲುಪ್ತವಾದ ಧರ್ಮ ಪಥವ 
ಮತ್ತೆ ಹಿಡಿದು ನಿಲ್ಲಿಸಲೋ 
ಆರ್ತಜನರ ಮೊರೆಯ ಕೇಳಿ 
ಕರುಣೆಯಿಂದ ಪಾಲಿಸಲೋ " ಎತ್ತ" 

ಈ ಮೇಲಿನ ಹಾಡನ್ನು ಉತ್ತರಾದಿ ಶೈಲಿಯಲ್ಲಿ ರಾಗ "ದುರ್ಗಾ" ದಲ್ಲಿ ಹಾಡಿದರೆ ಮೂಲ ಭಾವ ವ್ಯಕ್ತವಾಗುತ್ತದೆ.

1 comment:

  1. ಎತ್ತ ಪೋದನೋ ಮಾಧವ
    ಎತ್ತ ಪೋದನೋ
    ಮತ್ತ ರಾಧೆ ಕಾಯುತಿಹಳು
    ಚಿತ್ತದಲ್ಲಿ ಅವನ ನೆನೆದು..

    ನಿಮ್ಮ ಹಾಡು ಬಹಳ ಸುಂದರವಾಗಿದೆ ಸರ್ :)))

    ReplyDelete