Monday 27 August 2012

ಸಂಸಾರ



ತಾಯಿ, ನೇರ ಕರುಳಬಳ್ಳಿಯ ನಂಟು.
ತಂದೆ, ಇವನೆಂಬ ನಂಬಿಕೆಯು ಉಂಟು 
ಒದರುವಳು ತಾಯಿ ತನ್ನನಿಸಿಕೆಯನೆಲ್ಲ 
ಒಳಗೊಳಗದುಮಿಡುವ ತಂದೆ ಭಾವಗಳನ್ನೆಲ್ಲ 

ಪ್ರೀತಿ ಹೆಚ್ಚು ಯಾರದ್ದೆಂದು ಹೇಳುವುದು ಹೇಗೆ 
ಸಮನಾಗಿ ತೋರುವುದು, ಜಗದ ಪರಿ ಹೀಗೆ. 
ತಾಯಲ್ಲಿ ಮನಬಿಚ್ಚಿ ಆಡುವರು ಮಾತ
ನೆತ್ತರಿನ ಬಂಧವದು ಸಂಕೋಚವಿಲ್ಲೆನುತ

ತಾಯೆ ಆಶಯ ಜಗದೊಳಗೆ ಒಂದೇ
ಸಕಲವೂ ಸಮನಾಗಿ ಇರಬೇಕು ಎಂದೇ
ತಂದೆ ಪೂರಕ ಪ್ರತ್ಯಕ್ಷ ಪಾತ್ರ ರಹಿತ
ಅರ್ಥವಾಗುವುದವಗೆ ಸಂಸಾರದ ಹಿತ

ಮಿತವಾದ ಹಿತವಾದ ಕಾರ್ಯಪರಿಯವನದು
ಕೆದಕಿ ಬೆದಕದಿದ್ದರೆ ನೆಮ್ಮದಿಯವಳಿಗಿರದು
ಇವನೊಂದು ಪರಿಯಾದರವಳೊಂದು ಪರಿ
ಯಾರು ಹೇಗಾದರೇನು ಬಾಳು ತೂಗಿದರೆ ಸರಿ.








ರವಿ ತಿರುಮಲೈ