Saturday 1 September 2012

ಬಂಜೆ



ನಾ ಹೆರ್ಲಿಲ್ಲಾಂತ 
ಗೊಣಗ್ಲಿಲ್ಲ ಅವ್ನೆಂದೂ
ಮೂಗ್ಮುರಿಯೋ ಜನ
ಚಿಂತಿಲ್ಲ ಅವ್ನೀಗೆ

ಅವ್ನಿಗೆ ನಂದೇ ಚಿಂತೆ
"ನೀ ಚೆಂದಾಕಿರು ಚಿನ್ನ"
ದಿವ್ಸಕ್ಕೊಂದು ಹತ್ಕಿತ
ಹೇಳ್ದಿದ್ರೆ ಅರ್ಗಕಿಲ್ಲ ತಿನ್ದನ್ನ

ನನ್ಗಂತೂ ಒಳ್ಗೊಳ್ಗೆ ಬೇಸ್ರ
ವಂಸಕ್ಕೆ ಒಬ್ಬ ಮಗಾ ಬೇಕಂತ
ಮನ್ಸಾಗೆ ಬಂದಾಗೆಲ್ಲ ಕಣ್ಕಪ್ಪಾಗಿ
ದಡದಡಡ್ನೆ ಸುರೀತಿತ್ತು ಕಣ್ಣೀರ್

ಹಂಗೂ ಹಿಂಗೂ
ಹತ್ತು ವರ್ಸ ಕಳದಾಯ್ತು,
ಬಂಜೆ ಅಂತ ಬೇರೆ
ನಂಗೆ ಹೆಸ್ರಾಯ್ತು

ಬಸ್ರು ಕಟ್ದೆ ಇದ್ರೂ
ಹೆಸ್ರು ಮಾತ್ರ ಸಂತಾನಲಕ್ಷ್ಮಿ
ಸಾಕವ್ವಾಂತ ಹೆಸ್ರಿಟ್ಕೊಂಡರೂ
ಪಕದ್ಮನಿಯಾಕಿ ಹೆತ್ತವ್ಳಾರು

ಮುಪ್ಪಾತು, ಮಕ್ಳಿಲ್ಲಾಂತ
ಕೊರ್ಗ್ಹೆಚ್ಚಾತು, ಜೀವ್ನ ಸಾಕಾಯ್ತು
ನಾವಿಬ್ರೂ ಹೆಂಗೋ ಒಂದಂಗೆ
ನಿಟ್ಟುಸ್ರುಬಿಟ್ಕೊಂಡು ದಿವ್ಸ ದೂಡಾಯ್ತು,

ಪಟ್ಣಸೇರಿದ್ ಸಾಕವ್ವನ್ ಆರೂ ಮಕ್ಳು
ಬಂದವ್ರೆ ಅಂತ ಅವ್ರ ಮನೆ ಕುಟ್ಟೆ ಹೋದ್ರೆ
ಕಂಡದ್ದೇನುನಾ! ಯವ್ವ! ಎಲ್ಲ ಸೇರ್ಕೊಂಡು
ಅವ್ವನ್ ನೋಡ್ಕೊಳೋಕ್ ಆಗಾಕಿಲ್ಲ ಅಂತ

ವೃದ್ಧಾಶ್ರಮಕ್ ಸೇರಿಸ್ತೀವಿ ನಮ್ಮವ್ವನ್
ಅಂದಾಗ ಎದೀ ಧಕ್ ಅಂತು, ಅಯ್ಯೋ
ನಾ ಹೆತ್ತಿದ್ರೂ ಇದೆ ಗತೀ ಆಗ್ತಿತ್ತೋ ಏನೋ
ಅಂತ, ಬಾಯ್ಮುಚ್ಗೊಂಡು, ಮನೀಗ್ ಬಂದೆ.

"ಮಕ್ಲಿಲ್ದಿದ್ರೆ ಏನಾತು ಬಾಳೈತಲ್ಲ," ಅಂತ
ನಮ್ಮೆಜಮಾನ ಹೇಳಿದ್ ಮಾತ್ ನೆಪ್ಪಾಯ್ತು
'ಮಕ್ಳಿಲ್ದಿದ್ರೆ ಏನು ದುಃಖವಂತೂ ಇಲ್ವಲ್ಲ' ಅಂತ
ಮನೀಗ್ಬಂದ್ ಕುಂತಾಗ, ಮನ್ಸಿಗ್ ನಿರಾಳಾಯ್ತು

ರವಿ ತಿರುಮಲೈ

ಮರೆತ ಮದುವೆಯ ದಿನ

ಇಂದಾಯ್ತು ವರುಷ ಇಪ್ಪತ್ತೆಂಟು 
ಬಿದ್ದು ನನಗೆ ವೈವಾಹಿಕ ಗಂಟು 
"ಮರೆತೆಯಲ್ಲ ನೀ ಅದನು" ಎಂದು 
ಹೆಂಡತಿ ತೆಗೆದಳು ಸಕತ್ತಾಗಿ ಬೆಂಡು 

ತಪ್ಪಾಯ್ತು ಮಾರಾಯ್ತಿ ಮನ್ನಿಸೆನ್ನೆಂದು 
ಗೋಗರೆದು ಕೈಮುಗಿದು ಬೇಡಿದರು ಇಂದು 
ಗಂಟು ಕಟ್ಟಿದ ಮುಖ ತಿಳಿಯಾಗಲಿಲ್ಲಿನ್ನು 
ಪೂಸಿಹೊಡೆಯುವ ಪರಿ ಅರಿಯದಾದೆನಿನ್ನು 

ಹಿಂದೆಲ್ಲ ಮಕ್ಕಳ ಮಧ್ಯಸ್ಥಿಕೆಯೊಂದಿತ್ತು 
ಸ್ವಲ್ಪ ಸಮಯದ ನಂತರ ಸರಿಹೋಗುತ್ತಿತ್ತು 
ಮಗನೊಬ್ಬ ಗಡಿದಾಟಿ ಹೋಗಿರುವನು ಹಾರಿ 
ಮಗಳಂತೂ ಸೇರಿದಳು ಮೈಸೂರ ರೈಲನೇರಿ

ಉಂಟು ನನಗವಳು ಅವಳಿಗೆ ನಾನು 
ಸರಿಮಾಡಬೇಕು ಸ್ಥಿತಿ, ಏನಾದರೇನು 
ಬಿಗಿತವನು ಸಡಿಲಿಸಲು ಉಪಾಯವೇನು 
ಶರಣೆನ್ನದೆ ಕಾಣೆ ಬೇರೆ ದಾರಿಯೇನು. 

ಸಹೃದಯ ಮಿತ್ರರೇ ಶುಭವೆನಗೆ ಕೋರಿರಿ
ನಮ್ಮಿಬ್ಬರ ಬಾಳ್ವೆ ಹಸನಾಗಲೆಂದು 
ಶೇಷ ಜೀವನವೆಲ್ಲ ನಸು ನಗಲಿ ಎಂದು 
ಕಡೆಯ ತನಕ ನಾವು ಹಾಗೆ ಇರಲೆಂದು. 

ರವಿ ತಿರುಮಲೈ