Sunday 19 June 2016

ಹೀಗೂ ಕೆಲವರು ಇದ್ದರು


ಚಿಂತಾಮಣಿಯಲ್ಲಿ ತಹಸೀಲ್ದಾರ್ ಆಗಿದ್ದ ಶ್ರೀನಿವಾಸ ಐಯ್ಯಂಗಾರ್ ಬಹಳ ಶಿಸ್ತಿನ ಮನುಷ್ಯ. ಅದೇ ತಾನೇ ಮುಗಿದ ಎರಡನೇ ವಿಶ್ವ ಮಹಾಯುದ್ಧದ ಪರಿಣಾಮವಾಗಿ ಎಲ್ಲೆಲ್ಲೂ ಬಡತನ. ಗಾಯದ ಮೇಲೆ ಬರೆ ಎಳೆದಂತೆ 'ಬರ 'ದ ಭೀಕರ ಕರಿ ಛಾಯೆ. ಆ ಸಮಯದಲ್ಲಿ ಎಲ್ಲೆಲ್ಲೂ ಹಸಿವಿನ ಹಾಹಾಕಾರವನ್ನು ಹತ್ತಿಕ್ಕಲು ಬೀದಿಗೊಂದು 'ಗಂಜೀ ಕೇಂದ್ರ' ತೆರೆಯಲ್ಪಟ್ಟಿತ್ತು. ಸ್ಥಳೀಯ ತಹಸೀಲ್ದಾರರಿಗೆ ಎಲ್ಲ ಕಡೆಯೂ ಸಮರ್ಪಕವಾಗಿ ಗಂಜಿ ವಿತರಣೆಯಾಗುತ್ತಿದ್ದೆಯೇ ಎಂದು ನೋಡುವ ಉಸ್ತುವಾರಿ.

ಹೀಗಿರುವಾಗ ಒಂದು ದಿನ ಮುಂಜಾನೆ ೫ ಗಂಟೆಗೆ ಮನೆ ಬಿಟ್ಟು, ಕುದುರೆ ಹತ್ತಿ ಸುತ್ತಮುತ್ತಲ ಹಳ್ಳಿಗಳನ್ನು ಪರಿವೇಕ್ಷಿಸಲು ಹೊರಟರು.  ಎಲ್ಲೂ ಕೊರತೆಯಿಲ್ಲದಂತೆ ಗಂಜಿ ವಿತರಣೆಯಾಗುತ್ತಿದೆಯೇ ಎಂದು ವಿಚಾರಿಸಿ, ಸರಿ ಸುಮಾರು ೧೧ ಗಂಟೆಗೆ ಚಿಂತಾಮಣಿಗೆ ಬಂದು ಊರೆಲ್ಲ ಒಂದು ಗಸ್ತು ಹೊಡೆದು, ಮನೆಗೆ ಹಿಂತಿರುಗಿದರು. ಸ್ನಾನ ಸಂಧ್ಯಾವಂದನೆ ಮುಗಿಸಿ ದೇವರ ಪೂಜೆಯಾದ ನಂತರ ಊಟಕ್ಕೆ ಕುಳಿತಾಗ, ಎಲೆಯಲ್ಲಿ ಮಲ್ಲಿಗೆಯಂತೆ ಅರಳಿ ಕುಳಿತಿರುವ 'ನೆಲ್ಲೂರು ಸಣ್ಣ ' ಅಕ್ಕಿಯ ಅನ್ನದ ಗೋಪುರ ನೋಡಿದಾಕ್ಷಣ ಹೌಹಾರಿದರು.

" ಲಕ್ಷ್ಮೀ " ಎಂದು ತಮ್ಮ ಪತ್ನಿಯನ್ನು ಕರೆದರು. ಆ ಕರೆಗೆ ಹೆದರಿ ಹೌಹಾರಿ ಅಡುಗೆ ಮನೆಯಿಂದ ಓಡಿಬಂದ ಹೆಂಡತಿಯನ್ನು ಕುರಿತು " ಎಲ್ಲಿಯದು ಈ ಅಕ್ಕಿ" ಎಂದು ಗುಡುಗಿದರು. ತಡವರಿಸುವ ದನಿಯಲ್ಲಿ ಆಕೆ '' ಪೇಟೆ ಅಂಗಡಿ ರಂಗನಾಥ ಶೆಟ್ಟರು ೩ ಕೆ.ಜಿ ಅಕ್ಕಿ ಕಳುಹಿಸಿ ಕೊಟ್ಟಿದ್ದರು"ಎಂದ ಒಡನೆಯೇ ಶ್ರೀನಿವಾಸಚಾರ್ಯರು ಉತ್ತರಾಪೋಷಣ ತೆಗೆದುಕೊಂಡು '' ಈ ಅನ್ನವನ್ನು ಮತ್ತು ಅವರು ಕಳುಹಿಸಿದ ಅಕ್ಕಿಯನ್ನು ಅವರ ಮನೆಗೆ ಕಳುಹಿಸಿಕೊಡು, ಇಷ್ಟವಾಗದಿದ್ದರೆ ನೀನೂ ಅವರ ಮನೆಗೇ ಹೋಗಿಬಿಡು. ಊರಲೆಲ್ಲಾ ಹಸಿವಿನಿಂದಿರುವವರು ಗಂಜಿ ಕುಡಿಯುತ್ತಿದ್ದರೆ,ಇಂತಹ ಅನ್ನ ನನ್ನ ಗಂಟಲಲ್ಲಿ ಇಳಿಯುವುದಿಲ್ಲ" ಎಂದು ಹೇಳಿ ಉತ್ತರೀಯವನ್ನು ಹೊದ್ದು ಹೊರಟೇ ಬಿಟ್ಟರಂತೆ. ನಿಸ್ವಾರ್ಥ ಸೇವಾ ಮನೋಭಾವದ ಇಂತಹ ಮಹನೀಯರು ಇಂದು ಎಲ್ಲಿದ್ದಾರೋ ?

ರವಿ ತಿರುಮಲೈ