Monday 30 January 2012

ಬೇಕೆನಗೆ ನಗುವೊಂದು

ನಮ್ಮ ಮನಗೆ ಬರುವ ಚಿಣ್ಣನ ಮೃದು ಮಂದಹಾಸ ಮೂಡಿಸಿದ ಭಾವ ನಿಮ್ಮ ಮುಂದೆ. 
 



ಕೊರಳ ಮುತ್ತಿನಾ ಹಾರದೊಳಿಹುದು
ಎರಡೆಳೆಯಲಿ ಪೋಣಿಸಿದಾ ಮುತ್ತು  
ಸಂತಸದಿ ನಗುವಿಂದು ತುಳುಕುತಿಹುದು 
ಹೆತ್ತವರಿಗಿದಲ್ಲದೆ ಮತ್ತೇನು ಸಂಪತ್ತು 

ಬಾಲ್ಯದಾ ಸುಂದರ ನಗು 
ಮುಗ್ದ ಮನದಾ ಸೊಬಗು 
ಕಪಟವರಿಯದಾ ನೋಟ 
ನೋಡಲದು  ರಸದೂಟ 

ಚಿಂತೆ ಎಂಥಹದಾದರೂ  
ದುಗಡ ದುಮ್ಮಾನವೇನಾದರೂ   
ನಿನ್ನ ಮೃದು ಮಂದಹಾಸದಲಿ  
ಮಾಯವಾಗದೆ ನಿಮಿಷಾರ್ದದಲಿ 


ಕಳೆದಿದೆ ನಗುವೆನ್ನ ಬದುಕ ಜಂಜಾಟದಲಿ
ನಗಲಾರೆನು ನಾ ಜಗದ ಹೋರಾಟದಲಿ  
ಒಮ್ಮೊಮ್ಮೆ ಯತ್ನವನ್ನು ಮಾಡಿಹೆನು ನಾನು 
ನಗಲಾರೆನೆಂದೆಂದು, ಸೋತಿಹೆನು ನಾನು  


ಪುಟ್ಟ ಹೇಳು ನಿನ್ನ ನಗುವಿನ  ಗುಟ್ಟು 
ಪಡೆಯಲದನು ಪಡೆಯಲೇ ನಾ ಮರುಹುಟ್ಟು 
ಅಂದಾದರೂ ನಾ ಹಾಗೆ ನಗ ಬಹುದೇ 
ಎಂದಾದರೂ ನಾ  ಮತ್ತೆ ಹೀಗೆ ನಗಬಹುದೇ.




ರವಿ ತಿರುಮಲೈ