Sunday, 25 December 2011

ಕ್ಷಮೆ-ಮಾನವನ ಶ್ರೇಷ್ಠ ಗುಣ

                                                                ಕ್ಷಮೆ-ಮಾನವನ ಶ್ರೇಷ್ಠ ಗುಣ 

ಕ್ಷಮೆಯೇ ಮಾನವನ ಶ್ರೇಷ್ಠ ಗುಣಗಳಲ್ಲೊಂದು. ಉತ್ಕೃಷ್ಟ ಬುಧ್ಧಿಮತ್ತೆಯ ಗುಣವಾದ ಕ್ಷಮಾಗುಣವೇ,ಅನ್ಯ ನಿಮ್ನ ಸ್ಥರದ ಪ್ರಾಣಿಗಳಿಂದ ಮಾನವನನ್ನು ಭಿನ್ನವಾಗಿಸುವುದು. 

ದೈವಭಕ್ತನ  ಅತಿಶಯ ಗುಣಗಳನ್ನು ವಿವರಿಸುವಾಗ, ಶ್ರೀ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ," ದೈವ ಭಕ್ತನು ಅಸೂಯೆ ಮತ್ತು ಅಹಂಕಾರರಹಿತನಾಗಿರಬೇಕು. ಅವನು ಎಲ್ಲ ಪ್ರಾಣಿಗಳಲ್ಲೂ ಕರುಣಾಪೂರಿತನಾಗಿರಬೇಕು. ಪರಮಾತ್ಮನಲ್ಲಿ ತನ್ನನ್ನೇ ತಾನು ಸಮರ್ಪಿತನಾಗಿರಬೇಕು, ಸುಖ ದುಃಖಗಳಲ್ಲಿ ಸಮಭಾವವುಳ್ಳವನಾಗಿರಬೇಕು ಮತ್ತು ತನಗೆ ತೊಂದರೆಯನ್ನು ಉಂಟುಮಾಡುವವನಲ್ಲಿಯೂ, ಕ್ಷಮಾಬುಧ್ಧಿಯುಳ್ಳವನಾಗಿರಬೇಕು." ಎಂದು. ಇದು ಮಾನವರಲ್ಲಿರುವ ಮತ್ತು ಇರಬೇಕಾದ ಕ್ಷಮಾಗುಣದ ಮಹತ್ವವನ್ನು ಸ್ಪಷ್ಟೀಕರಿಸುತ್ತದೆ. 

ಭಾರತೀಯ ಪರಂಪರೆಯಲ್ಲಿ ಮತ್ತು ಪುರಾಣದ ಗ್ರಂಥಗಳಲ್ಲಿ, ಅತಿ ಪ್ರಚೋದನಾತ್ಮಕ ಮತ್ತು ಅವಮಾನಕರ ಸನ್ನಿವೇಶಗಳಲ್ಲೂ ಕೋಪಕ್ಕೆ ಬಲಿಯಾಗದೆ, ಕ್ಷಮಾ ಗುಣವನ್ನೇ ಪ್ರದರ್ಶಿಸಿದ, ಅವತಾರಗಳ, ಸಂತರ, ಋಷಿಮುನಿಗಳ, ಸಾಧುಜನರ ಮತ್ತು ಭಗವದ್ಭಕ್ತರ, ದೃಷ್ಟಾಂತಗಳು ಹೇರಳವಾಗಿ ಲಭಿಸುತ್ತವೆ. ಎಲ್ಲರನ್ನು ಕಾಯುವ ಮತ್ತು ಎಲ್ಲರ ಹಿತರಕ್ಷಕನೂ ಆದ ಪರಮ ಪುರುಷನು ಕ್ಷಮಾಗುಣದ ಮೂರ್ತರೂಪವಲ್ಲದೆ ಮತ್ತೇನು? 

ಕೋಪಾವಿಷ್ಟನಾದ ಭೃಗು ಮಹರ್ಷಿಯು ಶ್ರೀಮನ್ನಾರಾಯಣನ ವಕ್ಷಸ್ಥಲವನ್ನು ಕಾಲಿನಿಂದ ಒದ್ದರೂ, ಅವನ ಹೆಜ್ಜೆ ಗುರುತನ್ನು ತನ್ನೆದೆಯಲ್ಲೇ ಕಾಯ್ದಿರಿಸಿಕೊಂಡು, ಅವನನ್ನು ಕ್ಷಮಿಸಿದ ಕಥೆ ಪುರಾಣದಲ್ಲಿದೆ. 

ಮನವಾವತಾರದಲ್ಲಿ ಶ್ರೀರಾಮನಾದ, ಶ್ರೀಮನ್ನಾರಾಯಣನನ್ನು ತನ್ನ ವೈರಿಯೆಂದೆ ಪರಿಗಣಿಸಿ, ಸೀತೆಯನ್ನಪಹರಿಸುವಂತಹ ಘೋರ ಅಪರಾಧವನ್ನೇ ಮಾಡಿದರೂ ರಾವಣನನ್ನು ಕೊಂದಮೇಲೂ ಸಹ ಹುಟ್ಟು ಸಾವಿನ ಚಕ್ರದಿಂದ ಮುಕ್ತಗೊಳಿಸಿ ಅವನನ್ನು ಕ್ಷಮಿಸಲಿಲ್ಲವೇ,ಶ್ರೀರಾಮ?. ಅಷ್ಟೇ ಅಲ್ಲ ರಾವಣನಿಗೆ ಸಹಾಯಕರಾಗಿ ನಿಂತ  ತಾಟಕಾ,ವಿರಾಧ,ಖರದೂಷಣ, ಮಾರೀಚ ಮತ್ತು ಕು೦ಬಕರ್ಣರಂತಹ ರಾಕ್ಷಸರನ್ನು ಮುಕ್ತಿಯನ್ನಿತ್ತು ಕ್ಷಮಿಸಲಿಲ್ಲವೇ ರಾಮ? 

ಪೂರ್ಣಾವತಾರಿ ಶ್ರೀ ಕೃಷ್ಣ ಬಾಲ್ಯಾವಸ್ತೆಯಲ್ಲೇ, ತನ್ನನ್ನು ಕೊಲ್ಲಲು ಬಂದ ಪೂತನೆಯನ್ನು ಕೊಂದು, ಕ್ಷಮಿಸಿ ಮುಕ್ತಿ ನೀಡಲಿಲ್ಲವೇ? ಅದೇ ಕೃಷ್ಣಾವತಾರದಲ್ಲಿ, ಸ್ವಯಂ ದುರ್ಬುಧ್ಧಿಯಿಂದಲ್ಲದಿದ್ದರೂ, ಮಾತ್ರ ಕ೦ಸನಿ೦ದ ನಿರ್ದೇಶಿತರಾದ ವೃತ್ರಾಸುರ, ಬಕಾಸುರ, ಅಘಾಸುರ, ದೇನುಕಾಸುರ,ಕಾಲೀಯ, ಕುವಲಯಾಪೀಡ, ಚಾಣೂರ-ಮುಷ್ಟಿಕರಂತಹ ರಾಕ್ಷಸರನ್ನು ಕ್ಷಮಾಗುಣದಿಂದ ಕೊಂದು ಮುಕ್ತರನ್ನಾಗಿಸಲಿಲ್ಲವೇ? 

ಹೀಗೆ ಪರಮಾತ್ಮನು ತಾನೇ ಕ್ಷಮಾಗುಣವನ್ನು ಹಲವಾರು ಬಾರಿ, ನಾನಾ ಪ್ರಸಂಗಗಳಲ್ಲಿ, ಪ್ರದರ್ಶಿಸಿ, ಮಾನವರಿಗೆ ಅದನ್ನು ಅನುಕರಿಸುವಂತೆ ಮತ್ತು ಅನುಸರಿಸುವಂತೆಯೂ ಮಾರ್ಗದರ್ಶನಮಾಡಿದ್ದಾನೆ. ಹಲವಾರು ಋಷಿ ಮುನಿಗಳು, ಸಾಧು ಸಂತರು ಮತ್ತು ಭಗವದ್ಭಕ್ತರೂ ಸಹ ಪರಮಾತ್ಮನ ಈ ಸದ್ಗುಣವನ್ನು ರೂಡಿಸಿಕೊಂಡು ತಮ್ಮ ಜೀವನದಲ್ಲೂ ಪ್ರದರ್ಶಿಸಿದ್ದಾರೆ.  

ವಿಶ್ವಾಮಿತ್ರ - ವಸಿಷ್ಠರ ವೃತ್ತಾಂತವನ್ನೇ ತೆಗೆದುಕೊಳ್ಳೋಣ. ಅಯೋಧ್ಯೆಯ ರಾಜನಾದ ಕೌಶಿಕನು ಅಕಸ್ಮಾತ್ತಾಗಿ ವಸಿಷ್ಠನ ಆಶ್ರಮಕ್ಕೆ ಭೇಟಿನೀಡಿದಾಗ ಕಂಡ ನಂದಿನಿ ಎಂಬ ಕಾಮಧೇನುವನ್ನು ತನ್ನದಾಗಿಸಿ ಕೊಳ್ಳಬೇಕೆಂಬ ಅತ್ಯಾಕಾಂಕ್ಷೆಯಿಂದ ಮೊದಲುಗೊಂಡು, ಆ ಪ್ರಯತ್ನದಲ್ಲಿ ಸೋತು, ವಸಿಷ್ಠನಿಗೆ ಕೊಟ್ಟಂತಹ ತೊಂದರೆಗಳಿಗೇನು ಲೆಕ್ಕಉಂಟೆ. ಅವನ ಮಕ್ಕಳನ್ನೆಲ್ಲ ಕೊಂದು ಅವನ ಆಶ್ರಮವನ್ನು ದ್ವಂಸ ಮಾಡಿದರೂ, ವಸಿಷ್ಠ ಶಾಂತನಾಗಿ ಎಲ್ಲವನ್ನೂ ಸಹಿಸಿಕೊಂಡು ಅವನನ್ನು ಕ್ಷಮಿಸಿಲಿಲ್ಲವೇ. ಒಂದು ಹುಣ್ಣಿಮೆಯ ರಾತ್ರಿ ಹೇಗಾದರೂ ವಸಿಷ್ಠನನ್ನು ಕೊಲ್ಲಬೇಕೆಂದು ಆಶ್ರಮದ ಹಿಂದಿನ ಪೊದರುಗಳಲ್ಲಿ ಕಾದು ಕುಳಿತ ವಿಶ್ವಾಮಿತ್ರನ ಉದ್ದ್ಯೇಷವನ್ನರಿತ ವಸಿಷ್ಠನು ತನ್ನ ಪತ್ನಿ ಅರುಂದತಿಗೆ
"ಈ ಹುಣ್ಣಿಮೆಯ ಬೆಳಕು ಎಲ್ಲ ಕಡೆ ಪಸರಿಸಿರುವಂತೆ ವಿಶ್ವಾಮಿತ್ರನ ತಪಸ್ಸಿನ ಕಾಂತಿಯೂ ಎಲ್ಲ ಕಡೆ ಹರಡಲಿದೆ" ಎಂದು ಹೇಳುತ್ತಾನೆ. ಅದನ್ನಾಲಿಸಿದ ವಿಶ್ವಾಮಿತ್ರನಿಗೆ ತನ್ನ ಅಲ್ಪತನದ ಅರಿವಾಗಿ ಹೊರಬಂದು ವಸಿಷ್ಠನ ಕಾಲಿಗೆರಗಿ,ಕ್ಷಮಾಯಾಚನೆ ಮಾಡಿದನಂತೆ. ತನಗೆಷ್ಟು ತೊ೦ದರೆ  ಕೊಟ್ಟರೂ ಅವನನ್ನು ಮನ್ನಿಸಿ ಅವನಿಗೆ ಆತ್ಮೋಧ್ಧಾರದ ಮಾರ್ಗವನ್ನು ತೋರಿಸಿ ಕ್ಷಮಿಸಿದ ವೃತ್ತಾಂತ ಕ್ಷಮಾಗುಣದ ಔನ್ನತ್ಯವನ್ನು ಎತ್ತಿ ತೋರಿಸುತ್ತದೆ.    

ಭಕ್ತ ಪ್ರಹ್ಲಾದನನ್ನು ಅವನ ತಂದೆ ಹಿರಣ್ಯಕಶಿಪು ಕೊಲ್ಲಲು ಕಳುಹಿಸಿದ, ಶಾಂದ ಮತ್ತು ಅಮರ್ಕರೆಂಬ ದಾನವ ಪೂಜಾರಿಗಳು ರಾಕ್ಷಸ ರೂಪದಲ್ಲಿ ಪ್ರಹ್ಲಾದನನ್ನು ಕೊಲ್ಲಲು ಬಂದಾಗ ಹರಿನಾಮ ಸ್ಮರಣಾನಿರತನಾದ ಪ್ರಹ್ಲಾದನನ್ನು ಕಾಪಾಡಲು ಶ್ರೀ ಹರಿಯ ಚಕ್ರ ಬಂದು ಆ ಇಬ್ಬರು ರಾಕ್ಷಸರನ್ನೂ ತುಂಡರಿಸಿತಂತೆ. ಆಗ ಕರುಣಾ ಪೂರಿತನಾದ ಪ್ರಹ್ಲಾದನು ಶ್ರೀ ಹರಿಯನ್ನು ಕುರಿತು " ಹೇ ಪ್ರಭು, ನನ್ನನ್ನು ಕೊಲ್ಲಬಂದವರಲ್ಲಿ ನನಗೆ ದ್ವೇಷವಿಲ್ಲದಿದ್ದಲ್ಲಿ, ನನ್ನನ್ನು ನಾಶಮಾಡಬಂದ ರಾಕ್ಷರು, ಹಾವುಗಳು, ಆನೆಗಳು, ಸಿಂಹಗಳು ಇವೆಲ್ಲವುಗಳಲ್ಲಿ ನಾನು ನಿರಂತರ ನಿನ್ನನ್ನೇ ಕಂಡಿದ್ದೆನಾದರೆ, ಕರುಣೆಯಿಂದ ಈ ಇಬ್ಬರಿಗೂ ಜೀವದಾನಮಾಡು"  ಎಂದು ಬೇಡಿದಾಗ, ಅವರಿಬ್ಬರೂ ತತ್ಕ್ಷಣ   ಜೀವಂತರಾಗಿಬಿಟ್ಟರಂತೆ. ಕ್ಷಮಾಗುಣದ ಪ್ರತೀಕವೇ ಪ್ರಹ್ಲಾದನೆಂದರೆ ತಪ್ಪಾಗಲಾರದು.  

ರಾಜ ಅಂಬರೀಶನು ಮಹಾನ್ ಭಕ್ತನಾದುದರಿಂದ ಶ್ರೀಮನ್ನಾರಾಯಣನು ತನ್ನ ಸುದರ್ಶನವನ್ನು ಅವನ ರಾಜ್ಯದ ಸಂರಕ್ಷಣೆಗೆ ನಿಯೋಜಿಸಿದ್ದನಂತೆ. ಏಕಾದಶಿಯಂದು ಉಪವಾಸವಿದ್ದು ಮರುದಿನ ಆಹಾರ ಸೇವಿಸುತ್ತಿದ್ದನಂತೆ. ಹೀಗೆ ಒಂದು ಬಾರಿ ದ್ವಾದಶಿಯ ದಿನ ಇನ್ನೇನು ಆಹಾರ ತೆಗೆದುಕೊಳ್ಳುವ ಸಮಯಕ್ಕೆ, ಅಲ್ಲಿಗೆ ದೂರ್ವಾಸ ಮಹಾ ಮುನಿ ಆಗಮಿಸಿದನಂತೆ. ತನ್ನೊಡನೆ ಆಹಾರ ಸ್ವೀಕರಿಸಲು ಆಹ್ವಾನಿಸಿದಾಗ, ಆ ಮುನಿ" ಸ್ನಾನಮಾಡಿ ಬರುತ್ತೇನೆ " ಎಂದು ಹೇಳಿ ಹೊರಟುಹೋದನಂತೆ. ಆಹಾರ ಸ್ವೀಕರಿಸುವ ಸಮಯ ಮೀರಲಿದ್ದಾಗ, ದೂರ್ವಾಸ ಆಗಮಿಸುವ ಸುಳಿವಿಲ್ಲದಾಗ "ಇನ್ನೂ ಈ ಮುನಿ ಬರಲಿಲ್ಲವೇ! ಧೀರ್ಘ ಧ್ಯಾನದಲ್ಲೇನಾದರೂ ಮುಳುಗಿದರೋ" ಎಂದು ಯೋಚಿಸಿ, ರಾಜ ಅಂಬರೀಶನು ತನ್ನ ಪುರೋಹಿತರನ್ನು ಸಂಪ್ರತಿಸಿ, ಅಲ್ಪಮಾತ್ರ ಗಂಗಾಜಲವನ್ನು ಸೇವಿಸಿದನಂತೆ. ಇದನ್ನರಿತ, ದೂರ್ವಾಸನು, ಕೋಪಾವಿಷ್ಟನಾಗಿ, ಕುಪಿತಗೊಂಡು, ಅಂಬರೀಷನನ್ನು ಕೊಲ್ಲಲು ಒಬ್ಬ ದೈತ್ಯನನ್ನು ಸೃಷ್ಟಿಮಾಡಿದನಂತೆ. ಆ ದೈತ್ಯನು ಅಂಬರೀಷನನ್ನು ಕೊಲ್ಲಲುಪಕ್ರಮಿಸಿದಾಗ, ಶ್ರೀಮನ್ನಾರಾಯಣನ ಸುದರ್ಶನವು ಆ ದೈತ್ಯನನ್ನು ಕೊಂದು, ದೂರ್ವಾಸನನ್ನು ಬೆನ್ನಟ್ಟಿತಂತೆ. ಹೆದರಿ ಕಂಗಾಲಾದ ಆ ದೂರ್ವಾಸನು ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರನ್ನು ಮೊರೆ ಹೋಗಲು,ಅವರು ದೂರ್ವಾಸನಿಗೆ, ರಾಜ ಅಂಬರೀಶನನ್ನೇ ಮೊರೆಹೋಗುವಂತೆ ಆದೇಶಿಸಲು,ದೂರ್ವಾಸನು ಅಂಬರೀಷನನ್ನು  ಆಶ್ರಯಿಸಲು, ಅವನು ಸುದರ್ಶನನನ್ನು ಶಾಂತವಾಗಲು ಬೇಡಿ, ತನ್ನನ್ನೇ ನಾಶಮಾಡಲುಪಕ್ರಮಿಸಿದ ದೂರ್ವಾಸನನ್ನು ಕ್ಷಮಿಸಿ ಕಾಪಾಡಿದನೆಂದು, ಪುರಾಣಗಳು ಹೇಳುತ್ತವೆ. ಅಂಥಹ ಮಹನೀಯರ ಕ್ಷಮಾಗುಣವು, ಅನುಕರಣೀಯವಲ್ಲವೇ? 

ಗೋದಾವರಿ ನದಿಯಲ್ಲಿ ನಿತ್ಯ ಸ್ನಾನ ಮಾಡುವುದು  "ಸಂತ ಏಕನಾಥ"ನ ನಿತ್ಯದ ಪರಿಪಾಟ. ಅವನು ನದಿಗೆ ಹಾದು ಹೋಗುವ ದಾರಿಯಲ್ಲಿ ಒಬ್ಬ ಮುಸಲ್ಮಾನ ಗೃಹಸ್ಥನ ಮನೆಯಿತ್ತು. ಆ  ಹಾದಿಯಲ್ಲಿ  ಹೋಗುವ ಹಿಂದುಗಳನ್ನು ಕುಚೇಷ್ಟೆ ಮಾಡುವುದು ಅವನಿಗೊಂದು ಮೋಜಿನ ವಿಷಯ. ಏಕನಾಥ ಪ್ರತಿನಿತ್ಯ ನದೀ ಸ್ನಾನ ಮುಗಿಸಿ ಹಿಂತಿರುಗುವಾಗ,  ಅವನು ಬಾಯಿ ಮುಕ್ಕಳಿಸಿ ಅವನ ಮೇಲೆ ಉಗಿಯುತ್ತಿದ್ದನಂತೆ. ತತ್ಕ್ಷಣ ಏಕನಾಥನು  ನದಿಗೆ ಹೋಗಿ ಮತ್ತೆ ಸ್ನಾನ ಮಾಡಿ ಬರುತ್ತಿದ್ದನಂತೆ. ಹಲವಾರು ದಿನ, ಇದು ನಾಲ್ಕೈದುಬಾರಿ ನಡೆಯುತ್ತಿತ್ತಂತೆ.ಆ ಮುಸಲ್ಮಾನನಿಗೋ ಎಲ್ಲಿಲ್ಲದ ಅಚ್ಚರಿ, "ತಾನು ಕೊಡುವ ಉಪಟಳವನ್ನು ಏಕನಾಥನು ಹೇಗೆ ಸಹಿಸಿಕೊಳ್ಳುತ್ತಾನೆ" ಎಂದು. ಒಂದು ದಿನ ಆ ಮುಸಲ್ಮಾನನು ಒಂದು 100 ಬಾರಿ ಹೀಗೆ ಏಕನಾಥನ ಮೇಲೆ ಉಗುಳಿದರೂ 100 ಬಾರಿಯೂ ಏಕನಾಥನು ನದೀಸ್ನಾನ ಮಾಡಿ ಬಂದನಂತೆ. ಏಕನಾಥನ  ಸಹನೆ, ಶಾಂತ ನಡವಳಿಕೆಗಳಿಂದ ಪರಿವರ್ತಿತನಾಗಿ  ಆ ಮುಸಲ್ಮಾನನು , ಏಕನಾಥನ ಕಾಲಿಗೆರಗಿ ಕ್ಷಮಿಸುವಂತೆ ಬೇಡಿದನಂತೆ. ತನ್ನ ಕಾಲಿಗೆರೆಗಿದ ಅವನನ್ನು ಕಂಡು " ಇದರಲ್ಲಿ ಕ್ಷಮಿಸುವಂಥಾದ್ದೇನಿದೆ? ನಿನ್ನ ಕೃಪೆಯಿಂದಲೇ ನನಗೆ ಇಂದು 108 ಬಾರಿ ಗೋದಾವರೀ ಸ್ನಾನ ಮಾಡುವ ಸುಯೋಗ ದೊರಕಿತು" ಎಂದು ಹೇಳಿ ಕ್ಷಮಾಗುಣದ ಉತ್ಕೃಷ್ಟ ರೂಪವನ್ನು ತೋರಿದನಂತೆ. 

ಕ್ರೈಸ್ತಮತವೂ ಸಹ ಕರುಣೆ ಮತ್ತು ಕ್ಷಮಾಗುಣಗಳಿಗೆ ಒತ್ತುನೀಡುತ್ತದೆ ಮತ್ತು ವೈರಿಗಳನ್ನೂ ಪ್ರೀತಿಸುವಂತೆ ಬೋಧಿಸುತ್ತದೆ. ಶಿಲುಬೆಯಮೇಲೆ ಏರಿದ ಕ್ರಿಸ್ತ " ಹೇ ದೇವರೇ ಇವರನ್ನು ಕ್ಷಮಿಸು. ಪಾಪ ಇವರಿಗೆ ತಾವೇನು ಮಾಡುತ್ತಿದ್ದೇವೆನ್ನುವುದರ ಅರಿವಿಲ್ಲ" ಎಂದು ತನ್ನನ್ನು ಘಾಸಿಗೊಳಿಸಿದವರನ್ನೂ, ಕ್ಷಮಿಸುವಂತೆ ಆ ದೇವರನ್ನು ಬೇಡಿ, ಉತ್ಕೃಷ್ಟ ಕ್ಷಮಾಗುಣದ ಮಾದರಿಯನ್ನು ಜಗಕ್ಕೆ ನೀಡಲಿಲ್ಲವೇ?      

ನವದ್ವೀಪದಲ್ಲಿ ಜೂಜಾಡುತ್ತಾ, ಕುಡಿದು ಮತ್ತರಾಗಿ, ಜನಗಳನ್ನು ಲೂಟಿಮಾಡುತ್ತಿದ್ದ, ಜಗಾಯ್ ಮತ್ತು ಮಘಾಯ್ ಎಂಬಿಬ್ಬರನ್ನು ಸ್ವಾಮೀ ಚೈತನ್ಯ ಮಹಾಪ್ರಭುವಿನ ಶಿಷ್ಯರಾದ ನಿತ್ಯಾನಂದ ಮತ್ತು ಹರಿದಾಸ ಎಂಬುವರು ಹರಿನಾಮಸ್ಮರಣೆಗೆ ಪ್ರೇರೇಪಿಸಿದಾಗ, ಅವರಿಬ್ಬರೂ ಹರಿದಾಸನ ತಲೆಗೆ ಹೊಡೆದು ಘಾಸಿ ಮಾಡಿದರಂತೆ. ವಿಷಯ ತಿಳಿದ ಚೈತನ್ಯ ಮಹಾಪ್ರಭು ಅವರಿಬ್ಬರನ್ನೂ ಶಿಕ್ಷಿಸಬೇಕೆಂದಿರುವಾಗ ಹರಿದಾಸನ  ಮನವಿಯಂತೆ ಅವರನ್ನು ಕ್ಷಮಿಸಿದಾಗ, ಅವರಲ್ಲಿ ಪರಿವರ್ತನೆಯಾಗಿ ತಮ್ಮ ದುರ್ಗುಣಗಳನ್ನು ಬಿಟ್ಟು ಹರಿ ಭಕ್ತರಾದರಂತೆ. 

ಈ ಹರಿದಾಸನು ಮೂಲತ: ಮುಸಲ್ಮಾನನಂತೆ. ಅದನ್ನರಿತ ಬಂಗಾಳವನ್ನು ಅಂದು ಆಳುತ್ತಿದ್ದ, ಖಲೀಫನಿಗೆ ಕೋಪ ಬಂದು ಅವನನ್ನು ಅರಮನೆಗೆ ಕರೆಸಿ" ಹರಿನಾಮ ಸ್ಮರಣೆಯನ್ನು ತೊರೆ" ಎಂದು ಆದೇಶಿಸಿದಾಗ ಹರಿದಾಸನು "ಒಲ್ಲೆ" ಎಂದನಂತೆ. ಹರಿನಾಮಸ್ಮರಣೆಯನ್ನು ತೊರೆಯಲು ನಿರಾಕರಿಸಿದ ಹರಿದಾಸನನ್ನು ಕೈ ಕಟ್ಟಿ ಚಾಟಿ ಏಟು ಹೊಡೆಯುತ್ತಾ ನಗರದ ಮುಖ್ಯ ಬೀದಿಗಳಲ್ಲಿ, ಮೆರವಣಿಗೆ ಮಾಡಿದರಂತೆ.ಖಲೀಫನ ಅಧಿಕಾರಿಗಳು ಹರಿದಾಸನನ್ನು"ಹರಿನಾಮ ಸ್ಮರಣೆ ಬಿಡುವೆಯೋ ಇಲ್ಲವೋ" ಎಂದು ಪ್ರತಿ ಬಾರಿ ಚಾಟಿಯಿಂದ ಹೊಡೆದಾಗಲೂ "ಮತ್ತೊಂದು ಬಾರಿ ಹರಿನಾಮಸ್ಮರಣೆಗೆ ಅವಕಾಶವಾಯಿತಲ್ಲಾ" ಎಂದು ಹರಿದಾಸ ಸಂತೋಷಪಡುತ್ತಿದ್ದನಂತೆ. ಹೊಡೆತ ತಿಂದು ತಿಂದು ಪ್ರಜ್ಞಾಹೀನ ಸ್ಥಿತಿಗೆ ತಲುಪಿದಾಗ, ಹರಿದಾಸನನ್ನು ಸತ್ತನೆಂದೆ ತಿಳಿದು, ನದೀ ತೀರಕ್ಕೆ ಒಯ್ದು ಬಿಸಾಡಿದರಂತೆ.ಆದರೆ ಜೀವಂತವಾಗಿದ್ದ ಹರಿದಾಸನು ಪ್ರಜ್ಞೆ ಮರುಕಳಿಸಿದ ತತ್ಕ್ಷಣ " ಹೇ ದೇವರೇ ಅರಿಯದ ಪ್ರಾಣಿಗಳಾದ ಆ ಖಲೀಫ ಮತ್ತು ಅವನ ಅಧಿಕಾರಿಗಳನ್ನು ಕ್ಷಮಿಸು" ಎಂದು ಬೇಡಿದನಂತೆ.ಇದಲ್ಲವೇ ಕ್ಷಮಾಗುಣದ  ಪ್ರತಿರೂಪ.  


ಆದರೆ ಬಹುದೊಡ್ಡ ಪ್ರಶ್ನೆಯಂದರೆ ಇಷ್ಟಾಗಿ ವಿವರಿಸಿದ ಕ್ಷಮಾಗುಣವನ್ನು ರೂಡಿಸಿಕೊಳ್ಳುವುದು ಸುಲಭವೇ, ಸಾಮಾನ್ಯರಿಗೆ ಸಾಧ್ಯವೇ? ಹೌದು,ಕಷ್ಟ ಆದರೆ ಅಸಾಧ್ಯವಲ್ಲ.  

ಸಾಮಾನ್ಯ ಜನರಾದ ನಾವೂ ಈ ಕ್ಷಮಾಗುಣವನ್ನು ರೂಡಿಸಿಕೊಳ್ಳಬಹುದೇ?  ಅಥವಾ ಈ ಕ್ಷಮಾಗುಣವನ್ನು ರೂಡಿಸಿಕೊಳ್ಳುವ ಅವಶ್ಯಕತೆ ನಮಗೆ ಉಂಟೆ? ಇಂದಿನ ಪರಿಸ್ಥಿತಿಯಲ್ಲಿ, ನಾವು ಕ್ಷಮಾಗುಣವನ್ನು ರೂಡಿಸಿಕೊಳ್ಳುವುದು ಹೆಚ್ಚು ಪ್ರಸ್ತುತ. ಏಕೆಂದರೆ ಅತೀ ಜಂಜಾಟದ, ಪೋಟಿಯ,ಸ್ವಾರ್ತಪೂರಿತ ಮನೋಭಾವವಿರುವ ಜನಗಳೇ ತುಂಬಿರುವ, ಕುಬುಧ್ಧಿ, ಕುತ್ಸಿತ ಮತ್ತು ಕುಟಿಲತೆಯೇ ಸಾಮಾನ್ಯ ಜನರ ಒಟ್ಟಾರೆ ಮನೋಭಾವವಾಗಿರುವಾಗ, ನಮಗೆ ಕ್ಷಮಾಗುಣವಿದ್ದರೆ, ಇಂತಹ ಕೆಟ್ಟ ವಾತಾವರಣದಲ್ಲಿಯೂ ನಾವು ಶಾಂತರಾಗಿ, ಆನಂದದಿಂದ ಇರಲು ಸಾಧ್ಯ. ಇಲ್ಲದ್ದಿದ್ದರೆ ಮಾನಸಿಕ ಪ್ರಕ್ಷುಬ್ಧತೆಯಿಂದ ನಮ್ಮ ನೆಮ್ಮದಿ ಹಾಳಾಗಿ ಸಂಕಟ ಪಡಬೇಕಾಗುತ್ತದೆ. ಹಾಗಾಗಿ ನಾವೂ ಸಹ ಕ್ಷಮಾಗುಣವನ್ನು ನಮ್ಮ ಸ್ವಾಭಾವವನ್ನಾಗಿಸಿ ಕೊಳ್ಳುವುದು ಹೆಚ್ಚು ಪ್ರಸ್ತುತ.   

 ಆದರೆ ಕ್ಷಮಾಗುಣವನ್ನು ರೂಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅದಕ್ಕೆ ಕೋಪ,ಸ್ವಾರ್ಥ,ಸೇಡು,ಇಂತಹ ಗುಣಗಳನ್ನು ಬಿಡಬೇಕು. ಅಲ್ಪ ಪ್ರಚೋದನೆಗೂ ತೀವ್ರವಾಗಿ ಪ್ರತಿಕ್ರಿಯಿಸುವ ಪ್ರವೃತ್ತಿ ಬಿಡಬೇಕು. ಉದಾಹರಣೆಗೆ 'ನಾವು ದ್ವಿಚಕ್ರ ವಾಹನದಲ್ಲಿ ಹೋಗುವಾಗ, ತಡೆ ಚಿನ್ಹೆಯಾದ ಕೆಂಪುದೀಪವನ್ನು ಕಂಡು ಗಾಡಿ ನಿಲ್ಲಿಸುತ್ತೇವೆ. ನಮ್ಮ ಮುಂದೆ ಒಂದಿಷ್ಟು  ವಾಹನಗಳು ಮತ್ತು ನಮ್ಮ ಹಿಂದಷ್ಟು ವಾಹನಗಳಿರುತ್ತವೆ. ಮುಂದೆ ಹೋಗಲು ಹಸಿರು ದೀಪ ಕಂಡ ತತ್ಕ್ಷಣ ನಿಮ್ಮ ಮುಂದಿರುವ ವಾಹನಗಳು ಚಲಿಸಲುಪಕ್ರಮಿಸುವ ಮುನ್ನ ನಾವು ಮುಂದೆ ಹೋಗಲಾಗುವುದಿಲ್ಲ. ಆದರೆ ಆತುರಕ್ಕೆ ನಮ್ಮ ಹಿಂದಿನವ ಸುಮ್ಮನೆ ಶಬ್ದ ಮಾಡುತ್ತಾನೆ ಎಂದಿಟ್ಟುಕೊಳ್ಳೋಣ. ಆಗ ನಮಗೆ ಕಿರಿಕಿರಿಯಾಗಿ ಕೋಪ ಬರುತ್ತದೆ. ಹಾಗೆ ನಾವು ಕೋಪಿಸಿಕೊಳ್ಳದಿದ್ದರೆ, ಆಗುವ ನಷ್ಟವೇನೂ ಇಲ್ಲಾ. ಆದರೆ ನಮಗೆ ಸಹನೆ ಕಡಿಮೆಯಾದುದರಿಂದ, ನಾವು ಕೋಪಿಸಿಕೊಳ್ಳುತ್ತೇವೆ,ಜಗಳಕ್ಕೆ ಇಳಿಯುತ್ತೇವೆ ಮತ್ತು ಆ ಜಗಳ ಪ್ರಕೋಪಕ್ಕೆ ಹೋಗಿ ಅನಾಹುತವೇ ಆಗುವ ಸಾಧ್ಯತೆಗಳೂ ಉಂಟು. ಕ್ಷಣಿಕ ಅಸಹನೆಯಿಂದ ಎಷ್ಟೊಂದು ಪ್ರಮಾದ. ಅಕಸ್ಮಾತ್, ನಾವು ಕೋಪಿಸಿಕೊಳ್ಳದೆ, ತಾಳ್ಮೆಯಿಂದ ಕಾದು ಮುಂದೆ ಹೊರತು ಹೋದರೆ, ಆ ವಿಷಯ ಮತ್ತು ಪ್ರಸಂಗ ಬೆಳೆಯದೆ ಅಲ್ಲೇ ಮುಗಿದು ಹೋಗುತ್ತದೆ. ಇವೆರಡರಲ್ಲಿ ಯಾವುದು ಉತ್ತಮ ನೀವೇ ನೋಡಿ. 

ಸಹನೆ, ಪರ ಸಹಿಷ್ಣುತೆ ಇವೆರಡು ಗುಣಗಳನ್ನು ಬಲವಾಗಿ ರೂಡಿಸಿಕೊಂಡರೆ, ನಮಗೆ ಸುಖ. ಕೋಪವನ್ನು ಗೆಲ್ಲಬೇಕು. ಸೇಡನ್ನು ಗೆಲ್ಲಬೇಕು. ಸುಖ ದುಃಖದ ಸಮಯದಲ್ಲಿ ಮಾನಸಿಕ ಸಂತುಲನೆ ಮತ್ತು ಸಮಭಾವವನ್ನು ಬೆಳೆಸಿಕೊಳ್ಳಬೇಕೆಂಬ ಧೃಡ ನಿರ್ಧಾರ ಬೇಕು. ಹಾಗಾದಾಗ  ಕ್ಷಮಾಗುಣ ನಮ್ಮ ಸ್ವಭಾವವೇ ಆಗುತ್ತದೆ.  

ಶ್ರೀ ಕೃಷ್ಣ ಅರ್ಜುನನಿಗೆ ಆದೇಶಿಸುತ್ತಾನೆ"ಸುಖ-ದುಃಖ, ಜಯ-ಅಪಜಯ,ಲಾಭ-ನಷ್ಟಗಳ ಬಗ್ಗೆ ಯೋಚಿಸದೆ ನೀ ಯುದ್ದ ಮಾಡಿದ್ದಲ್ಲಿ ನಿನಗೆ ಯಾವ ಪಾಪವೂ ಅಂಟುವುದಿಲ್ಲ." ಎಂದು. ಹಾಗಾಗಿ ಯಾರು ಯಾವುದೇ ರೀತಿಯ ಅಪೇಕ್ಷೆಯಿಲ್ಲದೆ ತನ್ನ ಕರ್ತವ್ಯವನ್ನು ಮಾಡುತ್ತಾ, ಪರಮಾತ್ಮನಿಗೆ ಸಂಪೂರ್ಣವಾಗಿ ಶರಣಾಗುವರೋ ಅಂತಹ ವ್ಯಕ್ತಿಗಳು ಸಮಭಾವ ಮತ್ತು ಕ್ಷಮಾಗುಣವನ್ನು ಬೆಳೆಸಿಕೊಳ್ಳಲು ಸಾಧ್ಯ.  

" ನನ್ನನ್ನು ಎಲ್ಲದರಲ್ಲಿಯೂ ಮತ್ತು ಎಲ್ಲವನ್ನೂ ನನ್ನಲ್ಲಿ, ಯಾರು ಕಾಣಬಲ್ಲರೋ, ಅವರಿಗೆ ನಾನು ಸದಾ ಗೋಚರನಾಗಿರುತ್ತೇನೆ ಮತ್ತು ಅವರು ಸದಾ ನನ್ನ ದೃಷ್ಟಿಯಲ್ಲಿರುತ್ತಾರೆ".ಎಂಬುದು ಶ್ರೀ ಕೃಷ್ಣನ ಗೀತಾವಾಣಿ. ಹಾಗಾಗಿ ಎಲ್ಲ ಪ್ರಾಣಿಗಳಲ್ಲೂ ಯಾರು  ಪರಮಾತ್ಮನನ್ನೇ  ಕಾಣಬಲ್ಲರೋ, ಯಾರು ಮಿತ್ರ-ಶತ್ರು, ಧನಿಕ-ದರಿದ್ರ, ಜಾತಿ-ವರ್ಣಗಳ ಭೇದಗಳನ್ನು ತೊರೆದು ಎಲ್ಲವೂ ಆ ಪರಮಾತ್ಮನೇ ಎಂಭ ಭಾವದಿಂದಿರುತ್ತಾರೋ ಅಂಥಹವರು ಕ್ಷಮಾಶೀಲರಾಗುತ್ತಾರೆ. 

ಮೇಲೆ ಹೇಳಿದಂತೆ ಇಂದಿನ ಪ್ರಸಕ್ತ ಸಾಮಾಜಿಕ ಪರಿಸ್ಥಿತಿಯಲ್ಲಿ ಮಾನವರು ಕ್ಷಮಾಶೀಲರಾಗುವುದು ಹೆಚ್ಚು ಅವಶ್ಯಕ ಮತ್ತು ಪ್ರಸ್ತುತವಲ್ಲವೇ? ಸಮಾಜದ  ಎಲ್ಲರಲ್ಲಿಯೂ ಈ ಗುಣ ವರ್ಧಿಸಿದರೆ ಇಡೀ ಪ್ರಪಂಚವೇ ಜೀವಿಸಲಿಕ್ಕೆ ಒಂದು ಸುಂದರ ತಾಣವಾಗುವುದರಲ್ಲಿ ಸಂದೇಹವೇ ಇಲ್ಲ!  

                                                                ಸರ್ವೇ ಜನಾಃ ಸಜ್ಜನೋ ಭವಂತು 
                                                              ಸರ್ವೇ ಸಜ್ಜನಾಃ ಸುಖಿನೋ ಭವಂತು  
ರವಿ ತಿರುಮಲೈ 

9632246255

No comments:

Post a Comment