Friday, 19 December 2014

'ವೃತ್ತಿ ' ಕ್ಷೇತ್ರದಲ್ಲಿ ಭಗವದ್ಗೀತೆ

'ಭಗವದ್ಗೀತೆ'  ವಿಶ್ವತತ್ವವನ್ನು ಪ್ರತಿಪಾದಿಸುತ್ತದೆ. ಅಲ್ಲಿ ಪ್ರತಿಪಾದಿಸಲ್ಪಟ್ಟ ತತ್ವಗಳು ಸರ್ವಕಾಲಿಕ ಮತ್ತು ಸರ್ವ ಪ್ರಭಾವಕ. ಕೇವಲ ಮುದುಕರಾದಮೇಲೆ ಓದಬೇಕಾದದ್ದು ಎಂದು ಹಣೆಪಟ್ಟಿ ಕಟ್ಟುವಂತಹುದ್ದಲ್ಲ. ದೇಶ, ಜನಾಂಗ, ವಯೋಮಾನ, ಕಾಲ ಮುಂತಾದವುಗಳ ಬೇಧವಿಲ್ಲದ ಸರ್ವ ಕಾಲಕ್ಕೂ ಸರ್ವರಿಗೂ ಅನ್ವಯವಾಗುವುದೇ ಭಗವದ್ಗೀತೆಯ ತತ್ವಗಳು. ಇಲ್ಲಿ ನಾವು ಭಗವದ್ಗೀತೆ ಇಂದಿನ ಸಮಾಜದಲ್ಲಿ ಪ್ರತಿಯೊಬ್ಬರ 'ಕಾರ್ಯಕ್ಷೇತ್ರ' ದಲ್ಲಿ ಹೇಗೆ ಅನ್ವಯವಾಗುತ್ತದೆಂದು ವಿಚಾರಮಾಡಲು ಪ್ರಯತ್ನ ಮಾಡಿದ್ದೇವೆ.    


'ಶ್ರೀಮದ್ಭಗವದ್ಗೀತೆ' ಯಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ' ನಿನ್ನ ಕಾರ್ಯವನ್ನು ಮಾಡುವುದಕ್ಕಷ್ಟೇ  ನಿನಗೆ ಅಧಿಕಾರ, ಆ ಕಾರ್ಯದ ಫಲದಮೇಲೆ ಅಲ್ಲ" (कर्मण्येवा अधिकारस्ते मा फलेषु कदाचन) ಎಂದು ಹೇಳುತ್ತಾ ನಿನ್ನ ಕಾರ್ಯಕ್ಷೇತ್ರದಲ್ಲಿ ದಕ್ಷತೆಯಿಂದ ಕೆಲಸಮಾಡು ' ಎಂದಷ್ಟೇ ಹೇಳುತ್ತಾನೆ ಅಲ್ಲವೇ? ಅದೇ ಗೀತೆ,  'नियतं कुरु कर्म त्वम् '( अध्याय 3-8) ಎಂದು ಹೇಳಿ, ನಿನಗೆ ನಿಯಮಿಸಿದ ಕರ್ಮವನ್ನು ಮಾಡು ಎಂದು ಹೇಳುತ್ತಾ, ನಾವು ನಮ್ಮ ನಮ್ಮ ಕಾರ್ಯಕ್ಷೇತ್ರದಲ್ಲಿ 'ದಕ್ಷತೆ'ಯಿಂದ ಹೇಗೆ ಕೆಲಸಮಾಡಬೇಕು ಎಂದೂ  ಸಹ ಹೇಳುತ್ತಾನೆ. ಏಕೆಂದರೆ ಗೀತೆ 'ಕರ್ಮ' ಸಿದ್ಧಾಂತದ ವಿಜ್ಞಾನ. ಕರ್ಮವೆಂದರೆ ನಾವು  ಮಾಡುವ ಕೆಲಸ,  ಕಾರ್ಯ. ಹಾಗಾಗಿ ಇಂದಿಗೂ ನಾವು ಕೆಲಸ ಮಾಡುವ ಪ್ರತಿಯೊಂದು ಸ್ಥಳಕ್ಕೂ ' ಗೀತೆ' ಯ ಉಪದೇಶಗಳು ಹೆಚ್ಚು ಪ್ರಸ್ತುತ, ಸೂಕ್ತ, ಮತ್ತು ಅನ್ವಯ. 


ಬದುಕಿನಲ್ಲಿ ನಾವು ಹಲವಾರು ಪಾತ್ರಗಳನ್ನು ಧರಿಸಬೇಕಾಗುತ್ತದೆ. ಮನೆಯಲ್ಲಿ ತಂದೆತಾಯಿಗಳಿಗೆ ಮಗ(ಳು), ಹೆಂಡತಿಗೆ ಗಂಡ(ನಿಗೆ ಹೆಂಡತಿ), ಮಕ್ಕಳಿಗೆ ತಂದೆ,ತಾಯಿ, ಹೀಗೆ ಹಲವಾರು ಪಾತ್ರಗಳು. ಅಂತಹ ವಿವಿಧ ಪಾತ್ರಗಳಲ್ಲಿ ಕಚೇರಿಯಲ್ಲಿ 'ಕರ್ಮಚಾರಿ' ಯ ಪಾತ್ರವೂ ಒಂದು. ಯಾರೇ ಆಗಲಿ ಯಾವುದೇ ಸಮಯದಲ್ಲೇ ಆಗಲಿ, ಯಾವುದಾದರೂ ಒಂದು ಪಾತ್ರವನ್ನು ಮಾತ್ರ ಧರಿಸಬಹುದು. ಒಂದೇ ಸಮಯದಲ್ಲಿ ಎರಡು ಪಾತ್ರಗಳನ್ನೂ ಧರಿಸಲಾಗದು. ನಾವು ಯಾವ ಸಮಯದಲ್ಲಿ ಯಾವ ಪಾತ್ರ ಧರಿಸಿದ್ದರೆ ಆ ಪಾತ್ರದಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಹಾಗಾದರೆ ಮಾತ್ರ ಆ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯ. ಇದನ್ನೇ ' ವ್ಯವಸಾಯ ಬುದ್ಧಿ' ಎನ್ನುತ್ತಾರೆ. ಗೀತೆ ಅದನ್ನು' ಸಮರ್ಪಣೆ, ನಿಷ್ಠೆ ' ಎನ್ನುತ್ತದೆ. ಯಾವುದೇ ಪಾತ್ರದ ಮೂಲಕ ಯಾವುದೇ ಕೆಲಸವನ್ನು ಮಾಡುತ್ತಿದ್ದರೂ ಅದರಲ್ಲಿ ನಾವು ನಮ್ಮ ವ್ಯವಸಾಯ ಬುದ್ಧಿ, ಸಮರ್ಪಣೆ, ನಿಷ್ಠೆ ಮತ್ತು ನಿಮಗ್ನತೆ ತೋರಿದರೆ ಅದೇ ನಮ್ಮ 'ಕ್ಷಮತೆ' ಯಾಗುತ್ತದೆ. 


ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನದು 'ಯೋಧ'ನ ಪಾತ್ರ. ಅವನ ಕರ್ತವ್ಯ, ತನ್ನ ಸಂಪೂರ್ಣ ಶಕ್ತಿ ಮತ್ತು ಯುಕ್ತಿಯನ್ನು ಉಪಯೋಗಿಸಿ, ಆ ಪಾತ್ರಕ್ಕೆ ನ್ಯಾಯ ಒದಗಿಸುವಂತೆ, ಕೇವಲ ಯುದ್ಧಮಾಡುವುದಾಗಿತ್ತು. ಹಾಗೆ ಅವನು ಯುದ್ಧಮಾಡುವಾಗ, ಅವನು ಬೇರೆಡೆ ಧರಿಸುವ ಅಣ್ಣ, ತಮ್ಮ,ಶಿಷ್ಯ ಮೊಮ್ಮಗ,ಮಿತ್ರ,ಅಳಿಯ, ಮುಂತಾದ ಯಾವುದೇ ಪಾತ್ರಗಳ ಭಾವಗಳನ್ನು ತೋರದೆ ಯುದ್ಧಮಾಡಬೇಕಾಗಿತ್ತು. ಹಾಗೆ ಮಾಡದ್ದಿದ್ದರೆ ಅವನ ವ್ಯವಸಾಯ ಬುದ್ಧಿ ಮತ್ತು ಕ್ಷಮತೆ ದುರ್ಬಲವಾಗುತ್ತಿತ್ತು. ಯುದ್ಧ ಮಾಡುವಾಗ ಕೇವಲ ಯೋದ್ಧನಾಗಿರಬೇಕು. ಹಾಗೆ ನಾವು ನಮ್ಮ ಕಾರ್ಯಕ್ಷೇತ್ರಗಳಲ್ಲಿ ' ಕರ್ಮಚಾರಿಯ' ಪಾತ್ರ ವಹಿಸಿದಾಗ ಕೇವಲ ಅದೇ ಪಾತ್ರದಲ್ಲಿ ರಾಜಿಸಿದರೆ ಆ ಪಾತ್ರವನ್ನು ಸಂಪೂರ್ಣ ಸಮರ್ಪಕತೆಯಿಂದ ನಿರ್ವಹಿಸಿದಂತಾಗುತ್ತದೆ. ಇದನ್ನೇ ' ಗೀತೆ' ನಮಗೆ ಬೋಧಿಸುವುದು.  

ದುರ್ಬಲ ಮನಸ್ಸುಗಳು ತಾವು ವಹಿಸುವ ಪಾತ್ರದಲ್ಲಿ ಸಂಪೂರ್ಣತಯಾ ತೊಡಗಿಸಿಕೊಳ್ಳಲಾಗುವುದಿಲ್ಲ, ಅಲ್ಲವೇ? ಅದೇ ಸಮಸ್ಯೆ 'ಅರ್ಜುನ'ನದೂ ಆಗಿತ್ತು. ಹಾಗಾಗಿಯೇ 'ಗೀತೆ' ಯನ್ನು ಹೇಳಿ ಅವನ ಮನಸ್ಸನ್ನು ಕೃಷ್ಣ ಬಲಗೊಳಿಸಿದ್ದು. ಹಾಗಾಗಿ ನಾವು ಕೆಲಸಮಾಡುವ ಸ್ಥಳದಲ್ಲಿ ನಮ್ಮ ಕ್ಷಮತೆ ಹೆಚ್ಚಿಸಿಕೊಳ್ಳಬೇಕಾದರೆ, ಮಾನಸಿಕ ಧೃಢತೆಯನ್ನು ಹೆಚ್ಚಿಸಿಕೊಳ್ಳಬೇಕು. ನಾವು ಮಾಡಿದ ಕೆಲಸಕ್ಕೆ ಪ್ರತಿಫಲಾಪೇಕ್ಷೆಯಿಲ್ಲದೆ ಇರುವುದು ಪ್ರಾಪಂಚಿಕ ಬದುಕಿಗೆ ಸರಿಹೊಂದುವ ವಿಚಾರವಲ್ಲ, ಅಲ್ಲವೇ?  ನಿಸ್ಪೃಹತೆ ಮತ್ತು ಕ್ಷಮತೆಯಿಂದ ಕೆಲಸಮಾಡುವುದಕ್ಕೆ 'ಫಲ' ವೇ ಒಂದು ಆಧಾರ.  ಕ್ಷಮತೆ ಅಧಿಕವಾದಷ್ಟೂ ಫಲವೂ ಅಧಿಕ ಮತ್ತು ಫಲವು ಅಧಿಕವಾದರೆ ಕ್ಷಮತೆಯೂ ಅಧಿಕವಾಗಬೇಕು. ಒಂದಕ್ಕೊಂದು ಪೂರಕವಲ್ಲವೇ? 

ಆದರೆ, ನಾವು ಪ್ರತಿಫಲಕ್ಕೆ ಹೆಚ್ಚು ಮಹತ್ವ ನೀಡಿದಾಗ, ಕೆಲಸದಲ್ಲಿ ನಮ್ಮ ಗಮನ ಮತ್ತು ಏಕಾಗ್ರತೆ ಕುಂಠಿತವಾಗುತ್ತದೆ ಮತ್ತು ನಮ್ಮ ಕೆಲಸಕ್ಕೆ, ನಾವು ಹೊತ್ತ ಜವಾಬ್ದಾರಿಗೆ ಸಂಪೂರ್ಣತಯಾ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ. 'ಪ್ರತಿಫಲಾಪೇಕ್ಷೆ'ಯ ಒತ್ತಡದ ಭಾರ ನಮ್ಮ ಕರ್ತವ್ಯದ ನಿರ್ವಹಣೆಗೆ ಮಾರಕವಾಗುತ್ತದೆ. ' ನನ್ನ ಮಕ್ಕಳು ಬೆಳೆದು ದೊಡ್ಡವರಾದಮೇಲೆ ತನ್ನನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಾರೋ ಇಲ್ಲವೋ, ಪ್ರೀತಿಸುತ್ತಾರೋ ಇಲ್ಲವೋ'  ಎಂದು ಸಂದೇಹವಿರುವ ತಾಯಿ ಇಂದು ತನ್ನ ಮಕ್ಕಳಿಗೆ ತಾಯಿ ತೋರಬೇಕಾದ ಸಂಪೂರ್ಣ ಮಮತೆ ಮತ್ತು ಪ್ರೀತಿಯನ್ನು ಎರೆಯಲಾರಳು ಅಲ್ಲವೇ? ಅವಳು ತೋರಬೇಕಾದ ವ್ಯವಸಾಯಬುದ್ಧಿಯು ಲೋಪವಾಗುತ್ತದೆ. 

ಒಬ್ಬ ರೈತ ವ್ಯವಸಾಯ ಮಾಡುವಾಗ ಉತ್ತು  ಬಿತ್ತಿದೊಡನೆಯೇ ಫಸಲಿನ ಲೆಕ್ಕಾಚಾರ ಹಾಕುತ್ತಾ ಇದ್ದುಬಿಟ್ಟರೆ, ನೀರು ಹಾಯಿಸಬೇಕಾದಾಗ, ಕಳೆ ಕೀಳಬೇಕಾದಾಗ ನಿರ್ಲಕ್ಷ್ಯ ತೋರಿ ಬೆಳೆ ಸರಿಯಾಗಿ ಬೆಳೆಯುವುದಿಲ್ಲ, ಅಲ್ಲವೇ? ನಿರೀಕ್ಷಿಸಿದ ಫಸಲು ಸಿಗುವುದಿಲ್ಲ ಅಲ್ಲವೇ?.  ಕೇವಲ  ಸಂಬಳದ ಲೆಕ್ಕಾಚಾರವನ್ನೋ ಅಥವಾ ಮೇಲಧಿಕಾರಿಯ ಮೆಚ್ಚುಗೆಯನ್ನೋ ಅಥವಾ ಸಹೋದ್ಯೋಗಿಗಳಿಗಿಂತ ಅಧಿಕ ಸಾಧನೆ ತೋರುವ ಆತುರವನ್ನೋ ಮನಸ್ಸಿನಲ್ಲಿಟ್ಟುಕೊಂಡಿರುವ ಯಾವುದೇ ಕಾರ್ಮಿಕ ಅಥವಾ ಕರ್ಮಚಾರಿಗೆ ನಿಯಮಿಸಿದ ಕೆಲಸ ಸಮರ್ಪಕವಾಗಿ ಮಾಡಲು ಆಗುವುದೇ ಇಲ್ಲ. ಹಾಗಾಗಿ ಕೆಲಸಕ್ಕೆ ಆದ್ಯ ಪ್ರಾಮುಖ್ಯತೆ ನೀಡಬೇಕು, ಫಲಕ್ಕಲ್ಲ ಎನ್ನುವುದು ತತ್ವ.  

ಗೀತೆಯಲ್ಲಿ ನಮಗೆ ಇಂದಿಗೂ ಅನ್ವಯವಾಗುವಂತೆ ಶ್ರೀ ಕೃಷ್ಣ, "ಫಲದ ಆಸೆಯನ್ನು ತೊರೆದು ನಿನ್ನ ಕೆಲಸದಲ್ಲಿ ನಿಮಗ್ನನಾಗು. ಶ್ರದ್ಧೆಯಿಂದ, ತನ್ಮಯತೆಯಿಂದ ನಿನಗೆ ಸಂದ ಕೆಲಸವನ್ನು, ಪ್ರೀತಿಸಿ, ಸಂತೋಷದಿಂದ, ನಿನಗೆ ತೃಪ್ತಿಯಾಗುವಂತೆ  ಮಾಡು. ಫಲಾಫಲಗಳು ತಾನೇ ತಾನಾಗಿ ಬರುತ್ತವೆ. ಸಂಬಳಕ್ಕೆ ಕೆಲಸ ಮಾಡುವಾಗಲೂ ಅದಕ್ಕೂ ಮೀರಿ ನಿಲ್ಲು,  ಅದರ ಯೋಚನೆಯ ಭಾರ ನಿನ್ನನ್ನು ಕೆಳಗೆಳೆಯದೆ ಇರಲಿ"  ಎನ್ನುವಂತಹ ಬುದ್ಧಿವಾದವನ್ನು ಮಾಡುತ್ತಿದ್ದಾನೆಂದು, ತಿಳಿಯಬೇಕು.  
  
ಯಾವುದೇ ಕೆಲಸಕ್ಕಿಳಿಯುವ ಮುನ್ನ  ವಿಚಾರ ಮಾಡಬೇಕು. ಒಂದು ಬಾರಿ ಧುಮಿಕಿಯಾದಮೇಲೆ ' ಈಸಬೇಕು ಈಸಿ ಜಯಿಸಬೇಕು'  ಎನ್ನುವ ತತ್ವಕ್ಕೆ ಬದ್ಧರಾಗಿರಬೇಕು.  ಲಾಭ ನಷ್ಟಗಳ ಅಥವಾ ಜಯಾಪಜಯಗಳ ಚಿಂತೆ ನಮ್ಮನ್ನು ನಮ್ಮ ಮಾರ್ಗದಿಂದ ವಿಚಲಿತಗೊಳಿಸಬಾರದು. 'ಆಟ'ವಾಡುವುದು ಮುಖ್ಯವಾಗಬೇಕು, ಸೋಲುಗೆಲುವುಗಳಲ್ಲ. 'ಫಲ'ದ ಚಿಂತೆಯಿಲ್ಲದೆ  ನಮ್ಮ ಧ್ಯೇಯ ದೃಢವಾಗಿರಬೇಕು ಮತ್ತು ಉತ್ಸಾಹ ಕುಗ್ಗದಂತಿರಬೇಕು.  

ಇಂದಿನ ವಸ್ತುಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ನಾವು ಕೆಲಸಮಾಡುವುದು  ಆ ಕೆಲಸವನ್ನು ' ಸಮರ್ಪಕ' ವಾಗಿ ಮಾಡಬೇಕು ಎನ್ನುವುದನ್ನು ಹೊರತು ಅನ್ಯ ಕಾರಣಗಳಿಗಾಗಿಯೇ ಅಲ್ಲವೇ? ಹೆಚ್ಚಿನ ಹಣಕ್ಕಾಗಿ, ಬಡ್ತಿಗಾಗಿ, ಲಂಚಕ್ಕಾಗಿ, ಯಾರನ್ನೋ ಮೆಚ್ಚಿಸಲಿಕ್ಕಾಗಿ, ಯಾರದೋ ಮೇಲಿನ ಮಮತೆಗಾಗಿ, ಹೀಗೆಯೇ ಇನ್ನೂ ಹಲವಾರು ಕಾರಣಗಳಿಗಾಗಿ ನಮ್ಮ ಕೆಲಸವನ್ನು ಮಾಡುತ್ತೇವೆ.

ನಮ್ಮ ಕೆಲಸದ ಸ್ಥಳದಲ್ಲಿ ನಮ್ಮ ಮೇಲಧಿಕಾರಿಗಳನ್ನು ಮೆಚ್ಚಿಸಲಿಕ್ಕಾಗಿಯೇ ನಾವು ಕೆಲಸಮಾಡಿದರೆ, ನಮ್ಮ ಕಾರ್ಯವನ್ನು ನಾವು ಸಮರ್ಪಣಾ ಭಾವದಿಂದ ಮಾಡಲಾಗದು. ನಾವು ನಮ್ಮ ಆಫೀಸಿನ ಮೇಲಧಿಕಾರಿಗಲ್ಲದೆ ನಮ್ಮ ಅಂತರನಗದೊಳಗಿನ  ಮೇಲಧಿಕಾರಿಯಾದ ನಮ್ಮ 'ಆತ್ಮಸಾಕ್ಷಿ' ಗೆ ನಿಷ್ಠೆಯಿಂದ ಕೆಲಸಮಾಡಿದರೆ ಅಂತಹ ಕೆಲಸವೂ ಸುಸೂತ್ರವಾಗಿ ನಡೆದು ಒಳಗಿನ ಮತ್ತು ಹೊರಗಿನ ಮೆಚ್ಚುಗೆ ಸಿಗುತ್ತದೆ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ " ನೀನು ನನ್ನನ್ನು ಮನದಲ್ಲಿಟ್ಟುಕೊಂಡು ಕೆಲಸಮಾಡು, ನಿನ್ನ ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ" ಎನ್ನುತ್ತಾನೆ.   

ನಾವು ಶ್ರದ್ಧೆಯಿಂದ, ನಮ್ಮ ಅಂತರಂಗಕ್ಕೆ ಮೆಚ್ಚುಗೆಯಾಗುವ ಹಾಗೆ ಕೆಲಸಮಾಡಿದರೆ, ಆ ಪ್ರಯತ್ನಕ್ಕೆ ಸೂಕ್ತವಾದ ಫಲ ನಮಗೆ ಖಂಡಿತವಾಗಿ ದಕ್ಕುತ್ತದೆ.  ಪ್ರಯತ್ನ ಮತ್ತು ಪ್ರಯೋಗ ಎರಡೂ ಶುದ್ಧವಾಗಿರಬೇಕು. ಇದು ಕೆಲಸವನ್ನು ಮಾಡುವವರಿಗೆ ಮತ್ತು ಆ ಕೆಲಸವನ್ನು ಮಾಡಿಸಿಕೊಳ್ಳುವವರಿಗೂ ಸಮನಾಗಿ ಅನ್ವಯವಾಗುತ್ತದೆ.   


ರವಿ ತಿರುಮಲೈ 
೨೦. ೧೨. ೨೦೧೪