Wednesday 15 November 2017

ಪರೋಪಕಾರ



ಉಪಕಾರ ಮಾಡುವುದು ನಮ್ಮ ಸಂಸ್ಕೃತಿ. ಪರೋಪಕಾರಕ್ಕೆ ನಮ್ಮ ಸಂಸ್ಕಾರಗಳಲ್ಲಿ ಬಹಳ ಮಹತ್ವವನ್ನು ನೀಡಿದ್ದಾರೆ ನಮ್ಮ ಪೂರ್ವಜರು. ಆದರೆ ಯಾರಿಗೆ ಯಾವ ಸಮಯದಲ್ಲಿ ಯಾವ ರೀತಿಯ ಉಪಕಾರವನ್ನು ಮಾಡಬೇಕು ಎನ್ನುವುದೇ ಜಿಜ್ಞಾಸೆಯ ವಸ್ತುವಾಗುತ್ತದೆ. ಉದಾ:ಯಾರೋ ಒಬ್ಬ ದುಡಿದು ಸುಸ್ತಾಗಿನೆಲದಮೇಲೆ ಮಲಗಿ ನಿದ್ರಿಸುತ್ತಿರುವವನನ್ನು ಅಲುಗಾಡಿಸಿ,  ಎಬ್ಬಿಸಿಹಾಸಿಗೆಯನ್ನು ಹುಡುಕಿಕೊಂಡು ಮಲಗಿಕೋ ಎಂದು ಹೇಳುವುದು ಉಪಕಾರವೇನುಉಪಕಾರಮಾಡುವೆ ಎಂದು ಪರರ ನೆಮ್ಮದಿಯನ್ನು ಕಸಿಯಬಾರದು. ಮತ್ತೊಬ್ಬರಿಗೆ ಒಳಿತನ್ನು ಮಾಡುವುದು ಅಷ್ಟು ಸುಲಭವಲ್ಲ. 

ಒಬ್ಬ ಆರಾಮಾಗಿ ನೆಲದಲ್ಲಿ ಕಾಲ ಮೇಲೆ ಕಾಲ ಹಾಕಿಕೊಂಡು ಮಲಗಿದ್ದನಂತೆ. ಮತ್ಯಾರೋ ಒಬ್ಬ ಬಂದು ಅವನನ್ನು ಎದ್ದೇಳುಚುರುಕಾಗುಕೆಲಸಮಾಡುಅಭಿವೃದ್ಧಿ ಹೊಂದುಸಕಲ ಭಾಗ್ಯಗಳನ್ನೂ ಸಂಪಾದಿಸುಸ್ಥಿತಿವಂತನಾಗುಎಂದು ಉಪದೇಶ ಮಾಡಿದನಂತೆ. ಅದಕ್ಕವನು "ಹಾಗೆಲ್ಲಾ ಮಾಡಿದೇ ಎಂದಿಟ್ಟುಕೊಳ್ಳಿ,  ಮುಂದಕ್ಕೆ?" ಎಂಬ ಪ್ರಶ್ನೆ ಕೇಳಿದಾಗ, 'ಮುಂದಕ್ಕೆಆರಾಮಾಗಿ ಕಾಲಮೇಲೆ ಕಾಲ ಹಾಕಿಕೊಂಡುಮಲಗಿ ಆನಂದವಾಗಿರಬಹುದು" ಎಂದನಂತೆ. " ಅಯ್ಯೋ!!! ನಾ ಈಗಾಗಲೇ ಆ ಸ್ಥಿತಿಯಲ್ಲಿದ್ದೇನೆನಿಮ್ಮ ದಾರಿ ನೀವು ನೋಡ್ಕೊಳ್ಳಿ" ಎಂದನಂತೆ ನಮ್ಮ ಭೂಪತಿ. ಹೀಗೆ ಪುಗಸಟ್ಟೆ ಸಲಹೆಗಳನ್ನು ಕೊಡುವವರು ನಮಗೆ ಬಹಳ ಜನ ಸಿಗುತ್ತಾರೆ. ಏಕೆಂದರೆ ಈ ಜಗತ್ತಿನಲ್ಲಿ ಅತೀ ಸುಲಭವಾದ ಕೆಲಸಗಳೆಂದರೆ 'ಅನ್ಯರಿಗೆ ಸಲಹೆ ನೀಡುವುದು ಮತ್ತು ಮತ್ತೊಬ್ಬರು ಮಾಡಿದ ಕೆಲಸದಲ್ಲಿ ಹುಳುಕ ಹುಡುಕುವುದು' . 

ತೈತ್ತರೀಯೋಪನಿಷತ್ತು ತನ್ನ 'ಶೀಕ್ಷಾವಲ್ಲಿಯಲ್ಲಿ ಕೊಡುವ ವಿಷಯವನ್ನು ಪ್ರಸ್ತಾಪಿಸುತ್ತಾ  'ಭಿಯಾ ದೇಯಂ ಎಂದಿದೆ. ಯಾರಿಗಾದರೂ ಏನನ್ನಾದರೂ ಕೊಡುವಾಗ ಮನಸಿನಲ್ಲಿ 'ಭಯ' ವನ್ನಿಟ್ಟುಕೊಂಡು ಕೊಡು ಎಂದಿದೆ. ಭಯವೇತಕ್ಕೆ ಎಂದರೆನಾವು ಕೊಟ್ಟ ವಸ್ತು, ಸಲಹೆ  ಅಥವಾ ವಿಷಯ ಅವರಿಗೆ ಉಪಯೋಗಕ್ಕೆ ಬರುತ್ತದೋ ಅಥವಾ ಅದರಿಂದ ಅವರಿಗೆ ಏನಾದರೂ ತೊಂದರೆಯಾಗುತ್ತದೆಯೋ ಏನೋ ಎಂಬ 'ಭಯ' ವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೊಡಬೇಕು ಎನ್ನುತ್ತದೆ. ಹಾಗೆ ನಮ್ಮ ಮನಸ್ಸಿನಲ್ಲಿ ಭಯವಿಟ್ಟುಕೊಂಡರೆಆಗ ನಾವು ಕೊಡುವುದು ಸೂಕ್ತವಾಗಿಉಪಯುಕ್ತವಾಗಿಅನುಕೂಲವಾಗಿರುತ್ತದೆ.  

ಮಾನ್ಯ ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ 'ಸುಲಭವಲ್ಲೊಳಿತೆಸೆಗೆಎಂದು ಹೇಳಿ ಪರರಿಗುಪಕರಿಸುವುದು ಅಷ್ಟು ಸುಲಭವಲ್ಲಎಂದಿದ್ದಾರೆ. ಅನ್ಯರ ಅವಶ್ಯಕತೆಗಳನ್ನು ಅರಿಯುವುದು ಬಹಳ ಕಷ್ಟ. ಅದು ಏನೋ ಇದ್ದರೆ ನಾವು ಮತ್ತೇನನ್ನೋಊಹಿಸಿಭಾವಿಸಿ ಕೊಟ್ಟಾಗಎಡವಟ್ಟಾಗುತ್ತದೆ. ನಿಷ್ಪ್ರಯೋಜಕ ವಸ್ತು ಅಥವಾ ಸಲಹೆಯನ್ನು ನೀಡಿ ಅನ್ಯರಿಗೆ ಉಪಕರಿಸದೆಹಲಬಾರಿ ತೊಂದರೆಯನ್ನೇ ಮಾಡಿದಂತಾಗುತ್ತದೆ. ನಮ್ಮ ಉದ್ದೇಶ್ಯ 'ಶುದ್ಧ'ವಾಗಿದ್ದರೂಅನ್ಯರಿಗೆ ಬೇಕಾದ ವಸ್ತು ಅಥವಾ ವಿಷಯಬೇಕಾದ ಸಮಯದಲ್ಲಿಬೇಕಾದ ಪ್ರಮಾಣದಲ್ಲಿ ಕೊಡುವುದರಲ್ಲಿ ನಾವು ಸೋಲುತ್ತೇವೆ.  


ಅನ್ಯರಿಗೆ ಉಪಕರಿಸಬೇಕು ಎನ್ನುವ ಭಾವನೆ ಒಳ್ಳೆಯದೇ ಆದರೂ ನಾವು ಮಾಡುವ ಉಪಕಾರ ಸೂಕ್ತವಾಗಿದೆಯೇ ಎಂದು ಆಲೋಚಿಸಿ ನಂತರ ಒದಗುವುದು ಒಳ್ಳೆಯದು. ಉದಾಹರಣೆಗೆ 'ತನ್ನ ಸಮಸ್ಯೆಗಳನ್ನು ತಾನೇ ಪರಿಹರಿಸಲು ಪ್ರಯತ್ನಪಡುತ್ತಿರುವವರಿಗೆ ಒಡನೆಯೇ ಸಹಾಯಮಾಡಲು ಹೋದರೆ, ಅವರ ಪ್ರಯತ್ನ ಮತ್ತು ಅವರ ಸಾಹಸಕ್ಕೆ ಅಡ್ಡಿಯೊಡ್ಡಿ ಅವರ ಕ್ಷಮತೆಯನ್ನು ಕುಂಠಿತಗೊಳಿಸಿದಂತೆಯೇ ಅಲ್ಲವೇ? ಕೈಲಾಗದವರಿಗೆ ಮತ್ತು ದೀನರಿಗೆ ಒದಗುವುದು ಸೂಕ್ತ. ಕ್ಷಮತೆಯಿದ್ದವನಿಗೂ ಒದಗಿದರೆ ಅವನನ್ನು ಸೋಂಬೇರಿಯಾಗಿಸಿದಂತೆಯೇ ಅಲ್ಲವೇ?  

ನಾವು ಮಾಡುವ ಉಪಕಾರ ಸೂಕ್ತವೋ ಅಲ್ಲವೋ ಎಂದು ನಿರ್ಧರಿಸುವುದೇ ಬಹಳ ಕಷ್ಟಕರವಾದ ಕೆಲಸ. ಅನ್ಯರಿಗೆ ಉಪಕಾರ ಮಾಡುವುದು ಸುಲಭವಲ್ಲ. ಉಪಕಾರ ಮಾಡಬೇಕೆಂದು ಶುದ್ಧಮನಸಿದ್ದರೂ ಹಾಗೆ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ನಾವು ಅನ್ಯರಿಗೆ ಸೂಕ್ತ ಉಪಕಾರ ಮಾಡಲಾಗದಿದ್ದರೆಅವರ ಪಾಡಿಗೆ ಅವರನ್ನುಅವರ ಕರ್ಮಕ್ಕೆ ಅವರನ್ನು ಬಿಟ್ಟುಶುದ್ಧಮನಸ್ಸಿನಿಂದ ಅವರಿಗೆ ಶುಭವಾಗಲೆಂದು ಹಾರೈಸಿದರೆಅವರಿಗೆ ಒಳಿತನ್ನು ಮಾಡಿದಂತೆಯೇ!!!!!!!!!!! 


ನೆನಪಿನಾಟ


ನಮ್ಮ ಮನಸ್ಸುಗಳಲ್ಲಿ ನೆನಪುಗಳುಂಟು. ಕೆಲವು ಇತ್ತೀಚಿನವು, ಕೆಲವು ಹಳೆಯವು. ಕೆಲವು ಬಹಳ ಹಳೆಯವು, ಕೆಲವು ಸುಪ್ತವಾಗಿದ್ದು ಮತ್ತೆ ಮತ್ತೆ ಹೊರಬರುವುವು, ಮತ್ತೆ ಕೆಲವು ಇಂದಿಗೂ ನೆನಪಿನಲ್ಲುಳಿಯದೆ ಕಳೆದುಹೋಗಿರುವುವು. ಹೀಗೆ ನೆನಪುಗಳ ಸಾಗರವೇ ನಮ್ಮ ಮನಸ್ಸಿನಲ್ಲಿ ಇದೆ. ಕಡಲಿನಲ್ಲಿ ಮೇಲೇಳುವ ಅಲೆಗಳಂತೆ ನಮ್ಮ ಮನಸ್ಸುಗಳಲ್ಲೂ ನೆನಪಿನ ಅಲೆಗಳು ಏಳುತ್ತ ಬೀಳುತ್ತಲೇ ಇರುತ್ತವೆ. ಇದರಿಂದ ಬಹುಶಃ ಯಾರಿಗೂ ವಿನಾಯಿತಿ ಇಲ್ಲ. 

ನಮ್ಮ ಮನಸ್ಸಿನಲ್ಲಿ ಹಳೆಯ ನೆನಪುಗಳನ್ನು ಸಂಪೂರ್ಣವಾಗಿ ಅಳಿಸಿಹಾಕಲು ಸಾಧ್ಯವೇ ಇಲ್ಲ. ಎಲ್ಲ ನೆನಪುಗಳೂ ಉಳಿಯದಿದ್ದರೂ,  ನಾವು ನಮ್ಮ ನೆನಪಿನಲ್ಲಿರುವ ಆ ಘಟನೆಗಳು ನಡೆದ ಕಾಲಕ್ಕೆ ಎಷ್ಟು ತೀರ್ವ್ರವಾಗಿ ಆ ಘಟನೆಯ ವಿಷಯವನ್ನು ನಮ್ಮ ಪನಸ್ಸಿನಲ್ಲಿ ಮುದ್ರಿಸಿಕೊಳ್ಳುತ್ತೇವೋ ಅಷ್ಟೇ ಧೀರ್ಘಕಾಲ ನಮ್ಮ ಮನಸ್ಸಿನ ತಳದಲ್ಲಿ ಅದು ಉಳಿಯುತ್ತದೆ. ಯಾವುದನ್ನು ನಾವು ಧೀರ್ಘಕಾಲ ನೆನಪಿಗೆ ತಂದುಕೊಳ್ಳುವುದಿಲ್ಲವೋ ಅದು ಮರೆಯಾಗಿ ಹೋಗುತ್ತದೆ.  ಹಾಗಾಗಿಯೇ ಎಲ್ಲವೂ ಉಳಿಯುವುದಿಲ್ಲ. ಹಾಗೆ ಎಲ್ಲವೂ ಉಳಿದುಬಿಟ್ಟರೆ ನಮಗೆ ಹುಚ್ಚುಹಿಡಿದುಬಿಡುತ್ತದೆ, ಅಲ್ಲವೇ? ಹಾಗಾಗಿ ಒಂದು ರೀತಿಯಲ್ಲಿ  ಮರೆವು‘  ನಮಗೆ ಪರಮಾತ್ಮ ಕರುಣಿಸಿರುವ 'ವರ' ವೆಂದೇ ತಿಳಿದುಕೊಳ್ಳಬೇಕು. ನಿರ್ಜನವಾದ ಕಾಡಿನಲ್ಲಿ ಮೌನವಾಗಿ ತಪಸ್ಸನ್ನು ಮಾಡುವವನ ನೆನಪಿನಲ್ಲಿ, ಅವನ ಜೀವನದ ಹಳೆಯ ನೆನಪುಗಳು ಇರುವುದಿಲ್ಲವೇನು? ಆ ನೆನಪಿನಲ್ಲಿ ಅವನು ಅನುಭವಿಸಿದ ಸುಖ, ಕೋಪ, ದ್ವೇಷ, ನೋವು, ಸಂಕಟಗಳ ಹಳೆಯ ಅನುಭವಗಳು ಮನಸಿನಂತರಾಳದಲಿ ಇದ್ದೇ ಇರುತ್ತವೆ. ಕಾಷಾಯ ಧರಿಸಿದಾಕ್ಷಣ ಮನಸ್ಸಿನ ನೆನೆಪುಗಳೆಲ್ಲ ಮಾಯವಾಗುತ್ತವೇನು?

ಯಾರೋ ತೋರಿದ ಪ್ರೀತಿ ಪ್ರೇಮ, ಯಾರೋ ನೀಡಿದ ಸವಿಯಾದ ಅನುಭವಗಳು ಮತ್ತು ಅದರಿಂದ ನಮಗಾದ ಸಂತೋಷ, ಯಾರೋ ನಮ್ಮ ಮೇಲೆ ತೋರಿದ ಕೋಪ, ದ್ವೇಷ, ಅಸೂಯೆ ಮತ್ತು ಅದರಿಂದ ನಮಗಾದ ತೊಂದರೆ, ನೋವು, ಸಂಕಟ, ಹೀಗೆ ಬೇರೆ ಬೇರೆ ಸಮಯಗಳಲ್ಲಿ ಬೇರೆ ಬೇರೆ ವ್ಯಕ್ತಿಗಳಿಂದಾದ ಸಾವಿರಾರು ಅನುಭವಗಳು ನೆನಪಿನ ರೂಪದಲ್ಲಿ ನಮ್ಮ ಮನಸ್ಸಿನ ಆಳದಲ್ಲಿ ಕುಳಿತಿರುತ್ತದೆ ಅಲ್ಲವೆ?  ಕೆಲವು ನಾವು ಬೇಕೆಂದಾಗ ಮನಃಪಟಲಕ್ಕೆ ಬಂದು ಕೂರುತ್ತವೆ, ಕೆಲವು ತಮ್ಮಷ್ಟಕ್ಕೆ ತಾವೇ ಬಂದು ಕುಣಿದಾಡುತ್ತಿರುತ್ತವೆ, ಮತ್ತೆ ಕೆಲವು ನಮ್ಮ ಪ್ರಮೇಯವೇ ಇಲ್ಲದೆ ಮೇಲಕ್ಕೆ ಪುಟಿದು ನೆನಪಿನಂಗಳಕ್ಕೆ ಬಂದು ಕುಣಿದಾಡುತ್ತಾ ನಮ್ಮನ್ನು ಕಾಡುತ್ತಿರುತ್ತವೆ. ಹಾಗೆ ಅವಶ್ಯಕತೆ ಇದ್ದು ಬರುವ ನೆನಪುಗಳು ನಮಗುಪಯುಕ್ತವಾಗಿರುತ್ತವೆ. ಆದರೆ ತಮ್ಮಷ್ಟಕ್ಕೆ ತಾವೇ ಬರುವ ನೆನಪುಗಳು ಅನಾವಶ್ಯಕವಾಗಿ ನಮ್ಮ ಮನಸ್ಸಿನ ಅಂಗಳವನ್ನು ಆಕ್ರಮಿಸಿ ಮನಃಶಾಂತಿಯನ್ನು ಕದಡುತ್ತಿರುತ್ತವೆ. ಅದರಿಂದ ಮುಕ್ತಿ ಪಡೆಯಲು ನಮ್ಮ ಪುರಾತನರು ಮತ್ತು ಸನಾತನರು ನಮಗೆ ಹಲವಾರು ಮಾರ್ಗಗಳನ್ನು ತೋರಿದ್ದಾರೆ.

ಯಾರೋ ತೋರಿದ ಪ್ರೀತಿ ಪ್ರೇಮ, ಯಾರೋ ನೀಡಿದ ಸವಿಯಾದ ಅನುಭವಗಳು ಮತ್ತು ಅದರಿಂದ ನಮಗಾದ ಸಂತೋಷ, ಯಾರೋ ನಮ್ಮ ಮೇಲೆ ತೋರಿದ ಕೋಪ, ದ್ವೇಷ, ಅಸೂಯೆ ಮತ್ತು ಅದರಿಂದ ನಮಗಾದ ತೊಂದರೆ, ನೋವು, ಸಂಕಟ, ಹೀಗೆ ಬೇರೆ ಬೇರೆ ಸಮಯಗಳಲ್ಲಿ ಬೇರೆ ಬೇರೆ ವ್ಯಕ್ತಿಗಳಿಂದಾದ ಸಾವಿರಾರು ಅನುಭವಗಳು ನೆನಪಿನ ರೂಪದಲ್ಲಿ ನಮ್ಮ ಮನಸ್ಸಿನ ಆಳದಲ್ಲಿ ಕುಳಿತಿರುತ್ತದೆ ಅಲ್ಲವೆ?  ಕೆಲವು ನಾವು ಬೇಕೆಂದಾಗ ಮನಃಪಟಲಕ್ಕೆ ಬಂದು ಕೂರುತ್ತವೆ, ಕೆಲವು ತಮ್ಮಷ್ಟಕ್ಕೆ ತಾವೇ ಬಂದು ಕುಣಿದಾಡುತ್ತಿರುತ್ತವೆ, ಮತ್ತೆ ಕೆಲವು ನಮ್ಮ ಪ್ರಮೇಯವೇ ಇಲ್ಲದೆ ಮೇಲಕ್ಕೆ ಪುಟಿದು ನೆನಪಿನಂಗಳಕ್ಕೆ ಬಂದು ಕುಣಿದಾಡುತ್ತಾ ನಮ್ಮನ್ನು ಕಾಡುತ್ತಿರುತ್ತವೆ. ಹಾಗೆ ಅವಶ್ಯಕತೆ ಇದ್ದು ಬರುವ ನೆನಪುಗಳು ನಮಗುಪಯುಕ್ತವಾಗಿರುತ್ತವೆ. ಆದರೆ ತಮ್ಮಷ್ಟಕ್ಕೆ ತಾವೇ ಬರುವ ನೆನಪುಗಳು ಅನಾವಶ್ಯಕವಾಗಿ ನಮ್ಮ ಮನಸ್ಸಿನ ಅಂಗಳವನ್ನು ಆಕ್ರಮಿಸಿ ಮನಃಶಾಂತಿಯನ್ನು ಕದಡುತ್ತಿರುತ್ತವೆ. ಅದರಿಂದ ಮುಕ್ತಿ ಪಡೆಯಲು ನಮ್ಮ ಪುರಾತನರು ಮತ್ತು ಸನಾತನರು ನಮಗೆ ಹಲವಾರು ಮಾರ್ಗಗಳನ್ನು ತೋರಿದ್ದಾರೆ.  


ನೆನಪುಗಳಿಂದ ಒಳಿತೂಉಂಟು ಮತ್ತು ಕೆಡುಕೂಉಂಟು. ಒಳಿತು ಹೇಗೆಂದರೆ, ಆ ನೆನಪುಗಳಿಂದ  ಹಿಂದೆ ನಾವು ಮಾಡಿದ ತಪ್ಪುಗಳನ್ನು ಮತ್ತೆ ಮಾಡದಂತೆ ನಮ್ಮನ್ನು ನಾವು ತಿದ್ದಿಕೊಳ್ಳಬಹುದು. ಕೆಡುಕು ಹೇಗೆಂದರೆ ಈ ನೆನಪುಗಳ ತೀವ್ರತೆ ಅಧಿಕವಾದರೆ ಅವು ನಮ್ಮ ಜೀವನದಲ್ಲಿ ಮುಂದಿನ ಹೆಜ್ಜೆ ಹಾಕಲು ತಡೆಯುವ ಕಡಿವಾಣದಂತೆ ಇರುತ್ತದೆ.

"ಗತಂ ನ ಶೋಚಿತವ್ಯಂ" ಎಂದು ಹೇಳಲ್ಪಟ್ಟಿದೆ. ಹಾಗಾಗಿ ಯಾವುದು ಬದಲಾಗುವುದಿಲ್ಲವೋ ಅದರಿಂದ ಬೇರೇನೂ ಪ್ರಯೊಜನವಿಲ್ಲವಾದ್ದರಿಂದ ಅದನ್ನು ಪ್ರಯತ್ನ ಪೂರ್ವಕವಾಗಿಯಾದರೂ ಮರೆಯುವುದೇ ಲೇಸು. ಇದಕ್ಕೆ ಮಾರ್ಗವೇನೆಂದರೆ, ನಮ್ಮನ್ನು ನಾವು ಸದಾಕಾಲ ಕ್ರಿಯಾತ್ಮಕವಾಗಿ ತೊಡಗಿಸಿಕೊಂಡರೆ, ನಮ್ಮ ನೆನಪುಗಳ ಸುಳಿಯಲ್ಲಿ ಸುತ್ತಲು ನಮಗೆ ಸಮಯವೇ ಇಲ್ಲದಂತಾಗಿ, ಆ ನೆನಪುಗಳು ಮಾಡುವ ಘಾಸಿಯಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು. ಭೂತದ ನೆನಪು ಮತ್ತು ವರ್ತಮಾನದ ವಿಷಯಗಳ ಮಧ್ಯೆ ಸಮನ್ವಯವನ್ನು ಕಾಪಾಡಿಕೊಳ್ಳುವುದೇ ಬುಧ್ಧಿವಂತಿಕೆ ಮತ್ತು ಜಾಣತನ. ಅಂತಹ ಸಮನ್ವಯಕ್ಕೆ ಪ್ರಯತ್ನಿಸಿ ನಾವು ಯಶಸ್ವನ್ನು ಪಡೆದರೆ ಅದೇ ಒಂದು 'ಸಾಧನೆ'ಯಾಗುತ್ತದೆ. ನಮ್ಮ ನಿರ್ಲಿಪ್ತತೆಯ ತೀವ್ರತೆ ಎಷ್ಟು ಹೆಚ್ಚಾದರೆ,  ನೆನಪುಗಳಿಂದಾಗುವ ನೋವು ಅಷ್ಟು ಕಡಿಮೆಯಾಗುತ್ತದೆ. 

ಓದುವುದು,  ಸಂಗೀತ ಕೇಳುವುದು,  ಧ್ಯಾನಮಾಡುವದು ಮುಂತಾದ ಯಾವುದಾದರೂ ಉಪಯುಕ್ತ ಕೆಲಸಗಳಲ್ಲಿ ನಮ್ಮನ್ನು ನಾವೇ ತೊಡಗಿಸಿಕೊಂಡು ನಮ್ಮನ್ನು ನಾವು ಸಕ್ರಿಯವಾಗಿರಿಸಿಕೊಂಡರೆ ಬಹುಶಃ ನಮಗೆ ಹಳೆಯ ವಿಚಾರಗಳನ್ನು ಯೋಚಿಸಲು ಸಮಯವಿಲ್ಲದೆ, ಹಳೆಯ ನೆನಪುಗಳು ಮಾಡಬಹುದಾದ ಘಾಸಿ ಅಥವಾ ಕೊಡಬಹುದಾದ ನೋವಿಂದ ನಾವು ಮುಕ್ತರಾಗಬಹುದು. ಇದು ಪ್ರಯತ್ನಪಟ್ಟರೆ ಎಲ್ಲರಿಗೂ ಸಾಧ್ಯವಾಗುತ್ತದೆ.   

 


" ನಾನು ಸರಿ - ಪರರು ತಪ್ಪು "



ನಾವು ಸದಾ ಕ್ರಿಯಾಶೀಲರಾಗಿರುತ್ತೇವೆ. ಏನೋ ಒಂದು ಕೆಲಸವನ್ನು ಸದಾಕಾಲ ಮಾಡುತ್ತಲೇ ಇರುತ್ತೇವೆ. ಕೇವಲ ಕೆಲವೇ ಬಾರಿ ನಾವು ಒಂದು ಕೆಲಸವನ್ನು ಪೂರ್ವ ಯೋಜನೆ ಮಾಡಿ, ಅದನ್ನು ಮಾಡುವ ಕ್ರಮವನ್ನು ಯೋಚಿಸಿ, ಹಾಗೆ ಯೋಜಿಸಿದ  ರೀತಿಯಲ್ಲಿ ಆ ಕೆಲಸವನ್ನು ಮಧ್ಯದಲ್ಲೇ ಕೈಬಿಡದೆ, ಮಾಡಿ ಮುಗಿಸುತ್ತೇವೆ. ಆದರೆ ಬಹಳಷ್ಟು ಬಾರಿ ನಾವು ಮಾಡುವ ಕೆಲಸಗಳನ್ನು ಕೇವಲ ಯಾಂತ್ರಿಕವಾಗಿ ಮಾಡುತ್ತಿರುತ್ತೇವೆ. ಹಾಗೆ ಮಾಡುವಾಗ ಅದರಿಂದ ಬರುವ ಫಲಡಾ ಲೆಕ್ಕಾಚಾರವನ್ನು ಮನಸ್ಸಿನಲ್ಲೇ ಹಾಕುತ್ತಾ, ನಾವು ಬಯಸಿದ ಫಲ ಸಿಕ್ಕರೆ ಹಮ್ಮಿನಿಂದ ಬೀಗುತ್ತಾ, ಸಿಗದಿದ್ದರೆ ನಮ್ಮ ವಿಧಿಯನ್ನೋ ಹಣೆಯ ಬರಹವನ್ನೂ ಅಥವಾ ನಮ್ಮ ವೈಫಲ್ಯಕ್ಕೆ ಅನ್ಯರನ್ನೋ ದೂಷಿಸುತ್ತಾ ಇರುತ್ತೇವೆ ಅಲ್ಲವೇ?

ಇನ್ನು ನಾವು ಮಾಡಿದ ಕೆಲಸದಿಂದ ಫಲರೂಪದಲ್ಲಿ ಏನನ್ನೋ ಪಡೆದುಕೊಳ್ಳುತ್ತೇವೆ. ಇದು ನಮ್ಮ ಶ್ರಮಕ್ಕೆ ಪರಮಾತ್ಮ ಕೊಟ್ಟ ಪ್ರಸಾದ ಎಂದು ಸ್ವೀಕರಿಸಿ ತೃಪ್ತರಾಗದೆ, ಕೈಲಿರುವುದನ್ನು ಬಿಟ್ಟು, ನಮಗೆ ಹಿತವಾವುದು, ಅಹಿತವಾವುದು ಎನ್ನುವ ಕಲ್ಪನೆಯೇ ಇಲ್ಲದೆ, ಮತ್ತೂ ಹೆಚ್ಚಿನದನ್ನು ಸಾಧಿಸುವ ಸಲುವಾಗಿ ಮತ್ತೆ ಮತ್ತೆ ಓಡುತ್ತೇವೆ. ಈ ಓಟದಲ್ಲಿ ಮತ್ತೂ ಏನನ್ನೋ ಸಾಧಿಸುವ ಭ್ರಮೆಯಲ್ಲಿ ಕೈಲಿರುವುದನ್ನು ತೃಪ್ತಿಯಿಂದ ಅನುಭವಿಸಿ ಸಂತಸಪಡಲು ಮರೆತೇ ಹೋಗುತ್ತೇವೆ. ಹೀಗೆಯೇ ನಮ್ಮ ಜೀವನವೂ ಅಂತ್ಯಗೊಳ್ಳುತ್ತದೆ.

ನಾವು ಮಾಡುವ ಕೆಲಸದಲ್ಲಿ ನಾವು ಸಫಲರಾದರೆ 'ನಾವೇ' ಸಾಧಿಸಿದ್ದೆಂದು ಅಹಂಕಾರದಿಂದ ಹೆಮ್ಮೆಪಡುತ್ತಾ ಬೀಗುತ್ತೇವೆ. ಹಲವರಲ್ಲಿ ನಮ್ಮ ಯಶಸ್ಸನ್ನು ಪ್ರದರ್ಶಿಸುತ್ತೇವೆ. ಆದರೆ ನಮ್ಮ ಪ್ರಯತ್ನದಲ್ಲಿ ನಾವು ಸೋತರೆ, ನಾವು ನಮ್ಮ ಸೋಲಿಗೆ ಕಾರಣಗಳನ್ನು ಹುಡುಕುತ್ತೇವೆ. ನಮ್ಮಲ್ಲಿರುವ ನ್ಯೂನತೆಗಳನ್ನು ಮತ್ತು ಪ್ರಯತ್ನದ ಕೊರತೆಯನ್ನು ಒಪ್ಪಿಕೊಳ್ಳದೆ, ಹೊರಗಿನ ಕಾರಣಗಳಿಂದಾಗಿ ನಾವು ಸೋತೆವೆಂದು ತೀರ್ಮಾನಿಸುತ್ತೇವೆ. 'ಅಯ್ಯೋ ದೇವರೆ' ಎಂದು ದೇವರನ್ನು ಹಳಿಯುತ್ತೇವೆ, 'ಹಣೆಬರಹ ' ಎಂದು ನಮ್ಮ ವಿಧಿಯನ್ನು ದೂಷಿತ್ತೇವೆ ಮತ್ತು ಅವರಿಂದ ಹೀಗಾಯ್ತು ಎಂದು ಅನ್ಯರ ಮೇಲೆ ಆರೋಪಮಾಡುತ್ತೇವೆ.  

ಅನ್ಯರ ಮೇಲೆ ಆರೋಪಮಾಡುವುದು ನಮಗಿರುವ ದೊಡ್ಡ ದುರಭ್ಯಾಸ.  ಸದಾಕಾಲ ನಾವು ಅನ್ಯರು ಮಾಡಿದ ಕೆಲಸಗಳನ್ನು ಟೀಕಿಸುತ್ತಲೇ ಇರುತ್ತೇವೆ. ಇದು 'ನಾನು ಸರಿ-ಪರರು ತಪ್ಪು' ಎನ್ನುವ ಅಹಂಕಾರಜನ್ಯವಾದ ಭಾವ. ಇದು ಸಾಮಾನ್ಯವಾಗಿ ಎಲ್ಲರಲ್ಲೂ, ಪ್ರಮಾಣ ಭೇಧವಿದ್ದರೂ ಇರುತ್ತದೆ. ಈ ಮನಃಸ್ಥಿತಿಯಲ್ಲಿ ನಮಗೆ ಯಾರನ್ನೂ ಅಭಿನಂದಿಸಲೂ ಆಗುವುದಿಲ್ಲ, ನಮಗೆ ನಾವೇ ಆನಂದದಿಂದಿರಲೂ ಆಗುವುದಿಲ್ಲ. ನಾವು ಯಾರನ್ನು ಟೀಕಿಸುತ್ತೇವೋ ಅವರು,  ನಮ್ಮ ಟೀಕೆಯ ಪರಿವೆ ಇಲ್ಲದೆ ತಮ್ಮಷ್ಟಕ್ಕೆ ತಾವು ನೆಮ್ಮದಿಯಿಂದ ಇರಬಹುದು. ಆದರೆ ನಾವು ಮಾತ್ರ ಅನ್ಯರ ತಪ್ಪುಗಳನ್ನು ಹುಡುಕುತ್ತಾ ಮತ್ತು ಪರರನ್ನು ಟೀಕಿಸುತ್ತಾ ನಮ್ಮ ಮನಸ್ಸನ್ನು ಕೆಡಿಸಿಕೊಂಡು ನಮ್ಮ ನೆಮ್ಮದಿಯನ್ನು ಕಳೆದು ಕೊಳ್ಳುತ್ತೇವೆ.

ನಾವು ಮಾಡುವುದೆಲ್ಲವೂ ಸರಿ. ನಾವು ಮಾಡುವ ಯೋಚನೆ ಮಾತ್ರ ಸರಿ. ಅದನ್ನೇ ಅನ್ಯರು ಮಾಡಿದರೆ ಅದರಲ್ಲಿ ಹುಳುಕ ಹುಡುಕುವ ದುರಭ್ಯಾಸ ನಮ್ಮದು. ಇದು ಏಕೆ ಹೀಗೆ? ಎಂದರೆ, ನಾವು,  ನಮ್ಮನ್ನೇ  ಅಧಿಕವಾಗಿ ಪ್ರೀತಿಸುತ್ತೇವೆ. ಹಾಗಾಗಿ ನಾವು ತಪ್ಪಾಗಿ ಕೆಲಸ ಅಥವಾ ಯೋಚನೆ ಮಾಡಿದ್ದರೂ ಅಥವಾ ಅನ್ಯರು ಸೂಕ್ತ  ಕೆಲಸ ಮತ್ತು ಆಲೋಚನೆ ಮಾಡಿದ್ದರೂ ಅದನ್ನು ಒಪ್ಪಿಕೊಳ್ಳುವ ಧೈರ್ಯ ಮತ್ತು ಮಾನಸಿಕ ಸಿದ್ಧತೆ ಇರುವುದಿಲ್ಲ. ಹಾಗಾಗಿ ನಾವು ಸದಾ ಕಾಲ 'ನಾನು ಸರಿ - ಅನ್ಯರು ತಪ್ಪು' ಎನ್ನುವ ಭಾವದಿಂದ ಇರುತ್ತೇವೆ.  ಇದು ಸರಿಯಲ್ಲ. ಏಕೆಂದರೆ ಅಂತಹ ಸ್ಥಿತಿಯಲ್ಲಿ ನಾವು ಸತ್ಯದಿಂದ ದೂರಾಗುತ್ತೇವೆ ಮತ್ತು ಆತ್ಮವಂಚನೆಗೆ ಸಾಕಷ್ಟು ಹತ್ತಿರವಾಗಿರುತ್ತೇವೆ. ಇಂತಹ ಸ್ಥಿತಿ ನಮ್ಮನ್ನು ಕಾಡುತ್ತದೆ ಮತ್ತು ಆತ್ಮವನ್ನು ತಿನ್ನುತ್ತದೆ.  

ಹಾಗಾಗಿ ನಾವು ನಮ್ಮ ಅಹಂಕಾರವನ್ನು ತೊರೆದು ಸತ್ಯವನ್ನು ಒಪ್ಪಿಕೊಳ್ಳುವ ಧೈರ್ಯವಂತರಾಗಬೇಕು. ನಮ್ಮಲ್ಲಿರುವ ಕೊರತೆಗಳನ್ನು ಮತ್ತು ಅನ್ಯರಲ್ಲಿರುವ ಒಳಿತನ್ನು ಗುರುತಿಸಿ ಒಪ್ಪಿಕೊಳ್ಳುವ ವಿಶಾಲ ಮನೋಭಾವವನ್ನು ಬೆಳೆಸಿಕೊಂಡರೆ, ನಮ್ಮ ನ್ಯೂನತೆಗಳನ್ನು ಒಪ್ಪಿಕೊಳ್ಳುವ ಮತ್ತು ಅವುಗಳನ್ನು ತಿದ್ದಿಕೊಳ್ಳುವ ಮನೋಭಾವ ನಮ್ಮದಾಗಿ ಮತ್ತು ಅನ್ಯರಲ್ಲಿರುವ ನ್ಯೂನತೆಗಳನ್ನು ಗೌಣವಾಗಿ ಕಂಡು, ಅವರಲ್ಲಿರುವ ಗುಣಗಳನ್ನು ಗುರುತಿಸುತ್ತ, ಒಂದು ರೀತಿಯ ಸಮಚಿತ್ತವನ್ನು ನಾವು ಬೆಳೆಸಿಕೊಂಡಾಗ, ನಮ್ಮಲ್ಲಿ ಬೇಧಗಳು ಅಳಿಸಿಹೋಗಿ, ದ್ವಂದ್ವಗಳು ನಾಶವಾಗಿ, ನಮ್ಮ  ಅಂತರಂಗದಲ್ಲಿ ಶಾಂತಿಯನ್ನು ಪಡೆಯಬಹುದು. 

Monday 13 November 2017

ಜೀವನದ ಕಲೆ


ಈ ಜಗತ್ತಿನಲ್ಲಿ ನಾವು ಹುಟ್ಟಿದಮೇಲೆ ಬದುಕಲೇ ಬೇಕು. ಅನ್ಯ ದಾರಿಯೇ ಇಲ್ಲ. ಆದರೆ ಆ ಬದುಕು ಸುಂದರವಾಗಿರಬೇಕು, ನಿರಾಳವಾಗಿರಬೇಕು ಮತ್ತು ಆನಂದವಾಗಿರಬೇಕು ಎನ್ನುವುದು ಹುಟ್ಟಿದ ಎಲ್ಲಾ ಪ್ರಾಣಿಯ ಬಯಕೆ. ಹಾಗೆ ಬದುಕುವುದು ಹೇಗೆ? ಅಥವಾ ಅಂತಹ ಬದುಕನ್ನು ರೂಪಿಸಿಕೊಳ್ಳುವುದು ಹೇಗೆ? ಎನ್ನುವುದೇ ಒಂದು ಭೃಹತ್ ಪ್ರಶ್ನೆ. ಬಹುತೇಕ ಬಾರಿ ಉತ್ತರವೇ ಸಿಗದ ಪ್ರಶ್ನೆ. ಬದುಕುವುದು ಒಂದು ಕಲೆ. ಆದರೆ ಆ ಕಲೆಯನ್ನು ಕಲಿಯುವುದೋ ಅಥವಾ ಕಲಿಸುವುದೋ ಹೇಗೆ? ಸಾವಿರಾರು ನಿಯಮಗಳನ್ನು, ಸೂತ್ರಗಳನ್ನುಯುಕ್ತಿಗಳನ್ನು, ನಮ್ಮ ಹಿರಿಯರ ಮತ್ತು ಪೂರ್ವಜರ ಬದುಕಿನ ಅನುಭವವನ್ನು ನಮಗೆ ಪಾಠ ಹೇಳಿ ಕೊಟ್ಟಂತೆ ಕಲಿಸಿದರೂ, ಅಂತರಂಗದ ಕುಶಲತೆ ಇಲ್ಲದಿದ್ದರೆ ಬದುಕಿನಲ್ಲಿ ಜಯವಿರುವುದಿಲ್ಲ. ಆ ಕುಶಲತೆಯ ವಿವರವನ್ನು ನಾವು ನಮ್ಮ 'ಅಂತರಂಗ' ದಲ್ಲೇ ಕಂಡುಕೊಂಡು ಬದುಕಿನ ಜಯಕ್ಕೆ ಒಂದು ಮಾರ್ಗವನ್ನು ಹುಡುಕಿಕೊಳ್ಳಬೇಕು. 

ಹುಟ್ಟಿದ ಎಲ್ಲರಿಗೂ ಒಂದು ಬದುಕುಂಟು. ಆದರೆ ಸುಮ್ಮನೆ ಬದುಕುವುದಕ್ಕೂ ಸಾರ್ಥಕತೆಯಿಂದ ಬದುಕುವುದಕ್ಕೂ ವ್ಯತ್ಯಾಸವಿದೆ. ಸಾರ್ಥಕತೆಯಿಂದ ಬದುಕುವುದು ಒಂದು ಕಲೆ, ಅದಕ್ಕೆ ಕುಶಲತೆ ಬೇಕು.  ಸಾರ್ಥಕತೆ ಎಂದರೆ ಏನು? ಎಂದರೆ, ಸಕಲ ಪ್ರಾಣಿಗಳಿಗೂ ಆನಂದವೇ ಬಾಳಿನ ಗುರಿ. ಹಾಗಾಗಿ  'ನಾವು ಆನಂದ ಪಡುವುದೋ, ನಾವು ಪಡೆದ ಆನಂದವನ್ನು ಅನ್ಯರಿಗೆ ಹಂಚುವುದೋ, ಅನ್ಯರ ಆನಂದಕ್ಕೆ ಕಾರಣರಾಗುವುದೋ ಅಥವಾ ಅನ್ಯರ ಆನಂದಕ್ಕೆ ಧಕ್ಕೆಯಾಗದಂತೆ ಬದುಕುವುದೋ ಆದರೆ, ಅಂತಹ ಬದುಕನ್ನು ಸಾರ್ಥಕ ಬದುಕೆನ್ನಬಹುದುಎನ್ನುವುದು ಸಾಮಾನ್ಯ ಪರಿಭಾಷೆ. 'ಹೇಗೆ ಜೀವಿಸಬೇಕು?'   ಎಂದು ನಮಗೆ  ನಾನಾ ವಿಧಾನಗಳನ್ನು ಬೋಧಿಸುವ, ಹಾದಿಗಳನ್ನು ತೋರುವ, ವೇದ, ಉಪನಿಷತ್ತು, ಪುರಾಣ, ನೀತಿ ಕಥೆಗಳ ಸಾಹಿತ್ಯ ನಮ್ಮಲ್ಲಿ ಹೇರಳವಾಗಿ ಲಭ್ಯವಿದೆ. ಇವೆಲ್ಲಾ ನಮಗೆ ಹೊರಗಿನಿಂದ ಸಿಗುವ ಪುಸ್ತಕಗಳ ವಿಚಾರಗಳು. ಮನಸ್ಸು ದೇಹ ಬುದ್ಧಿಗೆ ಸಂಬಂಧಪಟ್ಟ ವಿಚಾರಗಳು.  

ಹೊರಗಿನಿಂದ ಎಷ್ಟೇ ವಿಚಾರಗಳು ಬಂದರೂ, ಅದರ ಸಾರ ಅಂತರಂಗಕ್ಕೆ ಸತ್ವವಾಗಿ ಇಳಿಯದೇ ಇದ್ದರೆ, ಎಷ್ಟು ಓದಿದರೂ, ಎಷ್ಟು ಕೇಳಿದರೂ ಎಲ್ಲವೂ ವ್ಯರ್ಥ. ವಿಚಾರವು ಹರಿದು ಬಂದು, ಅದರ ಸಾರ ಸತ್ವವಾಗಿ ನಮ್ಮೊಳಗೆ ಇಳಿಯಬೇಕಾದರೆ ನಮ್ಮೊಳಗೆ ವಿಚಾರಗಳ ಮಂಥನವಾಗಬೇಕು. ಅದರಿಂದ ಹೊರಹೊಮ್ಮುವ ಶುದ್ಧಸತ್ವವನ್ನು ನಮ್ಮ ಸ್ವಭಾವವನ್ನಾಗಿಸಿ -ಕೊಳ್ಳಬೇಕು. ಅಂತಹ ಶುದ್ಧ ಸತ್ವ, ನಮ್ಮ ಅಂತರಂಗದಲ್ಲಿ ಆತ್ಮದೊಡನೆ ಅನುಸಂಧಾನಗೊಂಡಾಗ ನಮಗೆ ಬದುಕಿನ ಪರಮ ಗುರಿಯಾದ ಆನಂದವನ್ನು ಸಾಧಿಸುವ, ನಮ್ಮದಾಗಿಸಿಕೊಳ್ಳುವ ಮತ್ತು ಅನ್ಯರಿಗೆ ಹಂಚುವ ಕುಶಲತೆಯನ್ನು ಕಲಿಸಿಕೊಡುತ್ತದೆ. ಅಂತಹ ಕುಶಲತೆ ಸಂಪೂರ್ಣವಾಗಿ ನಮ್ಮ ಸ್ವಭಾವವಾಗಿಬಿಟ್ಟರೆ, ನಾವು ಪುರುಷೋತ್ತಮರಾಗಿಬಿಡುತ್ತೇವೆ.

ಅಂತಃಸತ್ವವನ್ನು ಬೆಳೆಸಿಕೊಳ್ಳಲು ಸಾಧನೆ ಬೇಕು. ಆ ಸಾಧನೆ ಹಂತಹಂತವಾಗಿ ಆಗಬೇಕು. ತೈತ್ತರೀಯೋಪನಿಷತ್ತಿನ ಭೃಗುವಲ್ಲಿಯಲ್ಲಿ ಭೃಗುಮಹರ್ಷಿಯ ಮಗ ವಾರುಣಿ ತನ್ನ ತಂದೆಯ ಬಳಿ ಬಂದು ' ನಾನು ಬ್ರಹ್ಮವನ್ನು ಅರಿಯಬೇಕೆಂದರೆ ಏನು ಮಾಡಬೇಕು' ಎಂದು ಕೇಳುತ್ತಾನೆ. ಅದಕ್ಕೆ ಅವನ ತಂದೆ 'ತಪಸ್ಸಿನಿಂದ ಬ್ರಹ್ಮನನ್ನು ಅರಿತುಕೊ' ಎಂದು ಆದೇಶ ನೀಡುತ್ತಾನೆ. ಆಗ ವಾರುಣಿ ತಪಸ್ಸು ಮಾಡಲು ಉಪಕ್ರಮಿಸಿ ಧೀರ್ಘಕಾಲದ ತಸಸ್ಸಿನಿಂದ 'ಆನಂದೋ ಬ್ರಹ್ಮೇತಿವ್ಯಜಾನಾತ್' ಎಂದು ಆನಂದವೇ ಬ್ರಹ್ಮ ಎಂದು ಅರಿಯುವುದಕ್ಕೆ ಮುನ್ನ, ತಪಸ್ಸಿನ ಮಾರ್ಗದಿಂದ, ’ಅನ್ನ, ಪ್ರಾಣ, ಮನಸ್ಸು ಮತ್ತು ವಿಜ್ಞಾನಗಳನ್ನೆಲ್ಲ ಅನುಸಂಧಾನಮಾಡಿ ಮೊದಮೊದಲಿಗೆ ಅವುಗಳನ್ನೇ ಆನಂದವೆಂದರಿತು ಹಂತ ಹಂತವಾಗಿ ತನ್ನ ತಪಸ್ಸನ್ನು ಮುಂದುವರೆಸಿ ಕಟ್ಟ ಕಡೆಗೆ  "ಆನಂದವೇ ಬ್ರಹ್ಮವೆಂದರಿತೆ"  ಎನ್ನುತ್ತಾನೆ. ಅವನು ಕಂಡುಕೊಂಡಂತಹ ಆನಂದಜಗತ್ತಿನ ವಸ್ತು, ವಿಷಯ ಅಥವಾ ವ್ಯಕ್ತಿಗಳೊಂದಿಗಿನ 'ಅಂಟಿ'ನಿಂದಲ್ಲದೆ, ಜಗತ್ಕಾರಕನ 'ನಂಟಿ' ನಿಂದ ಸಿಗುತ್ತದೆ. 

ಹಾಗೆ ನಾವೂ ಸಹ ಪ್ರಾಪಂಚಿಕ ವಿಷಯಗಳಲ್ಲದೆ ಜಗತ್ಕಾರಕನ ಅನುಸಂಧಾನದಿಂದ ಆನಂದದಿಂದ ಬದುಕುವುದು ಎಂದು ಅರಿತಾಗ, 'ಆನಂದ' ಎಂದರೆ ಪರಬ್ರಹ್ಮನಲ್ಲಿ ನಿರತನಾಗಿ ಇರುವುದು ಎಂದು ಅರ್ಥವಾಗುತ್ತದೆ. ಅಂತಹ ಆನಂದದಿಂದ ಬದುಕುವುದೇ ಜೀವನದ ಕಲೆ. ಅಂತಹ ಕುಶಲತೆಯನ್ನು ನಾವು ಅಂತರಂಗದ ಮಂಥನದಿಂದ ನಮ್ಮದಾಗಿಸಿಕೊಂಡು ಬದುಕಿದರೆ ಅದೇ ಸಾರ್ಥಕ ಬದುಕು.


ಅಸಿಧಾರಾ ವ್ರತ



ಈ ಭುವಿಯ ಜೀವನಕ್ಕೆ ನಾವು ಬಂದ ಮೇಲೆ ಬದುಕಲೇ ಬೇಕು. ವಯಸ್ಕರಾಗಿ ಸಂಸಾರವನ್ನು ಕಟ್ಟಿಕೊಂಡಮೇಲೆ ಅನ್ಯರ ಬದುಕಿನ ಹೊಣೆಯನ್ನೂ ಹೊರಬೇಕು. ಹೆಂಡತಿ ಮಕ್ಕಳು,  ತಂದೆ ತಾಯಿಯರು, ಹೀಗೆ ನಮ್ಮ ಮೇಲೆ ಆಧಾರಪಟ್ಟಿರುವವರ ಹೊಣೆಯನ್ನು ಹೊರಲೇ ಬೇಕು. ಬದುಕಿನ ಜಂಜಡವನ್ನು ನಿಭಾಯಿಸುವಾಗ ಹಲವಾರು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಎಲ್ಲವೂ ಸಮರ್ಪಕವಾಗಿದ್ದರೆ ಬದುಕುವುದು ಸುಲಭ. ಆದರೆ ಹಾಗೆ ಎಲ್ಲರಿಗೂ ಇರುವುದಿಲ್ಲವಲ್ಲ. ಕಷ್ಟಗಳ ಸರಮಾಲೆಯನ್ನು ಧರಿಸಿಯೇ ಬದುಕಬೇಕಾದವರಿಗೆ ಜೀವನ ನಿರ್ವಹಣೆ ದುರ್ಭರವಾಗಿ ತೋರುತ್ತದೆ.  

ಜೀವನ ನಿರ್ವಹಣೆಯೇ ಒಂದು ವ್ರತ. ನಮ್ಮ ಪೂರ್ವಜರು ಅದನ್ನು ' ಅಸಿಧಾರಾ ವ್ರತ ' ಎಂದು ಸೂಕ್ತವಾಗಿ ಕರೆದಿದ್ದಾರೆ. ಅರ್ಥಾತ್ಕತ್ತಿಯ ಅಲುಗಿನ ಮೇಲಿನ ನಡೆಯಂತಹ ವ್ರತ.  ಆ ವ್ರತ ಬಹಳ ಕಷ್ಟತರವಾದ ವ್ರತ. ಈ ವ್ರತ ಸಮರ್ಪಕವಾಗಿ ಆಗಬೇಕಾದರೆ ಎಲ್ಲವೂ ಸಮರ್ಪಕವಾಗಿರಬೇಕು. ಅಂತರಂಗದ ಅಂಗಗಳು ಮತ್ತು ಬಾಹ್ಯ ಅಂಗಗಳು ಎಲ್ಲವನ್ನೂ ಸಮತೆಯಿಂದ ಸಾಧಿಸಿದರೆ ನಿರ್ವಹಣೆ ಸೂಕ್ತವಾಗಬಹುದು. ಅದಕ್ಕೆ ಮೂರು ವಿಧಾನಗಳಿವೆ 

ಒಂದು 'ಶಮ'. ಶಮವೆಂದರೆ ಶಮನಮಾಡುವುದು ಎಂದು ಅರ್ಥ. ಅಂತರಂಗದ ಅಂಗಗಳಾದ ಮನಸ್ಸು ಬುದ್ಧಿಗಳನ್ನು,  ಅಂತರಂಗದ ಪ್ರಯತ್ನದಿಂದಲೇ ಶಾಂತಗೊಳಿಸಿ ನಮ್ಮ ಹಾದಿಗೆ ತಂದುಕೊಳ್ಳಬೇಕು. ಎರಡನೆಯದು 'ದಮ' ಎಂದರೆ ದಮನಮಾಡುವುದು ಎಂದು ಅರ್ಥ. ಅಂತರಂಗದ ಅಂಗಗಳು ಹೇಗೆ ಹತ್ತು ಕಡೆ ಹರಿದು ನಮ್ಮನ್ನು ಕಂಗಾಲಾಗಿಸುತ್ತವೆಯೋ ಅದೇ ರೀತಿ ಇಂದ್ರಿಯಾನುಸಂಧಿತವಾದ ಬಾಹ್ಯ ಅಂಗಗಳೂ ನಮ್ಮ ಒಳಕ್ಕೆ ನುಗ್ಗಿ ನಮ್ಮನ್ನು ಕಂಗಾಲಾಗಿಸಿ ತಮ್ಮ ಪ್ರಾಬಲ್ಯ ತೋರಿ  ನಮ್ಮನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತವೆ. ಇವುಗಳನ್ನು ಪ್ರಯತ್ನಪೂರ್ವಕವಾಗಿ ದಮನಗೊಳಿಸಬೇಕು. ಮೂರನೆಯದು ಇವೆರಡರ ನಡುವೆ ಒಂದು ಸಮನ್ವಯವನ್ನು, ಸಮತೆಯನ್ನು ಕಂಡುಕೊಳ್ಳುವುದು. ಹೀಗೆ ಬಾಹ್ಯಾಂತರಂಗಗಳಲ್ಲಿನ ಅಂಗಾಗಗಳೆಲ್ಲಾ ಶಾಂತವಾದಾಗ, ಮನಸ್ಸು ಬುದ್ಧಿಗಳು ಸಂಪೂರ್ಣ ಶಾಂತವಾದಾಗ ಗೃಹ ನಿರ್ವಹಣೆ ಸುಲಭವಾಗುತ್ತದೆ ಮತ್ತು ಸಮರ್ಪಕವಾಗುತ್ತದೆ. ಇದನ್ನು ಸಾಧಿಸುವುದೇ ಒಂದು ವ್ರತ ಅಥವಾ ತಪಸ್ಸು.  
  
ಅಂತಹ ತಪಸ್ಸನ್ನು ಮಾಡಲು ಕಾವಿ ಬಟ್ಟೆಗಳನ್ನು ಧರಿಸಿ ಕಾಡಿಹೋಗಬೇಕಾಗಿಲ್ಲ. ಸಂಸಾರ ನಿರ್ವಹಣೆಯೂ ತಪಸ್ಸಾಗುವುದಿಲ್ಲವೇನು? ತಪಸ್ವಿಯ ವೇಷವನ್ನು ಧರಿಸದಿದ್ದರೂ ಗೃಹ ನಿರ್ವಹಣೆ ಮಾಡುವುದೂ ಸಹ ಒಂದು ತಪಸ್ಸು ಮತ್ತು ಅದು ಕಾಡಿನಲ್ಲಿ ಕುಳಿತು ತಪಸ್ಸು ಮಾಡುವುದಕ್ಕಿಯಿಂತಲೂ ಕಠಿಣವಾದ ತಪಸ್ಸು.

ಯಾವ ಸಮಸ್ಯೆಯೂ ಇಲ್ಲದೆ ಕಾಡಿನಲ್ಲಿ ಕುಳಿತುಕೊಂಡು ತಪಸ್ಸನ್ನು ಮಾಡುವುದಕ್ಕಿಂತಲೂ ಎಲ್ಲ ತಾಪತ್ರಯಗಳ ನಡುವೆಯೂ, ವಿಚಲಿತರಾಗದೆ ಸಂಸಾರ ನಿರ್ವಹಣೆಯನ್ನು ಒಂದು ಕರ್ತವ್ಯವೆಂಬಂತೆ ಸಮರ್ಪಕವಾಗಿ ನಿಭಾಯಿಸುವುದೂ ಸಹ ಒಂದು ಮಹಾ ತಪಸ್ಸೆಂದರೆ ತಪ್ಪಾಗಲಾರದು. 

ತಪಸ್ಸು ಮಾಡಲು ಕಾಡಿಗೆ ಹೋಗಬೇಕಾಗಿಲ್ಲ, ಕಾಷಾಯ ತೊಡಲೂ ಬೇಕಾಗಿಲ್ಲ. ಶಮ ಮತ್ತು  ದಮಗಳ ಮೂಲಕ ಸಮತೆ ಮತ್ತು ಸಮರ್ಪಕತೆಯನ್ನು ಸಾಧಿಸಿ ಜೀವನ ಅಥವಾ ಸಂಸಾರ ನಿರ್ವಹಣೆಯನ್ನು ಮಾಡಿದರೆ ಅದೇ ಒಂದು ದೊಡ್ಡ ತಪಸ್ಸು. ಯಾವುದೇ ಉನ್ನತ ಶಾಸ್ತ್ರಗಳ ಅಭ್ಯಾಸವನ್ನು ಮಾಡದೆ ಇದ್ದರೂ ಸಂಸಾರದಲ್ಲಿ ಇದ್ದರೂ ಸನ್ಯಾಸಿಗಳಂತೆ ಅಥವಾ ತಪಸ್ವಿಗಳಂತೆ ಜೀವಿಸಿದ ಮತ್ತು ಇಂದಿಗೂ ಜೀವಿಸುತ್ತಿರುವ ಬಹಳ ಜನರು ನಮ್ಮ ಸಂಪರ್ಕಕ್ಕೆ ಬರುತ್ತಾರೆ.

ಎಲ್ಲವೂ ಇದ್ದು ಯಾವುದಕ್ಕೂ ಅಂಟದೆ ಏನೂ ಇಲ್ಲದವರಂತೆ ಬದುಕುವುದು ಬಹಳ ಕಷ್ಟ. ಹಾಗೆ ಬದುಕಲು ನಿರಂತರ ಪ್ರಯತ್ನ ಬೇಕು, ಅಂತರಂಗ ಮತ್ತು ಬಹಿರಂಗದ ಶುದ್ಧತೆ ಬೇಕು, ಅಭ್ಯಾಸ ಬೇಕು. ವಿರಕ್ತರಲ್ಲದೇ ಇದ್ದರೂ ರಕ್ತಿಯಿಲ್ಲದೆ ಇರುವವರು ಇದ್ದಾರಲ್ಲವೇ? ಇದ್ದೂ ಇಲ್ಲದ ಹಾಗೆ, ಅಂಟಿಯೂ ಅಂಟದ ಹಾಗೆ 'ಪದ್ಮಪತ್ರಮಿವಾಂಭಸಿ' ಎಂದು ಶ್ರೀ ಕೃಷ್ಣ ಗೀತೆಯಲ್ಲಿ ಹೇಳುವಂತೆ ಬದುಕಿದರೆ ಮತ್ತು ಅಂತಹ ಗುಣಗಳನ್ನು ನಾವೂ ಅಳವಡಿಸಿಕೊಂಡರೆ ಸಮರ್ಪಕ ಗೃಹ ನಿರ್ವಹಣೆಗೆ ಸೂಕ್ತ ಸಾಧನವಾಗಬಹುದು. ಪ್ರಯತ್ನಿಸಿದರೆ ಮಾತ್ರ ಇದು ಎಲ್ಲರಿಗೂ ಸಾಧ್ಯ. 


ಜಿತೇಂದ್ರಿಯರಾರು ?


ಜಿತೇಂದ್ರಿಯ ಎನ್ನುವ ಪದವನ್ನು ನಾವು ಬಹಳ ಜನರು ಬಳಸುವುದನ್ನು ನೋಡಿದ್ದೇವೆ ಅಲ್ಲವೇ? ಹಾಗೆಂದೆರೆತನ್ನ ಇಂದ್ರಿಯಗಳನ್ನು ಗೆದ್ದವನು ಎಂದು ಅರ್ಥ.  ಪಂಚ ಭೂತಗಳೆಂದರೆ ಆಕಾಶ, ವಾಯು, ಅಗ್ನಿ, ನೀರು ಮತ್ತು ಭೂಮಿ. ಕ್ರಮವಾಗಿ ಇವುಗಳ ಗುಣಗಳು, ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳು. ಈ ಜಗತ್ತಿನಲ್ಲಿ ಜನಿಸಿದ ಪ್ರತೀ ಪ್ರಾಣಿಯೂ ತನ್ನ ಪಂಚೇಂದ್ರಿಯಗಳಾದ, ಕಿವಿ, ತ್ವಚೆ, ಕಣ್ಣು, ನಾಲಗೆ ಮತ್ತು ಮೂಗಿನಿಂದ ಈ ಪಂಚಭೂತಗಳ ಗುಣಗಳನ್ನು ತನ್ನೊಳಕ್ಕೆ ಇಳಿಸಿಕೊಳ್ಳುವುದರಿಂದಲೇ,  ಅದು ಜಗತ್ತನ್ನು ಅರಿಯುತ್ತದೆ ಮತ್ತು ಇಲ್ಲಿ ಬಾಳುತ್ತದೆ.

ಹುಟ್ಟಿದಾರಭ್ಯ ಈ ಎಲ್ಲಾ ಗುಣಗಳನ್ನೂ ಜೀವಿ ಅನುಭವಿಸುತ್ತಾ ತನ್ನ ಅವಶ್ಯಕತೆಗಳನ್ನು ಅರಿಯುತ್ತಾಬೇಕು-ಬೇಡಗಳ, ಇಷ್ಟ- ಅನಿಷ್ಟಗಳ, ಒಳಿತು ಕೆಡುಕುಗಳನ್ನು ಅರಿಯುತ್ತದೆ ಮತ್ತು ಅವುಗಳೊಂದಿಗೆ ಬದುಕುತ್ತದೆ. ಹಾಗೆ ಬದುಕುವಾಗ ಈ ಜಗತ್ತಿನ ಅಂಟನ್ನು ಅಂಟಿಸಿಕೊಂಡು ಸುಖ, ಸಂತೋಷ ಮತ್ತು ಆನಂದ ಅಥವಾ ದುಃಖ, ನೋವು ಮತ್ತು ಹಿಂಸೆಗಳಂತಹ ಭಾವಗಳನ್ನು ಅನುಭವಿಸುತ್ತದೆ.  ಈ ಎಲ್ಲಾ ಭಾವಗಳೂ ಒಂದು ಜೀವಿಗೆ ಕೇವಲ ಅದರ ಇಂದ್ರಿಯಗಳಿಂದಲೇ ಉಂಟಾಗುತ್ತದೆ. ಇದರಿಂದ ಯಾವ ಜೀವಿಗೂ ಮುಕ್ತಿಯಿಲ್ಲ. ಆದರೆ ಮಾನವನಿಗೆ ಮಾತ್ರಪರಮಾತ್ಮ ತನ್ನ ಭಾವಗಳನ್ನು ಅರಿಯುವ, ವಿಶ್ಲೇಷಿಸುವ ಮತ್ತು ತನ್ನನ್ನು ತಾನು ಸುಧಾರಿಸಿಕೊಳ್ಳುವ ಕ್ಷಮತೆಯನ್ನಿತ್ತಿದ್ದಾನೆ. ಇದನ್ನೇ ಇಂದ್ರಿಯ ನಿಗ್ರಹವೆನ್ನುವುದು. ಯಾವ ವ್ಯಕ್ತಿ ಈ ಜಗತ್ತಿನ ಸಂಸರ್ಗದಲ್ಲಿ ಇದ್ದೂ ಈ ಇಂದ್ರಿಯಗಳ ಪ್ರಭಾವಕ್ಕೆ ಒಳಗಾಗದೆ ಇದ್ದರೆ ಅವನನ್ನು 'ಜಿತೇಂದ್ರಿಯ' ಎನ್ನಬಹುದು. ಆದರೆ ಅಂತಹ ಸ್ಥಿತಿಗೆ ತಲುಪಲು ಜನ್ಮಜನ್ಮಾಂತರದ ಸಂಸ್ಕಾರವಾಗಬೇಕು. ಯುಗ ಯುಗಾಂತರದಲ್ಲಿ,  ಹಾಗೆ ಜನ್ಮದಿಂದಲೇ ಎಲ್ಲ ಇಂದ್ರಿಯ ಆಸೆಗಳೂ ಸುಟ್ಟಿರುವ ವ್ಯಕ್ತಿಗಳು ಯಾರಾದರೂ ಸಿಗುತ್ತಾರೇನುಎಂದು ನೋಡಿದರೆಸಾಧ್ಯವೇ ಇಲ್ಲ. 

ಹಾಗಲ್ಲದವರಲ್ಲಿ "ಇವನು ಜಿತೇಂದ್ರಿಯನೋ ಅಲ್ಲವೋ" ಎಂದು ಪರೀಕ್ಷೆಗೆ ಒಳಪಡುವವರಾರುಹಾಗೆ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದರೆಯಾರಿಗೋ ಹಸಿವಿಲ್ಲ ಹಾಗಾಗಿ ಊಟ ಕಡಿಮೆಯಾರಿಗೋ ಹೊಟ್ಟೆಯಲ್ಲಿ ಹುಣ್ಣು ಹಾಗಾಗಿ ಊಟ ಸೇರುವುದಿಲ್ಲ. ಹೀಗೆ ಬೇರೆ ಯಾವುದಾವುದೋ ಕಾರಣಕ್ಕೆ ಅವರುಗಳ ಇಂದ್ರಿಯಗಳು ಸತ್ತಂತೆ ಇದ್ದರೆ. ಅವರನ್ನು ಜಿತೇಂದ್ರಿಯರೆನ್ನಲಾಗುತ್ತದೆಯೇ?  ಮಾತನಾಡಲಾಗದೆ ಮೌನವಾಗಿರುವ ಮೂಗನನ್ನು ಮೌನವ್ರತ ಮಾಡುತ್ತಿದ್ದಾನೆ ಎನ್ನಲಾಗುವುದೇಎಲ್ಲ ಉಪಕರಣಗಳೂಇಂದ್ರಿಯಗಳೂ ಸರಿಯಾಗಿರುವಾಗ ಅವುಗಳ ಮೂಲಕ ಉಂಟಾಗುವ ಆಸೆಗಳು ನಮ್ಮ ಮೇಲೆ ಪ್ರಭಾವ ಭೀರದಂತೆಮತ್ತು ನಾವು ಆಸೆ ಪಡದ ರೀತಿ ನಮ್ಮನ್ನು ನಾವು ರೂಪಿಸಿಕೊಳ್ಳಲಾದರೆ ಅದು ಸಾಧನೆ. ಅದಕ್ಕೆ ನೂರಾರು ಮಾರ್ಗಗಳು ಸೂಚಿಸಿದ್ದಾರೆ ಜ್ಞಾನಿಗಳು. ಆ ಮಾರ್ಗಗಳಲ್ಲಿ ನಮ್ಮ ಜೀವನದ ಪಯಣ ಸಾಗಿ ನಾವೂ ಸಹ ಮೃತೇಂದ್ರಿಯರಲ್ಲದಿದ್ದರೂಜಿತೇಂದ್ರಿಯರಾಗುವ ಪ್ರಯತ್ನಪಡಬಹುದು. 

ಹಾಗಾದರೆ ಈ ಜಗತ್ತಿನ ಮಾಯಾಪೂರಿತ ಅನುಭವಗಳನ್ನು ತನ್ನೊಳಕ್ಕೆ ಇಳಿಸಿಕೊಳ್ಳದೆ 'ಇದ್ದೂ ಇಲ್ಲದಂತೆ'  ಸಕಲ ಭಾವಗಳಿಂದ ಮುಕ್ತನಾಗಿ ಜೀವಿಸಬಹುದು. ಆ ಸ್ಥಿತಿಗೆ ತಲುಪಲು ಸಾಧನೆ ಅವಶ್ಯಕ. ಅದಕ್ಕೆ ಬೇರೆ ಬೇರೆ ಮಾರ್ಗಗಳಿವೆ. ಸತ್ಸಂಗ, ಸದಾಚಾರ ಮತ್ತು ಸದ್ವಿಚಾರಗಳು ಅವುಗಳಲ್ಲಿ ಬಹಳ ಮುಖ್ಯವಾದದ್ದು. ನಿರಂತರವಾಗಿ ಅವುಗಳನ್ನು ಪಾಲಿಸಿದರೆ ಒಂದಲ್ಲ ಒಂದು ದಿನ ಅಥವಾ ಮುಂದಿನ ಯಾವುದಾದರೂ ಒಂದು ಜನ್ಮದಲ್ಲಿ  'ಜಿತೇಂದ್ರಿಯ'  ರಾಗಿ ಜಗತ್ತಿನ ಅಂಟಿನಿಂದ ಮುಕ್ತಿ ಪಡೆದು 'ನಿತ್ಯಾನಂದ'   ಸ್ಥಿತಿಗೆ ತಲುಪಬಹುದು. ಯಾರಷ್ಟು ಪ್ರಯತ್ನ ಪಟ್ಟರೆ ಅವರಿಗಷ್ಟು ಲಾಭ.  


ಕಷ್ಟ - ಪರಿಹಾರೋಪಾಯ





ಕಷ್ಟ ಮತ್ತು ಸುಖ ಎನ್ನುವುದು ಜಗತ್ತಿನಲ್ಲಿ  ಮನುಷ್ಯರಿಗಷ್ಟೇ ಎಲ್ಲ.  ಪ್ರಾಣಿಪಕ್ಷಿಕ್ರಿಮಿಕೀಟಗಿಡ ಮರಗಳಿಗೂ ಒಂದಲ್ಲ ಒಂದು ರೀತಿಯ ಕಷ್ಟಗಳಿದ್ದೇ ಇರುತ್ತದೆ. ಕೆಲವರಿಗೆ ಹೇಳಿಕೊಳ್ಳಲಾಗುತ್ತದೆ,  ಹಲವರಿಗೆ ಆಗುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕಷ್ಟಗಳು. ಪ್ರತಿಯೊಬ್ಬರ ಕಷ್ಟದ ಕಾರಣ ಮತ್ತು ಅದರಿಂದಾಗುವ ಅನುಭವಗಳು ಭಿನ್ನಭಿನ್ನವಾಗಿರುತ್ತವೆ. ಅದರಿಂದ ಯಾರಿಗೂ ಮುಕ್ತಿಯೇ ಇಲ್ಲ. ಆದರೆ ಮನುಷ್ಯರಿಗೆ ಮತ್ತು ಕೆಲಪ್ರಾಣಿಗಳಿಗೆ ತಮ್ಮ ಕಷ್ಟಗಳನ್ನು ನೀಗಿಕೊಳ್ಳುವ ಕ್ಷಮತೆಯನ್ನು ಪರಮಾತ್ಮ ಕರುಣಿಸಿದ್ದಾನಾದ್ದರಿಂದ ಅವರ ಅನುಭವಗಳು ಅನ್ಯ ಪ್ರಾಣಿಗಳ ಅನುಭವಕ್ಕಿಂತ ಭಿನ್ನವಾಗಿರುತ್ತದೆ. ಕೆಲವರುಆ ಕಷ್ಟಗಳನ್ನು ಪರಿಹರಿಸಿಕೊಳ್ಳಲು ಆಗದೆಬೇರೆ ದಾರಿಯಿಲ್ಲದೆ  ತಾಳ್ಮೆಯಿಂದ ಅನುಭವಿಸುತ್ತಾ ಜೀವನವನ್ನು ಕಳೆದುಬಿಡುತ್ತಾರೆ.  ಕೆಲವರು ಬಹಳ ಕಷ್ಟಪಟ್ಟು ನೊಂದು ಬೆಂದು ಅನುಭವಿಸುತ್ತಾರೆ. ಕೆಲವರು ಸಂತೋಷದಿಂದ ಅನುಭವಿಸಿ ಆ ಕಷ್ಟಗಳನ್ನು ನೀಗಿಕೊಳ್ಳುತ್ತಾರೆ. 

ಈ ಜಗತ್ತಿನಲ್ಲಿ ಕಷ್ಟವಿಲ್ಲದವರಾರು? ಬಯಕೆಗಳಿರುವ ತನಕ ಕಷ್ಟಗಳು ಇದ್ದೇ ಇರುತ್ತವೆ. ಅವರವರ ಕಷ್ಟ ಅವರಿಗೆ. ಕೆಲವರಿಗೆ ದೊಡ್ಡದು, ಕೆಲವರಿಗೆ ಸಣ್ಣದು. ದೊಡ್ಡ ಕಷ್ಟಬಂದ ಕೆಲವರು ಅದನ್ನು ಸಣ್ಣದೆಂದುಕೊಳ್ಳಬಹುದು ಅಥವಾ ತೀರ ಸಣ್ಣ ಕಷ್ಟವೇ ಕೆಲವರಿಗೆ ತಲೆಯಮೇಲೆ ಬೆಟ್ಟ ಬಿದ್ದಂತಾಗಬಹುದು.  ಯಾವ ವಸ್ತುವಿಗೆ ನಾವು ಅಂಟಿಕೊಂಡಿರುತ್ತೇವೆಯೋ ಆ ವಸ್ತುವಿನಿಂದ ನಾವು ದೂರಾಗಬೇಕಾದ ಸಂದರ್ಭ ಬಂದಾಗ ನಮಗೆ ಕಷ್ಟಎನಿಸುತ್ತದೆ. ವಸ್ತು, ವಿಷಯ ಮತ್ತು ವ್ಯಕ್ತಿಗಳಿಗೆ ನಾವೆಷ್ಟು ಗಾಢವಾಗಿ ಅಂಟಿಕೊಂಡಿರುತ್ತೇವೆಯೋ ನಮ್ಮ ನೋವು ಸಂಕಟ ಮತ್ತು ಕಷ್ಟ ಅಷ್ಟೇ ತೀವ್ರವಾಗಿರುತ್ತದೆ. ನಮಗಿಂತ ಹೆಚ್ಚು ಕಷ್ಟಪಡುವವನನ್ನು ಕಂಡು ನಮ್ಮ ಸ್ಥಿತಿ ಅವನಿಗಿಂತ ಉತ್ತಮವಾಗಿದೆಎಂದು ಸಮಾದಾನಪಟ್ಟುಕೊಳ್ಳುವುದೇ ಉತ್ತಮ. ಬೇರೆ ದಾರಿಯಿಲ್ಲ. ಏಕೆಂದರೆ ಈ ಕಷ್ಟ, ಹಿಂಸೆ, ಯಾತನೆ ಎಲ್ಲರಿಗೂ ಇದ್ದೇ ಇದೆ. ಪ್ರಮಾಣ ಮತ್ತು ಪರಿಣಾಮಗಳ ವ್ಯತ್ಯಾಸ ಅಷ್ಟೆ. 

ಪಂಚಭೂತಗಳಿಂದಾದ ಮತ್ತು ಅವುಗಳಿಂದ ಪ್ರಚೋದಿಸಲ್ಪಡುವ ನಮ್ಮ ಇಂದ್ರಿಯಗಳ ಹಿಡಿತದಲ್ಲಿ ನಾವಿರುವ ತನಕಈ ಕಷ್ಟಗಳ ಮೆರವಣಿಗೆ ಸಾಗಿಯೇ ಇರುತ್ತದೆ. ಒಂದನ್ನು ಪರಿಹರಿಸಿದರೆ ಅಥವಾ ಒಂದನ್ನು ಅನುಭವಿಸಿ ತೀರಿಸಿದರೆ ಮತ್ತೊಂದು ಎದ್ದು ನಿಲ್ಲುತ್ತದೆ. ಹಾಗೆ ನೋಡಿದರೆ  ಸಾಮಾನ್ಯವಾಗಿ ಕಷ್ಟಗಳು ನಮಗೆ ಬರುವುದಿಲ್ಲ. ನಾವು ಅದನ್ನು ಹೋಗಿ ಹಿಡಿದುಕೊಳ್ಳುತ್ತೇವೆ, ನಂತರ ಆ ಕಷ್ಟಗಳ ಪರಿಣಾಮವಾಗಿ ನಮಗೆ ಆಗುವ ನೋವಿನಿಂದ ಪರದಾಡುತ್ತೇವೆ. ನಮಗಿರುವ ವಸ್ತು, ವಿಷಯ ಮತ್ತು ವ್ಯಕ್ತಿಗಳೊಂದಿಗಿನ ಸಂಬಂಧದ 'ಅಂಟಿ'ನಿಂದ ನಮಗೆ ಕಷ್ಟದ ಮತ್ತು ತತ್ಪರಿಣಾಮವಾಗಿ ನೋವಿನ ಅನುಭವವಾಗುತ್ತದೆ. ಡಿ. ವಿ. ಗುಂಡಪ್ಪನವರ ' ಮಂಕುತಿಮ್ಮನ ಕಗ್ಗದಲ್ಲಿ ' ಬೆದಕಾಟ ಬದುಕೆಲ್ಲ; ಚಣಚಣವು ಹೊಸ ಹಸಿವು ಅದಕಾಗಿ ಇದಕಾಗಿ ಮತ್ತೊಂದಕಾಗಿ; ಅಧಿಕಾರ ಸಿರಿ ಸೊಗಸು ಕೀರ್ತಿಗಳ ನೆನೆದು ಮನ ಕುದಿಯುತಿಹುದಾವಗಂ - ಮಂಕುತಿಮ್ಮ ' ಎನ್ನುತ್ತಾರೆ. ಕಷ್ಟ ಬಂದಾಗ ಆ ಕಷ್ಟದಿಂದ ಹೊರಬರುವ ಒಂದೇ ಗುರಿಯಿರುತ್ತಾದ್ದರಿಂದ ಹೊಸ ಹೊಸ ಆಸೆಗಳು ನಮ್ಮಲ್ಲಿ ಕಡಿಮೆಯಿರುತ್ತವೆ. ಒಂದು ಬಾರಿ ಆ ಕಷ್ಟದಿಂದ ನಾವು ಹೊರಬಂದರೆ ಮತ್ತೆ ಆಸೆಗಳ ಬಗ್ಗೆ ನಮ್ಮಲ್ಲಿ ಎದ್ದು, ಆ ಆಸೆಗಳೇ ನಮ್ಮ ಹೊಸ ಹೊಸ ಕಷ್ಟಗಳಿಗೆ ಕಾರಣವಾಗುತ್ತದೆ.

ಹಾಗೆ ನಮಗೆ ಬದುಕಿನಲ್ಲಿ ಕಷ್ಟದ ಅನುಭವವಾಗಬಾರದು ಎಂದರೆ, ನಾವು ಅಧಿಕಾರ, ಸಿರಿ, ಸೊಗಸು ಕೀರ್ತಿಗಳಿಗಷ್ಟೇ ಅಲ್ಲ, ಯಾವುದಕ್ಕೂ ಅಂಟಿಕೊಳ್ಳಬಾರದು. ಹಾಗೆ ಅಂಟದೇ ಬದುಕಿದರೆ ಎಂತಹ ವಿಷಮ ಪರಿಸ್ಥಿತಿಯಲ್ಲೂ, ಅದನ್ನು ಅನುಭವಿಸುವ ತಾಳ್ಮೆ ಪಡೆದುಕೊಳ್ಳಬಹುದು. ಇದು ಎಲ್ಲರ ಪರಿಸ್ಥಿತಿ. ಹಾಗಾಗಿ ಈ ಜಗತ್ತಿನಲ್ಲಿ  ಕಷ್ಟವಿಲ್ಲದವರಿಲ್ಲ. ಆದರೆ ಜಗತ್ತಿನಲ್ಲಿ ನಮಗಿಂತ ಅಧಿಕ ಕಷ್ಟವನ್ನನ್ನುಭವಿಸಿವವರನ್ನು ಕಂಡು ನಮ್ಮ ಕಷ್ಟವನ್ನು ತಾಳ್ಮೆಯಿಂದ ಸಹಿಸಿಕೊಳ್ಳುವುದೇ ಜಾಣತನ. 'ಸಹನೆ ವಜ್ರದ ಕವಚ' ಎಂದಿದ್ದಾರೆ ಮಾನ್ಯ ಡಿವಿಜಿಯವರು. ಅಂತಹ ಸಹನೆಯ ಮನೋಭಾವವನ್ನು ಬೆಳೆಸಿಕೊಂಡರೆ ಎಂತಹ  ವಿಷಮ ಸ್ಥಿತಿಯಲ್ಲೂ ಸಮಾಧಾನ ಚಿತ್ತದಿಂದ ಇರಬಹುದು. ಕಷ್ಟಗಳು ಬಂದರೂ ಅವುಗಳನ್ನು ಅನುಭವಿಸುವ ಶಕ್ತಿ ಮತ್ತು ಹೊಸ ಹೊಸ ಕಷ್ಟಗಳಿಗೆ ಸಿಲುಕಿಕೊಳ್ಳದಂತಹ ಮನೋಭಾವ ನಮ್ಮಲ್ಲಿ ಬರುತ್ತದೆ. ಹೀಗೆ ನಾವು ನಮಗೆ ಬರುವ ಮತ್ತು ಇರುವ ಕಷ್ಟಗಳಿಂದ ಮುಕ್ತರಾಗುವ ಪರಿಹಾರವನ್ನು ಕಂಡುಕೊಳ್ಳಬಹುದು

ಉದರ ದೈವದ ಪೂಜೆ



ಹೊಟ್ಟೆಯೊಳಗಿನ ದೈವದ ಪೂಜೆ ಮೊದಲು ಆದಮೇಲೆ ಮಿಕ್ಕೆಲ್ಲ ದೇವರುಗಳ ಪೂಜೆಯಾಗುತ್ತದೆ. ಏಕೆಂದರೆ ಆ ಹೊಟ್ಟೆಯೊಳಗಿನ ದೈವಕ್ಕಿಂತ ಮಿಗಿಲಾದ ದೈವವು ಯಾವುದೂ ಇಲ್ಲ. ಅದಕ್ಕೆ ಕೊಡಬೇಕಾದ್ದನ್ನು ಕೊಟ್ಟರೆ ಅದು ಶಾಂತವಾಗಿರುತ್ತದೆಇಲ್ಲದಿದ್ದರೆ ಕೋಪಗೊಳ್ಳುತ್ತದೆ. ಹಾಗಾಗಿ ನಾವು ಆಹಾರ ಸೇವನೆಯನ್ನು ಮಾಡಬೇಕು. ಇದೂ ಸಹ ಒಂದು ಪೂಜೆಯೆಂತೆಯೇ. ನಾವು ಒಂದು ಹೋಮ ಅಥವಾ ಹವನ ಮಾಡುವಾಗ ಒಂದು ಹೋಮಕುಂಡವನ್ನು ಶಾಸ್ತ್ರೋಕ್ತವಾಗಿ ರಚಿಸಿ, ಎಲ್ಲಾ ಪರಿಕರಗಳನ್ನೂ ಸಮರ್ಪಕವಾಗಿಟ್ಟುಕೊಂಡುಆ ಹೋಮ ಕುಂಡದಲ್ಲಿ ' ಅಗ್ನಿ' ಯನ್ನು ಪ್ರತಿಷ್ಠಾಪಿಸಿ ಆ ಅಗ್ನಿಗೆ ಮಂತ್ರಪೂರ್ವಕವಾಗಿ ಹವಿಸ್ಸನ್ನು ನೀಡುತ್ತೇವೆ. ಆ ಅಗ್ನಿಗೆ 'ಹವ್ಯವಾಹಕ' ಎಂದು ಹೆಸರು. ನಾವಿತ್ತ ಈ ಹವಿಸ್ಸನ್ನು ಅಗ್ನಿಯು ನಾವು ಉದ್ದೇಶಿಸಿದ ದೇವತೆಗಳಿಗೆ ತಲುಪಿಸುತ್ತದೆ ಮತ್ತು ಆ ದೇವತೆಗಳು ಸುಪ್ರೀತರಾಗಿ ನಮ್ಮ ಮನೋಭೀಷ್ಟೆಯನ್ನು ನೆರವೇರಿಸುತ್ತಾರೆ ಎನ್ನುವುದು ಸನಾತನದ ನಂಬಿಕೆ.  

ಶ್ರೀ ಕೃಷ್ಣ,  ಭಗವದ್ಗೀತೆಯಲ್ಲಿ ‘ ನಾನು ಜೀವಿಗಳ ಉದರದಲ್ಲಿ ವೈಶ್ವಾನರ ರೂಪದಲ್ಲಿ ಇದ್ದೇನೆ’ ಎಂದು ಹೇಳುತ್ತಾನೆ. ಆ ವೈಶ್ವಾನರನೇ ಜಠರಾಗ್ನಿ. ನಮ್ಮ ಜಠರದಲ್ಲಿರುವುದು ಜಠರಾಗ್ನಿ. ಹವಿಸ್ಸಿನ ರೂಪದಲ್ಲಿ ನಾವು ಆಹಾರವನ್ನು ಅದಕ್ಕೆ ಸಮರ್ಪಿಸಿದಾಗ ಆ ಅಗ್ನಿ ಅದನ್ನು ಪಚನಗೊಳಿಸಿ ಎಲ್ಲ ರೀತಿಯ ಶಕ್ತಿಯನ್ನೂ ಉತ್ಪಾದಿಸಿ  ‘ಸಮಾನ ವಾಯುವಿನ ಮೂಲಕ ನಮ್ಮ ದೇಹದ ಎಲ್ಲ ಭಾಗಗಳಿಗೂ ಸಮರ್ಪಕವಾಗಿ ವಿತರಿಸುತ್ತದೆ. ಈ ಪ್ರಕ್ರಿಯೆ ನಡೆಯುತ್ತಿದ್ದರೆ ನಮ್ಮ ದೇಹ ಸುಸ್ಥಿತಿಯಲ್ಲಿರುತ್ತದೆ. ಹಾಗಾಗಿ   ನಮ್ಮ ಉದರದಲ್ಲಿರುವ ಆ ‘ವೈಶ್ವಾನರ’ ನೆಂಬ ದೇವರಿಗೆ ಮೊದಲ ಪೂಜೆಯಾಗಬೇಕು. ಹಾಗಾದಾಗ ದೇಹ ಧೃಢವಾಗಿ ಮಿಕ್ಕೆಲ್ಲ ದೇವತೆಗಳ ಪೂಜೆಗೆ ಪೂರಕವಾಗಿರುತ್ತದೆ. ಹಾಗೆ ಕೊಟ್ಟ ಆಹಾರದಿಂದ ‘ವೈಶ್ವಾನರ ತೃಪ್ತನಾದರೆ’ ಆನಂದಇಲ್ಲದಿದ್ದರೆ ಅವನು ಆಗ್ರಹಿಸಿ ದೇಹ ಸೊರಗಿ ಶಕ್ತಿಯಿಲ್ಲದೆ ಯಾವ ದೇವರ ಪೂಜೆಯೂ ಕೈಲಾಗುವುದಿಲ್ಲ. ಹಾಗಾಗಿ ಉದರ ದೈವದ ಪೂಜೆ ಮೊದಲಾಗಬೇಕು.

ಹೆಚ್ಚು ತಿಂದರೆ ಅನಾರೋಗ್ಯಕಡಿಮೆ ತಿಂದರೂ ಅನಾರೊಗ್ಯ. ಎಷ್ಟು ತಿನ್ನಬೇಕು ಎಂದು ನಿರ್ಧರಿಸುವುದು ಕಷ್ಟ. ಏನನ್ನೋ ತಿಂದರೆ ಅನಾರೋಗ್ಯ ಮತ್ತ್ಯಾವುದನ್ನೋ ತಿಂದರೆ ಆರೋಗ್ಯ. ಆದರೆ ಏನು ತಿನ್ನಬೇಕು ಎನ್ನುವುದನ್ನು ನಿರ್ಧರಿಸುವುದು ಕಷ್ಟ. ಮಿಶ್ರಣ(combination) ಪರಿಮಾಣ(ratio) ಮತ್ತು ಪ್ರಮಾಣ(quantity) ನಿರ್ಧರಿಸುವುದೇ ಬಹಳ ಕಷ್ಟ. ನಮ್ಮ ಆಹಾರದ "ಹದವರಿಯುವುದು" ಒಂದು ಸಾಹಸವೇ ಸರಿ.  ಆದರೆ ನಾಲಿಗೆ ಒಂದಿದೆಯಲ್ಲ!! ಅದನ್ನೂ ತೃಪ್ತಿ ಪಡಿಸುತ್ತಾ ಆ ಹದವನ್ನೂ ಅರಿತರೆ ‘ಉದರ ದೈವ’ ದ ಪೂಜೆಯೂ ಸರಿಯಾಗುತ್ತದೆ. ದೇಹವೂ ಆರೋಗ್ಯದಿಂದಿರುತ್ತದೆ. 

ಅದಲ್ಲದೆ ನಾಲಿಗೆಯ ಚಪಲಕ್ಕೆ ಬಲಿಯಾಗಿ ಏನೇನನ್ನೋ ತಿನ್ನುತ್ತಾ ಹೋದರೆ ಅದರ ಪರಿಣಾಮವನ್ನು ಬೇರೆಯಾಗಿ ವಿವರಿಸಬೇಕೇ? ಇಂದು ನಾವು ನೋಡುತ್ತಿರುವುದೇನೆಂದರೆ ಬಹಳಷ್ಟು ಜನ ವೈದ್ಯಕೀಯ ಶುಶ್ರೂಷೆಗೆ ಬರುವುದೇ ಈ ಆಹಾರದ ವ್ಯತ್ಯಯದಿಂದಾಗಿ. ಈ ಆಹಾರದ ವಿನ್ಯಾಸಕ್ಕಾಗಿಯೇ ವಿಜ್ಞಾನದ ಹಲವಾರು ವಿಭಾಗಗಳು ಹೊಸದಾಗಿ ಹುಟ್ಟಿಕೊಂಡಿವೆ. ಆದರೆ ನಮ್ಮ ಪುರಾತನರ ಆಹಾರ ಕ್ರಮವೇ ' ಔಷಧಿ ' ರೂಪದಲ್ಲಿದೆ ಎಂದು ಅರಿಯದಾಗಿದ್ದಾರೆ. ದೇಶ ಕಾಲಕ್ಕನುಗುಣವಾಗಿ ವಿನ್ಯಾಸಗೊಂಡಿರುವ ನಮ್ಮ ಪುರಾತನರ ಆಹಾರ ಪದ್ದತಿಯನ್ನು ಸರಿಯಾಗಿ ಪಾಲಿಸಿದ್ದೇ ಆದರೆ ಅದೇ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ನಾಲಿಗೆಯ ಚಪಲತೆಯನ್ನು ಬಿಟ್ಟು,  ಊಟವನ್ನು ಒಂದು ವಿಧಿವತ್ತಾದ ಪೂಜೆಯಂತೆ ಮಾಡಿದರೆ ಪುಣ್ಯಕ್ಕೂ ಆಗುತ್ತದೆ ಮತ್ತು ಪುರುಷಾರ್ಥಕ್ಕೂ ಆಗುತ್ತದೆ.  ಆಹಾರವನ್ನು ಅರಿತು ಸೇವಿಸಿದರೆ ಆರೋಗ್ಯ, ಅದಲ್ಲದೆ ಕೇವಲ ಚಪಲಕ್ಕೆ ಸೇವಿಸಿದರೆ ಅನಾರೋಗ್ಯ. ಸರಿಯಾದ ಆಹಾರವನ್ನು ಸೂಕ್ತ ಸಮಯದಲ್ಲಿ ಸೇವಿಸಿದರೆ ಅದೇ ನಮ್ಮ 'ಉದರ
ದೈವದ'ಪೂಜೆಯಾಗುತ್ತದೆ. ಹಾಗಾಗಿ ಈ ಉದರ ದೈವದ ಪೂಜೆಯನ್ನು ಸಮರ್ಪಕವಾಗಿ ಮಾಡಿದ್ದೇ ಆದರೆ ಆರೋಗ್ಯ ನಮ್ಮದಾಗುತ್ತದೆ, ಅಲ್ಲವೇ? 


ಆಸೆಯ ಅಂಟು - ಕಷ್ಟದ ನಂಟು



ಆಸೆಪಡುವುದು ಎಲ್ಲ ಪ್ರಾಣಿಗಳ ಸಹಜ ಗುಣ. ಆಸೆಪಟ್ಟದ್ದನ್ನು ಪಡೆಯಲು ಪ್ರಯತ್ನವನ್ನು ಮಾಡುವುದೂ ಪ್ರಾಣಿಗಳ ಸ್ವಭಾವ. ಮನುಷ್ಯನು ಇದಕ್ಕೆ ಹೊರತಲ್ಲ. ಆಸೆಪಟ್ಟವರೆಲ್ಲಾ ಅದನ್ನು ಸಾಕಾರಗೊಳಿಸಿಕೊಳ್ಳಲು ಪ್ರಯತ್ನಪಡುವುದಿಲ್ಲ, ಪ್ರಯತ್ನಪಟ್ಟವರಿಗೆಲ್ಲಾ ಫಲ ಸಿಗುವುದೂ ಇಲ್ಲ.  ಪ್ರಯತ್ನಪಟ್ಟ ಕೆಲವರಿಗೆ  ಪೂರ್ಣಫಲ ಸಿಗಬಹುದು, ಕೆಲವರಿಗೆ ಅರ್ಧಫಲ ಸಿಗಬಹುದು, ಕೆಲವರಿಗೆ ಬಯಸಿದ ಫಲಕ್ಕಿಂತ ಬೇರೆಯೇ ಫಲ ಸಿಗಬಹುದು, ಕೆಲವರಿಗೆ ಬಯಸಿದ್ದಕ್ಕಿಂತ ವಿರುದ್ಧವಾದ ಫಲ ಸಿಗಬಹುದು  ಮತ್ತು ಕೆಲವರಿಗೆ ಯಾವ ಫಲವೂ ಸಿಗದೇ ನಿರಾಸೆಗೆ ಕಾರಣವಾಗಬಹುದು. 

ಬಹಳಷ್ಟು ಜನ ಕೇವಲ ಮನಸ್ಸಿನಲ್ಲಿ ಆಸೆಪಟ್ಟು, ಊಹಾಲೋಕದಲ್ಲಿ ಅಥವಾ ಭಾವನಾ ಲೋಕದಲ್ಲಿ ಪ್ರಯತ್ನಪಟ್ಟಂತೆ ಅಥವಾ ಫಲ ಪಡೆದಂತೆ ಊಹಿಸಿಕೊಳ್ಳುತ್ತಾ ಕನಸಿನ ಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಅವರು ಅಸೆಗಳನ್ನೂ ವ್ಯಕ್ತಪಡಿಸಲಿಲ್ಲ ಅಥವಾ ಪ್ರಯತ್ನಪಡಲಿಲ್ಲ ಎಂದಾಕ್ಷಣ ಅವರ ಮನಸ್ಸುಗಳಲ್ಲಿ ಆಸೆಗಳಿಲ್ಲ ಎಂದ ಅರ್ಥವಲ್ಲ. 

ಆಸೆಗಳನ್ನು ವ್ಯಕ್ತಪಡಿಸದೆ ಸುಮ್ಮನಿದ್ದರೆ ಇಂದ್ರಿಯಗಳನ್ನು ಜಯಿಸಿದಂತಾಗುತ್ತದೆಯೇಕಣ್ಣು ಕಾಣದವನು ಏನನ್ನೂ ನೋಡದಿದ್ದರೆ ಅವನ ಮನದೊಳಗೆ ಆಸೆಗಳು ಇಲ್ಲವೆಂದಲ್ಲವಲ್ಲ. ಕಣ್ಣ ಮುಚ್ಚಿಕೊಂಡು ನಾ ಯಾವುದನ್ನೂ ನೋಡುವುದಿಲ್ಲ ಎಂದರೆ ಮನದೊಳಗಿನ ಆಸೆಯನ್ನು ಗೆದ್ದಂತೆಯೇಏನನ್ನೂ ಕಾಣಲಾಗದ ಕುರುಡನನ್ನು ವಿರಕ್ತನೆಂದು ಹೇಳಲು ಸಾಧ್ಯವಿಲ್ಲಅಲ್ಲವೇಕಣ್ಣ ಮುಚ್ಚಿ ತಪವನ್ನು ಆಚರಿಸುತ್ತಿದ್ದ ವಿಶ್ವಾಮಿತ್ರನಂತಹ ಋಷಿಯೂ ಸಹ ನಾಲ್ಕು ಬಾರಿ ಆ ಮೇನಕೆ ಕಣ್ಣ ಮುಂದೆ ನಡೆದಾಡಿದಾಗ ವಿಚಲಿತನಾದನಲ್ಲ!!.  ತಮ್ಮ ಒಂದು ಹಾಡಲ್ಲಿ ಪುರಂದರ ದಾಸರು " ಆಸೆ ಸತ್ತಂತಿರಬಹುದು" ಎಂದು ಹೇಳುತ್ತಾರೆ. "ಸತ್ತಂತೆ ಇರಬಹುದು" ಎಂದರೆ ಆಸೆ ಇದೆಆದರೆ ಅದನ್ನು ಹೊರಗೆ ತೋರಿಸದೆ ಇರುವುದು ಎಂದರ್ಥ . ಆಸೆ ಇಲ್ಲದ ಮನುಷ್ಯನಾರೂ ಇರಲೇ ಸಾಧ್ಯವಿಲ್ಲ!! ಮನುಷ್ಯನೇನು ಯಾವ ಪ್ರಾಣಿಯೂ ಇರಲು ಸಾಧ್ಯವೇ ಇಲ್ಲ. ಆದರೆ ಅನ್ಯ ಪ್ರಾಣಿಗಳ ಆಸೆಗೂ ಮನುಷ್ಯನ ಆಸೆಗೂ ಬಹಳ ವ್ಯತ್ಯಾಸವಿದೆ.  

ನೋಡಿ ನಾವು, " ನಾನು ಯಾವುದಕ್ಕೂ ಆಸೆಪಡುವುದಿಲ್ಲ" ಎಂದು ನಾವು ಪ್ರತಿಜ್ಞೆ ಮಾಡಿದರೂ ಮನದಾಳದಲ್ಲಿ ಇರುವ ಆಸೆಯ ಬೀಜವನ್ನು ಮೊಳೆಯದಂತೆ ಮಾಡಲು ಸಾಧ್ಯವಿಲ್ಲ. ಮನದೊಳಗೆ ಆಸೆಯನ್ನಿಟ್ಟುಕೊಂಡು ವಿರಕ್ತನಂತೆ ಡಾಂಬಿಕದ ಸೋಗು ಹಾಕುವುದು, ನಮಗೆ ನಾವು ಮೋಸ ಮಾಡಿಕೊಂಡಹಾಗೆ ಆಗುತ್ತದೆ ಅಲ್ಲವೇ? ಹಾಗಾಗಿ ಹಿತವಾಗಿ ಮಿತವಾಗಿ ಆಸೆಪಟ್ಟು, ಆ ನಮ್ಮ ಆಸೆಗಳು ನಮಗೆ ಹಿತವನ್ನೇ ಉಂಟು ಮಾಡುತ್ತವೆ ಎನ್ನುವ ನಂಬಿಕೆಯಿಂದ ಆಸೆಪಡಬೇಕು. ಹಾಗಾದಾಗ ಬಾಳು ಹಿತವಾಗುತ್ತದೆ.

ನೋಡಿ ಇಲ್ಲಿ ಆಸೆಯಿಲ್ಲದ ನಿರ್ಲಿಪ್ತ ಭಾವ ಎಂದರೆ ಏನು ಎಂದರೆ, ಆಸೆಯೆಂದರೆ ನಾವಂದುಕೊಂಡು ಕೆಲಸ ಹೀಗೇ ಆಗಬೇಕು ಮತ್ತು ನಾವು ಪಡುವ ಪ್ರಯತ್ನದಿಂದ ಇಂತಹುದೇ ಫಲ ಸಿಗಬೇಕು  ಎಂದು ನಾವಂದುಕೊಳ್ಳುತ್ತೇವೆ.  ನಿರ್ಲಿಪ್ತ ಭಾವ ಎಂದರೆ ನಾವು ಮಾಡುವ ಕೆಲಸವನ್ನು ಮಾಡುತ್ತಾ, ಆದರ  ಪ್ರತಿಫಲ ಹೇಗಿರುತ್ತದೆಂಬ ಚಿಂತೆ ಕಾಳಜಿ ಇಲ್ಲದೆ,  ಬಂದದ್ದನ್ನು ಬಂದ ಹಾಗೆ ಸ್ವೀಕರಿಸುವುದು ಎಂದರ್ಥ. 

ನಾವು ಈ ಜಗತ್ತಿನ ವಿಷಯಗಳಿಗೆ ಅಂಟದೇ ಇರುವುದರಿಂದ  ನಮ್ಮ ಬಯಕೆಗಿಂತ ಭಿನ್ನವಾದ ಫಲ ದೊರೆತಾಗ ಆಗುವ ನೋವಿಂದ ನಾವು ಮುಕ್ತರಾಗಬಹುದು. ಹಾಗೆ ದುಃಖ ಅಥವಾ ನೋವಿಂದ ನಮ್ಮನ್ನು ನಾವು ರಕ್ಷಿಸಿಕೊಂಡು ನಿಜವಾದ ಸಂತೋಷವನ್ನು ಪಡೆಯುವುದೇ ಪ್ರತಿಯೊಬ್ಬರ ಜೀವನದ ಗುರಿ ಅಲ್ಲವೇ?  ಇದು ಅಂತರಂಗದ ಭಾವ. ಇದು ನಮ್ಮ ಮನಸ್ಸುಗಳಲ್ಲಿ ನಡೆಯಬೇಕಾದ ಕುಸ್ತಿ, ಯುದ್ಧ. ನಮಗೇನು ಬೇಕು,  ನಮಗಾವುದು ಒಳ್ಳೆಯದು, ನಾವು ಏನನ್ನು ತ್ಯಜಿಸಬೇಕು ಇತ್ಯಾದಿ ವಿಚಾರಗಳ ಮಂಥನವಾದರೆ ಆಗ ಸತ್ಯದ ದರ್ಶನವಾಗಿ ನಮ್ಮ ಬಯಕೆಗಳು ನಮಗೆ ಹಿತ ತರುವಂತಾದ್ದಾಗಿರುತ್ತವೆ. ನಮ್ಮ ಬಯಕೆಯ ಜೊತೆಗೆ ದೈವ ಕೃಪೆಯೂ ಸೇರಿದರೆ ನಮಗೆ ದ್ವಿಗುಣ ಲಾಭವಲ್ಲವೇ?

ದೈವ ಕೃಪೆ ಸದಾ ಇದ್ದೇ ಇರುತ್ತದೆ. ಅದು ' conditinal' ಅಲ್ಲ. ಆದರೆ ನಮಗದು ಅರ್ಥವಾಗಿರುವುದಿಲ್ಲ. ನಮಗೆ ನಿರ್ಲಿಪ್ತಭಾವವಿಲ್ಲದಿದ್ದರೆ ದೈವ ಕೃಪೆ ಮತ್ತು ನಮ್ಮ ಭಾವ ಸಮಾನಾಂತರವಾಗಿ(parralel)ಮುಂದೆ ಹೋಗುತ್ತಿರುತ್ತದೆ. ಆ ಸಮಯದಲ್ಲಿ ನಮ್ಮ ಮನೋಭೀಷ್ಟೆಗಳು ಕೈಗೂಡುವುದಿಲ್ಲವಾದ್ದರಿಂದ, ನಮಗೆ ಆನಂದವಿರುವುದಿಲ್ಲ, ಹಾಗಾಗಿ ನಾವು ನಮಗೆ ದೈವ ಕೃಪೆಯಿಲ್ಲವೆಂದುಕೊಳ್ಳುತ್ತೇವೆ. ವಿರಕ್ತ ಭಾವ ಬಂದರೆ ನಮ್ಮ ಆಸೆಗಳ ಬುಗ್ಗೆಯ ಒರತೆ  ಕುಗ್ಗಿ, ಬಂದದ್ದನ್ನು ಬಂದಹಾಗೆ ಸ್ವೀಕರಿಸುವ ಬುದ್ಧಿ ನಮಗುಂಟಾಗಿ ನಮ್ಮ ಪ್ರಯತ್ನ ಮತ್ತು ದೈವಕೃಪೆಯ ಸಮ್ಮಿಲನದಿಂದ ನಮಗೆ ಆನಂದವುಂಟಾಗುತ್ತದೆ. ಅಂತಹ ಆನಂದವನ್ನು ಪಡೆಯುವುದೇ  
ನಮ್ಮ ಧ್ಯೇಯವಾಗಿರಬೇಕು.  ಹಾಗೆ ಪಡೆದ ಆನಂದವೇ ನಿಜವಾದ ಆನಂದ ಮತ್ತು ಅಂತಹ ಪ್ರಯತ್ನವೇ ನಿಜವಾದ ಆಧ್ಯಾತ್ಮಿಕ ಸಾಧನೆ.