Tuesday 19 December 2017

ಭಾವುಕತೆ


ನಾವು ಅನ್ಯ ಪ್ರಾಣಿಗಳಂತೆಯೇ ಈ ಸೃಷ್ಟಿಯೊಳಗೊಂದಾದರೂ, ಅವುಗಳಂತೆಯೇ ಬದುಕುವವರಾದರೂ, ನಾವು ಮಾನವರು ಅವುಗಳಿಗಿಂತ ತೀರಾ ಭಿನ್ನ. ಏಕೆಂದರೆ ನಮಗೆ ಭಾವನೆಗಲುಂಟು. ಪ್ರಾಣಿಗಳಿಗಿರುವ ಭಾವುಕತೆ ಸೀಮಿತ. ಆದರೆ ನಮಗಿರುವ ಭಾವನೆಗಳು ಅಮಿತ. ಪ್ರಾಣಿಗಳಿಗಿರುವ ಭಾವುಕತೆ, ಕೆಲ ಪ್ರಾಣಿಗಳನ್ನು ಹೊರತುಪಡಿಸಿಕೇವಲ ಅವುಗಳ, ಆಹಾರ ಹುಡುಕುವಿಕೆ, ಸ್ವ-ರಕ್ಷಣೆ ಮತ್ತು ಸಂತಾನೋತ್ಪತ್ತಿಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಮಾನವರಾದ ನಮಗಿರುವುದು ಬಹಳ ವಿಶಾಲವಾದ ಮತ್ತು ವಿಸ್ತಾರವಾದ  ಭಾವುಕತೆ. ನಾವು ತೋರುವ ಪ್ರೀತಿ, ಕೋಪ, ದ್ವೇಷ ಅನುರಾಗ ಮುಂತಾದ ಭಾವಗಳಿಂದ ತುಂಬಿರುವುದೇ ನಮ್ಮ ಈ ಭಾವುಕತೆಯ ಹಂದರ. ಮಾನವನ ಬಹಳಷ್ಟು ಸಂತೋಷ ಆನಂದ ಮತ್ತು ದುಃಖ ತಾಪತ್ರಯಗಳು ಕೇವಲ ಈ ಭಾವುಕತೆಯ ಕಾರಣದಿಂದಲೇ ಉಂಟಾಗುತ್ತದೆ. 

ಭಾವುಕತೆ, ಕೋಪ, ಉದ್ರೇಕ ಮುಂತಾದ ಭಾವಗಳು ಇರಲಿ, ತಪ್ಪೇನಿಲ್ಲ. ಆದರೆ ಆ ಭಾವದ ಉತ್ಕಟತೆ ಬುದ್ಧಿಯ ಸಮತೋಲನವನ್ನು ವಿಚಲಿತಗೊಳಿಸಿ, ಕದಡದೆ ಇದ್ದರೆ ಅಷ್ಟೇ ಸಾಕು. ಏಕೆಂದರೆ ಸಾಮಾನ್ಯವಾಗಿ ನಾವು ಭಾವುಕರಾದಾಗ ನಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಂಡು, ನಮಗರಿವಿಲ್ಲದಂತೆಯೇ ಎಲ್ಲೇ ಮೀರಿ ವರ್ತಿಸುತ್ತೇವೆ. ಆದರೆ ಇಂತಹ ಭಾವವೂ ನಮ್ಮೊಳಗೇ ನುಗ್ಗಿದರೂ ನಮ್ಮನ್ನು ವಿಚಲಿತರಾಗಿಸದೆ ಇದ್ದಾರೆ ನಾವು ಈ ಜಗತ್ತಿನಲ್ಲಿ ಕಲಿತ ವಿದ್ಯೆ ಮತ್ತು ಅಂಟಿಸಿಕೊಂಡ ವ್ಯಾಮೋಹ ಮತ್ತು ಮಮಕಾರಗಳು ಮನೋವ್ಯಾಪಾರದ ಮೇಲೆ ತನ್ನ ಪ್ರಭಾವ ಬೀರದೆ ಇದ್ದರೆ, ಮನಸ್ಸು ಬುದ್ಧಿಗಳು ಶುದ್ಧವಾಗಿರುತ್ತವೆ. 

ಎಷ್ಟೋಬಾರಿ ಕೋಪಬಂದವರು ಆ ಕೋಪದ ಮಿತಿಮೀರಿದ ಭಾವುಕತೆಯಲ್ಲಿ, ತಮಗರಿವಿಲ್ಲದಂತೆಯೇ, ತಮ್ಮ ಬದುಕನ್ನೇ ಬದಲಿಸುವ ಪರಿಣಾಮಗಳಾಗುವಂತಹ ರೀತಿಯಲ್ಲಿ ವರ್ತಿಸಬಹುದು. ಉದಾ: ಕೋಪದ ಭರದಲ್ಲಿ ಮಾಡುವ ಕೊಲೆ, ಪಶ್ಚಾತ್ತಾಪ ಪಟ್ಟರೂ ಅದರ ಪರಿಣಾಮವನ್ನು ಅನುಭವಿಸಲೇ ಬೇಕಲ್ಲವೇ?

ಅತಿಯಾದ ಸಂತೋಷ, ಉದ್ವಿಗ್ನತೆ, ಕೋಪ ಮುಂತಾದ ಭಾವಗಳು ಸಹಜವಾಗೇ ನಮಗೆ ನಮ್ಮ ಪ್ರತಿನಿತ್ಯದ ಆಗುಹೋಗುಗಳಲ್ಲಿ ಬರುತ್ತವೆ. ನಮ್ಮನ್ನು ಉದ್ರೇಕಗೊಳಿಸುವ, ಉದ್ವೇಗದಲ್ಲಿ ಅನರ್ಥವನ್ನು ಮಾಡಿಕೊಳ್ಳುವ ಹಲವಾರು ಸಂದರ್ಭಗಳು ನಮ್ಮ ಬದುಕಿನಲ್ಲಿ ಬರುತ್ತವೆ. ಇದರಲ್ಲಿ ಅತಿಶಯವೇನಿಲ್ಲ. ಆದರೆ ಅವುಗಳು ನಮ್ಮ ಮನಸ್ಸು ಬುದ್ಧಿಗಳನ್ನು ವಿಚಲಿತಗೊಳಿಸಬಾರದು. ಹಾಗಾಗಬೇಕಾದರೆ ನಾವು ತಾಳ್ಮೆ ಮತ್ತು ಸಹನೆಯನ್ನು ರೂಢಿಸಿಕೊಳ್ಳಬೇಕು. ಒಂದು ಸಿನೆಮಾ ನೋಡಿದಾಗ, ಅದರಲ್ಲಿನ ಜಗಳ ಕಿತ್ತಾಟ, ಹೊಡೆದಾಟ ಕ್ರೌರ್ಯ ಮುಂತಾದ ದೃಶ್ಯಗಳನ್ನು ನಾವು ಕೇವಲ ಪ್ರೇಕ್ಷಕರಂತೆ ನೋಡಿ ಬರುತ್ತೇವೋ, ಹಾಗೆಯೇ ನಮ್ಮ ಜೀವನದಲ್ಲಿ ನಡೆಯುವ ಘಟನೆಗಳಿಗೂ ಪ್ರತಿಕ್ರಿಯೆ ನೀಡದೆ ಇದ್ದರೆ, ಅವುಗಳ ಪ್ರಭಾವ ನಮ್ಮ ಮೇಲೆ ಆಗದೆ ಇರಬಹುದು. ನಾವು ಜಗತ್ತಿನಲ್ಲಿ ಕಲಿತ ವಿದ್ಯೆಯ ಪ್ರಭಾವದಿಂದ ಅಥವಾ ನಾವು ಈ ಜಗತ್ತಿನಲ್ಲಿ ಬೆಳೆಸಿಕೊಂಡ ಮೋಹ, ಮಮತೆ ಮತ್ತು ವ್ಯಾಮೋಹಗಳು ನಮ್ಮ ಹೃದಯಕ್ಕೆ ಅಂಟಿಕೊಂಡು ಮನಸ್ಸನ್ನು ಉದ್ವಿಗ್ನಗೊಳಿಸದಿದ್ದರೆ, ನಮ್ಮ ಹೃದಯದ ಶುದ್ಧತೆಯನ್ನು ನಾವು ಕಾಪಾಡಿಕೊಳ್ಳಬಹುದು.

ಆದರೆ ಹಾಗೆ ವಿಚಲಿತಗೊಳ್ಳದ ಸ್ಥಿತಿಗೆ ತಲುಪುವುದು ಅಷ್ಟು ಸುಲಭವಲ್ಲ. ಸಾಮಾನ್ಯ ಮಾನವರಾದ ನಮಗೆ ಅಂತಹ ಸ್ಥಿತಿಗೆ ತಲುಪಬೇಕಾದರೆ ಜೀವನದಲ್ಲಿ ಬಹಳ ಅನುಭವವಾಗಬೇಕು, ಪೆಟ್ಟು ಬೀಳಬೇಕು, ನೋವುಣ್ಣಬೇಕು, ನಿರ್ಲಿಪತತೆ ಬೆಳೆಸಿಕೊಳ್ಳಬೇಕು. ಹಾಗಾದಾಗ ಮಾತ್ರ ನಮ್ಮ ಹೃದಯದಲ್ಲಿ ನಡೆಯುವ ಮಂಥನವು ಪಾವನವಾಗಬಹುದು. ನಾವು ಶಾಂತರಾಗಬಹುದು. ಕೇವಲ ಸಾಕ್ಷೀ ಭಾವದಿಂದ ಎಲ್ಲವನ್ನೂ ನೋಡುತ್ತಾ ನಿರ್ಲಿಪ್ತರಾಗಿ ' ಭಾವುಕತೆಯ ಪ್ರಭಾವ' ದಿಂದ ಮುಕ್ತರಾಗಬಹುದು .