Wednesday 23 January 2013

ವರ್ಣಾಶ್ರಮ -ಶೂದ್ರ




ಹೌದು ನಾ ಶೂದ್ರ ಹೌದು 
ಶುದ್ಧ ಶೂದ್ರ ಹೌದು. 
ನಿಮಗೆ ಬೇಸರವಾದರೂ  
ನನಗಿಲ್ಲ ಚಿಂತೆ ಕಿಂಚಿತ್ತಾದರೂ 

ನಾ ಓದುವ ದಿನಗಳಲ್ಲಿ 
ಜ್ಞಾನದ ಓಣಿಗಳಲ್ಲಿ 
ಓಡುವಾಗ ನಾ, ಓಲಾಡುವಾಗ  
ಬ್ರಾಹ್ಮಣನಾಗಿದ್ದೆ. 

ಮುಂದೆ ಮನೆ ಮಡದಿ 
ಎಂದು ಸಂಸಾರ ಕಟ್ಟಿಕೊಂಡಾಗ 
ನಮಗೆ ಮಕ್ಕಳು ಹುಟ್ಟಿಕೊಂಡಾಗ 
ಹೊಟ್ಟೆಪಾಡಿಗೆ ಧನಾರ್ಜನೆ ಮಾಡುವಾಗ,
ನಾ ವೈಶ್ಯನೂ ಆಗಿದ್ದ ದಿನಗಳು ಇತ್ತಾಗ.

ಪಾಪ ಇವರಿಗೆ ನಾನೇ ಗತಿಯಂದು 
ಇವರೆಲ್ಲ ನೀ ಕಾಯಬೇಕೆಂದಾಗ 
ಕೈಯ್ಯಲ್ಲಿ ಕತ್ತಿ ಹಿಡಿಯದಿದ್ದರೂ, ನನ್ನವರ 
ಕ್ಷಾತ್ರ ತೇಜಸ್ಸಿನಿಂದ ಕಾಯುತ್ತಿದ್ದೆ 
ಕ್ಷತ್ರಿಯವತಾರ ಹೊತ್ತಿದ್ದೆ.

ಹೌದು ಈಗ ಶೂದ್ರ ನಾನು 
ಚರಂಡಿ ತೊಳೆಯುವ ಶೂದ್ರ ನಾನು 
ಮನಸ್ಸಿನ ಓಣಿಗಳಲ್ಲಿನ ಗಲ್ಲಿಗಲ್ಲಿಯ 
ಕೊಳೆ ತೊಳೆಯುವ ಶೂದ್ರ ನಾನು 

ಬದುಕ ಓಟದಲ್ಲಿ ನಾ ಸುತ್ತಿದ 
ಬೀದಿಗಳ ಧೂಳಿಂದ ಗಲೀಜಾದ ಮನವ 
ತೊಳೆಯುವ ಶೂದ್ರ ನಾನು 
ಆರು ಅರಿಗಳ ಸಂಗದಲ್ಲಂಟಿಸಿಕೊಂಡ 
ಪರಿಪರಿಯಾದ ಹೊಲಸ ತೊಳೆಯುವ ಶೂದ್ರ ನಾನು.  

ಬುದ್ಧಿಗಂಟಿದ ಹೊಲಸನ್ನು ತೊಳೆಯುವ 
ಶುದ್ಧ ಶೂದ್ರ ನಾನು, ಹಿತವಾಗಿಸುವ 
ಕಾರ್ಯಮಾಡುವ ಶೂದ್ರ ನಾನು 
ಆತ್ಮ ಶುದ್ಧಿಮಾಡುವ ಶೂದ್ರ ನಾನು 

ನಾಲ್ಕೂ ವರ್ಣಗಳಲ್ಲಿ ತೂರಿಬಂದ 
ನನಗೆ ಬಹಳ ಹೆಮ್ಮೆ, ನಾ ಶೂದ್ರನೆಂದು
ಹೊಲಸ ತೊಳೆಯುವ ಶ್ರೇಷ್ಟನೆಂದು 
ಆತ್ಮೋದ್ಧಾರಕ್ಕೆ ದಾರಿ ಮಾಡುವವನೆಂದು.  


ರವಿ ತಿರುಮಲೈ