Saturday 14 January 2017

ನೈವೇದ್ಯ

ನೈವೇದ್ಯ :  ಆ ದೇವರು ನಾವಿಟ್ಟ ನೈವೇದ್ಯವನ್ನು ತಿನ್ನುವನೇನು? 

ಇದು ನಂಬಿಕೆಯಿಲ್ಲದವರ ಪ್ರಶ್ನೆ.  ಇದಕ್ಕೆ ಉತ್ತರವೆನ್ನುವಂತೆ ಓದು ಸೂಕ್ತ ವಿವರಣೆ ನೀಡುವ ಒಂದು ಪ್ರಾಮಾಣಿಕ ಪ್ರಯತ್ನ. 

ಒಬ್ಬ ಗುರು ಮತ್ತು  ಶಿಷ್ಯರ ಸಂವಾದ ಹೀಗೆ ನಡೆದಿತ್ತು. 
  
ದೇವರನ್ನು ನಂಬದ ಶಿಷ್ಯನೊಬ್ಬ ತನ್ನ ಗುರುವನ್ನು " ದೇವರು ನಾವು ಮಾಡುವ ನೈವೇದ್ಯವನ್ನು ಸ್ವೀಕರಿಸುವನೇ? ಹಾಗೆ ನಾವು ನೀಡುವ ನೈವೇದ್ಯವನ್ನು ಸ್ವೀಕರಿಸಿದರೆ ನಾವು 'ಪ್ರಸಾದ' ವಿನಿಯೋಗ ಮಾಡುವುದು ಹೇಗೆ? ಆ ದೇವರು ನಾವು ನೀಡುವ ನೈವೇದ್ಯವನ್ನು ನಿಜವಾಗಿಯೂ ಸ್ವೀಕರಿಸುವನೇ ಗುರುಗಳೇ?" ಎಂದು ಪ್ರಶ್ನಿಸಿದ. 
 
ಗುರುಗಳು ಯಾವ ಉತ್ತರವನ್ನೂ ನೀಡದೆ ಆ ಶಿಷ್ಯನಿಗೆ ತರಗತಿಗೆ  ತಯಾರಾಗಲು ಆದೇಶಿಸಿದರು.  

ಆ ದಿನ ಗುರುಗಳು 'ಉಪನಿಷತ್ತು' ಗಳ ಪಾಠವನ್ನು ಆರಂಭಿಸಿದರು. ಶಿಷ್ಯರಿಗೆ ' ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ ...... ಎಂಬ ಮಂತ್ರದ ಬೋಧನೆಯನ್ನು ಮಾಡಿ, ಸೃಷ್ಟಿಯ ಎಲ್ಲವೂ ಪೂರ್ಣದಿಂದಲೇ ಆಗಿರುತ್ತದೆ, ಪೂರ್ಣಕ್ಕೆ ಪೂರ್ಣವನ್ನು ಸೇರಿಸಿದರೆ ಅಥವಾ ಪೂರ್ಣದಿಂದ ಪೂರ್ಣವನ್ನು ಕಳೆದರೆ ಪೂರ್ಣವೇ ಉಳಿಯುತ್ತದೆ, ಎಂದು ವಿವರಿಸಿದರು.   

ನಂತರ ಎಲ್ಲರಿಗೂ ಈಶಾವಾಸ್ಯೋಪನಿಷತ್ತಿನ ಮಂತ್ರಗಳನ್ನು ಕಂಠಸ್ಥ ಮಾಡಿಕೊಳ್ಳಲು ಆದೇಶಿಸಿದರು. ಎಲ್ಲಾ ವಿದ್ಯಾರ್ಥಿಗಳೂ ಅಭ್ಯಾಸದಲ್ಲಿ ತೊಡಗಿದರು. ಹೀಗೆ ಎರಡು ಮೂರುದಿನಗಳ ಸತತ ಅಭ್ಯಾಸದ ನಂತರ, ಗುರುಗಳು, ಆ ನೈವೇದ್ಯದ ವಿಚಾರವಾಗಿ ತನ್ನ ಸಂದೇಹವನ್ನು ವ್ಯಕ್ತಪಡಿಸಿದ ಶಿಷ್ಯನನ್ನು ಕರೆದು, ಅಭ್ಯಾಸಮಾಡಿದ ಮಂತ್ರಗಳನ್ನು ಪುಸ್ತಕವನ್ನು ನೋಡದೆ ಹೇಳಲು, ಹೇಳಿದರು. ಆ ಶಿಷ್ಯ  ಕಂಠಸ್ಥ ಹೇಳಿ, ಒಪ್ಪಿಸಿದ.  
 
ಆಗ, ಗುರುಗಳು ಮುಗುಳುನಗುತ್ತಾ ' ಪುಸ್ತಕದಲ್ಲಿ ಹೇಗಿದೆಯೋ ಹಾಗೆಯೇ ಬಾಯಿಪಾಠ ಮಾಡಿದೆಯಾ?" ಎಂದು ಪ್ರಶ್ನಿಸಿದರು. ' ಹೌದು ಗುರುಗಳೇ  ನಾನು ಆ ಪುಸ್ತಕದಲ್ಲಿ ಹೇಗಿದೆಯೋ ಹಾಗೆಯೇ ಆ ಮಂತ್ರಗಳ ಉಚ್ಛಾರಣೆ ಮಾಡಿದೆ, ಗುರುಗಳೇ' ಎಂದು ಉತ್ತರಿಸಿದ. 
 
" ನೀನು ಆ ಪುಸ್ತಕದಲ್ಲಿನ ಎಲ್ಲಾ ಪದಗಳನ್ನೂ ನಿನ್ನ ಮನಸ್ಸಿಗೆ ತೆಗೆದುಕೊಂಡಿದ್ದೀಯೆ ಎಂದಮೇಲೆ ಆ ಪುಸ್ತಕದಲ್ಲಿ ಆ ಪದಗಳು ಇನ್ನೂ ಅಲ್ಲೇ ಇವೆಯಲ್ಲ?" ಎಂದು ಗುರುಗಳು ಕೇಳಿದರು. ಶಿಷ್ಯ ಪಿಳಿಪಿಳಿ ಕಣ್ಣುಬಿಡುತ್ತಾ ನಿಂತ. ಗುರುಗಳು  " ನಿನ್ನ ಮನಸ್ಸಿನಲ್ಲಿರುವ ಪದಗಳು ' ಸೂಕ್ಷ್ಮ ಸ್ಥಿತಿಯಲ್ಲಿವೆ' ಮತ್ತು ಪುಸ್ತಕದಲ್ಲಿನ ಪದಗಳು 'ಸ್ಥೂಲಸ್ಥಿತಿ' ಯಲ್ಲಿವೆ " ಎಂದರು.  

ಹಾಗೆಯೇ ಆ ದೇವರೂ ಸಹ ' ಸೂಕ್ಷ್ಮ ಸ್ಥಿತಿ' ಯಲ್ಲಿದ್ದಾನೆ. ನಮ್ಮ ಕಣ್ಣಿಗೆ ಕಾಣುವುದಿಲ್ಲ. ನಾವು ಅವನಿಗೆ ಮಾಡುವ ನೈವೇದ್ಯ 'ಸ್ಥೂಲ ಸ್ಥಿತಿ'ಯಲ್ಲಿದೆ. ಆದ್ದರಿಂದ ಸೂಕ್ಷ್ಮ ಸ್ಥಿತಿಯಲ್ಲಿರುವ ಆ ದೇವರು ಸೂಕ್ಷ್ಮ ಸ್ಥಿತಿಯಲ್ಲಿಯೇ ಆ ನೈವೇದ್ಯವನ್ನು ಸ್ವೀಕರಿಸುವುದರಿಂದ, ನಾವು ಕೊಟ್ಟ ನೈವೇದ್ಯ ಅವನು ಸ್ವೀಕರಿಸಿದ ಮೇಲೂ ಕಿಂಚಿತ್ತೂ ಕಡಿಮೆಯಾಗುವುದಿಲ್ಲ.   

"ನಾವು ಮಾಡಿದ ನೈವೇದ್ಯವನ್ನು ಆ ದೇವರು ಸೂಕ್ಷರೂಪದಲ್ಲಿ ಸ್ವೀಕರಿಸುತ್ತಾನೆ, ನಂತರ ನಾವು ಆ ನೈವೇದ್ಯವೆಂದೇ ' ಪ್ರಸಾದ' ವೆಂದು ಸ್ಥೂಲರೂಪದಲ್ಲಿ ಪಡೆಯುತ್ತೇವೆ" ಎಂದು ಗುರುಗಳು ವಿವರಿಸಿದರು. ಈ ಮಾತುಗಳನ್ನು ಕೇಳಿ ಆ ಶಿಷ್ಯ ' ದೇವರಲ್ಲಿ' ತನ್ನ ಅಪನಂಬಿಕೆಗೆ ನೊಂದು ಗುರುಗಳಿಗೆ ಶರಣಾದ. ಹೀಗೆಯೇ ನಾವು ಪರಮಾತ್ಮನನ್ನು ನಂಬಿ ನಡೆಸುವ ಹಲವಾರು ಕಾರ್ಯಗಳು ಹೇಗೆ ಸಾರ್ಥಕ್ಯವನ್ನು ಪಡೆಯುತ್ತವೆ ಎಂಬುದಕ್ಕೆ ಈ ಕೆಲ ವಿಷಯಗಳನ್ನು ಗಮನಿಸಿ. 

ನಾವು ಉಣ್ಣುವ ಆಹಾರದಲ್ಲಿ 'ಭಕ್ತಿ' ಹೊಕ್ಕರೆ 
ಅದು ' ಪ್ರಸಾದ' ವಾಗುತ್ತದೆ..... 

ನಮ್ಮ ಹಸಿವಿಗೆ 'ಭಕ್ತಿ' ಹೊಕ್ಕರೆ 
ಅದು ' ಉಪವಾಸ' ವಾಗುತ್ತದೆ......  

ನಾವು 'ಭಕ್ತಿ' ಕುಡಿದರೆ 
ಅದು 'ಚರಣಾಮೃತ' ವಾಗುತ್ತದೆ......  

ನಮ್ಮ ಪ್ರಯಾಣ ' ಭಕ್ತಿ' ಪೂರ್ಣವಾದರೆ
ಅದು ' ತೀರ್ಥಯಾತ್ರೆ' ಯಾಗುತ್ತದೆ.......   

ನಾವು ಹಾಡುವ ಸಂಗೀತ' ಭಕ್ತಿ' ಮಯವಾದರೆ 
ಅದು 'ಕೀರ್ತನೆ'ಯಾಗುತ್ತದೆ...... 
 
ನಮ್ಮ ವಾಸದ ಮನೆಯೊಳಕ್ಕೆ' ಭಕ್ತಿ ' ತುಂಬಿದರೆ 
ನಮ್ಮ ಮನೆಯೇ ' ಮಂದಿರ ' ವಾಗುತ್ತದೆ....... 
 
ನಮ್ಮ ಕ್ರಿಯೆ ' ಭಕ್ತಿ' ಪೂರಿತವಾದರೆ 
ನಮ್ಮ ಕಾರ್ಯಗಳು ' ಸೇವೆ' ಯಾಗುತ್ತದೆ.....  

ನಾವು ಮಾಡುವ ಕೆಲಸದಲ್ಲಿ' ಭಕ್ತಿ ' ಇದ್ದರೆ
ಅದು ನಮ್ಮ ' ಕರ್ಮ ' ವಾಗುತ್ತದೆ.....  

ನಮ್ಮ ಹೃದಯದಲ್ಲಿ ' ಭಕ್ತಿ ' ತುಂಬಿದರೆ 
ನಾವು ಮಾನವರಾಗುತ್ತೇವೆ..... 

ನಮ್ಮ ವಿಚಾರವಿನಿಮಯದಲ್ಲಿ ' ಭಕ್ತಿ' ಇದ್ದರೆ
ಅದು ' ಸತ್ಸಂಗ' ವಾಗುತ್ತದೆ....   

🌷 ನಿನ್ನ ಬೆಲೆ ಎಷ್ಟು --?🌷



ಒಬ್ಬ ವ್ಯಕ್ತಿ ದೇವರನ್ನು ಪ್ರಶ್ನಿಸಿದ " ನನ್ನ ಜೀವನದ ಬೆಲೆ ಏನು? " ಎಂದು. ಆಗ ದೇವರು ಅವನಿಗೆ ಒಂದು ಕಲ್ಲನ್ನು ಕೊಟ್ಟು "ಈ ಕಲ್ಲಿನ ಬೆಲೆಯನ್ನು ತಿಳಿದುಕೊಂಡು ಬಾ. ಆದರೆ ಅದನ್ನು ನೀನು ಮಾರಬಾರದು" ಎಂದು ಹೇಳಿದನಂತೆ. 

ಆ ವ್ಯಕ್ತಿ ಒಬ್ಬ ಹಣ್ಣಿನ ವ್ಯಾಪಾರಿಯಲ್ಲಿ ಆ ಕಲ್ಲನ್ನು ತೆಗೆದುಕೊಂಡು ಹೋಗಿ ' ಈ ಕಲ್ಲಿನ ಬೆಲೆ ಎಷ್ಟಿರಬಹುದು? ' ಎಂದು ಕೇಳಿದನಂತೆ. ಅದಕ್ಕಾ ಹಣ್ಣಿನ ವ್ಯಾಪಾರಿ "ಈ ಕಲ್ಲಿಗೆ ನಾನು ಒಂದು ೫ ಹಣ್ಣುಗಳನ್ನು ಕೊಡುವೆ. ಮಾರುತ್ತೀಯಾ?" ಎಂದು ಕೇಳಿದನಂತೆ. ಆದರೆ ದೇವರು ಆ ಕಲ್ಲನ್ನು ಮಾರಬಾರದೆಂದು ಹೇಳಿದ್ದಾನಲ್ಲಾ! ಹಾಗಾಗಿ ಆ ವ್ಯಕ್ತಿ ಆ ಹಣ್ಣಿನ ವ್ಯಾಪಾರಿಯಿಂದ ಹೊರಟು ಮುಂದೆ ನಡೆದನಂತೆ.   

ನಂತರ ಆ ವ್ಯಕ್ತಿ ಒಬ್ಬ ತರಕಾರಿ ವ್ಯಾಪಾರಿಯ ಬಳಿ ಹೋಗಿ '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ. " ಈ ಕಲ್ಲಿಗೆ ನಾನು ಒಂದು ೧೦ ಕೆ ಜಿ ತರಕಾರಿಯನ್ನು ಕೊಡುವೆ, ಈ ಕಲ್ಲನ್ನು ಮಾರುತ್ತೀಯಾ?"  ಎಂದು ಕೇಳಿದನಂತೆ. ಆದರೆ ದೇವರು ಆ ಕಲ್ಲಿನ ಬೆಲೆಯನ್ನು ಮಾತ್ರ ತಿಳಿದು ಬಾ ಎಂದು ಹೇಳಿದ್ದಾನಲ್ಲ, ಮಾರಬಾರದೆಂದೂ ಹೇಳಿದ್ದಾನಲ್ಲ, ಹಾಗಾಗಿ ಆ ವ್ಯಕ್ತಿ  ಆ ತರಕಾರಿ ಮಾರುವವನಿಂದ ಹೊರಟು ಮುನ್ನಡೆದನಂತೆ.  

ಇದಾದಮೇಲೆ ಆ ವ್ಯಕ್ತಿ ಚಿನ್ನದ ಆಭರಣಗಳ ವ್ಯಾಪಾರಿಯಲ್ಲಿ ಹೋಗಿ  '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ. ಆ ಕಲ್ಲನ್ನು ನೋಡಿ, ಆಶ್ಚರ್ಯಚಕಿತನಾಗಿ ಆ ಆಭರಣಗಳ ವ್ಯಾಪಾರಿ " ಒಂದು ೫೦ ಲಕ್ಷ ರೂಗಳನ್ನು ಕೊಡುವೆ, ನನಗೆ ಈ ಕಲ್ಲನ್ನು ಮಾರುತ್ತೀಯಾ?" ಎಂದನಂತೆ. ಇದನ್ನು ಕೇಳಿ ಅಲ್ಲಿಂದ ಮುಂದಕ್ಕೆ ಹೊರಟು ಹೋಗುತ್ತಿರುವ ವ್ಯಕ್ತಿಗೆ "ಹೋಗಲಿ ೪ ಕೋಟಿ ರೂಗಳನ್ನು ಕೊಡುತ್ತೇನೆ" ಎಂದನಂತೆ ಆ ಚಿನ್ನದ ವ್ಯಾಪಾರಿ. ಆ ವ್ಯಕ್ತಿಯಲ್ಲಿ ಸ್ವಲ್ಪ ಆಸೆ ಮೂಡಿತು. ಆದರೆ ಆ ಕಲ್ಲನ್ನು ಮಾರಬಾರದೆಂದು ದೇವರು ಹೇಳಿದ್ದನಲ್ಲ, ಹಾಗಾಗಿ ಆ ವ್ಯಕ್ತಿಯು, ' ಇದನ್ನು ಮಾರುವುದಿಲ್ಲ ' ಎಂದು ಹೇಳಿ ಮುಂದಕ್ಕೆ ಹೊರಟನಂತೆ. 

ಕಡೆಗೆ ನಮ್ಮ ವ್ಯಕ್ತಿ ಒಬ್ಬ 'ವಜ್ರ' ಗಳ ವ್ಯಾಪಾರಿಯಲ್ಲಿಗೆ ಹೋಗಿ "  '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ. ಆ ವಜ್ರದ ವ್ಯಾಪಾರಿ ಆ ಕಲ್ಲನ್ನು ಬಹುವಾಗಿ ಪರೀಕ್ಷಿಸಿ " ನಿಮಗೆ ಎಲ್ಲಿ ಸಿಕ್ಕಿತು ಇಷ್ಟು ಬೆಲೆಬಾಳುವ ಕಲ್ಲು? " ಎಂದು ಕೇಳಿದನಂತೆ. ನಾನು ನನ್ನ ಆಸ್ತಿಯನ್ನೆಲ್ಲಾ. ಅಷ್ಟೇ ಏಕೆ ನನ್ನನ್ನೇ ನಾನು ಮಾರಿಕೊಂಡರೂ ಈ ಕಲ್ಲನ್ನು ಕೊಳ್ಳಲು ಸಾಧ್ಯವಿಲ್ಲ. ......... ಕಡೆಗೆ ಈ ಜಗತ್ತನ್ನೆಲ್ಲಾ ಮಾರಿದರೂ ಈ ಕಲ್ಲಿಗೆ ಬೆಲೆಕಟ್ಟಲು ಸಾಧ್ಯವಿಲ್ಲ " ಎಂದನಂತೆ 

ಈ ಮಾತನ್ನು ಕೇಳಿ ನಮ್ಮ ವ್ಯಕ್ತಿಗೆ ಏನು ಹೇಳಬೇಕೆಂದು ತೋಚಲೇ ಇಲ್ಲ. 

ತಕ್ಷಣ ಆ ಕಲ್ಲನ್ನು ತೆಗೆದುಕೊಂಡು ದೇವರ ಬಳಿ ಬಂದನಂತೆ. ಆಗ ದೇವರು " ನಿನ್ನ ಜೀವನದ ಬೆಲೆ ಎಷ್ಟು ಎಂದು ಕೇಳಿದೆಯಲ್ಲಾ!!! ನೋಡು ನೀನು ಮೊದಲು ಈ ಕಲ್ಲನ್ನು ಹಣ್ಣಿನ ವ್ಯಾಪಾರಿಯ ಬಳಿ, ನಂತರ ತರಕಾರಿ ವ್ಯಾಪಾರಿಯ ಬಳಿ, ಬಳಿಕ ಚಿನ್ನದ ಆಭರಣಗಳ ವರ್ತಕನ ಬಳಿ ಕೊಂಡು ಹೋಗಿ ತೋರಿಸಿದಾಗ ಅವರುಗಳು ತಮ್ಮ ತಮ್ಮ ಯೋಗ್ಯತೆಗನುಸಾರ ಈ ಕಲ್ಲಿಗೆ ಬೆಲೆ ಕಟ್ಟಿದರು.ಆದರೆ ಆ ಕಲ್ಲಿನ ನಿಜವಾದ ಬೆಲೆ ಗೊತ್ತಿದ್ದ ವಜ್ರದ ವ್ಯಾಪಾರಿಗೂ ಕೂಡ ಆ ಕಲ್ಲಿಗೆ ಬೆಲೆಕಟ್ಟಲಾಗಲಿಲ್ಲ, ಅಲ್ಲವೇ? 

ಹಾಗೆಯೇ ನಿನಗೂ ಕೂಡ ಬೆಲೆಕಟ್ಟಲಾಗುವುದಿಲ್ಲ, ನಿನ್ನ ಜೀವನವೂ ' ಅಮೂಲ್ಯ ' ಎಂದರೆ ಬೆಲೆಕಟ್ಟಲಾಗದ್ದು. ಆದರೆ ಮನುಷ್ಯರು ಅವರವರ ಯೋಗ್ಯತೆಗೆ ಅನುಸಾರವಾಗಿ ನಿನಗೆ ಬೆಲೆ ಕಟ್ಟುತ್ತಾರೆ. ಈ ಜಗತ್ತಿನ ಪ್ರತೀ ವಸ್ತುವಿಗೂ ಮಾನವರು ಆ ವಸ್ತು ತಮಗೆ ಯಾವ ರೀತಿ ಉಪಯೋಗಕ್ಕೆ ಬರುತ್ತದೆ ಎನ್ನುವುದರ ಮೇಲೆ ಅದಕ್ಕೆ ಬೆಲೆಕಟ್ಟುತ್ತಾರೆ. ನಿನಗೂ ಹಾಗೆ!!!!! ಆದರೆ ಅದು ನಿನ್ನ ಜೀವನದ ನಿಜವಾದ ಬೆಲೆಯಲ್ಲ. ಅದು ಅವರುಗಳು ಅವರ ಉಪಯೋಗ, ಅನುಕೂಲ ಮತ್ತು ಯೋಗ್ಯತೆಗನುಸಾರ ಕಟ್ಟುವ ಬೆಲೆ. ಅವರು ಕಟ್ಟುವ ಬೆಲೆ ಕೇವಲ ಅವರ ತೋರುತ್ತದೆ. 

ಆದರೆ, ನಿನ್ನ ಬೆಲೆ ಮತ್ತು ಮೌಲ್ಯ ನನಗೊಬ್ಬನಿಗೇ ಗೊತ್ತು.  ನೀನು ನನಗೆ ಎಂದೆಂದಿಗೂ ಅತ್ಯಮೂಲ್ಯ. ನಿನ್ನ ಜೀವನಕ್ಕೆ ಬೆಲೆಕಟ್ಟಲು ನನ್ನಿಂದಾಗುವುದಿಲ್ಲ " ಎಂದನಂತೆ ಆ ದೇವರೂ ಸಹ. 

ಅದಕ್ಕೆ ನಮ್ಮ ಹಿಂದಿನವರು ಹೇಳಿದ್ದು " ಮಾನವ ಜನ್ಮ ಬಹು ಶ್ರೇಷ್ಠವಾದದ್ದು " ಎಂದು. ಹಾಗಾಗಿ ನಾವು ನಮ್ಮನ್ನು ನಾವೇ ಅಪಮೌಲ್ಯ ಮಾಡಿಕೊಳ್ಳಬಾರದು ಮತ್ತು ನಮ್ಮ ಅಲ್ಪ ಮತಿಯಿಂದ ಅನ್ಯರಿಗೆ ಬೆಲೆ ಕಟ್ಟಲೂ ಬಾರದು. ಅಲ್ಲವೇ? 

🌷ದೇವಾಲಯದ ಮೆಟ್ಟಿಲುಗಳು 🌷



ನಾನು ನನ್ನ ಅಜ್ಜಿಯೊಡನೆ ದೇವಾಲಯಕ್ಕೆ ಹೋಗುತ್ತಿದ್ದೆ.  ಸುಮಾರು ಎತ್ತರದಲ್ಲಿದ್ದ ಇದ್ದ ಆ ದೇವಾಲಯಕ್ಕೆ ಮೆಟ್ಟಿಲುಗಳಿದ್ದವು. ಅವುಗಳನ್ನು ಹಟ್ಟುವುದು ಪುಟ್ಟವನಾದ ನನಗೆ ಬಹಳ ಸೋಜಿಗ ಮತ್ತು ಸಂತೋಷವಾಗುತ್ತಿತ್ತು. ಆದರೆ ನನ್ನ ಅಜ್ಜಿ ವಯಸ್ಸಾಗಿದ್ದರಿಂದ ಹತ್ತಲು ಕಷ್ಟಪಡುತ್ತಿದ್ದರು.  ನಾನು "ಅಜ್ಜಿ, ನಾವು ಪ್ರತಿ ನಿತ್ಯ ಈ ದೇವಾಲಯದ ಮೆಟ್ಟಿಲುಗಳನ್ನು ಹತ್ತಬೇಕಲ್ಲ!!! ಈ ದೇವಾಲಯವನ್ನು ನೆಲದ ಮಟ್ಟಕ್ಕೆ ಏಕೆ ಕಟ್ಟುವುದಿಲ್ಲ. ಇಷ್ಟು ಮೆಟ್ಟಿಲುಗಳನ್ನು ಇಟ್ಟು,  ದೇವಾಲಯವನ್ನು ಅಷ್ಟು ಎತ್ತರಕ್ಕೆ ಏಕೆ 
ಕಟ್ಟುತ್ತಾರೆ? " ಎಂದು ಕೇಳುತ್ತಿದ್ದೆ. 

ಆಕೆ ಅಂದು ಇತ್ತ ಉತ್ತರದ  ಅರ್ಥ ನನಗಿಂದು ನಿಧಾನವಾಗಿ ಆಗುತ್ತಿದೆ. ಆಕೆ ಹೇಳಿದಳು " ಆ ದೇವರು ಅಥವಾ ಆ ಪರತತ್ವ ಎನ್ನುವುದು ಉನ್ನತ ಸ್ಥರದಲ್ಲಿರುತ್ತದೆ. ನಾವು ಜಗತ್ತನ್ನು ಅಂಟಿಸಿಕೊಂಡು ಕೆಳಸ್ಥರದಲ್ಲಿದ್ದೇವೆ, ಅಲ್ಲವಾ? ಹಾಗಾಗಿ ಆ ದೇವರನ್ನು ಕಾಣಲು ಅಥವಾ  ಆ ಪರತತ್ವವನ್ನು ಅರಿಯಲು ಹಂತಹಂತವಾಗಿ ಮೆಟ್ಟಿಲು ಮೆಟ್ಟಿಲಾಗಿ ನಾವು ಮೇಲೆ ಏರಬೇಕು. ಮೆಟ್ಟಿಲಮೇಲೆ ಕಾಲನ್ನು ಊರಿ, ಅದನ್ನು ತೊರೆದು ಮುಂದಿನ ಮೆಟ್ಟಿಲಮೇಲೆ ಕಾಲಿಡುತ್ತಾ ಮೇಲೆ ಏರಬೇಕು. ಹಾಗೆ ಏರುತ್ತಾ ಎಲ್ಲಾ ಮೆಟ್ಟಿಲುಗಳನ್ನೂ ದಾಟಿ ಮೇಲೆ ಏರಿದಾಗ ನಮಗೆ ಭಗವದ್ಧರ್ಶನವಾಗುತ್ತದೆ."   

ಅಜ್ಜಿ ಮತ್ತೂ ಮುಂದುವರೆಸಿ " ಪ್ರತೀ ಮೆಟ್ಟಿಲೂ ನಮಗೆ ' ನಾವು ಮೇಲೇರುತ್ತಿದ್ದೇವೆ' ಎಂದು ಸೂಚಿಸುತ್ತದೆ. ಈ ಮೆಟ್ಟಿಲುಗಳೇ ನಮ್ಮ ಅಂತರಂಗದಲ್ಲಿರುವ ಕಾಮ, ಕ್ರೋಧ, ಲೋಭ, ಮದ, ಮೋಹ , ಮಾತ್ಸರ್ಯಗಳು. ಅವುಗಳನ್ನು ಒಂದಾದಮೇಲೆ ಒಂದರಂತೆ  ಹಿಂದಟ್ಟಿ, ಮೆಟ್ಟಿ ನಿಂತು ಮುನ್ನಡೆದಾಗ ನಾವು 'ದೇವ' ನ  ಆಲಯವನ್ನು ತಲುಪುತ್ತೇವೆ ಮತ್ತು ಪರತತ್ವದ ದರ್ಶನವಾಗುತ್ತದೆ. ಹಂತಹಂತವಾಗೇ ಮೇಲೇರಬೇಕು. ಒಂದೇಬಾರಿ ನೆಲದಿಂದ ಹಾರಿ ಮೇಲೆ ಹಾರಲು ಸಾಧ್ಯವಿಲ್ಲ. ನೆನಪಿರಲಿ ಇದು ಜೀವನದ ಸತ್ಯ. ನೀನು ಎಲ್ಲಾ ಮೆಟ್ಟಿಲುಗಳನ್ನು ' ಮೆಟ್ಟಿ' ಮುನ್ನಡೆದಾಗ ನಿನಗೆ ಅಂತರಂಗದಲ್ಲಿನ ಸತ್ಯದ' ದರ್ಶನವಾಗುತ್ತದೆ.      

ಮಿತ್ರರೇ ಅಂದು ಅಜ್ಜಿ ಹೇಳಿದ ವಿಚಾರ ನನಗೆ ಅರ್ತವೇ ಆಗಿರಲಿಲ್ಲ. ಮತ್ತೆ ಇಂದು ಮೆಲುಕು ಹಾಕುವಾಗ ' ಅಬ್ಬಾ! ' ಎಂತಹ ಅದ್ಭುತ ವಿಚಾರವನ್ನು ನಮ್ಮ ಪುರಾತನರು ಸೂಕ್ಷ್ಮವಾಗಿ ಮತ್ತು ಸೂಚ್ಯವಾಗಿ ನಮಗೆ ತಿಳಿಸಲು ಪ್ರಯತ್ನಿಸಿದ್ದಾರೆ ಎಂದು ತಿಳಿಯಿತು. ದಯಮಾಡಿ ನೀವೂ ಸಹ ಈ ವಿಚಾರವನ್ನು ಅಂತರ್ಮಂಥನ ಮಾಡಿಕೊಂಡು, ಅನುಭವಿಸಿ, ಆನಂದಿಸಿ.