Tuesday, 28 February 2017

ಪಶ್ಚಾತ್ತಾಪ

ಸಾಮಾನ್ಯವಾಗಿ ಮನುಷ್ಯನ ಜೀವನ ಸುಳ್ಳು ಮತ್ತು ನಿಜಗಳಿಂದ ತುಂಬಿರುತ್ತದೆ. ಅವನು ಬದುಕಿನ್ನುದ್ದಕ್ಕೂ ಸುಳ್ಳನ್ನು ಹಲವೇಳೆ ತನ್ನ ಮರ್ಯಾದೆ ಕಾಪಾಡಿಕೊಳ್ಳಲು ಮತ್ತು ಕೆಲಬಾರಿ ಅನ್ಯರನ್ನು ಕಾಪಾಡಲು, ಕೆಲವು ವೇಳೆ ಅನಾವಶ್ಯಕವಾಗಿ ಮತ್ತು ಕೆಲವು ವೇಳೆ ಸಂದರ್ಭವನ್ನು ದಾಟಲಿಕ್ಕಾಗಿ ಹೇಳುತ್ತಲಿರುತ್ತಾನೆ. ಆದರೆ ಒಂದು ವಿಷಯ ಮಾತ್ರ ಸತ್ಯ. ಅದೇನೆಂದರೆ ಮನುಷ್ಯನ ಕೊನೆಯ ಗಳಿಗೆಗಳು ಸಮೀಪಿಸುತ್ತಿದಂತೆಯೇ ಅವನ ಬಾಯಿಂದ ಸತ್ಯವಲ್ಲದೆ ಬೇರೇನೂ ಹೊರಡುವುದಿಲ್ಲ. ನಾ ಇಲ್ಲಿ ಹೇಳ ಹೊರಟಿರುವ ಕಥೆ, ಒಂದು ಆಸ್ಪತ್ರೆಯಲ್ಲಿನ, ಸಾಮಾನ್ಯವಾಗಿ ಕೊನೆಯುಸಿರು ಎಳೆಯುತ್ತಿರುವ ರೋಗಿಗಳನ್ನು ತರಲಾಗುತ್ತಿದ್ದ ವಾರ್ಡಿನಲ್ಲಿ ಕೆಲಸಮಾಡುತ್ತಿದ್ದ ಓರ್ವ'ದಾದಿ'ಯದು. ಮೊದ ಮೊದಲಲ್ಲಿ ಆ ದಾದಿಗೆ ' ತನ್ನನ್ನು ಈ ವಾರ್ಡಿಗೆ ಕಳುಹಿಸಿದ್ದಾರಲ್ಲ' ಎಂದು ಬಹಳ ಬೇಸರವಿತ್ತು. ಕಾಲಕಳೆದಂತೆ ಆಕೆ ಅಲ್ಲಿ ಬರುವ ರೋಗಿಗಳಲ್ಲಿ ಒಂದು ಸಾಮ್ಯವನ್ನು ಕಂಡಳು. ಅಲ್ಲಿಗೆ ಬರುವ ತೀರಾ ವಯಸ್ಸಾದ ರೋಗಿಗಳೆಲ್ಲರೂ ಒಂದೇ ರೀತಿಯ ಮಾತುಗಳನ್ನಾಡುತ್ತಿದ್ದರು. ಅದೇನೆಂದರೆ ' ಪಶ್ಚಾತ್ತಾಪ' ಅವರು ಬದುಕಿನಲ್ಲಿ ಮಾಡಲಾಗದಿದ್ದ ವಿಚಾರವಾಗಿ ' ಪಶ್ಚಾತ್ತಾಪ'. ಅದನ್ನು ಸೂಕ್ಷ್ಮವಾಗಿ ಗಮನಿಸಿದ ಆಕೆ ಕಂಡದ್ದೇನೆಂದರೆ ಎಲ್ಲರ 'ಪಶ್ಚಾತ್ತಾಪ' ವೂ ಒಂದೇ ರೀತಿಯದಾಗಿತ್ತು. ಎಲ್ಲರೂ ಅದನ್ನೇ ಪುನರುಚ್ಛರಿಸುತ್ತಿದ್ದರು. ಎಂಟುವರ್ಷಗಳ ಕಾಲ ಆ ವಾರ್ಡಿನಲ್ಲಿ ಕಳೆದ ನಂತರ ಆಕೆ ಕಂಡಿದ್ದೇನೆಂದರೆ,  5 ರೀತಿಯ 'ಪಶ್ಚಾತ್ತಾಪ' ಗಳು ಎಲ್ಲರಲ್ಲೂ ಸಮಾನವಾಗಿತ್ತು. 

ಆದ್ದರಿಂದ ನಾವು ಇಂದು ಇಲ್ಲಿ, ಸಾಮಾನ್ಯವಾಗಿ ಮನುಷ್ಯರಲ್ಲಿರುವ  ಮನುಷ್ಯರ ಆ 5 ರೀತಿಯ 'ಪಶ್ಚಾತ್ತಾಪ' ಗಳ ಬಗ್ಗೆ ವಿಚಾರ ಮಾಡುವ. ಅದಕ್ಕೆ ಮುಂಚೆ ಆ ಐದು ಪಶ್ಚಾತ್ತಾಪಗಳನ್ನು ಉಲ್ಲೇಖ ಮಾಡಿರುವ ಪುಸ್ತಕದ ಹೆಸರು ' THE TOP 5 REGRETS OF THE DYING' ಮತ್ತು ಆ ಪುಸ್ತಕವನ್ನು ಬರೆದವರು 'BROWNYWARE' ಎಂಬಾತ.  ಬನ್ನಿ ಆತ ಉಲ್ಲೇಖಮಾಡಿರುವ ಪಶ್ಚಾತ್ತಾಪಗಳು ಹೀಗಿವೆ: 

ಆತ ಉಲ್ಲೇಖಮಾಡಿರುವ  5 ನೆಯ ಪಶ್ಚಾತ್ತಾಪವೆಂದರೆ "I wish I had let myself be happier" ನಾನು ನನ್ನನ್ನು ಮತ್ತಷ್ಟು ಸಂತೋಷದಿಂದ ಇಟ್ಟುಕೊಳ್ಳಬಹುದಿತ್ತು. ಆದರೆ ಸಂತೋಷವೆನ್ನುವುದು ನಮ್ಮಲ್ಲಿರುವ ದೊಡ್ಡ ಬಂಗಲೆ, ಬೆಲೆಬಾಳುವ ಗಾಡಿ, ಅಸ್ತಿ-ಪಾಸ್ತಿ ಇತ್ಯಾದಿಗಳು ಇದ್ದರೆ ಸಂತೋಷ ಮತ್ತು ಅವುಗಳು ಇಲ್ಲದಿದ್ದರೆ ಸಂತೋಷವಿಲ್ಲ' ಎನ್ನುವ ವಾದವನ್ನು ಮನೋವಿಜ್ಞಾನ ತಳ್ಳಿಹಾಕುತ್ತದೆ. ಎರಡೂ ಸಂದರ್ಭದಲ್ಲಿ ನಾವು ಸಂತೋಷದಿಂದ ಇರಬೇಕೆಂದುಕೊಂಡರೆ ಖಂಡಿತವಾಗಿಯೂ ಇರಬಹುದು. ಸಂತೋಷ ಹೇಗೆ ಸಿಗುತ್ತದೆ ಎಂದರೆ, ಯಾರಿಗಾದರೂ ಸಹಾಯಮಾಡುವುದರಿಂದ, ಮತ್ತೊಬ್ಬರಿಗೆ ಸಂತಸವನ್ನು ನೀಡುವುದರಿಂದ, ನಮ್ಮವರೊಂದಿಗೆ ಸಮಯ ಕಳೆಯುವುದರಿಂದ ಮತ್ತು ಬದುಕಿನ ಪ್ರತಿ ಘಳಿಗೆಯನ್ನೂ ಸಂತಸದಿಂದ ಅನುಭವಿಸುವುದರಿಂದ ಸಂತೋಷ ಸಿಗುತ್ತದೆ. ಹಾಗೆ ಸಂತೋಷಪಡುವ ಪ್ರವೃತ್ತಿ ಬೆಳೆಸಿಕೊಂಡರೆ ಈ ರೀತಿಯ ಪಶ್ಚಾತಾಪ ಪಡುವ ಸಂದರ್ಭ ಬರುವುದಿಲ್ಲ, ಅಲ್ಲವೇ?  

ಆತ ಉಲ್ಲೇಖಮಾಡಿರುವ 4 ನೆಯ ಪಶ್ಚಾತ್ತಾಪವೆಂದರೆ 'I wish I had stayed in touch with my friends' ನಾನು ನನ್ನ ಸ್ನೇಹಿತರ ಸಂಪರ್ಕದಲ್ಲಿದ್ದಿದ್ದರೆ ಚೆನ್ನಾಗಿರುತ್ತಿತ್ತು.  ಮನುಷ್ಯ ತನ್ನ ಬದುಕಿನಲ್ಲಿ,  ಜೀವನದ ಜಂಜಡದಲ್ಲಿ ಎಷ್ಟು ಮುಳುಗಿ ಹೋಗುತ್ತಾನೆಂದರೆ ಅವನು ಬಂಧುತ್ವ ಮತ್ತು ಸಂಬಂಧಗಳನ್ನು ಮರೆತು ಹೋಗುತ್ತಾನೆ. ಸ್ನೇಹಿತರನ್ನು, ಮುಖ್ಯವಾಗಿ ಸುಖ ದುಃಖಗಳಲ್ಲಿ ತನಗೆ ಒತ್ತಾಸೆಯಿಂದ ನಿಲ್ಲುವಂತಹ  ಸ್ನೇಹಿತರನ್ನು, ಸಹಾಯಮಾಡುವಂತಹ  ಸ್ನೇಹಿತರನ್ನು ಮತ್ತು ಜೀವನದ ಬಹುಪಾಲು ಕಾಲವನ್ನು ಯಾರೊಂದಿಗೆ ಕಳೆದ್ದಿದ್ದೆವೋ ಅಂತಹ ಸ್ನೇಹಿತರನ್ನು ಮರೆತು ದೂರಾಗುತ್ತಾನೆ. ಹಾಗಾಗಿ ನಮಗೆ ವಿವಾಹಿತರಾಗಿರಬಹುದು ಮತ್ತು ಮಕ್ಕಳು ಮರಿ ಇರಬಹುದು, ನಾವೆಷ್ಟೇ ಜೀವನದ ಸುಳಿಯಲ್ಲಿ ಸಿಲುಕಿದ್ದರೂ ಸ್ನೇಹಿತರನ್ನು ಮರೆಯಬಾರದು. ಏಕೆಂದರೆ ಬದುಕಿನಲ್ಲಿ ಸಂಕಟದ ಸಮಯದಲ್ಲಿ ಸಾಂತ್ವನ ಹೇಳುವವನೇ ಸ್ನೇಹಿತ. ಈ ಸಾಲುಗಳನ್ನು ಓದಿದ ಮೇಲೆ ನಿಮ್ಮ ಹತ್ತಿರದ ಆದರೆ ನೀವು ಮರೆತ ಅಥವಾ ಸಂಪರ್ಕದಲ್ಲಿಲ್ಲದ ಸ್ನೇಹಿತರನ್ನು ಹುಡುಕಿ, ಫೋನ್ ಮಾಡಿ, ಕಡೆಯ ಪಕ್ಷ  ಫೇಸ್ ಬುಕ್ಕಿನಲ್ಲಿ ಹುಡುಕಿ ಸಂಪರ್ಕಮಾಡಿ ಮತ್ತೆ ನಂಟನ್ನು ಬೆಸೆದು ಕೊಳ್ಳಿ. ಆಗ ಖಂಡಿತ ಮನಸ್ಸಿಗೆ ಸಂತೋಷವಾಗುತ್ತದೆ. ಸಂಪರ್ಕ ಮಾಡಲಾಗದ ಸ್ಥಿತಿಗೆ ತಲುಪಿ ಇಂತಹ ಪಶ್ಚಾತ್ತಾಪ ಪಡುವುದಕ್ಕಿಂತ ಇದು ಲೇಸಲ್ಲವೇ?   

ಇನ್ನು  ಮೂರನೆಯ ಪಶ್ಚಾತ್ತಾಪವೆಂದರೆ, 'I wish I had the courage to express my feelings' ನನ್ನ ಭಾವನೆಗಳನ್ನು ನಾನು ಧೈರ್ಯವಾಗಿ ಹೇಳಲಾಗಿದ್ದಿದ್ದರೆ!! ಬಹಳಷ್ಟು ಜನರು ಸಮಾಜದ ಭಯದಿಂದ, ಮನೆಯವರ ಹೆದರಿಕೆಯಿಂದ ಅಥವಾ ಬೇರೆ ಯಾವುದೋ ಕಾರಣದಿಂದ ತಮ್ಮ ಭಾವನೆಗಳನ್ನು ಧೈರ್ಯವಾಗಿ ಬಯಲು ಮಾಡದೆ ಇರುತ್ತಾರೆ. ಹಾಗೆ ಮಾಡುವುದರಿಂದ ಭಾವನೆಗಳು ಅಡಗಿಹೋಗಿ ಸುಖದ ಗಳಿಗೆಗಳಿಂದ ವಂಚಿತರಾಗುತ್ತಾರೆ. ಮುಖತಃ ಹೇಳಲಾಗದಿದ್ದರೆ, ಪತ್ರ ಮುಖೇನ, ಅಥವಾ ಮಿತ್ರರ ಮೂಲಕ, ಬಂಧು ಬಳಗದವರ ಮೂಲಕ ನಮ್ಮ ಭಾವನೆಗಳನ್ನು ಅರುಹುವುದರಿಂದ ನಮ್ಮಲ್ಲಿನ ಭಾವನೆ ರೂಪ ಸಿಗುತ್ತದೆ, ನಮ್ಮ ಭಾವ ತಲುಪಬೇಕಾದ ಎಡೆಗೆ ತಲುಪುತ್ತದೆ. ಇದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ. ಧೈರ್ಯವನ್ನು ತಂದುಕೊಂಡು ಹೇಳಬೇಕಾದ್ದನ್ನು ಹೇಳಲಾಗಿದ್ದಿದ್ದರೆ ಇಂತಹ ಪಶ್ಚಾತ್ತಾಪದ ಸಂಕಟ ಬರುತ್ತಿರಲಿಲ್ಲ ಅಲ್ಲವೇ?  

ಇನ್ನು ಎರಡನೆಯ ಬಹು ಮುಖ್ಯ ಪಶ್ಚಾತ್ತಾಪದ ಮಾತೆಂದರೆ 'I wish I had not worked so hard.'ನಾನು ಬದುಕಿನಲ್ಲಿ ಇಷ್ಟೊಂದು ಶ್ರಮಪಡಬೇಕಾಗಿರಲಿಲ್ಲವೇನೋ' ಎಂದು ಬದುಕಿನ ಅಂತ್ಯಕ್ಕೆ ಬಹು ಹತ್ತಿರವಾದ ನಮಗೆ ಅನಿಸುತ್ತದೆ.  'ನಾನು ಇಷ್ಟೊಂದು ಶ್ರಮಪಟ್ಟೆ , ಇಷ್ಟೊಂದು ಕೂಡಿಟ್ಟೆ . ಹಾಗೆ ಮಾಡುವಾಗ 'ನನಗೆ'  ನಾನು ಸಮಯವನ್ನೇ ಕೊಡಲಿಲ್ಲ. ನನಗಾಗಿ ನಾನು ಏನನ್ನೂ ಮಾಡಲಾಗಲಿಲ್ಲ. ಕೇವಲ ಅನ್ಯರಿಗಾಗಿಯೇ ಶ್ರಮಪಡುತ್ತಿದ್ದೆ', ಎಂದು.  ಇಂದಿನ ಪರಿಸ್ಥಿತಿಯಲ್ಲಿ ಇದು ಬಹಳ ಸತ್ಯ. ಏಕೆಂದರೆ ಇಂದು ಜನರು ತಮ್ಮ ಸಂತೋಷಕ್ಕಾಗಿ ದುಡಿಯುವುದಿಲ್ಲ. ಅವರು ದುಡಿಯುವುದು ತಾವು ಮುನ್ನುಗ್ಗಿ ಅನ್ಯರನ್ನು ಹಿಮ್ಮೆಟ್ಟಿಸಲು, ತಮ್ಮನ್ನು ನಂಬಿದವರನ್ನು ಸುಖವಾಗಿಟ್ಟಿದ್ದೇವೆ ಎನ್ನುವ ಭ್ರಮೆಯಿಂದ ಮಾತು ಏನನ್ನೋ ಸಾಧಿಸುತ್ತಿದ್ದೇವೆ ಎನ್ನವ ಭ್ರಮೆಯಲ್ಲಿ ದುಡಿಯುವುದು ಮಾತ್ರವಾಗಿರುತ್ತದೆ. ಈ ನಿಟ್ಟಿನಲ್ಲಿ ತಾವು ಹಲವರನ್ನು ಹಿಟ್ಟಿಸುವುದರಿಂದ ಅವರಿಗೆ ಸಂತೋಷವುಂಟಾಗುತ್ತದೆ. ಆದರೆ ಅದು ಕೇವಲ ತಾತ್ಕಾಲಿಕ ಸಂತೋಷವಾಗಿರುತ್ತದೆ ಮತ್ತು ಅದರಿಂದ ಯಾವ ಪ್ರಯೋಜನವೂ ಇರುವುದಿಲ್ಲ. ಹಾಗಾಗಿ ಎಷ್ಟು ಶ್ರಮ ಪಡಬೇಕೋ ಅಷ್ಟೇ ಶ್ರಮ ಪಡಬೇಕು. ಯಾರ್ಯಾರಿಗೆ ಎಷ್ಟು ಸಮಯವನ್ನು ಕೊಡಬೇಕೋ, ಎಂದರೆ ಪತ್ನಿ/ಪತಿಗೆ, ಮಕ್ಕಳಿಗೆ,  ತಂದೆ ತಾಯಂದರಿಗೆ, ಮಿತ್ರರಿಗೆ ಮತ್ತು ತಮಗೆ ಎಷ್ಟು ಸಮಯವನ್ನು ಕೊಡಬೇಕೋ ಅಷ್ಟನ್ನು ಕೊಡಲೇಬೇಕು. ಹಾಗೆ ಮಡದಿ ಮಕ್ಕಳಿಗೆ ನಿಮ್ಮ ಸಮಯವನ್ನು ನೀಡದಿದ್ದರೆ ಅವರಿಗೆ ಹೇಗನ್ನಿಸುತ್ತದೆ ಮತ್ತು ಮನೆಯ ವಾತಾವರಣ ಹೇಗಿರುತ್ತದೆ ಎನ್ನುವುದನ್ನು ಓದುಗರ ಊಹೆಗೆ ಬಿಟ್ಟದ್ದು. ಹಾಗಾಗಿ ನಿಜವಾದ ಸಂತಸವನ್ನು ಕಂಡುಕೊಳ್ಳುವ ಹಾದಿಯಲ್ಲಿ ನಡೆಯಬೇಕು. ತಾವೂ ಸಂತೋಷಪಟ್ಟು ಇತರರನ್ನೂ ಸಂತೋಷಪಡಿಸುವುದೇ ಜೀವನದ ಧಾರ್ಮ. ಅದನ್ನು ಸರಿಯಾಗಿ ಪಾಲಿಸಿದರೆ ' ಪಶ್ಚಾತ್ತಾಪ' ಪಡುವ ಪ್ರೇಮೇಯವಿರುವುದಿಲ್ಲ. 

ಕಟ್ಟಕಡೆಯದಾಗಿ ಜೀವನದಂತ್ಯದಲ್ಲಿ ತೊಂಬತ್ತು ಪ್ರತಿಶತ ಜನರ ಪಶ್ಚಾತ್ತಾಪ 'I wish I had the courage to live a live true to myself, and not the life others expected of me. ' ನನ್ನ ಅಂತರಾತ್ಮಕ್ಕೆ ದ್ರೋಹಮಾಡದೆ ಅದರ ದನಿಗೆ 'ಓ ಗೊತ್ತು' ಸತ್ಯವಾಗಿ ನಡೆದುಕೊಳ್ಳಲಾಗಿದ್ದಿದ್ದರೆ' ಎನ್ನುವ ಪಶ್ಚಾತ್ತಾಪ.  'ನಮಗೇನೋ ಆಗಬೇಕು ಎಂದು ಇತ್ತು. ಆದರೆ ನಮ್ಮ ತಂದೆ ತಾಯಿಯರು, ಬಂಧು ಬಳಗದವರು ಏನನ್ನುತ್ತಾರೋ ಎನ್ನುವ ಭಯಕ್ಕೆ, ಸಂಕೋಚಕ್ಕೆ ನಾವು ಏನೋ ಆಗಿಬಿಡುತ್ತೇವೆ. ಕಲಾವಿದನಾಗಬೇಕೆಂದಿದ್ದವರು  ಕೋವಿ ಹಿಡಿಯುವ ಯೋಧನಾಗಿಬಿಡುತ್ತೇವೆ, ಅಧ್ಯಾಪಕನಾಗಬೇಕೆಂದಿದ್ದವರು ಎಂಜಿನಿಯರ್ ಆಗಿಬಿಡುತ್ತೇವೆ. ಹಾಗಾಗಿ ಪ್ರತಿನಿತ್ಯ ನಾನು ಯಾವ ಕೆಲಸ ಮಾಡುತ್ತಿರುತ್ತೇವೋ ಅದರಿಂದ ನಮಗೆ ಸಂತೋಷವಾಗುವುದಿಲ್ಲವಾದರೂ, ಕೇವಲ ಹಣ  ಸಂಪಾದನೆಗಾಗಿ ಆ ಕೆಲಸ ಮಾಡುತ್ತೇವೆ. ನಮಗಿಷ್ಟವಿಲ್ಲದಿದ್ದರೂ ಒಂದು ರೀತಿಯ ಬಲವಂತಕ್ಕೆ ಆ ಕೆಲಸ ಮಾಡುತ್ತಿರುತ್ತೇವೆ. ಇಡೀ ಬದುಕು ನಮಗಿಷ್ಟವಿಲ್ಲದ ಕಾರ್ಯಕೆಲಸಗಳನ್ನು ಮಾಡುತ್ತಾ ಪ್ರತಿನಿತ್ಯ ಒಂದು ಬೇಸರದ ಜೀವನ ಮಾಡಿ ಸಾವಿನಂಚಿನಲ್ಲಿರುವಾಗ, ಬದುಕಿನಂತ್ಯದಲ್ಲಿ ' ಛೆ! ಇಂತಹ ಕೆಲಸವಾಯಿತು, ಬಹುಶಃ ನಾ ಇಚ್ಛೆಪಡುವ ಕೆಲಸಮಾಡಲಾಗಿದ್ದಿದ್ದರೆ' ಎನ್ನುವ ಪಶ್ಚಾತ್ತಾಪದ ಭಾವ ಸಾಮಾನ್ಯ ಎಲ್ಲರ ಮನಸ್ಸಿನಲ್ಲೂ ಸುಳಿದು ಹೋಗುತ್ತದೆ. ಹಾಗಾಗಿ ಬದುಕಿನಂತ್ಯದವರೆಗೆ ಕಾಯದೆ, ಇಂದು ನಮಗೆ ನಾವು ಮಾಡುತ್ತಿರುವ ಕೆಲಸ ಇಷ್ಟವಿಲ್ಲದೆ ಹೋದರೆ ಅಥವಾ ನಮ್ಮ ಅಭಿರುಚಿಯ ಕೆಲಸ ಬೇರೆಯದೇ ಇದೆ ಎನ್ನುವುದಾದರೆ, ಜಗತ್ತಿನಲ್ಲಿ ಬದುಕಲು ಬಹುತೇಕ ನ್ಯಾಯಯುತವಾದ ಮಾರ್ಗಗಳಿವೆ. ನಮಗೆ ಇಷ್ಟವಾದ ಯಾವುದಾದರೂ ಒಂದು ಕೆಲಸವನ್ನು ಮಾಡುತ್ತಾ ತೃಪ್ತಿಯನ್ನು ಪಡೆಯಬಹುದು. 

ಇಲ್ಲಿ ಎಲ್ಲಾ ತಂದೆ ತಾಯಿಯರಿಗೆ ನನ್ನದೊಂದು ಬಿನ್ನಹ. ದಯಮಾಡಿ ನಿಮ್ಮ ಮಕ್ಕಳಿಗೆ ' ನೀ ಡಾಕ್ಟರ್ ಅಥವಾ ಎಂಜಿನಿಯರ್ ' ಆಗಬೇಕೆಂಬುವ ಒತ್ತಡವನ್ನು ಹೇರಬೇಡಿ. ಎಲ್ಲರೂ ಡಾಕ್ಟರ್ ಅಥವಾ  ಎಂಜಿನಿಯರ್ ಆಗುವುದು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಯಾವುದಾದರೂ ಒಂದು ಪ್ರವುತ್ತಿಯಲ್ಲಿ ತಮ್ಮ ವೃತ್ತಿಯನ್ನು ರೂಢಿಸಿಕೊಳ್ಳುತ್ತಾರೆ. ಅವರನ್ನು ಆ ನಿಟ್ಟಿನಲ್ಲಿ ಬೆಳೆಯಲು ಬಿಟ್ಟರೆ ಬಹುಶಃ ಯಾರಿಗೂ ' ತಾನು ಆಗಬೇಕಾದದ್ದು ಆಗಲಿಲ್ಲವಲ್ಲ' ಎನ್ನುವ ಪಶ್ಚಾತ್ತಾಪ ಬದುಕಿನಲ್ಲಿ ಬರುವುದಿಲ್ಲ. 

ಮಿತ್ರರೇ ಬದುಕಿನಲ್ಲಿ ನಿರ್ಭಯವಾಗಿ, ಸಾಮಾಜಿಕ ವ್ಯವಸ್ಥೆಗೆ ಧಕ್ಕೆಬಾರದಂತೆ ನಾವು ಏನು ಮಾಡಬೇಕೆಂದಿದ್ದೇವೋ ಅದನ್ನು ಮಾಡಲಾದರೆ ಅಥವಾ ಏನಾಗಬೇಕೆಂದಿದ್ದೇವೋ ಅದಾಗಲಾದರೆ ಬದುಕು ಸಾರ್ಥಕವಾಗುತ್ತದೆ ಮತ್ತು ಬದುಕಿನ ಅಂತ್ಯವೂ, ಪಶ್ಚಾತ್ತಾಪ ರಹಿತವಾಗಿ, ಸಂತಸದಿಂದ ಕೂಡಿ ಶಾಂತ ಮತ್ತು ಸುಖ ಮರಣಕ್ಕೆ ನಾವು ಭಾಜನರಾಗಬಹುದು. 


ರವಿ ತಿರುಮಲೈ