Saturday 14 July 2018

ಅಮ್ಮ ನೀನೆಲ್ಲಿ ಹೋದೆ


ಕೈ ತುತ್ತಲಿ ಪ್ರೀತಿಯ ಮುತ್ತ ಬೆರೆಸಿ
ಉಣವ ಬಡಿಸಿ ಹಸಿವ ನೀಗಿಸಿದ
ಅಮ್ಮ, ನೀನಿಂದು ಇಲ್ಲ.

ಹೊರಗಾಡಿ ದಣಿದು ನಿನ್ನ
ಮಡಿಲ ಸೇರೆ, ಮುದವ ನೀಡಿದ
ಅಮ್ಮ , ನೀನಿಂದು ಇಲ್ಲ.

ಬದುಕ ಪೋರಿನಲಿ ಬೆಂಡಾಗಿ ಬಂದಾಗ
ಸಾಂತ್ವನದ ನುಡಿಗಳನುಲಿದ
ಅಮ್ಮ, ನೀನಿಂದು ಇಲ್ಲ.

ನಾನೆಷ್ಟು ಬೆಳೆದರೂ, ಎನ್ನ
ಮಗುವಿನಂತೆ ಲಾಲಿಸುವ,
ಅಮ್ಮ, ನೀನಿಂದು ಇಲ್ಲ.

ನಿನಗಾಗಿ ಅಲೆದಲೆದು ಹುಡುಕಾಡಿ
ಪರದಾಡಿರಲು ನಾ, ಅಮ್ಮ
ನೀನೆಲ್ಲಿ ಹೋದೆ ನೀನೆಲ್ಲಿ ಹೋದೆ

ರವಿ ತಿರುಮಲೈ

Saturday 7 July 2018

' ಒತ್ತಡ'.


೨೧ನೆಯ ಶತಮಾನದ ಮಹಾ ದೊಡ್ಡ ಖಾಯಿಲೆಯೆಂದರೆ ' ಒತ್ತಡ'.  ಪುಟ್ಟ ಮಗುವಿಂದ ಹಿಡಿದು ನಿವೃತ್ತನಾದವನ ತನಕ ಎಲ್ಲರೂ ಒಂದಲ್ಲ ಒಂದು ರೀತಿಯ 'ಒತ್ತಡ' ದಲ್ಲಿರುತ್ತಾರೆ. ಬಹುಶಃ ನಾವು ಏನನ್ನೂ ಮಾಡದೆ ಇರುವಾಗ ಮಾತ್ರ ಆ ಒತ್ತಡದಿಂದ ಮುಕ್ತರಾಗಿರುತ್ತೇವೆ ಎಂದು ಹೇಳಬಹುದು. ಆ ಸ್ಥಿತಿಯಲ್ಲೂ ಮನಸ್ಸಿನ ಯಾವುದೋ ಮೂಲೆಯಲ್ಲಿ ಆ ಒತ್ತಡದ ಛಾಯೆಗಳು ಇರುತ್ತವೆ.  ಹಾಗಾಗಿಯೇ ನಾವುಗಳು ವಾರಾಂತ್ಯದಲ್ಲಿ ಅಥವಾ ರಜೆಯ ದಿನಗಳಲ್ಲಿ 'ಒತ್ತಡ' ದಿಂದ ತಪ್ಪಿಸಿಕೊಳ್ಳಲು ಎಲ್ಲಿಗಾದರೂ ದೂರ ಓಡಿಹೋಗುವುದು.  ಅಲ್ಲಿಂದ ಹಿಂತಿರುಗಿ ಮತ್ತೆ ಕೆಲಸದಲ್ಲಿ ತೊಡಗಿದರೆ ಮತ್ತೆ ಶುರುವಾಗುವುದು 'ಒತ್ತಡ' ದ ಸುಳಿಯಲ್ಲಿನ ಜೀವನ. ಸಕ್ರಿಯವಾದ ಜೀವನ ಮತ್ತು ಪ್ರಶಾಂತ ಮಾನಸಿಕ ಸ್ಥಿತಿಯನ್ನು ನಮ್ಮ ಆಜನ್ಮಸಿದ್ಧ ಹಕ್ಕು ಎಂದು 'ವೇದಾಂತ' ವು ಘೋಷಿಸುತ್ತದೆ. ಹಾಗಾದಾಗ ಮಾತ್ರ ಸಮರ್ಪಕ ಬದುಕಿನ ಸಾಧನೆಯಾಗುತ್ತದೆ. ಅಂತಹ ಸ್ಥಿತಿಯಲ್ಲಿ ನಾವು ಯಶಸ್ಸನ್ನು ಪಡೆದು ಸಂತೋಷವಾಗಿರುತ್ತೇವೆ.  

ಈ ಒತ್ತಡಕ್ಕೆ ಕಾರಣವೇನು ಅಥವಾ ನಮಗೆ ಒತ್ತಡ ಉಂಟಾಗುವಂತೆ ಮನವನ್ನು ಕಾದಾಡುವುದು ಯಾವುದು?  ಕಿರಿಕಿರಿಯ ಅಧಿಕಾರಿಯೇ? ಗೊಣಗಾಡುವ ಸಂಗಾತಿಯೇ? ಅಥವಾ ಹೊಂದದ ವಾತಾವರಣವೇ? ಇದಾವುದೂ ಅಲ್ಲ. ಸತ್ಯವೇನೆಂದರೆ 'ನಮ್ಮನ್ನು ಹೊರತು' ಜಗತ್ತಿನ ಯಾವುದೇ ವಸ್ತು, ವ್ಯಕ್ತಿ ಅಥವಾ ವಿಷಯ ನಮ್ಮನ್ನು ಕದಡಲಾರದು. ತೀರದ ಆಸೆಗಳಿಂದ ಉಂಟಾಗುವ ಮಾನಸಿಕ ಕದಡಿಕೆಯೇ 'ಒತ್ತಡ' ಕ್ಕೆ ಕಾರಣ. ಪಟ್ಟ ಆಸೆಗಳು ಎಲ್ಲಿಯತನಕ ತೀರುವುದಿಲ್ಲವೋ ಅಲ್ಲಿಯ ತನಕ 'ಒತ್ತಡ' ವಿದ್ದೇ ಇರುತ್ತದೆ. ಹಿಡಿತವಿಲ್ಲದ ಆಸೆಗಳ ಕುದುರೆಯ ಬೆನ್ನೇರಿ ಹೋಗುವವರು ಸದಾಕಾಲ ಖಂಡಿತವಾಗಿಯೂ 'ಒತ್ತಡ' ದಲ್ಲೇ ಇರುತ್ತಾರೆ.   

ಅನಿರ್ಬಂಧಿತ ಆಸೆಗಳೇ ನಮ್ಮನ್ನು ದುಃಖದ ಕೂಪಕ್ಕೆ ತಳ್ಳುತ್ತದೆ. ಒಂದು ಆಸೆ ಪೂರೈಸಿದರೆ ಮತ್ತಷ್ಟರಾಸೆ ನಮ್ಮನ್ನು ದುರಾಸೆಗೆ ಈಡುಮಾಡುತ್ತದೆ ಮತ್ತು ಆ ದುರಾಸೆ  ನಮ್ಮನ್ನು ನಿರಾಸೆಗೆ ತಳ್ಳುತ್ತದೆ. ನಮಗಿಂತ ಅಧಿಕವಾಗಿ ಪಡೆದವರನ್ನು ಕಂಡು ನಮಗೆ ಈರ್ಷ್ಯೆ ಮತ್ತು ನಮಗಿಂತ ಕಡಿಮೆ ಪಡೆದವರನ್ನು ಕಂಡು ಅಹಂಕಾರ ಅಥವಾ ಮದ. ಯಾವುದೇ ಕಾರಣ ನಮ್ಮ ಆಸೆಯ ಭಾವಕ್ಕೆ ತಡೆಯಾದರೆ, ಹಾಗೆ ತಡೆಯೊಡ್ಡಿದ ವ್ಯಕ್ತಿ ಅಥವಾ ಸಂದರ್ಭದ ಪ್ರತಿ ನಮಗೆ ಕ್ರೋಧವುಂಟಾಗುತ್ತದೆ.  ಇವೆಲ್ಲವೂ ನಮ್ಮ ಬದುಕಿನಲ್ಲಿ 'ಒತ್ತಡ ಮತ್ತು ದುಃಖ' ವನ್ನು ತರುತ್ತದೆ.  

ನಮ್ಮಲ್ಲಿ ಬುಗ್ಗೆಬುಗ್ಗೆಯಂತೆ ಮೇಲೇಳುವ ಮತ್ತು ಅಡೆತಡೆಯಿಲ್ಲದೆ ಆಸೆಗಳ ಮಹಾಪೂರ ನಮ್ಮ ನಿಜವಾದ ಆನಂದಕ್ಕೆ ಅಡ್ಡಿಯೊಡ್ಡುತ್ತದೆ. ಧನದಾಸೆಯಿಂದ ಹಣಸಂಪಾದನೆಯಲ್ಲಿ ಮುಳುಗಿದ ವ್ಯಕ್ತಿ ತಾನು ಸಂಪಾದಿಸಿದ ಹಣವನ್ನು ಎಂದಿಗೂ ಅನುಭವಿಸಿ ಆನಂದಿಸಲಾರ. ಹಣದಿಂದ ಖರೀದಿಸಬಹುದಾದ ಅತ್ಯುತ್ತಮ ವಸ್ತುಗಳು ಅವನಲ್ಲಿ ಇದ್ದರೂ ಅವನು ಅನುಭವಿಸುವ ಒತ್ತಡವೇ ಅವನಿಗೆ ಆ ವಸ್ತುಗಳನ್ನಾಗಲಿ ವಿಷಯಗಳನ್ನಾಗಲೀ ಆನಂದದಿಂದ  ಅನುಭವಿಸಲು ಅವಕಾಶ ನೀಡುವುದಿಲ್ಲ. ಆಸೆಗಳು ನಮ್ಮನ್ನು ಅನ್ಯರೊಡನೆ ಒಂದು ಸ್ಪರ್ಧಾತ್ಮಕ ಮಾರ್ಗದಲ್ಲಿ ತೆಗೆದುಕೊಂಡು ಹೋಗುತ್ತದೆಯಾದ್ದರಿಂದ ನಾವು ಅನ್ಯರೊಡನೆ ಒಂದು ಸೌಹಾರ್ಧಯುತವಾದ ಮತ್ತು ಅರ್ಥಪೂರ್ಣ ಸಂಬಂಧವನ್ನು ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಧನದಾಸೆ ನಮ್ಮನ್ನು ಮೌಲ್ಯಗಳೊಟ್ಟಿಗೆ ರಾಜಿಮಾಡಿಕೊಳ್ಳುವಂತಹ ಸ್ಥಿತಿಗೆ ತಳ್ಳುತದೆ. ಆಸೆಗಳ ವಿಷಯದಲ್ಲಿ ನಾವೇ ನಿಗಧಿಪಡಿಸಿದ ಎಲ್ಲೆಯನ್ನು ದಾಟಿದಾಗ, ನಾವು ನಮ್ಮದೇ ಬಲಹೀನತೆಗೆ ದಾಸರಾಗಿಬಿಡುತ್ತೇವೆ.    

ನಮ್ಮ ಮನಸ್ಸು ಹಿಂದೆ ನಡೆದ ಘಟನೆಗಳ ಅಥವಾ ಮುಂದಿನ ಯೋಜನೆಗಳ ಸುಳಿಯಲ್ಲಿ ಸಿಲುಕಿ, ನಾವು  ಪ್ರಸ್ತುತ ಬದುಕನ್ನು ಅನುಭವಿಸಿ ಬದುಕಲು ಬಿಡುವುದೇ ಇಲ್ಲ. ಇದು ನಮ್ಮನ್ನು ಸೋಲಿಗೆ ತಳ್ಳುತ್ತದೆ. ನಮಗಿರುವ ವಿವೇಕದ ಬಲದಿಂದ ನಮ್ಮ ಮನಸ್ಸು ಗತಿಸಿದ ವಿಷಯಗಳ ಅಥವಾ ಭವಿಷ್ಯದ ಆತಂಕಗಳ ಬಗ್ಗೆ ಚಿಂತಿಸದೆ ವಾಸ್ತವದಲ್ಲಿ ನಿಂತರೆ, ಆಗ ನಾವು ತಿಳಿಮನದಿಂದ,  ಮಾಡುವ ಕೆಲಸದ ಮೇಲೆ ಗಮನವನ್ನು ಹರಿಸಿ ಆ ಕೆಲಸವನ್ನು ಸಮರ್ಪಕವಾಗಿ ಮಾಡಬಹುದು ಮತ್ತು ಹಾಗೆ ನಮ್ಮನ್ನು ನಾವು ಸಂಪೂರ್ಣತಯಾ ತೊಡಗಿಸಿಕೊಂಡು ನಮ್ಮ ಕಾರ್ಯವನ್ನು ಮುಗಿಸಿದಾಗ ಸಿಗುವ ಆನಂದದ ಪರಿಯೇ ಬೇರೆಯಲ್ಲವೇ? 
 
ಒಂದು ಆಸೆ ಪೂರೈಸಿದರೆ, ಪಡೆದ ವಸ್ತುವನ್ನು ಅನುಭವಿಸದೇ ಮತ್ಯಾವುದೋ ಆಸೆಯ ಹಿಂದೆ ಮನಸ್ಸು ಓಡುತ್ತದೆ. ಅಂತಹ ಸ್ಥಿತಿಯಲ್ಲಿ ನಾವು ಆಸೆಪಟ್ಟು ಪಡೆದ ವಸ್ತು, ವಿಷಯ ಅಥವಾ ವ್ಯಕ್ತಿಯೊಂದಿಗಿನ ಅನುಭವವನ್ನು ಕಳೆದುಕೊಂಡುಬಿಡುತ್ತೇವೆ. ಹೀಗೆ ನಾವು ಪಡೆದುಕೊಂಡ ವಸ್ತುಗಳಿಂದ ದೊರೆಯಬಹುದಾದ ಅನುಭವವನ್ನು ಪಡೆಯದಿದ್ದರೂ, ನಮ್ಮಲ್ಲಿರುವ ವಸ್ತುಗಳಿಗೆ ನಾವು ಅಂಟಿಕೊಂಡು ನಮ್ಮನ್ನು ನಾವು ಕಳೆದುಕೊಳ್ಳುತ್ತೇವೆ. ಇದರಿಂದ ಒಂದು ಮಾತ್ರ ಖಂಡಿತ 'ಅಂಟಿಕೊಂಡರೆ ಕಷ್ಟ - ಬಿಡಿಸಿಕೊಂಡರೆ ಸುಖ' . ಈ ಜಗತ್ತಿನಲ್ಲಿ ಇರಬೇಕು, ಈ ಜಗತ್ತಿನ ವಸ್ತುಗಳನ್ನು ಪಡೆದುಕೊಳ್ಳಬೇಕು, ಪಡೆದ ವಸ್ತುಗಳನ್ನು ಅನುಭವಿಸಬೇಕು, ಅದರ ಅನುಭವವನ್ನು ಪಡೆಯಬೇಕು ಮತ್ತು ಅದರಿಂದ ಕಲಿಯಬೇಕು.  ಆದರೆ ಯಾವುದಕ್ಕೂ ಅಂಟಿಕೊಳ್ಳಬಾರದು. ಪಡೆಯಬೇಕೆಂಬ ಆಸೆಯಿದ್ದರೆ ಪಡೆಯಲು ಹೋರಾಟ, ಪಡೆದುಕೊಂಡರೆ ಮತ್ತಷ್ಟನ್ನು ಪಡೆಯುವ ಅಥವಾ ಪಡೆದದ್ದನ್ನು ಉಳಿಸಿಕೊಳ್ಳಲು ಹೋರಾಟ. ಈ ಹೋರಾಟಗಳಿಂದಲೇ ನಮ್ಮಲ್ಲಿ ' ಒತ್ತಡ ' ಉಂಟಾಗುತ್ತದೆ.  ಹಾಗಾಗಿ ಆಸೆಗಳಿಗೆ ಅಂಟಿಕೊಂಡರೆ ಅದು ನಮಗೆ ನೋವನ್ನೇ ತರುತ್ತದೆ. ಈ ಆಸೆಯೇ ನಮ್ಮ ಅತಿ ದೊಡ್ಡ ಶತ್ರು ಎಂದು ಅರಿವಿದ್ದರೂ ನಾವು ಅದನ್ನು ಬಿಡುವುದಿಲ್ಲ. ಆಸೆಗಳೂ ನಮ್ಮನ್ನು ಪ್ರೋತ್ಸಾಹಿಸುತ್ತವೆ ಮತ್ತು ನಾವೂ ಸಹ ಅದನ್ನು ಹಿಡಿದುಕೊಂಡಿರುತ್ತೇವೆ. ನಮ್ಮ ಮೇಲಿನ ಅದರ 'ಹಿಡಿತ' ವೇ ನಮ್ಮ ಮಾನಸಿಕ ಒತ್ತಡಕ್ಕೆ ಕಾರಣ. ಎಲ್ಲರಿಗೂ ಆ ರೀತಿಯ 'ಒತ್ತಡ' ದಿಂದ ಹೊರಬರಬೇಕೆನ್ನುವ ಬಯಕೆಯಿದ್ದರೂ, ಅದಕ್ಕೆ ಪೂರಕವಾದ ಪ್ರಯತ್ನದ ಕೊರತೆಯಿಂದಾಗಿ, ಬಹುತೇಕ ಜನ ಮತ್ತಷ್ಟು ಒತ್ತಡಕ್ಕೆ ಬಲಿಯಾಗುತ್ತಾರೆ.    

'ನಾವು ಯಾವುದರ ಹಿಂದೆ ಓಡುತ್ತೇವೆಯೋ, ಅದು ನಮ್ಮಿಂದ ದೂರ ದೂರ ಓಡುತ್ತದೆ, ಯಾವುದನ್ನೂ ನಾವು ನಿರ್ಲಕ್ಷ್ಯ ಮಾಡುತ್ತೇವೆಯೋ, ಅದು ನಮ್ಮ ಕಾಲ ಬಳಿ ಬಂದು ಬೀಳುತ್ತದೆ ' ಎಂದು ಬಹಳ ಹಿಂದೆ ಯಾರೋ ತತ್ವಜ್ಞಾನಿ ಹೇಳಿದ ಮಾತು ನೆನಪಾಗುತ್ತದೆ.  ಹಾಗಾಗಿ ವಸ್ತು, ವಿಷಯ ಮತ್ತು ವ್ಯಕ್ತಿಗಳನ್ನು ಪಡೆಯುವ ಬಯಕೆಯಿಂದ ಮುಕ್ತರಾಗಿ ಬದುಕಿದರೆ ಆಗ ಈ ಜಗತ್ತಿನ ಯಾವುದೇ ವಿಷಯವೂ ನಮ್ಮನ್ನು ಒತ್ತಡಕ್ಕೆ ತಳ್ಳಲು ಅಸಮರ್ಥವಾಗುತ್ತದೆ.  

ಆದರೆ ಬಯಕೆಯಿಲ್ಲದೆ ಬದುಕಲು ಸಾಧ್ಯವೇ ಎಂದು ಯೋಚಿಸಿದರೆ, ಸಾಧ್ಯವಿಲ್ಲ ಎನ್ನುವ ಉತ್ತರವೇ ಸಿಗುತ್ತದೆ. ಅಂತಹ ಬದುಕು ಕೇವಲ ನೀರಸವಾಗಿ, ನಿಸ್ಸಾರವಾಗಿರುತ್ತದೆ ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ. ಆದ್ದರಿಂದ, ನಮಗೆ ಬಯಕೆಗಳಿದ್ದರೂ, ಅವುಗಳು 'ನಮ್ಮ'  ಹಿಡಿತದಲ್ಲಿರಬೇಕು. ಏನನ್ನು ಬಯಸಬೇಕು, ಯಾವಾಗ ಬಯಸಬೇಕು ಮತ್ತು ಎಷ್ಟನ್ನು ಬಯಸಬೇಕು ಎನ್ನುವ ವಿವೇಚನೆ ನಮಗಿದ್ದರೆ, ನಮ್ಮ ಬಯಕಗಳ ಮೇಲೆ ನಮಗೆ ಸಂಪೂರ್ಣ ಹಿಡಿತವಿದ್ದು, ಅವುಗಳು ನಮ್ಮ ಮೇಲೆ  ಬೀರುವ ಪ್ರಭಾವದಿಂದ ತಪ್ಪಿಸಿಕೊಳ್ಳಬಹುದು. ಯಾವುದೇ ಬಯಕೆಯ ನಿರರ್ಥಕತೆಯನ್ನು ಮನಗಂಡು ಅದನ್ನು ಕೈಬಿಡುವುದೂ ಸಾಧ್ಯವಾಗುತ್ತದೆ.  ಮಾತ್ರವಲ್ಲ, ಉನ್ನತವಾದ ಬಯಕೆಗಳು ನಮ್ಮದಾದರೆ ಕಿರಿಕಿರಿಯನ್ನುಂಟುಮಾಡುವ ಸಣ್ಣ ಸಣ್ಣ ಬಯಕೆಗಳು ಮಾಯವಾಗುತ್ತವೆ. ಅಂತಹ ಬದುಕಿಗೆ ಯಾರು ಎಷ್ಟು ತೀವ್ರವಾಗಿ ಪ್ರಯತ್ನ ಮಾಡಿದರೆ ಅವರಿಗೆ ಅಷ್ಟು ಪ್ರಯೋಜನವಾಗುತ್ತದೆ. ಜಗತ್ತಿನ ವಸ್ತುಗಳಲ್ಲದೆ, ಜಗತ್ಕಾರಕನ ನಂಟಿನ ಬಯಕೆ ನಮ್ಮಲ್ಲುಂಟಾದರೆ, ನಾವು ಸದಾ ಆನಂದದ ಸ್ಥಿತಯಲ್ಲಿರಬಹುದು. 

ರವಿ ತಿರುಮಲೈ 

Tuesday 3 July 2018

'ಸ್ಥಾವರ- ಜಂಗಮ'


ಉಳ್ಳವರು ಶಿವಾಲಯ ಮಾಡುವರು
ನಾನೇನು ಮಾಡಲಿ ಬಡವನಯ್ಯ

ಎನ್ನ ಕಾಲೇ ಕಂಬವಯ್ಯಾ
ಎನ್ನಾ ದೇಹವೆ  ದೇಗುಲವಯ್ಯ
ಎನ್ನ ಶಿರವೇ ಹೊನ್ನ ಕಳಸವಯ್ಯಾ

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ
ಕೂಡಲ ಸಮಾಗಮ ದೇವಾ

ಇದು ಜಗಜ್ಜ್ಯೋತಿ ಬಸವೇಶ್ವರರ ಒಂದು ವಚನ.  


ಈ ವಚನದ ಕಡೆಯ ಪಾದದಲ್ಲಿ ಉಲ್ಲೇಖಗೊಂಡಿರುವ 'ಸ್ಥಾವರ' ಎಂದರೆ static, ಜಂಗಮ ಎಂದರೆ dynamic. ಸ್ಥಾವರವೆಂದರೆ, ಯಾವುದರಲ್ಲಿ ಚೈತನ್ಯವಿಲ್ಲವೋ ಅದು ಸ್ಥಾವರ. ಯಾವುದು ಆ ಸ್ಥಾವರಕ್ಕೆ ಚಲನೆಯನ್ನು ನೀಡುವ ಚೈತನ್ಯವೋ ಅದು ಜಂಗಮ. ಯಾವುದಕ್ಕೆ ಚಲನೆಯಿದೆಯೋ ಅದು ಜಂಗಮ. ಇಡೀ ಜಗತ್ತು ಆಗಿರುವುದು ' ಚಿತ್ ಮತ್ತು ಅಚಿತ್ ' ಗಳಿಂದ, ಎಂದರೆ matter ಮತ್ತು energy ಈ ಅಚಿತ್ತಿನೊಳಕ್ಕೆ ಚೈತನ್ಯ ಹೊಕ್ಕು ನಡೆಸುವುದೇ ಈ ಜಗದ್ವ್ಯಾಪಾರ. ಹಾಗಾಗಿ ಈ ಜಗತ್ತಿನಲ್ಲಿ ನಡೆದಾಡುವ, ಹಾರಾಡುವ, ಈಜಾಡುವ(ಪ್ರಾಣಿವರ್ಗ) ಮತ್ತು ಬೆಳೆಯುವ (ಸಸ್ಯವರ್ಗ) ಎಲ್ಲವೂ ಮೂಲಸ್ವರೂಪದಲ್ಲಿ ಸ್ಥಾವರವೇ ಎಂದರೆ matter. ಅದಕ್ಕೆ ಚಲನೆಯನ್ನು ನೀಡುವುದೇ energy  ಎಂದರೆ ಚೈತನ್ಯ. ಸ್ಥಾವರಕ್ಕೆ ರೂಪವುಂಟು ಆದರೆ ಜಂಗಮಕ್ಕೆ ರೂಪವಿಲ್ಲ. ಒಟ್ಟಾರೆ ಹೇಳಬೇಕೆಂದರೆ ಸ್ಥಾವರವೆಂದರೆ ದೇಹ ಮತ್ತು ಜಂಗಮವೆಂದರೆ ಆ ದೇಹದೊಳಗಿನ ಪ್ರಾಣ ಅಥವಾ ಆತ್ಮ. ಇವೆರಡನ್ನೂ ಸೃಷ್ಟಿಸಿದವನೇ \
ಪರಮಾತ್ಮ ಅಥವಾ ಪರಮ ಪುರುಷ.

ಈ ಚೈತನ್ಯ ಧರಿಸಿರುವ ದೇಹಗಳಿಗೆ ರೂಪವಿದೆ. ಆ ರೂಪಗಳು ಬದಲಾಗುತ್ತವೆ ಮತ್ತು ಒಂದು ಕಾಲಘಟ್ಟಕ್ಕೆ ಇಲ್ಲವಾಗುತ್ತವೆ. ಇಲ್ಲವಾಗುತ್ತವೆ ಎಂದರೆ ರೂಪವಿಲ್ಲವಾಗುತ್ತದೆ. ಏಕೆಂದರೆ, ಕಾಲಕ್ರಮೇಣ ರೂಪ ಬದಲಾಗುತ್ತದೆ.  ಬೀಜ, ಮೊಳಕೆಯಾಗುತ್ತದೆ, ಮೊಳಕೆ ಸಸಿಯಾಗುತ್ತದೆ, ಸಸಿ ಗಿಡವಾಗುತ್ತದೆ, ಗಿಡ ಮರವಾಗುತ್ತದೆ, ಮರ ಸೌದೆಯಾಗುತ್ತದೆ, ಸೌದೆ ಬೆಂಕಿಯಾಗುತ್ತದೆ, ಬೆಂಕಿ ಬೂದಿಯಾಗುತ್ತದೆ, ಬೂದಿ ಧೂಳಿನ ಕಣವಾಗುತ್ತದೆ. ಹಾಗಾಗಿ ಸ್ಥಾವರ, ಎಂದರೆ matter ಗೆ ರೂಪದ ಅಳಿವಿದೆ,  ಅಂದರೆ ನಾಶವುಂಟು.  ಆದರೆ  ಜಂಗಮ ಎಂದರೆ, ಚೈತನ್ಯ ಅಥವಾ energy  ಗೆ ರೂಪವಿಲ್ಲ ಹಾಗಾಗಿ ಅದಕ್ಕೆ ನಾಶವೂ ಇಲ್ಲ.

ಇಲ್ಲಿ ಒಂದು ವಿಷಯವನ್ನು ತಿಳಿಯಬೇಕು. ಈ ಜಗತ್ತಿನಲ್ಲಿರುವುದು ಮೂರೇ ವಸ್ತುಗಳು. ಒಂದು, ಬೃಹತ್ ಚೈತನ್ಯ ಎಂದರೆ  ಪರಮಾತ್ಮ,  ಅಣುಚೈತನ್ಯ ಎಂದರೆ,  ಜೀವಾತ್ಮ ಮತ್ತು ಅಚಿತ್, ಎಂದರೆ ಜಡ ವಸ್ತುಗಳು,  ರೂಪಗಳಿರುವ  ವಸ್ತುಗಳು. ಇವು ಮೂರೂ ಅನಾದಿ ಮತ್ತು ಅನಂತ.  ಎಂದರೆ ಇದಕ್ಕೆ ಆದಿಯೂ ಇಲ್ಲ,  ಅಂತ್ಯವೂ ಇಲ್ಲ.
  
ಸುಮ್ಮಂಒಬ್ಬಂಟಿಯಂತಿಹುದು, ಬೇಸರವಹುದು
ಹೊಮ್ಮುವೆನು ಕೋಟಿರೂಪದಲಿ ನಾನೆಂದು
ಬೊಮ್ಮನೆಳಸಿದನಂತೆ, ಆ ಯಳಸಿಕೆಯೆ ಮಾಯೆ
ನಮ್ಮಿರವು ಮಾಯೆಯಲಿ - ಮಂಕುತಿಮ್ಮ

 ಎಂದು ಸನ್ಮಾನ್ಯ ಡಿ ವಿ ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೇಳುವಂತೆ, ಬೃಹತ್ ಚೈತನ್ಯನಾದ ಪರಮಾತ್ಮ ತನ್ನೊಳಗಿಂದಲೇ ಇಡೀ ಜಗತ್ತನ್ನು ಸೃಷ್ಟಿಸಿ ಸ್ಥಾವರದೊಳಕ್ಕೆ ಜಂಗಮವನ್ನು ಇರಿಸಿ, ಈ ಜಗದ್ವ್ಯಾಪಾರವನ್ನು ನಡೆಸುತ್ತಿದ್ದಾನೆ.  

ಹೇಗೆ ದೇಹ ನಾಶವಾದರೂ ಆತ್ಮ ನಾಶವಾಗುವುದಿಲ್ಲವೋ ಹಾಗೆಯೇ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ. ಎಂದರೆ ಜಗತ್ತಿನ ರೂಪಗಳಲ್ಲಾ ನಾಶವಾದರೂ ಆ ರೂಪಗಳನ್ನು ಹೊತ್ತ ಆತ್ಮ ಅಥವಾ ಚೈತನ್ಯಕ್ಕೆ ನಾಶವಿಲ್ಲ ಎನ್ನುವ ಅರ್ಥದಲ್ಲಿ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದಿದ್ದಾರೆ ಜಗಜ್ಜ್ಯೋತಿ ಬಸವೇಶ್ವರರು.
 
ಇಲ್ಲಿ ದೇಹವೆಂಬುದು ಕೇವಲ ಸಾಂಕೇತಿಕ. It refers to the matter in general. ಸ್ಥಾವರ ಎಂದರೆ, ಈ ಜಗತ್ತು ಮತ್ತ ಅದರಲ್ಲಿನ ಎಲ್ಲ ವಸ್ತುಗಳು ನೋಡಿ ಆ ಹಾಡಿನಲ್ಲಿ ' ಎನ್ನ ' ಎಂಬ ಪ್ರಯೋಗವಿದೆ. ಎನ್ನ ಎನ್ನುವುದು possessive case ಅಲ್ಲವೇ? ಹಾಗಾಗಿ ಈ ದೇಹವನ್ನು ಹೊಂದಿರುವುದು ಎಂದು ಅರ್ಥ. ಈ ದೇಹವನ್ನು ಧಾರಣೆ ಮಾಡಿರುವುದು, ಆತ್ಮ. ಹಾಗಾಗಿ ಸ್ಥಾವರವೆಂದರೆ ದೇಹ ಮತ್ತು 
ಜಂಗಮವೆಂದರೆ ಆತ್ಮ. ದೇಹಕ್ಕೆ ಅಳಿವುಂಟು ಆತ್ಮಕ್ಕೆ ಆಳಿವಿಲ್ಲ.

ಹಾಗಾಗಿ ರೂಪಕ್ಕೆ ಅಥವಾ ನಾಶವಾಗುವ ದೇಹಕ್ಕಿಂತ ಅವಿನಾಶಿಯಾದ ಆತ್ಮಕ್ಕೆ ಪ್ರಾಧಾನ್ಯನೀಡಿ ಆತ್ಮ ಜ್ಞಾನವನ್ನು ಪಡೆದು ' ನಾನು ಅಳಿದುಹೋಗುವ ಈ ದೇಹವಲ್ಲ, ನಾನು ನಿತ್ಯ ನೂತನವಾದ ಚೈತನ್ಯ ಅಥವಾ ಆತ್ಮ ಎಂದು ಅರಿತು, ಸ್ಥಾವರ-ದೊಟ್ಟಿಗಿನ ಅಂಟನ್ನು ಬಿಡಿಸಿಕೊಂಡು ಜಂಗಮವಾದ ಚೈತನ್ಯದ ಅನುಸಂಧಾನಮಾಡಿದಾಗ ನಮ್ಮಲ್ಲಿ ನಿತ್ಯ ಮತ್ತು ಸತ್ಯವಾದ ಆನಂದವುಂಟಾಗುತ್ತದೆ. ಅಂತಹ ಆನಂದವನ್ನು ಪಡೆಯುವ ಪ್ರಯತ್ನವನ್ನು ಮಾಡಬೇಕು ಎನ್ನುವುದನ್ನು ಸೂಚ್ಯವಾಗಿ ' ಬಸವಣ್ಣ ' ನವರು ನಮಗೆ ಅರುಹುತ್ತಾರೆ. 



Monday 2 July 2018

ಸೇವೆ

ಈ ಜಗತ್ತನ್ನು ಕುರಿತು ನಮ್ಮಿಂದ ಒಳ್ಳೆಯ ಭಾವಗಳು ಹೊರಹೊಮ್ಮುತ್ತಿದ್ದರೆ, ಆಗ ನಾವು ಒಳ್ಳೆಯವರಾಗಿದ್ದೇವೆ ಅಥವಾ ಒಳ್ಳೆಯವರಾಗುತ್ತಿದ್ದೇವೆ ಎಂದರ್ಥ. ಅಂತಹ ಸ್ಥಿತಿಯಲ್ಲಿ ನಾವು ಏನೇ ಮಾಡಿದರೂ ಅದು ನಮಗೂ ಹಿತವಾಗಿರುತ್ತದೆ ಮತ್ತು ಪರಹಿತಕ್ಕೂ ಆಗುತ್ತದೆ.  ನಮ್ಮನ್ನು ನಾವು ಪ್ರತೀ ಹಂತದಲ್ಲೂ ತಿದ್ದಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಒಂದು ಬಾರಿ ನಮ್ಮಲ್ಲಿ 'ಆತ್ಮಚಿಂತನೆ' ಮತ್ತು ನಮ್ಮನ್ನು ನಾವೇ ತಿದ್ದಿಕೊಳ್ಳುವ ಪ್ರಕ್ರಿಯೆ ಆರಂಭವಾದರೆ ಸಾಕು, ನಾವು ಏನೇ ಮಾಡಿದರೂ ಅದು ಸುಂದರವಾಗಿರುತ್ತದೆ ಮತ್ತು ಅದರಲ್ಲಿ ಸ್ವಹಿತ ಮತ್ತು ಸರ್ವಹಿತ ಎರಡನ್ನೂ ಕಾಣಬಹುದು.  

ಅನ್ಯರಿಗೆ ಒದಗುವುದನ್ನು 'ಸೇವೆ' ಎಂದೂ ಎನ್ನುತ್ತಾರೆ. ಹೃದಯಪೂರ್ವಕವಾಗಿ ಅನ್ಯರಿಗೆ ಒದಗುವುದರಿಂದ ಒಂದು ರೀತಿಯ ತೃಪ್ತಿ ಸಿಗುತ್ತದೆ. ಅದು 'ಆತ್ಮ ಸಂತೃಪ್ತಿ'.  ಅಂತಹ ಸಂತೃಪ್ತಿಯಿಂದ ಆತ್ಮಸಂತೋಷವಾಗುತ್ತದೆ. 'ನಮ್ಮ ಕೃತಿಯಿಂದ ಅನ್ಯರಿಗೆ ಹಿತ ಅಥವಾ ಸಂತೋಷವಾದರೆ ಅದಕ್ಕಿಂತ ಬೇರೆ ಭಾಗ್ಯ ಬೇಕೆ' ಎನ್ನುವುದು ಉದಾತ್ತ ಮನಸ್ಸಿನ ಭಾವ.  ಅಂತಹ ಭಾವವಿದ್ದರೆ ನಾವು ಮಾಡುವ ಪ್ರತಿಯೊಂದು ಕೆಲಸವೂ ' ಸರ್ವಜನ ಹಿತಾಯ ' ಎನ್ನುವಂತೆ ಸಕಲರ ಹಿತಕ್ಕಾಗುತ್ತದೆ.

'ಸಹಾಯ' ಮಾಡಲು ಅವಕಾಶಗಳು ಹೇಗೆ ಸಿಗುತ್ತವೆ? 

ಸಹಾಯ ಅಥವಾ ನಿಸ್ವಾರ್ಥ ಸೇವೆ ಮಾಡಲು ಅವಕಾಶಗಳು ನಮ್ಮ ಸುತ್ತುಮುತ್ತಲ್ಲೇ ಇರುತ್ತವೆ. ಅದನ್ನು ಹುಡುಕಿಕೊಂಡು ನಾವೆಲ್ಲಿಗೂ ಹೋಗುವ ಅವಶ್ಯಕತೆ ಇಲ್ಲ.  'ಅಲ್ಲಿ ಕೆಲಸ ಮಾಡುತ್ತೇವೆ, ಇಲ್ಲಿ ಸೇವೆ ಮಾಡುತ್ತೇವೆ ಮತ್ತಿನ್ನೆಲ್ಲೋ ಸಹಾಯಮಾಡುತ್ತೇವೆ'  ಎಂದು ಕೆಲಸ, ಸೇವೆ ಮತ್ತು ಸಹಾಯಗಳ ನಡುವೆ ಗೋಡೆಗಳನ್ನು ನಾವೇ ನಿರ್ಮಿಸಿರುತ್ತೇವೆ. ಸೇವೆ ಮಾಡಲು ಯಾವುದಾದರೂ ಅನಾಥಾಶ್ರಮ ಅಥವಾ ವೃದ್ಧಾಶ್ರಮವನ್ನೋ ಹುಡುಕಿಕೊಂಡು ಹೋಗಬೇಕಾಗಿಲ್ಲ. ನಮ್ಮ ಯಾವುದಾದರೂ ಕೆಲಸವನ್ನು ನಾವು ಪ್ರತ್ಯೇಕವಾಗಿ ಸೇವೆ ಎಂದು ಏಕೆ ಪರಿಗಣಿಸಬೇಕು?  ದೈವಕೃಪೆಯಿಂದ ನಮ್ಮ ಸುತ್ತಮುತ್ತಲ್ಲಿ ಸದಾಕಾಲ ನಾಲ್ಕಾರು ಜನರಿರುತ್ತಾರೆ, ಅಲ್ಲವೇ? ಅವರಿಗೆ ನಿಸ್ವಾರ್ಥದಿಂದ ಸೇವೆ ಮಾಡಬಹುದಲ್ಲವೇ? ಯಾರಾದರೂ ಅನಾರೋಗ್ಯದಿಂದ ಇರುವವರು, ಅಕ್ಕಪಕ್ಕದಲ್ಲಿರುವ ವೃದ್ಧರಿಗೆ ಒದಗುವುದು, ಮನೆಯಲ್ಲಿ ತಂದೆ ತಾಯಿಯರಿಗೆ, ಅವರ ಕೆಲಸದಲ್ಲಿ ಕೈ ಜೋಡಿಸುವುದನ್ನು ಮಾಡಿದರೂ ಅದೂ ಸಹ ಸೇವೆಯಾಗುತ್ತದೆ. ಮನೆಗೆಲಸದವರು ಅಥವಾ ನಿಮ್ಮ ವಾಹನ ಚಾಲಕ ಮುಂತಾದ, ನಮಗಾಗಿ ದುಡಿಯುವವರ ಕ್ಷೇಮವನ್ನು ನೋಡಿಕೊಳ್ಳುವುದೂ ಸಹ ಸೇವೆಯಾಗುತ್ತದೆ. ಹೊರಗೆಲ್ಲಿಯೂ ಹೋಗುವ ಅವಶ್ಯಕತೆ ಇಲ್ಲದೆ, ನಾವಿರುವಲ್ಲೇ ' ಸೇವೆ ' ಮಾಡಲು ದೈವ ನಮಗೆ ಅವಕಾಶಗಳನ್ನು ನೀಡಿದೆ ಎಂದು ಸಂತೋಷಪಡಬೇಕಲ್ಲವೇ?  

ಅನಾರೋಗ್ಯದಿಂದ ಬಳಲುತ್ತಿರುವ ನಿಮ್ಮ ತಂದೆ-
ತಾಯಿಯರೋ ಅಥವಾ ಅತ್ತೆ-ಮಾವಂದಿರೋ ಮನೆಯಲ್ಲಿ ಇರುವಾಗ ಅವರ ಅವಶ್ಯಕತೆಗಳನ್ನು ಪೂರೈಸುವುದನ್ನು ಬಿಟ್ಟು ವೃದ್ಧಾಶ್ರಮಗಳಲ್ಲಿ ಸೇವೆಮಾಡಲೆಂದೇ ಸಂಸ್ಥೆಗಳನ್ನು ಕಟ್ಟುವುದು ವ್ಯರ್ಥವಲ್ಲದೆ ಮತ್ತೇನು?  ಅಥವಾ ಅಂತಹ ಸೇವೆಯಿಂದ ಪುಣ್ಯ ಸಿಗುವುದೆಂದು ಮಾಡಿದರೆ ಅದು ಸ್ವಾರ್ಥದಿಂದ ಮಾಡಿದ ಕೆಲಸವಾಗಿ, ಸೇವೆ ಎನಿಸಿಕೊಳ್ಳುವುದಿಲ್ಲ. ತಾನಿರುವ ಪರಿಸರದಲ್ಲೇ ಸೇವೆಯನ್ನು ಮಾಡುತ್ತಾ, ಅಂತಹ ಸೇವಾ ಪರಿಧಿಯನ್ನು ಹೆಚ್ಚಿಸಿಕೊಳ್ಳುತ್ತಾ ಹೋದಂತೆ, ನಮಗರಿವಿಲ್ಲದಂತೆಯೇ ನಮ್ಮ ಸೇವೆಯ ವ್ಯಾಪ್ತಿ ಹಿರಿದಾಗುತ್ತದೆ. ಮನೆಯಲ್ಲಿ ಮಾಡಬೇಕಾದದ್ದನ್ನು ಮಾಡದೆ ಹೊರಗಡೆ 'ಹೆಸರು, ಖ್ಯಾತಿ' ಗಾಗಿ ಸೇವೆ ಮಾಡುವವರನ್ನು 'ಮನೆಗೆ ಮಾರಿ ಪರರಿಗುಪಕಾರಿ' ಎನ್ನುತ್ತಾರೆ. ಹಾಗಾಗಿ ನಾವು ಮಾಡುವ ಸೇವೆಯನ್ನು ನಿಸ್ವಾರ್ಥದಿಂದ, ಅದೊಂದು ಕರ್ತವ್ಯವೆಂಬಂತೆ ಮಾಡಿದರೆ, ಅದು ನಿಜವಾದ 'ಸೇವೆ' ಯಾಗುತ್ತದೆ.  ಪ್ರತಿಯೊಬ್ಬರಿಗೂ 'ಸೇವೆ' ಗೈಯುವುದು ಅತ್ಯಾವಶ್ಯಕ.  ಏಕೆಂದರೆ 'ಕೊಟ್ಟದ್ದು ತನಗೆ' ಎಂದು ಸರ್ವಜ್ಞ ಕವಿ ಹೇಳುವಂತೆ ಸೇವೆಯ ಫಲ ನಮಗೆ ಯಾವುದಾದರೂ ರೂಪದಲ್ಲಿ, ನಾವು ಬಯಸದೆ ಇದ್ದರೂ ದಕ್ಕಿಯೇ ದಕ್ಕುತ್ತದೆ.  

ಸೇವೆಯಿಂದ ನಾವು ಬೆಳೆಯಬಹುದು!!!

ಅದು ಹೇಗೆಂದರೆ, ನಾವು ನಿಸ್ವಾರ್ಥ ಭಾವದಿಂದ 'ಸೇವೆ' ಮಾಡಿದಾಗ ಮನಸ್ಸು ಹಗುರಾಗುತ್ತದೆ ಮತ್ತು ನಮ್ಮೊಳಗೇ ಒಂದು ಧನ್ಯತಾ ಭಾವ ತುಂಬಿಕೊಳ್ಳುತ್ತದೆ. ನಮ್ಮ ಅಂತರ್ಭಾವದ ಹೊರೆಯನ್ನು ಹಗುರಾಗಿಸಿಕೊಳ್ಳಬಹುದು. ನಾವು ಒಬ್ಬರಿಗೆ ಒದಗಿದರೆ, ನಮ್ಮ ಸಂಕಷ್ಟದ ಕಾಲಕ್ಕೆ ಮತ್ಯಾರೋ ನಮಗೆ ಒದಗಬಹುದು. ನಾವು ಲೌಕಿಕವಾಗಿ ಅಥವಾ ಪಾರಮಾರ್ಥಿಕವಾಗಿ  ಬೆಳೆಯಲು ಯತ್ನಿಸುತ್ತಿರುವಾಗ,  ನಮ್ಮೆದುರು ಹಲವಾರು ಅಡ್ಡಿಗಳು ಬರಬಹುದು, ನಮಗೆ ಖಿನ್ನತೆ ಅಥವಾ ದುಃಖವುಂಟಾಗಬಹುದು. ಅಂತಹ ಸಂದರ್ಭದಲ್ಲಿ ಯಾರಾದರೂ ನಮಗೆ ಒತ್ತಾಸೆಯಾಗಿ 'ನಾನಿದ್ದೇನೆ ' ಎಂದು ನಿಂತಾಗ, ನಿಮಗೆ ಒಂದು ರೀತಿಯ ಸಾಂತ್ವನ ಸಿಗುತ್ತದೆ, ಧೈರ್ಯ ಬರುತ್ತದೆ ಮತ್ತು ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಮಾರ್ಗಗಳು ಕಾಣುತ್ತವೆ, ಅಲ್ಲವೇ? ಹಾಗಾದಾಗ ಸಮಸ್ಯೆಗಳಿಂದ ಮುಕ್ತರಾಗಿ ಬೆಳೆಯಲು ಸಾಧ್ಯವಾಗುತ್ತದೆ. ಹೀಗೆ ಒಬ್ಬರಿಗೊಬ್ಬರು ಒದಗುತ್ತಾ, ಸೇವೆಯನ್ನು ಮಾಡುವ  ನಮ್ಮ 'ಸೇವಾ ವೃತ್ತ' ಹಿರಿದಾದಷ್ಟೂ ಎಲ್ಲರಿಗೂ ಒಳಿತಲ್ಲವೇ? ಎಲ್ಲರೂ ಸಮಾನವಾಗಿ ಬೆಳೆಯಲು ಸಾಧ್ಯವಾಗುತ್ತದೆ ಅಲ್ಲವೇ?    

ಈ ಸೇವೆ ಮಾಡುವುದು ಒಂದು ರೀತಿಯ 'ವಿಮೆ' ಯಿದ್ದಂತೆ. ನಾವು ನಿಸ್ವಾರ್ಥದಿಂದ ಮಾಡುವ ಸೇವೆಯಿಂದ,  ಹತ್ತಾರು ಹಿತೈಷಿಗಳನ್ನು, ನಮಗರಿವಿಲ್ಲದಂತೆಯೇ  ಸಂಪಾದಿಸುತ್ತೇವೆ. ಅಂತಹ ಹಿತೈಷಿಗಳು ನಾವು ಸಂಕಷ್ಟದಲ್ಲಿದ್ದಾಗ, ನಾವು ಬಯಸದಿದ್ದರೂ, ಅವರಲ್ಲಿ ಕೇಳದಿದ್ದರೂ ನಮಗೆ ಒದಗಿ, ನಮ್ಮ ಸಂಕಷ್ಟವನ್ನು ನೀಗಿ, ನಮಗೆ ಸಾಂತ್ವನ ನೀಡುತ್ತಾರೆಂದರೆ, ನಾವು ಇಂದು ಮಾಡುವ ಸ್ವಾರ್ಥ ರಹಿತ ಸೇವೆ, ನಮ್ಮ ಕಷ್ಟದ ಸಮಯದಲ್ಲಿ ನಮಗೆ ಒದಗುತ್ತದೆ ಎಂದರೆ, ಅದೂ ಒಂದು ರೀತಿಯ 'ವಿಮೆ' ಯೇ  ಅಲ್ಲವೇ? 

ನಿರಾಯಾಸ ಸೇವೆ

ಈ ' ಸೇವೆ ' ಎನ್ನುವುದನ್ನು ಆಯಾಸಪಟ್ಟು ಮಾಡಬೇಕಾಗಿಲ್ಲ. ಸಹಜವಾಗಿ ನಿರಾಯಾಸವಾಗಿ ಮಾಡಬೇಕು. ಹೆಚ್ಚು ಆಯಾಸಪಟ್ಟು ಸೇವೆ ಮಾಡಿದರೆ, ಅಂತಹ ಸೇವೆಯಿಂದ 'ನಾನು ' ಮಾಡುತ್ತಿದ್ದೇನೆ ಎನ್ನುವ ಅಹಂಕಾರದ ಭಾವವೂ ನಮ್ಮ ಒಳನುಗ್ಗಿ, ನಾವು ಪ್ರತಿಫಲ ಬಯಸುವ ಸಾಧ್ಯತೆಗಳು ಅಧಿಕ. ಇದು ಸೇವೆಯಿಂದ ತಾನೇ ತಾನಾಗಿ ಬರುವ ಸತ್ಫಲವನ್ನು ಇಲ್ಲವಾಗಿಸುತ್ತದೆ. ಸೇವೆ ಮಾಡುವ ಅವಕಾಶಗಳನ್ನು ಹುಡುಕಿಕೊಂಡು ಹೋಗುವ ಅವಶ್ಯಕತೆ ಇಲ್ಲ. ಅವುಗಳು ತಾವೇತಾವಾಗಿ ನಮಗೆ ಲಭ್ಯವಾಗುತ್ತವೆ. ಅಂತಹ ಅವಕಾಶಗಳನ್ನು ಸಹಜತೆಯಿಂದ ಬಳಸಿಕೊಂಡರೆ ಅದೇ ನಿಸ್ವಾರ್ಥ ಸೇವೆಯಾಗುತ್ತದೆ. 

ತೋರಿಕೆ ಮತ್ತು ಪ್ರಚಾರ ಬೇಕಿಲ್ಲ.

ನಾವುಗಳು ಸೇವೆಯ ಸೂಕ್ಷ್ಮತೆಯನ್ನು ಅರಿತುಕೊಳ್ಳುವುದಿಲ್ಲ. ನಾವು ಮಾಡುವ ಸೇವೆಯನ್ನು ಜಗತ್ತಿಗೆ ತೋರಬಯಸುತ್ತೇವೆ, ನಮ್ಮ 'ಪುಂಗಿ' ಯನ್ನು ನಾವೇ ಊದಲು ಪ್ರಯತ್ನಿಸಿ,  ನಾವು ಮಾಡಿದ ಸೇವೆಯನ್ನು ಜಗತ್ತಿಗೆ ಸಾರಿ, ಕೀರ್ತಿವಂತರಾಗಲು ಪ್ರಯತ್ನಿಸುತ್ತೇವೆ.  ನಾವು ಬಡವರಿಗೆ ' ಕಂಬಳಿ ' ಗಳನ್ನೂ ನೀಡುತ್ತಿದ್ದೇವೆ ಎಂದೋ, ಹಸಿದ ಪ್ರತಿ ಮನೆಯವರಿಗೆ ತಲಾ ಹತ್ತು ಕಿಲೋ ಗೋದಿಯನ್ನು ನೀಡುತ್ತಿದ್ದೇವೆ ಎಂದೋ ಡಂಗುರ ಹೊಡೆದುಕೊಳ್ಳುವ ಅವಶ್ಯಕತೆ ಇಲ್ಲ. ಅದು ನಾನು ಅಥವಾ ನಾವು ನೀಡುತ್ತಿದ್ದೇವೆ ಎನ್ನುವ ಅಹಂಕಾರದ ಪ್ರದರ್ಶನವಷ್ಟೇ. ಕೊಟ್ಟ ಧನ್ಯತಾಭಾವ ನಮಗಿದ್ದರೆ ಸಾಕು. ದೇವಾಲಯದಲ್ಲಿ ಅಭಿಷೇಕವನ್ನು ಮಾಡಿಸುತ್ತೇವೆ ಎಂದು, ಲಕ್ಷ ರೂಪಾಯಿ ಕೊಡುವವನು ಅಥವಾ ತಿರುಪತಿಯ ತಿಮ್ಮಪ್ಪನಿಗೆ ವಜ್ರದ ಕಿರೀಟವನ್ನು ಮಾಡಿಸಿಕೊಡುವವನೂ ಕೇವಲ ತಮ್ಮಲ್ಲಿರುವ ಸಂಪತ್ತಿನ ಪ್ರದರ್ಶನ ಮಾಡುತ್ತಾ ಅಹಂಕಾರದಿಂದ ಬೀಗುತ್ತಿರುತ್ತಾರೆ.  ಇಂತಹ ಸೇವೆಯಿಂದ ಆ ವ್ಯಕ್ತಿಯ ಆಧ್ಯಾತ್ಮಿಕ ಬೆಳವಣಿಗೆ ಕುಂಠಿತವಾಗುತ್ತದೆ.     

ಹಾಗಾಗಿ ನಿಸ್ವಾರ್ಥತೆಯಿಂದ, ಫಲಾಪೇಕ್ಷೆಯಿಲ್ಲದೆ, ನಾನು ಮಾಡುತ್ತಿದ್ದೇನೆ ಎನ್ನುವ ಅಹಂಕಾರವನ್ನು ತೊರೆದು, ಸಹಜತೆಯಿಂದ ಮಾಡುವ ಸೇವೆಯೇ ನಿಜವಾದ ಸೇವೆ. ಅಂತಹ ಸೇವೆಯನ್ನು ಮಾಡುವ ಅವಕಾಶಗಳು ನಮಗೆ ಸಿಕ್ಕಾಗ ತಕ್ಷಣವೇ ಅದರಲ್ಲಿ ನಾವು ತತ್ಪರರಾಗಿ ನಮ್ಮನ್ನು ನಾವೇ ತೊಡಗಿಸಿಕೊಂಡು ಸೇವೆ ಮಾಡಬೇಕು. ಅದರಿಂದ ತೃಪ್ತಿ ಮತ್ತು ಆತ್ಮ ಸಂತೋಷ ಖಂಡಿತ ಸಿಗುತ್ತದೆ. 

ಅತೀ ಕಕ್ಕುಲತೆ - ದುಃಖಕ್ಕೆ ದಾರಿ




ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಮಾಡುವುದು ತಂದೆ ತಾಯಿಯರಿಗೆ ಸ್ವಾಭಾವಿಕ ಮತ್ತು ಅವಶ್ಯವೂ ಹೌದು. ತಮ್ಮ ಮಕ್ಕಳು  ಹೀಗಾಗಬೇಕು ಅಥವಾ ಹಾಗಾಗಬೇಕು ಎಂದು ಬಯಸುವ ತಂದೆತಾಯಿಗಳು ನಮಗೆ ಹೆಜ್ಜೆ ಹೆಜ್ಜೆಗೂ ಸಿಗುತ್ತಾರೆ. ಕೇವಲ  ಹತ್ತು ಪ್ರತಿಶತ ಅಂತಹ ಪೋಷಕರ ಬಯಕೆಗಳು ಈಡೇರುತ್ತವೆ. ಬಹುಶಃ ಮಿಕ್ಕವರ ಎಣಿಕೆ ತಪ್ಪಾಗಿರುತ್ತದೆ ಅಥವಾ ವಿಧಿಯ ವಿನ್ಯಾಸವೇ ಬೇರೆಯಾಗಿರುತ್ತದೆ. ಪುರಾಣೇತಿಹಾಸಗಳಲ್ಲಿ ನಮಗೆ ಇದರ ಹೇರಳ ದೃಷ್ಟಾಂತಗಳು ಸಿಗುತ್ತವೆ. ಹಿರಣ್ಯ ಕಶಿಪುವಿಗೆ ಮಗನಮೇಲೆ ಅತೀವ ಅಕ್ಕರೆ ಮತ್ತು ಪ್ರೀತಿ. ತನ್ನ ಮಾತನ್ನು ಕೇಳಲಿಲ್ಲ ಎನ್ನುವ ಕಾರಣ ಅವನ ಮೇಲೆ ಕೋಪ. ಅವನು ಬಯಸಿದ್ದೇ ಬೇರೆ ಪ್ರಹ್ಲಾದನಾಗಿದ್ದೇ ಬೇರೆ, ಅಲ್ಲವೇ? ಕೌರವರಿಗೂ ಪಾಂಡವರಿಗೂ ಕಡೆಯವರೆಗೂ ರಾಜ್ಯ ಸುಖ ಸಿಗಲೇ ಇಲ್ಲ. ಅವರವರು ಪಡೆದುಕೊಂಡು ಬಂದ ಭಾಗ್ಯ ಅವರವರಿಗೆ ಜಗತ್ತಿನಲ್ಲಿ ಖಂಡಿತ ಸಿಗುತ್ತದೆ. ಹಾಗಾಗಿ, ಮಕ್ಕಳ ಭವಿಷ್ಯದ ಕುರಿತು ಅತಿಯಾದ ಅಕ್ಕರೆ, ಅಪೇಕ್ಷೆ  ಪಡುವುದು ಸೂಕ್ತವಲ್ಲ. ಅವರವರ ದಿಕ್ಕು ಅವರವರಿಗೆ ಇರುತ್ತದೆ ಎಂದು ಅರಿತು ಅವರ ಪ್ರತಿ ಮಾಡಬೇಕಾದ ಕರ್ತವ್ಯವನ್ನು ಮಾಡಿದರೆ ಸಾಕು. ಹಾಗಲ್ಲದೆ ನಮ್ಮ ಅಪೇಕ್ಷೆಗಳಿಗೆ ಅಂಟಿಕೊಂಡು ಅದನ್ನು ಸಾಧಿಸಲು ಹಠ ಮಾಡಿದರೆ ನಮಗೆ ಬಹುತೇಕ ನಿರಾಸೆಯೇ ಕಟ್ಟಿಟ್ಟ ಬುತ್ತಿ.  


ತಾಯಿ ತಂದೆಯರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮತ್ತು ಆಲೋಚನೆ ಮಾಡುವುದು ಸಹಜ. ಆದರೆ ಬಹಳಷ್ಟು ಉದಾಹರಣೆಗಳಲ್ಲಿ ಬಯಸಿದ್ದು ಆಗದೆ ಬೇರೇನೋ ಆಗುತ್ತದೆ. ಆದರೆ ಸಾಮಾನ್ಯವಾಗಿ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ತಾಯಿ ತಂದೆಯರು ಸ್ವಲ್ಪ ಅಧಿಕವಾಗೇ ಚಿಂತೆ ಅಥವಾ ಯೋಚನೆ ಮಾಡುತ್ತಾರೆ. ಅದು ಪ್ರೀತಿಯಿಂದ ಆಗಬಹುದು ಅಥವಾ ಕಕ್ಕುಲತೆಯಿಂದ ಆಗಬಹುದು. ಅಂತಹ ಅಂಧ ಕಕ್ಕುಲತೆಯನ್ನೇ ಅಲ್ಲವೇ ಕುರುಡ ದೃತರಾಷ್ಟ್ರನೂ ಕೂಡ ತೋರಿದ್ದು. ಅವನಂತೆಯೇ ಮಕ್ಕಳ ಬಗ್ಗೆ ಅತೀವ ಕಕ್ಕುಲತೆಯಿಂದ ವರ್ತಿಸುವ ತಂದೆತಾಯಂದಿರೂ ಸಹ ನಿರಾಸೆ ಹೊಂದುವುದರಲ್ಲಿ ಸಂದೇಹವೇ ಇಲ್ಲ

ಅಂತಹ ಕುರುಡು ಪ್ರೀತಿಯ ತಂದೆ ತಾಯಿಯರು ಹೇರಳವಾಗಿ ಸಿಗುತ್ತಾರೆ. ಗಣಿತದ ಗಂಧವೇ ಇಲ್ಲದವನನ್ನು ' ಇಂಜಿನಿಯರ್ ' ಮಾಡಿಸಲೇಬೇಕು ಎಂದು ಹಠ ಹಿಡಿದರೆ ಇಬ್ಬರಿಗೂ ಒತ್ತಡ ಮಾತ್ರ ಜಾಸ್ತಿ, ಫಲ ಶೂನ್ಯ.  ಕಲೆಯಲ್ಲೋ ಸಂಗೀತದಲ್ಲೋ ಆಸಕ್ತಿಯಿರುವವರನ್ನು ಅದರ ಬಳಿಯೂ ಸುಳಿಯಲು ಬಿಡದೆ ನಾವಂದುಕೊಂಡ ಡಾಕ್ಟರೋ ಎಂಜಿನಿಯರೋ ಆಗಬೇಕೆಂದು ಹಠತೊಟ್ಟರೆ ಅದು ಶುದ್ಧ ಮೂರ್ಖತನವಷ್ಟೇ.  ನಾವೇನೇ ಆಸೆ ಪಟ್ಟರೂ, ಪಡದೆ ಇದ್ದರೂ, ನಡುವುದೆಲ್ಲ ನಡೆದೇ ನಡೆಯುತ್ತದೆ. ಯಾವುದನ್ನೂ ತಡೆಯುವುದಕ್ಕಾಗುವುದಿಲ್ಲ. ಹಾಗೆಂದು  ತೀರ ತಟಸ್ಥರಾಗಿಬಿಟ್ಟರೆ, ಜೀವನದಲ್ಲಿ ಸ್ವಾರಸ್ಯವಿರುವುದಿಲ್ಲ. ಹಾಗಾಗಿ ಮಕ್ಕಳ ಇಚ್ಛೆ, ಅಭಿರುಚಿ ಮತ್ತು ಅವರ ಕ್ಷಮತೆಗಳನ್ನು ಸರಿಯಾಗಿ ಗುರುತಿಸಿ ಅವರ ಯೋಗ್ಯತೆಗಳನ್ನು ಪರೀಕ್ಷಿಸಿ ಅವರ ಪುರೋಗಮನಕ್ಕೆ ಒತ್ತಾಸೆ ನೀಡಿ  ಮತ್ತು ದೈವ ಬಲದಿಂದ ಅವರು ಆ ದಿಕ್ಕಿನಲ್ಲೇ ಅಭಿವೃದ್ಧಿಹೊಂದಿದರೆ ತೃಪ್ತಿಯಾಗುತ್ತದೆ.    


ಸಮಾಜದಲ್ಲಿ ಬದುಕಬೇಕಾದರೆ ಅವಶ್ಯವಿರುವ ಮೂಲಭೂತ ಗುಣಗಳನ್ನು ಅವರಿಗೆ ಕಲಿಸಿ, ಅವರವರ ಅಭಿರುಚಿ ಮತ್ತು ಕ್ಷಮತೆಗನುಸಾರವಾಗಿ ಸರಿಯಾದ ಮಾರ್ಗದಲ್ಲಿ ಮಕ್ಕಳನ್ನು ಕೊಂಡುಹೋಗುವ ಶುದ್ಧ ಪ್ರಯತ್ನ ನಮ್ಮದಾಗಬೇಕು. ಅವರು ತಪ್ಪು ಮಾಡಿದಾಗ ಪ್ರೀತಿಯಿಂದ ದಂಡಿಸಿ ಸರಿಯಾಗುವ ಮಾರ್ಗವನ್ನು ತೋರಿ, ಅದರಲ್ಲಿ ನಡೆಯುವ ಕ್ಷಮತೆಯನ್ನು ಬೆಳೆಸಬೇಕು ಅಷ್ಟು ಮಾಡಿದರೆ ಅವರವರು ಪಡೆದು ಬಂದ ಭಾಗ್ಯಕ್ಕನುಸಾರವಾಗಿ ಅವರು ರೂಪುಗೊಳ್ಳುತ್ತಾರೆ. ಅತೀ ಕಕ್ಕುಲತೆ, ಅತೀ ಪ್ರೀತಿ ಮತ್ತು ಅತೀ ಅಪೇಕ್ಷೆಗಳು ನಮ್ಮನ್ನು ನಿರಾಸೆ ಮತ್ತು ದುಃಖಕ್ಕೆ ತಳ್ಳುತ್ತದೆ. ಹಾಗಾಗಿ ತಂದೆತಾಯಿಯರು ತಮ್ಮ ಮಕ್ಕಳ ಭವಿಷ್ಯವನ್ನು ಸೂಕ್ತವಾಗಿ ರೂಪಿಸುವವರಾಗಬೇಕೇ ವಿನಃ ನಿರ್ಧರಿಸುವವರಾಗಬಾರದು.