Friday 30 December 2011

ಗೋಪಿಯ ವಿರಹ ಗೀತೆ





                            ಗೋಪಿಯ ವಿರಹ ಗೀತೆ 




ಬೃಂದಾವನದಲ್ಲಿ ಶ್ರೀ ಕೃಷ್ಣನ ಸಾನ್ನಿಧ್ಧ್ಯವೇ ಎಲ್ಲರಿಗೂ ಚೈತನ್ಯದಾಯಕವಾಗಿತ್ತು.  ಗೋಪಾಲಕರು , ಗೋವುಗಳು, ಗೋಪಿಕಾಸ್ತ್ರೀಯರು, ದೊಡ್ಡವರು, ಚಿಕ್ಕವರು, ಕಡೆಗೆ ಗಿಡ,  ಮರ, ಹೂವು ಹಣ್ಣು ಕಾಯಿ ಎಲ್ಲಕ್ಕೂ ಕೃಷ್ಣನ ಉಪಸ್ಥಿತಿ, ಜೀವಿಕೆಗೆ ಸ್ಪೂರ್ತಿ ನೀಡುತ್ತಿತ್ತು. ಒಂದು ಕ್ಷಣವೂ ಕೃಷ್ಣನನ್ನು  ಅಗಲಿ ಇರಲು ಆಗುತ್ತಿರಲಿಲ್ಲ. ಯಶೋದೆ ಮತ್ತು ಗೋಪಿಕಾಸ್ತ್ರೀಯರಿಗಂತೂ ಅವನ ಅಗಲಿಕೆ ಸಹಿಸಸದಳ. ವಿರಹವನ್ನು ತಾಳಲಾರದ ಒಬ್ಬ ಗೋಪಿಕೆಯ ಅಳಲು ಮತ್ತೊಬ್ಬಳಿಗೆ ಹೇಗೆ ನಿವೇದನೆಯಾಗುತ್ತದೆಂದು ಈ ಪದ್ಯದಲ್ಲಿ ಕಾಣುತ್ತದೆ. 

ಕೇಳೆ ಸಖೀ ವಿರಹದಾ ಕಥೆಯಾ 
ಕೃಷ್ಣನಗಲಿಕೆಯಾ ವ್ಯಥೆಯಾ            " ಕೇಳೆ ಸಖೀ" 

ಬೃಂದಾವನದಾ ಹಾದಿಗಳೆಲ್ಲವು
ಕಲರವವಿಲ್ಲದೆ  ಮೌನವಾಗಿವೆ 
ವೇಣುಗಾನದ ಮಾರ್ದನಿಯಿಲ್ಲದೆ    
ನಲಿಯುವ ಮನಸು ಮೂಕವಾಗಿದೆ
ಅರಿಯುವನೇನೆ ವಾರಿಜಾಕ್ಷನು 
ತಳಮಳಿಸುವ ಈ ಮನದ ವ್ಯಥೆಯಾ   " ಕೇಳೆ ಸಖೀ" 

ಅವನೊಡನಾಟದಿ ಅರಳುವ ಹೂಗಳು 
ಪೇಲವಗೊಂಡು ಮುದುಡಿ ನಿಂತಿವೆ
ಕೃಷ್ಣನ ಕರಗಳ ಸ್ಪರ್ಶಕೆ ಮಿಡಿದು 
ಪುಳಕಗೊಳ್ಳುವ ಗೋಗಳು ನೊಂದಿವೆ
ಕೇಳುವನೇನೆ ಕಂಜದಳಾಕ್ಷನು  
ಕನಲುವ ಮನದಾ ಮಿಡಿತವನು                " ಕೇಳೆ ಸಖೀ" 

ಝುಳು ಝುಳು ಹರಿವ 
ಯಮುನೆಯ ಹರಿವು 
ಸ್ತಬ್ಧವಾಗಿ ನಿಂತಿಹುದಲ್ಲೇ 
ಕರುಡುಗಟ್ಟಿದಾ ವಿರಹದ ನೋವೆಲ್ಲಾ 
ಕಣ್ಣೀರಾಗಿ ಹರಿದಿದೆಯಲ್ಲೇ 
ಮಿಡಿಯುವನೇನೆ ಮುರಳೀ ಲೋಲನು 
ಮೋಹನ ಮುರಳೀ ಗಾನದಿಂದ              " ಕೇಳೆ ಸಖೀ" 

ಈ ಹಾಡನ್ನು ನೀವು "ಬಾಗೇಶ್ರೀ" ರಾಗದಲ್ಲಿ ಹಾಡಿದರೆ, ಹಾಡಿನ ಮೂಲ ಭಾವ ಸೂಕ್ತವಾಗಿ ವ್ಯಕ್ತಪಡಿಸಬಹುದು ಎಂದು ನನ್ನ ನಂಬಿಕೆ. 

ರಾಜಕಾರಣಿಯ ಹುಯಿಲು







ಪಾಪ ಇಂದಿನ ರಾಜಕಾರಣಿಗಳ ಪರಿಸ್ಥಿತಿ ಹೀಗಿರಬಹುದೇನೋ 




 ಕುನ್ನಿ ನಾನು ಕುಬ್ಜ ನಾನು 
ಮೇಲಕ್ಕೆನ್ನ ಏರಿಸಿಹರು 
ಇಳಿಯಲಾರೆ ಭಯವೆನಗೆ 
ಧುಮುಕಿದರೆ ಮುರಿಯುವುದು ಕಾಲೆನಗೆ.

ನಾನಿರುವಲ್ಲೇ ಹುಡುಕುವೆನು
ಇಲ್ಲೇ ಸಿಗುವ ಆಹಾರವನು
ತಿನ್ನಲೋ ನೆಕ್ಕಲೋ
ಏನು ಸಿಕ್ಕರೂ ಸಾಕೆನುವೆನು.

ಎಲ್ಲೋ ಇದ್ದ ನನ್ನ ತಂದು
ಎತ್ತರದಲ್ಲಿ ಕುಳ್ಳಿರಿಸಿಹರು
ಅರ್ಹನೋ ಅನರ್ಹನೋ
ಅರಿಯದೆಯೇ ಬಾಲ ಆಡಿಸಿಹೆನು

ಕಂಡ ಕಂಡವರ ಮೇಲೆ
ಬೊಗಳಿ ಕೂಗಾಡುವೆನು
ಭ್ರಮೆಯಲ್ಲಿ ಈ ಜಗಕೆ
ರಾಜ ನಾನೆ೦ದೆಣಿಸಿಹೆನು

ಎಂದು ಇಳಿಸುವರೋ ಅರಿಯೆ
ಎಲ್ಲಿ ತಳ್ಳುವರೋ ಅರಿಯೆ
ಪರದ ಅಪ್ಪನ ಅಗ್ರ ಹಾರಕೋ
ಪರಲೋಕದಪ್ಪನ ತಾಣಕ್ಕೋ


ರವಿ ತಿರುಮಲೈ 

ಕಾಲಾಯ ತಸ್ಮೈ ನಮಃ


ಕಾಲಾಯ ತಸ್ಮೈ ನಮಃ

ಯಾವುದೇ ವ್ಯಕ್ತಿಯ ಮನಸ್ಸಿಗಾದ ಗಾಯ ಅಥವಾ ನೋವು ಮಾಗಲು ಸಮಯ ಬೇಕು. ದಿಕ್ಕು ತೋಚದ ಸ್ಥಿತಿಯಲ್ಲಿ ಮುಂದಿನ ಗಮ್ಯ ಗೋಚರವಾಗಲು ಸಮಯ ಬೇಕು.ಈ ಭಾವಗಳನ್ನು ವ್ಯಕ್ತ ಪಡಿಸಲು ಒಂದು ಸಣ್ಣ ಪ್ರಯತ್ನ. 



ನೋವ ಹರಿವು ಕಿರಿದಾಗಲು 
ಕಾಲಗತಿಯ ಕರುಣೆ ಬೇಕು 
ಮಡುಗಟ್ಟಿದ ರಕ್ತ ಹೀರೆ 
ಗಜಗಾತ್ರದ ಜಿಗಣೆ ಬೇಕು

ಕಾರ್ಗತ್ತಲ ಹಾದಿಯಲ್ಲಿ

ನೂರು ಪಂಜ ಬೆಳಕು ಬೇಕು
ಸುರಿಸುರಿವ ಭಾವಪಾತಕೆ
ಊರಗಲದ ಕಟ್ಟೆ ಬೇಕು


ಅಲೆಯೇರದ ಜಲಧಿಯೆಂತೆ 
ಮನದ ಆಯ ನಿಲ್ಲಬೇಕು
ಪುಟಿದೇಳುವ ಬುಗ್ಗೆಯಲ್ಲ
ನೆಲದಡಿಯೆ ಇಂಗಬೇಕು

ಶಾಂತ ಪ್ರಶಾಂತ ಭಾವದಿ 
ಕಾಯ ಕರ್ಮ ನಿಲ್ಲಬೇಕು 
ಕನಸಿಲ್ಲದ ಸಾವಿನಂತ
ನಿದ್ದೆ ಬೇಕು ನಿದ್ದೆ ಬೇಕು ನಿದ್ದೆ ಬೇಕು




ರವಿ ತಿರುಮಲೈ

Thursday 29 December 2011

ಬಾ ರವಿಯೇ ಬಾ ಸೂರ್ಯ





ಸಪ್ತ ಹಯದ ರಥ ಸಾರಥ್ಯಕೆ 
ಕರೆದು ಗರುಡಾಗ್ರಜನನು  
ಜಗವ ಬೆಳಗಲು ಹೊರಟು
ಹಿಂತಿರುಗಿ ಹೋಗುವನ
ಪರಿ ನೋಡಲತಿಚೆಂದ   

ಮನದಲೆಲ್ಲರ ಒಳಗೆ 
ಬದುಕುವಾಸೆ ಉದ್ದೀಪಿಸಿ 
ಶಕ್ತಿ ನೀಡಿ ಚುರುಕಾಗಿಸಿ 
ಜಗದ ಹುದ್ದರಿಯಂತೆ 
ನಡೆವನ ಪರಿ ನೋಡಲತಿಚೆಂದ 

ಲೋಕಸಾಕ್ಷಿಯವನು, ತನ್ನೊಳ್ಳಗೆ
ಎಲ್ಲರ ಲೆಕ್ಕವನು ಬರೆದು ಇಟ್ಟಿರುವವನು 
ಕಾಲನವನು ಅವ್ಯಾಹತ ಓಡುವವನು  
ಮತ್ತೊಂದು ದಿವಸಕ್ಕೋ, ಜನ್ಮಕ್ಕೋ 
ಕೊಂಡುಹೋಗುವವನ ಪರಿ ನೋಡಲತಿಚೆಂದ.  

ಪ್ರಾಣಕ್ಕೆ ಪ್ರಾಣ ಜೀವಕ್ಕೆ ಜೀವವಾಗಿ 
ಜೀವಿಗಳ ಜೀವನಕೆ ಹೇತುವಾಗಿ  
ಸಸಿ ಮರಗಳಿಗೆ ಪ್ರಾಣಿ ಪಕ್ಷಿಗಳಿಗೆ 
ಚೇತನವು ತಾನಾಗಿ, ಮತ್ತೆ ಮತ್ತೆ 
ಬಂದು  ಹೋಗುವವನ ಪರಿ ನೋಡಲತಿಚೆಂದ. 

ಬಾ ರವಿಯೇ ಬಾ ಸೂರ್ಯ, ಮತ್ತೆ 
ಜಗವ ಬೆಳಗಲು ಬಾ, ಮನವ ಬೆಳಗಲು ಬಾ 
ಕಾಯುವುದು ಜಗವೆಲ್ಲ, ಕನಸ ಕಾಣುತ್ತ ಇರುಳೆಲ್ಲ 
ಬಾಳೆಲ್ಲ ಬೆಳಗಲು ಬದುಕನ್ನು ನಡೆಸಲು 
ಬೆಳಕ ರೂಪದಿ ಸಂಗವಿದ್ದರೆ ನೀ ಬಾಳೆಲ್ಲ ಚೆಂದ 

ರವಿ ತಿರುಮಲೈ 



Wednesday 28 December 2011

ಬಾ ಬಾರೆ ಸಖೀ

ಕೃಷ್ಣ, ಭಾರತೀಯ ಜನ ಜೀವನದಲ್ಲಿ ಹಾಸು ಹೊಕ್ಕಾಗಿರುವ ಹೆಸರು. ಸಾವಿರಾರು ವಸಂತಗಳು ಕಳೆದರೂ ಇಂದಿಗೂ ಮಾಸದ ಆ ಪ್ರೇಮ ಪುತ್ಥಳಿಯನ್ನು ಅಂದು ಬೃಂದಾವನದ ಪ್ರಜೆಗಳು, ಗೋಪಾ ಬಾಲಕರು, ಗೋಪಿಕಾ ಸ್ತ್ರೀಯರು, ಕಾಣಲು, ಸಂಗದಿ ಇರಲು, ಒಡನಾಡಲು ಹೇಗೆ ಬಯಸುತ್ತಿದ್ದರು ಎಂಬ ಭಾವ ಹೊತ್ತ ಪದ್ಯ. ಈಗ್ಗೆ ಒಂದು ನಾಲ್ಕು ವರ್ಷಗಳ ಹಿಂದೆ ಬರೆದದ್ದು. 


ಬೃಂದಾವನದಲ್ಲಿ ಕೃಷ್ಣ ದನಗಾಹಿಯಾಗಿ ಗೋಪಾಲಕರ ಕಣ್ಮಣಿ. ಬೆಳಗ್ಗೆ ಗೋಗಳ ಜೊತೆಗೆ ಗೋವರ್ಧನ ಶಿಖರಕ್ಕೆ ಹೋಗಿ ಸಂಜೆ ೪ ಘಂಟೆಗೆ ಮನೆಯಕಡೆ ಪಯಣ. ದಾರಿಯಲ್ಲಿ ಸಿಗುವ ನಂದನವನದಲ್ಲಿ, ಒಂದು ಎತ್ತರವಾದ ಮರದಲ್ಲಿ ಹತ್ತಿ ಕುಳಿತು ವೇಣು ಗಾಯನ. ಗೋಗಳು ಗೋಪಾಲಕರು, ಪ್ರಾಣಿ, ಪಕ್ಷಿಗಳಿಗೆ,ಆ ಸಮಯದ ಕಾತರದ ನಿರೀಕ್ಷೆ. ಎಲ್ಲರಿಗೂ ಆ ಸಮಯಕ್ಕೆ ಅಲ್ಲಿ ಹೋಗಿ ಸೇರುವ ತವಕ ಆತುರ. ಈ ಭಾವನಗಳನ್ನು ಹೊತ್ತ ಇಬ್ಬರು ಗೋ ಕನ್ನಿಕೆಯರಲ್ಲಿ ಒಬ್ಬಳ ಭಾವ ಹೀಗಿದೆ.

ಬಾ ಬಾರೆ ಸಖೀ
ಬೇಗನೆ ಹೋಗುವ ನಾವು
ಬೃಂದಾವನದ ನಂದನವನದೀ
ರಂಗನ ಸಂಗದಿ ಚೆಂದದಿ ನಲಿಯಲು " ಬಾ ಬಾರೆ "

ಅಲ್ಲಿರುವನೆ ಅವ ಅರವಿಂದಾಕ್ಷನು
ಮುರಳೀ ಗಾನದಿ ಸೆಳೆದಿಹ ನಮ್ಮನು
ಗೋಪಿಯರೆಲ್ಲರು ಸೇರುವ ಮುನ್ನ
ಮುಂದಿನಸಾಲಲಿ ನಿಲ್ಲುವ ಬಾರೆ " ಬಾ ಬಾರೆ "

ಪ್ರತಿದಿನ ನಡೆಯುವ ಕೂಟದಿ ಅವನು
ಎಲ್ಲರ ಮನಕೆ ಮುದವನು ಈವನು
ವಾರಿಜಾಕ್ಷನಾ ವೇಣುಗಾನವನು
ಮನದಲಿ ತುಂಬಿ ತಣಿಯುವ ಬಾರೆ " ಬಾ ಬಾರೆ "

ಹರವಿದ ಅರಿವೆಯು ಆರುವ ಮುನ್ನ
ಕಡೆದಿಹ ಬೆಣ್ಣೆಯ ತೆಗೆಯುವ ಮುನ್ನ
ಅಮ್ಮನ ಕಣ್ಣಿಗೆ ಬೀಳುವ ಮುನ್ನ
ಮುರಳೀ ಗಾನವು ನಿಲ್ಲುವ ಮುನ್ನ " ಬಾ ಬಾರೆ "

ಇದನ್ನು ನಾನು "ದೇಶ್" ರಾಗದಲ್ಲಿ ಹಾಡಿಕೊಂಡಿದ್ದೇನೆ.ಸೂಕ್ತವಾಗಿರುತ್ತೆ ಎಂದು ಅನಿಸುತ್ತದೆ.