Sunday, 11 December 2011

ವೃಧ್ಧಾಪ್ಯ ಶಾಪವಲ್ಲ


ವೃಧ್ಧಾಪ್ಯ  ಶಾಪವಲ್ಲ 

"ಯದ್ ಭಾವಂ ತದ್ಭವತಿ" ಎನ್ನುವುದು ಉಕ್ತಿ. ಇದರಂತೆ ಮಾನವರು ತಾವು ಏನನ್ನು ನೆನೆಸುತ್ತಾರೋ ಅದೇ ಆಗುತ್ತಾರಂತೆ. ನೀವು ಪದೇ ಪದೇ " ನನ್ನ ಕೈಲಿ ಈ ಕೆಲಸ ಮಾಡಲಾಗುವುದಿಲ್ಲ" ಎಂದು ನಿಮಗೇ ನೀವು  ಹೇಳಿಕೊಳ್ಳುತ್ತಾ ಹೋದರೆ ನಿಮ್ಮಲ್ಲಿ ನಿಜವಾಗಲೂ ಆ ಕೆಲಸ ಮಾಡುವ ಕ್ಷಮತೆ ಕರಗಿ, ಆ ಕೆಲಸವನ್ನು ಮಾಡಲಾಗದಂತಹ ಸ್ಥಿತಿಗೆ ಖಂಡಿತವಾಗಿಯೂ ತಲುಪುತ್ತೀರ. ನಿಮ್ಮ ಕ್ಷಮತೆಗೆ ಮೀರಿದ ಕೆಲಸಗಳನ್ನು ಮಾಡಲು,ನಿಮ್ಮ ಸ್ವಭಾವ, ಆತ್ಮವಿಶ್ವಾಸ ಮತ್ತು ನಂಬಿಕೆಗಳಿಂದ  ಮಾತ್ರ ಸಾಧ್ಯವಾಗುವುದು. 

ಈ ಭೂಮಿಯಮೇಲೆ ಇರುವುದಷ್ಟೇ ಜೀವನವಲ್ಲ. ವೃಧ್ಧಾಪ್ಯವೆಂದರೆ ಉಪಯುಕ್ತ ಜೀವನದ ಅಂತ್ಯವೆಂದು ಅರ್ಥವಲ್ಲ. ವೃಧ್ಧಾಪ್ಯ ಬಂದರೆ ಒಪ್ಪಿಕೊಳ್ಳಿ, ವಿರೋಧಿಸಬೇಡಿ. ಏಕೆಂದರೆ ವೃಧ್ಧಾಪ್ಯದಲ್ಲಿ  ಬೇರೇನನ್ನೋ ಕಲಿಯುವ ಸದವಕಾಶ ಒದಗಿ ಬರುತ್ತದೆ ಎಂದು ತಿಳಿಯಬೇಕು. ಹೊಸತಾದುದೇನನ್ನೋ ಕಲಿಯುವ ಅವಕಾಶ ದೊರಕುತ್ತದೆ. ಹುಟ್ಟು,ಬೆಳವಣಿಗೆ,ಜೀವನ,  ವೃಧ್ಧಾಪ್ಯವನ್ನು  ಸಮಭಾವದಿಂದ ತೆಗೆದುಕೊಳ್ಳುವ ಮತ್ತು ಸಾವನ್ನು ಅದೇ ಸಮಭಾವದಿಂದ ರಾಜಾರೋಷವಾಗಿ ಒಪ್ಪಿಕೊಳ್ಳುವುದನ್ನು ಕಲಿತುಕೊಳ್ಳಬೇಕು. ಬದುಕಿನ ಎಲ್ಲಾ ಮಜಲುಗಳೂ ಜಗಮಗಿಸುವುದಿಲ್ಲ. ಆದರೆ ಪ್ರತಿಯೊಂದು ಮಜಲೂ ತನ್ನದೇ ಆದ ವೈಶಿಷ್ಟತೆಯನ್ನು ಬೆಳಗುತ್ತದೆ. ವಯಸ್ಸು ನಮ್ಮನ್ನು ಮುದುಕರನ್ನಾಗಿಸುವುದಿಲ್ಲ. ನಮ್ಮನ್ನು ಮುದುಕರನ್ನಾಗಿಸುವುದು ನಮ್ಮ ಮನೋಭಾವ. ಪ್ರಶ್ನೆ  ಏನೆಂದರೆ, ನಾವು ನಲವತ್ತು ವರ್ಷದ ಮುದುಕರಂತೆ ಯೋಚಿಸುತ್ತೇವೆಯೋ  ಅಥವಾ ಎಂಬತ್ತು ವರ್ಷದ ಯುವಕರಂತೆ ಯೋಚಿಸುತ್ತೇವೆಯೋ ಎಂಬುದು.  

ಜೀವನದ  ಅನುಭವಗಳು ಹತ್ತು ಹಲವಾರು. ಒಮ್ಮೆ ಅದು ಚೈತನ್ಯದ ಬುಗ್ಗೆಯಾದರೆ ಮತ್ತೊಮ್ಮೆ ಬತ್ತಿದ ಸೆಲೆಯಂಥಹ ಅನುಭವ. ಕೆಲಕಾಲಕ್ಕೆ ಜೀವನ ಹಚ್ಚ  ಹಸಿರಾದ, ಬಣ್ಣ ಬಣ್ಣದ ಹೂ ಹಣ್ಣುಗಳಿಂದ ತುಂಬಿದ, ಸಂಬಂಧಗಳ, ಸಡಗರದ ಮತ್ತು ಸಂಭ್ರಮದ ಭಾವಗಳಿಂದ ತುಂಬಿದಂತೆ ಅನಿಸಿದರೆ  ಮತ್ತೊಮ್ಮೆ, ಬರಡು ಬರಡಾಗಿ, ಬತ್ತಿದಂತಾಗಿ, ಎಲ್ಲವೂ ಖಾಲಿಯದಂತಾಗಿ, ಜೀವನಕ್ಕೆ ಕಾರ್ಮೋಡ ಮುಸುಕಿದಂತಾಗಿ ತೋರುತ್ತದೆ. ಸಂತೋಷದ ಗಳಿಗೆಗಳು ಹಿಂದಕ್ಕೆ ಸರಿದು ಆಳವಾದ ಒಂಟಿತನ ಆವರಿಸಿ, ನಿರುತ್ಸಾಹದ ಕೂಗು ಮತ್ತೆ ಮತ್ತೆ ಪ್ರತಿಧ್ವನಿಸಿದಂತಾಗಿ, ದುಃಖ ಮತ್ತು ನೋವಿನ ಕಡಲಿನಲ್ಲಿ ಮುಳುಗಿದಂತಾಗುತ್ತದೆ. ಸಂತೋಷದಿಂದ ಎಲ್ಲರಿಗೂ ಆನಂದವನ್ನು ಹಂಚಿವ ಹೃದಯವೇ ಕಲ್ಲಾಗಿ ಆಂತರ್ಯದಲ್ಲಿ ಒತ್ತಿದಂತಾಗುತ್ತದೆ. ನೋವಿನ ಮಳೆಯಲ್ಲಿ ಜೀವನದ ಎಲ್ಲಾ ಬಣ್ಣಗಳೂ ಕೊಚ್ಚಿ ಹೋದಂತಾಗುತ್ತದೆ. 

ನಾವುಗಳು ಎಷ್ಟೋಬಾರಿ ಸ್ವಾನುಕಂಪ ಮತ್ತು ಗೋಳಿನಲ್ಲಿ ಮುಳುಗಿರುತ್ತೇವೆ. " ಅಯ್ಯೋ, ಆ ದೇವರು ನಮಗೇ ಯಾಕೆ ಹೀಗಾಗಲು ಬಿಡುತ್ತಾನೆ. ಈ ದರಿದ್ರ ಬಾಳಿನ ಅರ್ಥವಾದರೂ ಏನು" ಎಂದು ಗೋಳುತ್ತೇವೆ. ಬದಲಿಗೆ, ನಾವು ಸ್ವಾನುಕಂಪವನ್ನು ಮತ್ತು ಸ್ವಕರುಣೆಯನ್ನು  ಬಿಟ್ಟು, ನಮ್ಮನ್ನು ನಾವೇ ಗುಣಪದಿಸಿಕೊಳ್ಳಲು ಪ್ರಯತ್ನಿಸಬೇಕು. ನಮ್ಮ ಹೃದಯದ ಒಳಗುಟ್ಟನ್ನು ಮಾತನಾಡಲು ಬಿಟ್ಟು ಅದಕ್ಕೊಂದು ಸಾಂತ್ವನದ ಆಲಿಕೆಯನ್ನು ಕೊಡಬೇಕು. ಮನಸ್ಸಿನ  ಮುರಿದ ಕನಸುಗಳ ಬಗ್ಗೆ ಅಕ್ಕರೆಯಿಂದ ಕೇಳಬೇಕು. ನಾವು ನಮ್ಮದೇ ಆದ ಸಾಧನೆಗಳು ಮತ್ತು ಜಾಣ್ಮೆಗಳನ್ನು ಗುರುತಿಸಿಕೊಳ್ಳಬೇಕು. ನಮ್ಮಲ್ಲಿರತಕ್ಕ ಸುಗುಣಗಳನ್ನು ಗುರುತಿಸಿಕೊಂಡು ನಮ್ಮ ಕ್ಷಮತೆಯನ್ನು ನಾವೇ ಕಂಡುಕೊಳ್ಳಬೇಕು. ನಮ್ಮ ನಕಾರಾತ್ಮಕ ಭಾವನೆಗಳನ್ನು ಬಿಟ್ಟು ಆತ್ಮ ವಿಶ್ವಾಸವನ್ನು ಬೆಳೆಸಿಕೊಂಡಲ್ಲಿ ನಾವು ಏನಾಗಬೇಕೋ ಅದಾಗಬಹುದು. ಜೀವನವೇ ಒಂದು ಪಾಠಶಾಲೆ ಮತ್ತು ಅನುಭವವೇ ಗುರು. 
ಜೀವನದಲ್ಲಿ ನಾವು ಪಡೆದುಕೊಂಡದ್ದೆಷ್ಟು ಎಂಬುದನ್ನು ಎಣಿಸಿ ನೋಡಿದಾಗ ಕಳೆದುಕೊಂಡದ್ದು ಗೌಣವಾಗಿ ಕಾಣಬೇಕು.  

ಎಷ್ಟೇ ಕಷ್ಟವಾದರೂ ಜೀವನ ಸುಂದರ. ಎಷ್ಟೇ ಸುಂದರವಾಗಿದ್ದರೂ ಜೀವನ ತುಂಬಾ ಕಷ್ಟ. ಈ ವಿಡಂಬನೆಯು ಹೃದಯವನ್ನು ಮುಕ್ತವನ್ನಾಗಿಸಿ ಕರುಣೆ ಮತ್ತು ಅನುಕಂಪವನ್ನು ತುಂಬುತ್ತದೆ. ಸುಖದ ನುಣುಪಾದ ಸೋಪಾನದ ಮೇಲೆ ನೀವು ಹೋಗುತ್ತಿರುವಾಗಲೇ ತಟ್ಟಂತ ನೀವು ಕಲ್ಲು ಮುಳ್ಳುಗಳ ಹಾದಿಯಲ್ಲಿ ಬೀಳಬಹುದು. ನಿಮಗೊಂದು ಉಪಯುಕ್ತ ಜೀವನ ಇದೆ. ನೀವು  ಎಲ್ಲರಿಗೂ ಬೇಕಾಗಿ ಎಲ್ಲರಿಂದಲೂ ಹೊಗಳಿಕೆಗೆ ಪಾತ್ರರಾಗಿದ್ದೀರಿ ಎಂಬ ಒಂದು ಸುಂದರ ಅನುಭವದಲ್ಲಿರುವಾಗಲೇ, ವಿಧಿಯ ಒಂದು ತಿರುವಿನಿಂದ ಎಲ್ಲಾ ತಾರುಮಾರಾಗಿ ತಟ್ಟೆಂದು ನೀವು ಎಲ್ಲಾ ಕಳೆದುಕೊಂಡು, ನಿರಾಶರಾಗಿ, ಒಬ್ಬಂಟಿಯಾಗಿ ಜೀವನದ ಒಂದು ತಿರುವಿನಲ್ಲಿ ನಿಂತಂತಹ  ಭಾವ ನಿಮ್ಮನ್ನು ಆವರಿಸುತ್ತದೆ.  ಬಹುಷಃ ನಿಮ್ಮ ಜೀವನ ಸಂಗಾತಿಯನ್ನು ನೀವು ಕಳೆದುಕೊಂಡಿರಬಹುದು, ನಿಮ್ಮ ಮಕ್ಕಳು ತಮ್ಮದೇ ಆದ ಸಂಭಂದಗಳನ್ನು ಸೃಷ್ಟಿಮಾದಿಕೊಳ್ಳುವುದರಲ್ಲಿ ನಿರತರಾಗಿರುತ್ತಾರೆ,  ನಿಮ್ಮ ಸ್ನೇಹಿತರೊಡನೆ  ಮತ್ತು ನಿಮ್ಮ ಸಂಭಂಧಿಕರೊಡನೆ ಎಲ್ಲಾ ಸಂಪರ್ಕವನ್ನೂ ಕಳೆದುಕೊಡಿದ್ದೀರಿ ಮತ್ತು ನಿಮ್ಮನ್ನು ಒಂಟಿತನ ಕಾಡುತ್ತದೆ. ಯಾರಿಗೂ ಬೇಡವಾದಂತವರಾಗಿ ದಿಕ್ಕಿಲ್ಲದವರಂತ ಭಾವನೆ ನಿಮ್ಮನ್ನು ಆವರಸಿಕೊಂಡಂತಾಗಿದೆ. 

ಇಂತಹ ಸಮಯದಲ್ಲಿ ದುಃಖದಲ್ಲಿ ಮುಳುಗಿದವರಂತಾಗದೆ, ಸ್ವಾನುಕಂಪದಲ್ಲಿ ತೊಳಲಾಡದೆ,  ವೃಧ್ಧಾಪ್ಯವೂ ಒಂದು ಅವಕಾಶವೆಂದು ಅರಿತು ಶಾಂತತೆಯಿಂದ ಧ್ಯಾನಮಗ್ನರಾಗುವುದರಿಂದಲೋ ಪ್ರಾರ್ಥನೆಯಿಂದಲೋ ಆತ್ಮಜ್ಞಾನವನ್ನು ಪಡೆಯಲು ಪ್ರಯತ್ನಿಸಬಹುದಲ್ಲವೇ? ಈ ಸಮಯದಲ್ಲಷ್ಟೇ ನೀವು ನಿಮ್ಮದೇ ಸಾಂಗತ್ಯವನ್ನು ಅನುಭವಿಸಲು ಸಾಧ್ಯ. ಬದಲಾದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ಕಷ್ಟವಾದರೂ, ನೀರು ಯಾವ ಪಾತ್ರೆಯಲ್ಲಿದ್ದರೆ ಆ ಪಾತ್ರೆಯ ಆಕಾರವನ್ನೇ ಪಡೆದುಕೊಳ್ಳುವಂತೆ, ನೀವಿರುವ ಸ್ಥಿತಿಯಲ್ಲಿ ಸಂತೋಷದಿಂದಿರಲು ಪ್ರಯತ್ನಪಟ್ಟರೆ, ಶೇಷ ಜೀವನವನ್ನು ಆಧ್ಯಾತ್ಮಿಕ ಪ್ರಯಾಣದಂತೆ, ನಂಬಿಕೆಯ ಹಾಯಿಯನ್ನು ವಿಧಿಯಂಬ ಗಾಳಿಗೊಡ್ಡಿ ಮುಂದಕ್ಕೆ ಸಂತೋಷದಿಂದ ಹೋಗಬಹುದು. 

ನಿಮ್ಮ ಪ್ರೀತಿಪಾತ್ರರ ಸಹವಾಸದಿಂದ ವಂಚಿತರಾದಂಥಹ ಸ್ಥಿತಿಯಲ್ಲಿ, ನಿಮ್ಮ ಒಳಗೆ ಇರುವಂಥಹ, ನಿಮ್ಮ ಸ್ನೇಹಿತನೆಡೆಗೆ ನೀವು ತಿರುಗಬೇಕು. ಏಕಾಂತದಲ್ಲೂ ಎಕಾಂಗಿಯಾಗಿರದೆ, ಆತ್ಮ ಸಂಬಂಧವನ್ನು ಬೆಳೆಸಿಕೊಂಡು ಅಂಥರ್ಮುಖಿಯಾಗಿ ಸಂತೋಷಪಡಬೇಕು. ನಿಮಗೆ ಆತ್ಮ ಸಂಬಂಧದಿಂದ ಅಹಂಕಾರ ಕಡಿಮೆಯಾಗುತ್ತದೆ. ಏಕಾಂತತೆಯನ್ನು ಸಂತೋಷದಿಂದ ಅನುಭವಿಸುತ್ತಾ,ಆಧ್ಯಾತ್ಮಿಕ ಬೆಳವಣಿಗೆಗೆ,  ಶೇಷ ಜೀವನವನ್ನು ಉಪಯೋಗಿಸಿಕೊಂಡಾಗ, ವೃಧ್ಧಾಪ್ಯ ಹೊರೆ ಎನಿಸುವುದಿಲ್ಲ. ನಿಮ್ಮಲ್ಲಿರುವ ಕ್ರಿಯಾತ್ಮಕ ಶಕ್ತಿಯನ್ನು ಪುನ:ಚೇತನ ಗೊಳಿಸಲು ಮತ್ತು ಶೇಷ ಜೀವನವನ್ನು ಹಸನಾಗಿಸಿಕೊಳ್ಳಲು ನೀವೇನೂ ಚಿಗುರೆ ಮರಿಯಂತೆ ಓಡಲು ಶಕ್ತಿ ಇಲ್ಲದಿದ್ದರೂ, ನಿಮ್ಮ ಅಂಥ:ಶಕ್ತಿಯನ್ನು  ಉಪಯೋಗಿಸಿ ಆಮೆಯ ನಡಿಗೆಯಲ್ಲಾದರೂ, ನಕಾರಾತ್ಮಕ ಭಾವನೆಗಳನ್ನು ಗೆದ್ದು, ಸಕಾರಾತ್ಮಕವಾಗಿ ಜೀವನವನ್ನು ಗೆಲ್ಲಬಹುದು.

ಜೀವನದ ಯಾವುದೇ ಸ್ತರದಲ್ಲಿ ನಾವು ಹೊಸದಾಗಿ ಕಲಿಕೆಗೆ ಸದಾ ಸಿದ್ಧರಾಗಿರಬೇಕು. ಹೊಸ ಹೊಸ ಪಾಠಗಳು ನಮಗೆ ಹೊಸ ಹೊಸ ವಿವೇಕವನ್ನು ತರುತ್ತವೆ. ಅಹಂಕಾರವನ್ನು ತೊರೆದು ವಿನಯಿಗಳನ್ನಾಗಿಸುತ್ತದೆ. ಯಾವುದಾದರೂ ವಿಷಯವನ್ನು ಹೊಸದಾಗಿ ಕಲಿಯಲು ಶುರುಮಾಡಿದರೆ ಜೀವನದಲ್ಲಿ ಉತ್ಸಾಹ ಮತ್ತು ಸಾಹಸ ಬೆಳೆಯುತ್ತದೆ. ಇಷ್ಟುದಿನ ಕಳೆದ ಜೇವನದಲ್ಲಿ ನಮಗೇ ನಮ್ಮ ಅಂತರ್ವಾಣಿಯನ್ನು ಕೇಳಲು ಸಮಯವೇ ಸಿಕ್ಕಿರಲಿಕ್ಕಿಲ್ಲ . ಆದರೆ ಈಗ ನಾವು ನಮ್ಮ ಮೇಲೆ ನಾವೇ ಹೇರಿಕೊಂಡ, ಮಾಡಲೇಬೇಕಾದ ದೈನಂದಿನ ಕರ್ತವ್ಯಗಳಿಂದ ಮುಕ್ತರಾಗಿ ಹೊಸದೊಂದು ಜೀವನಕ್ಕೆ ಮನಸ್ಸಿನ ಕದವನ್ನು ತೆಗೆಯಲನುಕೂಲವಾಗುತ್ತದೆ. ನಮಗೆ ನಮ್ಮೊಳಗಿನ ಪ್ರತಿಭೆಯನ್ನು ಬೆಳಗಿಸಿಕೊಳ್ಳಲಿಕ್ಕೆ ಮತ್ತು ನಮ್ಮನ್ನು ನಾವು ನಮಗೇ ಹಿತವಾದಂತಹ ಹವ್ಯಾಸಗಳಲ್ಲಿ ತೊಡಗಿಸಿಕೊಲ್ಲಲಿಕ್ಕೆ ಸಮಯಸಿಕ್ಕಂತಾಗುತ್ತದೆ. ನೀವು ನಿಮ್ಮ ಮನಸ್ಸನ್ನು ಇಂಪಾದ ಸುಶ್ರಾವ್ಯವಾದ ಸಂಗೀತದೆಡೆಗೆ ತಿರುಗಿಸಿ ಅಥವಾ ನಿಮ್ಮಾತ್ಮವನ್ನು ಭಕ್ತಿ ಸಂಗೀತದೊಳಗೋ, ಭಜನೆಗಳಲ್ಲೋ ಮುಳುಗಿಸಿ ಆನಂದಪಡಿ ಅಥವಾ ಮಹಾನ್ ಋಷಿಮುನಿಗಳು ಮತ್ತು ಪ್ರಸಿಧ್ಧ ಲೇಖಕರು ನಮಗೆ ನೀಡಿರುವ ಅದ್ಭುತವಾದ ಸಾಹಿತ್ಯದ ಓದು ಅಥವಾ ಅಭ್ಯಾಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಈ ಪ್ರಪಂಚ ಸಂಬಂಧಕ್ಕಿಂತ ಒಂಟಿತನದಲ್ಲೂ ಸುಂದರವಾದ ವಸ್ತುಗಳ ಸಂಬಂಧವನ್ನು ನೀವು ಪಡೆಯುತ್ತೀರಲ್ಲವೇ?
ಪ್ರಪಂಚದ ಪ್ರತಿ ವ್ಯಕ್ತಿಯೂ ಯಾವುದೋ ಒಂದನ್ನು  ಕೊಡಲು ಸಮರ್ಥನಾಗಿರುತ್ತಾನೆ. ವೃಧ್ಧರು  ತಮ್ಮ ಅಮೂಲ್ಯ ಅನುಭವದ ಸಂಪತ್ತನ್ನು ಹೊಂದಿದವರಾಗಿರುತ್ತಾರೆ. ಆದರೆ ಅವರು ಶಾಂತರಾಗಿ ವಾಚನಾಲಯದ ಅರೆಗಳಲ್ಲಿರುವ, ಪರಾಮರ್ಶಕ ಪುಸ್ತಕದಂತೆ ( reference book), ತಮ್ಮ ಅನುಭವವನ್ನು  ಅನ್ಯರ  ಉಪಯೋಗಕ್ಕಾಗುವಂತೆ ಕೊಡಬೇಕು .
ಸಾಮಾನ್ಯವಾಗಿ ಜನರು ಯವ್ವನದಿಂದಲೇ ಅಥವಾ ಯುವಕರಾಗಿಯೇ ಇರಲು ಇಚ್ಚಿಸುತ್ತಾರೆ. ಕೆಲವರು ವಯಸ್ಸಾಗುತ್ತಿದ್ದರೂ ಸ್ವಭಾವ ಮತ್ತು ಉತ್ಸಾಹದಿಂದ ಯುವಕರಾಗೆ ಇರುತ್ತಾರೆ. ವಯಸ್ಸಾಗುತ್ತ ದೇಹ ಜರ್ಜರಿತವಾಗಿ ರೋಗಗ್ರಸ್ತವಾಗುತ್ತದೆ. ಆ ಸಮಯದಲ್ಲಿ ಒಬ್ಬ ವ್ಯಕ್ತಿಗೆ, ತನ್ನ ಕುಟುಂಬದ ಸಹಾಯ ಮತ್ತು ಒತ್ತಾಸೆ ಬೇಕಾಗುತ್ತದೆ. ಅವರಿಗೆ ಅನುಕಂಪ ಬೇಕಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಆಧ್ಯಾತ್ಮಿಕದ ಕಡೆಗೆ ತಿರುಗುವುದು ಬಹಳ ಒಳ್ಳೆಯದು. ಯಾವ ದೈವ ನಮಗೆ ನೋವು ಮತ್ತು ದು:ಖವನ್ನು ಕೊಟ್ಟಿದೆಯೋ ಅದೇ ದೈವವು ನಮಗೆ ಆ ನೋವು ಮತ್ತು ದು:ಖವನ್ನು ತಡೆದುಕೊಳ್ಳಲೂ ಶಕ್ತಿ ಸಹ  ಕೊಟ್ಟೀತು. ದೇಹಬಲ ಕುಗ್ಗಿದಾಗ, ಆತ್ಮ ಬಲ ಹೆಚ್ಚಿದರೆ, ಆತ್ಮ ಬಲವು ದಣಿದ ದೇಹಕ್ಕೆ ಸಾಂತ್ವನ ನೀಡಿ, ಜೀವನದಲ್ಲಿ ಬೆಳಕನ್ನು ತೋರಿ ಮುಂದಿರುವ ಹಾದಿಯನ್ನು ನಿಚ್ಚಳವಾಗಿಸುತ್ತದೆ. 
ಹುಟ್ಟು, ಬದುಕು ಮತ್ತು ಸಾವುಗಳು ಪ್ರಪಂಚದ ಎಲ್ಲಾ ಪ್ರಾಣಿಗಳಿಗೂ ಸಮವಾಗಿ ಅನ್ವಯಿಸುವುದು. ಹುಟ್ಟಿನಲ್ಲಿ,  ತಾಯಿ ನೋವಿನಿಂದ ಕನಳುತ್ತಾಳೆ ಮತ್ತು ಮಗು ಜಿಗುಪ್ಸೆಯಿಂದ ಕಿರುಚುತ್ತದೆ. ಅದು ಮಿಕ್ಕೆಲ್ಲರಿಗೂ ಹಬ್ಬದ ವಾತಾವರಣ. ಎಲ್ಲಾ ನೋವು,  ದು:ಖ ಮತ್ತು ಸಂಕಟಗಳಿಗೆ ಮಂಗಳವನ್ನು ಹಾಡುವ ಸಾವನ್ನು ಎಲ್ಲರೂ ದ್ವೇಷಿಸುತ್ತಾರೆ. ಸಾವು ನಿಶ್ಶಬ್ಧ, ನೀರವ ಮತ್ತು  ಶಾಂತ. ಅದು ಒಟ್ಟಾರೆ ಜೀವನದ ಪರಿವರ್ತನಾ ಬಿಂದು. 

ಜೀವನದ ಅವಧಿ ಎಷ್ಟೇ ದೊಡ್ಡದಾದರೂ ಆತ್ಮಕ್ಕೆ ಅದು ಅಲ್ಪ ಕಾಲವಷ್ಟೆ. ಏಕೆಂದರೆ ಆತ್ಮದ ನಿರಂತರ ಪ್ರಯಾಣದಲ್ಲಿ ಹುಟ್ಟು ಸಾವುಗಳು ಕೇವಲ ಘಟನೆಗಳಷ್ಟೇ. ಬದುಕಿನ ಯಶಸ್ಸಿನ ಮಾಪನ ಜೀವನದ ಅವಧಿಯಿಂದ ಅಲ್ಲದೆ, ಜೀವನದ ಸಾಧನೆಗಳಿಂದ ಮಾಡಬೇಕು.  ಸಾಧನೆಯೆಂದರೆ ಆಂತರಿಕವಾಗಿ ಎಷ್ಟು ಬೆಳೆದಿದ್ದೇವೆ ಎಂದು ನಮ್ಮನ್ನು ನಾವು ಪರೀಕ್ಷಿಸಿಕೊಳ್ಳಬೇಕು. ದೇಹಕ್ಕೆ ವಯಸ್ಸಾದರೂ ಸಕಾರಾತ್ಮಕವಾದ ಯೋಚನೆಗಳಿಂದ, ವ್ಯಕ್ತಿಯು ಮನಸ್ಸು ಮತ್ತು ಭಾವನೆಗಳಿಂದ ಯವ್ವನವನ್ನು ಉಳಿಸಿಕೊಳ್ಳಬಹುದು. ನಕಾರಾತ್ಮಕವಾದ ಆಲೋಚನೆ ಅನಾರೋಗ್ಯಕ್ಕೆ ಆಹ್ವಾನವಿತ್ತಂತೆ. ನಕಾರಾತ್ಮಕ ಯೋಚನೆಯಿಂದ, ಎಲ್ಲಾ ಸಾರ್ಥಕ ಚಟುವಟಿಕೆಗಳನ್ನೂ ತೊರೆದು ಸ್ವಕರುಣೆಯಿಂದ, ನಿಟ್ಟುಸಿರು ಬಿಡುತ್ತಾ, ಎಂದೋ ಬರುವ ಸಾವನ್ನು ಅಪೇಕ್ಷಿಸುತ್ತಾ ತೊಳಲಾಡುತ್ತಾ ಇರುವುದಕ್ಕಿಂತ,  
ವೃಧ್ಧಾಪ್ಯವನ್ನು ಒಂದು ಅವಕಾಶವೆಂದು ಭಾವಿಸಿ, ಹೊಸ ಹೊಸ ವಿಚಾರ ವಿಧ್ಯಮಾನಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು ಆರಾಮವಾಗಿ ಜೀವನವನ್ನು ಮತ್ತು ಅದರ ಸಾರವನ್ನು ಸವಿಯುತ್ತಾ ಶೇಷ ಜೀವನವನ್ನು ಸುಂದರವಾಗಿ ಕಳೆಯಲು ಬೇಕಾದ ಸುಂದರವಾದ ವಾತಾವರಣವನ್ನು ಸೃಷ್ಟಿಮಾಡಿಕೊಳ್ಳುವುದು, ಒಳ್ಳೆಯದಲ್ಲವೇ. ಏಕೆಂದರೆ ಏಕಾಂಗಿಯಾಗಿರುವಾಗ, ನೀವೇ ನಿಮ್ಮ ಸ್ನೇಹಿತ, ನೀವೇ ನಿಮ್ಮ ನಾಯಕ, ನೀವೇ ನಿಮ್ಮ ವಿಶ್ಲೇಷಕ. 

ಹಾಗಿದ್ದರೆ ಪ್ರತಿ ನಿತ್ಯ ದಿನದಂತ್ಯದಲ್ಲಿ ಹಾಸಿಗೆಯಲ್ಲಿ ಒರಗಿದಾಗ, ಸಂತೃಪ್ತ ಭಾವದಿಂದ ನಿದ್ದೆ ಬಂದರೆ, ಸಾವನ್ನು ಆಹ್ವಾನಿಸಲು ಮತ್ತು ನಿಶ್ಚಿಂತೆಯಿಂದ ಅದನ್ನು ಅಪ್ಪಿಕೊಳ್ಳಲು ಒಂದು ಪೂರ್ವ ಪ್ರಯೋಗವೆಂದೆ ( rehersal )  ತಿಳಿದು ಕೊಂಡು ಹಾಯಾಗಿರಿ. 

ಸಾವು ಬರಲಿ. ಆದರೆ ಅದು ಬರುವುದಕ್ಕೆ ಮುನ್ನವೇ ಸಾಯುವುದಕ್ಕಿಂತ, ಬರುವ ಕಡೆಯ ಗಳಿಗೆಯವರೆಗೆ, ಜೀವನವನ್ನು ಸವಿಯಿರು, ಸಂತೃಪ್ತಿಯಿಂದ ಬದುಕಿರಿ. 

 ರವಿ ತಿರುಮಲೈ 
9632246255

No comments:

Post a Comment