Sunday, 4 December 2011

"ನಾನು" ಮತ್ತು "ನನ್ನ " ಅಸ್ತಿತ್ವ

"ನಾನು" ಮತ್ತು "ನನ್ನ " ಅಸ್ತಿತ್ವ.

ಹಿಂದೆಯೂ ಇದ್ದೆನಂತೆ  
ಮುಂದೆಯೂ ಇರುವೆನಂತೆ  
ಹೇಳಿತು ಗುರುಗಳ ಗೀತಾ ಪಾರಾಯಣ  
ಮುಗಿಯುವುದೆಂತು ಜೀವನದ ಪಯಣ

ಅವ್ಯಾಹತ ಕಾಲದ ಪ್ರವಾಹದೊಳು 
ಬೆಳಗು ಬೈಗುಗಳ ಪ್ರಯಾಣದೊಳು
ಉರುಳುತ್ತವೆ ನಮಗರಿಯದಂತೆಯೇ 
ದಿನ,ವರುಷ, ದಶಕ, ಶತಮಾನಗಳು 

ಹುಟ್ಟಿನ ಹಿಂದಿನದು ನೆನಪಿಲ್ಲ 
ಸಾವಿನಾಚೆ ಏನೋ ಗೊತ್ತಿಲ್ಲ 
ಎಷ್ಟುಕಾಯಗಳ ಒಳಹೊಕ್ಕು ಬಂದೆನೋ 
ಅವುಗಳೊಳಗೆ ಏನಲ್ಲ ಅನುಭವಿಸಿ ನೊಂದೆನೋ

ಇಲ್ಲದಿದ್ದದ್ದು ಇರುವಂತಾಗಿದೆ 
ಇರುವುದು ಇಲ್ಲದಂತಾಗುತ್ತದೆ 
ದೇಹ, ಮನಸ್ಸು, ಬುದ್ಹ್ಧ್ಯಾತ್ಮಗಳು 
ನನ್ನಾಗಿಸಲು ಸೇರಿದಂತಾಗಿದೆ

ಆವ ಶಕ್ತಿ ನಮ್ಮನ್ನೊಂದುಗೂಡಿಸಿತು 
ಬೊಂಬೆಯಂತೆ ನನ್ನನ್ನಾಡಿಸಿತು   
ನನ್ನ ಪಾತ್ರವೇ ಇಲ್ಲದೆ 
ತನ್ನ ಸೂತ್ರದಾಟವ ನಡೆಸಿತು 

ಯಾವುದಾವುದೋ ಪಾತ್ರ 
ಮಗ ಮಗಳು ತಂದೆ ತಾಯಿ 
ಅಜ್ಜ ಅಜ್ಜಿ ಅಣ್ಣ ತಮ್ಮ ಅಕ್ಕ ತಂಗಿ 
ಅದೇ ರೂಪ, ಹೆಸರು ಹಲವಾರು

ಒಂದು ಆದಿ, ಒಂದು ಅಂತ್ಯ 
ನಡುವೆ ನಾಟಕದ ಒಂದೊಂದು ಅಂಕ. 
ಎಷ್ಟೊಂದು ಪಾತ್ರಗಳು, ಮಾತುಗಳು 
ಹಾವಗಳು, ಭಾವಗಳು ಬದುಕೊಂದು ಸಂಕ 

ದುಗಡ, ದುಮ್ಮಾನ, ದ್ವೇಷಾಸೂಯಗಳು 
ಪ್ರೀತಿ, ವಿಶ್ವಾಸ  ಪ್ರೇಮದಂಟುಗಳು 
ದಾರಿದ್ರ್ಯ ಬಡತನ ರೋಗ ಗೋಳಾಟಗಳು
ಬಿದ್ದು  - ಎದ್ದ,  ಸೋತು - ಗೆದ್ದ ಭಾವಗಳು  

ಕಲಿತ ಜ್ಞಾನ ವಿಜ್ಞಾನಗಳು 
ಅರಿತ ವಿದ್ಯೆ ವಿಷಯಗಳು ನೂರು 
ಕೇಳಿ ಕಂಡ  ವಿಷಯಗಳು 
ಒಟ್ಟುಮಾಡಿದರೆ ಅಬಬ್ಬಾ ಸಾವಿರಾರು 

ಬದುಕ ದೂಡುವ ಕಲೆ ಹಲ ಪರಿ 
ಹೊಟ್ಟೆ ಬಟ್ಟೆ ಸೂರು ಮೂಲ ಗುರಿ 
ಹೆಚ್ಚಾದರೆ ಗರ್ವ ತೋರುವುದು 
ಅಲ್ಪವಾದರೆ ಹಲುಬಿ ಪರರ ದೂರುವುದು 

ಎಲ್ಲ ಪಾತ್ರವ ಧರಿಸಿ 
ಬಣ್ಣ ಕಳಚಿ, ದಿರಿಸ ಸರಿಸಿ 
ನೇಪತ್ಯಕ್ಕೆ ಸರಿವ ಕಾಲಕ್ಕೆ 
ಅಂತ್ಯದರಿವು ಆಗುವ ಸಮಯಕ್ಕೆ 

ಒಟ್ಟು ಸೇರಿದ ಆ ನಾಲ್ಕು ಅಂಗಗಳು 
ತೊರೆದು ಪರಸ್ಪರ ಸಂಗವನು 
ಸ್ವಸ್ಥಾನ ಸೇರುವಾತುರದಲಿ ಓಡಿದಾಗ 
ನೀನು ನಾನು ಯಾರೂ ಇರದಂತಾದಾಗ 

ನಿರ್ವಾತದಾವರಣ, ಸಂಪೂರ್ಣ ಮೌನ.
ಆಡಿದ್ದು, ಮಾಡಿದ್ದು ಪಡೆದದ್ದು ಕೊಟ್ಟದ್ದು 
ನೋಡಿದ್ದು ನಲಿದಿದ್ದು ಅತ್ತದ್ದು ನಕ್ಕದ್ದು 
ಎಲ್ಲವೂ ಮೌನ, ಉಳಿದಿದ್ದು ಶೂನ್ಯ . 
ನಾ ಯಾರೆಂದು ಅರಿಯುವಾ ಮುನ್ನವೇ 
ಬಂದಿತ್ತು " ನಾನು" ಎಂಬುದಕ್ಕೆ ಅಂತ್ಯ. 

ರವಿ ತಿರುಮಲೈ 

1 comment:

  1. ವ್ಹಾ ಸುಂದರ ಮತ್ತು ಸಾತ್ವಿಕ ತತ್ವಗಳಿಡಿದು ಬರೆದ ಕವನ ಮನಗೆಲ್ಲುವಲ್ಲಿ ಸಂಪೂರ್ಣ ಯಶ ಕಾಣುತ್ತದೆ ಸರ್.. ಕವಿತೆ ಎಲ್ಲ ಭಾವಗಳನ್ನೂ ಬದಿಗೊತ್ತಿ ಅನಂತದಲ್ಲಿನ ಯಾವುದೂ ಸತ್ಯವನ್ನು ಶೋಧಿಸಲು ಟೊಂಕ ಕಟ್ಟಿ ನಿಲ್ಲುತ್ತದೆ.. ತುಂಬ ಸೂಕ್ಷ್ಮ ಭಾವಾಭಿವ್ಯಕ್ತಿಗಳನ್ನು ಅಭಿವ್ಯಕ್ತಿಸುತ್ತಾ ಸಾಗುತ್ತದೆ ನಾವಿರುವ 3 ದಿನದ ಬಾಳಿನಲ್ಲಿ "ನಾನು ಮತ್ತು ನನ್ನ ಅಸ್ತಿತ್ವ"ವೆಂದು ಬಡಿದಾಡಿಕೊಳ್ಳುವ ಬದಲು ದೇವರೊಲುಮೆ ಗೆಲ್ಲಲು ನಿಸ್ವಾರ್ಥವಾಗಿ ಶ್ರಮಿಸಬೇಕೆಂಬ ಸತ್ಯವನ್ನು ಸಾರುತ್ತದೆ.. "ಬದುಕೊಂದು ನಾಟಕ ರಂಗ, ಪಾತ್ರಧಾರಿಗಳು ನಾವು ಸೂತ್ರಧಾರನಲ್ಲಿರುವನು" ಎಂಬ ಸಾಲುಗಳ ನೆನಪು ತರಿಸುತ್ತದೆ..:)))

    ReplyDelete