Friday 5 April 2019

ಸಂತೋಷ ಮತ್ತು ನೋವು

ಸಂತೋಷವೆನ್ನುವುದು ಒಂದು  ಮಾನಸಿಕ ಸ್ಥಿತಿ. ಅದೊಂದು ಉನ್ಮಾದದ ಸ್ಥಿತಿ. ನಮಗೆ, ಬದುಕಿನ ಮೇಲಿನ ಪ್ರೀತಿ ಸಂತೋಷವನ್ನು ಮತ್ತು ನೋವನ್ನು ತರುತ್ತದೆ. ಸಂತೋಷವಾದಾಗ ಮನಸ್ಸು ಗರಿಗೆದರುತ್ತದೆ ಮತ್ತು ನೋವಿನಲ್ಲಿ  ಮುದುಡುತ್ತದೆ.  ಆದರೆ ನೋವು ಮತ್ತು ಸಂತಸ ಎರಡೂ ಮನಸ್ಸಿಗೆ ಸಂಬಂಧಿಸಿದ ಸ್ಥಿತಿ.  ವಾಸ್ತವವಾಗಿ ನೋವು ಮತ್ತು ನಲಿವುಗಳು ಇರುವುದಿಲ್ಲ. ಅಕಸ್ಮಾತ್ ಒಬ್ಬ ವ್ಯಕ್ತಿ ನೋವು ಅಥವಾ ನಲಿವನ್ನು ಅನುಭವಿಸಿದರೆ ಅದು ತಾತ್ಕಾಲಿಕ ಅನುಭವವಾಗುತ್ತದೆ ಹೊರತು, ಮನಸ್ಸಿನ ಶಾಶ್ವತ ಸ್ಥಿತಿಯಲ್ಲ. ಇಂದು ಸಂತಸಕ್ಕೆ ಕಾರಣವಾದ ವಸ್ತು, ವ್ಯಕ್ತಿ ಅಥವಾ ವಿಷಯ, ನಾಳೆ ನಮ್ಮ ನೋವಿಗೆ ಕಾರಣವಾಗಬಹುದು.  ಒಬ್ಬ ವ್ಯಕ್ತಿಯ ಸಂತೋಷಕ್ಕೆ ಕಾರಣವಾದ ವಸ್ತು, ವ್ಯಕ್ತಿ ಅಥವಾ ವಿಷಯ ಮತ್ತೊಬ್ಬ ವ್ಯಕ್ತಿಯ ನೋವಿಗೆ ಕಾರಣವಾಗಬಹುದು. ಹಾಲಿನ ಮೊದಲೆರಡು ಲೋಟಗಳು ಸಮಾನವಾದ ಸಂತೋಷವನ್ನು ನೀಡಿದರೂ ಮೂರನೆಯದು  ಇಷ್ಟವಾಗದೇ, ನಾಲ್ಕನೆಯದು ವಾಕರಿಕೆ ತರಿಸಬಹುದು. ಹಾಗಾಗಿ ಜಗತ್ತಿನ ಯಾವುದೇ ವಸ್ತು, ವಿಷಯ ಅಥವಾ ವ್ಯಕ್ತಿ ಸತ್ಯವಾದ, ನಿರಂತರವಾದ ಸಂತಸವನ್ನಾಗಲೀ ಅಥವಾ ನೋವನ್ನಾಗಲೀ ನೀಡಲಾರದು.  

ನೋವು ಮತ್ತು ನಲಿವುಗಳಿಗೆ ತಮ್ಮದೇ ಆದ ಅಸ್ಥಿತ್ವವಿಲ್ಲ. ಅವುಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.  ಅವು ಪರಸ್ಪರ ವಿರೋಧ ಭಾವಗಳು. ಅವು ಕೇವಲ ವ್ಯಕ್ತಿನಿಷ್ಠ ಭಾವಗಳ ಮತ್ತು ದೃಢ ನಿಶ್ಚಯದಿಂದ ನಮ್ಮ ಅಂತರಂಗದ ಭಾವವನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು.  ಇಂದು ಅಸಹನೀಯವಾದದ್ದು ಮುಂದೆಂದಾರೂ ಒಂದು ದಿನ ಬಹಳ ಪ್ರಿಯವಾಗಬಹುದು. ಕಾಲಾನುಕಾಲಕ್ಕೆ ನಮ್ಮ ಅಭಿರುಚಿಗಳು ಆಸಕ್ತಿಗಳು ಬದಲಾಗುತ್ತಾ ಹೋದಂತೆ ನಮ್ಮ ಅಭಿರುಚಿಗಳೂ ಸಹ ಬದಲಾಗುತ್ತಾ ಹೋಗುತ್ತವೆ. ಹೊರಗಿನ ವಿಚಾರಗಳು ನಮ್ಮೊಳಕ್ಕೆ ನುಗ್ಗಿ ನಮ್ಮಲ್ಲಿ ತರುವ ಬದಲಾವಣೆಗಳೇ ನಮ್ಮ ಮನೋಭಾವದ ಬದಲಾವಣೆಗೆ ಕಾರಣ. 

ಭಾವನೆಗಳ ಬದಲಾವಣೆ 

ನಮ್ಮ ಭಾವನೆಗಳನ್ನು ನಮ್ಮನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವುದು ಹೇಗೆ? ನಮ್ಮ ಈ ನೋವು ಮತ್ತು ನಲಿವುಗಳಲ್ಲಿ ಏರುಪೇರಾಗುತ್ತಿರುತ್ತದೆ. ಸದಾಕಾಲ ನೋವಾಗಲೀ ನಲಿವಾಗಲಿ ಒಂದೇ ಸಮ ಇರುವುದಿಲ್ಲ.  ಮನಸ್ಸೂ ಸಹ ಸದಾ ನೋವಿನಲ್ಲಾಗಲೀ ಅಥವಾ ನಲಿವಿನಲ್ಲಾಗಲೀ ಇರಲು ಸಾಧ್ಯವಿಲ್ಲ. ಒಂದೇ ಸಮನೆ ನೋವಿನ ಸ್ಥಿತಿಯಲ್ಲಿ ಮನುಷ್ಯನಿಗೆ ಕೆಲವು ದಿನಗಳು ಬದುಕುವುದೂ ಸಾಧ್ಯವಿಲ್ಲ.  ಇದು ಮನುಷ್ಯನಿಗೆ ಪರಮಾತ್ಮನಿತ್ತಂತ ಬಹು ದೊಡ್ಡ 'ವರ'. ಜಗತ್ತಿನ ಭಿನ್ನಭಿನ್ನ  ವಸ್ತುಗಳು ಮಾನವರ ಮನ ಪರಿವರ್ತನೆಗೆ ಸಹಾಯಮಾಡುತ್ತವೆ.  

ನಮ್ಮ ಎಲ್ಲ ರೀತಿಯ ಸಂತೋಷಗಳ ನಡುವೆ ಭಯ, ಮುಂದಾಲೋಚನೆ, ಗಮನ ಮತ್ತು ಚಿಂತೆಗಳು ನಮ್ಮ ಸಂತೋಷವನ್ನು ಮಂಕಾಗಿಸಿ ನೋವನ್ನು ನೀಡುತ್ತವೆ. ಹತ್ತು ನಿಮಿಷ ಸಂತಸದ ಅಲೆಯಲ್ಲಿ ಕಳೆದರೆ ಮುಂದಿನ ಹತ್ತು ನಿಮಿಷ ನೋವಿನ ಬಲೆಯಲ್ಲಿ ನರಳಬೇಕಾಗುತ್ತದೆ. ಈ ರೀತಿಯ ಲಯ ಬದುಕಿನುದ್ದಕ್ಕೂ ನಾವು ನೋಡಬಹುದು. ಅಂತರ್ಮಂಥನದಿಂದ ಅಥವಾ ಆತ್ಮಾವಲೋಕನದಿಂದ ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿ ನೋಡಬೇಕು. ಆಗ ನಮಗೆ ಬದುಕು,  ನೋವು ಮತ್ತು ನಲಿವುಗಳ ಮಿಶ್ರಭಾವನೆಗಳಿಂದ ಕೂಡಿದ ಹಂದರ ಎಂದು ಅರ್ಥವಾಗುತ್ತದೆ. ಈ ಭಾವನೆಗಳನ್ನು ಸಂಸ್ಕಾರಗೊಳಿಸುವ ಕಾರ್ಯ ಆಧ್ಯಾತ್ಮಿಕ ಸಾಧನೆಯಲ್ಲಿ ಮಾತ್ರ ಸಾಧ್ಯ. ತನ್ನ ಭಾವನೆಗಳ ಮೇಲೆ ಹತೋಟಿಯಿಲ್ಲದ ವ್ಯಕ್ತಿ ಬಿರುಗಾಳಿಯಲ್ಲಿ ತೂರಿಬಿಟ್ಟ ತರಗೆಲೆಯಂತೆ ಆಗುತ್ತಾನೆ. ಆಧ್ಯಾತ್ಮಿಕ ಸಾಧನೆಯಿಂದ ಆತ್ಮ ನಿಯಂತ್ರಣ ಮತ್ತು ಆತ್ಮಾವಲೋಕನಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ಚಿಕ್ಕ ಚಿಕ್ಕ ಏಳಿಗೆಗಳು ನಮ್ಮ ತಲೆಗೆ ಏರಿ ಅಹಂಕಾರಪಡುವಂತಾಗಬಾರದು ಮತ್ತು ಹಾಗೆಯೇ ಸಣ್ಣ ಸಣ್ಣ ಸೋಲುಗಳೂ ಸಹ ನಮ್ಮನ್ನು ಖಿನ್ನರನ್ನಾಗಿಸಿ ಭಗ್ನ ಹೃದಯಿಗಳನ್ನಾಗಿಸಬಾರದು.

ಬಹಳಷ್ಟು ಮಾನಸಿಕ ಖಿನ್ನತೆ ಅಜ್ಞಾನದಿಂದಲೇ ಉಂಟಾಗುತ್ತದೆ.  ಇದಕ್ಕೆ ಕಾರಣ ನಮ್ಮನ್ನು ನಾವು ನಮ್ಮ ದೇಹ ಮತ್ತು ಮನಸ್ಸಿನೊಂದಿಗೆ ಮತ್ತು ಅದಕ್ಕೆ ಸಂಬಂಧಪಟ್ಟ ವಿಚಾರಗಳಲ್ಲಿ ಮಾತ್ರ ಗುರುತಿಸಿಕೊಳ್ಳುವುದು. ಈ ರೀತಿಯ ತಪ್ಪು ಗ್ರಹಿಕೆ ನಮ್ಮಲ್ಲಿ ಮಾಯವಾದರೆ ಮಾತ್ರ ನಾವು ಮಾನಸಿಕ ನೋವು ಮತ್ತು ಖಿನ್ನತೆಯಿಂದ ಮುಕ್ತರಾಗಿ ನಮ್ಮನ್ನು ನಾವು ನಾಮ ಮತ್ತು ರೂಪರಹಿತ ಅನಂತ ಸತ್ಯದೊಡನೆ ಗುರುತಿಸಿಕೊಳ್ಳಲು ಸಾಧ್ಯ.  ಗಾಢ ನಿದ್ರೆಯೆಲ್ಲಿರುವಾಗ ನಮಗೆ ನೋವಿನ ಅನುಭವವಾಗುವುದಿಲ್ಲ. ಏಕೆಂದರೆ ನಿದ್ರೆಯಲ್ಲಿ ದೇಹಾನುಭವವಿರುವುದಿಲ್ಲ. ಬೇರೆ ಯಾರದೋ ಮನೆಯಲ್ಲಿ ಸಾವು ಸಂಭವಿಸಿದರೆ ನಮಗೆ ನೋವಾಗುವುದಿಲ್ಲ. ಆದರೆ ನಮ್ಮ ರಕ್ತ ಸಂಬಂಧಿಗಳಲ್ಲಿ ಯಾರಾದರೂ ಮರಣಹೊಂದಿದರೆ ನಮಗೆ ಖಂಡಿತ ನೋವಾಗುತ್ತದೆ. ಇದೇ ದೇಹಕ್ಕೂ ನೋವಿಗೂ ಇರುವ ಸಂಬಂಧ. 

ಋಣಾತ್ಮಕ ಸಂವೇದನೆಗಳನ್ನು ನಮ್ಮ ತಲೆಗೆ ತಂದುಕೊಳ್ಳುವುದರಿಂದ ನಮಗೆ ನೋವುಂಟಾಗುತ್ತದೆ.  ಬೆಳಕಿನ ಅಭಾವವೇ ಕತ್ತಲು. ಆದರೆ ವಾಸ್ತವದಲ್ಲಿ ಕತ್ತಲಿರುವುದಿಲ್ಲ. ಏಕೆಂದರೆ ಕತ್ತಲು ಎನ್ನುವುದರ ಋಣಾತ್ಮಕ ಅಸ್ಥಿಸ್ತ್ವವಿರುತ್ತದೆ.  ಅದೇ ರೀತಿಯೇ ಮಾಯೆಯ ಅಸ್ತಿತ್ವವೂ ಸಹ.  ಬೆಳಕನ್ನು ತಂದಾಗ, ಕತ್ತಲು ಮಾಯವಾಗುತ್ತದೆ. ಹಾಗೆಯೇ ಸಂತಸ ಅಥವಾ ಆನಂದದ ಅಭಾವವೇ ನೋವು. ನೋವಿರುವುದೇ ಸಂತಸದ ಗರ್ಭದಲ್ಲಿ. ವಸ್ತು, ವ್ಯಕ್ತಿ ಅಥವಾ ವಿಷಯಗಳ ಸಂಸರ್ಗದಲ್ಲಿ ನಮಗೆ ಸಿಗುವ ಆನಂದವೇ  ನೋವಿನ ಜನ್ಮಸ್ಥಾನ. ಅವಕ್ಕೆ ಒಂದು ಆದಿ ಮತ್ತು ಅಂತ್ಯವುಂಟು. ಜ್ಞಾನಿಗಳು ಅಥವಾ ಅರಿವುಳ್ಳವರು ಜಗತ್ತಿನ ವಸ್ತು, ವಿಷಯ ಅಥವಾ ವ್ಯಕ್ತಿಗಳ ಸಂಸರ್ಗದಿಂದ ಉಂಟಾಗುವ ಆನಂದದಿಂದ ' ಸಂತಸ ' ಪಡುವುದಿಲ್ಲ ಅಥವಾ ಅವುಗಳು ಲುಪ್ತವಾದಾಗ ದುಃಖಪಡುವುದೂ ಇಲ್ಲ. ಅವರಲ್ಲಿ ಬೇರೂರಿರುವ ಆಧ್ಯಾತ್ಮದ ಅರಿವಿನಿಂದಾಗಿ ಅವರುಗಳು ಜಗತ್ತಿನ ವಸ್ತು, ವಿಷಯ ಮತ್ತು ವಸ್ತುಗಳು ನೀಡುವ ನೋವು ಮತ್ತು ನಲಿವುಗಳಿಂದ ಮುಕ್ತರಾಗಿ, ಸತ್ಯವಾದ ಮತ್ತು ನಿತ್ಯವಾದ ಆನಂದದಲ್ಲಿ ತೇಲುತ್ತಿರುತ್ತಾರೆ.   

ವೈರುಧ್ಯವಿರುವ ಜೋಡಿಗಳು. 

ಒಂದರ ನಂತರ ಮತ್ತೊಂದು ಬರುವ ಮತ್ತು ಒಂದಕ್ಕೊಂದು ವಿರುದ್ಧವಾಗಿರುವ ಎರಡು ಸ್ಥಿತಿಗಳನಡುವೆ ನಾವು ಸಂಪೂರ್ಣ ಆನಂದವನ್ನು ಪಡೆಯಲು ಅಥವಾ ಅನುಭವಿಸಲು ಸಾಧ್ಯವೇ ಇಲ್ಲ.  ಬದುಕಿನ ಹಿಂದೆಯೇ ಮರಣವೂ ಬರುತ್ತದೆ. ಹಗಲಿನ ಹಿಂದೆಯೇ ಇರುಳು ಬರುತ್ತದೆ. ಬೆಳಕಿನ ಹಿಂದೆಯೇ ಕತ್ತಲು ಬರುವುದು. ನೋವೂ ಸಹ ನಲಿವಿನ ಹಿಂದೆಯೇ ಇರುತ್ತದೆ. ನಮಗೆ ದೈವ ಸಾಕ್ಷಾತ್ಕಾರವಾಗಬೇಕಾದರೆ ವಸ್ತು, ವಿಷಯ ಮತ್ತು ವ್ಯಕ್ತಿಗಳಿಂದ ಸಿಗುವ ಸಂತೋಷ ಮತ್ತು ಆನಂದದ ಬಯಕೆಯನ್ನು ತೊರೆದು,  ಆ ಹಂತದಿಂದ ಮೇಲೇರಬೇಕು. ದೈಹಿಕಾನಂದವನ್ನು ಸಂಪೂರ್ಣವಾಗಿ ತೊರೆಯಬೇಕು. ಒಂದೇ ಸಮಯದಲ್ಲಿ,  ದೈವ ಮತ್ತು ದೇಹ, ಇವೆರಡರಿಂದ ಸಿಗುವ ಆನಂದ ಅಥವಾ ಸಂತೋಷವನ್ನು ಪಡೆಯಲಾಗುವುದಿಲ್ಲ. ಕೇವಲ ಬಲಹೀನರು ಮತ್ತು ಕಪಟವೇಷಕರು ಮಾತ್ರ ದಿನದ ಸ್ವಲ್ಪ ಸಮಯ ಸಾಧನೆ ಮಾಡಿ ನಿಜವಾದ ಸಂತೋಷ ಅಥವಾ ಆನಂದವನ್ನು ಪಡೆಯಲು ಪ್ರಯತ್ನಿಸುತ್ತಾರೆ. ಆದರೆ ದೈವಾನುಭವ ಅಷ್ಟು ಸುಲಭ ಸಾಧ್ಯವಲ್ಲ. 


ಶಾಂತ ಮನೋಭಾವದಿಂದ ಸಂತೋಷ ದೊರೆಯುತ್ತದೆ. ಮಾನಸಿಕ ಶಾಂತಿ,  ಪ್ರಾಪಂಚಿಕ ಆಸೆಗಳನ್ನು ತೊರೆದ ಮತ್ತು ಸಂತೋಷದ ವಸ್ತುಗಳಿಂದ ಸಿಗುತ್ತದೆ ಎನ್ನುವ ಮನೋಭಾವವನ್ನು ತೊರೆದಾಗ ಮಾತ್ರ ಸಾಧ್ಯ. ನಾವು ಸಾಂತಿಯ ಪರಿಧಿಯನ್ನು ಪ್ರವೇಶಿಸುವ ಮುನ್ನವೇ ಸಂವೇದಾತ್ಮಕ ಆನಂದದ ಅಥವಾ ಸಂತೋಷದ  ವಿಚಾರಗಳು ನಮ್ಮಲ್ಲಿ ಮಾಯವಾಗುತ್ತವೆ. ಆನಂದ ಸತ್ವದಲ್ಲಡಗಿದೆ ಮತ್ತು ಸತ್ವಕ್ಕೂ ಮಿಗಿಲಾಗಿದೆ. ಆತ್ಮದ ಗುಣವೇ ಆನಂದ ಅದು ಧ್ಯಾನದಲ್ಲಿ ನಿಂತಿದೆ. "ಆನಂದೋ ಬ್ರಹ್ಮತೀವ್ಯಜಾನಾತ್" ಎನ್ನುತ್ತದೆ ತೈತ್ತರೀಯ ಉಪನಿಷತ್ತು. ಹಾಗಾಗಿ ಆನಂದದ ನೆಲೆ ನಾವು ನಮ್ಮ ಮನಸ್ಸನ್ನು ಬ್ರಹ್ಮನಲ್ಲಿ ಲೀನವಾಗಿಸಿದರೆ ದೊರೆಯುತ್ತದೆ. 

ಮಾನಸಿಕ ತುಮುಲ ಮತ್ತು ನೋವಿಂದ ಮುಕ್ತರಾಗಬೇಕಾದರೆ ಇರುವುದೊಂದೇ ಮಾರ್ಗ. ನೋವಿಗೆ ಕಾರಣವಾದ ವಿಷಯಗಳಿಂದ ಮನಸ್ಸನ್ನು ವಿಮುಖವನ್ನಾಗಿಸಿ ಅಥವಾ ವಸ್ತು, ವಿಷಯ ಮತ್ತು ವ್ಯಕ್ತಿಗಳ ಭಾವದಿಂದ ಹಿಂಸೆಳೆದು, ಅನಂತ, ಗುಣಾತೀತ, ನಾಮ ಮತ್ತು ರೂಪಾತೀತ, ವಾಂಛೆಯಿಲ್ಲದ, ಮೃತ್ಯುವಿಲ್ಲದ, ನಿತ್ಯಾನಂದದ ಆಗರವಾದ, ಅನುಪಮ ಮತ್ತು ಅದ್ವಿತೀಯವಾದ ' ಆತ್ಮ ' ನಲ್ಲಿ ನಿರಂತವಾಗಿ ನಿಲ್ಲಿಸಿಕೊಂಡಾಗ,  ದೇಹಾನುಭಾವದಿಂದ ಮುಕ್ತರಾಗಿ ಮಾನಸಿಕ ದೃಢತೆಯನ್ನು ಬೆಳೆಸಿಕೊಳ್ಳುವುದು.  - ತತ್ವಮಸಿ 

ನಮಸ್ಕಾರ 

ರವಿ ತಿರುಮಲೈ