Sunday 19 May 2013

ಮಹಿಳೆ ಎಷ್ಟು ಸ್ವತಂತ್ರಳು?




ಇತ್ತೀಚಿಗೆ ಹೆಣ್ಣಿನ ಸ್ಥಾನಮಾನ ಮತ್ತು ರಕ್ಷಣೆಯ ಬಗ್ಗೆ ಒಂದು ಸಕಾರಾತ್ಮಕವಾದ ' ಕೂಗು' ಕೇಳಬರುತ್ತಿದೆ. ಹೆಣ್ಣಿನ ಮೇಲೆ ಶೋಷಣೆ ಎಲ್ಲಾದರೂ ಗುರುತರವಾಗಿ ಹೆಚ್ಚಾದರೆ ಆಗ ಒಂದು ಕೂಗು. ಮತ್ತೆ ಎಲ್ಲ ತಣ್ಣಗೆ ಮಾಮೂಲು. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಎಂತಹ ಸ್ಥಾನಮಾನವಿದೆ ಎಂದು ಸಾವಿರಾರು ವರ್ಷಗಳಿಂದ ಜಿಜ್ಞಾಸೆಗೆ ಒಳಗಾಗಿರುವ ವಿಷಯವೆಂದು ಎಲ್ಲರಿಗೂ ಗೊತ್ತು. 

ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಯಲ್ಲಿ ಹೆಣ್ಣೇನು, ಗಂಡಿನ ಸ್ಥಿತಿಗತಿಗಳೂ ಸಹ ಬದಲಾಗುತ್ತಲೇ ಇದೆ. ಒಂದು ಕಾಲಕ್ಕೆ ಕೇವಲ ಗೃಹಿಣಿಯಾಗಿ ಸಮರ್ಪಕವಾಗಿ ಕೆಲಸ ಮಾಡುತ್ತಿದ್ದ ಹೆಣ್ಣು ಇಂದು ಆರ್ಥಿಕ, ಸಾಮಾಜಿಕ ಇತ್ಯಾದಿ ರಂಗಗಳಲ್ಲಿಯೂ ಸಮಭಾಗಿತ್ವವನ್ನು ನಿರ್ವಹಿಸುತ್ತಿದ್ದಾಳೆ. 

ಹೆಣ್ಣು ಅಬಲೆ ಎಂದು ಸಾಮಾನ್ಯವಾಗಿ ಹೇಳುತ್ತಾರೆ. ಇದು ನಿಜವೇ? ಹೌದು ಮತ್ತು ಅಲ್ಲ, ಎರಡೂ ಉತ್ತರವನ್ನು ಕೊಡಬಹುದು. 'ಹೌದು' ಏಕೆಂದರೆ ದೈಹಿಕವಾಗಿ ಸಾಮಾನ್ಯವಾಗಿ ಹೆಣ್ಣಿಗೆ ಕಡಿಮೆ ಬಲ . ಆ ಅರ್ಥದಲ್ಲಿ ಆಕೆ 'ಅಬಲೆ'. ಅಂದರೆ ಬಳವಿಲ್ಲದವಳು ಎಂದು ಅರ್ಥ. 'ಅಲ್ಲ'  ಏಕೆಂದರೆ ಮಾನಸಿಕವಾಗಿ  ಹೆಣ್ಣು ಬಲು ಬಲವಂತೆ. ಗಂಡಿಗಿಂತ  ಹೆಣ್ಣು ಅಧಿಕ ದೃಢ ಮನೋಭಾವನ್ನು ಹೊಂದಿದ್ದಾಳೆ.  

ನಮ್ಮ ಭಾರತೀಯ ಸಮಾಜದಲ್ಲಿ ' ಸಂಸಾರ'ಕ್ಕೆ ಬಹಳ ಮಹತ್ವ. ಗಂಡು ಮತ್ತು ಹೆಣ್ಣು ಇಬ್ಬರೂ ತಮ್ಮ ಸಂಸಾರಕ್ಕೆ ಬದ್ಧರಾಗಿರುತ್ತಾರೆ ಅಥವಾ ಬದ್ಧರಾಗಿರಬೇಕು. ಇದು ನಿಯಮ. ಇಬ್ಬರೂ ಸಂಸಾರವೆಂಬ ಬಂಡಿಯನ್ನು ಎಳೆಯುವ ಜೋಡಿ ಎತ್ತುಗಳಂತೆ ಎಂದು ನಮ್ಮಲ್ಲಿ ಹೇಳುತ್ತಾರೆ, ಅಲ್ಲವೇ? 

ನಮ್ಮ ಪರಂಪರೆಯಲ್ಲಿಯೂ ಸಹ ಮುಖ್ಯ ದೇವತೆಗಳು 'ಸ್ತ್ರೀ' ದೇವತೆಗಳೇ. ಶಕ್ತಿಗೆ ಅದಿದೇವತೆ 'ಪಾರ್ವತಿ' ಧನಕ್ಕೆ ಅದಿದೇವತೆ 'ಲಕ್ಷ್ಮಿ' ಮತ್ತು ವಿದ್ಯೆಗೆ ಅದಿದೇವತೆ 'ಸರಸ್ವತಿ' . ನಮ್ಮ ದೇಶದಲ್ಲಿ ಹರಿಯುವ ಒಂದೇ ಒಂದು ನದಿಯನ್ನು ಹೊರತು ಎಲ್ಲಾ ನದಿಗಳೂ ' ಸ್ತ್ರೀ' ನದಿಗಳೇ. ಗಂಗಾ, ಕಾವೇರಿ, ಕೃಷ್ಣಾ, ನರ್ಮದಾ, ಅಲಕನಂದಾ, ಗೋದಾವರಿ, ತುಂಗಾ, ಭದ್ರಾ ಹೀಗೆ ಎಲ್ಲಾ ನದಿಗಳೂ 'ಸ್ತ್ರೀ'ಗಳೇ  ಒಬ್ಬ 'ಬ್ರಹ್ಮಪುತ್ರ'ನ ಹೊರತು. .'ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ದೇವತಾ:' ಎಂದು ಹೇಳಿದ್ದೇನು, ಸ್ತ್ರೀಯಲ್ಲಿ ದೇವತೆಗಳ ಕಂಡಿದ್ದೇನು, ಸ್ತ್ರೀಯನ್ನು ಹಾಡಿ ಹೊಗಳಿದ್ದೇನು. ಆದರೂ ಸ್ತ್ರೀಯರಿಗೆ ಇರಬೇಕಾದ ಸ್ಥಾನ ಮಾನವು ಇಂದಿನ ಸಮಾಜದಲ್ಲಿ ಇಲ್ಲವೆಂಬ ಕೂಗೂ ಸಹ ಗಟ್ಟಿಯಾಗಿ ಮತ್ತು ಸ್ಪಷ್ಟವಾಗಿ ಕೇಳಿಬರುತ್ತಿದೆ.   

ಇಂದಿನ ಸ್ತ್ರೀ ಬದಲಾಗಿದ್ದಾಳೆ. ಅವಳ ಸ್ವಭಾವ ಸ್ವತಂತ್ರವಾಗುತ್ತಿದೆ. ಅವಳ ಉಡುಗೆ ತೊಡುಗೆ ಬದಲಾಗುತ್ತಿದೆ. ಅವಳ ವಿದ್ಯಾಭ್ಯಾಸ ಉತ್ತಮವಾಗುತ್ತಿದೆ. ಅವಳ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಇಂದು ಸ್ತ್ರೀ ಸ್ವತಂತ್ರಳಾಗುತ್ತಿದ್ದಾಳೆ. ಇದು ಬಹುಶಃ ನಮ್ಮ ಸಮಾಜದ ಕೆಲವರ ಮಟ್ಟಿಗೆ ಅಥವಾ ಕೆಲ ಪ್ರದೇಶಗಳಿಗೆ ಸತ್ಯವೆನ್ನಬಹುದು. ಆದರೆ ಇನ್ನೂ 'ಪುರುಷ ಪ್ರಧಾನ ಸಮಾಜ' ದಲ್ಲಿ ಹೆಣ್ಣಿಗೆ ಸಿಗಬೇಕಾದ ಸ್ಥಾನ ಮಾನ ಮರ್ಯಾದೆಗಳ ಕೊರತೆ ಎದ್ದು ಕಾಣುತ್ತದೆ. ಇದು ಬಹುತೇಕೆ ಅವಿದ್ಯಾವಂತರ, ಕಡಿಮೆ ವಿದ್ಯಾವಂತರ ಮತ್ತು ವಿದ್ಯಾವಂಥರಾದರೂ 'ಸಂಸ್ಕಾರ ಹೀನ' ರಲ್ಲಿ ನಿಚ್ಚಳವಾಗಿ ಕಾಣುತ್ತದೆ.  

ಒಂದು ಕಾಲಕ್ಕೆ ಗಂಡಿನ ದರ್ಪಕ್ಕೆ, ದಬ್ಬಾಳಿಕೆಗೆ ಹೆದರಿ ಎಷ್ಟೇ ಕಷ್ಟ ಬಂದರೂ ಅ ಮನೆಗೆ ಮತ್ತು ಸಂಸಾರಕ್ಕೆ ಅಂಟಿಕೊಂಡಿರುತ್ತಿದ್ದ ಮಹಿಳೆ ಇಂದು ಧೈರ್ಯ ತಂದುಕೊಂಡು ಸ್ವತಂತ್ರವಾಗಿ ಯೋಚಿಸುವ, ತನ್ನ ದಿಶೆಯನ್ನು ತಾನೇ ರೂಪಿಸಿಕೊಳ್ಳುವ ಮತ್ತು ಬಹುತೇಕ ಸಂದರ್ಭಗಳಲ್ಲಿ ಗಂಡಿಗೆ ಮಾರ್ಗ ದರ್ಶನ ಮಾಡುತ್ತಾ , ಆ ಮೂಲಕ ತನ್ನ ಮನೆಯನ್ನು ಮತ್ತು ತನ್ನ ಸಂಸಾರವನ್ನು ಒಂದು ಸರಿಯಾದ ಮಾರ್ಗದಲ್ಲಿ ಕೊಂಡು ಹೋಗುವ ಕ್ಷಮತೆಯನ್ನು ಬೆಳೆಸಿಕೊಂಡಿದ್ದಾಳೆ. 

ಸ್ತ್ರೀ ಯೂ ಆ ಪರಮಾತ್ಮನ ಸೃಷ್ಟಿಯಲ್ಲಿ ಪುರುಷನಂತೆಯೇ ಸೃಷ್ಟಿಸಲ್ಪಟ್ಟಿರುವವಳು. ಅವಳಿಗೂ ಸ್ವತಂತ್ರವಾಗಿ ಬದುಕಲು ಪುರುಷನಿಗೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕಿದೆ.ಆದರೆ ಪುರುಷ ಪ್ರಧಾನವಾದ ಈ ಜಗತ್ತಿನಲ್ಲಿ ಅವಳಿಗೆ ಸಿಗಬೇಕಾದ ಸ್ಥಾನಮಾನ ಸಿಕ್ಕಿಲ್ಲವೆಂದರೆ ಅತಿಶಯೋಕ್ತಿ 
ಆಗಲಾರದು. ಇದಕ್ಕೆ ಗಂಡಿನ ಅಹಂಕಾರವೇ ಕಾರಣವೆಂದರೆ ತಪ್ಪಾಗಲಾರದು. ಮಗಳಾಗಿ, ಸಹೋದರಿಯಾಗಿ, ಪತ್ನಿಯಾಗಿ, ತಾಯಿಯಾಗಿ, ಸ್ನೇಹಿತೆಯಾಗಿ, ಸಹೋದ್ಯೋಗಿಯಾಗಿ ಗಂಡಿನ ಒಡನಾಟದಲ್ಲಿರುವ ಹೆಣ್ಣಿಗೆ ಹಲವಾರು ಸಂದರ್ಭಗಳಲ್ಲಿ ಗಂಡಿನ ಮತ್ತು ಅ ಗಂಡಿನ ಮೂಲಕ ಒಟ್ಟು ಸಮುದಾಯದ 'ರಕ್ಷಣೆ' ಬಹಳ ಅವಶ್ಯಕ.     

ಭಾರತೀಯ ಶಾಸ್ತ್ರಗ್ರಂಥಗಳಲ್ಲಿ "ಮನು ಧರ್ಮ ಶಾಸ್ತ್ರವು" ಪ್ರಮುಖವಾದದ್ದು. ಇದರಲ್ಲಿ ಒಂದು ಶ್ಲೋಕವಿದೆ. 


"ಪಿತಾ  ರಕ್ಷತಿ ಕೌಮಾರೇ 
ಭರ್ತಾ ರಕ್ಷತಿ ಯೌವನೆ 
ರಕ್ಷಂತಿ ಸ್ಥವಿರೆ ಪುತ್ರಾಃ
ನ ಸ್ತ್ರೀ ಸ್ವಾತಂತ್ರ್ಯಮರ್ಹಸಿ" ಎಂದು 

ಇಲ್ಲಿ ಮೊದಲ ಮೂರು ಸಾಲನ್ನು ನೋಡಿ. ಇಲ್ಲಿ ಯಾರು ಸ್ತ್ರೀಯನ್ನು ಯಾವ ಯಾವ ಸಂದರ್ಭದಲ್ಲಿ ರಕ್ಷಿಸುತ್ತಾರೆ ಎಂದು ಉಲ್ಲೇಖಮಾಡಲಾಗಿದೆ. ಇಲ್ಲಿ ದೈಹಿಕ ರಕ್ಷಣೆಗೆ ಮಾತ್ರ ಹೆಚ್ಚು ಪ್ರಾಮುಖ್ಯತೆಯನ್ನು ನಾವು ನೋಡಬೇಕು.  ಆದರೆ ನಮ್ಮವರು ಕೊನೆಯ "ನ ಸ್ತ್ರೀ ಸ್ವಾತಂತ್ರ್ಯಮರ್ಹಸಿ'  ಎಂಬ ಸಾಲಿಗೆ ಮಾತ್ರ ಹೆಚ್ಚು ಪ್ರಾಮುಖ್ಯತೆಯನ್ನು ಕೊಟ್ಟು " ಸ್ತ್ರೀ ಸ್ವಾತಂತ್ರಕ್ಕೆ ಅನರ್ಹಳು " ಎಂದು ಪ್ರತಿಪಾದಿಸುತ್ತಾ, ಸಮಾಜದ ಎಲ್ಲ ರಂಗಗಳಲ್ಲಿಯೂ ಅವಳನ್ನು ತುಳಿತಕ್ಕೆ ಒಳಪಡಿಸಿದ್ದಾರೆ. ಇದು ಪುರುಷ ಸಮಾಜದ ಘೋರ ಅಪರಾಧವಲ್ಲದೆ ಮತ್ತೇನು? ಕೇವಲ ದೈಹಿಕ ರಕ್ಷಣೆಯೇ ಮುಖ್ಯವಲ್ಲದೆ ಸ್ತ್ರೀಯನ್ನು ಮತ್ತೆ ಯಾವ ಯಾವ ಪ್ರಸಂಗಗಳಲ್ಲಿ ರಕ್ಷಿಸಬೇಕು ಮತ್ತು ಹಾಗೆ ರಕ್ಷಿಸುವುದರಿಂದ ಒಂದು  ಕುಟುಂಬಕ್ಕೆ ಅಥವಾ ಒಂದು ಸಮಾಜಕ್ಕೆ ಯಾವ ರೀತಿ ಒಳಿತಾಗುತ್ತದೆ ಎಂದು ಮೇಲೆ ಉಲ್ಲೇಖಿಸಿದ 'ಮನು ಧರ್ಮ ಶಾಸ್ತ್ರ' ದಲ್ಲೇ ಹೇಳಲ್ಪಟ್ಟಿದೆ. 

ಸೂಕ್ಷ್ಮ್ಯೇಭ್ಯೋಪಿ ಪ್ರಸಂಗೇಭ್ಯಃ  
ಸ್ತ್ರಿಯೋರರ್ಕ್ಷ್ಯಾ ವಿಶೇಷತಃ  
ದ್ವಯೋರ್ಹಿ ಕುಲಯೋ:
ಶೋಕಮಾವಹೇಯು:ಅರಕ್ಷಿತಾಃ

ಸೂಕ್ಷ್ಟರ ಪ್ರಸಂಗಗಳಲ್ಲಿ ಎಂದರೆ ಗಲಭೆ,ದೊಂಬಿ ಯುದ್ಧದಂತಹ ಪ್ರಸಂಗಗಳಲ್ಲಿ ಮತ್ತು ದುಷ್ಟ ಜನರಿಂದ ಸ್ತ್ರೀಯರನ್ನು ವಿಶೇಷವಾಗಿ ರಕ್ಷಿಸಬೇಕು. ಹಾಗೆ ರಕ್ಷಣೆ ಮಾಡದಿದ್ದ ಪ್ರಸಂಗದಲ್ಲಿ " ದ್ವಯೋರ್ಹಿ ಕುಲಯೋ:ಶೋಕಮಾವಹೇಯು:" ರಕ್ಷಣೆ ಮಾಡಬೇಕಾದವರು ಮತ್ತು ರಕ್ಷಿಸಲ್ಪಡಬೇಕಾದವರು, ಎರಡೂ ಕುಲದವರು ದುಃಖಪಡಬೇಕಾದ ಸ್ಥಿತಿ ಒದಗುತ್ತದೆ ಎಂದು ಹೇಳುತ್ತಾ ಸ್ತ್ರೀ ರಕ್ಷಣೆಗೆ ಒತ್ತು ನೀಡಿದ್ದಾನೆ ಮನು. ಆದರೆ ನಮ್ಮ ಸಮಾಜದಲ್ಲಿ ಇದು ನಡೆಯುತ್ತಿದೆಯೇ. ಎಲ್ಲ ರೀತಿಯಲ್ಲಿಯೂ ರಕ್ಷಿಸಲ್ಪಡಬೇಕಾದ ಸ್ತ್ರೀಯನ್ನು ರಕ್ಷಿಸದೇ, " ನ ಸ್ತ್ರೀ ಸ್ವಾತಂತ್ರ್ಯಮರ್ಹಸಿ" ಎಂದು ಕೇವಲ ಅವಳನ್ನು ತುಳಿಯಲಿಕ್ಕಾಗಿಯೇ ತಮಗನುಕೂಲವಾಗುವಂತೆ ಶಾಸ್ತ್ರವನ್ನು ತಿರುಚಿದರೆ ಇದು ಪುರುಷ ಸಮಾಜದ 'ದುಷ್ಟ'ತನವಲ್ಲದೆ ಮತ್ತೇನು. 

ಭಾರ್ಯಾ ಎಂದರೆ ಸಹಧರ್ಮಿಣಿ ಎಂದು ಅರ್ಥ. 'ಬಿಭ್ರತಿ ಇತಿ ಭಾರ್ಯಾ', ಎಂದರೆ  ಎಲ್ಲವನ್ನೂ ಭರಿಸುತ್ತಾಳಾದ್ದರಿಂದ ಭಾರ್ಯಾ. ಇವಳು ಎಲ್ಲವನ್ನೂ ಭರಿಸಬೇಕು. ಆದರೆ ಅವಳನ್ನು ರಕ್ಷಿಸಲು, ಭರಿಸಲು ಪುರುಷನಿಗೆ ಸಾಧ್ಯವಿಲ್ಲ. ತನ್ನ ಮನೆ, ಮಕ್ಕಳು ಎಲ್ಲವನ್ನೂ ಭರಿಸುವ ಮತ್ತು ರಕ್ಷಿಸುವ ಅವಳನ್ನು ಏಕೆ ಮತ್ತು ಹೇಗೆ ರಕ್ಷಿಸಬೇಕು ಎಂದು ಮನು ಹೀಗೆ ಹೇಳುತ್ತಾನೆ

ಭಾರ್ಯಾಯಾಂ ರಕ್ಷ್ಯಮಾಣಾಯಾಂ
ಪ್ರಜಾ ಭವತಿ ರಕ್ಷಿತಾಃ 
ಪ್ರಜಾಯಾಂ ರಕ್ಷ್ಯಮಾಣಾಯಾಂ 
ಆತ್ಮಾ ಭವತಿ ರಕ್ಷಿತಃ 

ಭಾರ್ಯೆ, ಎಂದರೆ ಸಹಧರ್ಮಿಣಿಯನ್ನು ರಕ್ಷಿಸಿದರೆ, ಅವಳಿಂದ ಪಡೆದ ಮಕ್ಕಳು ರಕ್ಷಿಸಲ್ಪಡುತ್ತಾರೆ ಮತ್ತು ಮಕ್ಕಳು ರಕ್ಷಿಸಲ್ಪಟ್ಟರೆ ತಾನೂ ಎಂದರೆ ಪುರುಷನೂ ರಕ್ಷಿಸಲ್ಪಡುತ್ತಾನೆ ಎಂದು ಅರ್ಥ. ಒಂದು ಸಂಸಾರದಲ್ಲಿ ತಾಯಿ ಅರಕ್ಷಿತಳಾದರೆ, ಇದೇ ಸಂಸಾರ ಛಿದ್ರ ಛಿದ್ರವಾಗಿರುವುದನ್ನು ನಾವು ನೋಡಿಲ್ಲವೇ? ಅಷ್ಟೇ ಅಲ್ಲ ಗಂಡ ತನ್ನ ಹೆಂಡತಿಯನ್ನು ರಕ್ಷಿಸದೇ ಇದ್ದಾಗ ಸ್ತ್ರೀ ತನ್ನ ಸ್ವ-ಶಕ್ತಿಯಿಂದ ತನ್ನ  ರಕ್ಷಣೆಯನ್ನು ಮಾಡಿಕೊಂಡು, ಮಕ್ಕಳನ್ನು ರಕ್ಷಿಸಿ,  ಪೋಷಿಸಿ, ಬೆಳೆಸಿ ಯೋಗ್ಯರನ್ನಾಗಿಸಿದ ಉದಾಹರಣೆಗಳು ನಮಗೆ ಹೇರಳವಾಗಿ ಸಿಗುತ್ತದೆ. ಆದರೆ "ಭರ್ತ" ಎಂದು ಕರೆಸಿಕೊಂಡರೂ,  ಸ್ತ್ರೀ ಸಕ್ರಿಯವಾಗದಿದ್ದಾಗ ಕುಟುಂಬದ ಅಥವಾ ಸಂಸಾರದ ಭಾರವನ್ನು ಹೊತ್ತು ಕುಟುಂಬ ಮತ್ತು ಮಕ್ಕಳನ್ನು ಯೋಗ್ಯರನ್ನಾಗಿಸಿ ಸಫಲತೆಯನ್ನು ಪಡೆದ ಪುರುಷರ ಉದಾಹರಣೆಗಳು ಸಿಗುವುದೇ ಇಲ್ಲ. 

ಸ್ತ್ರೀಯನ್ನು ರಕ್ಷಿಸಿದರೆ ಆಗುವ ಪ್ರಯೋಜನಗಳನ್ನು ಮುಂದುವರೆಸುತ್ತಾ ಮನು ಹೀಗೆ ಹೇಳುತ್ತಾನೆ

"ಸ್ವಾಂ ಪ್ರಸೂತಿಂ ಚರಿತ್ರಂ 
 ಚ ಕುಲಂ ಆತ್ಮಾನಮೇವ ಚ 
 ಸ್ವಂ ಚ ಧರ್ಮಂ  ಪ್ರಯತ್ನೇನ 
 ಜಾಯಾಂ ರಕ್ಷನ್ ಹಿ ರಕ್ಷತಿ" 

ಎಂದು ಹೇಳುತ್ತಾ, ಸ್ತ್ರೀ ರಕ್ಷಣೆಯಿಂದ ಅವಳ ಮಕ್ಕಳನ್ನು, ಮಕ್ಕಳ, ಮನೆಯ, ತನ್ನ ಚರಿತ್ರೆಯೂ ರಕ್ಷಿತವಾಗುತ್ತದೆ. 'ಜಾಯಾ' ಅಂದ್ರೆ ಹೆಂಡತಿಯ ರಕ್ಷಣೆಯಿಂದ ಅವನ ಧರ್ಮವನ್ನು ಮತ್ತು ಸಂಸ್ಕಾರಗಳನ್ನು ರಕ್ಷಿಸಿಕೊಂಡಂತೆ ಆಗುತ್ತದೆ ಎನ್ನುತದೆ ಈ ಶ್ಲೋಕ. ನೋಡಿ ನಮ್ಮ ಭಾರತೀಯ ಸಂಸ್ಕಾರಗಳಲ್ಲಿ ಸ್ತ್ರೀ ಇಲ್ಲದೆ  ಯಾವ ಶುಭ ಕಾರ್ಯ ಮಾಡಲು ಪುರುಷನಿಗೆ ಶಾಸ್ತ್ರ ಪ್ರಕಾರ ಹಕ್ಕೂ ಇಲ್ಲ ಅರ್ಹತೆಯೂ ಇಲ್ಲ. ಹಾಗೆ ಇವನಿಗೆ ಪುಣ್ಯ ತರುವ ಕೆಲಸಗಳಿಗೆ "ಅವಳು" ಬೇಕು. ಆದರೆ ಇವನು ಮಾಡುವ ಪಾಪ ಕರ್ಮಗಳಿಗೆ ಇವಳು ಗುರಿಯಾಗಬೇಕು. ಇದು ಅನ್ಯಾಯವಲ್ಲದೆ ಮತ್ತೇನು? 


ಶಾಸ್ತ್ರ ಅವಳಿಗೆ ಎಷ್ಟು ಪ್ರಾಮುಖ್ಯತೆ ನೀಡಿದೆ ಮತ್ತು ಅವಳಿಗೆ ಎಷ್ಟೊಂದು ಜವಾಬ್ದಾರಿಯನ್ನು ನೀಡಿದೆ ಎಂದು ಅದೇ ಮನುಧರ್ಮ ಶಾಸ್ತ್ರ ಹೇಳುತ್ತದೆ.

'ಅರ್ಥಸ್ಯ ಸಂಗ್ರಹೆ ಚೈನಾಮ್
ವ್ಯೆಯೇಚೈವಂ ನಿಯೋಜಯೇತ್ 
ಶೌಚೆ ಧರ್ಮೇ ಅನ್ನಪಕ್ತ್ಯಾಂ ಚ 
ಪಾರಿಣಾಹ್ಯಸ್ಯ ವೇಕ್ಷಣೆ ". 

ನೋಡಿ ಹಣವನ್ನು ಸಂಪಾದಿಸುವುದಷ್ಟೇ ಪುರುಷನ ಕೆಲಸ ಎಂದು ಸ್ಪಷ್ಟವಾಗಿ ಹೇಳುವ ಈ ಶ್ಲೋಕ, ಆ ಹಣವನ್ನು ಸಂಗ್ರಹ ಮಾಡಿಕೊಳ್ಳುವುದು, ವ್ಯಯ ಮಾಡುವುದು ಮತ್ತು ಗೃಹದ ಶುದ್ಧಿಯ, ಅನ್ನ ವಿತರಣೆಯ ಮತ್ತು ಸಮಾರಂಭಗಳ ಮೇಲ್ವಿಚಾರಣೆಯನ್ನೂ ಸಹ ಸ್ತ್ರೀಯರಿಗೆ ಒಪ್ಪಿಸಿದೆ ಶಾಸ್ತ್ರ. 

ಹೀಗಿರುವಾಗ ಸ್ತ್ರೀ ಪುರುಷನಿಗಿಂತ ಯಾವ ರಂಗದಲ್ಲೂ ಕೀಳಲ್ಲ ಎಂದು ಶಾಸ್ತ್ರವೇ ಒಪ್ಪಿಕೊಂಡಿದೆ. ಆದರೆ ಮನುವಿನ ಇಷ್ಟು ಶ್ಲೋಕಗಳಲ್ಲಿ ಮಿಕ್ಕದ್ದನ್ನೆಲ್ಲಾ ಬಿಟ್ಟು, 'ನ ಸ್ತ್ರೀ ಸ್ವಾತಂತ್ರ್ಯಮರ್ಹಸಿ'  ಎಂಬ ಒಂದನ್ನು ಹಿಡಿದುಕೊಂಡು, "ನೋಡಿ ಈ ಮನು ಒಬ್ಬ ಸ್ತ್ರೀ ವಿರೋಧಿ. ಅವನೇ ಹೀಗೆ ಹೇಳಿದ್ದಾನೆ, ಅವನು ಲಫಂಗ ಅವನನ್ನು ವಿರೋಧಿಸುವುದೇ ನಮ್ಮ ಮೂಲಭೂತ ಧ್ಯೇಯ" ವೆಂಬಂತೆ ವರ್ತಿಸುವ  ಸ್ತ್ರೀ ಪರ ಸಂಘಗಳು ತಪ್ಪು ಮಾಡುತ್ತಾ "ಸ್ತ್ರೀಪರ" ಎಂದು ತಮ್ಮನ್ನು   ತಾವು ಕರೆದುಕೊಂಡರೂ ಸ್ತ್ರೀ ವಿರೋಧಿ ಕೆಲಸಗಳನ್ನು ಮಾಡುತ್ತಿವೆ ಎಂದು ಅನ್ನಿಸುತ್ತದೆ. 

ಸ್ತ್ರೀಯರ ಮೇಲೆ ಆಗುತ್ತಿರುವ ಅತ್ಯಾಚಾರಗಳಿಗೆ ಮೂಲತಃ ' ಗಂಡು ಹೆಣ್ಣನ್ನು  ಭೋಗ ವಸ್ತು' ಎಂದು ತಿಳಿದಿರುವ  ಪುರುಷಾಹಂಕಾರವೇ ಕಾರಣ.ಇಂದಿನ ಸಮಾಜದಲ್ಲಿ ಸ್ತ್ರೀಯರೂ ಸಹ ತಮ್ಮ ಉಡುಗೆ ತೊಡುಗೆಗಳಿಂದ ಅಂತಹ ಭಾವನೆಗೆ ಪ್ರೋತ್ಸಾಹವನ್ನೇ ನೀಡುತ್ತಾರೆ. ಇದು ಎಲ್ಲೆಡೆಯಲ್ಲೂ ನಿಚ್ಚಳವಾಗಿ ಕಾಣುತ್ತಿದೆ. ಏಕೆ ಒಂದು ಸಿನಿಮಾವನ್ನೇ ನೋಡಿ. ಅದರಲ್ಲಿ ಗಂಡಿಗೆ ಮೈತುಂಬ ಬಟ್ಟೆ ಮತ್ತು ಹೆಣ್ಣಿಗೆ ಸಾಧ್ಯವಾದಷ್ಟು ಕಡಿಮೆ.  

"ದ್ರುಷ್ಯಮಾಣೇ ಭವೇತ್ ಪ್ರೀತಿಃ " ಎಂದರೆ 'ಕಂಡರೆ ಪಡೆಯಬೇಕೆನ್ನುವ ಆಸೆ '.ಗಂಡಸರಿಗೆ ಮೊದಲೇ ಪುರುಷಾಹಂಕಾರ,  ಅದರ ಮೇಲೆ ಸಂಯಮ  ಕಡಿಮೆ. ಅದಕ್ಕೆ ಇಂಬುಕೊಡುವಂತೆ ಸ್ತ್ರೀಯರ ಉಡುಗೆ ತೊಡುಗೆಗಳೂ ಸಹ ಪ್ರಚೋದಕವಾಗಿರುತ್ತವೆ. ಹತ್ತು ಹಲವಾರು ಕಾರಣಗಳಲ್ಲಿ ಇದೂ ಸಹ ಒಂದು . ಇನ್ನು ನಮ್ಮ ಜಾಹೀರಾತುಗಳು, ಕೇವಲ ಬಾಹ್ಯ ಸೌಂದರ್ಯಕ್ಕಷ್ಟೇ ಗಮನ. ಈ ಎಲ್ಲ ನಿಟ್ಟಿನಲ್ಲೂ ಹೆಣ್ಣು ಯೋಚನೆ ಮಾಡಿದರೆ ಸ್ವಲ್ಪಮಟ್ಟಿಗೆ ಪರಿಸ್ಥಿತಿ ಸುಧಾರಿಸಬಹುದು.   


ಮೂಲತಃ ಸ್ತ್ರೀ ತಡೆದುಕೊಳ್ಳುತ್ತಾಳೆ. ಅವಳಿಗೆ ತಾಳ್ಮೆ ಹೆಚ್ಚು. ಅವಳು ಬಹಳ ಸೂಕ್ತವಾಗಿ  ಯೋಚಿಸುತ್ತಾಳೆ . ಏಕೆಂದರೆ ಅವಳು ತನ್ನ ಸಂಸಾರದ ಜವಾಬ್ದಾರಿಯನ್ನು ಸ್ವ-ಇಚ್ಚೆಯಿಂದ ಹೊರುತ್ತಾಳೆ. ಸಂಸಾರದಲ್ಲಿ  ಗಂಡು ಸೋತರೆ ಆ ಸಂಸಾರವನ್ನು ಹೇಗಾದರೂ ನಿಭಾಯಿಸಿಸುವ ಕ್ಷಮತೆ, ಧೈರ್ಯ ಮತ್ತು ಛಲ ಹೆಣ್ಣಿಗೆ ಇರುತ್ತದೆ. ಆದರೆ ಒಂದು ಹೆಣ್ಣು ಸೋತರೆ ಆ ಸಂಸಾರವನ್ನು ಅಷ್ಟು ಸಮರ್ಪಕವಾಗಿ ಗಂಡು ನಿಭಾಯಿಸಲಾರ. ಅಂತಹ ಸಂಸಾರವನ್ನು ಆ ದೇವರೇ ಕಾಪಾಡಬೇಕು. 

ಸ್ತ್ರೀ ಎಲ್ಲ ರೀತಿಯಲ್ಲೂ ಅಬಲೆಯಲ್ಲ. ಪುರುಷ ಸಮಾಜದ ದುಷ್ಟತನಕ್ಕೆ ಬಲಿಯಾದ ಸ್ತ್ರೀ ಈಗ ಸಕ್ರಿಯವಾಗಿ ಎಚ್ಚೆತ್ತುಕೊಂಡಿದ್ದಾಳೆ. ತನ್ನನ್ನು ತಾನು ನೋಡಿಕೊಳ್ಳುವಷ್ಟು ರಕ್ಷಿಸಿಕೊಳ್ಳುವಷ್ಟು ಬಲವನ್ನು ಸ್ತ್ರೀ ಪಡೆದಿದ್ದಾಳೆ. ಸ್ತ್ರೀ ಪುರುಷರಿಬ್ಬರೂ ಸಮಾಜದಲ್ಲಿ ಸಮಾನವಾಗಿ, ಯಾರೊಬ್ಬರೂ ತಾವು ಮೇಲು ಎನ್ನುವ ಭಾವ ಬಿಟ್ಟು ಸಮನ್ವಯದಿಂದ ಬಾಳಿದರೆ ಸಮಾಜದಲ್ಲಿ ಗೊಂದಲಗಳು ಕಡಿಮೆಯಾಗಿ ಶಾಂತಿ ಬರಬಹುದು. 

"ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ದೇವತಾಃ " ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತೋಷಪಡುತ್ತಾರೆ  ಎಂದು ಹೇಳಿದ ಭಾರತೀಯ ಸಂಸ್ಕೃತಿಯಲ್ಲಿ, ನಾರಿಯರ ಮೇಲೆ ಇಷ್ಟೊಂದು ಅತ್ಯಾಚಾರದ ಸಮಾಚಾರಗಳು ನಾವು ಕೇಳಿಬರುವುದು ಒಂದು ವಿಪರ್ಯಾಸವಲ್ಲವೇ? ನಾರಿಯರನ್ನು ಪೂಜಿಸದಿದ್ದರೂ " ಗಂಡು - ಹೆಣ್ಣು" ಸಹಭಾಗಿತ್ವದ ಜೀವನದಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಮತ್ತು ಗೌರವವಿದ್ದರೆ ಸಾಕಲ್ಲವೇ?   


ರವಿ ತಿರುಮಲೈ 
19.5.2013

No comments:

Post a Comment