Monday, 24 March 2014

ಹರಸಿರೆನ್ನನು

ನನ್ನ ಹುಟ್ಟುಹಬ್ಬದಂದು ನನ್ನ ಮಿತ್ರರಲ್ಲಿ 'ಹರಸಿ' ರೆಂದು ಬೇಡಿದ ಪರಿ ಹೀಗಿತ್ತು 


=============================
ಹರಸಿರೆನ್ನನು 
=============================


ಹರಸಿರೆನ್ನನು ಇಂದು 

ನೂರ್ಕಾಲ ಬಾಳೆಂದು

ಆ ನಿಮ್ಮ ಹರಕೆಯೆಲ್ಲವು

ಸಫಲವಾಗಲೆಂದು. ಸವೆಸಿ ಬಂದಿಹೆ ನಾನು 

೫೯  ವಸಂತಗಳನು 

ಶೇಷವೆಷ್ಟೋ ನಾ ಅರಿಯೆ 

ಕ್ಲೇಶವೆಷ್ಟೋ ಅದ ಸವೆಯೆ ಕಷ್ಟಸುಖಗಳ ಮಿಶ್ರಣದಿಂ ಕಳೆದೆ 

ಅನುಭವದ ಸಾರದಿಂ ನಾ ಬೆಳೆದೆ 

ಏರು ತಗ್ಗುಗಳ ನಾ ದಾಟಿ ಬಂದೆ 

ಸೋಲುಗೆಲುವುಗಳ ನಾ ಮೆಟ್ಟಿನಿಂದೆ ಪ್ರೀತಿ ಪ್ರೇಮಗಳನೆಷ್ಟು ಸವಿದೆನೋ 

ದ್ವೇಷಾಸೂಯೆಗಳನೆಷ್ಟು ಸಹಿಸಿದೆನೋ 

ಗತವೆನೆಲ್ಲವ ಮರೆತು ಬಾಳಬೇಕೆಂದಿಹೆನು 

ಇಂದೇ ನಿಜ ಇದುವೇ ಸುಖ ಎಂದು ನಂಬಿಹೆನು ನಿಮ್ಮೊಲವು ಪ್ರೀತಿಯೇ ಜೀವಸತ್ವವು ಎನಗೆ 

ನಿಮ್ಮಂತರಂಗದಲಿ ತಾವು ಕೊಡಿರೆನಗೆ

ಮಾಸದಿರಲಿ ನೆನಪೆನ್ನ ನಿಮ್ಮ ನೆನಪಿನೊಳಗೆ 

ನಾ ನಿಮ್ಮ ದಾಸ ಎನ್ನ ಕೊನೆಯುಸಿರಿನವರೆಗೆ   


ರವಿ ತಿರುಮಲೈ 
೨೧.03.೨೦೧೪

ದುರಿತಗಳಾ ಹರಿಸೋ


ದುರಿತಗಳಾ ಹರಿಸೋ ಶ್ರೀ ಹರಿ 
ಅರಿಯದಾಗಿಹೆ ದಾರಿ ನಾ \ ದುರಿತ\

ಆವ ಕರ್ಮದಿ ಆವ ಪಾಪವೋ
ಆವ ಕರ್ಮದಿ ಆವ ಪುಣ್ಯವೋ
ಪರಿಯನರಿಯದೆ ಪರಿತಪಿಸಿಹೆ
ದಾರಿತೊರೋ ಅರಿಗಳರಿಯೇ \ ದುರಿತ\

ಸುರರಿಗಮೃತವ ಸುರಿದು ಪೊರೆಯುತ
ನರೆಯನೆರೆದಿಹೆ ನರರಿಗೇತಕೋ
ಚರದಿ ಮೆರೆಸುವ ಹರಿವನಿರಿಸಿದೆ
ಸ್ಥಿರವ ಮರೆಸುವ ಪರಿಯಿದೇತಕೋ \ದುರಿತ\

ಮೂರು ಜನುಮದಿ ದ್ವಾರಪಾಲರ
ವೈರಿಯಂದದಿ ಹರಿದೆ ಶಾಪವ
ಶಿರದಿಯಿರಿಸುತ ಚರಣಕಮಲವ
ಪೊರೆದೆ ಬಲಿಯನು ವರವ ಕರುಣಿಸಿ \ದುರಿತ\

ಅರಳಿ ನಿಲ್ಲೋ ಹರಿಯೆ ಹೃದಯದಿ
ಅರಿವನಿರಿಸೋ ಗರುವ ಮುರಿಯುತ 

ಮರಳಿ ಜನನವು ಬಾರದಿರುವಾ

ಪರಮಪದವನು ತೋರಿ ಹರಸೋ \ ದುರಿತ\
 


ಸಾಗರದ ಶ್ರೀ ನಂಜುಂಡ ಭಟ್ಟರ ಕೃಪೆಯಿಂದ 
ರವಿ ತಿರುಮಲೈ