Sunday 4 September 2016

ಕಣ್ಣ ಹನಿಗಳು



ಜಾರಿ ಬೀಳುವ ಕಣ್ಣ ಹನಿಗಳ ತಡೆದು
'ನಿಲ್ಲಿ ನೀವೇಕೆ ಬಂದಿರೆಂದು' ಕೇಳಲು
' ಮೂರ್ಖ ನಮಗೆ ಜನ್ಮವಿತ್ತ ನಿನ್ನ
ದುಃಖವನ್ನು ಕೇಳು ' ಎಂದಿತು.

' ದುಃಖವೇ ನೀನೇಕೆ ಬಂದೆ'
ಎಂದದನು ಕೇಳಲು, ' ನಿನ್ನ ಬೇಸರವೇ
ನನಗೆ ತಾಯಿ, ನೀನದಕೇಳು ' ಎನ್ನಲು
ನಾ ಮುಂದುವರೆದು

'ಹೇ ಬೇಸರವೇ, ನೀನೇಕೆ ಆದೆ '
ಎಂದು ಕೇಳಲು ' ನಿನ್ನ ನಿರಾಸೆಯೇ
ನನ್ನಸ್ಥಿತ್ವಕ್ಕೆ ಕಾರಣವಲ್ಲವೇ?' ಎಂದಿತು

ಕೈಗೂಡದ ಆಸೆಯನ್ನು' ಆಸೆ ನಿರಾಸೆಯಾದದ್ದು'
ಹೇಗೆ ಎಂದು ವಿಚಾರಿಸೆ, 'ತೃಪ್ತಿಯಿಲ್ಲದ ನಿನಗೆ '
ಬೇರೆ ಫಲವಿಲ್ಲವಲ್ಲ, ಎಂದಿತು. ಮನವ
ತೃಪ್ತನಾಗಿಸಲು ಒಳಹೊಕ್ಕೆ,

ಸಿಕ್ಕುಸಿಕ್ಕಾದ, ಗೋಜಲುಗೋಜಲಾದ
 ಮನದ ಪದರಗಳಲ್ಲಿ ನಾನೂ ಸಿಕ್ಕಿಕೊಂಡು
ತೊಳಲಾಡುತ್ತಿದ್ದೇನೆ ಪರದಾಡುತ್ತಿದ್ದೇನೆ.
ಮುಕ್ತಿ ಎಂದೋ ಆ ದೇವರೇ ಬಲ್ಲ.

ರವಿ ತಿರುಮಲೈ