Wednesday, 23 January 2013

ವರ್ಣಾಶ್ರಮ -ಶೂದ್ರ
ಹೌದು ನಾ ಶೂದ್ರ ಹೌದು 
ಶುದ್ಧ ಶೂದ್ರ ಹೌದು. 
ನಿಮಗೆ ಬೇಸರವಾದರೂ  
ನನಗಿಲ್ಲ ಚಿಂತೆ ಕಿಂಚಿತ್ತಾದರೂ 

ನಾ ಓದುವ ದಿನಗಳಲ್ಲಿ 
ಜ್ಞಾನದ ಓಣಿಗಳಲ್ಲಿ 
ಓಡುವಾಗ ನಾ, ಓಲಾಡುವಾಗ  
ಬ್ರಾಹ್ಮಣನಾಗಿದ್ದೆ. 

ಮುಂದೆ ಮನೆ ಮಡದಿ 
ಎಂದು ಸಂಸಾರ ಕಟ್ಟಿಕೊಂಡಾಗ 
ನಮಗೆ ಮಕ್ಕಳು ಹುಟ್ಟಿಕೊಂಡಾಗ 
ಹೊಟ್ಟೆಪಾಡಿಗೆ ಧನಾರ್ಜನೆ ಮಾಡುವಾಗ,
ನಾ ವೈಶ್ಯನೂ ಆಗಿದ್ದ ದಿನಗಳು ಇತ್ತಾಗ.

ಪಾಪ ಇವರಿಗೆ ನಾನೇ ಗತಿಯಂದು 
ಇವರೆಲ್ಲ ನೀ ಕಾಯಬೇಕೆಂದಾಗ 
ಕೈಯ್ಯಲ್ಲಿ ಕತ್ತಿ ಹಿಡಿಯದಿದ್ದರೂ, ನನ್ನವರ 
ಕ್ಷಾತ್ರ ತೇಜಸ್ಸಿನಿಂದ ಕಾಯುತ್ತಿದ್ದೆ 
ಕ್ಷತ್ರಿಯವತಾರ ಹೊತ್ತಿದ್ದೆ.

ಹೌದು ಈಗ ಶೂದ್ರ ನಾನು 
ಚರಂಡಿ ತೊಳೆಯುವ ಶೂದ್ರ ನಾನು 
ಮನಸ್ಸಿನ ಓಣಿಗಳಲ್ಲಿನ ಗಲ್ಲಿಗಲ್ಲಿಯ 
ಕೊಳೆ ತೊಳೆಯುವ ಶೂದ್ರ ನಾನು 

ಬದುಕ ಓಟದಲ್ಲಿ ನಾ ಸುತ್ತಿದ 
ಬೀದಿಗಳ ಧೂಳಿಂದ ಗಲೀಜಾದ ಮನವ 
ತೊಳೆಯುವ ಶೂದ್ರ ನಾನು 
ಆರು ಅರಿಗಳ ಸಂಗದಲ್ಲಂಟಿಸಿಕೊಂಡ 
ಪರಿಪರಿಯಾದ ಹೊಲಸ ತೊಳೆಯುವ ಶೂದ್ರ ನಾನು.  

ಬುದ್ಧಿಗಂಟಿದ ಹೊಲಸನ್ನು ತೊಳೆಯುವ 
ಶುದ್ಧ ಶೂದ್ರ ನಾನು, ಹಿತವಾಗಿಸುವ 
ಕಾರ್ಯಮಾಡುವ ಶೂದ್ರ ನಾನು 
ಆತ್ಮ ಶುದ್ಧಿಮಾಡುವ ಶೂದ್ರ ನಾನು 

ನಾಲ್ಕೂ ವರ್ಣಗಳಲ್ಲಿ ತೂರಿಬಂದ 
ನನಗೆ ಬಹಳ ಹೆಮ್ಮೆ, ನಾ ಶೂದ್ರನೆಂದು
ಹೊಲಸ ತೊಳೆಯುವ ಶ್ರೇಷ್ಟನೆಂದು 
ಆತ್ಮೋದ್ಧಾರಕ್ಕೆ ದಾರಿ ಮಾಡುವವನೆಂದು.  


ರವಿ ತಿರುಮಲೈ 
  

5 comments:

 1. ನಾವೆಲ್ಲಾ ಕೊಳಕ ತೊಳೆವ ಶೂದ್ರರಾದರೆ ಜನ್ಮ ಸಾರ್ಥವಾದೀತು...ರವಿಯಣ್ಣ ಬಹಳ ಸಕಾಲಿಕ ಆಶಾಭಾವ ಅನಾವರಣ..ಬಹಳ ಇಷ್ಟವಾಯ್ತು.
  ನಾಲ್ಕೂ ವರ್ಣಗಳನ್ನು ಭರಿಸುವ ಶಕ್ತಿ ಎಲ್ಲರಲ್ಲೂ ಬಂದರೆ ಅದಂತೂ ಸೋನೆ ಪೆ ಸುಹಾಗಾ... ಸುಂದರ ಚಿತ್ರಣ.

  ReplyDelete
 2. ಉತ್ತಮ ವಿಚಾರಧಾರೆ. ಪರಿಣಾಮಕಾರಿ ನಿರೂಪಣೆ. ತುಂಬಾ ಚೆನ್ನಾಗಿದೆ ಅಣ್ಣ.

  ReplyDelete
 3. ತುಂಬಾ ಚೆನ್ನಾಗಿದೆ.ಈ ದಿನಗಳಲ್ಲಿ ಮನುಷ್ಯನೊಬ್ಬ ಎಲ್ಲ ವರ್ಣದವನೂ ಆಗಿರುತ್ತಾನೆ ಅಂತ ಬನ್ನಂಜೆಯವರ ಪ್ರವಚನದಲ್ಲಿ ಕೇಳಿದ ನೆನಪಾಯಿತು. ವಂದನೆಗಳು

  ReplyDelete
 4. ಗುರುಗಳೇ , ವರ್ಣಾಶ್ರಮ ದ ನಿಜ ಅರ್ಥವನ್ನು ಕಲಿಯುಗಕ್ಕೆ ಅರ್ಥೈಸಿದಂತಿದೆ. ನಿಜಕ್ಕೂ ನಾವು ಎಲ್ಲಾ ವರ್ಣದಲ್ಲಿ ಮಿಂದು ಬಂದಾಗ ಮಾತ್ರ ಮಾನವತೆ ಯನ್ನು ಎತ್ತಿ ಹಿಡಿಯಬಹುದು . ಧನ್ಯವಾದಗಳು ಗುರುಗಳೇ..............

  ReplyDelete
 5. "ಜಾತಿ" ಎಂಬ ಕೊಳೆಯನ್ನೇ ಮೆತ್ತಿಕೊಂಡು ನಾವು ಬದುಕಿರುವಷ್ಟು ದಿನ "ಶೂದ್ರ"ರಾಗಿಯೇ ಇರುತ್ತೇವೆ. ಆ 'ಜಾತಿ'ಯ ಹೊಲಸು ವ್ಯಾಪಾರದಿಂದಲೇ 'ಲಾಭ' ಮಾಡಿಕೊಳ್ಳಬಹುದೆನ್ನುವ ನೀಚ 'ವೈಶ್ಯ' ಬುದ್ಧಿ ನಮಗೇಕೆ ಬಂತೋ ನಾನರಿಯೆ. ಈಗ ಅವಶ್ಯಕತೆಯಿರುವುದು ಆ 'ಜಾತಿ'ಯೆನ್ನುವ ಶತ್ರುವನ್ನು ಹೊಡೆದೋಡಿಸುವ "ಕ್ಷತ್ರಿಯ" ಮನಸ್ಸು. ನಮಗಿದೆಯೇ? ಈ ಆಶಯವನ್ನು ಬೆಳೆಸಿಕೊಂಡು "ಬ್ರಹ್ಮತ್ವ" ಪಡೆಯೋಣವೇ, ಸಾಧ್ಯವಾದಷ್ಟು ಮಟ್ಟಿಗೆ "ಬ್ರಾಹ್ಮಣ"ರಾಗೋಣ ಬನ್ನಿ ಎಲ್ಲಾ ತೊಳೆದು, ಎಲ್ಲ ಮಾರಿ, ಎಲ್ಲೆ ಮೀರಿ!

  ReplyDelete