Monday 13 November 2017

ಜೀವನದ ಕಲೆ


ಈ ಜಗತ್ತಿನಲ್ಲಿ ನಾವು ಹುಟ್ಟಿದಮೇಲೆ ಬದುಕಲೇ ಬೇಕು. ಅನ್ಯ ದಾರಿಯೇ ಇಲ್ಲ. ಆದರೆ ಆ ಬದುಕು ಸುಂದರವಾಗಿರಬೇಕು, ನಿರಾಳವಾಗಿರಬೇಕು ಮತ್ತು ಆನಂದವಾಗಿರಬೇಕು ಎನ್ನುವುದು ಹುಟ್ಟಿದ ಎಲ್ಲಾ ಪ್ರಾಣಿಯ ಬಯಕೆ. ಹಾಗೆ ಬದುಕುವುದು ಹೇಗೆ? ಅಥವಾ ಅಂತಹ ಬದುಕನ್ನು ರೂಪಿಸಿಕೊಳ್ಳುವುದು ಹೇಗೆ? ಎನ್ನುವುದೇ ಒಂದು ಭೃಹತ್ ಪ್ರಶ್ನೆ. ಬಹುತೇಕ ಬಾರಿ ಉತ್ತರವೇ ಸಿಗದ ಪ್ರಶ್ನೆ. ಬದುಕುವುದು ಒಂದು ಕಲೆ. ಆದರೆ ಆ ಕಲೆಯನ್ನು ಕಲಿಯುವುದೋ ಅಥವಾ ಕಲಿಸುವುದೋ ಹೇಗೆ? ಸಾವಿರಾರು ನಿಯಮಗಳನ್ನು, ಸೂತ್ರಗಳನ್ನುಯುಕ್ತಿಗಳನ್ನು, ನಮ್ಮ ಹಿರಿಯರ ಮತ್ತು ಪೂರ್ವಜರ ಬದುಕಿನ ಅನುಭವವನ್ನು ನಮಗೆ ಪಾಠ ಹೇಳಿ ಕೊಟ್ಟಂತೆ ಕಲಿಸಿದರೂ, ಅಂತರಂಗದ ಕುಶಲತೆ ಇಲ್ಲದಿದ್ದರೆ ಬದುಕಿನಲ್ಲಿ ಜಯವಿರುವುದಿಲ್ಲ. ಆ ಕುಶಲತೆಯ ವಿವರವನ್ನು ನಾವು ನಮ್ಮ 'ಅಂತರಂಗ' ದಲ್ಲೇ ಕಂಡುಕೊಂಡು ಬದುಕಿನ ಜಯಕ್ಕೆ ಒಂದು ಮಾರ್ಗವನ್ನು ಹುಡುಕಿಕೊಳ್ಳಬೇಕು. 

ಹುಟ್ಟಿದ ಎಲ್ಲರಿಗೂ ಒಂದು ಬದುಕುಂಟು. ಆದರೆ ಸುಮ್ಮನೆ ಬದುಕುವುದಕ್ಕೂ ಸಾರ್ಥಕತೆಯಿಂದ ಬದುಕುವುದಕ್ಕೂ ವ್ಯತ್ಯಾಸವಿದೆ. ಸಾರ್ಥಕತೆಯಿಂದ ಬದುಕುವುದು ಒಂದು ಕಲೆ, ಅದಕ್ಕೆ ಕುಶಲತೆ ಬೇಕು.  ಸಾರ್ಥಕತೆ ಎಂದರೆ ಏನು? ಎಂದರೆ, ಸಕಲ ಪ್ರಾಣಿಗಳಿಗೂ ಆನಂದವೇ ಬಾಳಿನ ಗುರಿ. ಹಾಗಾಗಿ  'ನಾವು ಆನಂದ ಪಡುವುದೋ, ನಾವು ಪಡೆದ ಆನಂದವನ್ನು ಅನ್ಯರಿಗೆ ಹಂಚುವುದೋ, ಅನ್ಯರ ಆನಂದಕ್ಕೆ ಕಾರಣರಾಗುವುದೋ ಅಥವಾ ಅನ್ಯರ ಆನಂದಕ್ಕೆ ಧಕ್ಕೆಯಾಗದಂತೆ ಬದುಕುವುದೋ ಆದರೆ, ಅಂತಹ ಬದುಕನ್ನು ಸಾರ್ಥಕ ಬದುಕೆನ್ನಬಹುದುಎನ್ನುವುದು ಸಾಮಾನ್ಯ ಪರಿಭಾಷೆ. 'ಹೇಗೆ ಜೀವಿಸಬೇಕು?'   ಎಂದು ನಮಗೆ  ನಾನಾ ವಿಧಾನಗಳನ್ನು ಬೋಧಿಸುವ, ಹಾದಿಗಳನ್ನು ತೋರುವ, ವೇದ, ಉಪನಿಷತ್ತು, ಪುರಾಣ, ನೀತಿ ಕಥೆಗಳ ಸಾಹಿತ್ಯ ನಮ್ಮಲ್ಲಿ ಹೇರಳವಾಗಿ ಲಭ್ಯವಿದೆ. ಇವೆಲ್ಲಾ ನಮಗೆ ಹೊರಗಿನಿಂದ ಸಿಗುವ ಪುಸ್ತಕಗಳ ವಿಚಾರಗಳು. ಮನಸ್ಸು ದೇಹ ಬುದ್ಧಿಗೆ ಸಂಬಂಧಪಟ್ಟ ವಿಚಾರಗಳು.  

ಹೊರಗಿನಿಂದ ಎಷ್ಟೇ ವಿಚಾರಗಳು ಬಂದರೂ, ಅದರ ಸಾರ ಅಂತರಂಗಕ್ಕೆ ಸತ್ವವಾಗಿ ಇಳಿಯದೇ ಇದ್ದರೆ, ಎಷ್ಟು ಓದಿದರೂ, ಎಷ್ಟು ಕೇಳಿದರೂ ಎಲ್ಲವೂ ವ್ಯರ್ಥ. ವಿಚಾರವು ಹರಿದು ಬಂದು, ಅದರ ಸಾರ ಸತ್ವವಾಗಿ ನಮ್ಮೊಳಗೆ ಇಳಿಯಬೇಕಾದರೆ ನಮ್ಮೊಳಗೆ ವಿಚಾರಗಳ ಮಂಥನವಾಗಬೇಕು. ಅದರಿಂದ ಹೊರಹೊಮ್ಮುವ ಶುದ್ಧಸತ್ವವನ್ನು ನಮ್ಮ ಸ್ವಭಾವವನ್ನಾಗಿಸಿ -ಕೊಳ್ಳಬೇಕು. ಅಂತಹ ಶುದ್ಧ ಸತ್ವ, ನಮ್ಮ ಅಂತರಂಗದಲ್ಲಿ ಆತ್ಮದೊಡನೆ ಅನುಸಂಧಾನಗೊಂಡಾಗ ನಮಗೆ ಬದುಕಿನ ಪರಮ ಗುರಿಯಾದ ಆನಂದವನ್ನು ಸಾಧಿಸುವ, ನಮ್ಮದಾಗಿಸಿಕೊಳ್ಳುವ ಮತ್ತು ಅನ್ಯರಿಗೆ ಹಂಚುವ ಕುಶಲತೆಯನ್ನು ಕಲಿಸಿಕೊಡುತ್ತದೆ. ಅಂತಹ ಕುಶಲತೆ ಸಂಪೂರ್ಣವಾಗಿ ನಮ್ಮ ಸ್ವಭಾವವಾಗಿಬಿಟ್ಟರೆ, ನಾವು ಪುರುಷೋತ್ತಮರಾಗಿಬಿಡುತ್ತೇವೆ.

ಅಂತಃಸತ್ವವನ್ನು ಬೆಳೆಸಿಕೊಳ್ಳಲು ಸಾಧನೆ ಬೇಕು. ಆ ಸಾಧನೆ ಹಂತಹಂತವಾಗಿ ಆಗಬೇಕು. ತೈತ್ತರೀಯೋಪನಿಷತ್ತಿನ ಭೃಗುವಲ್ಲಿಯಲ್ಲಿ ಭೃಗುಮಹರ್ಷಿಯ ಮಗ ವಾರುಣಿ ತನ್ನ ತಂದೆಯ ಬಳಿ ಬಂದು ' ನಾನು ಬ್ರಹ್ಮವನ್ನು ಅರಿಯಬೇಕೆಂದರೆ ಏನು ಮಾಡಬೇಕು' ಎಂದು ಕೇಳುತ್ತಾನೆ. ಅದಕ್ಕೆ ಅವನ ತಂದೆ 'ತಪಸ್ಸಿನಿಂದ ಬ್ರಹ್ಮನನ್ನು ಅರಿತುಕೊ' ಎಂದು ಆದೇಶ ನೀಡುತ್ತಾನೆ. ಆಗ ವಾರುಣಿ ತಪಸ್ಸು ಮಾಡಲು ಉಪಕ್ರಮಿಸಿ ಧೀರ್ಘಕಾಲದ ತಸಸ್ಸಿನಿಂದ 'ಆನಂದೋ ಬ್ರಹ್ಮೇತಿವ್ಯಜಾನಾತ್' ಎಂದು ಆನಂದವೇ ಬ್ರಹ್ಮ ಎಂದು ಅರಿಯುವುದಕ್ಕೆ ಮುನ್ನ, ತಪಸ್ಸಿನ ಮಾರ್ಗದಿಂದ, ’ಅನ್ನ, ಪ್ರಾಣ, ಮನಸ್ಸು ಮತ್ತು ವಿಜ್ಞಾನಗಳನ್ನೆಲ್ಲ ಅನುಸಂಧಾನಮಾಡಿ ಮೊದಮೊದಲಿಗೆ ಅವುಗಳನ್ನೇ ಆನಂದವೆಂದರಿತು ಹಂತ ಹಂತವಾಗಿ ತನ್ನ ತಪಸ್ಸನ್ನು ಮುಂದುವರೆಸಿ ಕಟ್ಟ ಕಡೆಗೆ  "ಆನಂದವೇ ಬ್ರಹ್ಮವೆಂದರಿತೆ"  ಎನ್ನುತ್ತಾನೆ. ಅವನು ಕಂಡುಕೊಂಡಂತಹ ಆನಂದಜಗತ್ತಿನ ವಸ್ತು, ವಿಷಯ ಅಥವಾ ವ್ಯಕ್ತಿಗಳೊಂದಿಗಿನ 'ಅಂಟಿ'ನಿಂದಲ್ಲದೆ, ಜಗತ್ಕಾರಕನ 'ನಂಟಿ' ನಿಂದ ಸಿಗುತ್ತದೆ. 

ಹಾಗೆ ನಾವೂ ಸಹ ಪ್ರಾಪಂಚಿಕ ವಿಷಯಗಳಲ್ಲದೆ ಜಗತ್ಕಾರಕನ ಅನುಸಂಧಾನದಿಂದ ಆನಂದದಿಂದ ಬದುಕುವುದು ಎಂದು ಅರಿತಾಗ, 'ಆನಂದ' ಎಂದರೆ ಪರಬ್ರಹ್ಮನಲ್ಲಿ ನಿರತನಾಗಿ ಇರುವುದು ಎಂದು ಅರ್ಥವಾಗುತ್ತದೆ. ಅಂತಹ ಆನಂದದಿಂದ ಬದುಕುವುದೇ ಜೀವನದ ಕಲೆ. ಅಂತಹ ಕುಶಲತೆಯನ್ನು ನಾವು ಅಂತರಂಗದ ಮಂಥನದಿಂದ ನಮ್ಮದಾಗಿಸಿಕೊಂಡು ಬದುಕಿದರೆ ಅದೇ ಸಾರ್ಥಕ ಬದುಕು.


No comments:

Post a Comment