Wednesday 15 November 2017

" ನಾನು ಸರಿ - ಪರರು ತಪ್ಪು "



ನಾವು ಸದಾ ಕ್ರಿಯಾಶೀಲರಾಗಿರುತ್ತೇವೆ. ಏನೋ ಒಂದು ಕೆಲಸವನ್ನು ಸದಾಕಾಲ ಮಾಡುತ್ತಲೇ ಇರುತ್ತೇವೆ. ಕೇವಲ ಕೆಲವೇ ಬಾರಿ ನಾವು ಒಂದು ಕೆಲಸವನ್ನು ಪೂರ್ವ ಯೋಜನೆ ಮಾಡಿ, ಅದನ್ನು ಮಾಡುವ ಕ್ರಮವನ್ನು ಯೋಚಿಸಿ, ಹಾಗೆ ಯೋಜಿಸಿದ  ರೀತಿಯಲ್ಲಿ ಆ ಕೆಲಸವನ್ನು ಮಧ್ಯದಲ್ಲೇ ಕೈಬಿಡದೆ, ಮಾಡಿ ಮುಗಿಸುತ್ತೇವೆ. ಆದರೆ ಬಹಳಷ್ಟು ಬಾರಿ ನಾವು ಮಾಡುವ ಕೆಲಸಗಳನ್ನು ಕೇವಲ ಯಾಂತ್ರಿಕವಾಗಿ ಮಾಡುತ್ತಿರುತ್ತೇವೆ. ಹಾಗೆ ಮಾಡುವಾಗ ಅದರಿಂದ ಬರುವ ಫಲಡಾ ಲೆಕ್ಕಾಚಾರವನ್ನು ಮನಸ್ಸಿನಲ್ಲೇ ಹಾಕುತ್ತಾ, ನಾವು ಬಯಸಿದ ಫಲ ಸಿಕ್ಕರೆ ಹಮ್ಮಿನಿಂದ ಬೀಗುತ್ತಾ, ಸಿಗದಿದ್ದರೆ ನಮ್ಮ ವಿಧಿಯನ್ನೋ ಹಣೆಯ ಬರಹವನ್ನೂ ಅಥವಾ ನಮ್ಮ ವೈಫಲ್ಯಕ್ಕೆ ಅನ್ಯರನ್ನೋ ದೂಷಿಸುತ್ತಾ ಇರುತ್ತೇವೆ ಅಲ್ಲವೇ?

ಇನ್ನು ನಾವು ಮಾಡಿದ ಕೆಲಸದಿಂದ ಫಲರೂಪದಲ್ಲಿ ಏನನ್ನೋ ಪಡೆದುಕೊಳ್ಳುತ್ತೇವೆ. ಇದು ನಮ್ಮ ಶ್ರಮಕ್ಕೆ ಪರಮಾತ್ಮ ಕೊಟ್ಟ ಪ್ರಸಾದ ಎಂದು ಸ್ವೀಕರಿಸಿ ತೃಪ್ತರಾಗದೆ, ಕೈಲಿರುವುದನ್ನು ಬಿಟ್ಟು, ನಮಗೆ ಹಿತವಾವುದು, ಅಹಿತವಾವುದು ಎನ್ನುವ ಕಲ್ಪನೆಯೇ ಇಲ್ಲದೆ, ಮತ್ತೂ ಹೆಚ್ಚಿನದನ್ನು ಸಾಧಿಸುವ ಸಲುವಾಗಿ ಮತ್ತೆ ಮತ್ತೆ ಓಡುತ್ತೇವೆ. ಈ ಓಟದಲ್ಲಿ ಮತ್ತೂ ಏನನ್ನೋ ಸಾಧಿಸುವ ಭ್ರಮೆಯಲ್ಲಿ ಕೈಲಿರುವುದನ್ನು ತೃಪ್ತಿಯಿಂದ ಅನುಭವಿಸಿ ಸಂತಸಪಡಲು ಮರೆತೇ ಹೋಗುತ್ತೇವೆ. ಹೀಗೆಯೇ ನಮ್ಮ ಜೀವನವೂ ಅಂತ್ಯಗೊಳ್ಳುತ್ತದೆ.

ನಾವು ಮಾಡುವ ಕೆಲಸದಲ್ಲಿ ನಾವು ಸಫಲರಾದರೆ 'ನಾವೇ' ಸಾಧಿಸಿದ್ದೆಂದು ಅಹಂಕಾರದಿಂದ ಹೆಮ್ಮೆಪಡುತ್ತಾ ಬೀಗುತ್ತೇವೆ. ಹಲವರಲ್ಲಿ ನಮ್ಮ ಯಶಸ್ಸನ್ನು ಪ್ರದರ್ಶಿಸುತ್ತೇವೆ. ಆದರೆ ನಮ್ಮ ಪ್ರಯತ್ನದಲ್ಲಿ ನಾವು ಸೋತರೆ, ನಾವು ನಮ್ಮ ಸೋಲಿಗೆ ಕಾರಣಗಳನ್ನು ಹುಡುಕುತ್ತೇವೆ. ನಮ್ಮಲ್ಲಿರುವ ನ್ಯೂನತೆಗಳನ್ನು ಮತ್ತು ಪ್ರಯತ್ನದ ಕೊರತೆಯನ್ನು ಒಪ್ಪಿಕೊಳ್ಳದೆ, ಹೊರಗಿನ ಕಾರಣಗಳಿಂದಾಗಿ ನಾವು ಸೋತೆವೆಂದು ತೀರ್ಮಾನಿಸುತ್ತೇವೆ. 'ಅಯ್ಯೋ ದೇವರೆ' ಎಂದು ದೇವರನ್ನು ಹಳಿಯುತ್ತೇವೆ, 'ಹಣೆಬರಹ ' ಎಂದು ನಮ್ಮ ವಿಧಿಯನ್ನು ದೂಷಿತ್ತೇವೆ ಮತ್ತು ಅವರಿಂದ ಹೀಗಾಯ್ತು ಎಂದು ಅನ್ಯರ ಮೇಲೆ ಆರೋಪಮಾಡುತ್ತೇವೆ.  

ಅನ್ಯರ ಮೇಲೆ ಆರೋಪಮಾಡುವುದು ನಮಗಿರುವ ದೊಡ್ಡ ದುರಭ್ಯಾಸ.  ಸದಾಕಾಲ ನಾವು ಅನ್ಯರು ಮಾಡಿದ ಕೆಲಸಗಳನ್ನು ಟೀಕಿಸುತ್ತಲೇ ಇರುತ್ತೇವೆ. ಇದು 'ನಾನು ಸರಿ-ಪರರು ತಪ್ಪು' ಎನ್ನುವ ಅಹಂಕಾರಜನ್ಯವಾದ ಭಾವ. ಇದು ಸಾಮಾನ್ಯವಾಗಿ ಎಲ್ಲರಲ್ಲೂ, ಪ್ರಮಾಣ ಭೇಧವಿದ್ದರೂ ಇರುತ್ತದೆ. ಈ ಮನಃಸ್ಥಿತಿಯಲ್ಲಿ ನಮಗೆ ಯಾರನ್ನೂ ಅಭಿನಂದಿಸಲೂ ಆಗುವುದಿಲ್ಲ, ನಮಗೆ ನಾವೇ ಆನಂದದಿಂದಿರಲೂ ಆಗುವುದಿಲ್ಲ. ನಾವು ಯಾರನ್ನು ಟೀಕಿಸುತ್ತೇವೋ ಅವರು,  ನಮ್ಮ ಟೀಕೆಯ ಪರಿವೆ ಇಲ್ಲದೆ ತಮ್ಮಷ್ಟಕ್ಕೆ ತಾವು ನೆಮ್ಮದಿಯಿಂದ ಇರಬಹುದು. ಆದರೆ ನಾವು ಮಾತ್ರ ಅನ್ಯರ ತಪ್ಪುಗಳನ್ನು ಹುಡುಕುತ್ತಾ ಮತ್ತು ಪರರನ್ನು ಟೀಕಿಸುತ್ತಾ ನಮ್ಮ ಮನಸ್ಸನ್ನು ಕೆಡಿಸಿಕೊಂಡು ನಮ್ಮ ನೆಮ್ಮದಿಯನ್ನು ಕಳೆದು ಕೊಳ್ಳುತ್ತೇವೆ.

ನಾವು ಮಾಡುವುದೆಲ್ಲವೂ ಸರಿ. ನಾವು ಮಾಡುವ ಯೋಚನೆ ಮಾತ್ರ ಸರಿ. ಅದನ್ನೇ ಅನ್ಯರು ಮಾಡಿದರೆ ಅದರಲ್ಲಿ ಹುಳುಕ ಹುಡುಕುವ ದುರಭ್ಯಾಸ ನಮ್ಮದು. ಇದು ಏಕೆ ಹೀಗೆ? ಎಂದರೆ, ನಾವು,  ನಮ್ಮನ್ನೇ  ಅಧಿಕವಾಗಿ ಪ್ರೀತಿಸುತ್ತೇವೆ. ಹಾಗಾಗಿ ನಾವು ತಪ್ಪಾಗಿ ಕೆಲಸ ಅಥವಾ ಯೋಚನೆ ಮಾಡಿದ್ದರೂ ಅಥವಾ ಅನ್ಯರು ಸೂಕ್ತ  ಕೆಲಸ ಮತ್ತು ಆಲೋಚನೆ ಮಾಡಿದ್ದರೂ ಅದನ್ನು ಒಪ್ಪಿಕೊಳ್ಳುವ ಧೈರ್ಯ ಮತ್ತು ಮಾನಸಿಕ ಸಿದ್ಧತೆ ಇರುವುದಿಲ್ಲ. ಹಾಗಾಗಿ ನಾವು ಸದಾ ಕಾಲ 'ನಾನು ಸರಿ - ಅನ್ಯರು ತಪ್ಪು' ಎನ್ನುವ ಭಾವದಿಂದ ಇರುತ್ತೇವೆ.  ಇದು ಸರಿಯಲ್ಲ. ಏಕೆಂದರೆ ಅಂತಹ ಸ್ಥಿತಿಯಲ್ಲಿ ನಾವು ಸತ್ಯದಿಂದ ದೂರಾಗುತ್ತೇವೆ ಮತ್ತು ಆತ್ಮವಂಚನೆಗೆ ಸಾಕಷ್ಟು ಹತ್ತಿರವಾಗಿರುತ್ತೇವೆ. ಇಂತಹ ಸ್ಥಿತಿ ನಮ್ಮನ್ನು ಕಾಡುತ್ತದೆ ಮತ್ತು ಆತ್ಮವನ್ನು ತಿನ್ನುತ್ತದೆ.  

ಹಾಗಾಗಿ ನಾವು ನಮ್ಮ ಅಹಂಕಾರವನ್ನು ತೊರೆದು ಸತ್ಯವನ್ನು ಒಪ್ಪಿಕೊಳ್ಳುವ ಧೈರ್ಯವಂತರಾಗಬೇಕು. ನಮ್ಮಲ್ಲಿರುವ ಕೊರತೆಗಳನ್ನು ಮತ್ತು ಅನ್ಯರಲ್ಲಿರುವ ಒಳಿತನ್ನು ಗುರುತಿಸಿ ಒಪ್ಪಿಕೊಳ್ಳುವ ವಿಶಾಲ ಮನೋಭಾವವನ್ನು ಬೆಳೆಸಿಕೊಂಡರೆ, ನಮ್ಮ ನ್ಯೂನತೆಗಳನ್ನು ಒಪ್ಪಿಕೊಳ್ಳುವ ಮತ್ತು ಅವುಗಳನ್ನು ತಿದ್ದಿಕೊಳ್ಳುವ ಮನೋಭಾವ ನಮ್ಮದಾಗಿ ಮತ್ತು ಅನ್ಯರಲ್ಲಿರುವ ನ್ಯೂನತೆಗಳನ್ನು ಗೌಣವಾಗಿ ಕಂಡು, ಅವರಲ್ಲಿರುವ ಗುಣಗಳನ್ನು ಗುರುತಿಸುತ್ತ, ಒಂದು ರೀತಿಯ ಸಮಚಿತ್ತವನ್ನು ನಾವು ಬೆಳೆಸಿಕೊಂಡಾಗ, ನಮ್ಮಲ್ಲಿ ಬೇಧಗಳು ಅಳಿಸಿಹೋಗಿ, ದ್ವಂದ್ವಗಳು ನಾಶವಾಗಿ, ನಮ್ಮ  ಅಂತರಂಗದಲ್ಲಿ ಶಾಂತಿಯನ್ನು ಪಡೆಯಬಹುದು. 

No comments:

Post a Comment