Monday 13 November 2017

ಉದರ ದೈವದ ಪೂಜೆ



ಹೊಟ್ಟೆಯೊಳಗಿನ ದೈವದ ಪೂಜೆ ಮೊದಲು ಆದಮೇಲೆ ಮಿಕ್ಕೆಲ್ಲ ದೇವರುಗಳ ಪೂಜೆಯಾಗುತ್ತದೆ. ಏಕೆಂದರೆ ಆ ಹೊಟ್ಟೆಯೊಳಗಿನ ದೈವಕ್ಕಿಂತ ಮಿಗಿಲಾದ ದೈವವು ಯಾವುದೂ ಇಲ್ಲ. ಅದಕ್ಕೆ ಕೊಡಬೇಕಾದ್ದನ್ನು ಕೊಟ್ಟರೆ ಅದು ಶಾಂತವಾಗಿರುತ್ತದೆಇಲ್ಲದಿದ್ದರೆ ಕೋಪಗೊಳ್ಳುತ್ತದೆ. ಹಾಗಾಗಿ ನಾವು ಆಹಾರ ಸೇವನೆಯನ್ನು ಮಾಡಬೇಕು. ಇದೂ ಸಹ ಒಂದು ಪೂಜೆಯೆಂತೆಯೇ. ನಾವು ಒಂದು ಹೋಮ ಅಥವಾ ಹವನ ಮಾಡುವಾಗ ಒಂದು ಹೋಮಕುಂಡವನ್ನು ಶಾಸ್ತ್ರೋಕ್ತವಾಗಿ ರಚಿಸಿ, ಎಲ್ಲಾ ಪರಿಕರಗಳನ್ನೂ ಸಮರ್ಪಕವಾಗಿಟ್ಟುಕೊಂಡುಆ ಹೋಮ ಕುಂಡದಲ್ಲಿ ' ಅಗ್ನಿ' ಯನ್ನು ಪ್ರತಿಷ್ಠಾಪಿಸಿ ಆ ಅಗ್ನಿಗೆ ಮಂತ್ರಪೂರ್ವಕವಾಗಿ ಹವಿಸ್ಸನ್ನು ನೀಡುತ್ತೇವೆ. ಆ ಅಗ್ನಿಗೆ 'ಹವ್ಯವಾಹಕ' ಎಂದು ಹೆಸರು. ನಾವಿತ್ತ ಈ ಹವಿಸ್ಸನ್ನು ಅಗ್ನಿಯು ನಾವು ಉದ್ದೇಶಿಸಿದ ದೇವತೆಗಳಿಗೆ ತಲುಪಿಸುತ್ತದೆ ಮತ್ತು ಆ ದೇವತೆಗಳು ಸುಪ್ರೀತರಾಗಿ ನಮ್ಮ ಮನೋಭೀಷ್ಟೆಯನ್ನು ನೆರವೇರಿಸುತ್ತಾರೆ ಎನ್ನುವುದು ಸನಾತನದ ನಂಬಿಕೆ.  

ಶ್ರೀ ಕೃಷ್ಣ,  ಭಗವದ್ಗೀತೆಯಲ್ಲಿ ‘ ನಾನು ಜೀವಿಗಳ ಉದರದಲ್ಲಿ ವೈಶ್ವಾನರ ರೂಪದಲ್ಲಿ ಇದ್ದೇನೆ’ ಎಂದು ಹೇಳುತ್ತಾನೆ. ಆ ವೈಶ್ವಾನರನೇ ಜಠರಾಗ್ನಿ. ನಮ್ಮ ಜಠರದಲ್ಲಿರುವುದು ಜಠರಾಗ್ನಿ. ಹವಿಸ್ಸಿನ ರೂಪದಲ್ಲಿ ನಾವು ಆಹಾರವನ್ನು ಅದಕ್ಕೆ ಸಮರ್ಪಿಸಿದಾಗ ಆ ಅಗ್ನಿ ಅದನ್ನು ಪಚನಗೊಳಿಸಿ ಎಲ್ಲ ರೀತಿಯ ಶಕ್ತಿಯನ್ನೂ ಉತ್ಪಾದಿಸಿ  ‘ಸಮಾನ ವಾಯುವಿನ ಮೂಲಕ ನಮ್ಮ ದೇಹದ ಎಲ್ಲ ಭಾಗಗಳಿಗೂ ಸಮರ್ಪಕವಾಗಿ ವಿತರಿಸುತ್ತದೆ. ಈ ಪ್ರಕ್ರಿಯೆ ನಡೆಯುತ್ತಿದ್ದರೆ ನಮ್ಮ ದೇಹ ಸುಸ್ಥಿತಿಯಲ್ಲಿರುತ್ತದೆ. ಹಾಗಾಗಿ   ನಮ್ಮ ಉದರದಲ್ಲಿರುವ ಆ ‘ವೈಶ್ವಾನರ’ ನೆಂಬ ದೇವರಿಗೆ ಮೊದಲ ಪೂಜೆಯಾಗಬೇಕು. ಹಾಗಾದಾಗ ದೇಹ ಧೃಢವಾಗಿ ಮಿಕ್ಕೆಲ್ಲ ದೇವತೆಗಳ ಪೂಜೆಗೆ ಪೂರಕವಾಗಿರುತ್ತದೆ. ಹಾಗೆ ಕೊಟ್ಟ ಆಹಾರದಿಂದ ‘ವೈಶ್ವಾನರ ತೃಪ್ತನಾದರೆ’ ಆನಂದಇಲ್ಲದಿದ್ದರೆ ಅವನು ಆಗ್ರಹಿಸಿ ದೇಹ ಸೊರಗಿ ಶಕ್ತಿಯಿಲ್ಲದೆ ಯಾವ ದೇವರ ಪೂಜೆಯೂ ಕೈಲಾಗುವುದಿಲ್ಲ. ಹಾಗಾಗಿ ಉದರ ದೈವದ ಪೂಜೆ ಮೊದಲಾಗಬೇಕು.

ಹೆಚ್ಚು ತಿಂದರೆ ಅನಾರೋಗ್ಯಕಡಿಮೆ ತಿಂದರೂ ಅನಾರೊಗ್ಯ. ಎಷ್ಟು ತಿನ್ನಬೇಕು ಎಂದು ನಿರ್ಧರಿಸುವುದು ಕಷ್ಟ. ಏನನ್ನೋ ತಿಂದರೆ ಅನಾರೋಗ್ಯ ಮತ್ತ್ಯಾವುದನ್ನೋ ತಿಂದರೆ ಆರೋಗ್ಯ. ಆದರೆ ಏನು ತಿನ್ನಬೇಕು ಎನ್ನುವುದನ್ನು ನಿರ್ಧರಿಸುವುದು ಕಷ್ಟ. ಮಿಶ್ರಣ(combination) ಪರಿಮಾಣ(ratio) ಮತ್ತು ಪ್ರಮಾಣ(quantity) ನಿರ್ಧರಿಸುವುದೇ ಬಹಳ ಕಷ್ಟ. ನಮ್ಮ ಆಹಾರದ "ಹದವರಿಯುವುದು" ಒಂದು ಸಾಹಸವೇ ಸರಿ.  ಆದರೆ ನಾಲಿಗೆ ಒಂದಿದೆಯಲ್ಲ!! ಅದನ್ನೂ ತೃಪ್ತಿ ಪಡಿಸುತ್ತಾ ಆ ಹದವನ್ನೂ ಅರಿತರೆ ‘ಉದರ ದೈವ’ ದ ಪೂಜೆಯೂ ಸರಿಯಾಗುತ್ತದೆ. ದೇಹವೂ ಆರೋಗ್ಯದಿಂದಿರುತ್ತದೆ. 

ಅದಲ್ಲದೆ ನಾಲಿಗೆಯ ಚಪಲಕ್ಕೆ ಬಲಿಯಾಗಿ ಏನೇನನ್ನೋ ತಿನ್ನುತ್ತಾ ಹೋದರೆ ಅದರ ಪರಿಣಾಮವನ್ನು ಬೇರೆಯಾಗಿ ವಿವರಿಸಬೇಕೇ? ಇಂದು ನಾವು ನೋಡುತ್ತಿರುವುದೇನೆಂದರೆ ಬಹಳಷ್ಟು ಜನ ವೈದ್ಯಕೀಯ ಶುಶ್ರೂಷೆಗೆ ಬರುವುದೇ ಈ ಆಹಾರದ ವ್ಯತ್ಯಯದಿಂದಾಗಿ. ಈ ಆಹಾರದ ವಿನ್ಯಾಸಕ್ಕಾಗಿಯೇ ವಿಜ್ಞಾನದ ಹಲವಾರು ವಿಭಾಗಗಳು ಹೊಸದಾಗಿ ಹುಟ್ಟಿಕೊಂಡಿವೆ. ಆದರೆ ನಮ್ಮ ಪುರಾತನರ ಆಹಾರ ಕ್ರಮವೇ ' ಔಷಧಿ ' ರೂಪದಲ್ಲಿದೆ ಎಂದು ಅರಿಯದಾಗಿದ್ದಾರೆ. ದೇಶ ಕಾಲಕ್ಕನುಗುಣವಾಗಿ ವಿನ್ಯಾಸಗೊಂಡಿರುವ ನಮ್ಮ ಪುರಾತನರ ಆಹಾರ ಪದ್ದತಿಯನ್ನು ಸರಿಯಾಗಿ ಪಾಲಿಸಿದ್ದೇ ಆದರೆ ಅದೇ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ನಾಲಿಗೆಯ ಚಪಲತೆಯನ್ನು ಬಿಟ್ಟು,  ಊಟವನ್ನು ಒಂದು ವಿಧಿವತ್ತಾದ ಪೂಜೆಯಂತೆ ಮಾಡಿದರೆ ಪುಣ್ಯಕ್ಕೂ ಆಗುತ್ತದೆ ಮತ್ತು ಪುರುಷಾರ್ಥಕ್ಕೂ ಆಗುತ್ತದೆ.  ಆಹಾರವನ್ನು ಅರಿತು ಸೇವಿಸಿದರೆ ಆರೋಗ್ಯ, ಅದಲ್ಲದೆ ಕೇವಲ ಚಪಲಕ್ಕೆ ಸೇವಿಸಿದರೆ ಅನಾರೋಗ್ಯ. ಸರಿಯಾದ ಆಹಾರವನ್ನು ಸೂಕ್ತ ಸಮಯದಲ್ಲಿ ಸೇವಿಸಿದರೆ ಅದೇ ನಮ್ಮ 'ಉದರ
ದೈವದ'ಪೂಜೆಯಾಗುತ್ತದೆ. ಹಾಗಾಗಿ ಈ ಉದರ ದೈವದ ಪೂಜೆಯನ್ನು ಸಮರ್ಪಕವಾಗಿ ಮಾಡಿದ್ದೇ ಆದರೆ ಆರೋಗ್ಯ ನಮ್ಮದಾಗುತ್ತದೆ, ಅಲ್ಲವೇ? 


No comments:

Post a Comment