Monday 13 November 2017

ಆಸೆಯ ಅಂಟು - ಕಷ್ಟದ ನಂಟು



ಆಸೆಪಡುವುದು ಎಲ್ಲ ಪ್ರಾಣಿಗಳ ಸಹಜ ಗುಣ. ಆಸೆಪಟ್ಟದ್ದನ್ನು ಪಡೆಯಲು ಪ್ರಯತ್ನವನ್ನು ಮಾಡುವುದೂ ಪ್ರಾಣಿಗಳ ಸ್ವಭಾವ. ಮನುಷ್ಯನು ಇದಕ್ಕೆ ಹೊರತಲ್ಲ. ಆಸೆಪಟ್ಟವರೆಲ್ಲಾ ಅದನ್ನು ಸಾಕಾರಗೊಳಿಸಿಕೊಳ್ಳಲು ಪ್ರಯತ್ನಪಡುವುದಿಲ್ಲ, ಪ್ರಯತ್ನಪಟ್ಟವರಿಗೆಲ್ಲಾ ಫಲ ಸಿಗುವುದೂ ಇಲ್ಲ.  ಪ್ರಯತ್ನಪಟ್ಟ ಕೆಲವರಿಗೆ  ಪೂರ್ಣಫಲ ಸಿಗಬಹುದು, ಕೆಲವರಿಗೆ ಅರ್ಧಫಲ ಸಿಗಬಹುದು, ಕೆಲವರಿಗೆ ಬಯಸಿದ ಫಲಕ್ಕಿಂತ ಬೇರೆಯೇ ಫಲ ಸಿಗಬಹುದು, ಕೆಲವರಿಗೆ ಬಯಸಿದ್ದಕ್ಕಿಂತ ವಿರುದ್ಧವಾದ ಫಲ ಸಿಗಬಹುದು  ಮತ್ತು ಕೆಲವರಿಗೆ ಯಾವ ಫಲವೂ ಸಿಗದೇ ನಿರಾಸೆಗೆ ಕಾರಣವಾಗಬಹುದು. 

ಬಹಳಷ್ಟು ಜನ ಕೇವಲ ಮನಸ್ಸಿನಲ್ಲಿ ಆಸೆಪಟ್ಟು, ಊಹಾಲೋಕದಲ್ಲಿ ಅಥವಾ ಭಾವನಾ ಲೋಕದಲ್ಲಿ ಪ್ರಯತ್ನಪಟ್ಟಂತೆ ಅಥವಾ ಫಲ ಪಡೆದಂತೆ ಊಹಿಸಿಕೊಳ್ಳುತ್ತಾ ಕನಸಿನ ಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಅವರು ಅಸೆಗಳನ್ನೂ ವ್ಯಕ್ತಪಡಿಸಲಿಲ್ಲ ಅಥವಾ ಪ್ರಯತ್ನಪಡಲಿಲ್ಲ ಎಂದಾಕ್ಷಣ ಅವರ ಮನಸ್ಸುಗಳಲ್ಲಿ ಆಸೆಗಳಿಲ್ಲ ಎಂದ ಅರ್ಥವಲ್ಲ. 

ಆಸೆಗಳನ್ನು ವ್ಯಕ್ತಪಡಿಸದೆ ಸುಮ್ಮನಿದ್ದರೆ ಇಂದ್ರಿಯಗಳನ್ನು ಜಯಿಸಿದಂತಾಗುತ್ತದೆಯೇಕಣ್ಣು ಕಾಣದವನು ಏನನ್ನೂ ನೋಡದಿದ್ದರೆ ಅವನ ಮನದೊಳಗೆ ಆಸೆಗಳು ಇಲ್ಲವೆಂದಲ್ಲವಲ್ಲ. ಕಣ್ಣ ಮುಚ್ಚಿಕೊಂಡು ನಾ ಯಾವುದನ್ನೂ ನೋಡುವುದಿಲ್ಲ ಎಂದರೆ ಮನದೊಳಗಿನ ಆಸೆಯನ್ನು ಗೆದ್ದಂತೆಯೇಏನನ್ನೂ ಕಾಣಲಾಗದ ಕುರುಡನನ್ನು ವಿರಕ್ತನೆಂದು ಹೇಳಲು ಸಾಧ್ಯವಿಲ್ಲಅಲ್ಲವೇಕಣ್ಣ ಮುಚ್ಚಿ ತಪವನ್ನು ಆಚರಿಸುತ್ತಿದ್ದ ವಿಶ್ವಾಮಿತ್ರನಂತಹ ಋಷಿಯೂ ಸಹ ನಾಲ್ಕು ಬಾರಿ ಆ ಮೇನಕೆ ಕಣ್ಣ ಮುಂದೆ ನಡೆದಾಡಿದಾಗ ವಿಚಲಿತನಾದನಲ್ಲ!!.  ತಮ್ಮ ಒಂದು ಹಾಡಲ್ಲಿ ಪುರಂದರ ದಾಸರು " ಆಸೆ ಸತ್ತಂತಿರಬಹುದು" ಎಂದು ಹೇಳುತ್ತಾರೆ. "ಸತ್ತಂತೆ ಇರಬಹುದು" ಎಂದರೆ ಆಸೆ ಇದೆಆದರೆ ಅದನ್ನು ಹೊರಗೆ ತೋರಿಸದೆ ಇರುವುದು ಎಂದರ್ಥ . ಆಸೆ ಇಲ್ಲದ ಮನುಷ್ಯನಾರೂ ಇರಲೇ ಸಾಧ್ಯವಿಲ್ಲ!! ಮನುಷ್ಯನೇನು ಯಾವ ಪ್ರಾಣಿಯೂ ಇರಲು ಸಾಧ್ಯವೇ ಇಲ್ಲ. ಆದರೆ ಅನ್ಯ ಪ್ರಾಣಿಗಳ ಆಸೆಗೂ ಮನುಷ್ಯನ ಆಸೆಗೂ ಬಹಳ ವ್ಯತ್ಯಾಸವಿದೆ.  

ನೋಡಿ ನಾವು, " ನಾನು ಯಾವುದಕ್ಕೂ ಆಸೆಪಡುವುದಿಲ್ಲ" ಎಂದು ನಾವು ಪ್ರತಿಜ್ಞೆ ಮಾಡಿದರೂ ಮನದಾಳದಲ್ಲಿ ಇರುವ ಆಸೆಯ ಬೀಜವನ್ನು ಮೊಳೆಯದಂತೆ ಮಾಡಲು ಸಾಧ್ಯವಿಲ್ಲ. ಮನದೊಳಗೆ ಆಸೆಯನ್ನಿಟ್ಟುಕೊಂಡು ವಿರಕ್ತನಂತೆ ಡಾಂಬಿಕದ ಸೋಗು ಹಾಕುವುದು, ನಮಗೆ ನಾವು ಮೋಸ ಮಾಡಿಕೊಂಡಹಾಗೆ ಆಗುತ್ತದೆ ಅಲ್ಲವೇ? ಹಾಗಾಗಿ ಹಿತವಾಗಿ ಮಿತವಾಗಿ ಆಸೆಪಟ್ಟು, ಆ ನಮ್ಮ ಆಸೆಗಳು ನಮಗೆ ಹಿತವನ್ನೇ ಉಂಟು ಮಾಡುತ್ತವೆ ಎನ್ನುವ ನಂಬಿಕೆಯಿಂದ ಆಸೆಪಡಬೇಕು. ಹಾಗಾದಾಗ ಬಾಳು ಹಿತವಾಗುತ್ತದೆ.

ನೋಡಿ ಇಲ್ಲಿ ಆಸೆಯಿಲ್ಲದ ನಿರ್ಲಿಪ್ತ ಭಾವ ಎಂದರೆ ಏನು ಎಂದರೆ, ಆಸೆಯೆಂದರೆ ನಾವಂದುಕೊಂಡು ಕೆಲಸ ಹೀಗೇ ಆಗಬೇಕು ಮತ್ತು ನಾವು ಪಡುವ ಪ್ರಯತ್ನದಿಂದ ಇಂತಹುದೇ ಫಲ ಸಿಗಬೇಕು  ಎಂದು ನಾವಂದುಕೊಳ್ಳುತ್ತೇವೆ.  ನಿರ್ಲಿಪ್ತ ಭಾವ ಎಂದರೆ ನಾವು ಮಾಡುವ ಕೆಲಸವನ್ನು ಮಾಡುತ್ತಾ, ಆದರ  ಪ್ರತಿಫಲ ಹೇಗಿರುತ್ತದೆಂಬ ಚಿಂತೆ ಕಾಳಜಿ ಇಲ್ಲದೆ,  ಬಂದದ್ದನ್ನು ಬಂದ ಹಾಗೆ ಸ್ವೀಕರಿಸುವುದು ಎಂದರ್ಥ. 

ನಾವು ಈ ಜಗತ್ತಿನ ವಿಷಯಗಳಿಗೆ ಅಂಟದೇ ಇರುವುದರಿಂದ  ನಮ್ಮ ಬಯಕೆಗಿಂತ ಭಿನ್ನವಾದ ಫಲ ದೊರೆತಾಗ ಆಗುವ ನೋವಿಂದ ನಾವು ಮುಕ್ತರಾಗಬಹುದು. ಹಾಗೆ ದುಃಖ ಅಥವಾ ನೋವಿಂದ ನಮ್ಮನ್ನು ನಾವು ರಕ್ಷಿಸಿಕೊಂಡು ನಿಜವಾದ ಸಂತೋಷವನ್ನು ಪಡೆಯುವುದೇ ಪ್ರತಿಯೊಬ್ಬರ ಜೀವನದ ಗುರಿ ಅಲ್ಲವೇ?  ಇದು ಅಂತರಂಗದ ಭಾವ. ಇದು ನಮ್ಮ ಮನಸ್ಸುಗಳಲ್ಲಿ ನಡೆಯಬೇಕಾದ ಕುಸ್ತಿ, ಯುದ್ಧ. ನಮಗೇನು ಬೇಕು,  ನಮಗಾವುದು ಒಳ್ಳೆಯದು, ನಾವು ಏನನ್ನು ತ್ಯಜಿಸಬೇಕು ಇತ್ಯಾದಿ ವಿಚಾರಗಳ ಮಂಥನವಾದರೆ ಆಗ ಸತ್ಯದ ದರ್ಶನವಾಗಿ ನಮ್ಮ ಬಯಕೆಗಳು ನಮಗೆ ಹಿತ ತರುವಂತಾದ್ದಾಗಿರುತ್ತವೆ. ನಮ್ಮ ಬಯಕೆಯ ಜೊತೆಗೆ ದೈವ ಕೃಪೆಯೂ ಸೇರಿದರೆ ನಮಗೆ ದ್ವಿಗುಣ ಲಾಭವಲ್ಲವೇ?

ದೈವ ಕೃಪೆ ಸದಾ ಇದ್ದೇ ಇರುತ್ತದೆ. ಅದು ' conditinal' ಅಲ್ಲ. ಆದರೆ ನಮಗದು ಅರ್ಥವಾಗಿರುವುದಿಲ್ಲ. ನಮಗೆ ನಿರ್ಲಿಪ್ತಭಾವವಿಲ್ಲದಿದ್ದರೆ ದೈವ ಕೃಪೆ ಮತ್ತು ನಮ್ಮ ಭಾವ ಸಮಾನಾಂತರವಾಗಿ(parralel)ಮುಂದೆ ಹೋಗುತ್ತಿರುತ್ತದೆ. ಆ ಸಮಯದಲ್ಲಿ ನಮ್ಮ ಮನೋಭೀಷ್ಟೆಗಳು ಕೈಗೂಡುವುದಿಲ್ಲವಾದ್ದರಿಂದ, ನಮಗೆ ಆನಂದವಿರುವುದಿಲ್ಲ, ಹಾಗಾಗಿ ನಾವು ನಮಗೆ ದೈವ ಕೃಪೆಯಿಲ್ಲವೆಂದುಕೊಳ್ಳುತ್ತೇವೆ. ವಿರಕ್ತ ಭಾವ ಬಂದರೆ ನಮ್ಮ ಆಸೆಗಳ ಬುಗ್ಗೆಯ ಒರತೆ  ಕುಗ್ಗಿ, ಬಂದದ್ದನ್ನು ಬಂದಹಾಗೆ ಸ್ವೀಕರಿಸುವ ಬುದ್ಧಿ ನಮಗುಂಟಾಗಿ ನಮ್ಮ ಪ್ರಯತ್ನ ಮತ್ತು ದೈವಕೃಪೆಯ ಸಮ್ಮಿಲನದಿಂದ ನಮಗೆ ಆನಂದವುಂಟಾಗುತ್ತದೆ. ಅಂತಹ ಆನಂದವನ್ನು ಪಡೆಯುವುದೇ  
ನಮ್ಮ ಧ್ಯೇಯವಾಗಿರಬೇಕು.  ಹಾಗೆ ಪಡೆದ ಆನಂದವೇ ನಿಜವಾದ ಆನಂದ ಮತ್ತು ಅಂತಹ ಪ್ರಯತ್ನವೇ ನಿಜವಾದ ಆಧ್ಯಾತ್ಮಿಕ ಸಾಧನೆ. 


No comments:

Post a Comment