Monday 13 November 2017

ಜಿತೇಂದ್ರಿಯರಾರು ?


ಜಿತೇಂದ್ರಿಯ ಎನ್ನುವ ಪದವನ್ನು ನಾವು ಬಹಳ ಜನರು ಬಳಸುವುದನ್ನು ನೋಡಿದ್ದೇವೆ ಅಲ್ಲವೇ? ಹಾಗೆಂದೆರೆತನ್ನ ಇಂದ್ರಿಯಗಳನ್ನು ಗೆದ್ದವನು ಎಂದು ಅರ್ಥ.  ಪಂಚ ಭೂತಗಳೆಂದರೆ ಆಕಾಶ, ವಾಯು, ಅಗ್ನಿ, ನೀರು ಮತ್ತು ಭೂಮಿ. ಕ್ರಮವಾಗಿ ಇವುಗಳ ಗುಣಗಳು, ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳು. ಈ ಜಗತ್ತಿನಲ್ಲಿ ಜನಿಸಿದ ಪ್ರತೀ ಪ್ರಾಣಿಯೂ ತನ್ನ ಪಂಚೇಂದ್ರಿಯಗಳಾದ, ಕಿವಿ, ತ್ವಚೆ, ಕಣ್ಣು, ನಾಲಗೆ ಮತ್ತು ಮೂಗಿನಿಂದ ಈ ಪಂಚಭೂತಗಳ ಗುಣಗಳನ್ನು ತನ್ನೊಳಕ್ಕೆ ಇಳಿಸಿಕೊಳ್ಳುವುದರಿಂದಲೇ,  ಅದು ಜಗತ್ತನ್ನು ಅರಿಯುತ್ತದೆ ಮತ್ತು ಇಲ್ಲಿ ಬಾಳುತ್ತದೆ.

ಹುಟ್ಟಿದಾರಭ್ಯ ಈ ಎಲ್ಲಾ ಗುಣಗಳನ್ನೂ ಜೀವಿ ಅನುಭವಿಸುತ್ತಾ ತನ್ನ ಅವಶ್ಯಕತೆಗಳನ್ನು ಅರಿಯುತ್ತಾಬೇಕು-ಬೇಡಗಳ, ಇಷ್ಟ- ಅನಿಷ್ಟಗಳ, ಒಳಿತು ಕೆಡುಕುಗಳನ್ನು ಅರಿಯುತ್ತದೆ ಮತ್ತು ಅವುಗಳೊಂದಿಗೆ ಬದುಕುತ್ತದೆ. ಹಾಗೆ ಬದುಕುವಾಗ ಈ ಜಗತ್ತಿನ ಅಂಟನ್ನು ಅಂಟಿಸಿಕೊಂಡು ಸುಖ, ಸಂತೋಷ ಮತ್ತು ಆನಂದ ಅಥವಾ ದುಃಖ, ನೋವು ಮತ್ತು ಹಿಂಸೆಗಳಂತಹ ಭಾವಗಳನ್ನು ಅನುಭವಿಸುತ್ತದೆ.  ಈ ಎಲ್ಲಾ ಭಾವಗಳೂ ಒಂದು ಜೀವಿಗೆ ಕೇವಲ ಅದರ ಇಂದ್ರಿಯಗಳಿಂದಲೇ ಉಂಟಾಗುತ್ತದೆ. ಇದರಿಂದ ಯಾವ ಜೀವಿಗೂ ಮುಕ್ತಿಯಿಲ್ಲ. ಆದರೆ ಮಾನವನಿಗೆ ಮಾತ್ರಪರಮಾತ್ಮ ತನ್ನ ಭಾವಗಳನ್ನು ಅರಿಯುವ, ವಿಶ್ಲೇಷಿಸುವ ಮತ್ತು ತನ್ನನ್ನು ತಾನು ಸುಧಾರಿಸಿಕೊಳ್ಳುವ ಕ್ಷಮತೆಯನ್ನಿತ್ತಿದ್ದಾನೆ. ಇದನ್ನೇ ಇಂದ್ರಿಯ ನಿಗ್ರಹವೆನ್ನುವುದು. ಯಾವ ವ್ಯಕ್ತಿ ಈ ಜಗತ್ತಿನ ಸಂಸರ್ಗದಲ್ಲಿ ಇದ್ದೂ ಈ ಇಂದ್ರಿಯಗಳ ಪ್ರಭಾವಕ್ಕೆ ಒಳಗಾಗದೆ ಇದ್ದರೆ ಅವನನ್ನು 'ಜಿತೇಂದ್ರಿಯ' ಎನ್ನಬಹುದು. ಆದರೆ ಅಂತಹ ಸ್ಥಿತಿಗೆ ತಲುಪಲು ಜನ್ಮಜನ್ಮಾಂತರದ ಸಂಸ್ಕಾರವಾಗಬೇಕು. ಯುಗ ಯುಗಾಂತರದಲ್ಲಿ,  ಹಾಗೆ ಜನ್ಮದಿಂದಲೇ ಎಲ್ಲ ಇಂದ್ರಿಯ ಆಸೆಗಳೂ ಸುಟ್ಟಿರುವ ವ್ಯಕ್ತಿಗಳು ಯಾರಾದರೂ ಸಿಗುತ್ತಾರೇನುಎಂದು ನೋಡಿದರೆಸಾಧ್ಯವೇ ಇಲ್ಲ. 

ಹಾಗಲ್ಲದವರಲ್ಲಿ "ಇವನು ಜಿತೇಂದ್ರಿಯನೋ ಅಲ್ಲವೋ" ಎಂದು ಪರೀಕ್ಷೆಗೆ ಒಳಪಡುವವರಾರುಹಾಗೆ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದರೆಯಾರಿಗೋ ಹಸಿವಿಲ್ಲ ಹಾಗಾಗಿ ಊಟ ಕಡಿಮೆಯಾರಿಗೋ ಹೊಟ್ಟೆಯಲ್ಲಿ ಹುಣ್ಣು ಹಾಗಾಗಿ ಊಟ ಸೇರುವುದಿಲ್ಲ. ಹೀಗೆ ಬೇರೆ ಯಾವುದಾವುದೋ ಕಾರಣಕ್ಕೆ ಅವರುಗಳ ಇಂದ್ರಿಯಗಳು ಸತ್ತಂತೆ ಇದ್ದರೆ. ಅವರನ್ನು ಜಿತೇಂದ್ರಿಯರೆನ್ನಲಾಗುತ್ತದೆಯೇ?  ಮಾತನಾಡಲಾಗದೆ ಮೌನವಾಗಿರುವ ಮೂಗನನ್ನು ಮೌನವ್ರತ ಮಾಡುತ್ತಿದ್ದಾನೆ ಎನ್ನಲಾಗುವುದೇಎಲ್ಲ ಉಪಕರಣಗಳೂಇಂದ್ರಿಯಗಳೂ ಸರಿಯಾಗಿರುವಾಗ ಅವುಗಳ ಮೂಲಕ ಉಂಟಾಗುವ ಆಸೆಗಳು ನಮ್ಮ ಮೇಲೆ ಪ್ರಭಾವ ಭೀರದಂತೆಮತ್ತು ನಾವು ಆಸೆ ಪಡದ ರೀತಿ ನಮ್ಮನ್ನು ನಾವು ರೂಪಿಸಿಕೊಳ್ಳಲಾದರೆ ಅದು ಸಾಧನೆ. ಅದಕ್ಕೆ ನೂರಾರು ಮಾರ್ಗಗಳು ಸೂಚಿಸಿದ್ದಾರೆ ಜ್ಞಾನಿಗಳು. ಆ ಮಾರ್ಗಗಳಲ್ಲಿ ನಮ್ಮ ಜೀವನದ ಪಯಣ ಸಾಗಿ ನಾವೂ ಸಹ ಮೃತೇಂದ್ರಿಯರಲ್ಲದಿದ್ದರೂಜಿತೇಂದ್ರಿಯರಾಗುವ ಪ್ರಯತ್ನಪಡಬಹುದು. 

ಹಾಗಾದರೆ ಈ ಜಗತ್ತಿನ ಮಾಯಾಪೂರಿತ ಅನುಭವಗಳನ್ನು ತನ್ನೊಳಕ್ಕೆ ಇಳಿಸಿಕೊಳ್ಳದೆ 'ಇದ್ದೂ ಇಲ್ಲದಂತೆ'  ಸಕಲ ಭಾವಗಳಿಂದ ಮುಕ್ತನಾಗಿ ಜೀವಿಸಬಹುದು. ಆ ಸ್ಥಿತಿಗೆ ತಲುಪಲು ಸಾಧನೆ ಅವಶ್ಯಕ. ಅದಕ್ಕೆ ಬೇರೆ ಬೇರೆ ಮಾರ್ಗಗಳಿವೆ. ಸತ್ಸಂಗ, ಸದಾಚಾರ ಮತ್ತು ಸದ್ವಿಚಾರಗಳು ಅವುಗಳಲ್ಲಿ ಬಹಳ ಮುಖ್ಯವಾದದ್ದು. ನಿರಂತರವಾಗಿ ಅವುಗಳನ್ನು ಪಾಲಿಸಿದರೆ ಒಂದಲ್ಲ ಒಂದು ದಿನ ಅಥವಾ ಮುಂದಿನ ಯಾವುದಾದರೂ ಒಂದು ಜನ್ಮದಲ್ಲಿ  'ಜಿತೇಂದ್ರಿಯ'  ರಾಗಿ ಜಗತ್ತಿನ ಅಂಟಿನಿಂದ ಮುಕ್ತಿ ಪಡೆದು 'ನಿತ್ಯಾನಂದ'   ಸ್ಥಿತಿಗೆ ತಲುಪಬಹುದು. ಯಾರಷ್ಟು ಪ್ರಯತ್ನ ಪಟ್ಟರೆ ಅವರಿಗಷ್ಟು ಲಾಭ.  


No comments:

Post a Comment