Monday 13 November 2017

ಅನುಭವ ತೈಲ



ಒಮ್ಮೆ ಸಂಸಾರವೆಂಬ ಈ ಬದುಕಿನಲ್ಲಿ ಕತ್ತೆತ್ತಿ ಸುತ್ತಲೂ ನೋಡಿದರೆ ನಮಗೆ ಒಂದು ವಿಷಯದ ಅರಿವಾಗುತ್ತದೆ. ಈ ಜಗತ್ತಿನ ಪ್ರತಿಯೊಬ್ಬರಿಗೂ ಕಷ್ಟ ಸುಖಗಳ ಸಮ್ಮಿಶ್ರ ಜೀವನ ಸಿಗುತ್ತದೆ. ಕೆಲವರಿಗೆ ಕೆಲಕಾಲ ಕಷ್ಟ ಮತ್ತೆ ನಿರಾಳ. ಕೆಲವರಿಗೆ ಕಷ್ಟವೇ ಇಲ್ಲದ ಸುನಾಯಾಸದ ಬದುಕು. ಕೆಲವರಿಗೆ ತೀರಾ ಏರಿಳಿತಗಳ ಬದುಕು. ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವ. ಸುಖದಲ್ಲಿರುವವರು ಎಂದಿಗೂ 'ನಮಗೇಕೆ ಸುಖ ಬಂದಿದೆಎಂದು ಕೇಳುವುದೇ ಇಲ್ಲ.  ಆದರೆ ಕಷ್ಟದಲ್ಲಿರುವವರಿಗೆ ಮತ್ತು ತಮ್ಮ ಕಷ್ಟವನ್ನು ಅನ್ಯರ ಸುಖದೊಂದಿಗೆ ತುಲನೆಮಾಡಿಕೊಳ್ಳುವವರಿಗೆ ಸಾಮಾನ್ಯವಾಗಿ 'ನಮಗೇಕೆ  ಇಂತಹ ಕಷ್ಟಗಳ ಸರಮಾಲೆ? ' ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. 

ನಮ್ಮ ಬದುಕಿನಲ್ಲಿ ನಮಗೆ ಸಾಲು ಸಾಲು ಕಷ್ಟ ಅಥವಾ ಸುಖಗಳ ಅನುಭವಗಳು ಏಕಾಗುತ್ತವೆ ಎಂದು ನಾವು ನಮ್ಮ ಅಂತರಂಗದಲ್ಲಿ ಆಲೋಚಿಸಿದರೆ ನಮಗೆ ಅದರ ಕಾರಣ ಸುಲಭದಲ್ಲಿ ಅರ್ಥವಾಗುವುದಿಲ್ಲ, ಅಲ್ಲವೇ? ಏಕೆಂದರೆ ನಮಗೆ ಈ ಬದುಕನ್ನು ಕೊಟ್ಟ ದಾತನು, ಎಂದರೆ ಆ ಪರಮ ಪುರುಷ ನಮ್ಮನ್ನು ಜೀವನವೆಂಬ ಗಾಣದಲ್ಲಿ ಎಳ್ಳಿನ ಕಾಳುಗಳಂತೆ ಅರೆಯುತ್ತಾನೆ. ಯಾರಿಗೂ ಈ ಅರೆತದಿಂದ ವಿನಾಯತಿ ಇಲ್ಲ. ನಿಧಾನವಾಗಿ ಎಲ್ಲರನ್ನೂ ನೆನಪಿನಲ್ಲಿರಿಸಿಕೊಂಡು, ಯಾರನ್ನೂ ಉಪೇಕ್ಷಿಸದೆ, ಅವರ ಅವರ ಕರ್ಮಾನುಸಾರ ಎಂತೆಂತಹ ಪೆಟ್ಟುಗಳನ್ನು ಕೊಡಬೇಕೋ ಅವುಗಳನ್ನೆಲ್ಲ ನಿಶ್ಚಯವಾಗಿ ಕೊಟ್ಟೇ ಕೊಡುತ್ತಾನೆ. ಇದು ಅವನಾಡಿಸುವ ಜಗನ್ನಾಟಕದ ವಿಧಾನ.  

ಈ ಜಗತ್ತನ್ನು ಒಂದು ಸಮರ್ಪಕವಾದ ವಿಧಾನ( system)ನಲ್ಲಿ ಇರಿಸಿದ್ದಾನೆ ಆ ಪರಮಾತ್ಮ ಮತ್ತು ಈ ಜಗತ್ತಿನ ಸಕಲ ಚರಾಚರಗಳೂ ಅ ವ್ಯವಸ್ಥೆ ಅಥವಾ ಪದ್ದತಿಗೆ ಅನುಸಾರವಾಗಿಯೇ ನಡೆದುಕೊಳ್ಳಬೇಕು. ಅನ್ಯ ದಾರಿಯೇ ಇಲ್ಲ. ಆದರೆ ಮನುಷ್ಯನಿಗೆ ಮಾತ್ರ ಸ್ವಲ್ಪ ವಿವೇಕವನ್ನೂ ಮತ್ತು ಅದನ್ನು ವೃದ್ಧಿಸಿಕೊಳ್ಳುವ ಕ್ಷಮತೆಯನ್ನೂ ನೀಡಿದ್ದಾನೆ ವಿಧಾತ. ಆದರೂ ನಾವೆಲ್ಲಾ ಗಾಣದೊಳಗಿನ ಎಳ್ಳಿನ ಕಾಳಿನಂತೆ  ಪ್ರತಿ ನಿತ್ಯ ಅರೆಯಲ್ಪಪಡುತ್ತೇವೆ. ಈ ಅರೆತವೇ ಜೀವನಾನುಭವ. ಅಂತಹ ಅರೆತದಿಂದ ನಮಗೆ ಉಂಟಾಗುವ ಅರಿವೇ ಆ ಪರಮಾತ್ಮ ತನ್ನ 'ಗಾಣ' ದಲ್ಲಿ ತೆಗೆಯುವ ಎಣ್ಣೆ. ವ್ಯತ್ಯಾಸವೇನೆಂದರೆ ಗಾಣಿಗ ತೆಗೆಯುವ ಎಣ್ಣೆ ಪರರ ಉಪಯೋಗಕ್ಕೆ ಬರುತ್ತದೆ, ಆದರೆ ನಮ್ಮ ಪರಮಾತ್ಮನೆಂಬ ಗಾಣಿಗ ತೆಗೆಯುವ ಎಣ್ಣೆ, ಎಂದರೆ ಜೀವನಾನುಭವಜೀವಿಗಳ  ಅನುಕೂಲಕ್ಕೆ ಬಂದು ಆತ್ಮೋದ್ಧಾರಕ್ಕೆ ಅನುವು ಮಾಡಿಕೊಡುತ್ತದೆ.

ಪರಮಾತ್ಮ ಒಳ್ಳೆಯ ಲೆಕ್ಕಾಚಾರದವನು ಹಾಗಾಗಿ ಡಿ.ವಿ ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಪರಮಾತ್ಮನನ್ನು ಒಳ್ಳೆ ಲೆಕ್ಕಿಗ ಪರಮೇಷ್ಠಿ ಎನ್ನುತ್ತಾರೆ.  ಏಕೆಂದರೆ  ಆ ಪರಮಾತ್ಮ ಎಲ್ಲರ ಲೆಕ್ಕವನ್ನೂ ಸಮರ್ಪಕವಾಗಿಟ್ಟಿರುತ್ತಾನೆ. ಯಾರನ್ನೂ ಮರೆಯುವ ಪ್ರಮೇಯವೇ ಬರುವುದಿಲ್ಲ. ಅವನ ಕೈಯಲ್ಲಿರುವ ಲೇಖನಿಯೇ ವಿಧಿ. ಆ ವಿಧಿಯೆಂಬ ಲೇಖನಿಯಲ್ಲಿ ಶಾಯಿಯ ರೂಪದಲ್ಲಿ ಅವನು ತುಂಬುವುದೇ, ನಮ್ಮನ್ನು ಬದುಕೆಂಬ ಗಾಣದಲ್ಲಿ ಅರೆದು ತೆಗೆದ "ಅರಿವೆಂಬ" ಎಣ್ಣೆಯನ್ನು. ಈ ಎಣ್ಣೆ ಎಷ್ಟು ಸುಧಾರಿತವಾಗಿದ್ದರೆ, ನಮ್ಮ ಮುಂದಿನ ಬದುಕಿನ ಬರಹವೂ ಸುಂದರವಾಗಿರುತ್ತದೆ. ಹಾಗಾಗಿ ಬದುಕಿನಲ್ಲಿ ಅನುಭವವನ್ನು ಪಡೆದ ನಾವು ಆ ಅನುಭವಗಳಿಂದ ಕಲಿತು, ಅರಿವನ್ನು ಬೆಳೆಸಿಕೊಂಡು, ನಮ್ಮನ್ನು ನಾವು ಆದಷ್ಟು ಸುಧಾರಿಸಿಕೊಂಡರೆ ಮುಂದಿನ ಬದುಕೂ ಸಹ 'ನಿರಾಳ' ವಾಗಿರುತ್ತದೆ. 

ಆದರೆ ನಮ್ಮಲ್ಲಿ ಬಹುತೇಕ ಮಂದಿ, ಅಹಂಕಾರದಿಂದ, ಅಜ್ಞಾನದಿಂದ, ಸಂಸಾರದ ಅಂಟಿನಲ್ಲಿ ಮುಳುಗಿದವರಾಗಿ  ಈ ಬದುಕೆಂಬ ಗಾಣದಲ್ಲಿ ಅರೆಯಲ್ಪಟ್ಟರೂ, ಬದುಕಿನ ಅನುಭವಗಳನ್ನು ಪಡೆದರೂಆ ಅನುಭವಗಳು ನಮಗೆ ನೀಡುವ ಪಾಠವನ್ನು ಓದಿದರೂ, ಅದನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ ಮತ್ತು ಅದರಿಂದ ಕಲಿಯುವುದೇ ಇಲ್ಲ. ಮತ್ತೆ ಮತ್ತೆ ಈ ಬದುಕಿನ ಜಂಜಡಕ್ಕೆ ಸಿಲುಕಿಕೊಂಡು ತೊಳಲಾಡುತ್ತೇವೆ.

ನಾವು ಏನೇ ಆಗಿದ್ದರೂ, ಏನೇ ಮಾಡಿದರೂ ಆ ವಿಧಾತನ ಅಧೀನದಲ್ಲಿರುವುದರಿಂದ ಅವನ ವ್ಯವಸ್ಥೆ ಮತ್ತು ವಿಧಾನಕ್ಕೆ ತಲೆಬಾಗಿ ಕಷ್ಟವೋ ಸುಖವೋ ಒಂದು ನಿರ್ಲಿಪ್ತ ಭಾವದಿಂದ ಅನುಭವಿಸಿದರೆ, 'ನಿರ್ಲಿಪ್ತತೆನಮಗೆ ಬದುಕಿನ ಅನುಭವಗಳನ್ನು ಅನುಭವಿಸುವಾಗ ನೋವನ್ನುಂಟುಮಾಡುವುದಿಲ್ಲ. ಅಂತಹ ನಿರ್ಲಿಪ್ತತೆಯನ್ನು ಕಾಲಕ್ರಮೇಣ ಬೆಳೆಸಿಕೊಳ್ಳಬಹುದು ಮತ್ತು ಇದು ಜನ್ಮಜನ್ಮಾಂತರದಲ್ಲಿ ಆಗುವ ಬದಲಾವಣೆ. ಅಂತಹ ಸ್ಥಿತಿಯಲ್ಲಿ ನಮಗೆ ಸಿಕ್ಕ ಬದುಕನ್ನು  ನೋವಿಲ್ಲದೆ ಅನುಭವಿಸಬಹುದು. ನಾವು ಯಾವ ರೀತಿಯ ಬದುಕನ್ನು ಆಯ್ದುಕೊಂಡರೆ ನಮ್ಮ ಬದುಕು ಹಾಗೆ ಇರುತ್ತದೆ.  

No comments:

Post a Comment