Monday 13 November 2017

ಅಸಿಧಾರಾ ವ್ರತ



ಈ ಭುವಿಯ ಜೀವನಕ್ಕೆ ನಾವು ಬಂದ ಮೇಲೆ ಬದುಕಲೇ ಬೇಕು. ವಯಸ್ಕರಾಗಿ ಸಂಸಾರವನ್ನು ಕಟ್ಟಿಕೊಂಡಮೇಲೆ ಅನ್ಯರ ಬದುಕಿನ ಹೊಣೆಯನ್ನೂ ಹೊರಬೇಕು. ಹೆಂಡತಿ ಮಕ್ಕಳು,  ತಂದೆ ತಾಯಿಯರು, ಹೀಗೆ ನಮ್ಮ ಮೇಲೆ ಆಧಾರಪಟ್ಟಿರುವವರ ಹೊಣೆಯನ್ನು ಹೊರಲೇ ಬೇಕು. ಬದುಕಿನ ಜಂಜಡವನ್ನು ನಿಭಾಯಿಸುವಾಗ ಹಲವಾರು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಎಲ್ಲವೂ ಸಮರ್ಪಕವಾಗಿದ್ದರೆ ಬದುಕುವುದು ಸುಲಭ. ಆದರೆ ಹಾಗೆ ಎಲ್ಲರಿಗೂ ಇರುವುದಿಲ್ಲವಲ್ಲ. ಕಷ್ಟಗಳ ಸರಮಾಲೆಯನ್ನು ಧರಿಸಿಯೇ ಬದುಕಬೇಕಾದವರಿಗೆ ಜೀವನ ನಿರ್ವಹಣೆ ದುರ್ಭರವಾಗಿ ತೋರುತ್ತದೆ.  

ಜೀವನ ನಿರ್ವಹಣೆಯೇ ಒಂದು ವ್ರತ. ನಮ್ಮ ಪೂರ್ವಜರು ಅದನ್ನು ' ಅಸಿಧಾರಾ ವ್ರತ ' ಎಂದು ಸೂಕ್ತವಾಗಿ ಕರೆದಿದ್ದಾರೆ. ಅರ್ಥಾತ್ಕತ್ತಿಯ ಅಲುಗಿನ ಮೇಲಿನ ನಡೆಯಂತಹ ವ್ರತ.  ಆ ವ್ರತ ಬಹಳ ಕಷ್ಟತರವಾದ ವ್ರತ. ಈ ವ್ರತ ಸಮರ್ಪಕವಾಗಿ ಆಗಬೇಕಾದರೆ ಎಲ್ಲವೂ ಸಮರ್ಪಕವಾಗಿರಬೇಕು. ಅಂತರಂಗದ ಅಂಗಗಳು ಮತ್ತು ಬಾಹ್ಯ ಅಂಗಗಳು ಎಲ್ಲವನ್ನೂ ಸಮತೆಯಿಂದ ಸಾಧಿಸಿದರೆ ನಿರ್ವಹಣೆ ಸೂಕ್ತವಾಗಬಹುದು. ಅದಕ್ಕೆ ಮೂರು ವಿಧಾನಗಳಿವೆ 

ಒಂದು 'ಶಮ'. ಶಮವೆಂದರೆ ಶಮನಮಾಡುವುದು ಎಂದು ಅರ್ಥ. ಅಂತರಂಗದ ಅಂಗಗಳಾದ ಮನಸ್ಸು ಬುದ್ಧಿಗಳನ್ನು,  ಅಂತರಂಗದ ಪ್ರಯತ್ನದಿಂದಲೇ ಶಾಂತಗೊಳಿಸಿ ನಮ್ಮ ಹಾದಿಗೆ ತಂದುಕೊಳ್ಳಬೇಕು. ಎರಡನೆಯದು 'ದಮ' ಎಂದರೆ ದಮನಮಾಡುವುದು ಎಂದು ಅರ್ಥ. ಅಂತರಂಗದ ಅಂಗಗಳು ಹೇಗೆ ಹತ್ತು ಕಡೆ ಹರಿದು ನಮ್ಮನ್ನು ಕಂಗಾಲಾಗಿಸುತ್ತವೆಯೋ ಅದೇ ರೀತಿ ಇಂದ್ರಿಯಾನುಸಂಧಿತವಾದ ಬಾಹ್ಯ ಅಂಗಗಳೂ ನಮ್ಮ ಒಳಕ್ಕೆ ನುಗ್ಗಿ ನಮ್ಮನ್ನು ಕಂಗಾಲಾಗಿಸಿ ತಮ್ಮ ಪ್ರಾಬಲ್ಯ ತೋರಿ  ನಮ್ಮನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತವೆ. ಇವುಗಳನ್ನು ಪ್ರಯತ್ನಪೂರ್ವಕವಾಗಿ ದಮನಗೊಳಿಸಬೇಕು. ಮೂರನೆಯದು ಇವೆರಡರ ನಡುವೆ ಒಂದು ಸಮನ್ವಯವನ್ನು, ಸಮತೆಯನ್ನು ಕಂಡುಕೊಳ್ಳುವುದು. ಹೀಗೆ ಬಾಹ್ಯಾಂತರಂಗಗಳಲ್ಲಿನ ಅಂಗಾಗಗಳೆಲ್ಲಾ ಶಾಂತವಾದಾಗ, ಮನಸ್ಸು ಬುದ್ಧಿಗಳು ಸಂಪೂರ್ಣ ಶಾಂತವಾದಾಗ ಗೃಹ ನಿರ್ವಹಣೆ ಸುಲಭವಾಗುತ್ತದೆ ಮತ್ತು ಸಮರ್ಪಕವಾಗುತ್ತದೆ. ಇದನ್ನು ಸಾಧಿಸುವುದೇ ಒಂದು ವ್ರತ ಅಥವಾ ತಪಸ್ಸು.  
  
ಅಂತಹ ತಪಸ್ಸನ್ನು ಮಾಡಲು ಕಾವಿ ಬಟ್ಟೆಗಳನ್ನು ಧರಿಸಿ ಕಾಡಿಹೋಗಬೇಕಾಗಿಲ್ಲ. ಸಂಸಾರ ನಿರ್ವಹಣೆಯೂ ತಪಸ್ಸಾಗುವುದಿಲ್ಲವೇನು? ತಪಸ್ವಿಯ ವೇಷವನ್ನು ಧರಿಸದಿದ್ದರೂ ಗೃಹ ನಿರ್ವಹಣೆ ಮಾಡುವುದೂ ಸಹ ಒಂದು ತಪಸ್ಸು ಮತ್ತು ಅದು ಕಾಡಿನಲ್ಲಿ ಕುಳಿತು ತಪಸ್ಸು ಮಾಡುವುದಕ್ಕಿಯಿಂತಲೂ ಕಠಿಣವಾದ ತಪಸ್ಸು.

ಯಾವ ಸಮಸ್ಯೆಯೂ ಇಲ್ಲದೆ ಕಾಡಿನಲ್ಲಿ ಕುಳಿತುಕೊಂಡು ತಪಸ್ಸನ್ನು ಮಾಡುವುದಕ್ಕಿಂತಲೂ ಎಲ್ಲ ತಾಪತ್ರಯಗಳ ನಡುವೆಯೂ, ವಿಚಲಿತರಾಗದೆ ಸಂಸಾರ ನಿರ್ವಹಣೆಯನ್ನು ಒಂದು ಕರ್ತವ್ಯವೆಂಬಂತೆ ಸಮರ್ಪಕವಾಗಿ ನಿಭಾಯಿಸುವುದೂ ಸಹ ಒಂದು ಮಹಾ ತಪಸ್ಸೆಂದರೆ ತಪ್ಪಾಗಲಾರದು. 

ತಪಸ್ಸು ಮಾಡಲು ಕಾಡಿಗೆ ಹೋಗಬೇಕಾಗಿಲ್ಲ, ಕಾಷಾಯ ತೊಡಲೂ ಬೇಕಾಗಿಲ್ಲ. ಶಮ ಮತ್ತು  ದಮಗಳ ಮೂಲಕ ಸಮತೆ ಮತ್ತು ಸಮರ್ಪಕತೆಯನ್ನು ಸಾಧಿಸಿ ಜೀವನ ಅಥವಾ ಸಂಸಾರ ನಿರ್ವಹಣೆಯನ್ನು ಮಾಡಿದರೆ ಅದೇ ಒಂದು ದೊಡ್ಡ ತಪಸ್ಸು. ಯಾವುದೇ ಉನ್ನತ ಶಾಸ್ತ್ರಗಳ ಅಭ್ಯಾಸವನ್ನು ಮಾಡದೆ ಇದ್ದರೂ ಸಂಸಾರದಲ್ಲಿ ಇದ್ದರೂ ಸನ್ಯಾಸಿಗಳಂತೆ ಅಥವಾ ತಪಸ್ವಿಗಳಂತೆ ಜೀವಿಸಿದ ಮತ್ತು ಇಂದಿಗೂ ಜೀವಿಸುತ್ತಿರುವ ಬಹಳ ಜನರು ನಮ್ಮ ಸಂಪರ್ಕಕ್ಕೆ ಬರುತ್ತಾರೆ.

ಎಲ್ಲವೂ ಇದ್ದು ಯಾವುದಕ್ಕೂ ಅಂಟದೆ ಏನೂ ಇಲ್ಲದವರಂತೆ ಬದುಕುವುದು ಬಹಳ ಕಷ್ಟ. ಹಾಗೆ ಬದುಕಲು ನಿರಂತರ ಪ್ರಯತ್ನ ಬೇಕು, ಅಂತರಂಗ ಮತ್ತು ಬಹಿರಂಗದ ಶುದ್ಧತೆ ಬೇಕು, ಅಭ್ಯಾಸ ಬೇಕು. ವಿರಕ್ತರಲ್ಲದೇ ಇದ್ದರೂ ರಕ್ತಿಯಿಲ್ಲದೆ ಇರುವವರು ಇದ್ದಾರಲ್ಲವೇ? ಇದ್ದೂ ಇಲ್ಲದ ಹಾಗೆ, ಅಂಟಿಯೂ ಅಂಟದ ಹಾಗೆ 'ಪದ್ಮಪತ್ರಮಿವಾಂಭಸಿ' ಎಂದು ಶ್ರೀ ಕೃಷ್ಣ ಗೀತೆಯಲ್ಲಿ ಹೇಳುವಂತೆ ಬದುಕಿದರೆ ಮತ್ತು ಅಂತಹ ಗುಣಗಳನ್ನು ನಾವೂ ಅಳವಡಿಸಿಕೊಂಡರೆ ಸಮರ್ಪಕ ಗೃಹ ನಿರ್ವಹಣೆಗೆ ಸೂಕ್ತ ಸಾಧನವಾಗಬಹುದು. ಪ್ರಯತ್ನಿಸಿದರೆ ಮಾತ್ರ ಇದು ಎಲ್ಲರಿಗೂ ಸಾಧ್ಯ. 


No comments:

Post a Comment