Monday 13 November 2017

ಅಂತರಂಗದ ಭಾವ


ಹೊಟ್ಟೆಯು ಹಸಿವಿನಿಂದ ಪರದಾಡುವಂತೆ, ಹೃದಯ ಮತ್ತು ಮನಸ್ಸುಗಳೂ ಸಹ  ಪ್ರೀತಿ, ಪ್ರೇಮ ಮತ್ತು ವಾತ್ಸಲ್ಯಗಳ ಭಾವನೆಯ ಹಸಿವಿನಿಂದ ಪರದಾಡುತ್ತದೆ. ಆಹಾರವು ಕೊರಳ ನಾಳದಿಂದ ಒಳಹೊಕ್ಕಂತೆ, ಭಾವಗಳಿಂದ ಉದ್ರೇಕಗೊಳ್ಳುವ  ಹೃದಯದ ಅಬ್ಬರವೂ ಸಹ ಕೊರಳ ನಾಳದಿಂದಲೇ ನಗು, ಕೋಪ, ಹೊಗಳಿಕೆ, ತೆಗಳಿಕೆ ಮುಂತಾದವುಗಳಾಗಿ ಒಳ ಹೊಕ್ಕು, ಹೊರ ಹೊಮ್ಮುತ್ತದೆ. ಈ ಎಲ್ಲ ರೀತಿಯ ಭಾವಗಳ ಶಮನದಿಂದಲೇ ಮನಸ್ಸಿಗೆ ಶಾಂತಿ ಸಿಗುತ್ತದೆ. ಆದರೆ ಶಮನ ಹೇಗಾಗುತ್ತದೆ ಎಂದು ನಮಗೆ ಗೊತ್ತಿಲ್ಲ. ಏಕೆಂದರೆ ಆ ಶಮನದ ಮಾರ್ಗವನ್ನು ಯೋಚಿಸಲೂ ಆಗದಷ್ಟು, ಅನಗತ್ಯ ವಿಷಯಗಳು ನಮ್ಮೊಳಗೆ ತುಂಬಿಕೊಂಡಿವೆ.

ನಮ್ಮ ದೇಹ ಧಾರಣೆಗೆ ಹೇಗೆ ಆಹಾರವು ಅಗತ್ಯವೋ,  ಹಾಗೆಯೇ ಹೃದಯ ಮತ್ತು ಮನಸ್ಸುಗಳಿಗೆ ಭಾವನೆಗಳೆಂಬ ಆಹಾರ ಅತ್ಯಗತ್ಯ. ಅವರವರ ಮನೋಭಾವಕ್ಕೆ ತಕ್ಕಂತೆ ಎಲ್ಲರ ಭಾವನೆಗಳೂ ಇರುತ್ತವೆ. ಆಹಾರದಲ್ಲಿ ಎಷ್ಟು ವೈವಿಧ್ಯತೆ ಇದೆಯೋ ಅದಕ್ಕಿಂತ ಸಾವಿರ-ಲಕ್ಷಪಟ್ಟು ಭಾವ ವೈವಿಧ್ಯತೆ ಉಂಟು. ಹೇಗೆ ಎಷ್ಟೋಬಾರಿ ನಾವು ನಮಗೆ ಜೀರ್ಣವಾಗದ, ಆರೋಗ್ಯಕ್ಕೆ ಹಿತವಲ್ಲದ ಆಹಾರವನ್ನು ಸೇವಿಸಿ ಪರದಾಡುತ್ತೇವಲ್ಲ ಹಾಗೆಯೇ ನಮ್ಮ ಮನಸ್ಸು, ಬುದ್ಧಿಗಳಿಗೆ ಹಿತವಲ್ಲದ ಮತ್ತು ಹಾನಿಯುಂಟುಮಾಡುವ ವಿಚಾರಗಳು ಭಾವನೆಗಳು ನಮ್ಮ ಮನಸ್ಸಿನೊಳಕ್ಕೆ ನುಗ್ಗುತ್ತದೆ, ಬಂದು ಹೋಗುತ್ತದೆ, ತನ್ನ ಪರಿಣಾಮ ಬೀರಿಸ್ಥಾಯೀಯಾಗಿ ನಮ್ಮ ಮನಸ್ಸಿನಲ್ಲೇ ಉಳಿದು, ಆಗಾಗ ಮೇಲೆದ್ದು ಪ್ರಕಟಗೊಳ್ಳುತ್ತಾ ಇರುತ್ತದೆ. ಇಲ್ಲಿ ನಡೆಯುವುದು ಒಂದು ತಡೆಯಿಲ್ಲದ ಭಾವ ಪ್ರವಾಹ.  ಇದಕ್ಕೆ ಅಣೆಕಟ್ಟ ಕಟ್ಟುವುದು ಅತೀ ಕ್ಲಿಷ್ಟಕರವಾದ ಕೆಲಸ.  

ನಮ್ಮ ನಗು, ಆನಂದ, ಸಂತೋಷ, ಕೋಪ, ದ್ವೇಷ, ದುಗುಡ, ದುಮ್ಮಾನ, ಅಸೂಯೆಗಳಂತಾ ಭಾವಗಳೆಲ್ಲ ನಮ್ಮ ಕೊರಳಿಂದ ನಮ್ಮೊಳಗೇ ಇಳಿದು, ನಮ್ಮ ಕೊರಳೊಳಗಿಂದಲೇ ಹೊರ ಹೊಮ್ಮುತ್ತದೆ. ಹಾಗೆ ಬಂದು ಹೋಗುವ ಭಾವಗಳೇ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ನಮ್ಮ ಭಾವನೆಗಳು ಹೇಗಿರುತ್ತವೆಯೋ ಹಾಗೆ ನಮ್ಮ ನಡವಳಿಕೆಯಿರುತ್ತದೆ. ಕಾಲಕಾಲಕ್ಕೆ ಬದಲಾಗುವ ನಮ್ಮ ವಿಚಾರಗಳು ಮತ್ತು ತದನುಗುಣವಾಗಿ ಬದಲಾಗುವ ಭಾವನೆಗಳಿಂದ ನಮ್ಮ ವ್ಯಕ್ತಿತ್ವ ಬದಲಾಗುತ್ತಾ ಹೋಗುತ್ತದೆ. ಈ ವಿಚಾರಗಳೆಲ್ಲ ನಮ್ಮನ್ನು ಶಾಂತವಾಗಿರಲು ಬಿಡುವುದಿಲ್ಲ. ಸದಾಕಾಲ ಯಾವುದಾದರೂ ಒಂದು ರೀತಿಯ ದ್ವಂದ್ವಗಳಿಂದ ನಮ್ಮನ್ನು ಪೀಡಿಸುತ್ತಾ ಇರುತ್ತದೆ. 

ಆದರೆ ಇವುಗಳಿಂದ ಪೀಡಿತರಾದ ನಾವು ಒಂದು ವಿಚಾರವನ್ನು ಮಾಡುವುದರಲ್ಲಿ ವಿಫಲರಾಗುತ್ತೇವೆ. ಅದೇನೆಂದರೆ, ಈ ಎಲ್ಲಾ ಭಾವಗಳ ಮಹಾಪೂರ ನಮ್ಮಲ್ಲಿ ಹರಿದು ಬರುವುದಕ್ಕೆ ಯಾರು ಕಾರಣರು? ಎಂದು. ಸೂಕ್ಷ್ಮವಾಗಿ ಅವಲೋಕಿಸಿ ನೋಡಿದರೆ ಹೊರಗಿನ ಅಂಶಗಳಿಗಿಂತನಾವೇ ಇದಕ್ಕೆ ಕಾರಣರೆಂದು ನಮಗೆ ಅರಿವಾಗುತ್ತದೆ. ನಮ್ಮ ಅಂತರಂಗದ ಭಾವಗಳೇ ಹೊರಗಿನ ವಿಷಯಗಳಿಗೆ ಅಂಟಿಕೊಂಡು ಮತ್ತಷ್ಟು ಭಾವಗಳಿಗೆ ಕಾರಣವಾಗುತ್ತವೆ ಮತ್ತು ಅಶಾಂತಿಯನ್ನು ಹೆಚ್ಚಿಸುತ್ತವೆ. ಹಾಗಾಗಿ ನಮ್ಮೊಳಗಿನ ದ್ವಂದ್ವ, ನೋವು, ಸಂಕಟದ ಭಾವನೆಗಳ ತಿಕ್ಕಾಟವೆಲ್ಲವೂ ನಿಂತು ಮನಸ್ಸು, ಬುದ್ಧಿಗಳು ಶಾಂತವಾಗಬೇಕಾದರೆ, ನಾವೇ ಪ್ರಯತ್ನ ಪಡಬೇಕು. ಅದಕ್ಕೆ ನಮ್ಮ ಪೂರ್ವಜರು ಹಲವಾರು ಮಾರ್ಗಗಳನ್ನು ನಮಗೆ ಸೂಚಿಸಿದ್ದಾರೆ ಅಲ್ಲವೇ? ಯಾವ ಮಾರ್ಗವನ್ನು ಅನುಸರಿಸಿದರೂ ಗಮ್ಯ ಸೇರುವುದು ಸಾಧ್ಯ.   


ನಾವು ಮನಸ್ಸು ಬುದ್ಧಿಗಳಿಂದ ಶಾಂತ ಸ್ಥಿತಿಗೆ ತಲುಪಬೇಕಾದರೆ ಈ ರೀತಿ ನಮ್ಮನ್ನು ವಿಚಲಿತಗೊಳಿಸುವ ಭಾವನೆಗಳನ್ನು ಕಸ ಗುಡಿಸಿದಂತೆ ಮನದಿಂದ ಹೊರಹಾಕಬೇಕು ಮತ್ತು ಶುದ್ಧ ಮತ್ತು ಶಾಂತ ವಿಚಾರಗಳನ್ನು ಮಾತ್ರ ಒಳಬರಮಾಡಿಕೊಳ್ಳುವ ಪ್ರಯತ್ನ ಮಾಡಬೇಕು. ಆಗ ನಾವು ಶಾಂತರಾಗಬಹುದು. ಜಗತ್ತಿನಲ್ಲಿ ನಾವಿರುವಾಗ ಅದರಿಂದ ದೂರ ಸರಿಯಲು ಸಾಧ್ಯವಿಲ್ಲ. ಇಲ್ಲಿ ಇದ್ದೇ ಆ ರೀತಿಯ ಮನಃಶಾಂತಿಯನ್ನು ಪಡೆಯಲಾದರೆ ಅದೇ ದೊಡ್ಡ ಸಾಧನೆ.

No comments:

Post a Comment