Sunday 11 December 2011

ಹೆಣ್ಣೇ ನಿನಗೆ ನಮೋ ನಮಃ

ಮೊನ್ನೆ ಬೆಳಗ್ಗೆ ಶಟಲ್ ಆಟ ಮುಗಿಸಿ, ಭಟ್ರ ಹೋಟೆಲ್ಲಿನಲ್ಲಿ ಇಡ್ಲಿಗೆ ಆರ್ಡರ್ ಮಾಡಿ, ಎದುರುಗಡೆ ಇನ್ನೂ ತೆಗೀದೇ ಇರೋ ಅಂಗಡಿ ಮುಂದೆ ಜಗಲೀ ಮೇಲೆ ಪಟ್ಟಂಗ ಹೊಡೆಯೋಕೆ   ಕೂತ್ಕೊಂಡಾಗ, ನಮ್ಮ ಎಂಟು - ಹತ್ತು ಜನದ ಹರಟೆ ಶುರುವಾಯ್ತು. ಅದೂ ಇದೂ ಮಾತಾಡ್ತಾ  ಇರೋವಾಗ, ದುತ್ತಂತ ಒಂದು ಪ್ರಶ್ನೆ ನಮ್ಮ ಮುಂದೆ ಬಂದು ಬಿತ್ತು."ಈ ಜಗತ್ತಿನಲ್ಲಿ. ಎಲ್ಲಾ ರೀತೀಲೂ ಹೊಂದ್ಕೊಂಡು, ಪರಸ್ಪರ ಅರ್ಥ ಮಾಡ್ಕೊಂಡು, ಅನ್ಯೋನ್ಯವಾಗಿರೋ  ಗಂಡ-ಹೆಂಡತಿ ಇರೋಕ್ಕೆ ಸಾಧ್ಯಾನಾ?" ಅಂತ. ತಕ್ಷಣ ನಮ್ ಶಿವಣ್ಣ" ಏಯ್ ಸಾಧ್ಯ ಇಲ್ಲಾ ಬಿಡಿ " ಅಂದ್ಬಿಟ್ರು. ಮಿಕ್ಕವರೆಲ್ಲಾ ಸ್ವಲ್ಪ ಯೋಚನೆ ಮಾಡಿದ ಹಂಗೆ ಮಾಡಿ " ಹೌದು ಸಾಧ್ಯಾನೆ ಇಲ್ಲಾ " ಅಂದರು. 


ಅಷ್ಟರೊಳಗೆ ನಮ್ಮ ತರಲೆ ತಿರುಮಲೈ  ತನ್ನ ಅತೀ ಬುಧ್ಧಿವಂತಿಕೆ ಎಲ್ಲಾ ಉಪಯೋಗಿಸಿ, ಪುರಾಣ ಇತಿಹಾಸ ಎಲ್ಲಾ ಕೋಟ್ ಮಾಡಿ, ಸಂಪೂರ್ಣವಾಗಿ ಪರಸ್ಪರ ಅರ್ಥಮಾಡ್ಕೊಂಡ  ಗಂಡ-ಹೆಂಡತಿ ಇರಕ್ಕೆ" ಸಾಧ್ಯಾನೆ ಇಲ್ಲಾ" ಅಂತ ಡಿಸೈಡ್ ಮಾಡಿದ ಹಂಗೆ ರೂಲಿಂಗ್ ಕೊಟ್ಟ. ಮಿಕ್ಕೆಲ್ಲಾರೂ ಒಪ್ಪಿಕೊಂಡಹಾಗೆ ತಲೆ ಆಡಿಸಿ ಇಡ್ಲಿ ತಿಂದು ಕಾಫಿ ಕುಡಿದು ಬೈ ಬೈ ಹೇಳಿ ತಮ್ಮ ತಮ್ಮ ದಾರಿ ಹಿಡ್ಕೊಂಡು ಹೊರಟೇ ಬಿಟ್ಟರು. 

ನನಗಂತೂ ತಲೇಲಿ ಹುಳ ಬಿಟ್ಟ ಹಂಗೆ ಆಗಿ ಕೊರೆತ ಶುರುವಾಯ್ತು. ಎಷ್ಟೋ ಜನ ಗಂಡ-ಹೆಂಡಿರನ್ನ ನೋಡಿದ್ದೇನೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಇದ್ದೇ ಇರ್ತಾವೆ. ಆದ್ರೆ ಆ ತರಲೆ ತಿರುಮಲೈ ಹೇಳ್ದಂಗೆ " ಸಾಧ್ಯಾನೇ ಇಲ್ವಾ" ಅಂತ ಯೋಚನೆ ಮಾಡೀ ಮಾಡಿ ನನಗೂ ಹೌದು " ಸಾಧ್ಯಾನೇ ಇಲ್ಲ" ಅಂತ ಅನ್ನಿಸ್ತು. ಆದರೂ ಅದನ್ನೇ ಧೃಡಪಡಿಸಕೊಳ್ಳಲಿಕ್ಕೆ, ನನಗೆ ಗೊತ್ತಿರುವ ಒಬ್ಬೊಬ್ಬರನ್ನೇ ಮಾತಾಡ್ಸಿ, ಕ್ಯಾಶುಅಲ್ ಆಗಿ ಅವರ ಅಭಿಪ್ರಾಯಾನೂ ಕಲೆಕ್ಟ್ ಮಾಡ್ದೆ. ಕಡೇಗೆ  ಗೊತ್ತಾಗಿದ್ದು ಇಷ್ಟು. ಎಲ್ಲಾ ಕಡೇನೂ ತೂತೆ. " ಸಂಪೂರ್ಣವಾಗಿ ಪರಸ್ಪರ ಅರ್ಥಮಾಡ್ಕೊಂಡ  ಗಂಡ-ಹೆಂಡತಿ  ಈ ಜಗತ್ತಿನಲ್ಲಿ ಇರಕ್ಕೆ ಸಾಧ್ಯಾನೆ ಇಲ್ಲಾ" ಅನ್ನೋ ಮಟ್ಟಕ್ಕೆ ತೀರ್ಮಾನಿಸೋ ಘಟ್ಟಕ್ಕೆ ತಲುಪಿತ್ತು ನನ್ನ ಸಂ-ಶೋಧನೆ. 

ನನ್ನ ವೈಯಕ್ತಿಕ ಅನುಭವಾನೂ ಹೆಚ್ಚೂ ಕಡಿಮೆ ಅದೇ ಆಗಿತ್ತು. ನನ್ನ ಹೆಂಡ್ತಿನೇ ಉದಾಹರಣೆಯಾಗಿ ತೊಗೊಂಡ್ರೆ, ಅವಳು ನನಗೆ ನೂರಾರು ಪ್ರಶ್ನೆ ಕೇಳ್ತಾನೆ ಇರ್ತಾಳೆ. ನಾನು ಎನ್ ಮಾಡಿದರೂ ಅವಳಿಗೆ ತಪ್ಪಾಗೇ  ಕಾಣಿಸುತ್ತೆ. ಅವಳನ್ನು ಮೆಚ್ಚಿಸಲಿಕ್ಕೆ 26 ವರ್ಷಗಳಿಂದ ನನಗೆ ಸಾಧ್ಯಾನೆ ಆಗಿಲ್ಲ. ಅವಳನ್ನು ಮೆಚ್ಚಿಸಲಿಕ್ಕೆ ಅವಳನ್ನು ಹುಟ್ಟಿಸಿದ ಆ ಪರಮಾತ್ಮನಿಗೂ  ಸಾಧ್ಯ ಇಲ್ಲಾಂತ ಅನ್ನಿಸುತ್ತೆ. ಅವಳಿಗೂ ನನ್ನ ಬಗ್ಗೆ ಹಂಗೇ ಅನ್ನಿಸ್ತಾ ಇರಬಹುದು. ಹೀಗೆ ನನ್ನ ಸ್ವಂತ ಅನುಭವ ಮತ್ತು ನಾ  ಮಾಡಿದ ಸಂ-ಶೋಧನೆ ಎರಡನ್ನೂ ಕೂಡಿಸಿ, ಗುಣಿಸಿ, ಭಾಗಿಸಿ, ಕಳೆದರೂ "ಸಂಪೂರ್ಣವಾಗಿ ಪರಸ್ಪರ ಅರ್ಥಮಾಡ್ಕೊಂಡ  ಗಂಡ-ಹೆಂಡತಿ  ಈ ಜಗತ್ತಿನಲ್ಲಿ ಇರಕ್ಕೆ ಸಾಧ್ಯಾನೆ ಇಲ್ಲಾ" ಅನ್ನೋ ತೀರ್ಮಾನಕ್ಕೆ ಬಂದೆ. ಅದು ವಸ್ತು ಸ್ಥಿತಿ. ಆದರೆ ಅದು ಯಾಕೆ ಹೀಗೆ ಅಂತ ಮತ್ತೆ ತಲೆಯಲ್ಲಿ ಕೊರೆತ ಶುರುವಾಯ್ತು. ಅದನ್ನೇ ಯೋಚನೆ ಮಾಡ್ತಾ ಮಾಡ್ತಾ ನನ್ನ ಅಲ್ಪ-ಸ್ವಲ್ಪ ಬುಧ್ಧಿಗೆ ಹೊಳೆದಿದ್ದು ಇಷ್ಟು.

ಹೆಣ್ಣಿನ ಮತ್ತು ಗಂಡಿನ ಸ್ವಭಾವ ಬೇರೆ ಬೇರೆ. ಹೆಣ್ಣು ಸ್ವಭಾವತಃ ತುಂಬಾ ಪ್ರಾಕ್ಟಿಕಲ್ಲಾಗಿ ಯೋಚನೆ ಮಾಡ್ತಾಳೆ. ಆದ್ರೆ ಗಂಡು ಬರೀ ಎಮೋಷನಲ್ ಅಥವಾ ಭಾವನಾತ್ಮಕ ಜೀವಿ. ಹಾಗಾಗಿ ಸ್ವಭಾವ ಜನ್ಯವಾದ ಅಭಿಪ್ರಾಯಭೇದಗಳು ಸಹಜವಾಗೇ ಇದೆ. 

ಹೆಣ್ಣಿನ ಸ್ವಭಾವ ನೋಡಿ. ತನ್ನ ಮನೆ, ತನ್ನ ಗಂಡ, ಮಕ್ಕಳು ಇವುಗಳ ಬಗ್ಗೆ ಅವಳ ಮೊದಲ ಚಿಂತೆ-ಕಾಳಜಿ. ಎಲ್ಲಾರೂ ಚೆನ್ನಾಗಿರಬೇಕು, ಆರೋಗ್ಯವಂತರಾಗಿರಬೇಕು, ಯೋಗ್ಯರಾಗಿರಬೇಕು, ಪ್ರಯೋಜಕರಾಗಿರಬೇಕು, ಹೀಗೆ ಹತ್ತು ಹಲವಾರು ಆಕಾಂಕ್ಷೆಗಳನ್ನು ಹೊತ್ತು ಸಂಸಾರ ನಡಸ್ತಾಳೆ. ತನ್ನ ಸಂಸಾರದ ಬಗ್ಗೆ ಯಾರೂ ಚಕಾರ ಎತ್ತಬಾರದು. ಮನೆಯ ಇತರೆ ಸದಸ್ಯರೂ ಸಹ, ಅಂದರೆ ಅತ್ತೆ, ಮಾವ, ನಾದಿನಿ, ಮೈದುನ, ಹೀಗೆ ಎಲ್ಲಾರೂ ಚೆನ್ನಾಗಿರಬೇಕು ಅಂತ ಅಪೇಕ್ಷೆಪಟ್ಟು, ಒಟ್ಟಾರೆ ತನ್ನ ಸಂಸಾರ ಮತ್ತು ಅದರ ಸದಸ್ಯರು ಆದರ್ಶವೇ ಮೂರ್ತವೆತ್ತಂತಿರಬೇಕು ಎನ್ನುವುದೇ ಅವಳ ಆಶಯ.  ಈ ಆಶಯ ನೆರವೇರುವುದಕ್ಕೆ ಅವಳು ಶತಾಯ ಗತಾಯ ಮತ್ತು ನಿರಂತರ ಪ್ರಯತ್ನ ಮಾಡ್ತಾನೆ ಇರ್ತಾಳೆ. ಅದನ್ನು ಸಾಧಿಸುವ ನೈತಿಕ ಹೊಣೆಯನ್ನು ತಾನೇ ತಾನಾಗಿ ತನ್ನ ಮೇಲೆ ಹೇರಿಕೊಂಡಿರುತ್ತಾಳೆ. ಅಷ್ಟೇ ಅಲ್ಲ ಮನೆಗೆ ಬಂದು ಹೋಗುವ ಬಂಧು ಮಿತ್ರರನ್ನೂ ಸಹ ಯಾವ ಲೋಪವೂ ಇಲ್ಲದಂತೆ ನೋಡಿಕೊಂಡು ಮನೆಯ ಮತ್ತು ಸಂಸಾರದ ಮರ್ಯಾದೆಯನ್ನು ಕಾಪಾಡಲು ಹೆಣಗಾಡುತ್ತಾಳೆ. ಎಲ್ಲರ ಅವಶ್ಯಕತೆಗಳನ್ನೂ ಸಮರ್ಪಕವಾಗಿ ಪೂರೈಸುವ ಹೊಣೆ ಹೊತ್ತಿರುತ್ತಾಳಾದ್ದರಿಂದ, ಎಲ್ಲರೂ ತಮ್ಮ ತಮ್ಮ ಅವಶ್ಯಕತೆಗಳ ಪೂರೈಕೆಗೆ ಅವಳ ಮೇಲೆ ಆಧಾರಪಟ್ಟಿರುತ್ತಾರೆ. ಮನೆಯ ಮುಂದೆ ಬರುವ ಭಿಕ್ಷುಕ ಸಹ" ಅಮ್ಮಾ ತಾಯೆ" ಅನ್ನುತ್ತಾನೆ ಹೊರತು "ಅಪ್ಪಾ" ಎಂದು ಎಂದಾದರೂ ಅಂದಿದ್ದು ಕಂಡಿದ್ದೀರಾ. ವ್ಯಾಪಕ ವಾಗಿ ಬಳಕೆಯಲ್ಲಿರುವ ಕಂಪ್ಯೂಟರ್ ಕಂಡುಹಿಡಿದಾತನೋ ಅಥವಾ ಬೇರೆ ಯಾರೋ ಅದರಲ್ಲಿರುವ ಮತ್ತು ಎಲ್ಲಾ ಮೌಸ್, ಕಿ ಬೋರ್ಡ್ ಮಾನಿಟರ್  ಮತ್ತು RAM  ನಂತಹ ಬಿಡಿಬಾಗಗಳೆಲ್ಲಾ, ತಮ್ಮ ಕಾರ್ಯ ಕ್ಷಮತೆಗಾಗಿ ಅಂಟಿಕೊಂಡಿರುವ ಒಂದು ಬೋರ್ಡ ಗೆ ' ಮಥರ್  ಬೋರ್ಡ" ಅಂತ ಎಷ್ಟು ಅರ್ಥಗರ್ಭಿತವಾಗಿ ಹೆಸರು ಇಟ್ಟಿದ್ದಾನೆಂದರೆ, ಈ ಹೆಣ್ಣಿನ ಮೇಲೆ ಅಥವಾ ತಾಯಿಯ ಮೇಲೆ ಅಧಾರಪಡುವ ಗುಣ ಮತ್ತು ಪರಿಪಾಟ, ವಿಶ್ವವ್ಯಾಪಿ ಎಂದರೆ ತಪ್ಪಾಗಲಾರದು.  

ಈ ರೀತಿ ಹೆಣ್ಣಿನ ಮೇಲೆ ಅಧಾರ ಪಡುವ ಅಥವಾ ಹೆಣ್ಣೇ ಬಹಳವಾಗಿ ಸಂಧರ್ಭಕ್ಕನುಸಾರವಾಗಿಯೋ ಅಥವಾ ಸ್ವಚ್ಚೆಯಿಂದಲೋ, ಎಲ್ಲಾ ಹೊಣೆಯನ್ನೂ ತಾನೆ ಹೊರುವ ಗುಣ ಪಶು ಪಕ್ಷಿಗಳಲ್ಲೂ ಒಂದು ಸೀಮಿತ ಮಟ್ಟಕ್ಕೆ ಕಾಣಬಹುದು. 

ಪ್ರತಿಯೊಬ್ಬ ಯಶಸ್ವೀ ಗಂಡಿನ ಹಿಂದೆ ಒಂದು ಹೆಣ್ಣು ಇರುತ್ತಾಳೆ" ಎನ್ನುವುದು ಇಂಗ್ಲೀಷ್ ನಾಣ್ನುಡಿ. ನಾಣ್ನುಡಿ ಸಾರ್ವಕಾಲಿಕ ಸತ್ಯವನ್ನೇ ನುಡಿಯುತ್ತದೆ. ಒಂದು ಗಂಡಿನ ಯಶಸ್ಸಿನ ಹಿಂದೆ ಒಂದು ಹೆಣ್ಣು ಸಕಾರಾತ್ಮಕವಾಗಿ ಅಂದರೆ ಪಾಸಿಟೀವ್ ಆಗಿ ಬೆಂಬಲಿಸುತ್ತಾಳೆ ಎಂಬುದು ಅರ್ಥ. ಆದರೆ ಒಂದು ಹೆಣ್ಣಿನ ಯಶಸ್ಸಿನ ಹಿಂದೆ, ವಿಡಂಬನಾತ್ಮಕವಾಗಿ ಒಂದು ಗಂಡಿನ ನೆಗಟೀವ್ ಗ್ರೋತ್ ಅಥವಾ ಸೋಲು ಅಥವಾ ಕ್ರಿಯಾಹೀನತೆ ಕಾರಣವಾಗಿರುತ್ತದೆ. 

ಸಂಸಾರದ ಬಂಡಿಗೆ ಗಂಡ-ಹೆಂಡಿರು ಜೋಡಿ ಎತ್ತುಗಳಹಾಗೆ ಅಂತಾರೆ. ಆದರೆ ನೀವು ಯಾವುದಾದರೂ ಸಂಸಾರವನ್ನು ತೆಗೆದುಕೊಳ್ಳಿ, ಅಲ್ಲಿ ಹೆಣ್ಣು ತುಂಬಾ ಪ್ರಾಕ್ಟಿಕಲ್ ಆಗಿ, ವಾಸ್ತವವಾದಿ ಅಥವಾ ಆದರ್ಶವಾದಿಯಾಗಿರ್ತ್ತಾಳೆ. ಆದರೆ ಗಂಡು ಯೂಫೋರಿಕ್ ಅಥವಾ ಭ್ರಮೆ ಅಥವಾ ಭಾವನಾಲೋಕದಲ್ಲಿ ಇರುತ್ತ್ತಾನೆ. ಇದು ನೂರಕ್ಕೆ 95 % ಸತ್ಯ. ಯಾವುದೇ ಸಂಸಾರದಲ್ಲಿ ಗಂಡು ಬೇಜವಾಬುದಾರಿಯಿಂದ ವರ್ತಿಸಿ ಸಂಸಾರದೆಡೆಗೆ , ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸದೇ ಇದ್ದಲ್ಲಿ " ಹೆಣ್ಣು" ಸ್ವಯಂಪ್ರೇರಣೆಯಿಂದ ಆ ಜವಾಬುದಾರಿಯನ್ನು ಹೊತ್ತು ಸಮರ್ಪಕವಾಗಿ ನಿಭಾಯಿಸಿ, ಆ ಸಂಸಾರವನ್ನು ದಡ ಮುಟ್ಟಿಸುತ್ತಾಳೆ. ಆದರೆ ಹೆಣ್ಣೇನಾದರೂ ( ಹಾಗೆ ಆಗುವ ಸಂಧರ್ಭಗಳು ತೀರ ಕಡಿಮೆ) ದಾರಿ ತಪ್ಪಿ ತನ್ನ ಸಂಸಾರವನ್ನು ಕೈ ಬಿಟ್ಟರೆ, ಗಂಡೂ ಸೋತು, ಮಕ್ಕಳೆಲ್ಲಾ ಹಾದಿ ತಪ್ಪಿ, ಸಂಸಾರ ಛಿದ್ರ ಛಿದ್ರವಾಗುತ್ತದೆ. ಏಕೆಂದರೆ ಗಂಡಿಗೆ ಹೆಣ್ಣೇ ಬಲ. 

ಮೇಲ್( Male )  ಅಂದರೆ ಗಂಡು.  ಫಿಮೇಲ್ (Female ) ಅಂದರೆ ಹೆಣ್ಣು. ಎಲ್ಲರಿಗೂ ಗೊತ್ತಿರುವ ವಿಚಾರಾನೆ  ಅಂತೀರಾ. ಆದ್ರೆ ಅರ್ಥಮಾಡಿಕೊಳ್ಳಬೇಕಾದ್ದು  ಏನಂದರೆ, ಮೇಲ್( Male ) ಹಿಂದೆ ಎಫ್ ಇ (Fe) ಸೇರಿಸಿದರೆ ಅದು Female ಅಂದರೆ ಹೆಣ್ಣು ಎಂದರ್ಥ. Fe ಅಂದರೆ Chemistry ಅಂದರೆ ರಸಾಯನ ಶಾಸ್ತ್ರದಲ್ಲಿ ಉಕ್ಕು ಅಥವಾ ಕಬ್ಬಿಣ ಎಂದರ್ಥ. ಅನ್ವರ್ಥವಾಗಿ ಗಂಡಿನ ಹಿಂದೆ ಉಕ್ಕು ಅಥವಾ ಕಬ್ಬಿಣದ ರೀತಿ ಗಟ್ಟಿಯಾಗಿ ನಿಲ್ಲುವವಳೇ ಹೆಣ್ಣು ಎಂದು ಅರ್ಥವಾಗಲಿಲ್ಲವೇ. 

ಹಾಗೆಯೇ Man ಅಂದರೆ ಗಂಡು woman ಅಂದರೆ ಹೆಣ್ಣು. ಈ woman ಅನ್ನುವ ಪದದಲ್ಲಿ ಒಂದು man ಅನ್ನುವ ಭಾಗದ ಹಿಂದೆ ಇರುವುದು Wo.ಈ  Wo ವನ್ನು ವಿಶ್ಲೇಸಿದಾಗ ಗೋಚರವಾಗುವುದು Welfare of ಅಥವಾ ಯೋಗಕ್ಷೇಮ ಎಂದರ್ಥ ಅಂದರೆ ಗಂಡಿನ (Man) ಯೋಗಕ್ಷೇಮವನ್ನು ನೋಡಿಕೊಳ್ಳುವವಳೇ ಹೆಣ್ಣು ( Wo man) ಎಂದರ್ಥವಲ್ಲವೇ? 

ಅದೇ ಗಂಡನ್ನು ನೋಡಿ . ದುಡೀತಾನೆ, ಹಣ ಸಂಪಾದನೆ ಮಾಡ್ತಾನೆ, ಅಂಗಡಿ ಇಂದ ಸಾಮಾನು ಸರಂಜಾಮುಗಳನ್ನೆಲ್ಲ ತರ್ತಾನೆ, ತಾನೇ ಮನೇನ ನೋಡ್ಕೋತಾ ಇದ್ದೀನಿ ಅಂದ್ಕೊಂಡಿರುತ್ತಾನೆ. ಆದರೆ  ಇವನ ಎಲ್ಲ ಕಾರ್ಯ ಕೆಲಸಗಳು ಮನೆಯಲ್ಲಿರುವ ಹೆಣ್ಣಿನ ಮೇಲೆ ಆಧಾರಗೊಂಡಿರುತ್ತೆ.  ಅವಳಿಲ್ಲದೆ ಇದ್ದರೆ ಇವನಿಗೆ ಜೀವಿಸುವ ಯಾವ ಆಸ್ಥೆ-ಆಸೆಗಳೂ ಇರಕ್ಕೆ ಸಾಧ್ಯವೇ ಇಲ್ಲ. 

ಮೇಲೆ ಹೇಳಿದ ಯಾವುದನ್ನೂ ಸಾಮಾನ್ಯವಾಗಿ ಯಾವ ಗಂಡಸೂ ಒಪ್ಪಿಕೊಳ್ಳುವುದೇ ಇಲ್ಲ. ಅದು ಅವನ ಸ್ವಭಾವ. ಗಂಡಿನ ಹಿರಿಮೆ, ಅಹಂ, ಅಧಿಕಾರ, ಕ್ಷಮತೆ, ಅಧಿಕಾರ, ದರ್ಪ, ದಬ್ಬಾಳಿಕೆ, ಹೀಗೆ ಎಲ್ಲಕ್ಕೂ ಹೆಣ್ಣು ಇದ್ದರೇನೆ " ಬಲ" ಇಲ್ಲದಿದ್ದರೆ ಅವಕ್ಕೆಲ್ಲ "ಬರ" ಹಾಗಾಗಿ 

                            ಹೆಣ್ಣೇ ನಿನಗೆ ನಮೋ ನಮಃ 


ರವಿ ತಿರುಮಲೈ

5 comments:

  1. ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ.
    ಎರಡು ವ್ಯಕ್ತಿಗಳು ಅಂದ್ರೆ, ಎರಡು ವಿಭಿನ್ನ ವ್ಯಕ್ತಿತ್ವಗಳು.ಎರಡು ಸರಳ ರೇಖೆಗಳು. ಅವು ಎಲ್ಲಿಯೋ ಕೆಲವೊಂದು ಬಿಂದುಗಳಲ್ಲಿ ಮಾತ್ರ ಬಾಗಿ ,ಬಳುಕಿ ಒಂದಾಗುತ್ತವೆಯೇ ಹೊರತು ನಿರಂತರವಾಗಿ ಎರಡು ಒಂದೇ ಆಗಿ ಮುನ್ನಡೆಯುವುದು ಸಾಧ್ಯವಿಲ್ಲ.

    ReplyDelete
  2. ಈ ಲೇಖನದಲ್ಲಿ ಪ್ರಸ್ತಾವಿಸಿದಂತೆ ಸಂಸಾರನೊಗದಲ್ಲಿ ಆಕೆ ಪ್ರಶ್ನಿಸುವ ಯಜಮಾನಿ ನಾವು ಉತ್ತರಿಸಲೇ ಬೇಕಾದ ಪತಿ ದೇವರುಗಳು (!). ಏಕೆಂದರೆ ಹೆಣ್ಣು ಮಾನಸಿಕವಾಗಿ ಪುರುಷನಿಗಿಂತ ಹತ್ತಾರು ವರ್ಷ ಮಾನಸಿಕವಾಗಿ ಹಿರಿಯಳು ಅಂತ ವಿಜ್ಞಾನ ಹೇಳುತ್ತಾ ಬಂದಿದೆ ಅಲ್ವೇ?

    ಮುಖ್ಯವಾಗಿ ಸಂಪೂರ್ಣ ಅರ್ಥ ಮಾಡಿಕೊಳ್ಳುವುದು ನನ್ನ ವಾದಕ್ಕೆ ಸಾಧ್ಯವೇ ಇಲ್ಲದ ವಸ್ತು, ನೀವು ಏನಂತೀರೋ?

    ಆದರೂ ಗೃಹಲಕ್ಷ್ಮಿಗೆ ಶರಣಾದರೆ ಸಕಲ ಸುಖ ಸೌಕರ್ಯಗಳೂ ಪ್ರಾಪ್ತ ಅಲ್ವೇ ಗುರುಗಳೇ?

    ಉತ್ತಮ ಲೇಖನ ಕೊಟ್ಟಿದ್ದೀರಿ, ನೀವು ತಣ್ಣಗಿರಿ.

    ReplyDelete
  3. ಈ ಲೇಖನಕ್ಕಾಗಿ ಅನಂತ ಧನ್ಯವಾದಗಳು ಸರ್.
    ಸ್ವರ್ಣಾ

    ReplyDelete
  4. ಏನ್ ರವಿ ಸರ್ ಇದು, ಹೀಗಂದುಬಿಟ್ರೆ ನಮ್ಮ ಗಂಡು ಜನ್ಮಕ್ಕೆ ಹೇಗಾಗಬೇಡ..;) ಅದಿರಲಿ ಈ ಅತೀ ಬುದ್ಧಿವಂತ, ತರಲೆ ತಿರುಮಲೈ ಯಾರು ಅಂತಾನೇ ಗೊತ್ತಾಗ್ಲಿಲ್ಲ..;) ತಮಾಷೆಗಾಗಿ..
    ಮೊದಲು ಬರಹದ ಆರಂಭವನ್ನು ಗಮನಿಸಿದ ನನಗೆ ಬರಹಗಾರ ತನ್ನ ತಲೆ ಬರಹಕೆ ಹೇಗೆ ನ್ಯಾಯ ಒದಗಿಸುತ್ತಾನೆ, ವಿಷಯದ ವಿಸ್ತಾರ ಹೇಗಾಗಬಹುದು ಎಂಬ ನನ್ನ ಕುತೂಹಲಕ್ಕೆ ಅರ್ಥಪೂರ್ಣವಾದ ಲೇಖನದೊಂದಿಗೆ ಉತ್ತರಿಸಿದ್ದೀರಿ.. ಹೆಣ್ಣಿನ ಕಾರ್ಯದಕ್ಷತೆಗಿಂತ ನನ್ನನ್ನು ತುಂಬಾ ಕಾಡುವ ಒಂದು ಅಂಶ ಅವಳ ದೃಢವಾದ ಸಂಕಲ್ಪ ಮತ್ತು ಏನಾದರಾಗಲಿ, ಹೇಗಾದರಾಗಲಿ ಗೆದ್ದೇ ತೀರುತ್ತೇನೆ ಎಂಬ ಛಲ.. ಅದೇ ಒಂದು ಗಂಡಿನ ಆತ್ಮಬಲವನ್ನು ಹೆಚ್ಚಿಸಿ ಗಂಡನ್ನು ಒಬ್ಬ ಶಕ್ತಿಶಾಲಿಯಾಗಿ ನಿಲ್ಲುವಂತೆ ಮಾಡುತ್ತದೆ.. ಆದ್ದರಿಂದಲೆ ನೀವು ಹೇಳಿದ "ಪ್ರತಿಯೊಬ್ಬ ಯಶಸ್ವೀ ಗಂಡಿನ ಹಿಂದೆ ಒಂದು ಹೆಣ್ಣು ಇರುತ್ತಾಳೆ" ನಾಣ್ನುಡಿ ಹುಟ್ಟಿರಬಹುದು.. ನೀವು ಹೇಳಿದ ’ಹೆಣ್ಣು ಯಾವಾಗಲೂ ಪ್ರಾಕ್ಟಿಕಲ್ ಆಗಿ ಯೋಚಿಸುತ್ತಾಳೆ ಮತ್ತು ಗಂಡು ಭಾವನಾತ್ಮಕ ಜೀವಿ’ ಎಂಬ ಮಾತು ಅಕ್ಷರಶಃ ನಿಜ.. ಗಂಡಿನ ಹಿಂದೆ ನಿಂತು ಅವನ ’ಬಲ’ ಕ್ಕೆ ಒತ್ತಾಸೆಯಾಗಿ ನಿಂತಿರುವ ಹೆಣ್ಣಿಗೆ ನನ್ನ ಕಡೆಯಿಂದಲೂ ನಮೋ ನಮಃ..:)

    ReplyDelete