Thursday 21 June 2018

ಪ್ರಾರ್ಥನೆ ಮತ್ತು ಪೂಜೆ




ಪ್ರಾರ್ಥನೆ 

ಮೂಲತತ್ವದಲ್ಲಿ ಪ್ರಾರ್ಥನೆಯೆಂದರೆ, ನಮಗಿಂತ ಉನ್ನತ ಅಥವಾ ಹೆಚ್ಚಿನ ಶಕ್ತಿಯಿಂದ ಅಥವಾ ಶಕ್ತಿಯಿರುವ ವ್ಯಕ್ತಿಯಿಂದ ಏನನ್ನಾದರೂ ಬೇಡುವುದು ಅಥವಾ ಬಯಸುವುದು ಮತ್ತು ಪೂಜೆಯೆಂದರೆ, ಅಂತ ಉನ್ನತ ಶಕ್ತಿಗೆ ನಾವು ಏನನ್ನಾದರೂ ನೀಡುವುದು ಅಥವಾ ಸಮರ್ಪಿಸಿಕೊಳ್ಳುವುದು. ಇಲ್ಲಿ ನಾವು ಪರಮಾತ್ಮ ಅಥವಾ ಪರತತ್ವವನ್ನು ಅಂತಹ ಉನ್ನತ ಶಕ್ತಿಯೆಂದು ಪರಿಗಣಿಸಬೇಕು.  ಹಾಗಾಗಿ ನಾವು ಇಲ್ಲಿ ಕೇವಲ ಪ್ರಾರ್ಥನೆ ಮತ್ತು ಪೂಜೆಯ ಆಧ್ಯಾತ್ಮಿಕ ಆಯಾಮವನ್ನು ಮಾತ್ರ ವಿಚಾರಮಾಡಬೇಕಾಗಿದೆ.   

ಬದುಕಿನ ಸಂಕಷ್ಟದ ಸಮಯದಲ್ಲಿ, ಪರಿಹಾರದ ಎಲ್ಲಾ ಬಾಗಿಲುಗಳೂ ಮುಚ್ಚಿಹೋಗಿವೆ ಎಂದೆನಿಸುವಾಗ, ದೈವದ ಸಹಾಯದಿಂದ ಅಂತಹ ಸಂಕಷ್ಟಗಳಿಂದ ಪಾರಾಗಲು ಬಯಸಿ, ಪ್ರತಿಯೊಬ್ಬರೂ ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ. ಹಾಗಾಗಿ ಪ್ರಾರ್ಥನೆಗೆ ಮೂಲ ಕಾರಣ ನಮ್ಮ ಬೇಡಿಕೆಗಳು ಮತ್ತು ಅಸಹಾಯಕತೆ.  ನಮ್ಮ ಮೂಲ ಸ್ವಭಾವದ, ಅಜ್ಞಾನ ಅಥವಾ ಅರಿವಿನ ಕೊರತೆಯಿಂದ ನಮ್ಮ ಮನಸ್ಸುಗಳಲ್ಲಿ ಪ್ರಾರ್ಥನೆ ಹೊರಹೊಮ್ಮುತ್ತದೆ ಮತ್ತು ನಮ್ಮನ್ನು ನಾವು ತಪ್ಪುತಪ್ಪಾಗಿ ನಮ್ಮ ಈ ದೇಹ ಮತ್ತು ಮನಸ್ಸುಗಳೊಂದಿಗೆ ಗುರುತಿಸಿಕೊಳ್ಳುವುದರಿಂದ ನಮಗೆ ಅಸಹಾಯಕತೆಯ ಅನುಭವವಾಗುತ್ತದೆ.  ನಾವು ಪ್ರಾರ್ಥನೆಯನ್ನು ಮಾಡುವ  ರೀತಿ ನಮ್ಮ ಅರಿವಿನ ಮಟ್ಟವನ್ನು ತೋರುತ್ತದೆ. " ಓ! ದೇವರೇ ಈ ನೋವಿನಿಂದ ಮುಕ್ತಿಯನ್ನು ನೀಡು" ಎಂದು ಬೇಡಿದರೆ, ನಮ್ಮ ದೇಹದೊಟ್ಟಿಗಿನ ಅಂಟನ್ನು ತೋರುತ್ತದೆ.  " ಓ! ದೇವರೇ ನಾ ಬರೆಯುತ್ತಿರುವ  ಕಾದಂಬರಿ ಅಥವಾ ನಾ ಚಿತ್ರಿಸುತ್ತಿರುವ ಚಿತ್ರ ಅಥವಾ ಕೆತ್ತುತ್ತಿರುವ ಮೂರ್ತಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಶಕ್ತಿಯನ್ನು ನೀಡು" ಎಂದು ಬೇಡಿದರೆ, ಅದು ನಮ್ಮ ಮನಸ್ಸಿನೊಂದಿಗಿನ ಅಂಟನ್ನು ತೋರುತ್ತದೆ.   ಇಲ್ಲಿ ಎರಡನೆಯ ಪ್ರಾರ್ಥನೆ ಮೊದಲೆನಯದಕ್ಕಿಂತ ಉತ್ತಮವಾದರೂ, ಎರಡೂ ಸಂದರ್ಭಗಳಲ್ಲಿ , ಬೇಡುವುದು ವೈಯಕ್ತಿಕ ಲಾಭಕ್ಕಾಗಿ ಎಂದು ತಿಳಿಯುತ್ತದೆ. ಹಾಗಾಗಿ ಇಂತಹ ಪ್ರಾರ್ಥನೆಗಳು ನಮ್ಮ ಆಧ್ಯಾತ್ಮಿಕ  ಹಾದಿಯ ಆರಂಭಿಕ ಸ್ಥರದ ಪ್ರಾರ್ಥನೆಗಳಾಗುತ್ತವೆ.  



ಒಬ್ಬ ವ್ಯಕ್ತಿ ಆಧ್ಯಾತ್ಮಿಕವಾಗಿ ಬೆಳೆಯುತ್ತಿರುವಾಗ ಅವನ ಪ್ರಾರ್ಥನೆಯ ಸ್ವರೂಪವೂ ಬದಲಾಗುತ್ತಾ ಹೋಗುತ್ತದೆ.  ಉದಾಹರಣೆಗೆ, ಹಣದ ವ್ಯವಹಾರದಲ್ಲಿ ಸುಳ್ಳು ಆರೋಪಕ್ಕೆ ಬಲಿಯಾದ ನೆರೆಮನೆಯಾತನ ಕಷ್ಟಕ್ಕೆ ಸ್ಪಂದಿಸಿ " ಓ! ದೇವರೇ ನಮ್ಮ ನೆರೆಮನೆಯಾತ ಬಹಳ ನಿಷ್ಠಾವಂತ ಮತ್ತು ಪ್ರಾಮಾಣಿಕ, ಅವನಿಗಿರುವ ಪೊಲೀಸರ ತೊಂದರೆಯಿಂದ ಅವನನ್ನು ಪಾರುಮಾಡು ತಂದೇ "  ಎಂದು ಪ್ರಾರ್ಥನೆ ಮಾಡಿದರೆ ಅಥವಾ ಯುವಕನೊಬ್ಬ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಾಗ  "ಓ ! ಪರಮಾತ್ಮ ಆ ಮಗುವನ್ನು ಕಾಪಾಡು,  ಅವನಿನ್ನೂ ಚಿಕ್ಕವನು" ಎಂದು ಪ್ರಾರ್ಥಿಸಿದರೆ, ನಮ್ಮ ಪ್ರಾರ್ಥನೆ ಪರರಿಗಾಗಿ ಆಗಿ, ಅದರ  ಸ್ವರೂಪ ಬದಲಾಗುತ್ತದೆ ಮತ್ತು ಪ್ರಾರ್ಥನೆಯ ಸ್ವರೂಪ ವಿಶಾಲವಾಗುತ್ತದೆ. ನಮ್ಮ ಪ್ರಾರ್ಥನೆಯ ಕಾರಣವನ್ನು ಮತ್ತಷ್ಟು ವಿಶಾಲಗೊಳಿಸಿಕೊಂಡರೆ ನಾವು ಯುದ್ಧ ಅಥವಾ ಪ್ರಕೃತಿಯ ವಿಕೋಪದ ಸಮಯದಲ್ಲಿ ಇಂತಹ ಸಾಮೂಹಿಕ ಪ್ರಾರ್ಥನೆಯನ್ನು ಮಾಡುವುದನ್ನು ಕಾಣುತ್ತೇವೆ.  ಹೀಗೆ, ನಾವು ಮಾಡುವ ಪ್ರಾರ್ಥನೆ , ಸ್ವಾರ್ಥದಿಂದ ಪರಾರ್ಥದೆಡೆಗಿನ ಬೆಳವಣಿಗೆಯ ಮಟ್ಟವನ್ನು ತೋರುತ್ತದೆ. ಎಲ್ಲರ ಒಳಿತನ್ನು ಬಯಸುವ ಪ್ರಾರ್ಥನೆಯೇ ಉತ್ತಮವಾದ ಪ್ರಾರ್ಥನೆ.   


ಮೂರನೆಯದಾಗಿ,  ವ್ಯಕ್ತಿ ಪ್ರಾರ್ಥನೆಯಿಂದ ಹಂತ ಹಂತವಾಗಿ ತನ್ನಂತರಂಗದಲ್ಲಿ ಬೆಳೆಯಬಹುದು. ಒಬ್ಬ ವ್ಯಕ್ತಿ ಖಾಯಿಲೆ ಬಂದಾಗ, ಪ್ರಾರ್ಥನೆಯನ್ನು ಮಾಡದೆ, ವೈದ್ಯರಲ್ಲಿ ಹೋಗಿ ಶುಶ್ರೂಷೆ ಪಡೆಯುತ್ತಾನೆ. ಪರ್ಯಾಯ ಮಾರ್ಗಗಳಿರುವಾಗ ಅವನು ಪರಿಹಾರಕ್ಕಾಗಿ ದೇವರಲ್ಲಿ ಪ್ರಾರ್ಥನೆಯನ್ನು ಮಾಡುವುದಿಲ್ಲ. ನಾಲ್ಕನೆಯದಾಗಿ ಒಬ್ಬ ವ್ಯಕ್ತಿಯ ಅಂತರಂಗದಲ್ಲಿ ವಿವೇಕ ಬೆಳೆದಂತೆಲ್ಲಾ, ಅವನಿಗೆ, ಎಂದಾದರೂ ನಾಶವಾಗುವ ಈ ದೇಹಕ್ಕೆ ಸಂಬಂಧಿಸಿದ, ಆರೋಗ್ಯ, ಸಂಪತ್ತು ಮತ್ತು ಅಧಿಕಾರಗಳನ್ನು ಪರಮಾತ್ಮನಲ್ಲಿ ಬೇಡುವುದು  ತೀರಾ ಕ್ಷುಲ್ಲಕವೆನಿಸುತ್ತದೆ.  ಸೂಕ್ತಾಸೂಕ್ತತೆಗಳ ತರತಮ ಜ್ಞಾನದಿಂದ ಪ್ರಾರ್ಥನೆಯ ಹೊಸ ಆಯಾಮಗಳು ಗೋಚರವಾಗಿ,  ಸಾಧಕ ಪರಮಾತ್ಮನಲ್ಲಿ 'ಶಾಶ್ವಥ' ವಾದದ್ದನ್ನೇನಾದರೂ ಬೇಡುತ್ತಾನೆ.   " ಓ! ದೇವರೇ ಧನ ಕನಕಗಳು ಬೇಡ, ನಿನ್ನಲ್ಲಿ ಭಕ್ತಿಯನ್ನು ನೀಡು " ಎಂದು ಬೇಡಲುದ್ಯುಕ್ತನಾಗುತ್ತಾನೆ. ಅಂತಹ ಪ್ರಾರ್ಥನೆಯೇ ನಿಜವಾದ ಆಧ್ಯಾತ್ಮಿಕ ಪ್ರಾರ್ಥನೆಯಾಗುತ್ತದೆ. 

ಇಲ್ಲಿ ಸ್ವಾಮಿ ವಿವೇಕಾನಂದರ ಬದುಕಿನ ಒಂದು ದೃಷ್ಟಾಂತವನ್ನು ನೀಡುವುದು ಅವಶ್ಯವೆನಿಸುತ್ತದೆ. ಸ್ವಾಮೀ ವಿವೇಕಾನಂದರು ಬಹಳ ಸಣ್ಣವರಾಗಿದ್ದಾಗಲೇ ಅವರ ತಂದೆ  ಸಂಸಾರವನ್ನು ಸಾಲ ಮತ್ತು ಸಂಕಟದಲ್ಲಿ ಬಿಟ್ಟು, ತೀರಿಕೊಂಡರು. ಆ  ಸಂದರ್ಭದಲ್ಲಿ ಅವರ ಬಂಧುಗಳೆಲ್ಲಾ, ನರೇಂದ್ರನಿಗೆ ಸಹಾಯಮಾಡುವುದನ್ನು ಬಿಟ್ಟು, ತಮಗೆ  ದಕ್ಕಬೇಕಾದ್ದನ್ನು ಬಾಚಿಕೊಂಡು, ನರೇಂದ್ರನ ಕುಟುಂಬವನ್ನು ನಿರ್ಗತಿಕರನ್ನಾಗಿಸಿ, ದೂರಾದರು. ತನ್ನ ಕುಟುಂಬವನ್ನು ಪೋಷಿಸಲು ನರೇಂದ್ರನಿಗೆ ಯಾವುದೇ ಉದ್ಯೋಗವೂ ದೊರೆಯಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನರೇಂದ್ರನು ತನ್ನ ಗುರುವಾದ ಶ್ರೀ ರಾಮಕೃಷ್ಣ ಪರಮಹಂಸರಲ್ಲಿ ಹೋಗಿ, " ಸ್ವಾಮೀ, ತಾವು ದಯಮಾಡಿ, ನಮ್ಮ ಮನೆಗೆ ಬೇಕಾಗುವಷ್ಟು ಬಟ್ಟೆಬರೆ ಮತ್ತು ದವಸ ಧಾನ್ಯವನ್ನು ಅನುಗ್ರಹಿಸುವಂತೆ, ಆ ' ತಾಯಿ' ಯಲ್ಲಿ ನನಗಾಗಿ ಪ್ರಾರ್ಥಿಸಿ. ನಿಮ್ಮ ಪ್ರಾರ್ಥನೆಯನ್ನು ಆ ತಾಯಿ ಖಂಡಿತ ಮನ್ನಿಸುವಳೆಂದು ನನಗೆ ಸಂಪೂರ್ಣ ಭರವಸೆಯಿದೆ" ಎಂದು ಬೇಡಿದನಂತೆ.  

ಆದರೆ ರಾಮಕೃಷ್ಣರ ಮನದಲ್ಲಿ ಬೇರೆಯೇ ಯೋಜನೆಯಿದ್ದಿರಬಹುದು. ಅವರು ನರೇಂದ್ರನನನ್ನು ಕುರಿತು, " ಮಗೂ, ನಾನು ನನ್ನ ಎಲ್ಲವನ್ನೂ ಆ ತಾಯಿಗೆ ಸಮರ್ಪಿಸಿಬಿಟ್ಟಿದ್ದೇನೆ. ಒಮ್ಮೆ ಕೊಟ್ಟದ್ದನ್ನು ಮತ್ತೆ ಹಿಂತಿರುಗಿ ಬೇಡುವುದು ಹೇಗೆ ಸಾಧ್ಯ? ಆದರೆ ಒಂದು ಮಾತನ್ನು ಹೇಳಬಲ್ಲೆ, ನೀನೆ ಏಕೆ ಆ ತಾಯಿಯ ಮುಂದೆ ಹೋಗಿ ನಿನ್ನ ಅವಶ್ಯಕತೆಗಳನ್ನು ನೀಡೆಂದು ಬೇಡಬಾರದು? ನನ್ನ ತಾಯಿ ಬಹಳ ದಯಾಳು. ನಿನಗೆ ನಿರಾಶೆಯಾಗದು ಎಂದು ನನಗನ್ನಿಸುತ್ತದೆ." ಎಂದರಂತೆ.  

ಹೀಗೆ ಸ್ವಾಮೀ ವಿವೇಕಾನಂದರಿಗೆ ಆ ತಾಯಿಯಲ್ಲಿ ತನಗೆ ಬೇಕಾದುದನ್ನು ಬೇಡುವ ಪರಿಸ್ಥಿತಿಗೆ ಬಲವಂತದಿಂದ ದೂಡಲಾಯಿತು. ಅಂದು ರಾತ್ರಿ ' ಕಾಳಿ ದೇವಾಲಯ' ದಲ್ಲಿ ರಾಮಕೃಷ್ಣರು  ಮತ್ತು  ವಿವೇಕಾನಂದರು, ಇಬ್ಬರೇ ಇದ್ದರು. ವಿವೇಕಾನಂದರು ತನ್ನ ತುರ್ತು ಅವಶ್ಯಕತೆಗಳನ್ನು ಬೇಡುವ ಸಲುವಾಗಿ ತಾಯಿಯ ದೇವಾಲಯದೊಳಕ್ಕೆ ಹೋದರು. ಆದರೆ ದೇವಾಲಯದೊಳಕ್ಕೆ ಕಾಲಿಟ್ಟೊಡನೆಯೇ "ಓ!! ಮಾತೆ ನನಗೆ 'ಜ್ಞಾನ ಮತ್ತು ಭಕ್ತಿ ' ನೀಡು ಎಂದಷ್ಟೇ ಪ್ರಾರ್ಥನೆ ಸಲ್ಲಿಸಿ ರಾಮಕೃಷ್ಣರು ಇದ್ದಲ್ಲಿಗೆ ಬಂದು ಸೇರಿದರಂತೆ.  ಗುರುವು " ನರೇಂದ್ರ, ನಿನ್ನ ಕುಟುಂಬಕ್ಕೆ ಬೇಕಾದ ಆಹಾರ ಮತ್ತು ಹಣವನ್ನು ತಾಯಿಯಲ್ಲಿ ಬೇಡಿದೆಯೇನು" ಎಂದರಂತೆ. ತನ್ನ ವರ್ತನೆಯಿಂದ ಚಕಿತನಾದ ನರೇಂದ್ರ " ಇಲ್ಲ ಗುರುಗಳೇ ನಾನು ಕೇವಲ ಜ್ಞಾನ ಮತ್ತು ಭಕ್ತಿ ' ಯನ್ನು ಮಾತ್ರ ಬೇಡಲಾಯಿತು." ಎಂದರಂತೆ.  

"ಅಯ್ಯೋ ಪೆದ್ದ ! " ಗುರುಗಳಂದರಂತೆ " ಹೋಗು, ಮತ್ತೆ ಹೋಗಿ ಆ ತಾಯಿಯಲ್ಲಿ ನಿನಗೇನು ಬೇಕೋ ಅದನ್ನು ನೀಡೆಂದು ಪ್ರಾರ್ಥನೆ ಮಾಡು " ಎಂದರಂತೆ. ನರೇಂದ್ರ ಮೂರುಬಾರಿ ಆ ತಾಯಿಯ ದೇವಾಲಕ್ಕೆ ಹೋದಾಗಲೂ, ತನ್ನ ಕುಟುಂಬಕ್ಕೆ ಬೇಕಾದ ದುಡ್ಡು, ಬಟ್ಟೆ ಮತ್ತು ಆಹಾರಗಳನ್ನು ಬೇಡದೆ ಕೇವಲ ' ಜ್ಞಾನ ಮತ್ತು  ಭಕ್ತಿ ' ಮಾತ್ರ ಬೇಡಿ ಹೊರಬಂದರಂತೆ. 


ಸ್ವಾಮಿ ವಿವೇಕಾನಂದರು ಆ ದೇವಾಲಯದೊಳಗೆ ಪ್ರವೇಶಿಸುತ್ತಿದ್ದಂತೆ ಅವರಿಗೆ ಒಂದು ರೀತಿಯ ಉನ್ನತ ಪ್ರಜ್ಞೆ ಜಾಗೃತವಾಗಿ , ಈ ಜಗತ್ತು ಮತ್ತು ಈ ಜಗತ್ತಿನ ವಸ್ತುಗಳಾದ ಹಣ, ಭೌತಿಕ ಐಷಾರಾಮಗಳು, ಆಹಾರ ಮುಂತಾದವುಗಳೆಲ್ಲ ಗೌಣವಾಗಿ ಕಂಡು, ಆ ತಾಯಿ ಕಾಳಿಕಾದೇವಿ, ತನ್ನ ದೈವೀ ಕೃಪೆಯನ್ನು ತೋರುತ್ತಾ ಇವರಿಗೆ ಜ್ಞಾನ ಮತ್ತು ಭಕ್ತಿಯನ್ನು ದಯಪಾಲಿಸಲು ಸಿದ್ಧಳಾಗಿ  ನಿಂತಂತೆ ಕಾಣುತ್ತಿದ್ದಳು. ಜ್ಞಾನವನ್ನು ದಯಪಾಲಿಸಲು ಸಿದ್ಧಳಾದ ಆ ಕರುಣಾಮಯಿ ತಾಯಿಯೆದುರು ಯಾವ ಮೂರ್ಖನಾದರೂ ಈ ಜಗತ್ತಿನ ನಶ್ವರವಾದ ವಸ್ತುಗಳನ್ನು ಬೇಡುತ್ತಾನೆಯೇ? ಮುತ್ತುರತ್ನಗಳನ್ನು ನೀಡಲು ಸಿದ್ಧನಾದವನ ಬಳಿ ಯಾರಾದರೂ ಗಾಜಿನ ಗೋಲಿಗಳನ್ನು ಬೇಡುತ್ತಾರೆಯೇ? ಇಡೀ ಸಾಮ್ರಾಜ್ಯವನ್ನೇ ನೀಡಲು ತಯಾರಿರುವ ರಾಜನ ಬಳಿ ಯಾರಾದರೂ ಹಣ್ಣು ತರಕಾರಿಗಳನ್ನು ಬೇಡುತ್ತಾರೆಯೇ?  


ಪ್ರಾರ್ಥನೆಯ ವಿಕಾಸ  

ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ. ನನ್ನಲ್ಲಿ ನಾಲ್ಕು ವಿಧವಾದ ಜನರ ಬೇಡುತ್ತಾರೆ. ೧) ಸಂಕಷ್ಟದಲ್ಲಿರುವವರು ೨) ಅವಶ್ಯಕತೆಗಳಿರುವವರು ೩) ಕುತೂಹಲಿಗಳು ಮತ್ತು ೪) ಜ್ಞಾನಿಗಳು. ಇವರಲ್ಲಿ ಮೊದಲನೆಯ ಗುಂಪಿನವರು, ಕೇವಲ ಸಂಕಷ್ಟ ಮತ್ತು ಅಸಹಾಯಕತೆಯಿಂದ ಬೇಡುತ್ತಾರೆ, ಇವರನ್ನು ಕ್ಷಮಿಸಬಹುದು. ಇನ್ನು ಎರಡನೆಯ ಗುಂಪಿನವರು ತಮ್ಮ ಬಯಕಗಳು ಈಡೇರದಿರುವಾಗ " ಹೇ! ಪ್ರಭು ನನ್ನ ಬಳಿ ನನ್ನ ಕುಟುಂಬದ ಪೋಷಣೆಗೆ ಸಾಕಷ್ಟು ಹಣವಿಲ್ಲ, ಹಾಗಾಗಿ ನನ್ನ ಸಂಬಳ ಹೆಚ್ಚುವಂತೆ ಅಥವಾ ನನಗೆ ಬಡ್ತಿಯನ್ನು ದಯಪಾಲಿಸು" ಎಂದು ಬೇಡುತ್ತಾರೆ ಇವರನ್ನೂ ಕ್ಷಮಿಸಿಬಿಡಬಹುದು.  ಮೂರು ಮತ್ತು ನಾಲ್ಕನೆಯ ಗುಂಪಿಗೆ ಸೇರಿದವರ ' ಅಪೇಕ್ಷೆ ' ನಿಸ್ವಾರ್ಥದಿಂದ ಕೂಡಿರುತ್ತದೆ.  ಮೂರನೆಯ ವಿಧದವರು ಉದಾ: ವಿಜ್ಞಾನಿ, ಕುತೂಹಲದಿಂದ ಜಗತ್ತನ್ನು ಕುರಿತು ಸಂಶೋಧನೆ ನಡೆಸುತ್ತಿರುತ್ತಾನೆ. ಸೃಷ್ಟಿಯ ನಿಗೂಢತೆಯನ್ನು ಅರಿಯಲು ಪ್ರಯತ್ನಪಡುತ್ತಾನೆ. ಕ್ಲಿಷ್ಟ ಪರಿಸ್ಥಿತಿಯಲ್ಲಿ ಅವನು " ಹೇ! ದೇವರೇ ಸೂರ್ಯ ಚಂದ್ರರ, ಭೂಮಿಯ, ಕಷ್ಟ ಸುಖಗಳ, ನೋವು ನಲಿವುಗಳ  ಮತ್ತು ಇಡೀ ಸೃಷ್ಟಿಯ ನಿಗೂಢತೆಯ ಮರ್ಮವೆನಗೆ ಅರಿಯುವಂತೆ ಕರುಣಿಸು " ಎಂದು ಬೇಡುತ್ತಾನೆ.   ಆದರೆ ಆತ್ಮ ಜ್ಞಾನವುಂಟಾದ, ನಾಲ್ಕನೆಯವನಾದ ನಮ್ಮ ಜ್ಞಾನಿ ಬೇಡುವುದೇ ಭಿನ್ನವಾಗಿರುತ್ತದೆ. ಅವನು" ಹೇ ದೇವ, ನೀನು ಸಕಲ ಜಗತ್ತಿನಲ್ಲಿ ಸರ್ವಾಂತರ್ಯಾಮಿ ಎಂದು,  ನಿನ್ನ ಮಹಿಮೆ ಎನಗೆ ಅರ್ಥವಾಗಿದೆ, ನೀನೇ ಪರಮಾತ್ಮ, ನಿನಗೆ ಅಸಾಧ್ಯವಾದುದಾವುದೂ ಇಲ್ಲ. ನಾನು ನಿನ್ನಲ್ಲಿ, ಸಕಲ ಜಗದ ಹಿತವನ್ನು ಮಾತ್ರ ಬೇಡುತ್ತೇನೆ, ಕರುಣಿಸು. ಕತ್ತಲೆಯಿಂದ ಬೆಳಕಿನೆಡೆಗೆ ನಡೆಸು, ಅಜ್ಞಾನದಿಂದ ಜ್ಞಾನದೆಡೆಗೆ ನಡೆಸು,  ಮೃತ್ಯುವಿನಿಂದ ಅಮೃತತ್ವದೆಡೆಗೆ ನನ್ನ ನಡೆಸು " ಎಂದು ಬೇಡುತ್ತಾನೆ. ಜ್ಞಾನಿ ಸಕಲ ಜಗತ್ತಿನ ಒಳಿತನ್ನೇ ಬೇಡುತ್ತಾನಾದ್ದರಿಂದ, ನಮ್ಮ ಸನಾತನದ ಜ್ಞಾನಿಗಳು, ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಾ, ಸರ್ವೇ ಭಧ್ರಾಣಿ ಪಶ್ಯಂತು, ಮಾ ಕಶ್ಚಿದುಃಖಮಾಗ್ಭವೇತ್ , ಎನ್ನುವಂತಹ ಲೋಕೋಕಲ್ಯಾಣದ ಪ್ರಾರ್ಥನೆಯನ್ನು ಮಾತ್ರ ಸಲ್ಲಿಸಿದರು.    


ಪರಮಾತ್ಮ ಎಲ್ಲರ ಮೊರೆಯನ್ನೂ ಕೇಳುತ್ತಾನಾದರೂ ಸಾಮಾನ್ಯವಾಗಿ ಜ್ಞಾನಿಯ ಮೊರೆಗೆ ಅಧಿಕ ಮಹತ್ವ ಸಿಗುತ್ತದೆ. ಏಕೆಂದರೆ ಜ್ಞಾನಿಯ ಪ್ರಾರ್ಥನೆ ಸದಾಕಾಲ  ಪರಮಾತ್ಮನ ಸೃಷ್ಟಿಯಾದ ಈ ಜಗತ್ತಿನ ಕಲ್ಯಾಣಕ್ಕಾಗಿಯೇ ಆಗಿರುತ್ತದೆ.  ಜ್ಞಾನದಲ್ಲಿ , ಪ್ರಾರ್ಥನೆಯ ಮತ್ತು ಪೂಜೆಯ ಸತ್ಯವಾದ ಸಮನ್ವಯ ಕಾಣುತ್ತದೆ. ಜ್ಞಾನದಲ್ಲಿ, ಪರಮಾತ್ಮನನ್ನು ಕುರಿತು ಸಾಧಕನ ಕೋಪ ಮತ್ತು ಪ್ರೀತಿ ಎರಡೂ ಕಾಣುತ್ತದೆ. ಆದರೆ ಅತ್ಯುನ್ನತ ಮಟ್ಟದ ಪ್ರಾರ್ಥನೆ ' ಅದ್ವೈತ ' ತತ್ವದಲ್ಲಿ ಸಿಗುತ್ತದೆ. ಸಾಧಕನಿಗೆ ' ನಾನು ಕೇವಲ ಆತ್ಮ ' ಎನ್ನುವ ಆತ್ಮಜ್ಞಾನ ಉಂಟಾದಾಗ, 'ತನ್ನನ್ನು ತಾನು'  ಸತ್ಯವಾಗಿ ಅರಿತಾಗ ಎಲ್ಲಾ ರೀತಿಯ ಪ್ರಾರ್ಥನೆಗಳೂ ಸ್ತಬ್ಧವಾಗುತ್ತವೆ. ಅಂತಹ ಸ್ಥಿತಿಯಲ್ಲಿ ಸಾಧಕ ಮೂಕಸ್ಮಿತನಾಗಿ ನಿಲ್ಲುತ್ತಾನೆ. ಜಗತ್ತಿನ ಎಲ್ಲವೂ ಒಂದೇ ಆದಾಗ ' ಯಾರಲ್ಲಿ ಯಾರು ಏನನ್ನು ಬೇಡುವುದು?' ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ.  ನಮ್ಮನ್ನು ನಾವು ಆ ಪರತತ್ವದೊಂದಿಗೆ ಲೀನವಾಗಿಸಿಕೊಂಡಾಗ, ಅಖಂಡವಾದ ಪರಮಾತ್ಮನನ್ನು ನೋಡಲು ಸಾಧ್ಯವಾದಾಗ, ಮಾತು ನಿಲ್ಲುತ್ತದೆ ಮತ್ತು ಮೌನವಾಗಿ ಪರತತ್ವದಲ್ಲಿ ಲೀನವಾದಂತಹ ಅನುಭವವಾಗುತ್ತದೆ.  ಅಂತಹ ಸಾಧಕ ಲೌಕಿಕ ಜಗತ್ತಿನಲ್ಲಿ ಇದ್ದರೂ, ಅವನ ಅಲೌಕಿಕ ಪರಮಾತ್ಮಾನುಭವ ಸ್ಥಿರವಾಗಿ ಇದ್ದು ಅವನ ಪ್ರಾರ್ಥನೆ, ಕರುಣಾಪೂರಿತವಾಗಿ ಜಗತ್ತಿನ ಒಳಿತಿಗಾಗಿ ಆಗುತ್ತದೆ.  ಹಾಗಾಗಿ ಲೌಕಿಕತೆಗೆ ಅಂಟಿಕೊಂಡ ಬೇಡಿಕೆಗಳನ್ನು ಬೇಡುವ ಹಂತದಿಂದ, ಇಡೀ ಜಗತ್ತನ್ನು ಬಾಚಿ ತಬ್ಬಿಕೊಂಡು ಲೋಕಕಲ್ಯಾಣದ ಬೇಡಿಕೆಗಳನ್ನು ಮಾತ್ರ ಪರಮಾತ್ಮನ ಮುಂದಿಡುವ ಮಟ್ಟಕ್ಕೆ ನಾವು ಏರಬೇಕು.  


ಪೂಜೆಯ ಕುರಿತು ಒಂದು ಮಾತು


ತಾನು ಕೇಳಿ ಪಡೆದದ್ದಕ್ಕೋ ಅಥವಾ ಬಯಸದೆ ಪಡೆದುಕೊಂಡದ್ದಕ್ಕೋ, ಹಿಂತಿರುಗಿ ಏನನ್ನಾದರೂ ಕೊಡಬೇಕೆಂದು ಬಯಸುವುದು ಸಾಮಾನ್ಯವಾಗಿ ಮನುಷ್ಯನ ಸ್ವಭಾವ.  ಈ ಸ್ವಭಾವವೇ ಇವನನ್ನು ತನ್ನ ಪ್ರಾರ್ಥನೆಯನ್ನು ಮನ್ನಿಸಿದ್ದಕ್ಕಾಗಿ ಅಥವಾ ಮುಂದೆ ಈಡೇರಿಸುತ್ತಾನೆ ಎನ್ನುವ ಭರವಸೆಯಿಂದ ಆ ' ದೇವರಿ' ಗೂ ಏನನ್ನಾದರೂ ನೀಡುವಂತೆ ಮಾಡುತ್ತದೆ.  ಬಹಳಷ್ಟು ಜನ ತಮ್ಮ ಬಯಕೆ ಈಡೇರುವುದಕ್ಕೂ ಮುಂಚಿತವಾಗಿಯೇ " ಓ! ದೇವರೇ ನೀನು ನನಗೆ ಇದನ್ನು ಮಾಡಿದರೆ ನಾನು ನಿನಗೆ ಇದನ್ನು ನೀಡುವೆ " ಎನ್ನುವಂತೆ ವಾಗ್ದಾನ ಮಾಡುತ್ತಾರೆ.  ಹಾಗಾಗಿ ಪ್ರಾರ್ಥನೆ ತಾನೇ ತಾನಾಗಿ 'ಪೂಜೆ' ಯ ರೂಪವನ್ನೂ ಧರಿಸುತ್ತದೆ. ನಾವು ಸಮರ್ಪಿಸಿದ ಯಾವುದನ್ನೂ ಆ ದೇವರು ನೇರವಾಗಿ ಸ್ವೀಕರಿಸುವುದಿಲ್ಲವಾದರೂ, ನಮ್ಮ ಪ್ರಾರ್ಥನೆಯೊಟ್ಟಿಗೆ ಸಮರ್ಪಿಸಿದ ನಮಗೆ, ಒಂದು ರೀತಿಯ ತೃಪ್ತಿ ಸಿಗುತ್ತದೆ.  ಅಷ್ಟೇ ಅಲ್ಲ, ನಾವು ಸಮರ್ಪಿಸಿದ ನೈವೇದ್ಯ ಅಲ್ಲೇ ಇದ್ದರೂ ಅದನ್ನು ಪರಮಾತ್ಮ ಸೂಕ್ಷ್ಮ ರೂಪದಲ್ಲಿ ಸ್ವೀಕರಿಸುತ್ತಾನೆ, ಎನ್ನುವುದು ನಮ್ಮ ದೃಢ ನಂಬಿಕೆಯಾಗುತ್ತದೆ. 

ಇದಕ್ಕೆ ನಮ್ಮ ಗುರುಗಳು ಹೇಳಿದ ಒಂದು ಸಣ್ಣ ಕಥೆಯನ್ನು ಹೇಳಬೇಕು. ಒಬ್ಬ ಗುರುವಿನ ಬಳಿ ಶಿಷ್ಯ ಕೇಳುತ್ತಾನೆ " ಗುರುಗಳೇ, ನಾವು ಕೊಟ್ಟ ನೈವೇದ್ಯವನ್ನು ಆ ದೇವರು ತಿನ್ನುತ್ತಾನೇನು? ನನಗಂತೂ ಒಂದು ದಿನವೂ ಅವನು ತಿಂದಂತೆ ಕಾಣಲಿಲ್ಲ. ನಾವು ಅವನಿಗೆ ಇತ್ತಂತೆ ಮಾಡಿ ನಾವೇ ತಿನ್ನುತ್ತೇವಲ್ಲವೇ? ಅವನು ಹಾಗೆ ತಿನ್ನದಿದ್ದ ಮೇಲೆ ಆ ನೈವೇದ್ಯವೆನ್ನು ಏಕಿಡಬೇಕು?" ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಗುರುಗಳು ಉತ್ತರವನ್ನು ನೀಡದೆ ಅಂದಿನ ಪಾಠ ಮುಂದುವರೆಸಿದರು. ಈಶಾವಾಸ್ಯೋಪನಿಷತ್ತಿನ ಪಾಠ ಮುಗಿದು, ಆ ಪ್ರಶ್ನೆ ಕೇಳಿದ ಶಿಷ್ಯನನ್ನು ಆ ಉಪನಿಷತ್ತಿನ ಮೊದಲ ನಾಲ್ಕು ಋಕ್ಕುಗಳನ್ನು ಹೇಳುವಂತೆ ಹೇಳಿದರು. ಆ ಶಿಷ್ಯ ಒಂದಿನಿತೂ ತಪ್ಪದೆ ನಿರರ್ಗಳವಾಗಿ ಅದನ್ನು ಹೇಳಿ ಒಪ್ಪಿಸಿದ. ಗುರುಗಳು "ನೀ ಹೇಳಿದ ಋಕ್ಕುಗಳು ನೀ ಅದನ್ನು ಪಡೆದುಕೊಂಡು ಹೇಳಿದಮೇಲೂ ಪುಸ್ತಕದಲ್ಲಿ ಹಾಗೇ ಇವೆಯಲ್ಲ,  ಅದು ಹೇಗೆ? " ಎಂದರು. ಹುಡುಗ ತಬ್ಬಿಬ್ಬಾದ. ಆಗ ಗುರುಗಳು " ನೋಡು ಪುಸ್ತಕದಲ್ಲಿ ಆ ಪದಗಳು ಸ್ಥೂಲ ಸ್ಥಿತಿಯಲ್ಲಿವೆ. ನಿನಗೆ ಅದು ಕಂಠಸ್ಥವಾದಾಗ ಅದು ನಿನ್ನಲ್ಲಿ ಸೂಕ್ಷ್ಮ ಸ್ಥಿತಿಯಲ್ಲಿ  ಬಂದು ಸೇರಿದೆ. ಹಾಗೆಯೇ ಪರಮಾತ್ಮನೂ ಸಹ ನೀನು ಸ್ಥೂಲ ರೂಪದಲ್ಲಿ ಸಮರ್ಪಿಸಿದ ನೈವೇದ್ಯವನ್ನು ಸೂಕ್ಷ್ಮರೂಪದಲ್ಲಿ ಸ್ವೀಕರಿಸುತ್ತಾನೆ" ಎಂದಾಗ ಆ ಶಿಷ್ಯನಿಗೆ ವಸ್ತು ಸ್ಥಿತಿ ಅರಿವಾಯಿತು.

ಶ್ರೀ ಕೃಷ್ಣ ಭಾಗವದ್ಗೀತೆಯಲ್ಲಿ, ಅರ್ಜುನನಿಗೆ ' ಪುಷ್ಪಮ್, ಪತ್ರಂ, ಫಲಂ, ತೋಯಂ," ಎಂದು ಹೇಳುತ್ತಾ "ನೀನು ಶ್ರದ್ಧೆಯಿಂದ ಹೀಗೆ ಏನನ್ನಾದರೂ ಸಮರ್ಪಿಸು. ನೀ ಭಕ್ತಿಯಿಂದ ಏನನ್ನು ನೀಡಿದರೂ ನನಗೆ ತೃಪ್ತಿಯಾಗುತ್ತದೆ" ಎನ್ನುತ್ತಾನೆ.  ಆದ್ದರಿಂದಲೇ ಪ್ರತಿನಿತ್ಯ ಪ್ರಾರ್ಥನಾ ವೇಳೆಯಲ್ಲಿ, ಪೂಜಾ ವಿಧಿಯನುಸಾರ ಏನನ್ನಾದರೂ ನೈವೇದ್ಯ ಮಾಡುವುದು ನಮ್ಮಲ್ಲಿ ವಾಡಿಕೆ. ನಾವು ಪರಮಾತ್ಮನಲ್ಲಿ ಆ ಸಮಯಕ್ಕೆ ಏನೂ ಬೇಡದಿದ್ದರೂ ಅಥವಾ ಪ್ರಸ್ತುತಕ್ಕೆ ನಮಗೇನೂ ಬೇಕಿಲ್ಲದಿದ್ದರೂ ನೈವೇದ್ಯ ಮಾಡುವುದು ವಾಡಿಕೆ. ಉನ್ನತ ಪ್ರಾರ್ಥನಾ ಸ್ಥರಗಳಲ್ಲಿ ಈ ನೈವೇದ್ಯ ಮಾಡುವಾಗೆ ' ಹೇ ! ಪರಮಾತ್ಮ ಸಕಲ ಜೀವರಾಶಿಗಳ ಜೀವನಾಧಾರವಾದ ನಿನಗೆ ನಾನು ನನ್ನ ಕೈಲಾದ ಇದನ್ನು ಸಮರ್ಪಿಸುತ್ತಿದ್ದೇನೆ. ಸಕಲರಿಗೂ ಒಳಿತಾಗಿಸು ಎಂದು ಬೇಡಿದಂತಾಗುತ್ತದೆ. ಜ್ಞಾನದ ಉನ್ನತ ಮಟ್ಟದಲ್ಲಿ, ತನಗಾಗಿ ಏನನ್ನೂ ಬೇಡದಿದ್ದರೂ, ಸಾಧಕ ' ಸರ್ವಹಿತ' ಕ್ಕಾಗಿ ಆ ಪರಮಾತ್ಮನಲ್ಲಿ ಬೇಡುತ್ತಾನೆ.  

ಉಪಸಂಹಾರ 


ಯಾರದೇ ಅಥವಾ ಯಾವುದೇ ರೀತಿಯ ಪ್ರಾರ್ಥನೆಯನ್ನು, ಅದೆಷ್ಟೇ ಕೆಳಮಟ್ಟದ್ದಾಗಲೀ, ಕೇವಲ ಸ್ವಾರ್ಥದ್ದಾಗಲೀ, ಅದನ್ನು ಹೀಗೆಳೆಯುವುದಾಗಲೀ ಅಥವಾ ತಿರಸ್ಕರಿಸುವುದಾಗಲೀ ಮಾಡಬಾರದು. ಏಕೆಂದರೆ ಪ್ರತೀ ಪ್ರಾಥನೆಯೂ ಮುಖ್ಯವಾಗಿ 'ಪರಮಾತ್ಮ'ನ  ಔನ್ನತ್ಯವನ್ನು ಒಪ್ಪಿಕೊಂಡಿರುತ್ತದೆ. ಪ್ರತಿಯೊಬ್ಬರ ಪ್ರಾರ್ಥನೆಯೂ, ಆ ಪ್ರಾರ್ಥನೆ ಮಾಡುವ ಸಮಯಕ್ಕೆ ಪರಮಾತ್ಮನ ಔನ್ನತ್ಯವನ್ನು ಒಪ್ಪಿಕೊಂಡು ನಂತರ ' ತಾನು' ಎಂಬ 'ಅಹಂ' ಕಾರವಿರುತ್ತದೆ. ಕಾಲಕ್ರಮೇಣ, ಆ ವ್ಯಕ್ತಿ ಬೆಳೆದಂತೆಲ್ಲಾ 'ಅಹಂ'ಕಾರ ನಶಿಸಿ ಪರಮಾತ್ಮ ತತ್ವ ಸ್ಥಿರವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರ ಪ್ರಾರ್ಥನೆಗೂ ಅದರದೇ ಆದ ಮೌಲ್ಯವಿರುತ್ತದೆ.    


ಆದರೆ ಪ್ರಶ್ನೆಯೇನೆಂದರೆ ' ಪ್ರಾರ್ಥನೆ ' ಹೇಗೆ ತನ್ನ ಪರಿಣಾಮವನ್ನು ಬೀರುತ್ತದೆ.? ಇದೊಂದು ವಿಚಿತ್ರ ಪ್ರಶ್ನೆ. ಪ್ರಾರ್ಥನೆ ಮನಸ್ಸಿನಲ್ಲಿ ಆಗುತ್ತದೆ. ಮನಸ್ಸು ಉನ್ನತ ವಿಶ್ವಶಕ್ತಿಯನ್ನು ಕುರಿತು ಪ್ರಾರ್ಥಿಸುತ್ತದೆ. ಅಂತಹ ಉನ್ನತ ಅನಂತ ವಿಶ್ವದ ಸ್ಥರದಲ್ಲಿ ಎಲ್ಲರ ಮನಸ್ಸೂ ಬೇಧಗಳನ್ನು ಮೀರಿದ ಸ್ಥಿತಿಯಲ್ಲಿದ್ದು, ಸಮಾನ ರೂಪದಲ್ಲಿರುತ್ತದೆ. ಹಾಗಾಗಿ ಒಬ್ಬರ ಪ್ರಾರ್ಥನೆ ಮತ್ತೊಬ್ಬರ ಸುಪ್ತ ಮನಸ್ಸಿನ ಮೇಲೂ ಒಂದು ಹಂತಕ್ಕೆ ಪರಿಣಾಮ ಬೀರುತ್ತದೆ.  ಮತ್ತೊಂದು ಆಯಾಮವೆಂದರೆ, ನಾವು ಮಾಡುವ ಪ್ರಾರ್ಥನೆಯಿಂದ ನಮ್ಮ ಮನಸ್ಸು ಪ್ರಫುಲ್ಲವಾಗಿ ನಿಷ್ಕಲ್ಮಷವಾಗಿ, ಅದರಿಂದ ಪ್ರೇರಿತವಾಗಿ ನಾವು ಮಾಡುವ ಕೆಲಸಗಳಲ್ಲಿ ಕ್ಷಮತೆ ಕಂಡು, ಅಂತಹ ಕ್ಷಮತೆಯಿಂದ ಕೂಡಿದ ಕಾರ್ಯಗಳಿಂದ ಉತ್ತಮ ಫಲಗಳು ಲಭಿಸುತ್ತವೆ. ಮೂಲತಃ ನಾವು ಮಾಡುವ ಪ್ರಾರ್ಥನೆ ನಮ್ಮನ್ನು ನಾವು 'ಶುದ್ಧೀಕರಿಸಿಕೊಳ್ಳುವ' ಪ್ರಕ್ರಿಯೆ. ಇಲ್ಲಿ ನಾವು ' ಗಾಯತ್ರಿ' ಮಂತ್ರವನ್ನು ನೋಡುವ. ಗಾಯತ್ರಿ ಮಂತ್ರದಲ್ಲಿ ' ಭರ್ಗೋದೇವಸ್ಯ ಧೀಮಹಿ ಧೀಯೋ ಯೋ ನಃ ಪ್ರಚೋದಯಾತ್ ' ಎಂದು ಹೇಳುತ್ತೆವೆ. ಹಾಗೆಂದರೆ 'ಹೇ! ಸವಿತು ವರೇಣ್ಯನಾದ ಸೂರ್ಯನೇ, ನಿನ್ನಲ್ಲಿರುವ ಆ ದೇವತೆಗಳ ತೇಜಸ್ಸಿಗೆ ನಾನು ಶರಣಾಗುತ್ತೇನೆ. (ಹಾಗೆ ಶರಣಾಗುವುದರಿಂದ) ನನ್ನ ಬುದ್ಧಿಯು ಮತ್ತಷ್ಟು ಪ್ರಚೋದಿಸಲ್ಪಡಲಿ" ಎಂದು ಬೇಡುತ್ತೇವೆ. ಅಂತಹ ಪ್ರಾರ್ಥನೆಯಲ್ಲಿ ' ಜ್ಞಾನ ' ವೇ ಪ್ರಧಾನವಾಗುತ್ತದೆ. ಇದು ಜ್ಞಾನದ ಮಾರ್ಗ. ಯಾರಿಗೆ ಏನು ಬೇಕೋ ಅದನ್ನು ಬೇಡಲು ಸಂಪೂರ್ಣ ಸ್ವಾತಂತ್ರ್ಯವಿದೆ, ಅಲ್ಲವೇ?  ತೀವ್ರ ಮನಸ್ಸಿನಿಂದ ಮಾಡಿದ ಪ್ರಾರ್ಥನೆಯಿಂದ ಹೊರಡುವ ತರಂಗಗಳು ಆ ವ್ಯಕ್ತಿಗೆ ಮತ್ತು ಅವನ ಪ್ರಾರ್ಥನೆಯ ವಿಷಯಕ್ಕೆ ಸಂಬಂಧಪಟ್ಟ ವ್ಯಕ್ತಿಗಳ ಮೇಲೂ ಪರಿಣಾಮ ಬೀರಿ ಫಲಪ್ರದವಾಗುತ್ತದೆ ಎನ್ನುವುದು ಸಾಮಾನ್ಯ ಅನುಭೂತಿ.   

ಪ್ರಾರ್ಥನೆಯ ಮಾರ್ಗದಲ್ಲಿ ಇದ್ದು, ಹಂತಹಂತವಾಗಿ ಬೆಳೆದು ಜಗತ್ತಿನ ವಸ್ತುಗಳನ್ನಲ್ಲದೆ ಜಗತ್ಕಾರಕನನ್ನು ಸಂಪೂರ್ಣವಾಗಿ ಅರಿತುಕೊಳ್ಳುವ, ಅವನಲ್ಲಿ ಶರಣಾಗತರಾಗಿ ಅವನನ್ನು ಪಡೆಯುವ ಮತ್ತು ಅವನಲ್ಲಿ ಲೀನವಾಗುವಂತಹ ಪ್ರಾರ್ಥನೆಯನ್ನು ಮಾಡಿದರೆ ಮತ್ತು ತತ್ಫಲವಾಗಿ ಜಗತ್ತಿನ ' ಅಂಟ ' ನ್ನು ಬಿಡಿಸಿಕೊಂಡು, ಜಗತ್ಕಾರಕನ 'ನಂಟ ' ನ್ನು ಬೆಳೆಸಿಕೊಂಡು ಮುಕ್ತರಾಗಿ ಆನಂದಾಮೃತವನ್ನು ಸವಿಯಬಹುದು. ಪ್ರಯತ್ನ ನಮ್ಮದು ತೀವ್ರವಾದರೆ ಫಲವೂ ಸವಿಯಾಗಿರುತ್ತದೆ. 


 

No comments:

Post a Comment