Sunday 17 June 2018

ಚರಿಸು ನೀನಾಳಾಗಿ



ನಾವೆಲ್ಲಾ ಈ ಲೋಕದಲ್ಲಿನ ಕಾರ್ಮಿಕರು. ಕರ್ಮ, ಎಂದರೆ ಕೆಲಸ ಮಾಡುತ್ತಲೇ ಇರಬೇಕಾದ್ದು ನಮ್ಮ ಕರ್ತವ್ಯ. ಅಯ್ಯೋ ಎಂದಾದರೂ ಒಂದು ದಿನ ಕೊನೆಯಾಗಲೇಬೇಕಾದ ಈ ಬದುಕಿನಲ್ಲಿ ಕೆಲಸ ಮಾಡಿದರೆಷ್ಟು ಬಿಟ್ಟರೆಷ್ಟು ಎಂದು ಇರುವಂತಿಲ್ಲ.  ರೋಗಿ ಇನ್ನೇನು ಸಾಯುವ ಸ್ಥಿತಿಯಲ್ಲಿದ್ದಾನೆ ಎಂದು ಅರಿತ ವೈದ್ಯನುಆ ರೋಗಿಯಲ್ಲಿ ಪ್ರಾಣವಿರುವ ತನಕಔಷಧಿಗಳನ್ನು ಇತ್ತು ಪರಿಚರ್ಯೆ ಮಾಡುವ ರೀತಿಯಲ್ಲಿ, ಸ್ಥಿರವಲ್ಲದ ಈ ಲೋಕದಲ್ಲಿ ನಮ್ಮೊಳಗೆ ಪ್ರಾಣವಿರುವ ತನಕ ಒಂದು ಆಳಿನಂತೆ ಕೆಲಸಮಾಡುತ್ತಲೇ ಇರಬೇಕು. 'ಬಡಿತವಿರವನಕ ಬಡಿವಾರವಿರಬೇಕುಎಂದು ಹೇಳಿದ ಸ್ನೇಹಿತರ ಮಾತು ಜ್ಞಾಪಕಕ್ಕೆ ಬರುತ್ತದೆ. 

ಈ ಜಗತ್ತಿನಲ್ಲಿ ಇದ್ದಮೇಲೆಬದುಕಬೇಕು. ಇಲ್ಲಿನ ಕಷ್ಟಗಳ ಸರಮಾಲೆಯನ್ನು ಹೊತ್ತು, 'ಈ ಜೀವನ ಎಂದಾದರೂ ಒಂದು ದಿನ ಕೊನೆಯಾಗುತ್ತದೆ ಅಥವಾ ನಶ್ವರವಾದ ಈ ಬದುಕಿನಿಂದ ಏನಾಗಬೇಕುಎಂದು ಹೇಳುವವರಿಗೇನೂ ಕಡಿಮೆ ಇಲ್ಲ. ಅದು ಒಣ ವೇದಾಂತ. ರೋಗಿ ಸಾಯುವತನಕ ವೈದ್ಯರು ಶುಶ್ರೂಷೆ ಮಾಡುವುದಿಲ್ಲವೇಹಾಗೆಈ ಜೀವ ಮತ್ತು ದೇಹದ ಸಂಬಂಧವಿರುವ ತನಕಬದುಕಲೇ ಬೇಕು. ಅನಾಸಕ್ತಿಯಿಂದ  ಬದುಕುವುದಕ್ಕಿಂತ ಸಾಯುವುದೇ ಲೇಸು. 

ತನ್ನ ಕರ್ಮಶೇಷವನ್ನು ಕಳೆಯಲು ಜೀವ ದೇಹಧಾರಣೆ ಮಾಡುತ್ತದೆ. ಕಷ್ಟ ಅಥವಾ ಸುಖಗಳನ್ನು ಅನುಭವಿಸುವ ಮೂಲಕವೇ ಕರ್ಮ ಶೇಷವನ್ನು ಕಳೆಯಲು ಸಾಧ್ಯ. ಅಸಹನೀಯ ಕಷ್ಟಗಳನ್ನು ಅನುಭವಿಸುವಾಗ" ಅಯ್ಯೋ ಈ ಜೀವನ ಸಾಕು ಸಾಕಾಗಿದೆ" ಎಂದು ಬದುಕುವುದನ್ನು ಮತ್ತು ಬದುಕಿನ ಜಂಜಾಟವನ್ನು ಅನುಭವಿಸುವುದನ್ನು ಬಿಟ್ಟರೆ ಕರ್ಮ ಕಳೆಯುವುದೆಂತು? ನಮಗದು ಇಷ್ಟವೋ ಇಲ್ಲವೋ, ಅದರಿಂದ ನಮಗೆ ಸುಖವೋ- ದುಃಖವೋ, ನಮಗದು ಒಳಿತೋ-ಕೆಡುಕೋ, ಎಂಬ ಯೋಚನೆಯನ್ನು ಮಾಡಿ ಸೂಕ್ತವಾದುದನ್ನೇ ಮಾಡಬಹುದಾದರೂ ಏನನ್ನೂ ಮಾಡದೇ ಇರುವುದು ಸಾಧ್ಯವೇ ಇಲ್ಲ. ಕಾಯಕವನ್ನು ಮಾಡುತ್ತಲೇ ಇರಬೇಕು. ಕಾಯಕವನ್ನು ಮಾಡುತ್ತ ಬದುಕಲೇ ಬೇಕು. ಪ್ರಾಣವಿರುವ ತನಕ ಬದುಕಲೇಬೇಕು. ಈ ದೇಹಕ್ಕೆ ಅವಶ್ಯಕ ಉಪಚಾರವನ್ನು ಮಾಡುತ್ತಾಅದನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡುಜೀವನ ಪ್ರಯಾಣವನ್ನು ಸುಗಮವಾಗಿಸಬೇಕು.  

ಆದರೆ ಹಾಗೆ ಬದುಕುವಾಗಮಾನ್ಯ ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ " ಸ್ಥಿರವಲ್ಲವೀ ಲೋಕವಾದೊಡಮದುಳ್ಳನಕ - ಚರಿಸು ನೀನಾಳಾಗಿ " ಎಂದು  ಹೇಳುತ್ತಾರೆ. ಅಂದರೆ ನೀನೊಬ್ಬ ಆಳು. ಒಬ್ಬ ಆಳು ಅಥವಾ ಸೇವಕ ತನ್ನ ಯಜಮಾನ ನಿಗದಿಸಿದ ಕೆಲಸವನ್ನು ಆಸಕ್ತಿಯಿಂದ ಮಾಡಿದರೂ ಅದರ ಫಲಾಫಲಗಳನ್ನು ಆ ಯಜಮಾನನಿಗೇ  ಸಮರ್ಪಿಸುವ ಹಾಗೆ ನಮ್ಮ ಬದುಕಿನಲ್ಲಿ ನಮಗೆ ಸಂದ ಕೆಲಸವನ್ನು ಪರಮಾತ್ಮ ನಿಗಧಿಪಡಿಸಿದ ಕರ್ತವ್ಯವೆಂದು ಬಗೆದು,  ಒಂದು ನಿರ್ಲಿಪ್ತ ಭಾವದಿಂದ ಆ ಕರ್ತವ್ಯಗಳನ್ನು ಮಾಡುತ್ತಾ, ಜಗತ್ತಿಗೆ ಅಂಟೀ  ಅಂಟದ  ಹಾಗೆ ಬದುಕಿದರೆ ಬದುಕಿನಲ್ಲಿ ನಿಜವಾದ ಆನಂದವನ್ನು ಪಡೆಯಬಹುದು. 

ಹಾಗಲ್ಲದೆ ಪಾಲಿಗೆ ಬಂದ ಕೆಲಸವನ್ನು ಸಮರ್ಪಕವಾಗಿ ಸಹನೆ ಮತ್ತು ಆಸ್ಥೆಯಿಂದ ಮಾಡದೆ, ಮನಸ್ಸಿನಲ್ಲಿ ಬೇರೆ ಏನನ್ನೋ ಬಯಸಿ, ಅದು ಸಿಗದಿದ್ದಾಗ, ಸಂಕಟವನ್ನನುಭವಿಸಿ ತೊಳಲಾಡುವುದು ಮೂರ್ಖತನ.  ಪ್ರತಿನಿತ್ಯವೂ ಗೋಳಾಡುತ್ತಾ ಬದುಕಬೇಕಾಗುತ್ತದೆ. ಹಾಗಲ್ಲದೆ ಸನ್ಮಾನ್ಯ ಕುಲಶೇಖರ ಅಳ್ವಾರರು ' ತ್ವತ್ ಭೃತ್ಯ, ಭೃತ್ಯ ಪರಿಚಾರಕ ಭೃತ್ಯ ಭೃತ್ಯ ಭೃತ್ಯಸ್ಯ ಭೃತ್ಯ ಇತಿ ಮಾಂ ಸ್ಮರ ಲೋಕನಾಥ' ಎಂದು ನಾವೂ ಸಹ ಪರಮಾತ್ಮನಿಂದ ನಿಯಮಿಸಲ್ಪಟ್ಟ ಸೇವಕರೆಂದು ಬಗೆದು ಅವನು ಕೊಟ್ಟ ಜೀವನವನ್ನು ಅವನ ಸೇವೆಯೆಂದು ಪರಿಗಣಿಸಿ ಸಂತೋಷದಿಂದ ಸಂದ ಕೆಲಸವನ್ನು ಮಾಡಿದರೆ, ಆನಂದದಿಂದ ಜೀವಿಸಬಹುದು ಮತ್ತು ಈ ಬೌಕಿನಿಂದ ಆನಂದದಿಂದ ನಿರ್ಗಮಿಸಬಹುದು. 


No comments:

Post a Comment