Sunday 17 June 2018

ಶ್ರಮದ ಫಲ


ಕೋಗಿಲೆಯನ್ನು ' ಪರಪುಟ್ಟ ' ಎನ್ನುತ್ತಾರೆ. ಪರಪುಟ್ಟ ಎಂದರೆ ಪರರ ಮೇಲೆ ಆಧಾರಪಡುವ ಎಂದು ಅರ್ಥ. ಕೋಗಿಲೆ ತನ್ನ ಮೊಟ್ಟೆಗಳನ್ನು ಕಾಗೆಯ ಗೂಡಿನಲ್ಲಿ ಇಟ್ಟು ಅವುಗಳಿಗೆ ಕಾವು ಕೊಟ್ಟು ಮರಿಮಾಡುವ ಕೆಲಸವನ್ನು ಕಾಗೆಯ ತಲೆಗೆ ಕಟ್ಟಿ ಬಿಡುತ್ತದೆ. ಪಾಪ ಕಾಗೆ ತನ್ನ ಮೊಟ್ಟೆ ಯಾವುದು, ಯಾವುದಲ್ಲ ಎಂದು ಅರಿಯಲಾಗದೆ,  ಆ ಕೋಗಿಲೆಯ ಮೊಟ್ಟೆಗಳನ್ನೂ ಸಹ ಕಾವು ಕೊಟ್ಟು ಮರಿಮಾಡುತ್ತದೆ.  ಅದೇ ರೀತಿ ಇರುವೆಗಳು ಮಣ್ಣ ಕಣ ಕಣವನ್ನು ನಿರಂತರವಾಗಿ ಹೊತ್ತು ತಂದು ಬಹಳ ಶ್ರಮ ಪಟ್ಟು ಗೂಡನ್ನು ಕಟ್ಟುತ್ತವೆ. ಆದರೆ ಅದರೊಳಕ್ಕೆ ಒಂದು ಹಾವು ಬಂದು ವಾಸಿಸುತ್ತದೆ. ಇರುವೆಗಳ ಶ್ರಮ ಅವುಗಳ ಮಟ್ಟಿಗೆ ಸಂಪೂರ್ಣ ವ್ಯರ್ಥವಾಗುತ್ತದೆ. ಹಾಗೆಯೇ ಮನುಷ್ಯರು ನಿರಂತರ ಶ್ರಮಪಟ್ಟು ಕೆಲಸಮಾಡಿದ  ನಂತರ, ಆ ಕೆಲಸದ ಫಲವನ್ನು ಪರರು ಕಸಿದುಕೊಂಡು ಬಿಡುತ್ತಾರೆ ಎಂಬುವುದು ಒಂದು ಜಗತ್ಸತ್ಯ.  

ಜಗತ್ತಿನಲ್ಲಿ ಎಲ್ಲರೂ ಯಾವುದಾದರೊಂದು ಕೆಲಸ ಮಾಡುತ್ತಲೇ ಇರಬೇಕು. ಇದು ಧರ್ಮ. ನಮ್ಮ ಮನೆಯವರಿಗಾಗಿ ನಾವು ದುಡಿಯುತ್ತೇವೆ. ಹಾಗೆ ಮಾಡುವ ಕೆಲಸಕ್ಕೆ ಒಂದು ಫಲ ಇರುತ್ತದೆ. ಆದರೆ ಆ ಕೆಲಸ ಮಾಡುವವರು ತಾವು ಮಾಡಿದ ಕೆಲಸದ ಸಂಪೂರ್ಣ ಫಲವನ್ನು ತಾವೇ ಅನುಭವಿಸಲು ಸಾಧ್ಯವೇ ಇಲ್ಲ. ಆ ಫಲ ಹಣದ ರೂಪದಲ್ಲಿರಬಹುದು, ಸಂತೋಷದ ರೂಪದಲ್ಲಿರಬಹುದು, ಪುಣ್ಯದ ರೂಪದಲ್ಲಿರಬಹುದು ಅಥವಾ ಪಾಪದ ರೂಪದಲ್ಲಿಯೂ ಇರಬಹುದು. ನಾವು ಮಾಡಿದ ಕೆಲಸದಿಂದ ಬಂದ ಪುಣ್ಯವನ್ನು ಹಂಚಿಕೊಳ್ಳಲು ಎಲ್ಲರೂ ಇರುತ್ತಾರೆ. ಆದರೆ ನಮ್ಮ ಕೆಲಸದ ಪರಿಣಾಮವಾಗಿ ಏನಾದರೂ ಪಾಪವುಂಟಾದರೆ, ಹಂಚಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಇಲ್ಲಿ ಅಂಗುಲಿಮಾಲನ
ಕಥೆಯ ದೃಷ್ಟಾಂತವನ್ನು ಓದುಗರು ನೆನಪಿಸಿಕೊಳ್ಳಬೇಕು.   


ಎಷ್ಟೋಬಾರಿ ನಾವು ಕಷ್ಟಪಟ್ಟು ಒಂದು ಕೆಲಸವನ್ನು ಮಾಡಿ ಮುಗಿಸುತ್ತೇವೆ. ಆ ಕೆಲಸದಿಂದ ನಮಗೆ ದಕ್ಕಬೇಕಾದ ಫಲದ ಅಪೇಕ್ಷೆಯಿಂದ ಆ ಕೆಲಸವನ್ನು ಮಾಡುತ್ತೇವೆ. ಆ ಕೆಲಸ ಸಂಪೂರ್ಣವಾಗಿ ಅದರಿಂದ ಅಪೇಕ್ಷಿತ ಫಲ ದೊರೆತಾಗ ಅದನ್ನು ಹೇಗೆ ವಿತರಣೆ ಮಾಡಬೇಕು ಎಂದು ಮೊದಲೇ ಯೋಚನೆಮಾಡಿ ಲೆಕ್ಕಾಚಾರ ಹಾಕಿಟ್ಟುರುತ್ತೇವೆ. ಆದರೆ ಬಹಳಷ್ಟು ಬಾರಿ ನಾವು ನಿರೀಕ್ಷಿಸಿದ ಫಲ ನಮಗೆ ಸಿಗುವುದೇ ಇಲ್ಲ. ಆ ಸಂದರ್ಭದಲ್ಲಿ, ದಕ್ಕಿದ ಫಲವನ್ನು ವಿತರಣೆಮಾಡುವಲ್ಲಿ ತೀವ್ರತಮ ಗೊಂದಲವುಂಟಾಗುತ್ತದೆ.  ವ್ಯವಸಾಯಮಾಡುವ ರೈತರ ಬಾಳನ್ನು ನೋಡಿದರೆ ನಮಗಿದು ಅರ್ಥವಾಗುತ್ತದೆ. ಇನ್ನೂ ಫಲ ನಮ್ಮ ಕೈ ಸೇರುವ ಮುನ್ನವೇ ಯಾರೋ ಅದರ ಶ್ರೇಯಸ್ಸನ್ನು ಬಾಚಿಕೊಂಡುಬಿಡುತ್ತಾರೆ. ಇದು ಬಹುಶಃ  ಸಾಹಿತ್ಯ, ವೈಜ್ಞಾನಿಕ ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ಸರ್ವೇ ಸಾಮಾನ್ಯ. ಯಾರೋ ಒಬ್ಬರು ಕಷ್ಟಪಟ್ಟು ಸಾಧಿಸಿದ ಸಾಧನೆಯ ಫಲವನ್ನು ಯಾರೋ ಕದ್ದು ಬಿಡುವುದನ್ನು ನಾವೆಲ್ಲಾ ನೋಡಿಲ್ಲವೇ?  

ಒಬ್ಬರ ಶ್ರಮದ ಫಲವನ್ನು ಮತ್ತೊಬ್ಬರು ಕಸಿದುಕೊಳ್ಳುವುದು ಸರ್ವೇ ಸಾಮಾನ್ಯವಾಗಿರುವ ಈ ಕಾಲದಲ್ಲಿ ನಾವು ನಮ್ಮ ಜಾಗರೂಕತೆಯಲ್ಲಿ ಇದ್ದರೆ ಒಳ್ಳೆಯದು. ಏಕೆಂದರೆ 'ಸತ್ಯವಂತರಿಗಿದು ಕಾಲವಲ್ಲ, ದುಷ್ಟಜನರಿಗೆ ಇದು ಸುಭಿಕ್ಷಕಾಲ' ಎಂದು ನಮ್ಮ ಪುರಂದರ ದಾಸರು ಎಂದೋ ಹೇಳಿಲ್ಲವೇ. ಅವರು ಅಂದು ಹಾಗೆ ಹಾಡಿದ್ದಾರೆ, ಆದರೆ ಅಂದಿನ 'ಪುರಂದರ ದಾಸರು' ಇಂದು ಏನು ಹೇಳುತ್ತಿದ್ದರೋ? ಹಾಗಾಗಿ ಎಚ್ಚರವಾಗಿರಬೇಕು. ನಮ್ಮಿಂದ ನಮ್ಮ ಶ್ರಮದ ಫಲವನ್ನು ಯಾರೂ ಕಸಿದುಕೊಳ್ಳದಂತೆ ಎಚ್ಚರವಾಗಿರಬೇಕು. ಹಾಗೆ ಯಾರಾದರೂ ನಮ್ಮ ಶ್ರಮದ ಫಲವನ್ನು ಕಸಿದುಕೊಳ್ಳಲು ಪ್ರಯತ್ನಿಸಿದರೆ ಅಥವಾ ಕಸಿದುಕೊಂಡರೆ ನಮಗೆ ತೀವ್ರ ನೋವಾಗುತ್ತದೆ, ಕೋಪ ಬರುತ್ತದೆ ಮತ್ತು ನಮ್ಮ ಹಕ್ಕನ್ನು ಪಡೆದುಕೊಳ್ಳಲು ನಮ್ಮಿಂದ ಪ್ರಯತ್ನವೂ ನಡೆಯುತ್ತದೆ. ಆ ಪ್ರಯತ್ನದಲ್ಲಿ ನಮಗೆ ಯಶಸ್ಸು ಸಿಗಬಹುದು ಅಥವಾ ನಾವು ಸೋಲಬಹುದು. ನಾವು ವಿಹ್ವಲರಾಗುತ್ತೇವೆ, ಪರಿತಪಿಸುತ್ತೇವೆ ಮತ್ತು ಪರದಾಡುತ್ತೇವೆ. 

ಆದರೆ ನಮ್ಮೆಲ್ಲಾ ಪ್ರಯತ್ನಗಳೆಲ್ಲಾ ಮುಗಿದ ಮೇಲೂ ನಾವು ಬಯಸಿದ್ದು ನಮಗೆ ಸಿಗದಿದ್ದರೆ, ಶಾಂತರಾಗಬೇಕು, ನಮಗೆ ಎಷ್ಟು ಪ್ರಾಪ್ತಿಯೋ ಅಷ್ಟು ಸಿಕ್ಕಿದೆ, ಸಿಕ್ಕದಿದ್ದದ್ದು ನಮ್ಮ ಪ್ರಾಪ್ತಿಯೊಳಿಲ್ಲ ಎಂದು ಸಮಾಧಾನಪಟ್ಟುಕೊಳ್ಳಬೇಕು. ಶಾಂತವಾಗಿ 'ಪರಮಾತ್ಮ ನನಗೆ ದಕ್ಕಿದ್ದು ನಿನ್ನ ಪ್ರಸಾದ'  ಎಂದು ಒಪ್ಪಿಕೊಂಡು ತೃಪ್ತಿಪಟ್ಟರೆ, ನೆಮ್ಮದಿಯಾಗಿರಬಹುದು ಹಾಗೆ ತೃಪ್ತಿ ಪಡದ ಪಕ್ಷದಲ್ಲಿ ನಮಗೆ ಮಾನಸಿಕ ಕ್ಷೋಭೆ ತಪ್ಪಿದ್ದಲ್ಲ. ಆಯ್ಕೆ ನಮ್ಮದೇ ಅಲ್ಲವೇ?  


No comments:

Post a Comment