Tuesday 12 June 2018

ಕೊಡುಗೈ


ಜಗತ್ತಿನ ಸಕಲ ಜೀವ ರಾಶಿಗಳಲ್ಲಿ ' ಮಾನವ' ಹಲವಾರು ರೀತಿಯಲ್ಲಿ  ಒಂದು ವಿಶೇಷ ಪ್ರಾಣಿ. ಇವನು ಊರ್ದ್ವಮುಖನಾಗಿದ್ದಾನೆ, ಬಹುಮುಖ ವಿಚಾರವಂತನಾಗಿದ್ದಾನೆ ಮತ್ತು ಅನ್ಯಪ್ರಾಣಿಗಳಿಗೆ ಹೋಲಿಸಿದರೆ, ಅಧಿಕ ವಿವೇಕವಂತನಾಗಿದ್ದಾನೆ. ಇವನ ಎಲ್ಲಾ ಗುಣಗಳಲ್ಲಿ ನಾ ಕಂಡ ಭಿನ್ನ ಗುಣವೆಂದರೆ ' ಕೊಡುವ' ಗುಣ. ಎಂದರೆ ಇಡೀ  ಸೃಷ್ಟಿಯಲ್ಲಿನ ಅನ್ಯ ಜೀವರಾಶಿಗಳಿಗೆ ಹೋಲಿಸಿದರೆ ನೇರವಾಗಿ ' ಕೊಡುವ ಅಥವಾ ಕೊಡಬಲ್ಲ ' ಗುಣವಿರುವುದು ಕೇವಲ ನಮ್ಮ ಮಾನವನಿಗೆ ಮಾತ್ರ. ಬೇರೆ ಯಾವ ಪ್ರಾಣಿ ಅಥವಾ ಜೀವಿಯೂ ನೇರವಾಗಿ ಅನ್ಯ ಜೀವಿಗಳಿಗೆ ಏನನ್ನೂ ಕೊಡಲಾಗದು. ಆದರೆ ಅವುಗಳ ಪರೋಕ್ಷ ಕೊಡುಗೆಗಳ ಉದ್ದ ಪಟ್ಟಿಯನ್ನು ಮಾಡಬಹುದು. 

ತಾನು 'ಪ್ರತ್ಯಕ್ಷ ' ಕೊಡಲಾಗುವುದಿಲ್ಲವೆಂದು, ಮಾನವನಿಗೆ ಉನ್ನತ ವಿವೇಕವನ್ನು ಕೊಟ್ಟು ಮತ್ತು ಅದರೊಂದಿಗೆ ' ಕೊಡುವ ' ಗುಣವನ್ನೂ ಇತ್ತು,  ಪರಮಾತ್ಮ ತನ್ನ ಸೃಷ್ಟಿಯನ್ನು ಮತ್ತಷ್ಟು ಸುಂದರವಾಗಿಸುವ ಪ್ರಯತ್ನಮಾಡಿದ್ದಾನೆ. ಏನನ್ನು ಕೊಡಬೇಕು ಮತ್ತು ಹೇಗೆ ಕೊಡಬೇಕು ಎನ್ನುವ ಜ್ಞಾನವನ್ನೂ ಕೊಟ್ಟು ಈ ' ಕೊಡುವ ' ಪ್ರಕ್ರಿಯೆಯನ್ನು ಮತ್ತಷ್ಟು ಅರ್ಥಪೂರ್ಣವಾಗಿಸಿದ್ದಾನೆ. ತನ್ನಲ್ಲಿರುವುದನ್ನು ಕೊಡುವ, ಇಲ್ಲದ್ದನ್ನು ಪಡೆದುಕೊಂಡು ಕೊಡುವ, ಪ್ರತಿಯಾಗಿ ಏನನ್ನೂ ಬಯಸದೆ ನಿಸ್ವಾರ್ಥದಿಂದ ಕೊಡುವ ಮತ್ತು ಕೊಟ್ಟು ಸಂತೋಷಪಡುವ ಗುಣವನ್ನು, ಪರಮಾತ್ಮ.ಕೇವಲ ಮಾನವನಿಗೆ ಕೊಟ್ಟಿದ್ದಾನೆ ಎನ್ನುವುದನ್ನು ಎಲ್ಲರೂ ಒಪ್ಪಲೇಬೇಕಾದ ಒಂದು ವಿಚಾರ.

ಕೊಡುವುದು ಒಂದು ಬಹು ಉನ್ನತವಾದ ಗುಣ. ಕೊಟ್ಟು ಸಂತೋಷಪಡುವುದು ಅತಿಶಯದ ಗುಣ. ಕೊಡುವ ವಿಚಾರದಲ್ಲಿ ತೈತ್ತರೀಯ ಉಪನಿಷತ್ತು " ಶ್ರದ್ಧಯಾ ದೇಯಂ, ಅಶ್ರದ್ಧಯಾ ಅದೇಯಂ, ಶ್ರಿಯಾ ದೇಯಂ, ಹ್ರಿಯಾ ದೇಯಂ, ಭಿಯಾ ದೇಯಂ, ಸಂವಿದಾ ದೇಯಂ" ಎಂದು ಹೇಗೆ ಕೊಡಬೇಕು ಎನ್ನುವುದನ್ನು ಹೇಳುತ್ತದೆ. ದಾನವೆನ್ನುವುದು ಸನಾತನದ ಮೂಲಗುಣ. ಹೀಗೆ ಕೊಡುವುದರಲ್ಲಿ ಅಗ್ರಗಣ್ಯರಾದ ಮಹಾಭಾರತದ  ಕರ್ಣ ಮತ್ತು ಬಳಿ ಚಕ್ರವರ್ತಿಯನ್ನು ಉಲ್ಲೇಖಿಸಬಹುದು.

ಆದರೆ ಇಂದಿನ ಮಾನವರಾದ ನಾವು ಆ 'ಗುಣ'ವನ್ನು ಉಳಿಸಿಕೊಂಡಿದ್ದೇವೆಯೇ? ಎಂದು ವಿಚಾರಮಾಡಿದರೆ, ದುಃಖವಾಗುತ್ತದೆ. ಸೃಷ್ಟಿಕರ್ತನ ಉದ್ದೇಶ್ಯವನ್ನು ಸುಳ್ಳಾಗಿಸುವ ಹಲವಾರು ದಾರಿಗಳನ್ನು ನಾವು ಕಂಡುಕೊಂಡಿದ್ದೇವೆ ಅಲ್ಲವೇ? ನಮಗೆ ಕೊಡುವ ಶಕ್ತಿಯೇ ಇಲ್ಲ, ಇದ್ದರೂ ಕೊಡುವ ಮನಸ್ಸೇ ಇಲ್ಲ. ಸದಾಕಾಲ ' ನಾನು' ಎಂದು ಆಲೋಚಿಸುವವರಿಗೆ ಕೊಡುವ ಬುದ್ಧಿ ಬರಲು ಸಾಧ್ಯವೇ? ಸ್ವಾರ್ಥದಲ್ಲಿ ಮುಳುಗಿರುವ ನಮಗೆ ಅನ್ಯರ ಕುರಿತು ಯೋಚಿಸುವ ಸಮಯವಾಗಲಿ ಸದ್ಭುದ್ಧಿಯಾಗಲೀ ಇಲ್ಲ, ಅಲ್ಲವೇ? ಇದು ಇಂದಿನ ಮಾನವರಾದ ನಮ್ಮ ಬದುಕಿನ ದುರಂತ. ಇದನ್ನು ನೋಡಿಯೇ ಅಂದು ಒಬ್ಬ ಪುಣ್ಯಾತ್ಮ ' ಇಲ್ಲಿ ಪ್ರತಿಯೊಬ್ಬರ ಅವಶ್ಯಕತೆಗೆ ಸಕಲವೂ ಇದೆ, ಆದರೆ ದುರಾಸೆಗೆ ಏನೂ ಇಲ್ಲ ' ಎಂಬ ಮಾತನ್ನು ನಾಣ್ಣುಡಿಯಂತೆ ಹೇಳಿದಾನೆ. "ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ ಕಳ್ಳಂಗೆ, ನೃಪಂಗೆ, ಸರ್ವಜ್ಞ"  ಎನ್ನುತ್ತಾನೆ ಸರ್ವಜ್ಞ ಕವಿ. ಇಂದಿನ ನಮಗೆ ಸದಾಕಾಲ ಪಡೆದುಕೊಳ್ಳುವ, ಅಧಿಕವಾಗಿ ಪಡೆದುಕೊಳ್ಳುವ ಮತ್ತು ಹಾಗೆ ಪಡೆದುಕೊಂಡದ್ದನ್ನು ಅನ್ಯರಲ್ಲಿ ಹಂಚಿಕೊಳ್ಳದೆ ನಮ್ಮಲ್ಲೇ ಉಳಿಸಿಕೊಳ್ಳುವ ದುರಾಲೋಚನೆಯೇ ಅಧಿಕವಲ್ಲವೇ?

ಸರ್ವರಿಗೂ ಸಕಲವನ್ನೂ ನೀಡುವ ಪರಮಾತ್ಮನಲ್ಲಿ ಏನನ್ನೂ ಬೇಡಬಾರದು ಎನ್ನುವುದು ನಮ್ಮ ಸಿದ್ಧಾಂತ. ಹಾಗೆ ಬೇಡಿದರೂ, ಸಂಪತ್ತು ಮತ್ತು ಸವಲತ್ತನ್ನು ಬೇಡಿ ಅದನ್ನು "ಇತರರೊಡನೆ ಹಂಚಿಕೊಳ್ಳುವ ಬುದ್ಧಿಯನ್ನೂ ಕೊಡು ದೇವರೇ" ಎಂದು ಬೇಡಬೇಕು. 'ಕೊಡುವ ಸುಖ ಪಡೆದುಕೊಳ್ಳುವುದರಲ್ಲಿ ಇರುವುದಿಲ್ಲ' ಎನ್ನುವುದನ್ನು ಮನದಟ್ಟು ಮಾಡಿಕೊಂಡರೆ ಸಮಾಜದ ಹಿತವನ್ನು ಕಾಪಾಡಿದ ಹಾಗಾಗುತ್ತದೆ.

No comments:

Post a Comment