Friday 15 June 2018

'ಸ್ವಾತಂತ್ರ್ಯ'




'ಸ್ವಾತಂತ್ರ್ಯ' ಎಂಬ ಪದವನ್ನು ಹೇಳಿದರೆ ಸಾಕು, ಭೂಮಿಯ ಮೇಲಿನ ಪ್ರತಿಯೊಬ್ಬ ವ್ಯಕ್ತಿಯೂ ಸ್ವಾತಂತ್ರ್ಯದ ಅವಶ್ಯಕತೆ ಇದೆಯೆಂದು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತಾನೆ. ಸ್ವಾತಂತ್ರ್ಯವೆಂದರೆ ಸಾಮಾನ್ಯವಾಗಿ ನಾವು ಅರ್ಥೈಸುವುದೇನೆಂದರೆ, ಏನನ್ನಾದರೂ ಮಾಡುವ ಸ್ವಾತಂತ್ರ್ಯ ಅಥವಾ ಯಾವುದರಿಂದಲಾದರೂ ಸ್ವಾತಂತ್ರ್ಯ. ಮಕ್ಕಳು ಯಾವಾಗಲೂ ತಮ್ಮ ಹೆತ್ತವರು ವಿಧಿಸಲ್ಪಡುವ ಶಿಸ್ತು ಮತ್ತು ನಿಯಮಗಳ ಕಟ್ಟಳೆಗಳಿಂದ ಮುಕ್ತರಾಗಲು ಅವಕಾಶಗಳನ್ನು ಹುಡುಕುತ್ತಿರುತ್ತಾರೆ. ವಯಸ್ಕರು ತಮ್ಮ ಸಂಬಂಧಗಳಲ್ಲಿ ಹೆಚ್ಚಿನ ಸ್ವಾತಂತ್ರ್ಯವನ್ನು ಬಯಸುತ್ತಾರೆ ಮತ್ತು ಹಿರಿಯರು ಅನಾರೋಗ್ಯದಿಂದ, ಅಭದ್ರತೆಯಿಂದ ಮತ್ತು ಒಂಟಿತನದಿಂದ ಸ್ವಾತಂತ್ರ್ಯವನ್ನು ಬಯಸುತ್ತಾರೆ.  

ಆದರೆ ನಿಜವಾದ ಸ್ವಾತಂತ್ರ್ಯ, ಇವುಗಳಲ್ಲಿ ಯಾವುದೂ ಅಲ್ಲ. ನಿಜವಾದ ಸ್ವಾತಂತ್ರ್ಯ ಎಂದರೆ ನಾವು ನಾವಾಗಿರಲು ಬೇಕಾದ ಶಕ್ತಿ. ಪ್ರತಿಯೊಬ್ಬರೂ ತಮ್ಮದೇ ಆದ ಮೂಲ ವ್ಯಕ್ತಿತ್ವ, ಅವಶ್ಯಕತೆಗಳು, ಬಯಕೆಗಳು ಮತ್ತು ಇಷ್ಟಾನಿಷ್ಟಗಳಿಂದ ರೂಪಿಸಲ್ಪಟ್ಟಿರುತ್ತಾರೆ. ಇವುಗಳ ಸಮುಚ್ಚಯ ರೂಪವೇ ನಾವಾಗಿರುತ್ತೇವೆ. ಆದರೆ ಕೆಲವರು ಮಾತ್ರ ತಮ್ಮ ಒಳಗು ಮತ್ತು ಹೊರಗುಗಳ ಮೇಲೆ ಬೇಕಾದ ನಿಯಂತ್ರಣವನ್ನು ಹೊಂದಿ ತಮ್ಮತನವನ್ನು ತೋರುವಷ್ಟು ಅದೃಷ್ಟಶಾಲಿಗಳಾಗಿರುತ್ತಾರೆ.  ಮಿಕ್ಕವರೆಲ್ಲರೂ ನಾವೇನಲ್ಲವೋ ಅಥವಾ ನಾವು ಏನಾಗಬೇಕೆಂದುಕೊಂಡಿಲ್ಲವೋ ಅದಾಗಿ ಉಳಿದುಬಿಡುತ್ತೇವೆ, ಅಲ್ಲವೇ? ನಮ್ಮ ಸಂಸಾರ, ಸಮಾಜ, ಸ್ನೇಹಿತರು, ಸಹೋದ್ಯೋಗಿಗಳೊಡನೆ ಆಗುವ ನಮ್ಮ ಒಡನಾಟದಿಂದ ರೂಪುಗೊಳ್ಳುವ ಸಂದರ್ಭಗಳಿಂದ ನಾವು ರೂಪಿಸಲ್ಪಡುತ್ತೇವೆ. ಅಂತಹ ಸ್ಥಿತಿಯಲ್ಲಿ ನಾವು ಏನನ್ನು ಮಾಡಲಿಚ್ಚಿಸುವುದಿಲ್ಲವೋ ಅಥವಾ ನಾವೇನಾಗಬಯಸುವುದಿಲ್ಲವೋ ಅದನ್ನು ಮಾಡುವ ಅಥವಾ ಹಾಗಾಗುವ ಒತ್ತಡ ನಮ್ಮ ಮೇಲೆ ಉಂಟಾಗುತ್ತದೆ. ಬಹುಶಃ ನಾವು ಏನಾಗಬೇಕೆಂದಿದ್ದೇವೋ,  ಹಾಗಾಗದೆ ಅನ್ಯರ ಇಚ್ಛೆಯಂತೆ ಅಥವಾ ಪರರಿಗನುಗುಣವಾಗಿ ಇರುವುದನ್ನೇ ನಾವೂ ಇಷ್ಟಪಡುವಂತೆ ಆಗುತ್ತದೆ.     

ಸಾಮಾನ್ಯವಾಗಿ ಎಲ್ಲರೊಂದಿಗೆ ಹೊಂದಿಕೊಳ್ಳುವ, ಎಲ್ಲರ ಮಾತನ್ನೂ ವಿನಯದಿಂದ ಕೇಳುವ  ಮತ್ತು  ಅನ್ಯರ ಅಭಿಪ್ರಾಯಕ್ಕೆ ಬೆಲೆಕೊಡುವ ಮಗುವನ್ನು ಇಷ್ಟಪಡುತ್ತಾರೆ ಮತ್ತು ಮೆಚ್ಚುತ್ತಾರೆ. ಆದರೆ ತನ್ನ ಅಭಿಪ್ರಾಯವನ್ನು ನಿರ್ಭಯವಾಗಿ ಹೇಳುವ, ತಾನಂದುಕೊಂಡದ್ದನ್ನು ಮಾಡಲು ಹಠ ಮಾಡುವ ಮಗುವು ಗದರಿಸಲ್ಪಡುತ್ತದೆ, ಬಯ್ಗಳನ್ನು ತಿನ್ನುತ್ತದೆ ಮತ್ತು ಶಿಕ್ಷಿಸಲ್ಪಡುತ್ತದೆ.  ಪೋಷಕರ, ಶಿಕ್ಷಕರ ಮತ್ತು ಅನ್ಯರ ಮೆಚ್ಚುಗೆಯನ್ನು ಪಡೆಯಲು ಮಕ್ಕಳು ತಮ್ಮ ಮೂಲಗುಣಗಳನ್ನು ಮರೆಸಿ, ಅನ್ಯರು ಏನು ಬಯಸುತ್ತಾರೋ ಆದಾಗಲು  ಪ್ರಯತ್ನಪಡುತ್ತಾರೆ.  ಹೀಗೆ ನಾವು ನಮ್ಮ ಬಾಲ್ಯದಿಂದಲೇ ನಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು ಅನ್ಯರು ಏನು ಬಯಸುತ್ತಾರೋ ಅದಾಗುತ್ತೇವೆ.  ಇದರಲ್ಲಿ ತಂದೆತಾಯಿಯರ ಪಾತ್ರ ಬಹಳ ಹೆಚ್ಚು. ಬಹಳ ವಿರಳವಾಗಿ, ಬಹಳ ಕಡಿಮೆ ಸಂಖ್ಯೆಯ ಪೋಷಕರು ತಮ್ಮ ಮಕ್ಕಳ ನೈಜ ಗುಣ, ಕ್ಷಮತೆ ಮತ್ತು ಶಕ್ತಿಗಳನ್ನು ಗುರುತಿಸಿ, ಅವರನ್ನು ಅವರೇನಾಗಬೇಕೋ ಆದಾಗಲು ಮತ್ತು ಹಾಗೆ ಬೆಳೆಯಲು ಒತ್ತಾಸೆ ನೀಡುತ್ತಾರೆ. 

 ನಾವು "ಏನು ಹೇಳಬೇಕು ಅಥವಾ ಮಾಡಬೇಕು ಮತ್ತು ಏನನ್ನು ಮಾಡಲು ನಮ್ಮನ್ನು ಒತ್ತಾಯಿಸಲಾಗಿದೆ ಎಂಬುದರ ನಡುವಿನ ವ್ಯತ್ಯಾಸ ನಮ್ಮ ಮೇಲೆ ಮಾನಸಿಕ ಒತ್ತಡವುಂಟಾಗಿಸುತ್ತದೆ. ಒತ್ತಡ ನಮ್ಮ ದೇಹ , ಮನಸ್ಸು ಮತ್ತು ಬುದ್ಧಿಗಳ ಮೇಲೆ ತನ್ನ ಪರಿಣಾಮ ಬೀರಿ, ನಮ್ಮನ್ನು ಮಾನಸಿಕ ಅನಾರೋಗ್ಯದೆಡೆಗೆ ತಳ್ಳುತ್ತದೆ, ಎಂದು ಈಗಾಗಲೇ ವೈಜ್ಞಾನಿಕವಾಗಿ ನಿರೂಪಿಸಲಾಗಿದೆ. ವಯಸ್ಕರಾದ ನಾವು, ತಲೆನೋವು, ಬೆನ್ನುನೋವು, ಅತಿ ಆಮ್ಲತೆ(ಅಸಿಡಿಟಿ), ಅಧಿಕ ರಕ್ತದೊತ್ತಡ, ಸುಸ್ತು ಅಥವಾ ಮಧುಮೇಹದಂತಹ ಖಾಯಿಲೆಗಳಿಗೆ ತುತ್ತಾಗಿ, ಅವುಗಳ ಮೂಲ ಕಾರಣವೇನೆಂದು ಅರಿಯಲಾಗದೆ ಅಥವಾ ಅರಿಯಲು ಪ್ರಯತ್ನವನ್ನೇ ಪಡದೆ,  ವೈದ್ಯಕೀಯ ಸಲಹೆ ಅಥವಾ ತಪಾಸಣೆಗೆ ನಮ್ಮನ್ನು ನಾವು ಒಡ್ಡಿಕೊಳ್ಳುತ್ತೇವೆ. ಆದರೆ ವೈದ್ಯಶಾಸ್ತ್ರ, ದೈಹಿಕ ಕಾರಣಗಳನ್ನು ಮಾತ್ರ ಪರಿಗಣಿಸಿ ಕೇವಲ ಲಕ್ಷಣಗಳನ್ನು ಅಥವಾ ಪರಿಣಾಮಗಳಿಗೆ ಮಾತ್ರ ಶುಶ್ರೂಷೆ(treatment) ಯನ್ನು ಮಾಡುತ್ತದೆ. ಬಹಳಷ್ಟು ಖಾಯಿಲೆಗಳನ್ನು ಕುರುಹು(symptoms)ಗಳ ಸ್ಥರದಲ್ಲಿಯೇ ನಿಯಂತ್ರಿಸಬಹುದಾದರೂ ಅಥವಾ ಸಂಪೂರ್ಣ ಗುಣಮಾಡಬಹುದಾದರೂ, ಆ ಖಾಯಿಲೆಯ ಮೂಲ ಕಾರಣ ಹಾಗೆ ಉಳಿದುಬಿಡುತ್ತದೆ ಮತ್ತು ಹಲವುರೀತಿಯ ಚಿಕಿತ್ಸೆಗಳು ನಮ್ಮ ಆಜೀವ ಪರ್ಯಂತ ನಡೆಯುತ್ತವೆ.    

ಹಾಗಾಗಿ, ಯೋಚಿಸಲು, ಮಾತನಾಡಲು ಮತ್ತು ನಮಗೆ ಮಾಡಬೇಕೆನಿಸಿದ್ದನ್ನು ಮಾಡುವ ಸ್ವಾತಂತ್ರ್ಯವನ್ನು ನಮಗೆ ನಾವೇ ತಂದುಕೊಳ್ಳಬೇಕು ಅಥವಾ ಕೊಟ್ಟುಕೊಳ್ಳಬೇಕು.  ಇಲ್ಲಿ ನಾವು ಸ್ವಾತಂತ್ರ್ಯ ಎಂದಿದ್ದೇವೆ, ಅದು ಸ್ವೇಚ್ಛೆಯಾಗಬಾರದು. ಸ್ವಾತಂತ್ರ್ಯಕ್ಕೂ ಸ್ವೇಚ್ಛೆಗೂ ಬಹಳ ವ್ಯತ್ಯಾಸ ಮತ್ತು ಅಂತರವಿದೆ. ನಾವು ಕೇವಲ ಸ್ವಾತಂತ್ರ್ಯವನ್ನು ಪಡೆದುಕೊಳ್ಳಬೇಕು, ಸ್ವಾರ್ಥವನ್ನಲ್ಲ ಅಥವಾ ಮತ್ತೊಬ್ಬರಿಗೆ ತೊಂದರೆ ಮಾಡುವ ಅಧಿಕಾರವನ್ನಲ್ಲ. ತನ್ನ ಸ್ವಾತಂತ್ರ್ಯವನ್ನು ಬಯಸುವ ವ್ಯಕ್ತಿ ಖಂಡಿತವಾಗಿಯೂ ಅನ್ಯರ ಸ್ವಾತಂತ್ರ್ಯವನ್ನು ಗೌರವಿಸುವವನಾಗಿರುತ್ತಾನೆ. ಸಂಪೂರ್ಣ ಸ್ವಾತಂತ್ರ್ಯವೆಂದರೆ ' ಎಲ್ಲರಿಗೂ ಸ್ವಾತಂತ್ರ್ಯ' ವೆಂದರ್ಥ.  ಹಾಗೆಂದರೆ ನಾವು ನಮ್ಮನ್ನು ಮತ್ತು ಪರರನ್ನು  ನಿಯಂತ್ರಣ ಮುಕ್ತರನ್ನಾಗಿಸುವುದು ಎಂದರ್ಥ.  ಒಮ್ಮೆ ನಾವು ನಮ್ಮ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆದುಕೊಂಡಮೇಲೆ, ಮುಕ್ತ ಮನಸ್ಸಿನಿಂದ ನಮಗೇನು ಬೇಕೆಂದು ಯೋಚಿಸಬೇಕು, ಅದನ್ನು ಪಡೆಯುವ ಮಾರ್ಗವನ್ನು ಕಂಡುಕೊಳ್ಳಬೇಕು ಮತ್ತು ಅದಕ್ಕೆ ನಾವು ಯಾವ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಅರಿತುಕೊಳ್ಳಬೇಕು. ಹಾಗೆ ಶುದ್ಧಮನಸ್ಸಿನಿಂದ ಆಲೋಚನೆಮಾಡಿದಮೇಲೆ ನಾವು ಸರಿಯಾದ ಕಾರ್ಯಮಾರ್ಗವನ್ನು ಆಯ್ದುಕೊಳ್ಳಬಹುದು.  ನಮ್ಮ ಮನಸ್ಸು ಮುಕ್ತವಲ್ಲದಾಗ, ಚಿಂತೆಗೊಳಗಾದ ಸ್ಥಿತಿಯಲ್ಲಿ ಯೋಚನೆಯನ್ನು ಮಾಡಿದಾಗ ಮತ್ತು ಆ ಆಲೋಚನೆಯ ಪ್ರಕಾರ ನಾವು ಕಾರ್ಯಕೆಲಸಗಳನ್ನು ಮಾಡಿದಾಗ, ಅನ್ಯರು ನಾವು ಮಾಡುವ ಕೆಲಸದ ಬಗ್ಗೆ ಏನು ಹೇಳುತ್ತಾರೋ ಎಂಬ ಶಂಖೆ ನಮ್ಮ ಮನಸ್ಸಿನಲ್ಲಿದ್ದಾಗ, ನಾವು ಅನ್ಯರು ನಮ್ಮಿಂದ ಏನನ್ನು ಬಯಸುತ್ತಾರೋ ಅದನ್ನೇ ಮಾಡುತ್ತೇವೆಯೇ ಹೊರತು ನಮ್ಮ ಇಷ್ಟದಂತಲ್ಲ. ಅಂತಹ ಸ್ಥಿತಿಯಲ್ಲಿ ನಾವು ಅನ್ಯರಿಗೆ ಸಂತೋಷವನ್ನುಂಟುಮಾಡಬಹುದಷ್ಟೇ, ಆದರೆ ನಾವು ಶಾಂತವಾಗಿ ಸಂತೋಷದಿಂದ ಇರಲು ಸಾಧ್ಯವೇ ಇಲ್ಲ.  

ಹಾಗಾಗಿ ನಮಗಿರುವ ಸ್ವಾತಂತ್ರ್ಯವನ್ನು ನಾವು ಪುನಃ ಪಡೆಯಬೇಕು. ಆದರೆ ಆ ಸ್ವಾತಂತ್ರ್ಯ, ಸ್ವೇಚ್ಛೆಯಾಗಬಾರದು, ಅನ್ಯರ ಸ್ವಾತಂತ್ರ್ಯವನ್ನು ಕಸಿಯುವಂತಾಗಬಾರದು, ಅನ್ಯರ ಹಿತಕ್ಕೆ ಧಕ್ಕೆಯುಂಟಾಗುವಂತಿರಬಾರದು ಮತ್ತು ಕಡೆಯದಾಗಿ ನಮ್ಮ ಸ್ವಾತಂತ್ರ್ಯ ನಮ್ಮ ' ಹಿತ ' ವನ್ನು ಕಾಯುವಂತಿರಬೇಕು. ಅದು ಖಂಡಿತ ಒಬ್ಬ ವ್ಯಕ್ತಿಯ ಮುಕ್ತ ಸ್ಥಿತಿ. ಅಂತಹ ಸ್ಥಿತಿಯನ್ನು ಪಡೆಯಲು ನಾವು ಮನಃಪೂರ್ವಕವಾಗಿ ಪ್ರಯತ್ನಪಟ್ಟು ಅದನ್ನು ಸಾಧಿಸಿದರೆ ನಾವು ನಿಜವಾಗಲೂ ಸಂತೋಷದಿಂದಿರಬಹುದು.  

  

No comments:

Post a Comment