Monday 15 January 2018

'ಋತ ಮತ್ತು ಸತ್ಯ’


  
ಸತ್ಯವೆಂದರೆ ಏನು?  ಎಂದರೆ,  'ಸತ್ಯ' ವೇ ಸತ್ಯ. ಯಾವುದೇ ವ್ಯಕ್ತಿ, ವಸ್ತು ಅಥವಾ ವಿಷಯಕ್ಕೆ ಎರಡು ಸತ್ಯಗಳಿರಲು ಸಾಧ್ಯವಿಲ್ಲ. ಆದರೆ ಅವಕ್ಕೆ ಸಂಬಂಧಿಸಿದಂತೆ ಜನರು ನೀಡುವ ಪರಿಭಾಷೆ ಭಿನ್ನಭಿನ್ನವಾಗಿರುತ್ತದೆ. ಆ ಭಿನ್ನತೆ,  ಅದನ್ನು ನೋಡುವ ಮತ್ತು ವಿಶ್ಲೇಷಿಸುವ ವ್ಯಕ್ತಿಯ ಪರಿಮಿತ ಜ್ಞಾನದಲ್ಲಿರುತ್ತದೆಯೇ ಹೊರತು ಆ ವಸ್ತು ವ್ಯಕ್ತಿ ಅಥವಾ ವಿಷಯದಲ್ಲಿರುವುದಿಲ್ಲ. ಉಪನಿಷತ್ತು ' ಋತಂ ಚ ಸ್ವಾಧ್ಯಾಯ ಪ್ರವಚನೇ ಚ,  ಸತ್ಯಂಚ ಸ್ವಾಧ್ಯಾಯ ಪ್ರವಚನೇ ಚ ' ಎನ್ನುತ್ತದೆ. ಇಲ್ಲಿ  'ಋತ' ವೆಂದರೆ ಮನಸ್ಸಿನ ಭಾವ ಮತ್ತು ಆ ಭಾವ ತನ್ನ ಸ್ವರೂಪವನ್ನು ಕಳೆದುಕೊಳ್ಳದೆ ಯಥಾವತ್ ಪ್ರಕಟವಾದರೆ ಅದು ' ಸತ್ಯ ' ವಾಗುತ್ತದೆ.  ನಮಗೆ ಕಾಣುವ ವಸ್ತು, ವಿಷಯ ಅಥವಾ ವ್ಯಕ್ತಿಗಳನ್ನು,  ನಾವು ಕಾಣುವ ರೀತಿ ನಮಗೆ ಸತ್ಯ. ಅದು ಅನ್ಯರಿಗೆ ಬೇರೆಯ ರೀತಿಯಲ್ಲಿ ಕಂಡರೆ ಅದು ಅವರು ಕಂಡ ಸತ್ಯವಾಗುತ್ತದೆ. ಆದರೆ ಆ ವಸ್ತು, ವ್ಯಕ್ತಿ ಅಥವಾ ವಿಷಯದ ' ನೈಜ ' ಸ್ವರೂಪದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.  ಹಾಗಾಗಿ ಸತ್ಯ ಎಂದಿಗೂ ಬದಲಾಗುವುದಿಲ್ಲ, ನೋಡುವವರ ನೋಟದ ಪರಿಭಾಷೆ ಬದಲಾಗುತ್ತದೆ ಅಷ್ಟೇ.  ಇದಕ್ಕೆ ರಾಮಾಯಣದಲ್ಲಿ ಬರುವ ಒಂದು ದೃಷ್ಟಾಂತವನ್ನೇ ನೋಡಿ.  ಸೀತೆಯನ್ನು ನೋಡಿ ರಾವಣನಿಗೆ ಅವಳನ್ನು ಪಡೆಯಬೇಕೆಂಬ ಚಪಲವಾಯ್ತು. ಆದರೆ ಸೀತೆಗೆ ಬಂಗಾರದ ಜಿಂಕೆಯನ್ನು ನೋಡಿ ಅದನ್ನು ಪಡೆಯಬೇಕೆಂಬ ಚಪಲವಾಯ್ತು. ಇಬ್ಬರಿಗೂ ಆದದ್ದು ಚಪಲ ಅಥವಾ ಬಯಕೆಯೇ ಆದರೂ ಜನರು ಸೀತೆಗೆ ಕನಿಕರ ತೋರುತ್ತಾರೆ ಮತ್ತು ರಾವಣನನ್ನು ದುಷ್ಟನೆಂದು ಜರಿಯುತ್ತಾರೆ. ಹಾಗೆ ಭಿನ್ನವಾಗಿ ಅಭಿಪ್ರಾಯಪಡುವ ಜನರು, ನಮ್ಮ  ಅಥವಾ ಇತರರ ಮನವ

ನ್ನು ಸರಿಯಾಗಿ ಅರಿಯದೆ ಮಾತನಾಡುತ್ತಾರೆ. ಇಲ್ಲಿ ಸೀತೆಯೂ ಚಪಲ ಚಿತ್ತದಿಂದ ಇಚ್ಛೆ ಪಟ್ಟಳು ಮತ್ತು ರಾವಣನೂ ಅದೇ ಚಪಲ ಚಿತ್ತದಿಂದ ಸೀತೆಯನ್ನು ಬಯಸಿದ. ಇಬ್ಬರ ಮನೋಭಾವವೂ ಒಂದೇ ಆಗಿತ್ತಲ್ಲವೆ?  ಆದರೆ ಜನರು ರಾವಣನನ್ನು ದುಷ್ಟನೆಂದು ಜರಿಯುತ್ತಾರೆ ಮತ್ತು ಸೀತೆಯನ್ನು ಕನಿಕರಿಸುತ್ತಾರೆ.

ಸೀತೆಯ ಮತ್ತು ರಾವಣನ ಮನಸ್ಸಿನ ಭಾವವೆರಡೂ ಒಂದೇ ಆಗಿದ್ದರೂ ಜನರು ಆ 'ಸತ್ಯ' ವನ್ನು ನೋಡುವುದು ಭಿನ್ನ ರೀತಿಯಲ್ಲಿ ಅಲ್ಲವೇಇಂದು ನಮಗೆ ಸತ್ಯವಾಗಿ ಕಂಡದ್ದು ನಾಳೆ ಅಸತ್ಯವಾಗಿ ಕಾಣಬಹುದು ಮತ್ತು ವಿರುದ್ಧವಾಗಿಯೂ ಆಗಬಹುದು. ಜನರಿಗೆ ಒಂದು ಅಭಿಪ್ರಾಯವನ್ನು ವಹಿಸಲು ಅವರವರದೇ ಕಾರಣಗಳಿರುತ್ತದೆ. ಸತ್ಯವರಿತರೆ ನಾವು ಪಕ್ಷ ವಹಿಸುವ ಪ್ರಶ್ನೆ ಬರುವುದಿಲ್ಲ. ಹಾಗಾಗಿ ನಾವು ಸತ್ಯವರಿಯದೆ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ತಪ್ಪು ಮತ್ತು ಸದಾ ನಮ್ಮ ಪ್ರಯತ್ನ ಸತ್ಯವನ್ನಿರಿಯುವುದೇ ಆಗಿರಬೇಕು. 


ಹೀಗೆ ಒಂದೇ ಸತ್ಯವನ್ನು ಭಿನ್ನವಾಗಿ ಕಾಣಲು ಕಾರಣಗಳು ಹಲವಾರು. ಅದರಲ್ಲಿ ಬಹು ಮುಖ್ಯವಾದದ್ದು ನಮ್ಮ ಮೋಹದಿಂದ ಕೂಡಿದ 'ಪೂರ್ವಾಗ್ರಹ'  ಮತ್ತು ಎರಡನೆಯದು, ನಮ್ಮ 'ಅಜ್ಞಾನ'. ನಾವು ನಮ್ಮ ಮೋಹವನ್ನು ಬಿಟ್ಟರೆ,  ಆಗ ನಾವು ಯಾವುದಾದರೂ ಪಕ್ಷ ವಹಿಸಿ ಸತ್ಯದಿಂದ ದೂರಾಗುವುದು ತಪ್ಪುತ್ತದೆ ಮತ್ತು ಅಜ್ಞಾನವನ್ನು ತೊರೆದು ಸತ್ಯವನ್ನರಿತು ನಡೆದುಕೊಂಡರೆ ಕ್ಲೇಶ ತಪ್ಪುತ್ತದೆ. ನಾವು ನುಡಿಯುತ್ತಿರುವುದು ಸತ್ಯವೋ ಅಸತ್ಯವೋ ಎನ್ನುವ ಮಂಥನ ಸದಾಕಾಲ ನಡೆಯುತ್ತಲೇ ಇರಬೇಕು. ಸತ್ಯವನ್ನೇ ನುಡಿಯುವ ನಿರ್ಧಾರ ಮಾಡಬೇಕು.   

ಋತವು, ಬದಲಾಗದೆ ಹಾಗೇ ಹೊರಬಂದರೆ ಸತ್ಯವನ್ನೇ ನುಡಿದಂತಾಗುತ್ತದೆ.  ಸತ್ಯವನ್ನು ನುಡಿದರೆ ಮನಸ್ಸಿಗೆ ನಿರಾಳ. ಸತ್ಯವನ್ನು ನುಡಿದರೆ ನಮ್ಮ ಅಂತರಂಗ ಶುದ್ಧವಾಗಿರುತ್ತದೆ.  

No comments:

Post a Comment