Friday 19 January 2018

ಜಗತ್ತೆಂಬ ಆಶ್ವತ್ಥವೃಕ್ಷ


ನಾವು ಜೀವಿಸುವ ಈ ಜಗತ್ತು ಒಂದು ವಿಶಾಲವಾದ ಮರವಾದರೆ ನಾವು ಆ ಮರದಲ್ಲಿರುವ ಒಂದು ರೆಂಬೆ, ಕೊಂಬೆ, ಹೂ ಅಥವಾ ಹಣ್ಣೆಂದು ಭಾವಿಸಬೇಕು.  ಒಂದು ಸಣ್ಣ ಅರಳೀ ಸಸಿಯನ್ನು ತಂದು, ಭೂಮಿಯಲ್ಲಿ ಗುಣಿ ತೋಡಿ, ಸಸಿ ನೆಟ್ಟು, ಪ್ರತಿನಿತ್ಯ ಬೊಗಸೆ ಬೊಗಸೆಯಲ್ಲಿ ನೀರನ್ನು ಎರೆದು, ಕಳೆ ತೆಗೆದು ಅದನ್ನು  ಕಾಪಾಡಿದರೆ  ಅದೊಂದು ಬೃಹತ್ ಅಶ್ವತ್ಥ ವೃಕ್ಷವಾಗಿ  ನೂರಾರು ವರ್ಷ ತನ್ನ ತಂಪಾದ ನೆರಳನ್ನು ಮತ್ತು ಶುದ್ಧ ಗಾಳಿಯನ್ನು ಜಗತ್ತಿಗೆ ನೀಡುವಂತೆಯೇ, ನಾವೂ ಸಹ ಈ ಜಗತ್ತಿನಲ್ಲಿ ಜಗದ ಸೇವೆಗೆ ನಿಲ್ಲುವುದೇ ಧರ್ಮ ಎಂದು ಅರಿಯಬೇಕು.

ನಮ್ಮ  ತಾಯ  ಗರ್ಭದಲ್ಲಿ  ಬೀಜಾಂಕುರವಾಗಿ, ನಾವು ಈ ಭುವಿಗೆ ಒಂದು ಸಣ್ಣ  ಶಿಶುವಾಗಿ  ಬರುತ್ತೇವೆ.  ಹಾಗೆ ಬಂದ ನಾವೇ ಒಂದು ಮರದಂತೆ ಬೆಳೆದು ನಮ್ಮ ವಂಶದ ಶಾಖೆಗ
ಳಂತೆ ಹರಡಿ ಕೊಳ್ಳುತ್ತೇವೆ. ಇಲ್ಲಿ ನಾವು ಮರವಾದರೆ ನಮ್ಮಿಂದ ಹೊರಡುವುದೆಲ್ಲ ನಮ್ಮ ಶಾಖೆಗಳು ಅಥವಾ ಕೊಂಬೆಗಳಲ್ಲವೇ? ಹಾಗೆ ನಾವೂ ಸಹ ಯಾವುದೋ ಮರದ ಕೊಂಬೆಗಳಾಗಿರುತ್ತೇವೆ.  ಹೀಗೆ ಎಲ್ಲ  ಕೊಂಬೆಗಳಿಂದಾದ  ಈ ಜಗತ್ತೇ ಒಂದು ವೃಕ್ಷದಂತೆ ಅಲ್ಲವೇ? ಈ ವೃಕ್ಷವನ್ನು ನಾವು ಸಂರಕ್ಷಿಸಬೇಕು, ಬೆಳೆಸಬೇಕು, ಕಳೆ ಕೀಳಬೇಕು ಮತ್ತು ಇದರ ಸೇವೆ ಮಾಡಬೇಕು.

ಇಡೀ ಮನುಕುಲವೇ ಒಂದು ಬೃಹತ್ ವೃಕ್ಷ. ಈ ಭೂಮಿಯಮೇಲೆ ಮಾನವನ ಅಸ್ತಿತ್ವದ ಇತಿಹಾಸದ ಮೂಲಕ್ಕೆ ಹೋದರೆ. ಒಂದೇ ಒಂದು ಬೀಜದಿಂದ ಬೆಳೆದ ಒಂದು ಬೃಹತ್ ವೃಕ್ಷದಂತೆ, ಒಂದೇ ಮೂಲದಿಂದ ಹೊರಟ ಮಾನವ  ಹಲವಾರು ದಿಕ್ಕುಗಳಿಗೆ, ಗುಂಪು ಗುಂಪಾಗಿ ತೆರಳಿ,  ಇಡೀ ಭೂಮಂಡಲದಲ್ಲೆಲ್ಲಾ ವ್ಯಾಪಿಸಿಕೊಂಡಿರುವ ಒಂದು ಮಹಾನ್ ಮಾನವ ಸಮೂಹದ ವೃಕ್ಷದಂತೆ ಬೆಳೆದುಕೊಂಡಿದ್ದಾನೆ.

ಬೇರೆ ಬೇರೆ ದಿಕ್ಕುಗಳಲ್ಲಿ  ಹೊರಟ ಒಂದೊಂದು ಸಮೂಹವೂ ಈ ಮಾನವ ಸಮೂಹದ ವೃಕ್ಷದ ಒಂದೊಂದು ಕೊಂಬೆಯಂತೆ ಗೋಚರವಾಗುತ್ತದೆ. ಮೂಲದಲ್ಲಿದ್ದ ಗುಣಗಳು ಸಂಸ್ಕಾರಗಳು ಸಂಸ್ಕೃತಿಗಳು ಬದಲಾಗುತ್ತಾ, ಇವನ ಭಾಷೆ, ವೇಷ, ಅಚಾರ ವಿಚಾರಗಳು, ಕಾಲ ಬದಲಾದಂತೆ, ಸ್ಥಳ ಬದಲಾದಂತೆ ಬದಲಾಗುತ್ತಾ ಬೇರೆಯದೇ ರೂಪವನ್ನು ತಳೆದುಕೊಳ್ಳುತ್ತಾ ಹೋಗಿದೆ. ಮನುಷ್ಯ ಹೋದ ಕಡೆಯಲ್ಲ ಒಂದು ಹೊಸ ಸಂಸ್ಕೃತಿ ಕಲೆ ಸಾಹಿತ್ಯಗಳ ಉಗಮವಾಯಿತು. ಕಾಲಾನುಕಾಲಕ್ಕೆ ಮೂಲವನ್ನು ಮರೆತು, ಹೊಸದಾಗಿ ತನ್ನದಾಗಿಸಿಕೊಂಡ  ಸ್ವಂತಿಕೆಯಿಂದಲೇ ಮೆರೆಯಲು ಶುರುವಾಯಿತು. ಹೀಗೆ ಹಲವಾರು ರೀತಿಯ ಭಾಷೆಗಳು, ಕಲೆ ಸಾಹಿತ್ಯಗಳು, ಉಡುಗೆ ತೊಡುಗೆಗಳು, ಆಹಾರ ಪದ್ದತಿಗಳು, ಸಾಮಾಜಿಕ ಮೌಲ್ಯಗಳು ಇತ್ಯಾದಿಯಾಗಿ,  ಒಂದೊಂದು ಶಾಖೆಯೂ  ವಿಶಾಲವಾಗಿ ಹರಡಿ ನಿಂತಿದೆ ಮನುಕುಲವೆಂಬ  ಈ ಜಗದ್ವೃಕ್ಷದಲ್ಲಿ.

ನಾವುಗಳು ಅಂತಹ   ಜಗದ್ವೃಕ್ಷದ ಒಂದು ಶಾಖೆಯ ಒಂದು ಕೊಂಬೆಯಾಗಿಯೋ, ರೆಂಬೆಯಾಗಿಯೂ, ಎಲೆಯಾಗಿಯೋ, ಹೂ,  ಕಾಯಿ, ಹಣ್ಣಾಗಿಯೋ ಇದ್ದೇವೆ.  ನಾವು ಈ ವೃಕ್ಷದ ಅಂದವನ್ನು ಹೆಚ್ಚಿಸಲು, ಇದರ ಸತ್ವಯುತ ಮೌಲ್ಯಗಳನ್ನು, ಕಾಪಾಡುತ್ತಾ, ಇಲ್ಲಿರುವ ದುರಾಚಾರದ ಕಳೆಯನ್ನು ಕಿತ್ತೊಗೆಯುತ್ತಾ, ಕೊಳೆತು ನಾರುತ್ತಾ, ಇಡೀ ವೃಕ್ಷಕ್ಕೆ ಹಾನಿ ಉಂಟುಮಾಡಬಹುದಾದ ಭಾಗಗಳನ್ನು  ಕತ್ತರಿಸಿ ಬಿಸುಡುತ್ತಾ, ಹೊಸ ಚಿಗುರಿನಿಂದ ನಳನಳಿಸುತ್ತಾ ಈ ಜಗತ್ ವೃಕ್ಷದ ಅನ್ಯ ಶಾಖೆಗಳೊಂದಿಗೆ ಸೌಹಾರ್ದಯುತವಾದ ಬಾಳು ಬಾಳುತ್ತಾ, ಇದರ ಸೌಂದರ್ಯಕ್ಕೆ ಚ್ಯುತಿ ಬಾರದಂತಹ  ಕೆಲಸವನ್ನು ಸೇವಾರೂಪದಲ್ಲಿ ಮಾಡಬೇಕಾಗಿರುವುದೇ ನಮ್ಮ ಇಂದಿನ ಧರ್ಮವೆಂದು ಅರಿಯಬೇಕು. 

ಆದರೆ ಪ್ರಸಕ್ತ ವಸ್ತು ಸ್ಥಿತಿಯೇ  ಬೇರೆ ಇದೆ. ಅಂತಃಕರಣವಿರುವ ಪ್ರತಿಯೊಬ್ಬನಿಗೂ ಖೇದವಾಗುವಂಥಾ, ಈ ಜಗತ್ತಿನ ಮೇಲೆ ಜಿಗುಪ್ಸೆ ಬರುವಂಥಾ ಸ್ಥಿತಿ ಉಂಟಾಗಿದೆ. ಸ್ವಾರ್ಥ, ದ್ವೇಷ, ಅಸೂಯೆಯ ಕಾರಣ, ದೇಶ, ಜಾತಿ, ಧರ್ಮ ಭಾಷೆಗಳನ್ನೂ ಮುಂದಿಟ್ಟುಕೊಂಡು ಇಡೀ ಜಗತ್ತಿನ ಜನರು ಪರಸ್ಪರ ಹೊಡೆದಾಡುವುದನ್ನು ನೋಡಿದರೆ ಮನುಕುಲದ ನಾಶವೇ ಆಗಿಬಿಡುವುದೇನೋ ಎನ್ನುವ ಭಯವುಂಟಾಗುತ್ತದೆ. ಇದನ್ನು ಸರಿಪಡಿಸಲು ಪ್ರಯತ್ನ ಪಡಬೇಕಾದುದೇ ನಮ್ಮ ಇಂದಿನ ಧರ್ಮ.  ನಾವೂ ಸಹ ನಮ್ಮ ನಮ್ಮ ವೃತ್ತಗಳಲ್ಲಿ, ಈ  ಜಗತ್ತೆಂಬ ವೃಕ್ಷದ ಸುಂದರತೆಯನ್ನು ಕಾಪಾಡಲು  ಅಧಿಕವಾಗಿಸಲು ನಮ್ಮ ಕೈಲಾದ ಪ್ರಯತ್ನವನ್ನು ಮಾಡಬೇಕು. 


No comments:

Post a Comment