Thursday 25 January 2018

ಜಗನ್ನಾಟಕ



ಇಡೀ ಬ್ರಹ್ಮಾಂಡವೇ ಒಂದು ರಂಗಸ್ಥಳ. ಈ ರಂಗಸ್ಥಳದಲ್ಲಿ ನಡೆಯುವ ನಾಟಕವನ್ನು ನೋಡಿದರೆ ನಮಗೆ ಕಾಣುವುದು ಚಿತ್ರ ವಿಚಿತ್ರ ಪಾತ್ರಗಳ ಧರಿಸಿ ಕೋಟಿ ಕೋಟಿ ನಟರು ತಮ್ಮ ತಮ್ಮ ಪಾತ್ರಗಳ ಧರಿಸಿದ್ದಾರೆ. ಈ ನಾಟಕದ ಕಥೆಗೆ ಮತ್ತು ಇಲ್ಲಿ ನಡೆಯುವ ಪ್ರತಿಯೊಂದೂ ಅಂಕಕ್ಕೂ, ಮೊದಲಿಲ್ಲ, ಕೊನೆಯಿಲ್ಲ. ಎಲ್ಲರೂ ಪಾತ್ರಧಾರಿಗಳಾಗಿಯೂ ಪ್ರೇಕ್ಷಕರಾಗಿಯೂ ಮತ್ತು ಪಾತ್ರಧಾರಿಗಳಾಗಿಯೂ ಇದ್ದಾರೆ. ಪ್ರತಿಯೊಂದು ಪಾತ್ರಕ್ಕೂ ಅದರದೇ ಆದಂತಹ ಹಾವ, ಭಾವ, ಮಾತು ಮತ್ತು ನಟನೆ. ಅಂತಹ ಕೋಟಿ ಕೋಟಿ  ಪಾತ್ರಧಾರಿಗಳಿಂದ ತುಂಬಿರುವುದೇ ಈ ಜಗತ್ತು.  


ಈ ಜಗತ್ತೇ ಒಂದು ನಾಟಕ ಮಂದಿರ. ಇಲ್ಲಿರುವ ಎಲ್ಲರೂ ಕೇವಲ ಪಾತ್ರಧಾರಿಗಳು. ಇದು  ಕೇವಲ  ಮನುಷ್ಯರಿಗೆ  ಮಾತ್ರವೇ  ಅನ್ವಯಿಸುವುದಿಲ್ಲ. ಪರಮಾತ್ಮನ ಸೃಷ್ಟಿಯ ಸಕಲ ಜೀವರಾಶಿಗಳಿಗೂ ಅನ್ವಯಿಸುತ್ತದೆ. ಎಲ್ಲ ಜೀವಿಗಳಿಗೂ ಒಂದೊಂದು ಪಾತ್ರ ವಿಧಿತ. ಪ್ರತೀ ಜೀವಿಯೂ ಒಂದೊಂದು ವೇಷ (ರೂಪ) ಧರಿಸಿ ಈ ಜಗನ್ನಾಟಕದಲ್ಲಿ ನಟನೆ ಮಾಡುತ್ತಿರಬೇಕು. ಇಲ್ಲಿನ ಭಾಷೆ ಮತ್ತು ಸಂಭಾಷಣೆಗಳೆಲ್ಲವೂ  ಪೂರ್ವ ಲಿಖಿತ ಮತ್ತು ಪೂರ್ವ ನಿರ್ಧಾರಿತ. ಇಲ್ಲಿ ನಡೆಯುವ ನಾಟಕ ಎಂದು ಶುರುವಾಯಿತೋ ಗೊತ್ತಿಲ್ಲ ಮತ್ತು ಎಂದು ಕೊನೆಯಾಗುವುದೋ ಗೊತ್ತಿಲ್ಲ. ಎಲ್ಲ ಪಾತ್ರಧಾರಿಗಳೂ ತಾವು ಹಿಂದಿನಿಂದ ಹೊತ್ತು ತಂದ ಪಾತ್ರವನ್ನು, ಗುಣ ಮತ್ತು ಸ್ವಭಾವ ಜನ್ಯವಾದ ಮಾತುಗಳನ್ನು ಆಡುತ್ತಾ ನಟನೆಯನ್ನು ಮಾಡುತ್ತಾ ನಟಿಸುತ್ತಾ ನಟಿಸುತ್ತಾ ನೇಪತ್ಯಕ್ಕೆ ಸರಿದು ಹೋಗಿ ಮತ್ತೆ ಮತ್ತೊಂದು ರೂಪಧರಿಸಿ ರಂಗ ಪ್ರವೇಶ ಮಾಡುತ್ತಾರೆ.

ಇದು ನಾಟಕವಾದರೆ, ಈ ನಾಟಕವನ್ನು ನೋಡುವವರು ಯಾರು? ಎಲ್ಲರೂ ಪಾತ್ರಧಾರಿಗಳಾದರೆ ಪ್ರೇಕ್ಷಕರಾರು ಎನ್ನುವ ಪ್ರಶ್ನೆ ಸಾಮಾನ್ಯವಾಗಿಯೇ ಉದ್ಭವಿಸುತ್ತದೆ. ಆ ನೋಡುವವರೂ ಇಲ್ಲಿ ಪಾತ್ರಮಾಡುತ್ತಿರುವ ನಟರೆ ಅಲ್ಲವೇ? ಇಲ್ಲಿ ಪ್ರದರ್ಶಿಸಲ್ಪಡುವ ನಾಟಕವನ್ನು ನೋಡಿ, ಅದರಲ್ಲಿ ತಾವೂ ಸಹ ತಮ್ಮ ತಮ್ಮ ಪಾತ್ರಗಳನ್ನೂ ವಹಿಸಿ, ಇದನ್ನೇ ನಿಜವೆಂದು ನಂಬಿರುವವರು ಇಲ್ಲಿನ ಪಾತ್ರಧಾರಿಗಳು. ಈ ನಾಟಕಕ್ಕೆ ಅತೀತವಾಗಿ ನಿಂತು ಈ ನಾಟಕವನ್ನು ಜಗನ್ನಾಟಕದ ಸೂತ್ರಧಾರಿಯಾದ ಆ ಪರಮಾತ್ಮನೂ ಮತ್ತು ಅವನ ಪ್ರತಿನಿಧಿಯಾದ ಆತ್ಮನು  ಕೇವಲ ಸಾಕ್ಷಿಗಳಂತೆ ನೋಡುತ್ತಾರೆ.

ಇಲ್ಲಿನ ವಿಚಿತ್ರವೇನೆಂದರೆ ಪಾತ್ರಧಾರಿ ಮೊದಲೊಂದು ಮುಗ್ದ ಪಾತ್ರವಾಗಿ, ಇದೇ ರಂಗದಲ್ಲೇ ತಾಲೀಮು ಪಡೆದು ಏನೇನನ್ನೋ ಕಲಿತು, ಅರಿತು ಬೆಳೆದು ಒಬ್ಬ ಪ್ರೌಢ ಪಾತ್ರವಾಗಿ ಹಾಗೆ ಕಲಿತು ಅರಿತದ್ದನ್ನೆಲ್ಲಾ ಇಲ್ಲಿಯೇ ಪ್ರದರ್ಶಿಸಿ ಜಗದ ಮೆಚ್ಚುಗೆಗೋ, ತಾಟಸ್ಥ್ಯಕ್ಕೋ, ನಿಂದೆಗೋ, ಅಪವಾದಕ್ಕೂ ಅಥವಾ ಅಪನಿಂದೆಗೋ ಗುರಿಯಾಗಿ, ತಾನು ಕಲಿತದ್ದನ್ನು ಅನ್ಯರಿಗೆ ಕಲಿಸಿ, ತಾನು ಕಲಿತದ್ದನ್ನೆಲ್ಲಾ ಜರಡಿಯಾಡಿಸಿ, ಸಾರವನ್ನು ಹೊತ್ತುಕೊಂಡು ಮತ್ತೊಂದು ಪ್ರದರ್ಶನಕ್ಕೆ ಅಣಿಯಾಗಿ ಮತ್ತೆ ರಂಗ ಪ್ರವೇಶ ಮಾಡುತ್ತಾನೆ. ಇಷ್ಟೆಲ್ಲಾ ಪಾತ್ರಗಳನ್ನೂ ಧರಿಸಿದರೂ ಇವನಿಗೆ ಇದು ಒಂದು ಕೊನೆಮೊದಲಿಲ್ಲದ ನಾಟಕ ಎಂದು ಅರ್ಥವಾಗುವುದೇ ಇಲ್ಲ.

ಹೀಗೆ ಹಲವಾರು ಪಾತ್ರಗಳ ಧರಿಸಿ, ಪ್ರತೀ ಪ್ರವೇಶದಲ್ಲೂ "ತಾನೊಂದು ಪಾತ್ರ, ನನ್ನ ಜೀವನವೆನ್ನುವುದು ಕೇವಲ ನಾಟಕ. ಇದು ನನ್ನ ಮನೆಯಲ್ಲ, ನಾನು  ಸ್ವಸ್ಥಾನ ಸೇರಬೇಕಾದರೆ ಈ ನಾಟಕದಿಂದ ಶಾಶ್ವತವಾಗಿ ನೇಪತ್ಯಕ್ಕೆ ಸರಿಯಬೇಕು " ಎಂದು ಅರಿತಾಗ ಕ್ರಮೇಣ ಸಂಪೂರ್ಣವಾಗಿ ಭಾವಗಳು ನಶಿಸಿ, ಮಾತುಗಳ ಮರೆತು, ಧರಿಸಿದ ದಿರಿಸ ತೆಗೆದು, ಬಣ್ಣ ಕಳಚಿ  ಈ ನಾಟಕದಿಂದ ಮುಕ್ತಿ ಪಡೆಯಬಹುದು. ಅದು ಈ ಜೀವನದ ಪಾತ್ರವನ್ನು ಹೊತ್ತಿರುವಾಗಲೇ ಈ ನಾಟಕದ ಮೂಲಕವೇ, ಈ ನಾಟಕದಲ್ಲಿದ್ದರೂ ಇದರಿಂದ ಶಾಶ್ವತವಾಗಿ ನಿರ್ಗಮಿಸುವ ಪ್ರಯತ್ನವಾಗಬೇಕು. 

No comments:

Post a Comment