Monday 15 January 2018

ಜಗತ್ಸೌಂದರ್ಯ


ನಾವಿರುವ ಜಗತ್ತು ಬಹಳ ಸುಂದರ. ಯಾವುದರಲ್ಲೂ ಯಾವುದೇ ರೀತಿಯ ಕೊರತೆಗಳಿಲ್ಲ. ಸೌಂದರ್ಯವನ್ನು ನೋಡುವ ಮನಸಿರಬೇಕು. ಕಂಡದ್ದನ್ನು ' ಸುಂದರ ಎಂದು ಅರಿತುಕೊಳ್ಳುವ ಜ್ಞಾನವಿರಬೇಕು. ಕಂಡ ಸೌಂದರ್ಯವನ್ನು ಆಸ್ವಾದಿಸುವ ಸಂಸ್ಕಾರವಿರಬೇಕು.  ಕಡಲಂಚಿನಲ್ಲಿ ಕಾಣುವ ನೇರ ನೇರವಾದ ಗೆರೆ ಹೇಗೆ ಕಡಲಲ್ಲಿ ತೆರೆಯೆದ್ದಾಗ ಒಂದು ಬಾರಿ ಬಳುಕಿ ನೋಡುಗರಿಗೆ ಆನಂದವನ್ನು ನೀಡುತ್ತದೋ, ಹೇಗೆ ರಾಗದ ಜೊತೆ ತಾಳ ಸೇರಿ ಲಯವಾಗಿ ನಾಟ್ಯಧಾಟಿಯಿಂದ ಮನವನ್ನು ರಂಜಿಸುತ್ತದೆಯೋ, ಪ್ರತಿಯೊಂದೂ, ಉರಿವ ಅಗ್ನಿ ಗೋಳಗಳಾಗಿದ್ದರೂ,  ಆಗಸದ ಪಟಲದಲ್ಲಿ ಉದ್ದಕ್ಕೂ ಹರಡಿ ನಕ್ಷತ್ರಗಳು, ಒಂದು ಸುಂದರ ಚಿತ್ತಾರವನ್ನು ಮೂಡಿಸಿದೆಯೋ, ಹಾಗೆ ವಿಲಕ್ಷಣವಾದ ಪ್ರತಿಯೊಂದೂ ಜಗತ್ತನ್ನು ಸುಂದರವಾಗಿಸಲು ಇಂಬು ನೀಡುತ್ತಿವೆ. ವಿಲಕ್ಷಣವೆನ್ನುವುದು ನಮ್ಮ ಭಾವವೇ ಹೊರತು ವಸ್ತುವಿನ ನಿಜಸ್ಥಿತಿಯಲ್ಲ. ಏಕೆಂದರೆ ಪರಮಾತ್ಮನ ಸೃಷ್ಟಿಯ ಎಲ್ಲವೂ ಪರಿಪೂರ್ಣ ಮತ್ತು ಸುಂದರ.   

ಇಲ್ಲಿ ವಿಲಕ್ಷಣವೆಂದರೆ ವಿವಿಧ ಲಕ್ಷಣಗಳನ್ನು ಹೊಂದಿರುವ ಅನೇಕಾನೇಕ ವಸ್ತುಗಳು ಒಂದ್ಕೊಂದಕ್ಕೆ ಹೇಗೆ ಪೂರಕವಾಗಿವೆ ಎನ್ನುವುದೇ ಅರ್ಥ.  ಸೃಷ್ಟಿಯ ಪ್ರತಿಯೊಂದೂ ಮತ್ತೊಂದರೊಡನೆ ಸಂಪರ್ಕಕ್ಕೆ ಬಂದಾಗ ಉಂಟಾಗುವ ಸುಂದರತೆಯೇ ಸೃಷ್ಟಿಯ ವಿಶೇಷ . ಭೂಮಿಯ, ಸೂರ್ಯನ, ನೀರಿನ ಸಂಪರ್ಕಕ್ಕೆ ಬಂದಾಗ ಒಂದು ಬೀಜ ಸಸಿಯಾಗಿ, ಗಿಡವಾಗಿ, ಮರವಾಗಿ ಬಣ್ಣ ಬಣ್ಣದ    ಸುಗಂಧಭರಿತ ಹೂಗಳಿಂದ, ರುಚಿ ರುಚಿಯಾದ ಹಣ್ಣುಗಳಿಂದ ಸುಂದರವಾಗಿ ಎಲ್ಲರಿಗೂ ಆನಂದವನ್ನು ನೀಡುತ್ತದೆಯಲ್ಲವೇ? ಹಾಗೆಯೇ ಸಕಲ ಜೀವರಾಶಿಗಳೂ ಮತ್ತೆಲ್ಲ ಅನ್ಯ ಜೀವರಾಶಿಗಳಿಗೂ ಆನಂದವನ್ನು ಕೊಡುತ್ತವೆ. ಹಾಗೆ ಆನಂದವನ್ನು ನೀಡುವುದೇ ಸೃಷ್ಟಿಯ ಪ್ರತಿಯೊಂದರ ಬದುಕಿನ ಸಾರ್ಥಕತೆ.

ಮಕ್ಕಳಿಗೆ ಪಾಠ ಹೇಳಿಕೊಡುವ ಉಪಾಧ್ಯಾಯ, ಹಾಡಲು ಕಲಿತ ಗಾಯಕ, ನೃತ್ಯಮಾಡುವ ಕಲಾವಿದ, ಚಿತ್ರ ಬಿಡಿಸುವ ಕಲೆಗಾರ, ಶಿಲ್ಪಗಳನ್ನು ಕೆತ್ತುವ ಶಿಲ್ಪಿ, ಅನ್ಯರ ದುಃಖಕ್ಕೆ ಮಿಡಿಯುವ ಸಹೃದಯಿ, ದೇಹದಂಡನೆಯಿಂದ ಬದುಕ ಕಟ್ಟಿಕೊಳ್ಳುವ ಕಾರ್ಮಿಕ, ಕಾರ್ಮಿಕರಿಗೆ ಒಂದು ಜೀವನೋಪಾದಿಯನ್ನು ಕಲ್ಪಿಸುವ ಬಂಡವಾಳಶಾಹಿ, ಹೀಗೆ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಅನ್ಯರಿಗೆ ಒದಗುತ್ತಾ ತನ್ನ ಬದುಕನ್ನು ಕಟ್ಟಿಕೊಳ್ಳುತ್ತಾನಲ್ಲವೇ. ಉದ್ದೇಶದಿಂದಲೋ ಅನುದ್ದೇಶವಾಗಿಯೋ ಪ್ರತಿಯೊಬ್ಬರೂ ಅನ್ಯರಿಗೆ ಒದಗುತ್ತಾ ತಾವೂ ಬದುಕುತ್ತಾರೆ ಅಲ್ಲವೇ?

ನಮ್ಮ ನಮ್ಮ ಜೀವನದಲ್ಲೂ ಅಂತಹ ಮಧುರವಾದ ವಿಷಯಗಳನ್ನು ನಾವು ಎಲ್ಲ ಕಡೆಯೂ ನೋಡಬಹುದು. ನೋಡುವ ಮನಸ್ಸಿರಬೇಕು ಅಷ್ಟೇ!! ಹಾರುವ ಹಕ್ಕಿ, ಬೀಸುವ ಗಾಳಿ, ಹೂ-ಹಣ್ಣು, ಗಿಡ-ಮರ, ನದಿ-ಝರಿ, ಕಾಡು-ಮೇಡು, ಪ್ರಾಣಿ, ಕೀಟ, ಕ್ರಿಮಿಗಳಂತಹ ವಸ್ತುಗಳು, ಮನುಷ್ಯರ ನಡುವಿನ ಪರಸ್ಪರ ಪ್ರೀತಿ, ಪ್ರೇಮ, ಸಹನೆ, ಭಕ್ತಿಯಂತ ಮದುರ ಭಾವಗಳು, ಸಕ್ರಿಯತೆಗೆ ಇಂಬು ನೀಡುವ  ದ್ವೇಷ, ಅಸೂಯೆ, ಕೋಪ, ಮುಂತಾದ ನಕಾರಾತ್ಮಕ ಭಾವಗಳೂ ಸಹಃ ಜಗತ್ತಿನ ಆನಂದವನ್ನು ಹೆಚ್ಚಿಸಲು ಇಂಬು ನೀಡುತ್ತವೆ.    

ಜಗತ್ತಿನ ಸೃಷ್ಟಿಯ ಹಿಂದಿರುವ ಪರಮ ಚೇತನವೂ ಸುಂದರ, ಸುಂದರತೆಯಿಂದ ಸೃಷ್ಟಿಸಲ್ಪಟ್ಟ ಸಕಲವೂ ಸುಂದರ. ನೋಡುವ ಮನಸ್ಸು ಇರಬೇಕು, ಅನುಭವಿಸಲು ಹೃದಯಬೇಕು. ಪಡೆದ ಆನಂದವನ್ನು ಪರರಿಗೆ ಹಂಚುವ ಮನೋಭಾವವನ್ನೂ ಬೆಳೆಸಿಕೊಳ್ಳಬೇಕು. ಹಾಗಾದರೆ ನಾವು ಸೌಂದರ್ಯೋಪಾಸನೆಯನ್ನು ಯತೇಚ್ಚವಾಗಿ ಮಾಡಬಹುದು. ನಾವೂ ಸಹ ಜಗತ್ತಿನ ಎಲ್ಲಾ ಸುಂದರತೆಯಲ್ಲೂ ನಮ್ಮ ಪಾತ್ರವನ್ನು ಸಮರ್ಪಕವಾಗಿ ವಹಿಸುತ್ತಾ, ನಾವೂ ಸಂತೋಷಪಡುತ್ತಾ ಅನ್ಯರಿಗೆ ನಾವು ಪಟ್ಟ ಸಂತೋಷವನ್ನು ಹಂಚುತ್ತಾ ಬದುಕಿದರೆ ಜೀವನ ಸುಂದರವಾಗಿ ಸಾರ್ಥಕತೆಯನ್ನು ಕಂಡುಕೊಳ್ಳುತ್ತದೆ. ಒಟ್ಟಿನಲ್ಲಿ ಸೌಂದರ್ಯವನ್ನು ಕಾಣುವ, ಆಸ್ವಾಧಿಸುವ, ಆನಂದಿಸುವ ಮತ್ತು ಅದನ್ನು ಅನ್ಯರೊಡನೆ ಹಂಚಿಕೊಳ್ಳುವ ಬುದ್ಧಿ ನಮ್ಮದಾದರೆ ನಾವೇ ಧನ್ಯರೆಂದುಕೊಳ್ಳಬೇಕು.

No comments:

Post a Comment