Thursday 25 January 2018

ಬಯಕೆಗಳ ಜಪಮಾಲೆ


ಈಗ ಇರುವ ಸ್ಥಿತಿಗಿಂತ ಇನ್ನೂ ಉತ್ತಮ ಸ್ಥಿತಿ ಇದೆ ಮತ್ತು ಅಂತಹ ಒಳಿತಾದ ಸ್ಥಿತಿಯನ್ನು ಪಡೆಯಬಹುದು. "ಅದಕ್ಕಾಗಿ ನಾನು ಸಾಹಸ ಮಾಡುತ್ತೇನೆ" ಎನ್ನುವುದೇ ಮನುಷ್ಯ ಬುದ್ಧಿ. ರೀತಿ ಹೊಮ್ಮುವ ಬುದ್ಧಿಯ ಬುಗ್ಗೆಗಳೇ ಪ್ರಗತಿಗೆ ಹಾದಿ. ರೀತಿಯ ಯೋಚನೆಗಳು ಬುಗ್ಗೆ ಬುಗ್ಗೆಯಾಗಿ, ಅಲೆ ಅಲೆಯಾಗಿ ಎಲ್ಲರಲ್ಲೂ ಸಹಜವಾಗೇ ಇರುತ್ತದೆ.   

ಕ್ರಿಯಾಶೀಲತೆಯೇ ಮನುಷ್ಯನ ಗುಣ. ಕ್ರಿಯಾಶೀಲತೆಯೇ ಇವನನ್ನು ಆದಿಮಾನವನ ದೆಶೆಯಿಂದ ಇಂದಿನ ನಾಗರೀಕ ಮಾನವನನ್ನಾಗಿಸಿದೆ. ಮನುಷ್ಯನ   ಸಕ್ರಿಯವಾದ ಮನಸ್ಸು ಬುದ್ಧಿಗಳೇ,  ಜಗತ್ತಿನಾದ್ಯಂತ ಹಲವು ರೀತಿಯ ಪ್ರಗತಿಗಳಿಗೆ ಕಾರಣವಾಗಿವೆ. ವೈಜ್ಞಾನಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರಗತಿಗೆ ಕ್ರಿಯಾಶೀಲತೆಯೇ ಕಾರಣವಲ್ಲವೇ? ಇಂದು ನಾವಿರುವ ಸ್ಥಿತಿಗಿಂತ ಇನ್ನೂ ಉತ್ತಮವಾದ ಸ್ಥಿತಿಯನ್ನು ಹೊಂದುವ ನಿರಂತರ ಪ್ರಯತ್ನ ಜಗತ್ತಿನಲ್ಲಿ ಎಲ್ಲ ಕಡೆಯೂ, ಎಲ್ಲ ಮಾನವರ ಮನಸ್ಸುಗಳಲ್ಲಿ ನಡೆದೇ ಇರುತ್ತದೆ ಮತ್ತು ಅದಕ್ಕೆ ಪೂರಕವಾಗಿ ಅವನ ಬುದ್ಧಿ ಕೆಲಸ ಮಾಡುತ್ತಲೇ ಇರುತ್ತದೆ. ಇದು ಅವನ ಸಹಜ ಗುಣದ ಮೇಲೆ ಹೇರಿಕೊಂಡ ಕೃತಕ ಗುಣವಾದ್ದರಿಂದ ಇದೂ ಕೂಡ ಸಹಜತೆಯಿಂದ ಉದ್ಭವವಾದ ಕೃತಕ ಬುದ್ಧಿಯೇ  ಅಲ್ಲವೇ?

ಮನುಷ್ಯನ ಬುದ್ಧಿ ಪ್ರಗತಿ ಪಥದಲ್ಲಿ ಯೋಚಿಸುತ್ತದೆ ಎನ್ನುವುದನ್ನು ಒಪ್ಪಿಕೊಳ್ಳೋಣ. ಆದರೆ ಪ್ರಗತಿಯ ಫಲ ಕೇವಲ ಸಜ್ಜನರ ಕೈಯಲ್ಲಿಯೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ದೌರ್ಭಾಗ್ಯವಶಾತ್ ಅದು ದುಷ್ಟಜನರ ಕೈಗೂ ಸೇರಿ ಅವರಿಗೆ ತಮ್ಮ ದುಷ್ಟತನದ ಕೆಲಸಗಳನ್ನು ಸಮರ್ಪಕವಾಗಿ ಮಾಡಲು ಸೂಕ್ತ ಸಾಧನಗಳನ್ನು ಮತ್ತು ಅನ್ಯರ ನಾಶಕ್ಕೆ ಸೂಕ್ತ ಆಯುಧಗಳನ್ನೂ ಕೊಟ್ಟಂತಾಗಿದೆ ಅಲ್ಲವೇ? ಇದೆ ವಿಪರ್ಯಾಸ. ವಿಜ್ಞಾನದ ಪ್ರಗತಿ, ರಾಜಕೀಯ ಪ್ರಗತಿ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ

ಮನುಷ್ಯರ ಹೃದಯಗಳಲ್ಲಿ  ಮಿತಿಯಿಲ್ಲದ ಸುಖಗಳ  ಆಸೆಯ ಒರತೆ ಅಥವಾ ಊಟೆ ಬತ್ತುವುದೇ ಇಲ್ಲ. ಸದಾಕಾಲ ಮನಸ್ಸು  "ಅದು ಬೇಕು ಇದು ಬೇಕು ಮತ್ತೊಂದು ಬೇಕು" ಎಂದು ಮತ್ತು  ಅದು "ಎಲ್ಲಿ ಸಿಗುತ್ತದೆ" ಎಂದು ಹುಡುಕಾಡುತ್ತಲೇ ಇರುತ್ತದೆ.  ಎಂದಿಗೂ, ಸದಾಕಾಲ ಆನಂದದಿಂದ ಇರಬೇಕೆನ್ನುವುದೇ ಮನುಷ್ಯನ ಆಸೆ.  ಆದರೆ ಆನಂದವೆಂದರೇನು ಎನ್ನುವುದು ಯಾರಿಗೂ ಅರ್ಥವಾಗಿಲ್ಲ. ಯಾವುದರಿಂದ ತನಗೆ ಆನಂದ ಸಿಗುತ್ತದೆ ಎಂದೂ ಅರಿತಿಲ್ಲ. ಇದರೊಳಗೋ, ಅದರೊಳಗೋ, ಮತ್ಯಾವುದರೊಳಗೋ ಗೊತ್ತಿಲ್ಲ. ಇಡೀ ಲೋಕದ ಜನ ಸೊಗಸು, ಆನಂದಕ್ಕೆ ಕಾರಣವಾದ ವಸ್ತು ಎಲ್ಲಿದೆ ಎಂದು ಹುಡುಕುತ್ತಲೇ ಇರುತ್ತಾರೆ. 

ಒಂದು ವಸ್ತುವನ್ನೋ ವಿಷಯವನ್ನೋ ಅಥವಾ ವ್ಯಕ್ತಿಯನ್ನೂ ಕಂಡಾಗ ಮೇಲ್ನೋಟಕ್ಕೆ ಪರಿಚಯವಾದಾಗ, ಅದರ ಸಂಗ ಮಾಡುವ ಬಯಕೆ ಉಂಟಾಗಬಹುದು. ಬಯಕೆ ಹೃದಯಾಂತರಾಳದಲಿ ಒಸರುತ್ತದೆ. ಹಾಗೆ ಬಯಸಿದ್ದನ್ನು ಪಡೆಯಲು ಪ್ರಯತ್ನ ನಡೆಯುತ್ತದೆ.  ಪ್ರಯತ್ನ ಫಲಕಾರಿಯಾದರೆ " ಹಾ ಇದರಿಂದ ನನಗೆ ಆನಂದ" ಎನ್ನುವ ಭಾವ ಮನದಲ್ಲಿ ಮೂಡುತ್ತದೆ. ಹಾಗೆ ಮೂಡಿದ ಭಾವ ಕ್ಷಣಕಾಲ ಇದ್ದು ಮಾಯವಾಗುತ್ತದೆ. ಮತ್ತೆ ಮತ್ತೊಂದು ಬಯಕೆ ಒಸರುತ್ತದೆ,  ಮತ್ತದೇ ಪ್ರಯತ್ನ. ಮಿತಿಯೇ ಇಲ್ಲದ ಬಯಕೆಗಳ ಸರಮಾಲೆಯನ್ನು ಹೊತ್ತು ಜೀವನ ಸಾಗಿಸುವ   ನರಪ್ರಾಣಿಯ ಬಯಕೆಗಳು ತೀರುವುದೆಂತು

ಬಯಕೆಗಳಿಂದ ವಾಂಛೆ ತೀರಬಹುದು, ಆದರೆ ಸತ್ಯವಾದ ಆನಂದ ಎಂದಿಗೂ ಸಿಗುವುದಿಲ್ಲ. ಮನುಷ್ಯನಿಗೆ ಎಂದು ಸತ್ಯವಾಗಿ ಅರ್ಥವಾಗುತ್ತದೆಯೋ, ಹಾಗೆ ಅರ್ಥವಾದ ವಿಷಯ,  ಎಂದು ದೃಢವಾಗಿ ಮನದಲ್ಲಿ ಬೇರೂರುತ್ತದೆಯೋ, ಹಾಗೆ ಬೇರೂರಿದ ವಿಷಯವನ್ನು ಮನುಷ್ಯ ಎಂದು ತನ್ನ ಸ್ವಾಭಾವವಾಗಿಸಿಕೊಳ್ಳುತ್ತಾನೋ, ಅಂದು ಅವನು ಬಯಕೆಗಳ ಜಪಮಣಿಮಾಲೆಯನ್ನು ಕಿತ್ತೊಗೆದು, ಸತ್ಯವಾದ, ನಿಜವಾದ ಮತ್ತು ಶಾಶ್ವತವಾದ ಆನಂದವನ್ನು ಪಡೆಯುತ್ತಾನೆ.


No comments:

Post a Comment