Saturday 25 February 2012

ಪವಿತ್ರ ವನ



 ಕಂಡೆಯಾ   ಬೆಟ್ಟದಲಿ  ಜಗಮಗಿಸುವ ಮಂದಿರವಾ....  


ಸುಶ್ರಾವ್ಯ ಮಂತ್ರ ಘೋಷವಾ
 ಗಾಳಿಯಲಿ  ತುಂಬಿರುವ ಸುಗಂಧವಾ
 ಕೃಷ್ಣನ ಮುರಳೀ ಗಾನದಂತೆ
 ನಟರಾಜನ ಗೆಜ್ಜೆಯುಲಿಯಂತೆ
 ಕಾವಲಿಗೆ ಜಯ ವಿಜಯರಂತೆ

ಕಂಡೆಯಾ 
 ಬೆಟ್ಟದಲಿ  ಜಗಮಗಿಸುವ ಮಂದಿರವಾ ....  



ಕಂಡು ಒಳಗಣ ದೃಶ್ಯವನು ಚಕಿತನಾದೆನು ನಾ
  ಹೂ ಗಿಡ ತರು ಲತೆಗಳನು
 ದುಂಬಿ ಪತಂಗ ಹಕ್ಕಿಗಳಾಲಪನೆಯನು
 ದೇವ ದೇವತೆಗಳ ಭೂಲೋಕ ಸ್ವರ್ಗವನು
  ದೈವರೂಪದ ಎಲ್ಲ ಗಿಡಮರಗಳ ಪೂಜೆಯನು



 ಆ ದೇವಾಲಯದಲಿ ಕಂಡೆ ನಾ..................................
   
ಭೂಮಂಡಲದಲಿ ದೈವೀ ಶಕ್ತಿಯನು ಪಸರಿಪ
 ಬ್ರಹ್ಮ ವಿಷ್ಣು ಮಹೇಶ್ವರರ ರೂಪಧರಿಸಿದಶ್ವತ್ಥವೃಕ್ಷವನು
 ಮಹಾದೇವನ ತಾಂಡವ ನೃತ್ಯವನು
ಸೃಷ್ಟಿಕರ್ತನ ಕೈ ತಾಳವಾದ್ಯದ ಝೇಂಕಾರವನು
ದೇವತೆಗಳಾನಂದಿಪ ಮದನಾರಿಯ ವೇಣುಗಾನವನು


 
 ಮನದೇಹಾತ್ಮಗಳ ಆನಂದಿಪುದು ಈ ಗುಡಿ............................. 

 'ಕದಂಬ'ವನ ಗೋಪೀ ಕೃಷ್ಣರ ನೃತ್ಯವ ತೋರಿದಂತೆ
ಎಲೆಗಳೆಲ್ಲವು  ಪವನನಿಗೆ ಉತ್ತರವನಿತ್ತಂತೆ
ಮೀನಾಕ್ಷಿ ಸುಂದರೇಶರ ಶುಭಲಗ್ನವಾದಂತೆ
'ಆಲ' ದೇವ  ದಕ್ಷಿಣಾಮೂರ್ತಿಯು ಧ್ಯಾನಕ್ಕೆ ಕುಳಿತಂತೆ


 
 ಮನದೇಹಾತ್ಮಗಳ ಆನಂದಿಪುದು ಈ ಗುಡಿ............................. 

 ಸರಸತಿಯ ಪ್ರತಿರೂಪ ಮಲ್ಲಿಗೆಯ ಘಮಘಮಲು
 ಶಕ್ತಿ ದೇವಿಯ ರೂಪದಿ ರಕ್ತವರ್ಣದ  ಜಪಾಕುಸುಮಗಳು
 ವಿಷ್ಣುವಿನರ್ಧಾಂಗಿ ಪದ್ಮಜಳೆ  ಕೆಂಪುವರ್ಣದ ಕಮಲಗಳು
 ವಿಘ್ನನಾಶನರೂಪದಿ ಸುಂದರ ಅರ್ಕ ಪುಷ್ಪದ  ವನಗಳು
 

 ಮನದೇಹಾತ್ಮಗಳ ಆನಂದಿಪುದು ಈ ಗುಡಿ............................. 

 ಕಾರ್ತಿಕೇಯನ  ಕಮಲದಾ ಕೊಳದೊಳು
ತಮಾಲ ಸುಗಂಧ ತರುವುದು, ಮಾಧವನಾ ಮನದೊಳು
ಅವನರಸಿ, ತುಳಸಿ ವಾಯುವನು ಶುದ್ಧಿಗೊಳಿಸಿರಲು
ಮದನನಾ ಮಾವು ರುಚಿಭರಿತ ಫಲ ನೀಡಿರಲು


 
ಮನದೇಹಾತ್ಮಗಳ ಆನಂದಿಪುದು ಈ ಗುಡಿ............................. 

ಶಿವನನುಜೆ   ಲಕ್ಷ್ಮಿ'ಬಿಲ್ವ' ರೂಪದಿ ರೋಗ ನೀಗುತಿರೆ
ಹರನ ರುದ್ರಾಕ್ಷ  ದೇಹ-ಮನಗಳ ಸಮತೋಲನವ ಕಾಯುತಿರೆ
ವಾಸಮಾಡಿಹರಿಲ್ಲಿ ಈ ಭವ್ಯ ಗುಡಿಯಲ್ಲಿ
ದೇವ ವೈದ್ಯರು ಪಾವನ ವೃಕ್ಷ ಗರ್ಭಗೃಹದಲ್ಲಿ

ಮನದೇಹಾತ್ಮಗಳ ಆನಂದಿಪುದು ಈ ಗುಡಿ............................. 

ಶಕ್ತಿನೀಡಿ ಉದ್ದೀಪಿಸುವುದಿಲ್ಲಿ 'ಆಮಳಕ'ವು ವಿಷ್ಣುರೂಪದಲಿ
ಹೊಳಪ ನೀಡುವುದು  'ನಂದಿಬಟ್ಟಲು' ಶಿವನ ಪಾಲನೇತ್ರ ರೂಪದಲಿ
 ನೀಡಿತು ಮನಕೆ ಶಾಂತಿ ಸೀತೆಗೆ 'ಅಶೋಕ'ವದು ರಾವಣನ ಲಂಕೆಯಲಿ
 ಮೆರುಗನೀವುದು ತ್ವಚೆಗೆ ಚೆಂದದಿ ತಾಯೆ ಗಿರಿಜೆಯಾ 'ಚಂದನವು'

ಮನದೇಹಾತ್ಮಗಳ ಆನಂದಿಪುದು ಈ ಗುಡಿ............................. 

ಆತ್ಮಾನಂದವೀವುದು 'ಬಿದಿರ' ಪಿಳ್ಳಂಗೋವಿ ಮಾಧವನ ಸ್ವರದಲಿ  
ಕಾಯ್ವುದೆಲ್ಲ ಮರಗಿಡಬಳ್ಳಿಗಳು  ಸ್ವಾಸ್ಥ್ಯವೆಮ್ಮಯ ನಿರತದಲಿ 
ಒಹ್ ಪ್ರಾಜ್ವಲ್ಯಮರಗಳೇ ನಿಂತಿರುವಿರಿ ನೀವುಗಳು, ನಮ್ಮ ದೈವ ರೂಪದಲಿ  
ನಮ್ಮ ದೈವ ರೂಪದಲಿ  ನಮ್ಮ ದೈವ ರೂಪದಲಿ  ನಮ್ಮ ದೈವ ರೂಪದಲಿ  




1 comment:

  1. ರವಿಯವರೇ
    ತುಂಬಾ ಆನಂದವಾಯ್ತು ನಿಮ್ಮ ಪ್ರಕೃತಿ ಪ್ರೇಮವನ್ನು ಈ ಕವನದಲ್ಲಿ ನೋಡಿ
    ಉತ್ತಮ ಕವನ

    ReplyDelete