Saturday, 11 February 2012

ಪರಮಾತ್ಮ ಸ್ವರೂಪ.
ಆವರವರ ಭಾವಕ್ಕೆ ಅವರವರ ಭಕುತಿಗೆ
ಅವರವರ ತೆರನಾಗಿ ಇರುತಿಹನು ಶಿವಯೋಗಿ
ಹರನ ಭಕ್ತರಿಗೆ ಹರ ಹರಿಯ ಭಕ್ತರಿಗೆ ಹರಿ
ನರರೇನು ಭಾವಿಸುವರದರಂತೆ ಕಾಣುವನು  

ಎಂತಹ ಸುಂದರ ಕಲ್ಪನೆ.ವೀರಶೈವ ಪಂಥದ ಯಾರೋ ಶರಣರು ಬರೆದ ಪಂಕ್ತಿಗಳು.ಇದೇ ರೀತಿಯ ಕಲ್ಪನೆಯನ್ನು ಬಹಳ ಜನ ಸಂತರು ಬೇರೆ ಬೇರೆ ಸಮಯಗಳಲ್ಲಿ ಅನುಭವಿಸಿದ್ದಾರೆ. ಉದಾಹರಣೆಗೆ ತೆಲುಗಿನ  ಶ್ರೇಷ್ಠ ಕವಿ ಭಕ್ತ ವರೇಣ್ಯ ಶ್ರೀ ತಾಳ್ಳಪಾಕ ಅನ್ನಮಾಚಾರ್ಯರು  " ಎಂತ ಮಾತ್ರಮುನ ಎವ್ವರು ತಲಚಿನ ಅಂತಮಾತ್ರಮೆ ನೀವು. ಅಂತರಾಂತರಮು ವೆತಕಿ ಚೂಡ ಪಿಂಡಂತೆ ನಿಪ್ಪಟಿ ಅನ್ನಟ್ಟು "ಎಂದು ಹೇಳುತ್ತಾ ಭಗವಂತನನ್ನು,  "ಹಿಟ್ಟಿನ ಗಾತ್ರದ೦ತೆ ನಿಪ್ಪಟ್ಟು" ಇದ್ದಹಾಗೆ, ಮಾನವ ಮನಸ್ಸಿನ  ಕಲ್ಪನೆ ಹೇಗಿರುತ್ತದೋ ಅವರಿಗೆ ಹಾಗೆ ದೇವರು ಕಾಣುವನೆಂದು ಭಾವಿಸುತ್ತಾರೆ.ಹಾಗೆ ಆ ದೇವರು ಎಂಬ ವಸ್ತು  ಮಾನವರು ಏನೆಂದು ನೆನೆದರೆ ಅಷ್ಟು.

ಮಾನವನ ಮಷ್ಟಿಷ್ಕದಲ್ಲಿ ಆಲೋಚನೆ ಮಾಡುವ ಪ್ರವೃತ್ತಿ ಬಂದಾಗಿನಿಂದ,ಈ ಪರಮಾತ್ಮ ನಾರು ?ಇವನ ಸ್ವರೂಪವೇನು ?ಎಂಬ ಕುತೂಹಲ ಕಾಡಿದೆ.ತಮಗೆ ಕಾಣದ ಆದರೂ ತಮ್ಮನ್ನು ರಕ್ಷಿಸುವ ಯಾವುದೋ ಒಂದು ಶಕ್ತಿಯೇ ಆ ದೇವರು ಎಂಬ ವಿಚಾರ ಮನುಷ್ಯನ ಮನಸ್ಸಿನಲ್ಲಿ ಮೂಡಿದುದು ಹೀಗಿರಬಹುದು.

ಬಹಳ ಬಹಳ ಹಿಂದೆ ಮನುಷ್ಯ ಇನ್ನೂ ಕಾಡಿನಲ್ಲಿ ಅಲೆಮಾರಿ ಜೀವನ ಮಾಡುತ್ತಿದ್ದಾಗ, ಏನೋ ಸಿಕ್ಕ ಆಹಾರವನ್ನು ತಿನ್ನುವುದು, ಕೈಗೆ ಸಿಕ್ಕ ಹಣ್ಣು, ಗೆಡ್ಡೆ, ಗೆಣಸು, ಪ್ರಾಣಿಗಳ ಮಾಂಸಗಳನ್ನು  ತಿಂದು ಸ್ಥಳದಿಂದ ಸ್ಥಳಕ್ಕೆ ಅಲೆಯುತ್ತಾ,ಬೇರೆ ದುಷ್ಟ ಪ್ರಾಣಿಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದ್ದ.ಆಗ ತಾನೇ ಅಲ್ಪ ಸ್ವಲ್ಪ ವಿಚಾರ ಅವನ ಮನಸ್ಸಿನಲ್ಲಿ ಮೂಡುತ್ತಿರುವಾಗ ಅವನಲ್ಲಿ ಬಂದ ಯೋಚನೆ ಹೀಗಿದ್ದಿರಬಹುದು.ದಿನದ ಯಾವೊದೋ ಸಮಯದಲ್ಲಿ ಆಕಾಶದಲ್ಲಿ ಯಾವುದೋ ಒಂದು ವಸ್ತು ಬರುತ್ತದೆ.ಅದು ಬಂದಾಗ ತನಗೆ ಎಲ್ಲ ವಸ್ತುಗಳೂ ನಿಚ್ಚಳವಾಗಿ ಕಾಣುತ್ತದೆ.ಆಗ ತನ್ನ ಮತ್ತು ತನ್ನ ಸಂಗಡಿಗರ ರಕ್ಷಣೆಯನ್ನು ಸಮರ್ಪಕವಾಗಿ ಮಾಡಿಕೊಳ್ಳಬಹುದು.ಆದರೆ ಯಾವುದೋ ಸಮಯಕ್ಕೆ,ಆ ವಸ್ತು ಕಾಣೆಯಾದಾಗ ಕಣ್ಣು ಕತ್ತಲಿಟ್ಟು, ಏನೂ ಕಾಣದಾದಾಗ,ದುಷ್ಟ ಕಾಡುಪ್ರಾಣಿಗಳಿಂದ ತನ್ನನ್ನು ತಾನು ರಕ್ಷಿಸಿ ಕೊಳ್ಳಲಾಗುತ್ತಿರಲ್ಲಿಲ್ಲ.ಅವನು ಹೆದರುತ್ತಾ ಹೆದರುತ್ತಾ ಬದುಕುತ್ತಿದ್ದ. ಹೆದರಿದಾಗ, ಸ್ವ ರಕ್ಷಣೆಗೆ ನಾವು ಯಾರನ್ನಾದರೂ ಅವಲಂಬಿಸುವಂತೆ, ತನ್ನ ರಕ್ಷಣೆಗೆ ಸಹಾಯಮಾಡುವ ಆ "ವಸ್ತು"ವನ್ನು ತನ್ನ ಆಪ್ತನೆಂದು,ರಕ್ಷಕನೆಂದು,ದೇವರೆಂದು ನಂಬಿ ಅವಲಂಬಿಸಿರಬಹುದು.ಅದೇ ರೀತಿ ಮೇಲಿಂದ ಬರುವ ಮಳೆ, ಮಳೆಯಿಂದಾಗುವ ಬೆಳೆ, ಬೆಳೆಯಿಂದ  ಸಿಗುವ ಆಹಾರ, ಹೀಗೆ ತನಗೆ ಉಪಯೋಗಕ್ಕೆ ಬರುವ ಎಲ್ಲಾ ವಸ್ತುಗಳನ್ನೂ ದೈವವೆಂದು ಭಾವಿಸುವ,ಆರಾದಿಸುವ, ಪೂಜಿಸುವ ಮತ್ತು ಅವಲಂಬಿಸುವ ಪ್ರವೃತ್ತಿ ಅವನಲ್ಲಿ ಬೆಳೆಯುತ್ತಾ ಹೋಗಿರಬಹುದು.

ಮಾನವನ ವಿಚಾರ ಶಕ್ತಿ ಬೆಳೆಯುತ್ತಾ ಹೋದಂತೆ ಅವನ ಕಲ್ಪನೆಯೂ ಬೆಳೆಯುತ್ತಾ ಹೋಯಿತು. ಯಾರ ಕಲ್ಪನೆ ಪ್ರಬಲವಾಗಿತ್ತೋ ಅವರ ಪ್ರಭಾವ ಸುತ್ತಲಿನ ಜನಸಮೂಹದಮೇಲೆ ಗಾಢವಾಗಿ ಆಯಿತು.ಅವರನ್ನು ಮತ್ತು ಅವರ ವಿಚಾರಧಾರೆಯನ್ನು ಮಿಕ್ಕೆಲ್ಲರೂ ನಂಬ ತೊಡಗಿದರು.ಅವರನ್ನೇ ಹಿಂಬಾಲಿಸುತ್ತಾ ಹೋದರು.ಹೀಗೆ ಬೆಳೆಯುತ್ತಾ ಹೋದ ಆ ದೇವರ ಕಲ್ಪನೆ ಹತ್ತು ಹಲವಾರು ಆಯಾಮಗಳನ್ನು ಸೃಷ್ಟಿಸಿಕೊಂಡು ಇಂದಿಗೂ ಬದಲಾಗುತ್ತಲೇ ಇದೆ. ಹೊಸ ಹೊಸ ಕಲ್ಪನೆಗಳು ಬೆಳೆಯುತ್ತಾ, ಹಳೆಯ ಮತ್ತು ಬಲಹೀನ ಕಲ್ಪನೆಗಳು ಮತ್ತು ಅವುಗಳ ಮೇಲಿನ ನಂಬಿಕೆ ಅಳಿಸಿಹೊಗುತ್ತಾ ಹೋದವು.ಸತ್ಯಕ್ಕೆ ಹತ್ತಿರವಾದ ವಿಶ್ಲೇಷಣೆಗಳು ಮತ್ತು ವ್ಯಾಖ್ಯಾನಗಳು ಸ್ಥಿರವಾಗಿ ನಿಂತು ಇಂದಿಗೂ ಪ್ರಚಾರದಲ್ಲಿವೆ. ಈ  ಗುಂಪಿಗೆ ಸೇರುವುದೇ ವೇದೋಪನಿಷತ್ತುಗಳು ಮತ್ತು ಅವುಗಳನ್ನುಅವಲಂಬಿಸಿದ ಕಾವ್ಯ ಪುರಾಣ ಗಳು.ಕಾಲಾನುಕಾಲಕ್ಕೆ ಈ ವೇದ ಉಪನಿಷತ್ತುಗಳನ್ನೂ ಮತ್ತು ಅದರ ಘಹನವಾದ ಅರ್ಥವನ್ನೂ ಬೇರೆ ಬೇರೆ ರೀತಿಯಲ್ಲಿ ವಿಶ್ಲೇಷಿಸುತ್ತಾ ಹೋದಂತೆ ಬೇರೆ ಬೇರೆ ಪಂಥಗಳೂ,ಮತಗಳು ಪಂಗಡಗಳೂ ಹುಟ್ಟಿಕೊಂಡವು.ತಮ್ಮ ಅಭಿಮತವೇ ಉತ್ಕೃಷ್ಟವೆನ್ನುವ ಅಭಿಪ್ರಾಯ ಪ್ರಾಯಶಃ ಎಲ್ಲಾ ಪಂಗಡದವರಿಗೂ ಇತ್ತು. 

ಆದರೆ ಬೇರೆ ಬೇರೆ ವಿಚಾರಧಾರೆಗಳು ಸೃಷ್ಟಿಯಾದಂತೆ ಬೇರೆ ಬೇರೆ ಧರ್ಮಗಳೂ ಮತ್ತು ಬೇರೆ ಬೇರೆ ಜಾತಿಗಳೂ ಹುಟ್ಟಿಕೊಳ್ಳತೊಡಗಿದವು.ಬೇರೆಬೇರೆ ಪಂಗಡಗಳು ತಮ್ಮ ಮತವನ್ನು ತೀವ್ರವಾಗಿ ಪ್ರಚಾರಮಾಡಲು ಮೊದಲಾದವು.ಪಂಗಡ ಪಂಗಡಗಳಲ್ಲೇ ಪರಮಾತ್ಮನ ವಿಚಾರವಾಗಿ ಪೈಪೋಟಿ, ವಾದ, ವಿವಾದ, ಜಗಳ ಯುಧ್ಧಗಳು ಮೊದಲಾದವು.

ಪಾಪ ದೇವರು ತನ್ನ ಸ್ವರೂಪವನ್ನು ಇಟ್ಟಕೊಂಡು ತನ್ನಷ್ಟಕ್ಕೆ ತಾನು ಹಾಯಾಗಿ ಇದ್ದರೂ ಅವನಲ್ಲಿ ಇಲ್ಲದ ಭೇಧವನ್ನು ಕುರುತು ತಮ್ಮ ಕಲ್ಪನೆಗನುಸಾರವಾಗಿ ಚರ್ಚೆ,ವಾದ ಮತ್ತು ವಿವಾದ ವಿಕೋಪಕ್ಕೆ ಹೋಗಿ, ಇನ್ನೂ ಹೆಚ್ಚು ಹೆಚ್ಚು ಮತಗಳು, ಆ ಮತಗಳನ್ನು ಅವಲಂಬಿಸುವ ಪಂಗಡಗಳು, ಆ ಪಂಗಡಗಳ ಮತ್ತು ಒಳ ಪಂಗಡಗಳ ಮಧ್ಯೆ ಛಲ ಮತ್ತು ಯುಧ್ಧ ನಡೆಯುತ್ತಲೇ ಬ೦ದಿದೆ.

ಆದರೆ ಕೋಟ್ಯಾಂತರ ಜನರ ನಂಬಿಕೆಗೆ ಪಾತ್ರನಾದ,ಈ ಪರಮಾತ್ಮನಾರು.ಈ ಪರಮಾತ್ಮನನ್ನು ನಂಬಬೇಕೆ ಅಥವಾ ಪೂಜಿಸಬೇಕೆ ಅಥವಾ ಬೇಡವೇ,ಎಂಬ ಪ್ರಶ್ನೆಗಳು ಪ್ರತಿಯೊಬ್ಬನ ಹೃದಯದಲ್ಲೂ ಪ್ರಮಾಣ ಭೇಧವಿದ್ದರೂ,ಬಂದೆ ಬಂದಿರುತ್ತದೆ.

ನಮ್ಮ ಜೀವನದಲ್ಲಿ ನಡೆದ,ನಡೆಯುತ್ತಿರುವ ಮತ್ತು ನಡೆಯಬಹುದಾದ ಘಟನೆಗಳಿಗೆ ನಾವು ಸರಿಯಾದ ಕಾರಣವನ್ನು ಕೊಡಲು ಅಸಾಧ್ಯ.ಏಕೆಂದರೆ ಈ ಸೃಷ್ಟಿಯ ಎಲ್ಲ ರಹಸ್ಯಗಳನ್ನೂ ಮಾನವ ಇನ್ನೂ ಭೇದಿಸಿಲ್ಲ.ವಿಜ್ಞಾನಿಗಳು ಅಲ್ಪ ಪ್ರಮಾಣದಲ್ಲಿ ಈ ಸೃಷ್ಟಿಯ ರಹಸ್ಯಗಳನ್ನು ಛೇದಿಸುವ ಪ್ರಯತ್ನವನ್ನು ಮಾಡಿದ್ದರೂ  ಅಗಾಧವಾದ  ವಿಶ್ವದ ಮತ್ತು ಸೃಷ್ಟಿಯ ರಹಸ್ಯಗಳು ಇನ್ನೂ ನಿಘೂಡ ವಾಗಿಯೇ ಇವೆ.ನಿರಂತರ ಬದಲಾಗುವ ಈ ಪ್ರಪಂಚದಲ್ಲಿ ಹೊಸ ಹೊಸ ರಹಸ್ಯಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ.ಹಾಗಾಗಿ ಯಾವುದೇ ಕಾಲಕ್ಕೂ ಸೃಷ್ಟಿಯ ಎಲ್ಲಾ ರಹಸ್ಯಗಳನ್ನೂ ಮತ್ತು  ನಿಘೂಡತೆಗಳನ್ನೂ  ಛೇದಿಸಲು ಎಂದಿಗೂ ಸಾಧ್ಯವೇ ಇಲ್ಲ ಎಂದು ಹೇಳಬಹುದು.

ಹಾಗಾಗಿ ನಮ್ಮ ತಿಳುವಳಿಕೆಗೆ ನಿಲುಕದ ಮತ್ತು ನಮ್ಮ ಜೀವನದಲ್ಲಿ ನಡೆದ ಮತ್ತು ನಡೆಯಬಹುದಾದ ಘಟನೆಗಳ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳದೆ,ಅವುಗಳನ್ನೆಲ್ಲ ಆ ಕಾಣದ ದೇವನಿಗೆ ಆರೋಪ ಮಾಡಿ ನಾವು ನೆಮ್ಮದಿಯಿಂದ ಇರಬೇಕಷ್ಟೇ.ನಂಬ ಬೇಕು ಮತ್ತು ನಂಬಲೇಬೇಕು. ಬೇರೆ ದಾರಿ ಇಲ್ಲ. ಆದರೆ ಏನನ್ನು ನಂಬುವುದು? ಹಾಗೆ ಮತ್ತೊಂದು ರೀತಿಯಲ್ಲಿ ಯೋಚಿಸಿ, ಈ ಸೃಷ್ಟಿಯಲ್ಲಿ ನಾನು ಒಂದಂಶ.ಎಲ್ಲ ಪ್ರಾಣಿಗಳಂತೆಯೇ ನಾನೂ ಇದ್ದೇನೆ. ಎಲ್ಲವೂ ವ್ಯವಸ್ತಿತ ರೀತಿಯಲ್ಲಿ ನಡೆಯುತ್ತಿದೆ. ಯಾವುದರಿಂದ ನಡೆಯುತ್ತದೆ, ಏಕೆ ನಡೆಯುತ್ತದೆ ಹೇಗೆ ನಡೆಯುತ್ತದೆ ಎಂದು ಯೋಚನೆ ಮಾಡದೆ,ನಾನು ಸುಮ್ಮನೆ ಜೀವನ ಮಾಡಿದರೆ ಸಾಲದೇ ಎಂದರೆ,ಹೌದು ಸಾಕು.ಆದರೆ ದೇವರಿದ್ದಾನೆ ಎಂದು ನಂಬುವುದರಿಂದ ಇಡೀ ಪ್ರಪಂಚದ ಸಾಮಾಜಿಕ ವ್ಯವಸ್ತೆಯೇ ಒಂದು ಸುವ್ಯವಸ್ತೆಗೆ ಬಂದಿದೆಯಂದರೆ,ಆ ದೇವರನ್ನು ನಂಬಿದರೆ ತಪ್ಪೇನು.ನಾನು ಎಂಬ ಅಹಂಕಾರ ಒಂದು ವ್ಯಕ್ತಿಯನ್ನು ಸತ್ಪ್ರಜೆಯಾಗಿ ರೂಪಿಸುವಲ್ಲಿ ಭಾದಕವಾಗಿರುತ್ತದೆ.ವ್ಯವಸ್ಥಿತರೀತಿಯಲ್ಲಿ ಒಂದು ಸಮಾಜದ ಬೆಳವಣಿಗೆಗೆ ಸಹಕಾರ ಮತ್ತು ಸಹಬಾಳ್ವೆ ಅಗತ್ಯ.ಹಾಗೆ ಹುಟ್ಟಿಕೊಂಡ ಈ ದೇವರ ನಂಬಿಕೆಯಿಂದ ಪ್ರಪಂಚದ ಎಲ್ಲ ಸಮಾಜಗಳೂ ವ್ಯವಸ್ಥಿತ ರೀತಿಯಲ್ಲಿ ರೂಪುಗೊಂಡಿದೆ ಎಂದಾಗ, ಆ ದೇವರನ್ನು  ನಂಬಿದರೆ ತಪ್ಪೇನು? 

ವಿಚಾರವಂತನಾದವನು, ಜಿಜ್ಞಾಸೆಯಿಂದ ಈ ಪರಮಾತ್ಮ ಸ್ವರೂಪವನ್ನು ತನ್ನದೇ ರೀತಿಯಲ್ಲಿ  ತಿಳಿದುಕೊಳ್ಳಲು ಪ್ರಯತ್ನಿಸುತ್ತಾನೆ.ಏಕೆಂದರೆ ಸ್ವತಂತ್ರವಾಗಿ ಯೋಚಿಸುವ ಮತ್ತು ತಾನು ಕಂಡುಕೊಂಡಂತಹ ವಿಚಾರವನ್ನು ನಂಬಲು ಮತ್ತು ತನ್ನ ನಂಬಿಕೆಯಂತೆ ತನ್ನ ಜೀವನವನ್ನು ರೂಪಿಸಿಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ಮಾನವನಿಗೆ ಇದೆ. 

ಹಾಗೆ  ನನಗೆ ಉಂಟಾದ ಜಿಜ್ಞಾಸೆಯಿಂದ ಹುಟ್ಟಿದ ಅಭಿಪ್ರಾಯವು ಈ ರೀತಿ ಇದೆ. ಪುರುಷ ಸೂಕ್ತ ದಲ್ಲಿ ಪುರುಷನು (ಪುರೇ ಶಯತೀತಿ ಪುರುಷಃ-ನವರಂದ್ರಗಳಿಂದ ಕೂಡಿದ ಈ ದೇಹ (ಪುರ) ವನ್ನು ಧಾರಣೆಮಾಡಿರುವವನು)ಸಾವಿರಾರು ತಲೆ,ಕಣ್ಣು,ಕಾಲುಗಳು ಉಳ್ಳವನು ಎಂದೂ,( this is just a hyperbole) ಈ ಭೂಮಿಯನ್ನೂ ಸೇರಿದಂತೆ ಇಡೀ ವಿಶ್ವವನ್ನೇ ಆವರಿಸಿಕೊಂಡು ಅದರಮೇಲೆ ಹತ್ತಂಗುಲದಲ್ಲಿ ನಿಂತಿದ್ದಾನೆ,ಎಂಬ ವ್ಯಾಖ್ಯಾನವಿದೆ.ಈ ಜಗತ್ ಸೃಷ್ಟಿಗೆ ಕಾರ್ಯಕಾರಣ ಸ್ವರೂಪಿಯಾಗಿಯೂ ತಾನೇ ವಿವಿಧರೂಪದಲ್ಲಿ ಪ್ರಕಟಗೊಂಡು ಈ ಜಗತ್ತನ್ನು ಅನುಭವಿಸುತ್ತಿದ್ದಾನೆ ಎಂಬ ಅಭಿಮತವೂ ಉಂಟು."ಅಂದರಿಲೋ ಪುಟ್ಟಿ ಅಂದರಿಲೋ ಚೇರಿ ಅಂದರಿ ರೂಪಮುಲು ಅಟು ತಾನೈ,ಅನ್ದಮೈನ ಶ್ರೀ ವೆಂಕಟಾದ್ರಿನಿ ಸೇವಿಂಚಿ ಅಂದರಾನಿ ಪದಮುಲು ಅ೦ದನೆರಡುಜಾಲ"ಎಂಬುದು ಅನ್ನಮಾಚಾರ್ಯರ ಗೀತೆಯ ಉಕ್ತಿ.ಅಂದರೆ "ಎಲ್ಲರಲ್ಲೂ ಹುಟ್ಟಿ, ಎಲ್ಲರಲ್ಲೂ ಸೇರಿ ಎಲ್ಲರ ರೂಪವು ತಾನಾಗಿರುವ ಅಂದವಾದ ವೆಂಕಟಾದ್ರಿ" ಎಂದು ಅದರ ಅರ್ಥ.ಅದರ ಪ್ರಕಾರ ಎಲ್ಲವೂ ಪರಮಾತ್ಮನೇ ಅಲ್ಲವೇ?

ಆದರೆ ಇದು ನಂಬಿಕೆಗೆ ಸೇರಿದ್ದು.ಇದಕ್ಕೆ ಒಂದು ವೈಜ್ಞಾನಿಕ ಆಯಾಮವನ್ನು ಸೇರಿಸಿ ನೋಡಿದರೆ ನಮಗೆ ಗೊತ್ತಾಗುವುದು ಏನಂದರೆ,ನಮಗೆ ಕಾಣುವ ಮತ್ತು ನಮ್ಮ ಸೌರಮಂಡಲದಲ್ಲಿರುವ ಸೂರ್ಯನ ಸುತ್ತಳತೆ 13,92,000 ಕಿಲೋ ಮೀಟರ್ ಮತ್ತು ನಾವಿರುವ ಭೂಮಿಯ ಸುತ್ತಳತೆ  12756 ಕಿಲೋ ಮೀಟರುಗಳು. ಆ  ಲೆಖ್ಕದಲ್ಲಿ 13 ಲಕ್ಷ ಭೂಮಿಗಳನ್ನು ನಮ್ಮ ಸೂರ್ಯನೊಳಕ್ಕೆ ಹಾಕಬಹುದು.ಆದರೆ ವಾಸ್ತವವಾಗಿ ಸೂರ್ಯನೂ ಭೂಮಿಯಂತೆ ಗುಂಡಾಗಿರುವುದರಿಂದ,ಕೇವಲ 980000 ಭೂಮಿಗಳನ್ನು ನಮ್ಮ ಸೂರ್ಯನೊಳಕ್ಕೆ ಸೇರಿಸಿ ಬಿಡಬಹುದು.ಈ ಸೌರಮಂಡಲ,ಭೂಮಿ ಮತ್ತು ಇತರೆ ಗ್ರಹಗಳು ಎಲ್ಲವೂ ಒಂದು ಅದ್ಭುತ ಸೂತ್ರದಲ್ಲಿ ಹೆಣೆಯಲ್ಪಟ್ಟಿದೆ. ಇದು ನಿಶ್ಚಯ.      

ನಾವಿರುವ ಭೂಮಿಯ ಸೌರಮಂಡಲ,ಒಂದು ಕ್ಷೀರಪಥದಲ್ಲಿರುವ ಲಕ್ಷಾಂತರ ಸೌರ ಮಂಡಲಗಳಲ್ಲಿ ಒಂದು. ಇಂತಹ ಕ್ಷೀರಪಥಗಳು ಒಂದು ಆಕಾಶಗಂಗೆಯಲ್ಲಿ ಲಕ್ಷಾಂತರ. ಈ ಜಗತ್ತಿನ ಸೃಷ್ಟಿಯಲ್ಲಿ ಇಂಥ ಆಕಾಶಗಂಗೆಗಳು ಲಕ್ಷಾಂತರ.ಯಾವ ಶಕ್ತಿಯ ಸೂತ್ರದಲ್ಲಿ ನಮ್ಮ ಸೌರಮಂಡಲದ ಭೂಮಿ,ಅನ್ಯ ಗ್ರಹಗಳು ಮತ್ತು ಈ ಸೌರಮಂಡಲದ ಅಧಿಪತಿಯಾದ ಮತ್ತು ನಮಗೆ ಕಾಣುವ ಸೂರ್ಯ ಎಲ್ಲವೂ ಹೆಣೆದುಕೊಂಡಿವೆಯೋ ಅದೇ ಶಕ್ತಿಯು ತನ್ನ ವಿಸ್ತಾರ ರೂಪದಿಂದ ಎಲ್ಲ ಕ್ಷೀರಪಥಗಳನ್ನೂ,ಎಲ್ಲ ಅಕಾಶಗಂಗೆಗಳನ್ನೂ ಒಂದೇ ಸೂತ್ರದಲ್ಲಿ ಹಿಡಿದಿಟ್ಟಿದೆ.ಅಂದರೆ ಆ ಶಕ್ತಿಯು ಇವೆಲ್ಲವನ್ನೂ ತನ್ನ ಹಿಡಿತದಲ್ಲಿ ಒಂದು ಸೂತ್ರದಲ್ಲಿ ಹಿಡಿದಿಟ್ಟುಕೊಂಡಿದೆ ಎಂದರೆ,"ಆ ಶಕ್ತಿ ಇವೆಲ್ಲಕ್ಕಿಂತ ಉನ್ನತ ಸ್ಥಾನದಲ್ಲಿದೆ"ಯೆಂದು ಅರ್ಥವಲ್ಲವೇ. ಹಾಗೆ ಈ ಸೃಷ್ಟಿಯನ್ನೇ ತನ್ನ ಸೂತ್ರದ ಹಿಡಿತದಲ್ಲಿ ಇಟ್ಟಿಕೊಂಡಿರುವ ಆ ಶಕ್ತಿಯೇ ಪರಮಾತ್ಮ ಅಥವಾ ದೈವ ಎಂದರೆ ತಪ್ಪಗಲಾರದಲ್ಲವೇ? ಇದೇ ಶಕ್ತಿಯೇ ಈ ಜಗತ್ತಿನ ಎಲ್ಲಕ್ಕೂ ಕಾರಣವೆಂದು ಎಲ್ಲರ ಅಭಿಮತ ಮತ್ತು ಈ ವಿಷಯದಲ್ಲಿ ಮಾತ್ರ ಎಲ್ಲರ ಏಕೀಭಾವವಿದೆ. ಆದರೆ ಅದರ ಸ್ವರೂಪ ಮತ್ತು ಅದರ ಕಾರ್ಯ ವೈಖರಿಯ ಬಗ್ಗೆ ಸಾವಿರಾರು ಅಭಿಪ್ರಾಯಗಳು ಮತ್ತು ಭಿನ್ನಾಭಿಪ್ರಾಯಗಳು.

ಪ್ರಾಣವೆಂದರೆ ಚೇತನ.ಜಡವ ಕಾರ್ಯರೂಪಕ್ಕೆ ಪ್ರೇರೇಪಿಸುವುದೇ ಈ ಶಕ್ತಿ.  ಜಡ ಮತ್ತು ಶಕ್ತಿಯ ಸಮ್ಮಿಲನದಿಂದ ನಡೆಯುವ ಕೆಲಸ ಕಾರ್ಯಗಳೇ ಈ ಜಗದ್ವ್ಯಾಪಾರ.ಅಂದರೆ ಈ ಜಗತ್ತಿನ ಆಗು ಹೋಗುಗಳೆಲ್ಲಾ ಈ ಶಕ್ತಿಯ ಮೇಲೆ ಅವಲಂಬಿಸಿರುತ್ತದೆ.ಈ ಜಗತ್ತಿನ ಎಲ್ಲ ವಸ್ತುಗಳೂ ಅದೇ ಶಕ್ತಿಯ ಸಹಾಯದಿಂದ ಕಾರ್ಯೋನ್ಮುಖವಾದರೂ, ಆಯಾಯ ವಸ್ತುವಿನ ಕಾರ್ಯದ ಪ್ರಮಾಣ ಮತ್ತು ವ್ಯಾಪ್ತಿ,ಆ ವಸ್ತುವಿನ ಆಕಾರ ಮತ್ತು ಕ್ಷಮತೆಯ (capacity)ಮೇಲೆ ಆಧಾರವಾಗಿರುತ್ತದೆ.

ಇದಕ್ಕೊಂದು ಉದಾಹರಣೆಯನ್ನು ಕೊಡುವ.ನಮ್ಮ ಶಿವನಸಮುದ್ರದ ಅಥವ ಯಾವುದೇ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಉತ್ಪಾದನೆಯಾಗುವ ವಿದ್ಯುತ್ತಿನ ಪ್ರಮಾಣವನ್ನು Mega Watts ಎನ್ನುತ್ತಾರೆ. ಆ ವಿದ್ಯುತ್ತಿನ ಶಕ್ತಿಯ ತೀವ್ರತೆ ಎಷ್ಟಿರುತ್ತದೆ ಎಂದರೆ ಅದರ ಹತ್ತಿರ ಹೋಗಲು ಯೋಚನೆ ಮಾಡಿದರೆ ಸಾಕು ಸುಟ್ಟು ಬೂದಿಯೂ ಮಿಗದಂತಾಗುತ್ತದೆ.ಅಷ್ಟು ತೀವ್ರವಾಗಿರುತ್ತದೆ ಅದರ ಶಕ್ತಿ.ಅದನ್ನೇ ಪರಮಾತ್ಮ ಎಂದು ಇಟ್ಟುಕೊಳ್ಳೋಣ.ಅಲ್ಲಿ ಉತ್ಪಾದನೆಯಾದ ವಿದ್ಯುತ್ತೇ ನಿಮ್ಮ-ನಮ್ಮ ಮನೆಗಳಿಗೆ ಬರುವುದು.ಆದರೆ ಅದು ನೇರವಾಗಿ ಬರುವುದಿಲ್ಲ. ಹಂತ ಹಂತವಾಗಿ ಅದರ ತೀವ್ರತೆಯನ್ನು ಕಡಿಮೆಗೊಳಿಸುತ್ತ (step down) ಕಡೆಗೆ    ನಮ್ಮ-ನಿಮ್ಮ ಬೀದಿಯಲ್ಲಿರುವ ಒಂದು transformer ಗೆ ಕಳುಹಿಸಿ ಅದರಿಂದ ನಿಮ್ಮ ಬೀದಿಯಲ್ಲಿರುವ ಎಲ್ಲ ಮನೆಗಳಿಗೆ ತಂತಿಗಳ ಮೂಲಕ ಕಳುಹಿಸುತ್ತಾರೆ. ನಿಮ್ಮ ಮನೆಗೆ ಬರುವ ವಿದ್ಯುತ್ತಿನ ಪರಿಮಾಣ 220 volts ಆಗಿರುತ್ತೆ. ಹಾಗೆ ಎಲ್ಲೋ ಮೂಲವಿರುವ ಆ ವಿದ್ಯುತ್ತನ್ನು ನಿಮ್ಮ ಮನೆಗೆ ಕಳುಹಿಸಿದಾಗ ನೀವು ಅದನ್ನು ಬೇರೆ ಬೇರೆ ಉಪಕರಣಗಳನ್ನು ಉಪಯೋಗಿಸಲು ಬಳಸುತ್ತೀರಿ.ಆದರೆ ಪ್ರತಿಯೊಂದು ಉಪಕರಣವೂ ಅದೇ ವಿದ್ಯುತ್ತನ್ನು ಉಪಯೋಗಿಸಿದರೂ, ಅದರಿಂದ ಹೊರಬರುವ ಫಲ(output)ಮಾತ್ರ ಬೇರೆ ಬೇರೆಯಾಗಿರುತ್ತದೆ. geyser,Fridge,TV,Iron ಬಾಕ್ಸ್, ಫ್ಯಾನ್, ಹೀಗೆ ಎಲ್ಲವೂ ಅದೇ ವಿದ್ಯುತ್ತನ್ನು ಉಪಯೋಗಿಸಿಕೊಂಡರೂ ಅದರ ಉಪಯೋಗಗಳು ನಮಗೆ ಬೇರೆ ಬೇರೆ ರೀತಿಯಲ್ಲಿರುತ್ತದೆ.

ಹಾಗೆಯೇ ಈ ಜಗತ್ತನ್ನು ಸೃಜಿಸಿ, ನಿಯಂತ್ರಿಸಿ, ನಡೆಸಿಕೊಂಡು ಹೋಗುವ  ಆ ಅದ್ಭುತ ಶಕ್ತಿಯೇ ಬೇರೆ ಬೇರೆ ಪ್ರಾಣಿ ಪಕ್ಷಿ,ಕೀಟ, ಗಿಡ ಮರ ಹೀಗೆ ಈ ಸೃಷ್ಟಿಯಲ್ಲಿ ಏನೇನಿದೆಯೋ ಅದೆಲ್ಲದರಲ್ಲೂ ಸೇರಿ ಬೃಹತ್ ಚೇತನದ ಅಲ್ಪ ರೂಪದಲ್ಲಿ ಆಯಾಯಾ ದೇಹಗಳ ಶಕ್ತಿಯ ಮಿತಿಯಲ್ಲಿ ಕೆಲಸ ಮಾಡುತ್ತಾ ಇರುತ್ತದೆ. ಈ ಪ್ರಪಂಚದ ಎಲ್ಲಾ ಬೇರೆ ಬೇರೆ ಪ್ರಾಣಿ ಪಕ್ಷಿ,ಕೀಟ, ಗಿಡ,ಮರ ಎಲ್ಲದರ ದೇಹರಚನೆ ಮತ್ತು ಆಕಾರ ಭಿನ್ನ ಭಿನ್ನವಾಗಿರುವಾಗ,ಇವೆಲ್ಲವೂ ಜೀವಂತವಾಗಿರಲು ಒಂದೇ ಶಕ್ತಿಯನ್ನು ಉಪಯೋಗಿಸಿಕೊಂಡರೂ, ಮಾಡುವ ಕೆಲಸ, ಕೆಲಸ ಮಾಡುವ ರೀತಿ, ಆ ಕೆಲಸದ ಕಾರಣ ಮತ್ತು ಆ ಕೆಲಸದಿಂದ ಆಗುವ ಪ್ರಯೋಜನ ಎಲ್ಲವೂ ಭಿನ್ನ ಭಿನ್ನವಾಗಿರುತ್ತದೆ.

ಈ ಜಗತ್ತನ್ನು ಒಂದು ಸೂತ್ರದಲ್ಲಿ ನಿಯಂತ್ರಿಸುತ್ತಿರುವ ಆ ಅದ್ಭುತ ಶಕ್ತಿಯನ್ನು ನಾವು ಪರಮಾತ್ಮ ಎಂದು ಪರಿಗಣಿಸಿದರೆ, ಸೃಷ್ಟಿಯಲ್ಲಿರುವ ಅಖಂಡ ಸಂಖ್ಯೆಯ ಜೀವರಾಶಿಗಳಲ್ಲಿರುವ ಚೇತನವೂ ಅದೇ ಪರಮಾತ್ಮನ ಸ್ವರೂಪವಾದದು ಎಂದರೆ ತಪ್ಪಾಗಲಾರದು. ಹಾಗಾಗಿ ಎಲ್ಲ ಜೀವಿಗಳನ್ನೂ ಚೈತನ್ಯದಿಂದಿಡುವ ಆ ಚೇತನ ಮತ್ತು ಈ ಜಗತ್ತನ್ನು ಒಂದು ಸೂತ್ರದಲ್ಲಿ ನಿಯಂತ್ರಿಸುವ ಆ ಬೃಹತ್ ಚೇತನವೂ ಒಂದೇ ಎಂದು ಒಪ್ಪಲೇಬೇಕು. ಪರ್ಯಾಯ ವಿಶ್ಲೇಷಣೆ ಇಲ್ಲ. ಇದನ್ನೊಪ್ಪಿದರೆ,ಆ ಪರಮಾತ್ಮನನ್ನು ಎಲ್ಲ ಜೀವಿಗಳಲ್ಲೂ ಕಾಣುತ್ತಾ ಎಲ್ಲರನ್ನೂ ಪ್ರೀತಿಯಿಂದ ನೋಡುತ್ತಾ ಈ ಜೀವನವನ್ನು ಎಲ್ಲರೂ ಸುಂದರವನ್ನಾಗಿಸಿಕೊಳ್ಳಬಹುದಲ್ಲವೇ.

ಜೀವಾತ್ಮ ಪರಮಾತ್ಮ ಸಂಬಂಧವನ್ನು ಹೀಗೆ ಅರ್ಥಮಾಡಿಕೊಂಡ ನನಗೆ ಎಲ್ಲ ಪ್ರಾಣಿಗಳಲ್ಲೂ ಆ ಬೃಹತ್ ಚೇತನದ ರೂಪವೇ ಕಾಣುವಾಗ ಆ ದೇವರನ್ನು ಬೇರೆಲ್ಲೋ ಹುಡುಕಬೇಕೆ ನೀವೇ ಹೇಳಿ?
ಸರ್ವೇ ಜನಾಃ ಸುಜನಾ  ಭವಂತು
ಸರ್ವೇ ಸುಜನಾಃ  ಸುಖಿನಃ ಸಂತು
 
 ರವಿ ತಿರುಮಲೈ

6 comments:

 1. ಭಗವಂತನ ಅನೇಕ ಸ್ವರೂಪಗಳಲ್ಲಿ ಅಂತರ್ಯಾಮಿ ರೂಪ ಪ್ರಮುಖವಾದದ್ದು. ಕೃತಿಯನ್ನು ನೋಡಿ ಕರ್ತೃ ಇರಲೇಬೇಕು ಎಂದು ಮನುಷ್ಯರು ದೇವರ ಬಗ್ಗೆ ಒಂದು ಚಿಂತನೆ ಮಾಡಿ ಅದಕ್ಕೆ ಒಂದು ರೂಪವನ್ನು ಕೊಡಲು ಪ್ರಯತ್ನಿಸುತ್ತಾ ಬಂದಿದ್ದಾರೆ. ತನ್ನ ಕಷ್ಟವನು ಬಗೆಹರಿಸಲು ಕೆಲವರಿಗೆ ದೇವರು ಬೇಕು, ಇನ್ನು ಕೆಲವರಿಗೆ ದೇವರು ಕಷ್ಟವನ್ನು ಕೊಡವವನು ಎಂದು ಭಯ. ಆದರೆ ಮನುಷ್ಯ ಭಗವಂತನ ದಯೆಯನ್ನು ಅರ್ಥಮಾಡಿಕೊಂಡು ಅವನನ್ನು ಪ್ರೀತಿಸುತ್ತಾ ಪರಮಾನಂದವನ್ನು ಪಡೆಯುವ ದಿನ ಎಂದು?

  ಮರ ತನ್ನ ಹೆತ್ತ ಬೀಜವನಿಲ್ಲವೆನಿಸಿ ವಿ- । ಸ್ತರಿಸುವಂದದಿ, ಸೃಷ್ಟಿ ತನ್ನ ಮೂಲವನು ॥ ಮರೆಮಾಚಿ ತಾನೆ ಮೆರೆಯುತ್ತಿಹುದು ಕಣ್ಗಳಿಗೆ । ನೊರೆ ಸೃಷ್ಟಿ ಪಾಲ್ ಬ್ರಹ್ಮ - ಮಂಕುತಿಮ್ಮ||

  ಎಂದು ಮಾನ್ಯ ಗುಂಡಪ್ಪನವರು ಹೇಳಿದಂತೆ, ಪುರುಷಸೂಕ್ತದಲ್ಲಿ ಹೇಳಿರುವ "ಅಷ್ಟದಿಷ್ಟದ್ದಶಾಂಗುಲಮ್" ಅರ್ಥದಲ್ಲಿ ಈ ಸೃಷ್ಟಿಯನ್ನು ಮೀರಿದ ಆ ಪರಮಾತ್ಮ ಸ್ವರೂಪ ಎಂಥದ್ದು ಎಂದು ತಿಳಿಯುವುದು ಇನ್ನೂ ಕುತೂಹಲಕಾರಿ, ಅಲ್ಲವೇ !

  ReplyDelete
 2. Readers can also go through below youtube link by Sri Bannanje Govindacharya on topic "How is God"/"devaru hegiddaane"

  https://www.youtube.com/watch?v=_a-OELImPJ8

  ReplyDelete
 3. "ಎನ್ನಳಿಪ್ಪ ಮಹಾತ್ಮ,ಅನ್ಯರೊಳು ನೀನಿದ್ದು, ಅನ್ಯೋನ್ಯವಾಗಿ ಮಮತೆಯನು ಕಲ್ಪಿಸಿ|ಮಮತೆಯನು ಕಲ್ಪಿಸಿ ನಿನ್ನೊಳಗೆ ನೀನೇ ರಮಿಸುವಿ||" ಇಲ್ಲಿ "ನಾನು" ಎಂಬ concept ಏ ಇಲ್ಲ! "ಸನ್ನಿಧಾನವು ನಿನ್ನದೆನ್ನಲ್ಲಿ ಇರಲಾಗಿ ಮನ್ನಿಸುತ್ತಿಹರು ಜನರೆಲ್ಲಾ| ಮನ್ನಿಸುತ್ತಿಹರು ಜನರೆಲ್ಲ,ನಿನ್ನ ಕಾರುಣ್ಯ ಕಾರಣವಿಲ್ಲದೆ ಕಮಲಾಕ್ಷ||" ಇಲ್ಲಿ "ನಾನು"ಏನು?
  "ಮೇರಾ ಮುಝಮಾ ಕಚು ನಾಹಿ ಜೊ ಕಚು ಹೊ ಸೊ ತೆರಾ|ತೀರಾ ತುಝಕೊ ಸೊಂಪತೆ ಕಾ ಲಾಗತ್ ಹೋ ಮೀರಾ?||"

  ReplyDelete
 4. "ಎನ್ನಳಿಪ್ಪ ಮಹಾತ್ಮ,ಅನ್ಯರೊಳು ನೀನಿದ್ದು, ಅನ್ಯೋನ್ಯವಾಗಿ ಮಮತೆಯನು ಕಲ್ಪಿಸಿ|ಮಮತೆಯನು ಕಲ್ಪಿಸಿ ನಿನ್ನೊಳಗೆ ನೀನೇ ರಮಿಸುವಿ||" ಇಲ್ಲಿ "ನಾನು" ಎಂಬ concept ಏ ಇಲ್ಲ! "ಸನ್ನಿಧಾನವು ನಿನ್ನದೆನ್ನಲ್ಲಿ ಇರಲಾಗಿ ಮನ್ನಿಸುತ್ತಿಹರು ಜನರೆಲ್ಲಾ| ಮನ್ನಿಸುತ್ತಿಹರು ಜನರೆಲ್ಲ,ನಿನ್ನ ಕಾರುಣ್ಯ ಕಾರಣವಿಲ್ಲದೆ ಕಮಲಾಕ್ಷ||" ಇಲ್ಲಿ "ನಾನು"ಏನು?
  "ಮೇರಾ ಮುಝಮಾ ಕಚು ನಾಹಿ ಜೊ ಕಚು ಹೊ ಸೊ ತೆರಾ|ತೀರಾ ತುಝಕೊ ಸೊಂಪತೆ ಕಾ ಲಾಗತ್ ಹೋ ಮೀರಾ?||"

  ReplyDelete
 5. ಎನ್ನಳಿಪ್ಪ ಮಹಾತ್ಮ,ಅನ್ಯರೊಳು ನೀನಿದ್ದು, ಅನ್ಯೋನ್ಯವಾಗಿ ಮಮತೆಯನು ಕಲ್ಪಿಸಿ|ಮಮತೆಯನು ಕಲ್ಪಿಸಿ ನಿನ್ನೊಳಗೆ ನೀನೇ ರಮಿಸುವಿ||" ಇಲ್ಲಿ "ನಾನು" ಎಂಬ concept ಏ ಇಲ್ಲ! "ಸನ್ನಿಧಾನವು ನಿನ್ನದೆನ್ನಲ್ಲಿ ಇರಲಾಗಿ ಮನ್ನಿಸುತ್ತಿಹರು ಜನರೆಲ್ಲಾ| ಮನ್ನಿಸುತ್ತಿಹರು ಜನರೆಲ್ಲ,ನಿನ್ನ ಕಾರುಣ್ಯ ಕಾರಣವಿಲ್ಲದೆ ಕಮಲಾಕ್ಷ||" ಇಲ್ಲಿ "ನಾನು"ಏನು?
  "ಮೇರಾ ಮುಝಮಾ ಕಚು ನಾಹಿ ಜೊ ಕಚು ಹೊ ಸೊ ತೆರಾ|ತೀರಾ ತುಝಕೊ ಸೊಂಪತೆ ಕಾ ಲಾಗತ್ ಹೋ ಮೀರಾ?||"

  ReplyDelete
 6. ಎನ್ನಳಿಪ್ಪ ಮಹಾತ್ಮ,ಅನ್ಯರೊಳು ನೀನಿದ್ದು, ಅನ್ಯೋನ್ಯವಾಗಿ ಮಮತೆಯನು ಕಲ್ಪಿಸಿ|ಮಮತೆಯನು ಕಲ್ಪಿಸಿ ನಿನ್ನೊಳಗೆ ನೀನೇ ರಮಿಸುವಿ||" ಇಲ್ಲಿ "ನಾನು" ಎಂಬ concept ಏ ಇಲ್ಲ! "ಸನ್ನಿಧಾನವು ನಿನ್ನದೆನ್ನಲ್ಲಿ ಇರಲಾಗಿ ಮನ್ನಿಸುತ್ತಿಹರು ಜನರೆಲ್ಲಾ| ಮನ್ನಿಸುತ್ತಿಹರು ಜನರೆಲ್ಲ,ನಿನ್ನ ಕಾರುಣ್ಯ ಕಾರಣವಿಲ್ಲದೆ ಕಮಲಾಕ್ಷ||" ಇಲ್ಲಿ "ನಾನು"ಏನು?
  "ಮೇರಾ ಮುಝಮಾ ಕಚು ನಾಹಿ ಜೊ ಕಚು ಹೊ ಸೊ ತೆರಾ|ತೀರಾ ತುಝಕೊ ಸೊಂಪತೆ ಕಾ ಲಾಗತ್ ಹೋ ಮೀರಾ?||"

  ReplyDelete