Friday, 24 February 2012


ಬ್ರಾಹ್ಮಣರೇಕೆ   ಮಾಂಸಾಹಾರಿಗಳಲ್ಲ 

ಆಹಾರ ದೇಹಧಾರಣೆಗೆ ಮಾತ್ರ ಎಂದು ನಾವು ತಿಳಿದಿದ್ದೇವೆ. ಆದರೆ ದೇಹಧಾರಣೆಗಾಗಿ ನಾವು ಸೇವಿಸುವ ಆಹಾರ ನಮ್ಮಲ್ಲಿ ಗುಣವೃಧ್ಧಿ ಮತ್ತು ಗುಣ ಪರಿವರ್ತನೆಯನ್ನೂ ಮಾಡುತ್ತದೆ. ಈ ಸೃಷ್ಟಿಯಲ್ಲಿ ಇರುವುದು ಮೂರು ಗುಣಗಳು. ಸಾತ್ವಿಕ, ರಾಜಸ ಮತ್ತು ತಾಮಸ. ಮಾನವನನ್ನೂ ಸೇರಿ ಎಲ್ಲಾ ಪ್ರಾಣಿಗಳಲ್ಲೂ ಈ ಮೂರು ಗುಣಗಳು ಬೇರೆ ಬೇರೆ ಪ್ರಮಾಣಗಳಲ್ಲಿ ಇರುತ್ತದೆ. ಯಾವ ಗುಣದ ಪ್ರಮಾಣ ಯಾರಲ್ಲಿ ಅಧಿಕವಾಗಿರುತ್ತದೋ,  ಅವರ ಕಾರ್ಯ ಕೆಲಸಗಳು ಹಾಗಿರುತ್ತವೆ.  

ನಮ್ಮ ಎಲ್ಲಾ ಕೆಲಸ ಕಾರ್ಯಗಳೂ ನಮ್ಮ ಮನಸ್ಸು ಬುಧ್ಧಿಯ ಮೇಲೆ ಅವಲಂಬಿಸಿರುತ್ತದೆ. ಮನಸ್ಸು ಬುಧ್ಧಿಗಳು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಜೀವ ರಸಗಳನ್ನು ಅವಲಂಬಿಸಿರುತ್ತದೆ. ಈ ರಸಗಳ ಉತ್ಪತ್ತಿಯು ನಾವು ಸೇವಿಸುವ ಆಹಾರವನ್ನು ಅವಲಂಬಿಸಿರುತ್ತದೆ. ಹಾಗಾಗಿ ನೇರವಾಗಿ ನಮ್ಮ ಕೆಲಸ, ಸ್ವಭಾವ ಮತ್ತು ಗುಣ ನಾವು ಸೇವಿಸುವ ಆಹಾರವನ್ನು ಅವಲಂಬಿಸಿರುತ್ತದೆ. 

ಮೇಲೆ ಹೇಳಿದ ಮೂರು ಗುಣಗಳನ್ನು ಸ್ವಲ್ಪ ವಿಶ್ಲೇಸಿಸೋಣ. ಶಾಂತತೆ , ಕಾರುಣ್ಯ , ದಯೆ , ಪ್ರೇಮ, ಪೀತಿ,  ಸಹನೆ, ಸಹಿಷ್ಣುತೆ, ಸಭ್ಯತೆ, ಭಕ್ತಿ, ಮುಂತಾದ ಎಲ್ಲ ಗುಣಗಳೂಸಾತ್ವಿಕ ಗುಣದ ಪರಿಧಿಯಲ್ಲಿ ನಿಲ್ಲುತ್ತವೆ. ವೇಗ, ಸಿಟ್ಟು, ಆತುರ,  ಕ್ರೋದ, ಅಸಹನೆ, ಹಠ, ಮೋಹ, ಮುಂತಾದ ಗುಣಗಳು ರಾಜಸ ಗುಣದ ಪ್ರತೀಕವಾಗಿರುತ್ತದೆ. ಆಲಸ್ಯ, ನಿದ್ದೆ, ಕ್ರಿಯಾಹೀನತೆ, ಕೊಳಕುತನ, ಕಳ್ಳಬುಧ್ಧಿ, ಅಸಭ್ಯತೆ, ಮಾತು, ಕ್ರಿಯೆ ಮತ್ತು ನಡತೆಯಲ್ಲಿ ಹೊಲಸುತನ ಮುಂತಾದವು ತಾಮಸಿಕ ಗುಣವನ್ನು ಸೂಚಿಸುತ್ತದೆ. 

ಪೂರ್ವದಲ್ಲಿ ಬ್ರಾಹ್ಮಣರೂ ಸಹ ಮಾಂಸಾಹಾರಿಗಳಾಗಿದ್ದರು ಎಂಬ ವಿಷಯ ವೇದದ ಮತ್ತು ಪುರಾಣಗಳ ಹಲವಾರು ದೃಷ್ಟಾಂತಗಳಿಂದ ತಿಳಿಯುತ್ತದೆ. ಇಲ್ಲಿ ನಾವು ಬ್ರಾಹ್ಮಣರು ಯಾರು ಎಂಬುದನ್ನು ನೋಡಬೇಕು. ಇಲ್ಲಿ ನಾನು ಮೂರು ವಿಚಾರಗಳನ್ನು ಪ್ರಸ್ತಾಪಮಾದುತ್ತೇನೆ. 

ಮೊದಲನೆಯದಾಗಿ " ನಾಲ್ಕು ವರ್ಣಗಳನ್ನೂ ಆಯಾಯಾ ಮನುಷ್ಯರ ಗುಣ ಮತ್ತು ಕರ್ಮದ ಆಧಾರದ ಮೇಲೆ ನಾನೇ ವಿಭಾಗ ಮಾಡಿದ್ದೇನೆ" ಎಂದು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ್ದಾನೆ. ಅಂದರೆ ಬ್ರಾಹ್ಮಣ ವೈಶ್ಯ, ಕ್ಷತ್ರಿಯ ಮತ್ತು ಶೂದ್ರರೆಂಬ ವಿಭಾಗ,  ವ್ಯಕ್ತಿಗಳ ಗುಣ ಮತ್ತು ಕರ್ಮದಿಂದಲೇ ಹೊರತು ಜನ್ಮದಿಂದಲ್ಲವೆಂಬುದು ತಾತ್ಪರ್ಯ.ಬ್ರಾಹ್ಮಣ ವೈಶ್ಯ, ಕ್ಷತ್ರಿಯ ಮತ್ತು ಶೂದ್ರರೆಂದು ವಿಭಾಗಕ್ಕೆ ಒಳಗಾದ ಎಲ್ಲ ಮಾನವರು  ಯಾವ ಯಾವ ರೀತಿಯ ಗುಣಗಳನ್ನು ಹೊಂದಿರಬೇಕು ಮತ್ತು ಯಾವ ಯಾವ ರೀತಿಯ ಕೆಲಸಗಳನ್ನು ಮಾಡಬೇಕು ಎಂಬುದನ್ನು ನಮ್ಮ ಋಷಿ ಮುನಿಗಳು ಮತ್ತು ಗುರುವರೇಣ್ಯರುಗಳು ವೇದ , ಉಪನಿಷತ್ತು ಮತ್ತು ಪುರಾಣಗಳ ಆಧಾರದಮೇಲೆ ವಿಷದೀಕರಿಸಿದ್ದಾರೆ. 

ಎರಡನೆಯದಾಗಿ, " ಜನ್ಮನಾ ಜಾಯೆತೆ ಶೂದ್ರ: ಕರ್ಮಣ  ದ್ವಿಜ: ಜಾಯತೆ"  ಎಂದು ಪುರಾಣದಲ್ಲಿ ಯಾರೋ ಮಹಾತ್ಮರು ಹೇಳಿದ್ದಾರೆ. ಅಂದರೆ ಜನ್ಮದಿಂದ ಎಲ್ಲರೂ ಶೂದ್ರರಾಗಿಯೇ ಹುಟ್ಟುತ್ತಾರೆ, ಅವರು ಬೆಳೆಸಿಕೊಳ್ಳುವ ಗುಣ ಮತ್ತು ಅವರು ಅವಲಂಬಿಸುವ ಕೆಲಸ ಅಥವಾ ಕರ್ಮದ ಆಧಾರದಮೇಲೆ ಅವರು ಬ್ರಾಹ್ಮಣರೋ, ವೈಶ್ಯರೋ ಕ್ಷತ್ರಿಯರೋ ಅಥವಾ ಶೂದ್ರರೋ ಎಂದು ವಿಭಾಗ ಮಾಡಬೇಕು ಎನ್ನುತ್ತಾರೆ ಆ ಮಹಾತ್ಮರು. ಹಾಗಾಗಿ ಇಲ್ಲಿಯೂ ಸಹ ವರ್ಣಾಧಾರಿತ ವಿಭಾಗ ಗುಣ  ಮತ್ತು ಕರ್ಮದ ಆಧಾರದಮೇಲೆ ಆಗಿರುತ್ತದೆ. 

ಮೂರನೆಯದಾಗಿ  ಮಹಾಭಾರತದಲ್ಲಿ ಒಂದು ಪ್ರಸಂಗ ಬರುತ್ತದೆ. ಒಂದುಬಾರಿ ಭೀಮ ಕಾಡಿನಲ್ಲಿ ಅಲೆದಾಡುವಾಗ ಒಂದು ಬೃಹತ್ತಾದ ಸರ್ಪವು ಅವನನ್ನು ಸುತ್ತಿಕೊಂಡು ಬಿಡುತ್ತದೆ. ಸಾವಿರ ಆನೆ ಬಲವುಳ್ಳ ಭೀಮನೂ ಸಹ ಅದರ ಹಿಡಿತದಿಂದ ಬಿಡಿಸಿಕೊಳ್ಳಲಾಗದೆ ಹೋಗುತ್ತಾನೆ. ಅವನ ಸಹಾಯಕ್ಕೆ ಹೋದ ಅರ್ಜುನ, ನಕುಲ ಸಹದೇವರೂ  ಸಹ ಅವನನ್ನು ಬಿಡಿಸುವಲ್ಲಿ ವಿಫಲರಾಗುತ್ತಾರೆ. ಕಡೆಯದಾಗಿ ಯುದಿಷ್ಟಿರ ಅಲ್ಲಿಗಿ ಬರುತ್ತಾನೆ. " ಯಾವ ತಪ್ಪನ್ನೂ ಮಾಡದ ಮತ್ತು ನಿನಗೆ ಯಾವ ದ್ರೋಹವನ್ನೂ ಮಾಡದ ಭೀಮನನ್ನು ಏತಕ್ಕಾಗಿ ಹಿಡಿದಿದ್ದೀಯೇ" ಎಂದು ಆ ಸರ್ಪವನ್ನು ಕೇಳಿದಾಗ " ನನ್ನ ಒಂದು ಸಂದೇಹಕ್ಕೆ ಉತ್ತರವನ್ನು ನೀಡಿ ನಿನ್ನ ತಮ್ಮನನ್ನು ಬಿಡಿಸಿಕೊಂಡು ಹೋಗು" ಎನ್ನುತದೆ ಆ ಸರ್ಪ. ಯುದಿಷ್ಟಿರನು " ಕೇಳು ಅದೇನು ನಿನ್ನ ಸಂದೇಹ" ವೆಂದಾಗ ಆ ಸರ್ಪವು " ಬ್ರಾಹ್ಮಣನೆಂದರೆ ಯಾರು" ಎನ್ನುತದೆ.

 "ಯಾರು ಬಡತನವನ್ನು ಅಪ್ಪಿಕೊಂಡು ಒಪ್ಪಿಕೊಂಡಿರುತ್ತಾನೋ, ಯಾರು ವೇದಾಭ್ಯಾಸ ನಿರತನೋ, ಯಾರು ಸಾತ್ವಿಕ ಗುಣವುಳ್ಳವನೋ,  ಯಾರು ಸರ್ವರ ಒಳಿತನ್ನೇ ಬಯಸುವವನೋ, ಸಹನೆ ಮತ್ತು ಸಮಭಾವ ಯಾರಲ್ಲಿ ತುಂಬಿದೆಯೋ ಸದಾಕಾಲ ಭಗವನ್ನಾಮಸ್ಮರಣೆಯಲ್ಲಿ ಯಾರು ಸದಾ ನಿರತನೋ ಇಂತಹ ಗುಣಗಳು ಮತ್ತು ಕರ್ಮವಿದ್ದರೆ ಅವನನ್ನು ಬ್ರಾಹ್ಮಣನೆನ್ನಬಹುದು." ಎನ್ನುತ್ತಾನೆ ಯುಧಿಷ್ಠಿರ.
ಬ್ರಾಹ್ಮಣ ಕುಲದಲ್ಲಿ ಹುಟ್ಟಿ ಈ ಗುಣಗಲ್ಲಿಲ್ಲದಿದ್ದರೆ"  ಎನ್ನುತ್ತದೆ ಸರ್ಪ. " ಅಂತಹವನು ಬ್ರಾಹ್ಮಣನಲ್ಲ" ಎಂದು ಪ್ರತ್ಯುತ್ತರ ನೀಡುತ್ತಾನೆ ಯುಧಿಷ್ಠಿರ. " ಶೂದ್ರ ಕುಲದಲ್ಲಿ ಹುಟ್ಟಿ, ಮೇಲೆ ಹೇಳಿದ ಗುಣಗಳು ಇದ್ದರೆ  " ಎಂಬ ಸರ್ಪದ ಮತ್ತೊಂದು ಪ್ರಶ್ನೆಗೆ " ಅವನು ಶೂದ್ರನೂ ಅಲ್ಲ " ಎನ್ನುತ್ತಾನೆ ಯುಧಿಷ್ಠಿರ. ಇದರಿಂದ ನಮಗೆ ತಿಳಿಯಬೇಕಾದ ವಿಷಯವೇನೆಂದರೆ ಜನ್ಮದಿಂದ ವರ್ಣ ವಿಭಾಗವಾಗುವುದಿಲ್ಲ, ಮಾತ್ರ ಗುಣ ಮತ್ತು ಕರ್ಮದಿಂದ ವರ್ಣದ ವಿಭಾಗ ಎಂದು. 

ನಮ್ಮ ಮುಂದಿರುವ ಪ್ರಶ್ನೆಗೆ ಬರುವ. ಹಾಗಾಗಿ ಬ್ರಾಹ್ಮಣನಾಗಬೇಕಾದರೆ ಬ್ರಾಹ್ಮಣ್ಯಕ್ಕೆ ಅನುಗುಣವಾದ ಗುಣ ಮತ್ತು ಕರ್ಮವನ್ನು ಬೆಳೆಸಿಕೊಳ್ಳಬೇಕು, ಅದನ್ನು ಬೆಳೆಸಿಕೊಳ್ಳಬೇಕಾದರೆ ಆಚಾರ, ವಿಚಾರ, ಆಹಾರ, ಸಂಗ, ವಿದ್ಯೆ, ಅಭ್ಯಾಸ ಎಲ್ಲವೂ ಬ್ರಾಹ್ಮಣ್ಯಕ್ಕೆ  ಆಭಿಮುಖವಾಗಿರಬೇಕಲ್ಲವೇ .ಸಾತ್ವಿಕ ಗುಣಗಳನ್ನು ಬೆಳೆಸಿಕೊಳ್ಳಲು ಪೂರಕವಾದ ಮತ್ತು ಪೋಷಕವಾದ ಹತ್ತು ಹಲವಾರಿನಲ್ಲಿ ಸಾತ್ವಿಕ ಆಹಾರವೂ ಒಂದಾದ್ದರಿಂದ ಬ್ರಾಹ್ಮಣ್ಯವನ್ನು ಬೆಳೆಸಿಕ್ಕೊಳ್ಳಲು ಮತ್ತು ಉಳಿಸಿಕೊಳ್ಳಲು ಬ್ರಾಹ್ಮಣರು  ರಾಜಸ ಮತ್ತು ತಾಮಸಗುಣಭರಿತವಾದ ಮಾಂಸಾಹಾರವನ್ನು ಕಾಲಕ್ರಮೇಣ ತ್ಯಜಿಸಿರಬಹುದು.  

ಆದರೆ ಇಂದಿನ ಪರಿಸ್ಥಿತಿಯನ್ನು ನೋಡಿ ನಿಜಸ್ವರೂಪದಲ್ಲಿ ಬ್ರಾಹ್ಮಣರು ಇದ್ದಾರೆಯೇ. ಮಾಂಸಾಹಾರ , ಧೂಮಪಾನ, ಮದ್ಯಪಾನ, ಲಂಚಗುಳಿತನ, ವ್ಯಭಿಚಾರ ( ಇಲ್ಲಿ ದೈಹಿಕ ವ್ಯಭಿಚಾರ ಮಾತ್ರವಲ್ಲ, ಮಾನಸಿಕ  ವ್ಯಭಿಚಾರವೂ ಸಹ  ಬ್ರಾಹ್ಮಣ್ಯಕ್ಕೆ ಧಕ್ಕೆ ತರುವಂತಾದ್ದೆ ಅಲ್ಲವೇ) ವ್ಯಾಪಾರ ಮುಂತಾದ ಅಬ್ರಾಹ್ಮಣ್ಯದ ಗುಣಗಳನ್ನು ಬೆಳೆಸಿಕೊಂಡು ಕೇವಲ ಬ್ರಾಹ್ಮಣಕುಲದಲ್ಲಿ ಜನಿಸಿದ ಕಾರಣದಿಂದ ತಮ್ಮನ್ನು ತಾವು ಬ್ರಾಹ್ಮಣರೆಂದು, ಉತ್ತಮ ಕುಲದವರೆಂದು ತಿಳಿದು ಅಹಂಕಾರಪಡುವ ಬ್ರಾಹ್ಮಣರನ್ನು ಕಂಡರೆ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ. 

ಸರ್ವೇ  ಜನಾಃ ಸುಜನಾ ಭವಂತು 
ಸರ್ವೇ ಸುಜನಾಃ ಸುಖಿನಃ ಸಂತು 

ರವಿ ತಿರುಮಲೈ 
9632246255 
5.7.2011 

No comments:

Post a Comment