Monday 2 July 2018

ಸೇವೆ

ಈ ಜಗತ್ತನ್ನು ಕುರಿತು ನಮ್ಮಿಂದ ಒಳ್ಳೆಯ ಭಾವಗಳು ಹೊರಹೊಮ್ಮುತ್ತಿದ್ದರೆ, ಆಗ ನಾವು ಒಳ್ಳೆಯವರಾಗಿದ್ದೇವೆ ಅಥವಾ ಒಳ್ಳೆಯವರಾಗುತ್ತಿದ್ದೇವೆ ಎಂದರ್ಥ. ಅಂತಹ ಸ್ಥಿತಿಯಲ್ಲಿ ನಾವು ಏನೇ ಮಾಡಿದರೂ ಅದು ನಮಗೂ ಹಿತವಾಗಿರುತ್ತದೆ ಮತ್ತು ಪರಹಿತಕ್ಕೂ ಆಗುತ್ತದೆ.  ನಮ್ಮನ್ನು ನಾವು ಪ್ರತೀ ಹಂತದಲ್ಲೂ ತಿದ್ದಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಒಂದು ಬಾರಿ ನಮ್ಮಲ್ಲಿ 'ಆತ್ಮಚಿಂತನೆ' ಮತ್ತು ನಮ್ಮನ್ನು ನಾವೇ ತಿದ್ದಿಕೊಳ್ಳುವ ಪ್ರಕ್ರಿಯೆ ಆರಂಭವಾದರೆ ಸಾಕು, ನಾವು ಏನೇ ಮಾಡಿದರೂ ಅದು ಸುಂದರವಾಗಿರುತ್ತದೆ ಮತ್ತು ಅದರಲ್ಲಿ ಸ್ವಹಿತ ಮತ್ತು ಸರ್ವಹಿತ ಎರಡನ್ನೂ ಕಾಣಬಹುದು.  

ಅನ್ಯರಿಗೆ ಒದಗುವುದನ್ನು 'ಸೇವೆ' ಎಂದೂ ಎನ್ನುತ್ತಾರೆ. ಹೃದಯಪೂರ್ವಕವಾಗಿ ಅನ್ಯರಿಗೆ ಒದಗುವುದರಿಂದ ಒಂದು ರೀತಿಯ ತೃಪ್ತಿ ಸಿಗುತ್ತದೆ. ಅದು 'ಆತ್ಮ ಸಂತೃಪ್ತಿ'.  ಅಂತಹ ಸಂತೃಪ್ತಿಯಿಂದ ಆತ್ಮಸಂತೋಷವಾಗುತ್ತದೆ. 'ನಮ್ಮ ಕೃತಿಯಿಂದ ಅನ್ಯರಿಗೆ ಹಿತ ಅಥವಾ ಸಂತೋಷವಾದರೆ ಅದಕ್ಕಿಂತ ಬೇರೆ ಭಾಗ್ಯ ಬೇಕೆ' ಎನ್ನುವುದು ಉದಾತ್ತ ಮನಸ್ಸಿನ ಭಾವ.  ಅಂತಹ ಭಾವವಿದ್ದರೆ ನಾವು ಮಾಡುವ ಪ್ರತಿಯೊಂದು ಕೆಲಸವೂ ' ಸರ್ವಜನ ಹಿತಾಯ ' ಎನ್ನುವಂತೆ ಸಕಲರ ಹಿತಕ್ಕಾಗುತ್ತದೆ.

'ಸಹಾಯ' ಮಾಡಲು ಅವಕಾಶಗಳು ಹೇಗೆ ಸಿಗುತ್ತವೆ? 

ಸಹಾಯ ಅಥವಾ ನಿಸ್ವಾರ್ಥ ಸೇವೆ ಮಾಡಲು ಅವಕಾಶಗಳು ನಮ್ಮ ಸುತ್ತುಮುತ್ತಲ್ಲೇ ಇರುತ್ತವೆ. ಅದನ್ನು ಹುಡುಕಿಕೊಂಡು ನಾವೆಲ್ಲಿಗೂ ಹೋಗುವ ಅವಶ್ಯಕತೆ ಇಲ್ಲ.  'ಅಲ್ಲಿ ಕೆಲಸ ಮಾಡುತ್ತೇವೆ, ಇಲ್ಲಿ ಸೇವೆ ಮಾಡುತ್ತೇವೆ ಮತ್ತಿನ್ನೆಲ್ಲೋ ಸಹಾಯಮಾಡುತ್ತೇವೆ'  ಎಂದು ಕೆಲಸ, ಸೇವೆ ಮತ್ತು ಸಹಾಯಗಳ ನಡುವೆ ಗೋಡೆಗಳನ್ನು ನಾವೇ ನಿರ್ಮಿಸಿರುತ್ತೇವೆ. ಸೇವೆ ಮಾಡಲು ಯಾವುದಾದರೂ ಅನಾಥಾಶ್ರಮ ಅಥವಾ ವೃದ್ಧಾಶ್ರಮವನ್ನೋ ಹುಡುಕಿಕೊಂಡು ಹೋಗಬೇಕಾಗಿಲ್ಲ. ನಮ್ಮ ಯಾವುದಾದರೂ ಕೆಲಸವನ್ನು ನಾವು ಪ್ರತ್ಯೇಕವಾಗಿ ಸೇವೆ ಎಂದು ಏಕೆ ಪರಿಗಣಿಸಬೇಕು?  ದೈವಕೃಪೆಯಿಂದ ನಮ್ಮ ಸುತ್ತಮುತ್ತಲ್ಲಿ ಸದಾಕಾಲ ನಾಲ್ಕಾರು ಜನರಿರುತ್ತಾರೆ, ಅಲ್ಲವೇ? ಅವರಿಗೆ ನಿಸ್ವಾರ್ಥದಿಂದ ಸೇವೆ ಮಾಡಬಹುದಲ್ಲವೇ? ಯಾರಾದರೂ ಅನಾರೋಗ್ಯದಿಂದ ಇರುವವರು, ಅಕ್ಕಪಕ್ಕದಲ್ಲಿರುವ ವೃದ್ಧರಿಗೆ ಒದಗುವುದು, ಮನೆಯಲ್ಲಿ ತಂದೆ ತಾಯಿಯರಿಗೆ, ಅವರ ಕೆಲಸದಲ್ಲಿ ಕೈ ಜೋಡಿಸುವುದನ್ನು ಮಾಡಿದರೂ ಅದೂ ಸಹ ಸೇವೆಯಾಗುತ್ತದೆ. ಮನೆಗೆಲಸದವರು ಅಥವಾ ನಿಮ್ಮ ವಾಹನ ಚಾಲಕ ಮುಂತಾದ, ನಮಗಾಗಿ ದುಡಿಯುವವರ ಕ್ಷೇಮವನ್ನು ನೋಡಿಕೊಳ್ಳುವುದೂ ಸಹ ಸೇವೆಯಾಗುತ್ತದೆ. ಹೊರಗೆಲ್ಲಿಯೂ ಹೋಗುವ ಅವಶ್ಯಕತೆ ಇಲ್ಲದೆ, ನಾವಿರುವಲ್ಲೇ ' ಸೇವೆ ' ಮಾಡಲು ದೈವ ನಮಗೆ ಅವಕಾಶಗಳನ್ನು ನೀಡಿದೆ ಎಂದು ಸಂತೋಷಪಡಬೇಕಲ್ಲವೇ?  

ಅನಾರೋಗ್ಯದಿಂದ ಬಳಲುತ್ತಿರುವ ನಿಮ್ಮ ತಂದೆ-
ತಾಯಿಯರೋ ಅಥವಾ ಅತ್ತೆ-ಮಾವಂದಿರೋ ಮನೆಯಲ್ಲಿ ಇರುವಾಗ ಅವರ ಅವಶ್ಯಕತೆಗಳನ್ನು ಪೂರೈಸುವುದನ್ನು ಬಿಟ್ಟು ವೃದ್ಧಾಶ್ರಮಗಳಲ್ಲಿ ಸೇವೆಮಾಡಲೆಂದೇ ಸಂಸ್ಥೆಗಳನ್ನು ಕಟ್ಟುವುದು ವ್ಯರ್ಥವಲ್ಲದೆ ಮತ್ತೇನು?  ಅಥವಾ ಅಂತಹ ಸೇವೆಯಿಂದ ಪುಣ್ಯ ಸಿಗುವುದೆಂದು ಮಾಡಿದರೆ ಅದು ಸ್ವಾರ್ಥದಿಂದ ಮಾಡಿದ ಕೆಲಸವಾಗಿ, ಸೇವೆ ಎನಿಸಿಕೊಳ್ಳುವುದಿಲ್ಲ. ತಾನಿರುವ ಪರಿಸರದಲ್ಲೇ ಸೇವೆಯನ್ನು ಮಾಡುತ್ತಾ, ಅಂತಹ ಸೇವಾ ಪರಿಧಿಯನ್ನು ಹೆಚ್ಚಿಸಿಕೊಳ್ಳುತ್ತಾ ಹೋದಂತೆ, ನಮಗರಿವಿಲ್ಲದಂತೆಯೇ ನಮ್ಮ ಸೇವೆಯ ವ್ಯಾಪ್ತಿ ಹಿರಿದಾಗುತ್ತದೆ. ಮನೆಯಲ್ಲಿ ಮಾಡಬೇಕಾದದ್ದನ್ನು ಮಾಡದೆ ಹೊರಗಡೆ 'ಹೆಸರು, ಖ್ಯಾತಿ' ಗಾಗಿ ಸೇವೆ ಮಾಡುವವರನ್ನು 'ಮನೆಗೆ ಮಾರಿ ಪರರಿಗುಪಕಾರಿ' ಎನ್ನುತ್ತಾರೆ. ಹಾಗಾಗಿ ನಾವು ಮಾಡುವ ಸೇವೆಯನ್ನು ನಿಸ್ವಾರ್ಥದಿಂದ, ಅದೊಂದು ಕರ್ತವ್ಯವೆಂಬಂತೆ ಮಾಡಿದರೆ, ಅದು ನಿಜವಾದ 'ಸೇವೆ' ಯಾಗುತ್ತದೆ.  ಪ್ರತಿಯೊಬ್ಬರಿಗೂ 'ಸೇವೆ' ಗೈಯುವುದು ಅತ್ಯಾವಶ್ಯಕ.  ಏಕೆಂದರೆ 'ಕೊಟ್ಟದ್ದು ತನಗೆ' ಎಂದು ಸರ್ವಜ್ಞ ಕವಿ ಹೇಳುವಂತೆ ಸೇವೆಯ ಫಲ ನಮಗೆ ಯಾವುದಾದರೂ ರೂಪದಲ್ಲಿ, ನಾವು ಬಯಸದೆ ಇದ್ದರೂ ದಕ್ಕಿಯೇ ದಕ್ಕುತ್ತದೆ.  

ಸೇವೆಯಿಂದ ನಾವು ಬೆಳೆಯಬಹುದು!!!

ಅದು ಹೇಗೆಂದರೆ, ನಾವು ನಿಸ್ವಾರ್ಥ ಭಾವದಿಂದ 'ಸೇವೆ' ಮಾಡಿದಾಗ ಮನಸ್ಸು ಹಗುರಾಗುತ್ತದೆ ಮತ್ತು ನಮ್ಮೊಳಗೇ ಒಂದು ಧನ್ಯತಾ ಭಾವ ತುಂಬಿಕೊಳ್ಳುತ್ತದೆ. ನಮ್ಮ ಅಂತರ್ಭಾವದ ಹೊರೆಯನ್ನು ಹಗುರಾಗಿಸಿಕೊಳ್ಳಬಹುದು. ನಾವು ಒಬ್ಬರಿಗೆ ಒದಗಿದರೆ, ನಮ್ಮ ಸಂಕಷ್ಟದ ಕಾಲಕ್ಕೆ ಮತ್ಯಾರೋ ನಮಗೆ ಒದಗಬಹುದು. ನಾವು ಲೌಕಿಕವಾಗಿ ಅಥವಾ ಪಾರಮಾರ್ಥಿಕವಾಗಿ  ಬೆಳೆಯಲು ಯತ್ನಿಸುತ್ತಿರುವಾಗ,  ನಮ್ಮೆದುರು ಹಲವಾರು ಅಡ್ಡಿಗಳು ಬರಬಹುದು, ನಮಗೆ ಖಿನ್ನತೆ ಅಥವಾ ದುಃಖವುಂಟಾಗಬಹುದು. ಅಂತಹ ಸಂದರ್ಭದಲ್ಲಿ ಯಾರಾದರೂ ನಮಗೆ ಒತ್ತಾಸೆಯಾಗಿ 'ನಾನಿದ್ದೇನೆ ' ಎಂದು ನಿಂತಾಗ, ನಿಮಗೆ ಒಂದು ರೀತಿಯ ಸಾಂತ್ವನ ಸಿಗುತ್ತದೆ, ಧೈರ್ಯ ಬರುತ್ತದೆ ಮತ್ತು ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಮಾರ್ಗಗಳು ಕಾಣುತ್ತವೆ, ಅಲ್ಲವೇ? ಹಾಗಾದಾಗ ಸಮಸ್ಯೆಗಳಿಂದ ಮುಕ್ತರಾಗಿ ಬೆಳೆಯಲು ಸಾಧ್ಯವಾಗುತ್ತದೆ. ಹೀಗೆ ಒಬ್ಬರಿಗೊಬ್ಬರು ಒದಗುತ್ತಾ, ಸೇವೆಯನ್ನು ಮಾಡುವ  ನಮ್ಮ 'ಸೇವಾ ವೃತ್ತ' ಹಿರಿದಾದಷ್ಟೂ ಎಲ್ಲರಿಗೂ ಒಳಿತಲ್ಲವೇ? ಎಲ್ಲರೂ ಸಮಾನವಾಗಿ ಬೆಳೆಯಲು ಸಾಧ್ಯವಾಗುತ್ತದೆ ಅಲ್ಲವೇ?    

ಈ ಸೇವೆ ಮಾಡುವುದು ಒಂದು ರೀತಿಯ 'ವಿಮೆ' ಯಿದ್ದಂತೆ. ನಾವು ನಿಸ್ವಾರ್ಥದಿಂದ ಮಾಡುವ ಸೇವೆಯಿಂದ,  ಹತ್ತಾರು ಹಿತೈಷಿಗಳನ್ನು, ನಮಗರಿವಿಲ್ಲದಂತೆಯೇ  ಸಂಪಾದಿಸುತ್ತೇವೆ. ಅಂತಹ ಹಿತೈಷಿಗಳು ನಾವು ಸಂಕಷ್ಟದಲ್ಲಿದ್ದಾಗ, ನಾವು ಬಯಸದಿದ್ದರೂ, ಅವರಲ್ಲಿ ಕೇಳದಿದ್ದರೂ ನಮಗೆ ಒದಗಿ, ನಮ್ಮ ಸಂಕಷ್ಟವನ್ನು ನೀಗಿ, ನಮಗೆ ಸಾಂತ್ವನ ನೀಡುತ್ತಾರೆಂದರೆ, ನಾವು ಇಂದು ಮಾಡುವ ಸ್ವಾರ್ಥ ರಹಿತ ಸೇವೆ, ನಮ್ಮ ಕಷ್ಟದ ಸಮಯದಲ್ಲಿ ನಮಗೆ ಒದಗುತ್ತದೆ ಎಂದರೆ, ಅದೂ ಒಂದು ರೀತಿಯ 'ವಿಮೆ' ಯೇ  ಅಲ್ಲವೇ? 

ನಿರಾಯಾಸ ಸೇವೆ

ಈ ' ಸೇವೆ ' ಎನ್ನುವುದನ್ನು ಆಯಾಸಪಟ್ಟು ಮಾಡಬೇಕಾಗಿಲ್ಲ. ಸಹಜವಾಗಿ ನಿರಾಯಾಸವಾಗಿ ಮಾಡಬೇಕು. ಹೆಚ್ಚು ಆಯಾಸಪಟ್ಟು ಸೇವೆ ಮಾಡಿದರೆ, ಅಂತಹ ಸೇವೆಯಿಂದ 'ನಾನು ' ಮಾಡುತ್ತಿದ್ದೇನೆ ಎನ್ನುವ ಅಹಂಕಾರದ ಭಾವವೂ ನಮ್ಮ ಒಳನುಗ್ಗಿ, ನಾವು ಪ್ರತಿಫಲ ಬಯಸುವ ಸಾಧ್ಯತೆಗಳು ಅಧಿಕ. ಇದು ಸೇವೆಯಿಂದ ತಾನೇ ತಾನಾಗಿ ಬರುವ ಸತ್ಫಲವನ್ನು ಇಲ್ಲವಾಗಿಸುತ್ತದೆ. ಸೇವೆ ಮಾಡುವ ಅವಕಾಶಗಳನ್ನು ಹುಡುಕಿಕೊಂಡು ಹೋಗುವ ಅವಶ್ಯಕತೆ ಇಲ್ಲ. ಅವುಗಳು ತಾವೇತಾವಾಗಿ ನಮಗೆ ಲಭ್ಯವಾಗುತ್ತವೆ. ಅಂತಹ ಅವಕಾಶಗಳನ್ನು ಸಹಜತೆಯಿಂದ ಬಳಸಿಕೊಂಡರೆ ಅದೇ ನಿಸ್ವಾರ್ಥ ಸೇವೆಯಾಗುತ್ತದೆ. 

ತೋರಿಕೆ ಮತ್ತು ಪ್ರಚಾರ ಬೇಕಿಲ್ಲ.

ನಾವುಗಳು ಸೇವೆಯ ಸೂಕ್ಷ್ಮತೆಯನ್ನು ಅರಿತುಕೊಳ್ಳುವುದಿಲ್ಲ. ನಾವು ಮಾಡುವ ಸೇವೆಯನ್ನು ಜಗತ್ತಿಗೆ ತೋರಬಯಸುತ್ತೇವೆ, ನಮ್ಮ 'ಪುಂಗಿ' ಯನ್ನು ನಾವೇ ಊದಲು ಪ್ರಯತ್ನಿಸಿ,  ನಾವು ಮಾಡಿದ ಸೇವೆಯನ್ನು ಜಗತ್ತಿಗೆ ಸಾರಿ, ಕೀರ್ತಿವಂತರಾಗಲು ಪ್ರಯತ್ನಿಸುತ್ತೇವೆ.  ನಾವು ಬಡವರಿಗೆ ' ಕಂಬಳಿ ' ಗಳನ್ನೂ ನೀಡುತ್ತಿದ್ದೇವೆ ಎಂದೋ, ಹಸಿದ ಪ್ರತಿ ಮನೆಯವರಿಗೆ ತಲಾ ಹತ್ತು ಕಿಲೋ ಗೋದಿಯನ್ನು ನೀಡುತ್ತಿದ್ದೇವೆ ಎಂದೋ ಡಂಗುರ ಹೊಡೆದುಕೊಳ್ಳುವ ಅವಶ್ಯಕತೆ ಇಲ್ಲ. ಅದು ನಾನು ಅಥವಾ ನಾವು ನೀಡುತ್ತಿದ್ದೇವೆ ಎನ್ನುವ ಅಹಂಕಾರದ ಪ್ರದರ್ಶನವಷ್ಟೇ. ಕೊಟ್ಟ ಧನ್ಯತಾಭಾವ ನಮಗಿದ್ದರೆ ಸಾಕು. ದೇವಾಲಯದಲ್ಲಿ ಅಭಿಷೇಕವನ್ನು ಮಾಡಿಸುತ್ತೇವೆ ಎಂದು, ಲಕ್ಷ ರೂಪಾಯಿ ಕೊಡುವವನು ಅಥವಾ ತಿರುಪತಿಯ ತಿಮ್ಮಪ್ಪನಿಗೆ ವಜ್ರದ ಕಿರೀಟವನ್ನು ಮಾಡಿಸಿಕೊಡುವವನೂ ಕೇವಲ ತಮ್ಮಲ್ಲಿರುವ ಸಂಪತ್ತಿನ ಪ್ರದರ್ಶನ ಮಾಡುತ್ತಾ ಅಹಂಕಾರದಿಂದ ಬೀಗುತ್ತಿರುತ್ತಾರೆ.  ಇಂತಹ ಸೇವೆಯಿಂದ ಆ ವ್ಯಕ್ತಿಯ ಆಧ್ಯಾತ್ಮಿಕ ಬೆಳವಣಿಗೆ ಕುಂಠಿತವಾಗುತ್ತದೆ.     

ಹಾಗಾಗಿ ನಿಸ್ವಾರ್ಥತೆಯಿಂದ, ಫಲಾಪೇಕ್ಷೆಯಿಲ್ಲದೆ, ನಾನು ಮಾಡುತ್ತಿದ್ದೇನೆ ಎನ್ನುವ ಅಹಂಕಾರವನ್ನು ತೊರೆದು, ಸಹಜತೆಯಿಂದ ಮಾಡುವ ಸೇವೆಯೇ ನಿಜವಾದ ಸೇವೆ. ಅಂತಹ ಸೇವೆಯನ್ನು ಮಾಡುವ ಅವಕಾಶಗಳು ನಮಗೆ ಸಿಕ್ಕಾಗ ತಕ್ಷಣವೇ ಅದರಲ್ಲಿ ನಾವು ತತ್ಪರರಾಗಿ ನಮ್ಮನ್ನು ನಾವೇ ತೊಡಗಿಸಿಕೊಂಡು ಸೇವೆ ಮಾಡಬೇಕು. ಅದರಿಂದ ತೃಪ್ತಿ ಮತ್ತು ಆತ್ಮ ಸಂತೋಷ ಖಂಡಿತ ಸಿಗುತ್ತದೆ. 

No comments:

Post a Comment