Saturday 7 July 2018

' ಒತ್ತಡ'.


೨೧ನೆಯ ಶತಮಾನದ ಮಹಾ ದೊಡ್ಡ ಖಾಯಿಲೆಯೆಂದರೆ ' ಒತ್ತಡ'.  ಪುಟ್ಟ ಮಗುವಿಂದ ಹಿಡಿದು ನಿವೃತ್ತನಾದವನ ತನಕ ಎಲ್ಲರೂ ಒಂದಲ್ಲ ಒಂದು ರೀತಿಯ 'ಒತ್ತಡ' ದಲ್ಲಿರುತ್ತಾರೆ. ಬಹುಶಃ ನಾವು ಏನನ್ನೂ ಮಾಡದೆ ಇರುವಾಗ ಮಾತ್ರ ಆ ಒತ್ತಡದಿಂದ ಮುಕ್ತರಾಗಿರುತ್ತೇವೆ ಎಂದು ಹೇಳಬಹುದು. ಆ ಸ್ಥಿತಿಯಲ್ಲೂ ಮನಸ್ಸಿನ ಯಾವುದೋ ಮೂಲೆಯಲ್ಲಿ ಆ ಒತ್ತಡದ ಛಾಯೆಗಳು ಇರುತ್ತವೆ.  ಹಾಗಾಗಿಯೇ ನಾವುಗಳು ವಾರಾಂತ್ಯದಲ್ಲಿ ಅಥವಾ ರಜೆಯ ದಿನಗಳಲ್ಲಿ 'ಒತ್ತಡ' ದಿಂದ ತಪ್ಪಿಸಿಕೊಳ್ಳಲು ಎಲ್ಲಿಗಾದರೂ ದೂರ ಓಡಿಹೋಗುವುದು.  ಅಲ್ಲಿಂದ ಹಿಂತಿರುಗಿ ಮತ್ತೆ ಕೆಲಸದಲ್ಲಿ ತೊಡಗಿದರೆ ಮತ್ತೆ ಶುರುವಾಗುವುದು 'ಒತ್ತಡ' ದ ಸುಳಿಯಲ್ಲಿನ ಜೀವನ. ಸಕ್ರಿಯವಾದ ಜೀವನ ಮತ್ತು ಪ್ರಶಾಂತ ಮಾನಸಿಕ ಸ್ಥಿತಿಯನ್ನು ನಮ್ಮ ಆಜನ್ಮಸಿದ್ಧ ಹಕ್ಕು ಎಂದು 'ವೇದಾಂತ' ವು ಘೋಷಿಸುತ್ತದೆ. ಹಾಗಾದಾಗ ಮಾತ್ರ ಸಮರ್ಪಕ ಬದುಕಿನ ಸಾಧನೆಯಾಗುತ್ತದೆ. ಅಂತಹ ಸ್ಥಿತಿಯಲ್ಲಿ ನಾವು ಯಶಸ್ಸನ್ನು ಪಡೆದು ಸಂತೋಷವಾಗಿರುತ್ತೇವೆ.  

ಈ ಒತ್ತಡಕ್ಕೆ ಕಾರಣವೇನು ಅಥವಾ ನಮಗೆ ಒತ್ತಡ ಉಂಟಾಗುವಂತೆ ಮನವನ್ನು ಕಾದಾಡುವುದು ಯಾವುದು?  ಕಿರಿಕಿರಿಯ ಅಧಿಕಾರಿಯೇ? ಗೊಣಗಾಡುವ ಸಂಗಾತಿಯೇ? ಅಥವಾ ಹೊಂದದ ವಾತಾವರಣವೇ? ಇದಾವುದೂ ಅಲ್ಲ. ಸತ್ಯವೇನೆಂದರೆ 'ನಮ್ಮನ್ನು ಹೊರತು' ಜಗತ್ತಿನ ಯಾವುದೇ ವಸ್ತು, ವ್ಯಕ್ತಿ ಅಥವಾ ವಿಷಯ ನಮ್ಮನ್ನು ಕದಡಲಾರದು. ತೀರದ ಆಸೆಗಳಿಂದ ಉಂಟಾಗುವ ಮಾನಸಿಕ ಕದಡಿಕೆಯೇ 'ಒತ್ತಡ' ಕ್ಕೆ ಕಾರಣ. ಪಟ್ಟ ಆಸೆಗಳು ಎಲ್ಲಿಯತನಕ ತೀರುವುದಿಲ್ಲವೋ ಅಲ್ಲಿಯ ತನಕ 'ಒತ್ತಡ' ವಿದ್ದೇ ಇರುತ್ತದೆ. ಹಿಡಿತವಿಲ್ಲದ ಆಸೆಗಳ ಕುದುರೆಯ ಬೆನ್ನೇರಿ ಹೋಗುವವರು ಸದಾಕಾಲ ಖಂಡಿತವಾಗಿಯೂ 'ಒತ್ತಡ' ದಲ್ಲೇ ಇರುತ್ತಾರೆ.   

ಅನಿರ್ಬಂಧಿತ ಆಸೆಗಳೇ ನಮ್ಮನ್ನು ದುಃಖದ ಕೂಪಕ್ಕೆ ತಳ್ಳುತ್ತದೆ. ಒಂದು ಆಸೆ ಪೂರೈಸಿದರೆ ಮತ್ತಷ್ಟರಾಸೆ ನಮ್ಮನ್ನು ದುರಾಸೆಗೆ ಈಡುಮಾಡುತ್ತದೆ ಮತ್ತು ಆ ದುರಾಸೆ  ನಮ್ಮನ್ನು ನಿರಾಸೆಗೆ ತಳ್ಳುತ್ತದೆ. ನಮಗಿಂತ ಅಧಿಕವಾಗಿ ಪಡೆದವರನ್ನು ಕಂಡು ನಮಗೆ ಈರ್ಷ್ಯೆ ಮತ್ತು ನಮಗಿಂತ ಕಡಿಮೆ ಪಡೆದವರನ್ನು ಕಂಡು ಅಹಂಕಾರ ಅಥವಾ ಮದ. ಯಾವುದೇ ಕಾರಣ ನಮ್ಮ ಆಸೆಯ ಭಾವಕ್ಕೆ ತಡೆಯಾದರೆ, ಹಾಗೆ ತಡೆಯೊಡ್ಡಿದ ವ್ಯಕ್ತಿ ಅಥವಾ ಸಂದರ್ಭದ ಪ್ರತಿ ನಮಗೆ ಕ್ರೋಧವುಂಟಾಗುತ್ತದೆ.  ಇವೆಲ್ಲವೂ ನಮ್ಮ ಬದುಕಿನಲ್ಲಿ 'ಒತ್ತಡ ಮತ್ತು ದುಃಖ' ವನ್ನು ತರುತ್ತದೆ.  

ನಮ್ಮಲ್ಲಿ ಬುಗ್ಗೆಬುಗ್ಗೆಯಂತೆ ಮೇಲೇಳುವ ಮತ್ತು ಅಡೆತಡೆಯಿಲ್ಲದೆ ಆಸೆಗಳ ಮಹಾಪೂರ ನಮ್ಮ ನಿಜವಾದ ಆನಂದಕ್ಕೆ ಅಡ್ಡಿಯೊಡ್ಡುತ್ತದೆ. ಧನದಾಸೆಯಿಂದ ಹಣಸಂಪಾದನೆಯಲ್ಲಿ ಮುಳುಗಿದ ವ್ಯಕ್ತಿ ತಾನು ಸಂಪಾದಿಸಿದ ಹಣವನ್ನು ಎಂದಿಗೂ ಅನುಭವಿಸಿ ಆನಂದಿಸಲಾರ. ಹಣದಿಂದ ಖರೀದಿಸಬಹುದಾದ ಅತ್ಯುತ್ತಮ ವಸ್ತುಗಳು ಅವನಲ್ಲಿ ಇದ್ದರೂ ಅವನು ಅನುಭವಿಸುವ ಒತ್ತಡವೇ ಅವನಿಗೆ ಆ ವಸ್ತುಗಳನ್ನಾಗಲಿ ವಿಷಯಗಳನ್ನಾಗಲೀ ಆನಂದದಿಂದ  ಅನುಭವಿಸಲು ಅವಕಾಶ ನೀಡುವುದಿಲ್ಲ. ಆಸೆಗಳು ನಮ್ಮನ್ನು ಅನ್ಯರೊಡನೆ ಒಂದು ಸ್ಪರ್ಧಾತ್ಮಕ ಮಾರ್ಗದಲ್ಲಿ ತೆಗೆದುಕೊಂಡು ಹೋಗುತ್ತದೆಯಾದ್ದರಿಂದ ನಾವು ಅನ್ಯರೊಡನೆ ಒಂದು ಸೌಹಾರ್ಧಯುತವಾದ ಮತ್ತು ಅರ್ಥಪೂರ್ಣ ಸಂಬಂಧವನ್ನು ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಧನದಾಸೆ ನಮ್ಮನ್ನು ಮೌಲ್ಯಗಳೊಟ್ಟಿಗೆ ರಾಜಿಮಾಡಿಕೊಳ್ಳುವಂತಹ ಸ್ಥಿತಿಗೆ ತಳ್ಳುತದೆ. ಆಸೆಗಳ ವಿಷಯದಲ್ಲಿ ನಾವೇ ನಿಗಧಿಪಡಿಸಿದ ಎಲ್ಲೆಯನ್ನು ದಾಟಿದಾಗ, ನಾವು ನಮ್ಮದೇ ಬಲಹೀನತೆಗೆ ದಾಸರಾಗಿಬಿಡುತ್ತೇವೆ.    

ನಮ್ಮ ಮನಸ್ಸು ಹಿಂದೆ ನಡೆದ ಘಟನೆಗಳ ಅಥವಾ ಮುಂದಿನ ಯೋಜನೆಗಳ ಸುಳಿಯಲ್ಲಿ ಸಿಲುಕಿ, ನಾವು  ಪ್ರಸ್ತುತ ಬದುಕನ್ನು ಅನುಭವಿಸಿ ಬದುಕಲು ಬಿಡುವುದೇ ಇಲ್ಲ. ಇದು ನಮ್ಮನ್ನು ಸೋಲಿಗೆ ತಳ್ಳುತ್ತದೆ. ನಮಗಿರುವ ವಿವೇಕದ ಬಲದಿಂದ ನಮ್ಮ ಮನಸ್ಸು ಗತಿಸಿದ ವಿಷಯಗಳ ಅಥವಾ ಭವಿಷ್ಯದ ಆತಂಕಗಳ ಬಗ್ಗೆ ಚಿಂತಿಸದೆ ವಾಸ್ತವದಲ್ಲಿ ನಿಂತರೆ, ಆಗ ನಾವು ತಿಳಿಮನದಿಂದ,  ಮಾಡುವ ಕೆಲಸದ ಮೇಲೆ ಗಮನವನ್ನು ಹರಿಸಿ ಆ ಕೆಲಸವನ್ನು ಸಮರ್ಪಕವಾಗಿ ಮಾಡಬಹುದು ಮತ್ತು ಹಾಗೆ ನಮ್ಮನ್ನು ನಾವು ಸಂಪೂರ್ಣತಯಾ ತೊಡಗಿಸಿಕೊಂಡು ನಮ್ಮ ಕಾರ್ಯವನ್ನು ಮುಗಿಸಿದಾಗ ಸಿಗುವ ಆನಂದದ ಪರಿಯೇ ಬೇರೆಯಲ್ಲವೇ? 
 
ಒಂದು ಆಸೆ ಪೂರೈಸಿದರೆ, ಪಡೆದ ವಸ್ತುವನ್ನು ಅನುಭವಿಸದೇ ಮತ್ಯಾವುದೋ ಆಸೆಯ ಹಿಂದೆ ಮನಸ್ಸು ಓಡುತ್ತದೆ. ಅಂತಹ ಸ್ಥಿತಿಯಲ್ಲಿ ನಾವು ಆಸೆಪಟ್ಟು ಪಡೆದ ವಸ್ತು, ವಿಷಯ ಅಥವಾ ವ್ಯಕ್ತಿಯೊಂದಿಗಿನ ಅನುಭವವನ್ನು ಕಳೆದುಕೊಂಡುಬಿಡುತ್ತೇವೆ. ಹೀಗೆ ನಾವು ಪಡೆದುಕೊಂಡ ವಸ್ತುಗಳಿಂದ ದೊರೆಯಬಹುದಾದ ಅನುಭವವನ್ನು ಪಡೆಯದಿದ್ದರೂ, ನಮ್ಮಲ್ಲಿರುವ ವಸ್ತುಗಳಿಗೆ ನಾವು ಅಂಟಿಕೊಂಡು ನಮ್ಮನ್ನು ನಾವು ಕಳೆದುಕೊಳ್ಳುತ್ತೇವೆ. ಇದರಿಂದ ಒಂದು ಮಾತ್ರ ಖಂಡಿತ 'ಅಂಟಿಕೊಂಡರೆ ಕಷ್ಟ - ಬಿಡಿಸಿಕೊಂಡರೆ ಸುಖ' . ಈ ಜಗತ್ತಿನಲ್ಲಿ ಇರಬೇಕು, ಈ ಜಗತ್ತಿನ ವಸ್ತುಗಳನ್ನು ಪಡೆದುಕೊಳ್ಳಬೇಕು, ಪಡೆದ ವಸ್ತುಗಳನ್ನು ಅನುಭವಿಸಬೇಕು, ಅದರ ಅನುಭವವನ್ನು ಪಡೆಯಬೇಕು ಮತ್ತು ಅದರಿಂದ ಕಲಿಯಬೇಕು.  ಆದರೆ ಯಾವುದಕ್ಕೂ ಅಂಟಿಕೊಳ್ಳಬಾರದು. ಪಡೆಯಬೇಕೆಂಬ ಆಸೆಯಿದ್ದರೆ ಪಡೆಯಲು ಹೋರಾಟ, ಪಡೆದುಕೊಂಡರೆ ಮತ್ತಷ್ಟನ್ನು ಪಡೆಯುವ ಅಥವಾ ಪಡೆದದ್ದನ್ನು ಉಳಿಸಿಕೊಳ್ಳಲು ಹೋರಾಟ. ಈ ಹೋರಾಟಗಳಿಂದಲೇ ನಮ್ಮಲ್ಲಿ ' ಒತ್ತಡ ' ಉಂಟಾಗುತ್ತದೆ.  ಹಾಗಾಗಿ ಆಸೆಗಳಿಗೆ ಅಂಟಿಕೊಂಡರೆ ಅದು ನಮಗೆ ನೋವನ್ನೇ ತರುತ್ತದೆ. ಈ ಆಸೆಯೇ ನಮ್ಮ ಅತಿ ದೊಡ್ಡ ಶತ್ರು ಎಂದು ಅರಿವಿದ್ದರೂ ನಾವು ಅದನ್ನು ಬಿಡುವುದಿಲ್ಲ. ಆಸೆಗಳೂ ನಮ್ಮನ್ನು ಪ್ರೋತ್ಸಾಹಿಸುತ್ತವೆ ಮತ್ತು ನಾವೂ ಸಹ ಅದನ್ನು ಹಿಡಿದುಕೊಂಡಿರುತ್ತೇವೆ. ನಮ್ಮ ಮೇಲಿನ ಅದರ 'ಹಿಡಿತ' ವೇ ನಮ್ಮ ಮಾನಸಿಕ ಒತ್ತಡಕ್ಕೆ ಕಾರಣ. ಎಲ್ಲರಿಗೂ ಆ ರೀತಿಯ 'ಒತ್ತಡ' ದಿಂದ ಹೊರಬರಬೇಕೆನ್ನುವ ಬಯಕೆಯಿದ್ದರೂ, ಅದಕ್ಕೆ ಪೂರಕವಾದ ಪ್ರಯತ್ನದ ಕೊರತೆಯಿಂದಾಗಿ, ಬಹುತೇಕ ಜನ ಮತ್ತಷ್ಟು ಒತ್ತಡಕ್ಕೆ ಬಲಿಯಾಗುತ್ತಾರೆ.    

'ನಾವು ಯಾವುದರ ಹಿಂದೆ ಓಡುತ್ತೇವೆಯೋ, ಅದು ನಮ್ಮಿಂದ ದೂರ ದೂರ ಓಡುತ್ತದೆ, ಯಾವುದನ್ನೂ ನಾವು ನಿರ್ಲಕ್ಷ್ಯ ಮಾಡುತ್ತೇವೆಯೋ, ಅದು ನಮ್ಮ ಕಾಲ ಬಳಿ ಬಂದು ಬೀಳುತ್ತದೆ ' ಎಂದು ಬಹಳ ಹಿಂದೆ ಯಾರೋ ತತ್ವಜ್ಞಾನಿ ಹೇಳಿದ ಮಾತು ನೆನಪಾಗುತ್ತದೆ.  ಹಾಗಾಗಿ ವಸ್ತು, ವಿಷಯ ಮತ್ತು ವ್ಯಕ್ತಿಗಳನ್ನು ಪಡೆಯುವ ಬಯಕೆಯಿಂದ ಮುಕ್ತರಾಗಿ ಬದುಕಿದರೆ ಆಗ ಈ ಜಗತ್ತಿನ ಯಾವುದೇ ವಿಷಯವೂ ನಮ್ಮನ್ನು ಒತ್ತಡಕ್ಕೆ ತಳ್ಳಲು ಅಸಮರ್ಥವಾಗುತ್ತದೆ.  

ಆದರೆ ಬಯಕೆಯಿಲ್ಲದೆ ಬದುಕಲು ಸಾಧ್ಯವೇ ಎಂದು ಯೋಚಿಸಿದರೆ, ಸಾಧ್ಯವಿಲ್ಲ ಎನ್ನುವ ಉತ್ತರವೇ ಸಿಗುತ್ತದೆ. ಅಂತಹ ಬದುಕು ಕೇವಲ ನೀರಸವಾಗಿ, ನಿಸ್ಸಾರವಾಗಿರುತ್ತದೆ ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ. ಆದ್ದರಿಂದ, ನಮಗೆ ಬಯಕೆಗಳಿದ್ದರೂ, ಅವುಗಳು 'ನಮ್ಮ'  ಹಿಡಿತದಲ್ಲಿರಬೇಕು. ಏನನ್ನು ಬಯಸಬೇಕು, ಯಾವಾಗ ಬಯಸಬೇಕು ಮತ್ತು ಎಷ್ಟನ್ನು ಬಯಸಬೇಕು ಎನ್ನುವ ವಿವೇಚನೆ ನಮಗಿದ್ದರೆ, ನಮ್ಮ ಬಯಕಗಳ ಮೇಲೆ ನಮಗೆ ಸಂಪೂರ್ಣ ಹಿಡಿತವಿದ್ದು, ಅವುಗಳು ನಮ್ಮ ಮೇಲೆ  ಬೀರುವ ಪ್ರಭಾವದಿಂದ ತಪ್ಪಿಸಿಕೊಳ್ಳಬಹುದು. ಯಾವುದೇ ಬಯಕೆಯ ನಿರರ್ಥಕತೆಯನ್ನು ಮನಗಂಡು ಅದನ್ನು ಕೈಬಿಡುವುದೂ ಸಾಧ್ಯವಾಗುತ್ತದೆ.  ಮಾತ್ರವಲ್ಲ, ಉನ್ನತವಾದ ಬಯಕೆಗಳು ನಮ್ಮದಾದರೆ ಕಿರಿಕಿರಿಯನ್ನುಂಟುಮಾಡುವ ಸಣ್ಣ ಸಣ್ಣ ಬಯಕೆಗಳು ಮಾಯವಾಗುತ್ತವೆ. ಅಂತಹ ಬದುಕಿಗೆ ಯಾರು ಎಷ್ಟು ತೀವ್ರವಾಗಿ ಪ್ರಯತ್ನ ಮಾಡಿದರೆ ಅವರಿಗೆ ಅಷ್ಟು ಪ್ರಯೋಜನವಾಗುತ್ತದೆ. ಜಗತ್ತಿನ ವಸ್ತುಗಳಲ್ಲದೆ, ಜಗತ್ಕಾರಕನ ನಂಟಿನ ಬಯಕೆ ನಮ್ಮಲ್ಲುಂಟಾದರೆ, ನಾವು ಸದಾ ಆನಂದದ ಸ್ಥಿತಯಲ್ಲಿರಬಹುದು. 

ರವಿ ತಿರುಮಲೈ 

No comments:

Post a Comment